Sakaleshpura Taluk

Sakaleshpura Taluk

ಐತಿಹಾಸಿಕ ಸಕಲೇಶಪುರ

                      ಸ್ಕಾಂದ ಪುರಾಣವು ನಮಗೆ ಸಕಲೇಶಪುರದ ಐತಿಹಾಸಿಕ ವಿಚಾರಗಳನ್ನು ಕೆದಕಿ ನೋಡಲು ಈಗ ಲಭ್ಯವಿರುವ ಪ್ರಮುಖ ಆಕರ ಗ್ರಂಥ. ಇಲ್ಲಿಯ ಸಹ್ಯಾದ್ರಿ ಖಂಡದಲ್ಲಿ “ಚಂಪಕವನ ಮಹಾತ್ಮ್ಯಂ” ಎಂಬ ಭಾಗ ಉದ್ದರಿತವಾಗಿದೆ. “ಹೇಮಾವತಿ ಜನ್ಮ ಕಥೆ”ಯನ್ನೂ ಮತ್ತು ಚಂಪಕವನ ಮಹಾತ್ಮೆಯನ್ನು ವಿವರಿಸುತ್ತದೆ.ಚಂಪಕವನ ಸ್ಥಳದ ಬಗ್ಗೆ ಹೇಳುತ್ತಾ ಈ ಗ್ರಂಥ ಈ ಸ್ಥಳವನ್ನು “ಚಾಂಪೇಯ ವನ” ವೆಂದು ಹೆಸರಿಸಿದೆ. ಅಲ್ಲದೆ ‘ಹಿವiವಾನ್’ ಮತ್ತು ‘ಹಿಮ ಶೈಲ’ ವೆಂದು ವರ್ಣಿಸಿದೆ. ಇಲ್ಲಿಯ ‘ಹಿಮವಾನ್’ ಎಂಬ ಪರ್ವತದ ಬಳಿ ಮಯನಿಂದ ನಿರ್ಮಿತವಾದ “ವೇತ್ರ” ಎಂಬ ಪಟ್ಟಣವು ಇದ್ದಿತೆಂದು ಇಲ್ಲಿ “ಪೋಣಾಸುರನೆಂಬ ರಾಕ್ಷಸನು ಇದ್ದುದಾಗಿಯೂ, ಇದು ತಿಳಿಸುತ್ತದೆ.

                      ಅಂದರೆ ಪುರಾಣಕಾಲಕ್ಕಾಗಲೇ ಸಕಲೇಶಪುರವನ್ನು, ‘ಚಂಪಕವನ’ ಅಥವಾ ‘ಚಾಂಪೇಯವನ’ ವೆಂದು ಕರೆಯುತ್ತಿದ್ದರು. ಸ್ಕಾಂದ ಪುರಾಣವು ಶಾಲಿವಾಹನ ಮಹಾರಾಜನು ಚಂಕವನವನ್ನುಗೆದ್ದು ಕೆಲವು ಕಾಲ ಅಲ್ಲಿ ಇದ್ದುದಾಗಿಯೂ ತಿಳಿಯಪಡಿಸುತ್ತದೆ. ಆದರೆ ಈ ಶಾಲಿವಾಹನ ಮಹಾರಾಜನು ಶಕಪುಷನಾದ, ಶಕರ ವಂಶಜನಾದ ಶಾಲಿವಾಹನ ಮಹಾರಾಜನೆಂದು ಎಲ್ಲಿಯೂ ಸ್ಪಷ್ಟವಾಗಿ ಹೇಳುವುದಿಲ್ಲ. ಆದರೆ ನಮ್ಮ ಪುರಾಣ ಐತಿಹ್ಯ ಮತ್ತಯ ಚರಿತ್ರೆಗಳಲ್ಲಿ ಶಕಪುರುಷನಾದ ಶಾಲಿವಾಹನ ಒಬ್ಬನನ್ನು ಉಳಿದು ಬೇರೆ ಶಾಲಿವಾಹನ ಮಹಾರಾಜನ ಸುಳಿವು ತಿಳಿದು ಬರುವುದಿಲ್ಲ. ಆದರೂ ನಮಗೆ ಲಭ್ಯವಾಗುವ ಇತರೆ ಅಕರಗಳಿಂದ ಸದರಿ ಶಾಲಿವಾಹನ ಮಹಾರಾಜನು ಶಕರ ವಂಶಜನಾದ ಶಾಲಿವಾಹನನೇ ಎಂದು ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳಬಹುದು.

                      ಮಲೆನಾಡಿನ ಅಂದಿನ ಕೆಲವು ಪ್ರಾಂತ್ಯಗಳು ಕಾದಂಬರಿಗಿಂತಲೂ ಮುಂಚೆ ಶಾತವಾಹನರ ನೇರ ಆಡಳಿತಕ್ಕೆ ಒಳಪಟ್ಟಿದ್ದು, ಕಂಡುಬರುತ್ತದೆ. ಇವರಿಗೆ ಸೇರಿದ ಅನೇಕ ಪ್ರಾಂತ್ಯಗಳನ್ನು ಶಕರು ಅತಿಕ್ರಮಿಸಿದ್ದನ್ನು ಶಾಸನ ಆಧಾರಗಳ ಮೇರೆಗೆ ಚರಿತ್ರೆ ರಚಿಸಲು ಸಾಧ್ಯವಾಗಿದೆ.

                       ಶಾತವಾಹನರ ವಂಶದ 23ನೆಯ ರಾಜ ಗೌತಮಿ ಪುತ್ರ ಶಾತಕರಣಿಯು ಕ್ರಿ.ಶ.106 ರಿಂದ 130 ರವರೆಗೆ ರಾಜ್ಯಭರ ಮಾಡಿದನೆಂದು, ಇವರು ಶಕರನ್ನು ಸಂಹರಿಸಿ ವಂಶದ ಕೀರ್ತಿ ಯನ್ನು ಹಚ್ಚಿಸಿದನೆಂದು ನಾಸಿಕನ ಶಾಸನವು ತಿಳಿಸುತ್ತದೆ. ಅಂದರೆ ಕ್ರಿ.ಶ.130 ರ ವೇಳೆಗೆ ಶಾಲಿವಾಹನ ಅಥವಾ ಶಕ ವಂಶದ ಬೇರೆ ರಾಜರನ್ನು ಶಾತವಾಹನರು ಸೋಲಿಸಿರುವುದರಿಂದ ಶಾಲಿವಾಹನ ರಾಜನ ಕಾಲ ಕ್ರಿ.ಶ 75 ರಿಂದ 130ರ ಒಳಗಿನ ಅವಧಿಯಲ್ಲಿ ಇರಬೇಕಾಗುತ್ತದೆ. ಅದೇ ವೇಳೆಯಲ್ಲಿ ಆತ ಸಕಲೇಷಪುರದಲ್ಲಿ ಇದ್ದಿರಬೇಕು. 

ಸಕಲೇಷಪುರದಲ್ಲಿ ಶಕರು :

                      ಗೌತಮಿ ಪುತ್ರ ಶಾತಕರಣಿಯು, ಶಕರನ್ನು ಸೆದೆ ಬಡೆಯುವ ಹಲವಾರು ವರ್ಷಗಳ ಮೊದಲು ಅಂದರೆ ಒಂದನೇ ಶತಮಾನದಲ್ಲಿಯೇ ಸಕಲೇಷಪುರದ ಕಡೆಗೆ ಬಂದಿರುವ ಸಾಧ್ಯತೆಗಳಿವೆ. ಬಹುಶಃ ಬನವಾಸಿ ದೇಶದ ಕಡೆಯಿಂದ ಶಾತವಾಹನರಿಂದ ಗೆದ್ದ ಪ್ರದೇಶಕ್ಕೆ ತಮ್ಮ ಗೆಲುವಿನ ದ್ಯೋತಕವಾಗಿ ತಮ್ಮ ವಂಶದ ಹೆಸರಿನಿಂದ ಗೆದ್ದ ಸ್ಥಳಗಳನ್ನು ಗುರುತಿಸಿರುವ ಸಾಧ್ಯತೆಗಳಿವೆ. ಅಂತಹ ಸಂದರ್ಭ ಒದಗಿದ್ದರೆ ಅವರು ಆಹ್ರಮಿಸಿಕೊಂಡು ಬಂದ ಮಾರ್ಗವನ್ನು ಸ್ಥಳನಾಮಗಳಿಂದ ಗುರುತಿಸಬಹುದಾಗಿದೆ ಮತ್ತು ಇಲ್ಲಿ ಹೆಚ್ಚಿಗೆ ಸಂಶೋಧನೆಗೆ ಅವಶ್ಯವಿದೆ. ಶಿವಮೊಗ್ಗ ಜಿಲ್ಲೆಯ ಸಕ್ಕರೆ ಬಯಲ, ಚಿಕ್ಕಮಗಳೂರು ಜಿಲ್ಲೆಯ ಸಕರಾಯಪಟ್ಟಣ ಮತ್ತು ಶಕಪುರ ಮತ್ತು ಸಕಲೇಷಪುರ.

                      ಶಕರು ಮಲೆನಾಡಿನ ಭಾಗಗಳನ್ನು ಗೆದ್ದದ್ದು ಮತ್ತು ಕೆಲವು ಕಾಲ ಇಲ್ಲಿ ಸಂಚರಿಸಿದ್ದನ್ನು ಚರಿತ್ರೆಗಳ ಮೂಲಕ ಸ್ಪಷ್ಟಪಡಿಸಬಹುದಾಗಿದೆ. ಮತ್ತು ಅವರು ತಮಗೆ ಹೆಚ್ಚು ಸೂಕ್ತವಾದ ಮತ್ತು ಅಂದಿನ ಕಾಲಕ್ಕೆ ಹೆಚ್ಚು ಸಂಪತ್ಬರಿತವಾದ ಅಥವಾ ಖ್ಯಾತವಾದ ನಗರಗಳಲ್ಲಿ ಹೆಚ್ಚು ಕಾಲ ತಂಗಿದ್ದಿರಬಹುದು.

                      ಸ್ಕಾಂದ ಪುರಾಣವು ತಿಳಿಸುವಂತೆ ‘ಹಿಮವಾನ್’ ಎಂಬ ಪರ್ವತದ ಬಳಿ ‘ವೇತ್ರ’ ಎಂಬ ಪಟ್ಟಣವು ಆಗಲೇ ಖ್ಯಾತಿಯನ್ನು ಪಡೆದಿದ್ದಿತ್ತು. ಬಹುಶಃ ಶಾಲಿವಾಹನನು ಈ ಪ್ರದೇಶವನ್ನು ಆಕ್ರಮಿಸಿಕೊಂಡ ನಂತರ ವೇತ್ರವೆಂಬ ನಗರವನ್ನು ಚಂಪಕನಗರವೆಂದು ಅಥವಾ ಶಕರಪುರವೆಂದು ಬದಲಿಸಿರಬಹುದು. ಈತನು ಶಿವನ ಅಂಶವಾಗಿ ಹುಟ್ಟಿದನೆಂದು ತಿಳಿಯುವುದರಿಂದ ಶಿವಲಿಂಗವೊಂದನ್ನು ಇಲ್ಲಿ ಪ್ರತಿಷ್ಠಾಪಿಸಿದನೆಂದು ಪುರಾಣ ಪ್ರಸ್ತಾಪಿಸಿರುವುದರಿಂದ ಈ ನಗರವನ್ನು ನನ್ನ ಹೆಸರಿನಿಂದ ಶಕಲೇಷಷುರವೆಂದು ಕರೆದಿರುವ ಸಾಧ್ಯತೆಗಳು ಇವೆ ಅದು ಕ್ರಮೇಣ ಸಕಲೇಶಪುರವಾಗಿದೆ.

                       ‘ಶಕ ಎಂಬ ದೇಶ’:ಮಹಾಭಾರತದ ಸಭಾಪರ್ವವು ಮತ್ತು ಭೀಷ್ಮ ಪರ್ವವು ‘ಶಕ’ ಎಂಬ ಒಂದು ದೇಶದ ಬಗ್ಗೆ ತಿಳಿಸುತ್ತದೆ. ಶಕ ಎಂಬ ಒಂದು ದೇಶವು ಪಶ್ಚಿಮ ಸಮುದ್ರ ತೀರದಲ್ಲಿದ್ದು ವಿದೇಹ ದೇಶಕ್ಕೆ ಪೂರ್ವದಲ್ಲಿದೆ ಎಂದು ಈ ದೇಶದ ಜನರು ಶಕರೆಂದು ರೂಢಿಯಲ್ಲಿದೆ, ಎಂದು ತಿಳಿಸುತ್ತದೆ. ಸಕಲೇಶಪುರವು ಪಶ್ಚಿಮ ಘಟ್ಟಗಳಿದ್ದು ಪಶ್ಚಿಮ ಸಮುದ್ರ ತೀರಗಳಿಗೆ ಸಮೀಪವಾಗಿದ್ದು, ಶಕರು ಕೆಲವು ಕಾಲ ಇಲ್ಲಿ ಇದ್ದುದರಿಂದ ಮಹಾಭಾರತವು ಹೆಸರಿಸುವ ಶಕ ಎಂಬ ದೇಶವು ಸಕಲೇಶಪುರವೇ ಆಗಿರಬಹುದು ಂದು ತೀರ್ಮಾನಿಸಬಹುದು. ಕ್ರಿ.ಶ. 1 ಮತ್ತು 2 ನೆಯ ಶತಮಾನದ ವೇಳೆಗಾಗಲೇ ಸಕಲೇಶಪುರವು ಖ್ಯಾತಗೊಂಡ ನಗರವಾಗಿದ್ದು ನದಿ ತೀರದ ಸುಂದರ ನಗರವಾಗಿದ್ದಿತೆಂದು ಇದರಿಂದ ತಿಳಿದುಬರುತ್ತದೆ.

ಸಕಲೇಶಪುರ :

                      ಶಕರ ವಂಶಜರು ಇಲ್ಲಿ ಇದ್ದಿರುವ ಸಾಧ್ಯತೆಗಳು ಹೆಚ್ಚಿರುವುದರಿಂದ ಬಹುಶಃ ಶಕರ ವಾಸ್ತವ್ಯವನ್ನು ಸೂಚಿಸುವ ಸಲುವಾಗಿ ಶಕ ಸಕ ಆಗಿರುವ ಸಾಧ್ಯತೆ ಇದೆ. ಮತ್ತು ಮಹಾಭಾರತವು ಸೂಚಿಸುವ “ಶಕ ಎಂಬ ಊರು ಇದೇ ಆಗಿರುವ ಸಾಧ್ಯತೆ ಇದೆ. ಶಕರು” ಪ್ರತಿಷ್ಠಾಪಿಸಿದ ಪೂಜೆಗೈದ ದೇವರಿಂದ ಈ ಹೆಸರು ಬಂದಿರಬಹುದು. ‘ಪುರ’ ಎಂಬ ಸ್ಥಳನಾಮವು ಸಂಸ್ಕøತೀಕರಣಗೊಂಡಿರುವುದರಿಂದ ಈ ಸ್ಥಳದ ಮೂಲ ಹೆಸರು ‘ಸಕಲೇಶ್ವರ’ ಎಂದಿರಬಹುದಾಗಿದೆ.

ಬೂಂದ್ ಕಾಡು :

                      ಸಕಲೇಶಪುರ ಪ್ರದೇಶವನ್ನು ಬಹಳಷ್ಟು ಕಾಲ ‘ಬೂಂದ್ ಕಾಡು’ ಅಥವಾ ‘ಬೂಂದ್ ಕಾನ’ ಎಂದು ಕರೆಯಲಾಗುತ್ತಿತ್ತು. 1880 ನೆಯ ಇಸವಿಯಲ್ಲಿ ಮಲೆನಾಡಿನಲ್ಲಿ ಆದ ಪ್ರಥಮ ಜಮೀನು ಅಳತೆಯ ಕಾಲದ ನಕಾಶೆಗಳಲ್ಲಿ ಕಾಫಿ ಬೆಳೆಯಲು ಅನುಕೂಲವಾದ ಪ್ರದೇಶವನ್ನು ಈ ರೀತಿ ಗುರುತಿಸಿದ್ದರೆಂದು ತಿಳಿದು ಬರುತ್ತದೆ.

                      ಆಫ್ರಿಕಾ, ಇಥಿಯೋಪಿಯಾ ಮತ್ತು ಅಬಿಸೀನಿಯಗಳಲ್ಲಿ ಕಾಫಿಗೇ ‘ಬೂಂದ್’ ಎಂಬ ಬದಲೀ ಪದವಿದ್ದು ಅದು ಅರಬೀ ಪದವಾಗಿಯೂ ಕಂಡುಬಂದಿದೆ ಎಂದು ಹಯವದನರಾವ್ ಗೆಜೆಟೀಯರ್ ಮತ್ತು ಬಿ.ಸಿ. ಬೌರಿಂಗ್ ರ “ಈಸ್ಟ್ರನ್ ಎಕ್ಸಿಪೀರಿಯನ್ಸ್” ಎಂಬ ಗ್ರಂಥಗಳು ತಿಳಿಸುತ್ತವೆ.

                       ಕಾಫಿಗೆ ಹಲವಾರು ಜನಾಂಗಗಳು ‘ಬೂಂದ್, ಎಂಬ ಪದವನ್ನು ಬಳಸುತ್ತಿದ್ದುದ್ದು ಕಂಡು ಬಂದಿದೆ. ಮಲೆನಾಡಿಗೆ ಕಾಫಿ ಬೆಳೆಯು ಪರಿಚಯವಾಗಿ ಬೆಳೆಯಲು ಆರಂಭಿಸಿದ ಮೇಲೆ ಅದೇ ಪದ ಬಳಕೆಯಾಗಿ ಕಾಫಿಗೆ ಪರ್ಯಾಯ ಪದವಾಗಿ ಬೂಂದ್ ಎಂದೂ ಅದು ಬೆಳೆಯುವ ಪ್ರದೇಶ ‘ಬೂಂದ್ ಕಾಡು’ ಎಂದು ಪ್ರಚಲಿತವಾಯಿತು.

                        ‘ಪುಪ್ ಪೆನ್’ ಎಂಬುವನು 1938 ರಲ್ಲಿ ಬರೆದ ಗ್ರಂಥ ಒಂದರಲ್ಲಿ ಇಂಡಿಯಾ ದೇಶದಲ್ಲಿ ಅಂದರೆ ಮೈಸೂರು ಪ್ರದೇಶದ ಮನೆಗಳ ಹಿತ್ತಲುಗಳಲ್ಲಿ ಬೆಳೆಯುತ್ತಿದ್ದ ಕಾಫಿ ಬೀಜಕ್ಕೆ ‘ಬೂಂದ್’ ಬೀಜ ಎಂದ ಕರೆಯುತ್ತಿದ್ದರೆಂದು ಹೇಳಿದ್ದಾನೆ. ಅಂದರೆ ಸಕಲೇಶಪುರದ ಅಸುಪಾಸಿನಲ್ಲಿ ಕಾಫಿ ಬೆಳೆಯು ಪರಿಚಯವಾಗಿ ಬೆಳೆಗೆ ಯೋಗ್ಯವಾದ ಭೂಮಿ ಎಂದು ಪರಿಗಣಿತವಾದ ಮೇಲೆ ಆ ಪ್ರದೇಶವನ್ನು ‘ಬೂಂದ್ ಕಾಡು’ ಎಂದೇ ಕರೆಯಲಾಗುತ್ತಿತ್ತು. ಎಂದು ‘ಬೆಟ್ಟದಿಂದ ಬಟ್ಟಲಿಗೆ’ ಎಂಬ ಗ್ರಂಥ ತಿಳಿಸುತ್ತದೆ. ಲೇಖಕರು :ಮ.ರಾಜಶೇಖರನಾರ್ವೆ,ಸಂಗಮೇಶ್ವರ ಬಡಾವಣೆ, ಹಾಸನ        
Showing 1 to 3 of 3 (1 Pages)