Bhagamandala Village

Bhagamandala Village

ದಕ್ಷಿಣ ಕಾಶಿ ಭಾಗಮಂಡಲ:

                      ಮಡಿಕೇರಿಯಿಂದ 30 ಕಿ ಮೀ ಅಂತರದಲ್ಲಿರುವ ಭಾಮಂಡಲ ಕೊಡಗಿನ ಪವಿತ್ರ ತಾಣ. ಅಲ್ಲಿಂದ ಕೇವಲಲ ಎಂಟು ಕಿ. ಮೀ ಗಳ ಅಂತರದಲ್ಲಿ ಕಾವೇರಿಯ ನೆಲೆ ತಲಕಾವೇರಿ, ಕಾವೇರಿ, ಕನ್ನಿಕೆ ಮತ್ತು ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮ ತಾಣವಾಗಿರುವ ಭಾಗಮಂಡಲ, ಭಗಂಡ ಮಹಿರ್ಷಿ ತಪಸ್ಸು ಮಾಡಿ ಪುಣ್ಯಸ್ದಳವೆಂದು ಹೆಸರುವಾಸಿ. ಭಗಂಡ ಋಷಿಯು ಈ ಸ್ದಳದಲ್ಲಿ ಈಶ್ವರ ಲಿಂಗವನ್ನು ಪ್ರತಿಷ್ಠಾಪಿಸಿದ ಕಾರಣದಿಂದ ಇಲ್ಲಿಗೆ ಭಗಂಡೇಶ್ವರ ಎಂಬ ಹೆಸರು ಬಂತೆಂದೂ ಕಾಲಾಂತದಲ್ಲಿ ಅದು ಭಾಗಮಂಡಲ ಎಂದಾಯಿತೆಂದು ಪ್ರತೀತಿ. ಟಿಪ್ಪು ಸುಲ್ತಾನನು ಭಾಗಮಂಡಲಕ್ಕೆ 1790 ರಲ್ಲಿ ಮುತ್ತಿಗೆ ಹಾಕಿ ಭಾಗಮಂಡಲವನ್ನು ಅಬಜಲಬಾದ್ ಎಂದು ಹೆಸರಿಸಿದ್ದನು. ಅನಂತರ ಕೊಡಗಿನ ಅರಸನಾಗಿದ್ದ ದೊಡ್ಡವೀರ ರಾಜೇಂದ್ರನು ಟಿಪ್ಪು ವಿನಿಂದ ಭಾಗಮಂಡಲವನ್ನು ಮರಳಿ ಪಡೆದನು. ಭಾಗಮಂಡಲದ ದೇವಾಲಯವು ಕೇರಳ ವಾಸ್ತು ಶಿಲ್ಪ ಶೈಲಿಯನ್ನು ಹೊಂದಿದ್ದು  ಶಿವ, ಸುಬ್ರಹ್ಮಣ್ಯ, ವಿಷ್ಣು ಮತ್ತು ಗಣಪತಿ ದೇವಾಲಯಗಳನ್ನು ಒಳಗೊಂಡಿದೆ. ಈ ದೇಗುಲಗಳು ಕ್ರಿ.ಶ. ಹನ್ನೊಂದನೆಯ ಶತಮಾನಕ್ಕೂ ಹಿಂದೆ ಚೋಳರು ನಿರ್ಮಿಸಿದ ಕಟ್ಟಡಗಳೆಂದು ಪ್ರತೀತಿ ಇದೆ.

                         ಅಕ್ಟೋಬರ್ ತಿಂಗಳ ನಡು ದಿನಗಳಿಂದಲೇ ಭಾಗಮಂಡಲಕ್ಕೆ ಕೊಡಗಿನ ಮೂಲೆ ಮೂಲೆಗಳಿಂದ ಭಕ್ತ ಜನರು ಆಕ್ರಮಿಸಲಾರಂಭಿಸುತ್ತಾರೆ. ಕಾವೇರಿ, ತುಲಾ ಸಂಕ್ರಮಣ ಕಳೆದ ತರುವಾಯ ಭಾಗಮಂಡಲದಲ್ಲಿ ಕುಟುಂಬದ ಹಿರಿಯರಿಗೆ ಪಿಂಡ ನೀಡುವ ಸಂಪ್ರದಾಯ ಕೊಡಗಿನ ಕುಟುಂಬಗಳಲ್ಲಿ ಕಂಡು ಬರುತ್ತದೆ. ಅಂತೆಯೇ, ಈ ದಿನಗಳಲ್ಲಿ ಭಗಂಡೇಶ್ವರ ದೇವಾಲಯದ ಕೊಠಡಿಯೊಂದರಲ್ಲಿ ಸಂಕ್ರಮಣ ಮಾಸಪೂರ್ತಿ ನಂದಾದೀಪವೊಂದು ಸದಾ ಉರಿಯುತ್ತಿದ್ದು, ಭಕ್ತರು ತಮ್ಮೊಂದಿಗೆ ತರುವ ತುಪ್ಪವನ್ನು ದೀಪಕ್ಕೆ ಹಾಕಿ ತಮ್ಮ ಕೊಡುಗೆ ಸಲ್ಲಿಸುತ್ತಾರೆ. ಹಾಗೆಯೇ ಇಲ್ಲಿನ ಅಕ್ಷಯ ಭಂಡಾರದಲ್ಲಿ ಜನ ತಾವು ತಂದಿರುವ ಅಕ್ಕಿಯನ್ನು ಹಾಕುವ ಮೂಲಕ ತಮ್ಮ ಮನೆ ಕಣಜದಲ್ಲೂ ಸದಾ ಭಕ್ತ ತುಂಬಿರುವಂತಾಗಲಿ ಎಂದು ದೇವರನ್ನು ಬೇಡುತ್ತಾರೆ.

                            ಕಾವೇರಿಯ ಉಗಮಸ್ದಾನ ತಲಕಾವೇರಿಯ ಸನಿಹದ ಭಾಗಮಂಡಲವು ಭಗಂಡೇಶ್ವರ, ಸುಬ್ರಹ್ಮಣ್ಯ ಹಾಗೂ ಮಹಾವಿಷ್ಣು ದೇಗುಲ ಸಂಕೀರ್ಣಗಳಿಂದ ಪ್ರಸಿದ್ದವಾಗಿದೆ. ಹಸಿರು ಹೊದ್ದು ನಿಂತ ಬೆಟ್ಟ ಗುಡ್ಡಗಳ ಸುಂದರ ಪರಿಸರದ ನಡುವೆ ಇರುವ ಭಾಗಮಂಡಲಕ್ಕೆ ಕಾಲಿಡುವಾಗಲೇ ಕಾವೇರಿ ಕನ್ನಿಕೆಯರ ಸಂಗಮ ಕಾಣುತ್ತದೆ. ಇಲ್ಲಿ ಇನ್ನೊಂದು ನದಿ ಸಜ್ಯೋತಿ ಗುಪ್ತಗಾಮಿನಿಯಾಗಿ ಬಂದು ಸೇರುತ್ತದೆ. ಸ್ಕಂದ ಪುರಾಣ ಪ್ರಸಿದ್ದ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿಯೇ ಈ ಮೂರು ನದಿಗಳ ಸಂಗಮ ತ್ರಿವೇಣಿ ಸಂಗಮವಿದೆ. ಈ ಸಂಗಮದಿಂದಾಗಿಯೇ ಭಾಗಮಂಡಲ ದಕ್ಷಿಣದ ಪ್ರಯಾಗ ಎಂದು ಪ್ರಖ್ಯಾತಿ.

                            ಭಾಗಮಂಡಲಕ್ಕೆ ಭಗಂಡ ಕ್ಷೇತ್ರ ಎಂಬ ಹೆಸರು ಪುರಾಣ ಪ್ರಸಿದ್ದ. ಈ ಕ್ಷೇತ್ರದ ಮೊದಲ ಅಂಕಣದಲ್ಲಿ ಮಹಾಗಣಪತಿ ದೇವಾಲಯವಿದೆ. ಇಲ್ಲಿನ ಭಗಂಡೇಶ್ವರ ಗುಡಿ ಕೇರಳದ ವಾಸ್ತು ಶಿಲ್ಪದ ಶೈಲಿಯಲ್ಲಿ ಕಟ್ಟಿರುವ ಗುಡಿ ಅಗಲವಾದ ಮೆಟ್ಟಿಲುಗಳನ್ನೇರಿ ಹೆಬ್ಬಾಗಿಲನ್ನಿ ಹಾದು ಒಳಗೆ ಹೋದರೆ ದೊಡ್ಡ ಅಂಗಳ. ಅದರ ನಡುವಿನಲ್ಲಿ ನಾಲ್ಕು ದಿಕ್ಕುಗಳಿಗೂ ಅಗ್ರಸಾಲೆಗಳಂತಿರುವ ಭಗಂಡೇಶ್ವರ ದೇವಾಲಯವು ಕಾವೇರಿಯ ಚೆಂದವನ್ನು ನೋಡುತ್ತಾ ನಿಂತಿರುವಂತೆ ಕಾಣುತ್ತದೆ.

                          ಭಗಂಡೇಶ್ವರ ದೇಗುಲದ ಮಹಡಿಯ ಮೇಲಿನ ಸುತ್ತು ಕಟ್ಟಿನಲ್ಲಿ ಕೆಲವು ವಿಗ್ರಹಗಳು ಮರದಿಂದ ಕೆತ್ತಲ್ಪಟ್ಟಿದ್ದು, ಅವು ದಶಾವತಾರದ ಕಥೆಯನ್ನು ಹೇಳುತ್ತವೆ. ಜತೆಗೆ ಕಿರಾತ- ಅರ್ಜುನರ ಕಾಳಗದ ದೃಶ್ಯ ಚಿತ್ರಣವೂ ಆಕರ್ಷಕವಾಗಿದೆ.

                           ವಸಂತ ಮಂಟಪ ಎಂದು ಕರೆಯಲ್ಪಡುವ ಆಕರ್ಷಕ ಮಂಟಪವೊಂದನ್ನು ಈ ದೇವಾಲಯ ಸಂಕೀರ್ಣವು ಹೊಂದಿದೆ. ಕೊಡಗಿನ ಪ್ರಮುಖ ಹಬ್ಬ ಹುತ್ತರಿಯ ಸಂದರ್ಭದಲ್ಲಿ ದೇವಾಲಯದ ಹೊಲದಿಂದ ಭತ್ತದ ಕದಿರನ್ನು ತಂದು ವಸಂತ ಮಂಟಪದ ಮುಂದಿಟ್ಟು ಜನ ಆ ಮೂಲಕ ಧಾನ್ಯಲಕ್ಷ್ಮಿಯನ್ನು ಪೂಜಿಸುತ್ತಾರೆ.

                          ಪರಸ್ಪರ ಅತ್ಯಂತ ಸನಿಹವಿರುವ ಭಾಗಮಂಡಲ ಹಾಗೂ ತಲಕಾವೇರಿ ಪ್ರೇಕ್ಷಕರಿಗೆ ಒಂದು ಜೋಡಿ ಪ್ರೇಕ್ಷಣೀಯ ಸ್ದಳವಲ್ಲದೆ, ನಿಸರ್ಗ ಸೌಂದರ್ಯ ವಿರುವ ಬೀಡೂ ಹೌದು. ಮಳೆಗಾಲದಲ್ಲಿ ತುಂಬಿ ಹರಿಯುವ ಕಾವೇರಿಯಿಂದಾಗಿ ಇಡೀ ಭಾಗಮಂಡಲ ಜಲಾವೃತವಾಗಿ ಬಿಡುತ್ತದೆ. ಉಳಿದ ದಿನಗಳಲ್ಲಿ ಭಾಗಮಂಡಲ ಭಕ್ತರಿಗೆ, ಪ್ರಕೃತಿ ಪ್ರಿಯರಿಗೆ ಅತ್ಯಂತ ಮೆಚ್ಚಿನ ತಾಣವಾಗಿ ಖ್ಯಾತಿ ಪಡೆದಿದೆ.
Showing 1 to 1 of 1 (1 Pages)