Kodagu Dist

ಕೊಡಗಿನ ಊರ ಹಬ್ಬಗಳು ಹಾಗೂ ದೈವ ಕೋಲಗಳು :

                       ಇಡೀ ವಿಶ್ವದ-ಜನಾಂಗ, ಭಾಷೆ, ಭೌಗೋಳಿಕ ಪರಿಸ್ಥಿತಿ, ಪದ್ದತಿ-ಪರಂಪರೆ ಎಲ್ಲವೂ ಭಿನ್ನತೆಯಿಂದ ಕೂಡಿದ್ದರೂ ಸಹ ನಡೆದುಕೊಂಡು ಬಂದಿರುವ ಸಂಸ್ಕೃತಿ . ಆಚಾರ-ವಿಚಾರಗಳಿಗೆ ಮೂಲ ಜಾನಪದ. ಹಾಗೆಯೇ ಎಲ್ಲಾ ಕಲಾಪ್ರಕಾರಕ್ಕೂ ತಾಯಿ ಬೇರು ಕೂಡ ಜಾನಪದ ಎಂದು ಖಡಾ ಖಂಡಿತವಾಗಿ ಹೇಳಬಹುದು.ಇದಕ್ಕೆ ಆಧಾರ ಮನುಷ್ಯ ಹುಟ್ಟಿನ ವಿಶ್ಲೇಷಣೆ-ಮಂಗನಿಂದ ಮಾನವ ಎಂಬ ಮಾನವ ವಿಕಾಸವಾದದ ಘಟನಾವಳಿಯಿಂದ ಪ್ರಾರಂಭವಾದ ಮಾನವನ ಅಸ್ಥಿತ್ವ-ಕಾಲಾನಂತರದಲ್ಲಿ ಜ್ಞಾನ ವೃದ್ದಿಸುತ್ತಿದ್ದಂತೆ, ಪಂಗಡಳಾಗಿ, ಪ್ರದೇಶಗಳಾಗಿ, ಪ್ರದೇಶವಾರು ಗುರುತಿಸುವಿಕೆಯೊಂದಿಗೆ ತನ್ನದೇ ಭಾಷೆ ರೂಪಿಸಿಕೊಳ್ಳುತ್ತಾನೆ. ತನ್ನದೇ ಆದ ಆಚಾರ-ವಿಚಾರಗಳನ್ನು ರೂಢಿಸಿಕೊಂಡು ಬದುಕತೊಡಗುತ್ತಾನೆ ಎನ್ನುವುದು ನಾವು ಅಭ್ಯಸಿಸಿ, ಅಲ್ಲಿ ಇಲ್ಲಿ ಕೇಳಿ ತಿಳಿದುಕೊಂಡಿರುವ ವಿಚಾರ. ಅವರು ರೂಢಿಸಿಕೊಡು ಬಂದಿರುವ ಪ್ರತಿಯೊಂದು ನಡಾವಳಿಯೂ ಯಾವುದೇ ಶಾಸ್ತ್ರೀಯವಾಗಿ ಕಲಿತದ್ದಲ್ಲ. ಪ್ರತಿನಿತ್ಯದ ಬದುಕಿನಲ್ಲಿ ತಾನೇ ತಾನಾಗಿ ರೂಪಿತಗೊಂಡುವುಗಳು. ಇದೇ ಜಾನಪದ.

                    ವಿಶ್ವದ ಒಂದು ಮೂಲೆಯಲ್ಲಿರುವ ಕೊಡಗು ಜಿಲ್ಲೆಯೂ ಕೂಡ ಇದಕ್ಕೆ ಹೊರತಾಗಿಲ್ಲ, ಕೊಡಗಿನ ಮೂಲನಿವಾಸಿಗಳು ಇಲ್ಲಿಯವರಲ್ಲ-ಎಲ್ಲಿಂದರೋ ಬಂದವರು, ಆ ಸಂಸ್ಕೃತಿ ಯನ್ನು ಆಳವಡಿಸಿಕೊಂಡವರು ಎಂಬೆಲ್ಲಾ ಜಿಜ್ಞಾಸೆಗಳನ್ನೂ ನಾವು ಕೇಳಿದ್ದೇವೆ. ಆ ಬ್ಗೆ ಚರ್ಚಿಸುವುದಾಗಲೀ ಇಲ್ಲಿ ಅಪ್ರಸ್ತುತ.   ಕೊಡಗು ಜಿಲ್ಲೆ ತನ್ನ ವಿಶಿಷ್ಟ-ಆಚಾರ-ವಿಚಾರವು, ಸಂಸ್ಕೃತಿ, ಆಚರಣೆ, ಭಾಷೆ ವೇಷದ ಭುಷಣಗಳಿಂದರೆ ಇಡಿ ವಿಶ್ವದ ಗಮನ ಸೆಳೆದಿದೆ. ಕೊಡಗಿನ ಮೂಲ ಜನಾಂಗ ಕೊಡವರಾಗಿದ್ದರೂ ಕೂಡ ಇಂದು ಜಿಲ್ಲೆಯಲ್ಲಿ ಹಲವಷ್ಟು ಜನಾಂಗಗಳನ್ನು, , ಆಚರಣೆಗಳನ್ನೂ ಗಮನಿಸಬಹುದಾಗಿದೆ. ಕೊಡವ ಜನಾಂಗಕ್ಕೆ ಸಮಾನಾಂತರವಾಗಿ ಗುರುತಿಸಿಕೊಳ್ಳುವ ಆರೆಭಾಷೆ ಗೌಡ ಜನಾಂಗವಾದ, ನೆರೆಜಿಲ್ಲೆ ದಕ್ಷಿಣ ಕನ್ನಡ ಹಾಗೂ ನೆರೆರಾಜ್ಯ ಕೇರಳದ ಸಂಸ್ಕೃತಿ  ಪ್ರಭಾವ ಇಂದು ಕೊಡಗಿನಲ್ಲಿ ರಾರಾಜಿಸುತ್ತಿದೆ.
                      ಕೊಡಗು ಜಿಲ್ಲೆಯ ವೈಶಿಷ್ಟ್ಯಗಳಲ್ಲಿ ಇಲ್ಲಿಯ ಧಾರ್ಮಿಕ ಹಿನ್ನಲೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ಇಲ್ಲಿಯ ಮೂಲ ಜನಾಂಗ ಪ್ರಕೃತಿ ಹಾಗೂ ಗುರುಹಿರಿಯನ್ನು ಪೂಜಿಸುವವರು ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ಕಾಣಬಹುದು. ಜಲರೂಪಿಣಿ ತಾಯಿ ಕಾವೇರಿಯನ್ನೂ ಪೂಜಿಸುವುದ. ಗುರುಹಿರಿಯರು ಭಾಳೆ ಬದುಕಿದ ಐನ್ ಮನೆಯಲ್ಲಿ ತಮ್ಮ ಕುಟುಂಬದ ಹಿರಿಯರನ್ನು ನೆನೆದು ಯಾವುದೇ ಶುಬಾಶುಭ ಕಾರ್ಯಗಳನ್ನು ನಡೆಸುವುದು ಇದಕ್ಕೆ ಉದಾಹರಣೆ.
ಇವೆಲ್ಲವೂ ಕೊಡಗು ಜಿಲ್ಲೆಯಲ್ಲಿ ದೈವಿಕ ನೆಲೆ ಕಂಡುಕೊಳ್ಳುವುದಕ್ಕೆ ಮುಂಚೆ ಇದ್ದಂತಹ ಆಚಾರಗಳು. ಕೆಲವು ನೂರು ಅಥವಾ ಸಾವಿರ ವರ್ಷಗಳ ಹಿನ್ನಲೆಯನ್ನು ಗಮನಿಸಿದಾಗ ನಮಗೆ ಕಂಡುಬರುವುದು ಕೊಡಗಿನ ಮೂಲ ನಿವಾಸಿಗಳ ಅಂದರೆ ಕೊಡವರ ಬದುಕಿನಲ್ಲಿ ದೇವರುಗಳ ಪ್ರವೇಶ. ಇಲ್ಲಿಯೂ ವೈಶಿಷ್ಟ್ಯತೆಯನ್ನೂ ಗಮನಿಸಬಹುದು. ಕೊಡಗಿನಲ್ಲಿ ನೆಲೆ ಕಂಡುಕೊಂಡಿರುವ ದೇವರುಗಳು ಬಹುಮಟ್ಟಿಗೆ ನೆರೆಯ ರಾಜ್ಯ ಕೇರಳದಿಂದ ಬಂದಿರುವಂಥವು. ಆಶ್ಚರ್ಯ ಎನಿಸಿದರೂ ಅಷ್ಟೇ ಸತ್ಯ. ತೀರಾ ಪೌರಾಣಿಕ ಹಿನ್ನಲೆಯನ್ನು ವಿಶ್ಲೇಷಿಸಲು ಸಾಧ್ಯವಾಗದೆ ಇದ್ದರೂ ಯಾವುದೋ ಒಂದು ರೀತಿಯ ಅವತಾರ ಪುರುಷರುಗಳು ಸೂಕ್ತ ಸ್ಥಳವನ್ನು ಅರಸುತ್ತಾ ಮಲೆನಾಡು ಕೊಡಗಿಗೆ ಪ್ರವೇಶಿಸಿ, ಆಯಾ ಪ್ರದೇಶದ ಜನರುಗಳಿಗೆ ತಮ್ಮ ಶಕ್ತಿ ಪ್ರಭಾವಗಳಿಂದ ತಮ್ಮ ಅಸ್ತಿತ್ವವನ್ನು ಗೊತ್ತುಮಾಡಿ ನೆಲೆ ಕಂಡುಕೊಂಡವರು. ಇದಕ್ಕೆಲಾ ನಮಗೆ ಸಿಗುವ ನೇರ ನಿದರ್ಶನಗಳು ಕಕ್ಕಬೆ ಸಂಇಪದ ಪಾಡಿಯಲ್ಲಿರುವ ಕೊಡಗಿನ ಜನರ ಮಳೆ, ಬೆಳೆಯ ದೇವರೆಂದೇ ನಂಬಲಪಡುವ ಇಗ್ಗುತ್ತಪ್ಪ ದೇವರು, ಪನ್ನಂಗಾಲತ್ತಮ್ಮೆ ಇತ್ಯಾದಿ ದೇವರುಗಳು.
                        ಕೊಡಗಿನ ಅಥವಾ ಕೊಡವರ ಸಂಸ್ಕೃತಿಯಲ್ಲಿ ಒಂದು ನುಡಿ ಕೇಳಲ್ಪಡುತ್ತಿದೆ. ಅದು ಹೀಗಿದೆ. ಒಕ್ಕಕೋರ್ ಕಾರಣ, ಪಾಡೆಕ್ಕೋರ್ ‘ನಾಥ’ ಓಣಿಕ್ಕೋರ್ ಪೂದ, ಕೇರಿಕ್ಕೋರ್ ಅಯ್ಯಪ್ಪ, ಊರ್‍ಕ್ಕೋರ್ ಅಯ್ಯಪ್ಪ, ಊರ್‍ಕ್ಕೋರ್ ಪೋವ್ವೋದಿ(ಭಗವತಿ) ಹೀಗೆ, ಒಕ್ಕಕ್ಕೋರ್ ‘ಕಾರಣ’ ಎಂದರೆ-ಮನೆಹೆಸರು ಹಿಡಿದು ಕರೆಯಲ್ಪಡುವ ಒಂದು ಕುಟುಂಬಕ್ಕೆ ಕುಟುಂಬದ ಅಸ್ತಿತ್ವಕ್ಕೆ ಕಾರಣನಾದ ಹಿರಿಯ(ಪೂಜಿಸಲಪಡುವವ).
 
                        ವಾಡೆಕ್ಕೋರ್ ನಾಥ:- ‘ವಾಡೆ’ ಎಂದರೆ ಕುಟುಂಬದ ಐನೆಮನ್ಯ ಸುತ್ತ ಇರುವ ಕುಟುಂಬಕ್ಕೆ ಒಳಪಡುವ ಜಾಗ ಎಂಬ ಅರ್ಥ ಕಂಡುಕೊಳ್ಳಬಹುದು. ಈ ವಾಡೆಯನ್ನು ಕುಟುಂಬದ ದಕ್ಷಣೆಗೆಂದು ಸ್ಥಾಪಿಸಿಲ್ಪಟ್ಟ ನಾಗದೇವರು(ನಾಥ)
‘ಓಣಿಕ್ಕೋರು ಪೂದ’ ಕುಟುಂಬದ ಆಸ್ತಿ ಪಾಪಗಳಿಗೆ, ದೇವತಾ ಕಾರ್ಯಗಳಿಗೆ ಹೋಗುವ ಹಾದಿ ‘ಓಣಿ’. ಇದನ್ನು ರಕ್ಷಿಸಲು ಪ್ರತಿಷ್ಠಾಪಿಸಿರುವ ಗಣ ದೇವತೆ.

                       ‘ಕೇರಿಕ್ಕೋರ್ ಅಯ್ಯಪ್ಪ:- ಪ್ರತಿ ಊರಿನಲ್ಲಿ ಹಲವಾರು ಕುಟುಂಬಗಳು ಇರುವಾಗ ಆ ಊರಿನ ಸರಹದ್ದುಗಳನ್ನು ವಿಂಗಡಿಸಿಕೊಂಡು ಅದರಲ್ಲಿ ಒಳಪಡುವ ಕೆಲವು ಆ ಊರಿನ ಸರಹದ್ದುಗಳನ್ನು ವಿಂಗಡಿಸಿಕೊಂಡು ಅದರಲ್ಲಿ ಒಳಪಡುವ ಕೆಲವು ಮನೆ ಹೆಸರಿನ ಕುಟುಂಬಗಳು ತಮ್ಮ ತಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವಂತೆ ಕೇರಿಯನ್ನಾಗಿ ಮಾಡಿಕೊಂಡಿರುತ್ತಾರೆ. ಆ ಕೇರಿಯ ರಕ್ಷಣೆಗೆ ಅಯ್ಯಪ್ಪ ದೇವರು. ಸಾಧಾರಣವಾಗಿ ಒಂದು ಊರಿನಲ್ಲಿ ನಾಲ್ಕು ಕೇರಿಗಳಿರುತ್ತದೆ. ಒಂದೊಂದು ಕೇರಿಗೆ ಒಂದೊಂದು ಅಯ್ಯಪ್ಪ.
                       ‘ಊರ್‍ಕ್ಕೋರ್ ಪೋವ್ವೋದಿ’ ಪೊವ್ವೋದಿ ಎಂಬ ಪದ ಭಗವತಿ ಎಂಬ ಪದಕ್ಕೆ ಸಮನಾಂತವಾಗಿದೆ. ಇಡೀ ಊರಿಗೆ ಸಂಬಂಧಪಟ್ಟಂತೆ. ಇಡೀ ಊರವರಿಂದ ಆರಾಧಿಸಲ್ಪಡುವ ದೇವತೆ. ಈ ಪೊವ್ಪೋದಿ.

                       ಈ ಎಲ್ಲಾ ವ್ಯವಸ್ಥೆಗಳೂ ಜನಪದ ಹಿನ್ನಲೆಯಲ್ಲೇ ಅಸ್ತಿತ್ವಕ್ಕೆ ಬಂದಂಥವುಗಳು, ಇಲ್ಲಿ ಒಂದು ವಿಶೇಷವನ್ನು ಗಮನಿಸಬೇಕು. ಅದೇನೆಂದರೆ, ಈಗ ಹೇಳಲ್ಪಟ್ಟ ಮುಖ್ಯ ದೇವರುಗಳು ವಿಶೇಷ ದಿನಗಳಲ್ಲಿ ಮಾನವನ ಮೈಮೇಲೆ ಅವಾಹನೆಯಾಗಿ ತನ್ನ ಭಕ್ತರಿಗೆ ಆರ್ಶಿವಾದ ನೀಡುವಾಗ ಮಾತನಾಡುವ ಭಾಷೆ ಮಲಯಾಳ.

                          ಕೊಡವ-ಗೌಡ ಸಮ್ಮಿಶ್ರತೆ ಹಬ್ಬಾಚರಣೆಗಳೂ ಕೂಡ ಕೊಡಗಿನ ವೈಶಿಷ್ಟ್ಯ ಪ್ರತಿ ಊರುಗಳಲ್ಲಿಯೂ ಒಂದೊಂದು ದೈವಾಚರಣೆಗಳು ಕಂಡುಬರುತ್ತವೆ. ಪ್ರತಿ ದೇವರಿಗೆ ದೇವಸ್ಥಾನಕ್ಕೆ ಸಂಬಂಧಪಟ್ಟ ತಕ್ಕಾಮೆ(ಆಚರಣೆಗಳು ನೇತೃತ್ವ ವಹಿಸುವ ಜನಾಂಗದ ಒಂದು ಕುಟುಂಬ) ಇರುತ್ತದೆ. ಊರು-ಕೇರಿಗಳ ಜನರನ್ನು ಆಚರಣೆಗಳಲ್ಲಿ ಒಂದುಗೂಡಿಸುವುದು, ಸಂಸ್ಕೃತಿ , ಪರಂಪರೆಗಳನ್ನು ಆಚಾರಬದ್ದವಾಗಿ ನಡೆಸಿಕೊಂಡು ಹೋಗುವುದು. ತಕ್ಕ ಮುಖ್ಯಸ್ಥರ ಕರ್ತವ್ಯ.
ಪ್ರತಿ ಊರುಗಳಲ್ಲೂಆಚರಣೆಗಳಲಲ್‍ಇ ಪ್ರಾದೇಶಿಕವಾರು ವ್ಯತ್ಯಾಸಗಳನ್ನು ಕಾಣಬಹುದು. ವ್ಯತ್ಯಾಸಗಳನ್ನು ಕಾಣಬಹುದು. ಇವುಗಳಲ್ಲಿ ಬಹಳ ಮುಖ್ಯವಾಗಿ ಕಾಣಸಿಗುವುದು. ಹಬ್ಬಗಳ ಸಂದರ್ಭದಲ್ಲಿ ದೇವಸ್ಥಾನದಲ್ಲಿ ನೆರವೇರಿಸುವ ಅಥವಾ ಒಪ್ಪಿಸುವ ಆಟ್-ಪಾಟ್ ಆರ್ಥಾತ್ ಹಾಡು ಕುಣಿತ. ಹಾಡು ಸರ್ವೇಸಾಮಾನ್ಯವಾಗಿ ಒಂದೇತೆರನಾಗಿ ಕಂಡು ಬಂದರೂ ಕುಣಿತದಲ್ಲಿ ವೈವಿಧ್ಯ ಕಾಣಬಹುದು.
ಒಂದೊಂದು ದೇವಸ್ಥಾನದಲ್ಲಿ ದುಡಿಕೊಟ್ಟ್ನೊಂದಿಗೆ ಕೇವಲ ಬೊಳ್ಕಾಟ್ ಮಾತ್ರವಿದ್ದರೆ, ಕೆಲವುಕಡೆ ವಿಶಿಷ್ಟವಾದ, ಕೊಂಬಾಟ್(ಕಡವೆಯ ಕೊಂಬನ್ನು ಹಿಡಿದು ಕುಣಿಯುವ ಪರಿ) ಪೀಲಿಯಾಟ್(ನವಿಲು ಗರಿಗಳ ಗುಚ್ಚವನ್ನು ಹಿಡಿದು ಕುಣಿಯುವ ಪರಿ) ಪೀಲಿಯಾಟ್(ನವಿಲು ಗರಿಗಳ ಗುಚ್ಚವನ್ನು ಬಳಸುವುದು) ಹೀಗೆ ಹಲವು ವಿಧಗಳಿವೆ. ಈ ವಿಶೇಷಗಳನ್ನು ಚೆಯ್ಯಂಡಾಣೆ ಸಮೀಪದ ಕೋಕೇರಿ ಗ್ರಾಮದ ಭದ್ರಕಾಳಿ ದೇವಸ್ಥಾನದಲ್ಲಿ ಮಡಿಕೇರಿ ಸಮೀಪದ ಕೆದಕಲ್, ಇಬ್ನಿವಳವಾಡಿ ಭದ್ರಕಾಳಿ ದೇವಸ್‍ಥಾನಗಳಲ್ಲೂ ಕಾಣಬಹುದು.

                              ಹಬ್ಬಗಳ ಆಚರಣೆಯಲ್ಲಿ ಇಂದಿಗೂ ಹಳೆಯ ಜನಪದೀಯ ಸಂಪ್ರದಾಯದ ಉಳಿಕೆ ಇದೆ ಎಂದು ಹೇಳಬಹುದಾದರೆ ಅದು ಮುತ್ತ್‍ನಾಡ್ ಎಂದು ಕರೆಸಿಕೊಳ್ಳುವ ಗಾಳಿಬೀಡು, ಕಾಲೂರು, ಸೂರ್ಲಬ್ಬಿ ನಾಡ್, ಮುಕ್ಕೋಡ್ಲು ಈ ಗ್ರಾಮಗಳಲ್ಲಿ ನಾಗರಿಕತೆಯ ಸಂಪೂರ್ಣ ಪ್ರಭಾವ ಈ ಭಾಗದಲ್ಲಿ ಕಾಣಿಸಿಕೊಳ್ಳದಿರುವುದೂ ಇದಕ್ಕೆ ಒಂದು ಕಾರಣ ಎಂದರೆ ಉತ್ತಪ್ರೇಕ್ಷೆಯಲ್ಲ. ಇಲ್ಲಿಎಷ್ಟೋ ದಿನಗಳ ಕಾಲ ರಾತ್ರಿ ಇಡೀ ಕುಣಿತದ ಹರಕೆ ಒಪ್ಪಿಸುವ ಸಂಪ್ರದಾಯದ ಇಂದಿಗೂ ನಡೆದುಕೊಂಡೇ ಬಂದಿದೆ. ಮನೆಯ ಒಬ್ಬ ಗಂಡು ಇಂಥ ಆಚರಣೆಗಳಲ್ಲಿ ತಪ್ಪದೇ ಸಂಪ್ರದಾಯ ಬದ್ದ ಉಡುಪಿನೊಂದಿಗೆ(ದಟ್ಟಿ-ಕುಪ್ಪಸ) ದೇವಸ್ಥಾನದ ಪ್ರಾಂಗಣಕ್ಕೆ ಇಳಯಲೇಬೇಕೆಂಬ ಹಿಡುಕಟ್ಟು ಇಂಥ ಜಾನಪದದ ಉಳಿವಿಗೆ ಸಹಕಾರಿಯಾಗಿದೆ. ಹೀಗಾಗಿ ವೈಜ್ಞಾನಿಕ ಯುಗದಲ್ಲೂ ಯುವಜನಾಂಗ ಇಂಥ ಸಾಂಪ್ರದಾಯಕ ಆಚರಣೆಯಲ್ಲಿ ಭಾಗವಹಿಸುವುದರಿಂದ ಜಾನಪದದ ಸತ್ವ ಗಟಿಯಾಗಿ ನೆಲೆ ನಿಂತಿದೆ.
                            ಈ ಹಿಂದೆ ಹೇಳಿದಂತೆ ಬಹಳ ಹಿಂದಿನಿಂದಲೂ ಆಚರಣೆಯಲ್ಲಿ ಕೇರಳದ ಪ್ರಭಾವ ಹೆಚ್ಚಿನದಾಗಿ ಕಂಡುಬರುವ ಕೊಡಗು ಜಿಲ್ಲೆಯಲ್ಲಿ ದೈವಾರಾಧನೆಗಳು ಬಹುಮಟ್ಟಿಗೆ ಕೇರಳದ ಆಚರಣೆಗೆ ಹೋಲುತ್ತವೆ. ಕೊಡವರ ಐನ್ಮನೆಗಳು ಕೇರಳ ಶೈಲಿಯಲ್ಲಿರುವುದು(ಕೇರಳೀಯರ ತರವಾಡ್) ಮಲಯಾಳ ದೇಶದ ಪ್ರಭಾವಕ್ಕೆ ಸಾಕ್ಷಿ.

ದೇವತಾರಾಧನೆಗಳು
                           ಕೊಡಗಿನ ಕೆಲವು ದೇವತೆಗಳು ಉದ್ಬವ ಮೂರ್ತಿಗಳು, ಅವುಗಳ ಅಸ್ತಿತ್ವ ಹೇಗಾಯಿತೆಂಬುದಕ್ಕೆ ಹಲವು ಜನಪದ ಕಥೆಗಳಿವೆ. ಯಾರಿಗೋ ಕನಸಿನಲ್ಲಿ ಬಂದು, ಮತ್ತೆಲ್ಲೋ ಒಂದು ಕಡೆ ಮೂರ್ತಿ ಕಾಣಿಸಿಕೊಂಡು, ಆ ದೈವೀ ಪ್ರಭಾವ ಮೈಮೇಲೆ ಆವಾಹನೆ ಆಗಿ ತನ್ನ ಆರಾಧನೆ ಬಯಸುವುದು......ಇದೆಲ್ಲಾ ಹಿರಿಯರ ಬಾಯಿಮಾತಿನಿಂದ ಕೇಳಿ ತಿಳಿದುಕೊಂಡಿರುವ ಸಂಗತಿಗಳು. ಇತ್ತೀಚಿನ ದಿನಗಳಲ್ಲಿ ಈ ಕುರಿತ ಮಾಹಿತಿಯನ್ನು ತಿಳಿದವರೂ ಬಹಳ ಒಟ್ಟಾರೆನಡೆಸಿಕೊಂಡು ಬಂದಿರುವ ಆಚರಣೆಗಳು ಮಾತೆ ಚಾಲ್ತಿಯಲ್ಲಿವೆ.ಮತ್ತೆ ಕೆಲವು ಮಾನವ ರೂಪದಲ್ಲಿ ನೆರೆ ರಾಜ್ಯದಿಂದ(ಕೇರಳ ಎಂದು ಮತ್ತೆ ಹೇಳುವ ಅಗತ್ಯವಿಲ್ಲ) ಮಾನವ ರೂಪದಲ್ಲಿ ಬಂದು ಸ್ಥಳೀಯ ಜನರಿಗೆ ತಮ್ಮ ಮಾಯಾಶಕ್ತಿಗಳ ಪ್ರಭಾವ ಕಾಣಿಸಿ ತಮಗೆ ನೆಲೆ ಕಂಡುಕೊಂಡು ಆರಾಧಿಸಿಕೊಳ್ಳುವ ದೇವರುಗಳು. ಇಂಥ ದೇವರುಗಳು ಕೊಡಗಿನ ಪ್ರಮುಖ ದೇವರುಗಳು ಎಂದರೆ ತಪ್ಪಾಗಲಿಕಿಲ್ಲ.
                         ಇದಕ್ಕೆ ಪ್ರಮುಖ ನಿದರ್ಶನ-ಮಳೆ ಬೆಳೆ ದೇವರೆಂದೇ ಖ್ಯಾತಿವೆತ್ತ, ಕೊಡಗಿನ ಹಾಗೂ ಸಹೋದರಿ-ತಿರುನೆಲ್ಲಿಯವ್ವ ಬೇಂದ್ರುಕೋಲಪ್ಪ ಹಾಗೆ ಜಿಲ್ಲೆಯ ಮತ್ತೋಂದೆಡೆ ನೆಲೆನಿಂತ ನೆಲಜಿ ಇಗ್ಗುತ್ತಪ್ಪ, ಇವೆರೆಲ್ಲರ ತಂಗಿ ಅರಿಯದೇ ಮಾಡಿದ ತಪ್ಪಿಗೆ ಬಲಿಪಶುವಾದ ಪನ್ನಂಗಾಲತಮ್ಮೆ. ತಿನ್ನುತ್ತಿದ್ದ ತಾಂಬೂಲವವನ್ನು ಬಾಯಿಂದ ಹೊರಗೆ ತೆಗೆದು ಮತ್ತೆ ಬಾಯಿಗೆ ಹಕಿಕೊಂಡ ಏಕಮಾತ್ರ ಕಾರಣಕ್ಕಾಗಿ ಜಾತಿಭ್ರಷ್ಟಳಾಗಿ-ತನ್ನ ಸಹೋದರರಿಂದ ದೂರಾಗಬೇಕಾದ ಪರಿಸ್ಥತಿತಿ ಪನ್ನಂಗಾಲ ತಮ್ಮೆಯದು ಮತ್ತು ಹಿರಿಯಣ್ಣ ಇಗ್ಗುತ್ತಪ್ಪ ಅಕೆಯನ್ನು ಕೀಳು ಜಾತಿಯ ದೇವತೆಯಾಗಿ ತಾನು ನೆಲೆನಿಲ್ಲುವ ಬೆಟ್ಟದ ಕೆಳಭಾಗದ ತಪ್ಪಲಿನಲ್ಲಿ ನೆಲೆನಿಲ್ಲುವಂತೆ ಆಜ್ಞಾಪಿಸುವುದರೊಂದಿಗೆ, ಪನ್ನಂಗಾಲತಮ್ಮೆ ಯವಕ ಪಾಡಿಯಲ್ಲಿ ನಲೆನಿಲ್ಲುತ್ತಾರೆ.
  ಈ ಪನ್ನಂಗಾಲ ತಮ್ಮೆಯ ಉತ್ಸವದ ಆಚರಣೆ ಬಹಳ ವಿಶೇಷ. ಈಕೆ ಹಂಸರೂಪಿಣಿ ಎಂಬ ಕಲ್ಪನಯೂ ಇದೆ. ಕೆಳಭಾಗದ ತಪ್ಪಲಿನಲ್ಲಿ ವಿಶಾಲವಾದ ಗದ್ದೆ ಪ್ರದೇಶದಲ್ಲಿ ಉತ್ಸವದ ಆಚರಣೆ.
                      ವರ್ಷಕ್ಕೊಮ್ಮೆ ತನ್ನಣ್ಣ ಭೇಟಿಗಾಗಿ ಬಂದೇ ಬರುತ್ತಾನೆಂನ ಮಾತಿನೊಂದಿಗೆ ಹೊರಡಲನುವಾಗುವಂತೆ ಆವಾಠಹನೆಯಾಗುವುದು ವಿಶೆಷವಾಗಿ ನಿರ್ಮಿಸಲಾದ ಉದ್ದನೆಯ ಬಿದಿರಿನ ಕೊಡೆಗೆ. ಈಕೆಗೆ ಯವಕಪಾಡಿ ಗ್ರಾಮದ ಕೊಡವ ಜನಾಂಗದವರೂ ಸೇರಿದಂತೆ ಇತರೇ ಜನಾಂಗದವರೂ ತಕ್ಕ ಮುಖ್ಯಸ್ಥರೆನಿಸಿಕೊಂಡಿದ್ದಾರೆ.
                      ಪನ್ನಂಗಾಲತಮ್ಮೆಗೆ ಒಂದು ವರ್ಷ ದೊಡ್ಡ ಹಬ್ಬವಾದರೆ-ಮತ್ತೊಂದು ವರ್ಷ ಚಿಕ್ಕ ಹಬ್ಬ, ದೊಡ್ಡಹಬ್ಬದಲ್ಲಿ ದೊಡ್ಡ ಕೊಡೆ, ಚಿಕ್ಕ ಹಬ್ಬಕೆಕ ಚಿಕ್ಕಕೊಡೆ. ದೊಡ್ಡ ಹಬ್ಬದಂದು ಸಂಪ್ರದಾಯಬದ್ದವಾಗಿ ತಕ್ಕರ ಮನೆಯಿಂದ ಒಡ್ಡೋಲಗದೊಂದಿಗೆ ಭಂಡಾರ, ಕೊಡೆಯನ್ನು ತರುವುದರೊಂದಿಗೆ ಹಬ್ಬದ ಆಚರಣೆ.ಈಗಾಗಲೇ ಹೇಳಿರುವಂತೆ ಕೊಡೆಗೆ ಅವಾಹನೆ ಆಗುವುದು ಪನ್ನಂಗಾಲತ್ತಮ್ಮೆಯ ವೈಶಿಷ್ಟ್ಯತೆ. ಜೀವಂತ ಮನುಷ್ಯನಿಗೆ ದೈವೀ ಶಕ್ತಿ ಅಥವಾ ಇತರೇ ಶಕ್ತಿಗಳ ಆವಾಹನೆಯಾಗುವುದನ್ನು ಕಂಡಿದ್ದೇವೆ......ಆದರೆ ಒಂದು ನಿರ್ಜೀವ ವಸ್ತುವಿಗೆ ಶಕ್ತಿ ಆವಾಹನೆಯಾಗಿ ಅದರ ಅಟ್ಟಹಾಸವನ್ನು ಮರೆಯುವುದೆಂದರೆ ಅದ್ಬುತವೇ ಸರಿ.
                          ಹಲವರು ಹಿಡಿದು ಈ ಕೊಡೆ ಇದ್ದಕ್ಕಿಂತೆ ತಿರುಗಲು ಪ್ರಾರಂಭಿಸುವುದು, ಹಾರಲು(ತನ್ನಣ್ನ ಇಗ್ಗುತ್ತಪ್ಪನನ್ನು ಕಾಣಲು) ಯತ್ನಿಸುವುದು. ಹಾರಲು ಯತ್ನಿಸಿರುವ ಕೊಡೆಯನ್ನು ತಡೆಯಲು ಅದನ್ನು ಗದ್ದೆ ಭುಮಿಗೆ ಒತ್ತಿ ಹಿಡಿಯುತ್ತಾರೆ. ತನ್ನ ರುದ್ರಾವತಾರವನ್ನು ತೋರುವ ಈ ಕೊಡೆ ವ್ಯತ್ತಾಕಾರದಲ್ಲಿ ಸುತ್ತುವುದನ್ನು ನೋಡುವುದೋ ಚೆಂದ. ದೋಸೆ ಹಿಟ್ಟನ್ನು ರುಬ್ಬುವ ದೃಷ್ಯ ನಿಮ್ಮ ಕಣ್ಣೆದುರಿನಲ್ಲಿ ಬಂದರೆ, ಅದೇ ದೃಶ್ಯ ಅಲ್ಲಿ ನಡೆಯುತ್ತಿರುತ್ತದೆ. ಆನರು ಕೊಡೆಯನ್ನು ಹಾರಲು ಬಿಡಬಾರದು ಎನ್ನುವ ಕಾರಣಕ್ಕೆ ಒತ್ತಿ ಹಿಡಿದ ಭೂಮಿ ಆಳವಾಗಿ ಗುಂಡಿಯಾಗತೊಡಗುತ್ತದೆ. ಎಂಥಾ ಶಕ್ತಿ ಪನ್ನಂಗಾಲತಮ್ಮೆಯದು.
                         ಅಷ್ಟಕ್ಕೂ ಕೊಡೆಯನ್ನು ಹಾರಲು ಬಿಡುವುದಿಲ್ಲವೇಕೆ ಎಂಬ ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರ, ಹಾಗಾದಲ್ಲಿ ನಾಡಿಗೆ ಅಪತ್ತು ಕಾದಿದೆ ಎಂಬುದು.
ಈಗಾಗಲೇ ಹೇಳಿರುವಂತೆ ಪನ್ನಂಗಾಲತಮ್ಮೆ ಜಿಲ್ಲೆಯ ಪರಿಶಿಷ್ಟ ಜಾತಿಯವರು ಹಚ್ಚಾಗಿ ಆರಾಧಿಸುವುದನ್ನು ಕಾಣುತ್ತೇವೆ. ಹಾಗೆಯೇ ಈಕೆ ಇವರ ಕುಲದೈವವೂ ಹೌದು. ಹಾಗಾಗಿ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರು ಇರುವೆಲ್ಲೆಡೆ ಪನ್ನಂಗಾಲ ತಮ್ಮೆ ದೇವಸ್ಥಾನವನ್ನು ಕಾಣಬಹುದು.
                         ಜಿಲ್ಲೆಯ ದೇವಸ್ಥಾನಗಳನ್ನು ಗಮನಿಸಿದಾಗ ವಿಶಿಷ್ಟವಾಗಿ ಕಾಣುವುದು ಕೊಡಗಿನ ಗಡಿಭಾಗದ ಬಿರುನಾಣಿ ಸಮೀಪದ ಪುತ್ತು ಪುತ್ತು ಭಗವತಿ ದೇವಸ್ಥಾನ. ಪರಕಟಗೇರಿ ಗ್ರಾಮದಲ್ಲಿರುವ ಈ ಭಾಗವತಿ ಎಲ್ಲಾ ಗ್ರಾಮದಲ್ಲಿರುವಂತೆಯೇ ಊರಿನ ರಕ್ಷಣೆಗೆ ನೆಲೆನಿಂತಿರುವುದು ಸಾಮಾನ್ಯ ಎನಿಸಬಹುದು. ಆದರೆ ಈ ಭಗವತಿ ಇಲ್ಲಿ ನೆಲಗೊಂಡ ಹಿನ್ನೆಲ ಮಾತ್ರ ವಿಶೆಷವಾದದ್ದು, ಹಾಗೆಯೇ ವರ್ಷಕ್ಕೋಮ್ಮೆ ನಡೆಯುವ ಹಬ್ಬಾಚರಣೆ ವಿಶಿಷ್ಟವಾದದ್ದು. ಈಕೆಯ ಉತ್ಸವ ಪೊಮ್ಮಂಗಲ ನಮ್ಮೆ’ ಅಂತಲೇ ಜಿಲ್ಲೆಯಲ್ಲಿ ಹೆಸರುವಾಸಿಯಗಿದೆ.
                       ಈ ಪುತ್ತು ಎಂಬುದು ಕೊಡವ ಭಾಷೆಯಲ್ಲಿ ಹುತ್ತ ಎಂಬ ಅರ್ಥ, ಇಲ್ಲಿ ಪುತ್ತು ಭಗವತಿ ನೆಲೆಗೊಂಡದ್ದಕ್ಕೆ ಒಂದು ಹಿನ್ನಲೆ ಇದೆ. ಆ ಊರಿನ ನೆಲ್ಲಿರ ಕುಟುಂಬದ ಹಾಗೂ ಕರ್ತಮಾಡ ಕುಟುಂಬದ ಹಿರಿಯ ಅಜ್ಜಂದಿರಿಬ್ಬರಿಗೆ ಮೈಮೇಲೆ ದೇವರು ಬಂದು, ಅವರ ಬಾಯಿಂದ ಬಂದ ನುಡಿಗೆ ಅನುಗಣವಾಗಿ ಕೇರಳಕ್ಕೆ ತೆರಳಿ ಅಲ್ಲಿಂದ ಈ ಭಗವತಿ ದೇವಿಯ ಮೂರ್ತಿಯನ್ನು ತಂದು ಹುತ್ತದ ಮೇಲೆ ಇಟ್ಟರು. ಅಲ್ಲಿಂದೀಚೆಗೆ ಈಕೆಗೆಪುತ್ತು ಭಗವತಿ(ಹುತ್ತದ ಭಗವತಿ) ಎಂಬ ಹೆಸರು ಬಂತೆಂದು ಪ್ರತೀತಿ. ಕಾಳಾನಂತರದಲ್ಲಿ ತನ್ನ ಮಹಿಮೆಯಿಂದ ಜನರ ಭಕ್ತಿಗೆ ಪಾತ್ರಳಾದ ಈ ಪುತ್ತು ಬಗವತಿ ಪರಕಟಗೇರಿ ಗ್ರಾಮದ ಕಾಡಿನೊಳಗೆ ಬೆಲೆಗೊಂಡು ಇದೀಗ ಅಭಿವೃದ್ದಿಗೊಂಡು ಸುತ್ತಲ ನಾಡಿನವರ ಆರಾಧ್ಯ ದೈವವಾಗಿದ್ದಾಳೆ. ಈಕೆಗೆ ಪೂತ್ತೋರಮ್ಮೆ ಎಂಬ ಇನ್ನೊಂದು ಹೆಸರಿದೆ. ಕೇರಳ ರಾಜ್ಯದಿಮದ ತಂದಿರುವ ಕಾರಣ. ಈಕೆಯನ್ನು ಪಶ್ಚಿಮಾಭಿಮುಖಿಯಾಗಿ ಪ್ರತಿಷ್ಟಾಪಿಸಲಾಗಿದೆ.
                      ಆರಂಭದಲ್ಲಿ ಕೇರಳ ಮೂಲದವರಾದ ತೀಯ ಜನಾಂಗದವರು ಈ ಪುತ್ತು ಭಗವತಿಯ ತಕ್ಕ ಮುಖ್ಯಸ್ಥರಾಗಿ ಸದೇವೆ ಸಲ್ಲಿಸುತ್ತಿದ್ದು, ಕಾಲಕ್ರಮೇಣ ಅವರ ಸಂತತಿ ಇಲ್ಲವಾಗಿ ನಂತರದಲ್ಲಿ ಸ್ಥಳೀಯರಾದ ಅಣ್ಣಾಳಮಾಡ ಕುಟುಂಬಸ್ಥರು ತಕ್ಕಾಮೆಯನ್ನು ವಹಿಸಿಕೊಂಡು ದೇವಿಯ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಪುತ್ತು ಭಗವತಿಯನ್ನು ಸಪ್ತ ಮಾತೃಕೆಯರ ರೂಪದಲ್ಲಿ ಆರಾಧಿಸಲಾಗುತ್ತಿದೆ.
                    ಈಕೆಯ ಉತ್ಸವ ವರ್ಷದ ಕೊಡವ ಮಾಸ ಮಿನ್ಯಾರ್ನಲ್ಲಿ ಅಂದರೆ ಮಾರ್ಚ್ ತಿಂಗಳ ಕೊನೆಯ ಭಾಗದಲ್ಲಿ ನಡೆಸಲಾಗುತ್ತದೆ. 9 ದಿನಗಳ ಹಬ್ಬದ ಅಂಗವಾಗಿ ಉತ್ತಾರ ನಕ್ಷತ್ರದಲ್ಲಿ ಕೊಡಿಮರ ನಿಲ್ಲಿಸುವುದರೊಂದಿಗೆ ದೇವರ ಕಟು ಬೀಳುತ್ತದೆ. ನಂತರ ಶುದ್ದತೆಗೆ ಪ್ರಾಧಾನ್ಯತೆ ಪ್ರಾಣಿ ಹತ್ಯೆ, ಮರ ಕಡಿಯುವುದು, ಊರವರು ಹೊರೆಗೆ ಹೋಗುವುದು ನಿಷಿದ್ದ.
                     ಈ ಪುತ್ತು ಭಗವತಿ ಹಲವು ಖಾಯಿಲೆ, ತೊಂದರೆ-ತಾವತ್ರಯಗಳನ್ನು ಕಷ್ಟ ನಷ್ಟಗಳನ್ನು ಒಳಗೊಂಡಂತೆ ಮಕ್ಕಳಿಗೆ ಸಂಬಂಧಿಸಿದ ಬಾಲಗ್ರಹ ವೇದನೆಯನ್ನು ಪರಿಹರಿಸುವಾಕೆ. ಅದಕ್ಕಾಗಿ ಈಕೆಗೆ ವಿಶಿಷ್ಟವಾದ ಹರಕೆ ಹೊರುವ ಪದ್ದತಿ ನಡೆದುಬಂದಿದೆ. ಅದೇ ‘ಪೊಮ್ಮಂಗಲ ಪರಕೆ’ ನೆರಪಿಮ ದಿವಸ ಈ ಪೊಮ್ಮಂಗಲ ಹರಕೆಯನ್ನು ದೇವಿಗೆ ಒಪ್ಪಿಸಲಗುತ್ತದೆ. ಪೊಮ್ಮಂಗಲ ಹರಕೆ ಎಂದರೆ, ತೊಂದರೆ ತಾಪತ್ರಯಕ್ಕೆ ಒಳಗಾದವರು. ಸಂಬಂಧಿಸಿದರನ್ನು ಮದುವೆ ಶಾಸ್ತ್ರ ಮಾಡಿ ದೇವಸ್ಥಾನಕ್ಕೆ ಕರೆತುವುದು. ಅಂದರೆ ಗಂಡನ್ನು ಹೆಣ್ಣಿನ ವೇಷದಲ್ಲೂ, ಹೆಣ್ಣನ್ನು ಗಂಡಿನ ವೇಷದಲ್ಲೂ ಮದುವೆಗೆ ಸಿದ್ದಗೊಳಿಸುವುದು. ಮದುವೆ ಸಂಪ್ರದಾಯಗಳು ಏನೆಲ್ಲಾ ಇವೆಯೋ ಅದೆಲ್ಲವನ್ನೂ ಬಂಧು ಬಳಗವನ್ನು ಸೇರಿಸಿ ಅವರವರ ಮನೆಯಲ್ಲಿ ನಡೆಸುತ್ತಾರೆ. ಇವೆಲ್ಲ್ವೂ ಮನೆಯಲ್ಲೆ ನಡೆಯುವ ಶಾಸ್ತ್ರಗಳು. ನಂತರ ಒಡ್ಡೋಲಗದೊಂದಿಗೆ ದೇವಸ್ಥಾನಕ್ಕೆ ಕರೆತಂದು ದೇವಿಗೆ ಹರಕೆ ಒಪ್ಪಿಸುವುದು ವಾಡಿಕೆ. ಕೊಡಗಿನಲ್ಲಿ ವಿಶಿಷ್ಟವಾದ ಸಂಪ್ರದಾಯದ ದೈವ ನೆಲೆ ಇರುವುದ ಇದೊಂದೇ, ಒಂಬತ್ತು ದಿನಗಳು ಇಲ್ಲಿ ಉತ್ಸವ ನಡೆಯುತ್ತದೆ.ಪ್ರತಿನಿತ್ಯ 2 ಬಾರಿ ಪೂಜಿಸಿಕೊಳ್ಳುವ ಈ ಪುತ್ತು ಬಗವತಿ ನಾಡಿನ ಜನರಿಗೆ ಅಚ್ಚು ಮೆಚ್ಚಿನ ದೈವ.
ಕೊಡಗು ಜಿಲ್ಲೆಯ ದೈವಾರಾಧನೆಗಳಲ್ಲಿ ‘ಕೋಲಗಳು

               ‘ಕೋಲ’ ಎಂಬುದು ತುಳುನಾಡು ಭಾಷೆಯಿಂದ ಬಂದದ್ದು, ಇದನ್ನೇ ಕೊಡಗು ಜಿಲ್ಲೆಯ ಕೊಡವ ಜನಾಂ ‘ತೆರೆ’ ಎಂದು ಕರೆಯುತ್ತಾರೆ. ಈ ‘ತೆರೆ’ ಎಂಬ ಪದ ಕೇರಳದ ಮಲಯಾಳ ಭಾಷೆಯ ಕೊಡುಗೆ. ತುಳುನಾಡು ಹಾಗೂ ಕೇರಳದ ಸಂತಿಯ ಪ್ರಭಾವ ಈ ನಿಟ್ಟಿನಲ್ಲಿ ಕೊಡಗಿನ  ಸಂಸ್ಕೃತಿಯ ಮೇಲೆ ಸಮನಾಗಿ ಪ್ರಭಾವ ಬೀರಿದೆ.
               ನಾನು ಈ ಹಿಂದೆ ಹೇಳಿದಂತೆ ಜಿಲ್ಲೆಯ ಪ್ರತಿ ದೇರುಗಳು ಕೇರಳದಿಂದ ಬಂದಿರುವ ದೇವರುಗಳು. ಈ ದೇವರುಗಳೆಲ್ಲದರ ತಂದೆ ಕೇರಳದ ಇರಿಟ್ಟಿ ಸಮೀಪದ ಬೈತೂರು ಎಂಬಲ್ಲಿಯ ಬೈತೂರಿನಲ್ಲಿ ‘ಬೈತೂರಚ್ಚ’(ಈಶ್ವರನ ಅಂಶ) ಎಂಬ ಹೆಸರಿಂದ ನೆಲೆಗೊಂಡಿದ್ದಾನೆ. ವರ್ಷದ ಜನವರಿ ತಿಂಗಳಿನಲ್ಲಿ ಅಲ್ಲಿ ನಡೆಯುವ ಉತ್ಸವಕ್ಕೆ ಇಲ್ಲಿಯ ದೇವರುಗಳ ಆಯುಧಗಳು ಹಾಗೂ ದೇವರುಗಳು ಮೈಮೇಲೆಡೆ ಆವಾಹನೆಗೊಳ್ಳುವ ವ್ಯಕ್ತಿಗಳು ಹೋಗಿ ಅಲ್ಲಿ ದೈವೀ ಶಕ್ತಿಯ ಅಶೀರ್ವಾದ ಪಡೆದುಕೊಳ್ಳುವುದು ವಿಶೆಷ. ಆ ದೇವಸ್ಥಾನದ ತಕ್ಕ ಮುಖ್ಯಸ್ಥರು ಕೊಡಗಿನವರು ಎನ್ನುವುದು ಮತ್ತೊಂದು ವಿಶೇಷ.
                    ‘ಕೋಲ’ ಅಥವಾ ‘ತೆರೆ; ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಕಲೆಯ ಪ್ರಭಾವವೇನೋ ಎನ್ನಿಸುತ್ತದೆ. ವೇಷ ಭೂಷಣಗಳೂ ಯಕ್ಷಗಾನದ ವೇಷಭೂಷಣವನ್ನು ಹೋಲುತ್ತದೆ. ಪ್ರಸಾಧನವೂ ಅಷ್ಟೇ. ಕೋಲ ಒಪ್ಪಿಸುವುದು ಎಂದರೆ ಅಥವಾ ತೆರೆಕಟ್ಟುವುದು ಎಂದರೆ ದೈವದ ಆರಾಧನೆಯನ್ನು ಮನುಷ್ಯನಿಗೆ ವೇಷ, ಭೂಷಣ, ಮೊಗವಾಡಗಳನ್ನು ತೊಡಿಸಿ, ಮೈಮೇಲೆ ದೈವದ ಆವಾಹನೆ ಗೊಳಿಸಿ ಆರಾಧಿಸುವುದು ಎಂದು ಅರ್ಥ.
ಕೊಡಗಿನಲ್ಲಿ ಚಾಮುಂಡಿ, ಕೊರತಿ, ಪಾಷಾಣಮೂರ್ತಿ, ಗುಳಿಗೆ ವಿಷ್ಣುಮೂರ್ತಿ ಹೀಗೆ ಹಲವು ದೈವಗಳ ಕೋಲ ಕಟ್ಟುವುದನ್ನು ಗಮನಿಸ ಬಹುದು. ಇವೆಲ್ಲವೂ ಬಲಿ ತೆಗೆದುಕೊಳ್ಳುವ ಅಂದರೆ ರಕ್ತ ಬಯಸುವ ದೈವಗಳು ಎಂಬುದು ಗಮನಾರ್ಹ, ಇವುಗಳಿಗೆ ಹಂದಿ-ಕೋಳಿಗಳನ್ನು ಆಹಾರ ರೂಪದಲ್ಲಿ ಬಲಿಕೊಡುವುದು ಸಂಪ್ರದಾಯ.
                     ಈ ಕೋಲವನ್ನು ಎಲ್ಲರೂ ಕಟ್ಟುವಂತಿಲ್ಲ. ಅದಕ್ಕೆಂದೇ ಕೆಲವು ಜನಾಂಗಗಳಿವೆ. ಮಲಯ, ಫಣಿಕ ಜನಾಂಗಗಳು ಈ ಒಂದು ಕಲೆಯನ್ನು ಪರಂಪರೆಯಾಗಿ ನಡೆಸಿಕೊಂಡು ಬಂದಿವೆ. ಕೊಡಗಿನಲ್ಲಿ-ಸಾಧಾರಣವಾಗಿ, ಚಾಮುಂಡಿ, ವಿಷ್ಣುಮೂರ್ತಿ, ಗುಳಿಗೆ, ಹಲವು ದೈವಗಳ ಕೋಲಗಳನ್ನು ಶೇ.70ರಷ್ಟು ಕೊಡವ ಕುಟುಂಬಗಳು ಬಂದಾಗಿ ಸೇರಿ ತಮ್ಮ ತಮ್ಮ ಐನ್ ಮನೆಗಳಲ್ಲಿ ನಡೆಸುತ್ತಾರೆ.
ತಲೆ ತಲಾಂತರದಿಂದ ಅಲ್ಲದಿದ್ದರೂ ಕೊಡಗಿಗೆ ಕೇರಳ ಮೂಲ ದೈವ ಮುತ್ತಪ್ಪ ದೇವರ ಪ್ರವೇಶವಾಗಿ ಅಲ್ಲಲ್ಲಿ ದೇವಸ್ಥಾನಗಳಾಗಿ ಅದಕ್ಕೂ ಕೋಲ ಕಟ್ಟಿಸುವುದು ಮೂಲಕ ಹರಕೆ ಒಪ್ಪಿಸುವುದನ್ನು ಕಾಣಬಹುದು.
                         ಹಾಗೆಯೇ ದಕ್ಷಿಣ ಕನ್ನಡ ಮೂಲದ ಪಾಷಾಣ ಮೂರ್ತಿ, ಪಂಜುರ್ಲಿ, ಕೊರಗ, ತನಿಯ ದೈವಗಳಿಗೂ ಕೂಡ ಜಿಲ್ಲೆಯ ಜನರ ವಲಸೆಯೊಂದಿಗೆ ಜಿಲ್ಲೆಯಲ್ಲಿ ನೆಲೆಗೂಡು ಅವರವರ ಸಂಸ್ಕೃತಿಯೊಂದಿಗೆ ಅರಾಧಿಸಲ್ಪಡುತ್ತಿವೆ.
ಒಟ್ಟಿನಲ್ಲಿ ವಿಶಿಷ್ಟ ಸಂಸ್ಕøತಿಯ ಕೊಡಗಿನಲ್ಲಿ ವಿಭಿನ್ನ ಸಂಸ್ಕೃತಿ  ಕೊಡಗಿನಲ್ಲಿ ವಿಭಿನ್ನ ಸಂಸ್ಕøತಿಗಳು ಮೇಳೈಸಿ ಶ್ರೀಮ0ತ ಧಾರ್ಮಿಕ ಪರಂಪರೆಯನ್ನೇ ಸೃಷ್ಟಿಸಿದೆ ಎಂದರೆ ತಪ್ಪಾಗಗಲಿಕ್ಕಿಲ್ಲ. : ಮಾದೇಟಿರ ಬೆಳ್ಯಪ್ಪ


Refine Search


Showing 1 to 9 of 9 (1 Pages)