Ankola Taluk

ಶ್ರೀ ಆರ್ಯಾದುರ್ಗಾ ದೇವಿ ಮಹಾತ್ಮೆ ಶಕ್ತಿ ರೂಪಿಣಿ ಶ್ರೀ ಆರ್ಯಾದುರ್ಗಾ:

             ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ದಕ್ಷಿಣ ದಿಕ್ಕಿನಲ್ಲಿರುವ ವಂದಿಗೆ ಗ್ರಾಮದ ಹನುಮಟ್ಟೆಯಲ್ಲಿ ಪುರಾಣ ಪ್ರಸಿದ್ಧವಾದ ಶ್ರೀ ಆರ್ಯಾ ದುರ್ಗಾದೇವಿಯ ಮಂದಿರವಿದೆ. ಇದು ಕರ್ನಾಟಕ ರಾಜ್ಯದ ಪಶ್ವಿಮಕ್ಕೆ ಹೊಂದಿ ಇರುವ ಅರಬ್ಬೀ ಸಮುದ್ರದ ನೆರೆಯಲ್ಲಿದೆ. ಮೂಡಣ ದಿಕ್ಕಿಗೆ ಸಹ್ಯ ಪರ್ವತಗಳ ಸಾಲು; ಪಡುವಣದಲ್ಲಿ ಅರಬ್ಬೀ ಸಮುದ್ರ, ನಿತ್ಯ ಹರಿದ್ವರ್ಣದ ವೃಕ್ಷಗಳಾದ ತೆಂಗು, ಮಾವುಗಳ ತೋಪುಗಳ ನಡುವೆ ಶ್ರೀ ದೇವಿಯ ಮಂದಿರವಿದ್ದು ಕರ್ನಾಟಕವಷ್ಟೇ ಅಲ್ಲ ನೆರೆಯ ಗೋವಾ, ಮಹಾರಾಷ್ಟ್ರಗಳಲ್ಲದೇ ದೂರದ ಗುಜರಾತ ರಾಜ್ಯಗಳಲ್ಲಿಯೂ ಶ್ರೀ ದೇವಿಯ ಕುಳಾವಿಗಳು, ಭಕ್ತಾದಿಗಳು ನೆಲೆಸಿದ್ದು ಹಬ್ಬ-ಹರಿದಿನಗಳಲ್ಲಿಯೂ ಅಸಂಖ್ಯೆಯಲ್ಲಿ ಇಲ್ಲಿ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಶ್ರೀ ದೇವಿಗೆ ಹರಕೆ, ಕಾಣಿಕೆಗಳನ್ನು ನೀಡಿ ಕೃತಾರ್ಥರಾಗುತ್ತಾರೆ. ಪುರಾಣ ಪ್ರಸಿದ್ಧವಾದ ಜಗನ್ಮಾತೆಯು ಪರಾಶಕ್ತಿಯಾಗಿ, ಭಕ್ತರ ಭವತಾರಣಿಯಾಗಿ, ಶಿಷ್ಟರ ಇಷ್ಟಾರ್ಥ ಪ್ರದಾಯಿನಿಯಾಗಿ ಆಸ್ತಿಕರ ಆರಾಧ್ಯದೇವತೆಯಾಗಿ ಇದ್ದಾಳೆ. ಜೀವನದ ಜಂಜಡದಲ್ಲಿ ಸಿಲುಕಿ ಮುಂಗಾಣದೇ ದಿಙ್ಮೂಢರಾದವರಿಗೆ ಸನ್ಮಾರ್ಗವನ್ನು ತೋರಿ ಬದುಕಿಗೊಂದು ನೆಲೆಯನ್ನು ತೋರಿಸುವ ಕರುಣಾಮಯಿಯಾಗಿದ್ದಾಳೆ. ಭಕ್ತರ ಉದ್ದಾರಕ್ಕಾಗಿಯೇ ಭೂಮಿಗಿಳಿದು ಬಂದ ದೇವಿಯೆಂಬ ಪ್ರಖ್ಯಾತಿಯನ್ನು ಪಡೆದಿದ್ದಾಳೆ.Showing 1 to 1 of 1 (1 Pages)