Napoklu Makki Shasthavu Temple

ನಾಪೋಕ್ಲುವಿನ ಮಕ್ಕಿಶಾಸ್ತಾವು ಸನ್ನಿಧಿ:

                      ಮಡಿಕೇರಿ ತಾಲೂಕಿನ ಎರಡನೆಯ ಮುಖ್ಯ ಪಟ್ಟಣವಾಗಿರುವ ನಾಪೋಕ್ಲುವಿನಿಂದ ಬೇತು ಮಾರ್ಗವಾಗಿ ಎರಡು ಕಿ.ಮೀ. ಅಂತರವನ್ನು ಕ್ರಮಿಸಿದರೆ ಸಿಗುವ ಶ್ರೀ ಮಕ್ಕಿ ಶಾಸ್ತಾವು ದೇವಸ್ಥಾನ ಒಂದು ಸುಂದರ ಪರಿಸರ. ಭಕ್ತಿಯ ಅಲೆಗಳನ್ನು ಚಿಮ್ಮಿಸುವ ಸುಂದರ ದೇಗುಲವಿರುವುದು ಪ್ರಶಾಂತ ತಾಣದಲ್ಲಿ. ದೇಗುಲ ಎಂದೊಡನೆ ಗುಡಿಗೋಪುರಗಳ ಕಲ್ಪನೆಯನ್ನು ಮಾಡಿಕೊಳ್ಳಬೇಡಿ. ಸಿಗುವ ಮೆಟ್ಟಿಲುಗಳನ್ನೇರಿ ಎತ್ತರದ ಸಮತಟ್ಟು ಸ್ಥಳಕ್ಕೆ ಬಂದರೆ ಸುಮಾರು ಐದಡಿ ಎತ್ತರದ ವೃತ್ತಾಕಾರದ ಕಟ್ಟೆ ಕಾಣಸಿಗುತ್ತದೆ. ಈ ಕಟ್ಟೆಯ ನಡುವೆ ತ್ರಿಶೂಲಧಾರಿ ಶಿಲಾಮೂರ್ತಿ ಶಾಸ್ತಾವು ದೇವರಿಗೆ ಕೊಡೆ ಹಿಡಿದಂತೆ ತೋರುವ ಒಂದು ಹಲಸಿನ ಮರ. ಸುತ್ತಲೂ ಸಹಸ್ರಾರು ಹರಕೆಯ ನಾಯಿಗಳು. ಇವಿಷ್ಟು ಬಿಟ್ಟರೆ ಗುಡಿಗೋಪುರಗಳಿಲ್ಲ. ಜನರ ಸದ್ದುಗದ್ದಲವಿಲ್ಲ. ಅದು ನಿಶ್ಶಬ್ದ ತಾಣ. 

             ಮಕ್ಕಿ ಶಾಸ್ತಾವು ನಿಸರ್ಗ ದೇಗುಲದಲ್ಲಿ ವರ್ಷಕ್ಕೆರಡು ಬಾರಿ ಆಕರ್ಷಕ ಹಬ್ಬ ಜರುಗುತ್ತದೆ. ಅದೇ ಅಲ್ಲಿನ ಪ್ರಮುಖ ಆಕರ್ಷಣೆ. ಅಸಂಖ್ಯ ಭಕ್ತರು ಸೇರಿ ಸಂಭ್ರಮಿಸುವ ವಿಭಿನ್ನ ಆಚರಣೆಗಳ ಹಬ್ಬ ಒಮ್ಮೆ ಮೇ ತಿಂಗಳಲ್ಲಿ ಜರುಗಿದರೆ ಮತ್ತೊಮ್ಮೆ ಡಿಸೆಂಬರ್‍ನಲ್ಲಿ ನಡೆಯುತ್ತದೆ. ಎತ್ತು ಹೇರಾಟ, ದೀಪಾರಾಧನೆ, ಅಜ್ಜಪ್ಪ ಹಾಗೂ ವಿಷ್ಣುಮೂರ್ತಿ ಕೋಲಗಳು ಮೇಲೆರಿ ಮುಂತಾದ ಹಲವು ಆಚರಣೆಗಳೊಂದಿಗೆ ಶ್ರೀ ಶಾಸ್ತಾವು ಹಬ್ಬ ನಡೆಯುತ್ತದೆ. 

            ಮಕ್ಕಿ ದೇವಾಲಯದ ವಿಶಿಷ್ಟತೆಗೆ ಸಂಬಂಧಿಸಿದಂತೆ ಹಲವು ಕಥೆಗಳು ಪ್ರಲಿತದಲ್ಲಿದೆ. ಊರವರ ನಂಬಿಕೆಗೆ ತಕ್ಕಂತೆ ಇಲ್ಲಿ ಶಾಸ್ತಾವು ಸನ್ನಿಧಿಯಲ್ಲಿ ಮಳೆಗಾಗಿ ರುದ್ರಾಭಿಷೇಕ ಮಾಡಿಸಿದರಂತೆ ಅದಾದ ಮೂರು ದಿನಗಳಲ್ಲಿ ಧಾರಾಕಾರವಾಗಿ ಮಳೆಯಾಯಿತಂತೆ. ಈ ಸಂದರ್ಭವನ್ನು ಊರವರು ಸದಾ ನೆನಪಿಸಿಕೊಳ್ಳುತ್ತಾರೆ. 

            ಕೆಲವು ವರ್ಷಗಳ ಹಿಂದೆ ಮಕ್ಕಿ ದೇವಾಲಯದಲ್ಲಿ ಹಬ್ಬದ ಸಂದರ್ಭದಲ್ಲಿ ತಿರುವಾಳ ಕಾರ್ಯ ನಿರ್ವಹಿಸುತ್ತಿದವನನ್ನು ಯಾವುದೋ ಕಾರಣಕ್ಕಾಗಿ ಬಂಧಿಸಲಾಗಿತ್ತಂತೆ. ಹಬ್ಬದ ಸಂದರ್ಭದಲ್ಲಿ ದೇವಾಲಯದಲ್ಲಿ ಮುಗಿಲುಮುಟ್ಟುವಂತೆ ಚಂಡೆವಾದ್ಯ ಮೊಳಗಿತು. ಅದೇ ಸಂದರ್ಭದಲ್ಲಿ ಸೆರೆಮನೆಯಲ್ಲಿದ್ದವನಿಗೆ ತಿರುವಳ ( ಮೈಯಲ್ಲಿ ಆವೇಶ ಬರುವುದು) ಆರಂಭವಾಗಿ ಬಂಧನದಿಂದ ತಪ್ಪಿಸಿಕೊಂಡು ಬಂದನಂತೆ. ಆತ ನೇರವಾಗಿ ಮಕ್ಕಿ ದೇವಾಲಯದ ಪ್ರಾಂಗಣಕ್ಕೆ ಬಂದವನೇ ದೇವರ ಮುಂದೆ ತನ್ನಕೈಯನ್ನು ಕೊಡವುತ್ತಾನೆ. ತಕ್ಷಣ ಕೈಯ ಕೋಳ ಒಡೆದು ದೇಗುಲವಿರುವ ತಾಣದ ಹಲಸಿನ ಮರದ ತೆಂಬೆಯೊಂದರಲ್ಲಿ ಸಿಲುಕಿತು ಎನ್ನಲಾಗುತ್ತದೆ. ಇದಕ್ಕೆ ಸಾಕ್ಷಿಯಾಗಿ ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಹಲಸಿನ ಮರದಲ್ಲಿ ಕೋಳದ ತುಣುಕೊಂದು ಸಿಲುಕಿಕೊಂಡಿರುವುದನ್ನು ಕಾಣಬಹುದು. 

ನಾಯಿ ಹರಕೆ:

                    ಡಿಸೆಂಬರ್ ತಿಂಗಳ ಹಬ್ಬದಲ್ಲಿ ನಾಯಿ ಹರಕೆ ವಿಶೇಷ.ಧನು ಸಂಕ್ರಮಣದ ದಿವಸ ನಾಯಿ ಹಾಕುವ ಕಾರ್ಯಕ್ರಮ ಜರುಗುತ್ತದೆ. ಹಬ್ಬಕ್ಕಿಂತ ಒಂದು ತಿಂಗಳು ಮೊದಲು ವೃಶ್ಚಿಕ ಮಾಸದಲ್ಲಿ ಹರಕೆಯ ನಾಯಿಗಳನ್ನು ತಯಾರಿಸಲಾಗುತ್ತದೆ. ಹಲವಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ. ಬೇತು ಗ್ರಾಮಕ್ಕೆ ಸಂಬಂಧಿಸಿದ ಹನ್ನೆರಡು ಕುಳದವರು ಹನ್ನೆರಡು ಜೊತೆ ನಾಯಿಗಳನ್ನು ಹರಕೆಯ ರೂಪದಲ್ಲಿ ಸಲ್ಲಿಸಬೇಕು ಎಂಬ ಪದ್ದತಿ. ಉಳಿದಂತೆ ಗ್ರಾಮದ ಮಂದಿಯೂ ಹರಕೆ ಹೇಳಿಕೊಂಡು ನಾಯಿ ಒಪ್ಪಿಸುತ್ತಾರೆ. ಒಂದುಜೊತೆ ನಾಯಿ ತಯಾರಿಸಲು ರೂ.350 ನೀಡಬೇಕು. ಪ್ರತಿವರ್ಷ ಧನುಸಂಕ್ರಮಣದಂದು ಈ ಆಚರಣೆಯನ್ನು ವಿಶೇಷವಾಗಿ ನಡೆಸಿಕೊಂಡು ಬಂದಿರುವುದನ್ನು ಕಾಣಬಹುದು. ಹರಕೆಯ ರೂಪದ ನಾಯಿಯ ಪ್ರತಿಕೃತಿಯನ್ನು ಸುಮಾರು ವರ್ಷಗಳಿಂದ ತಯಾರಿಸಲಾಗುತ್ತಿದೆ. ಸಮೀಪದ ಬಲಮುರಿ ಗ್ರಾಮದಿಂದ ಮಣ್ಣು ತರಲಾಗುತ್ತದೆ. ಶಾಸ್ತ್ರ ಪ್ರಕಾರ ಊರಿನ ಮಂದಿ ಇಪ್ಪತ್ತನಾಲ್ಕು ನಾಯಿಗಳನ್ನು ದೇವಾಲಯದಲ್ಲಿ ಒಪ್ಪಿಸುತ್ತಾರೆ. ಹಲವು ವರ್ಷಗಳಿಂದ ಈ ಪದ್ಧತಿ ನಡೆದು ಬಂದಿದೆ ಎಂದುಕೊಳಕೇರಿಯ ನಾಯಿ ತಯಾರಕ ಡಿ.ಆರ್. ಶಂಕರ್ ಮಾಹಿತಿ ನೀಡಿದರು. 

ವಾರ್ಷಿಕ ಹಬ್ಬ ಯಾವತ್ತು?

                   ಮೇ 3ಮತ್ತು 4 ರಂದು ವಾರ್ಷಿಕ ಹಬ್ಬ. ಮೇ 2ರಂದು ರಾತ್ರಿ ಕೋಲ ಜರುಗುತ್ತದೆ. 3ರಂದು ಮಧ್ಯಾಹ್ನ 11.30ಕ್ಕೆ ಎತ್ತುಪೋರಾಟ, 4.30ಕ್ಕೆ ಕೋಲ, ರಾತ್ರಿ 10ಗಂಟೆಗೆ ದೀಪಾರಾಧನೆ, ಬಳಿಕ ವಿವಿಧ ಕೋಲಗಳು. ಮೇ 4ರಂದು ಬೆಳಿಗ್ಗೆ 9ಗಂಟೆಗೆ ಅಜ್ಜಪ್ಪ ಕೋಲ, 12ಗಂಟೆಗೆ ವಿಷ್ಣುಮೂರ್ತಿ ಕೋಲ, ಭಕ್ತಾದಿಗಳಿಗೆ ದಾನಿಗಳಿಂದ ಅನ್ನಸಂತರ್ಪಣೆ ಬಳಿಕ ಮೇಲೇರಿ ಬೀಳುವುದು. ಹಬ್ಬದ ಕಾರ್ಯಕ್ರಮದ ಬಳಿಕ ಕಲಶ ಪೂಜೆ, ಶುದ್ದದ ನಂತರ ನಿತ್ಯಪೂಜೆ. ಉಳಿದ ದಿನಗಳಲ್ಲಿ ಭಕ್ತರು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು. ಪೂಜಾ ಸಮಯ ಬೆಳಿಗ್ಗೆ 10 ರಿಂದ 12ರವರೆಗೆ. ಸಂಜೆ 6ಗಂಟೆಯ ನಂತರ ದೇವಾಲಯಕ್ಕೆ ಭೇಟಿ ನೀಡುವಂತಿಲ್ಲ. * ವಿದ್ಯಾ ಸುರೇಶ್

ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು  ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು – ಕುಟ್ಟಂಚೆಟ್ಟೀರ ಶ್ಯಾಂಬೋಪಣ್ಣ= 9611482341

ತಕ್ಕಮುಖ್ಯಸ್ಥರು - ಕೊಂಡೀರ ಪೊನ್ನಣ್ಣ-9845021888                                                                 ಅರ್ಚಕರು - ಮಕ್ಕಿದಿವಾಕರ-9686960187 


                         
Showing 1 to 2 of 2 (1 Pages)