Shri Kshethra Deva Vrundha

ಮೂಡಿಗೆರೆಯಿಂದ 20 ಕಿ.ಮೀ. ದೂರದಲ್ಲಿರುವ ಸುಂದರವಾದ ದೇವಾಲಯವೇ ಶ್ರೀ ಕ್ಷೇತ್ರ ದೇವವೃಂದ. ಈ ದೇವಾಲಯಕ್ಕೆ 2 ಸಾವಿರದ ನೂರು ವರ್ಷಗಳ ಇತಿಹಾಸವಿದ್ದು ಶ್ರೀ ಕ್ಷೇತ್ರಕ್ಕೆ ಲಕ್ಷಾಂತರ ವರ್ಷಗಳ ಇತಿಹಾಸವಿದೆ ಎಂದು ತಿಳಿದವರು ಹೇಳುತ್ತಾರೆ. ಕರ್ನಾಟಕ ರಾಜ್ಯದ ಕನ್ನಡ ರಾಜ ವಂಶಸ್ಥರ ಮೊದಲನೆಯ ದೇವಸ್ಥಾನವೆಂಬ ಹೆಗ್ಗಳಿಕೆಯು ಈ ದೇವಾಲಯಕ್ಕೆ ಇದೆ. ಶ್ರೀ ಪರಶುರಾಮರು ತಮ್ಮ ತಾಯಿಯನ್ನು ಕೊಂದ ಶಾಪ ವಿಮೋಚನೆಗಾಗಿ ಶ್ರೀ ಕ್ಷೇತ್ರ ದೇವವೃಂದದಲ್ಲಿ ನಿಂತು ತಪಸ್ಸು ಮಾಡಿ ತಮ್ಮ ಶಾಪವನ್ನು ವಿಮೋಚನೆ ಮಾಡಿಕೊಂಡಿರುತ್ತಾರೆ ಎಂದು ಪುರಾಣಗಳು, ಇತಿಹಾಸದ ಕಥೆಗಳು ಹೇಳುತ್ತವೆ.

ಶ್ರೀ ಕ್ಷೇತ್ರ ದೇವವೃಂದಕ್ಕೆ “ಸುವರ್ಣ ಕದಲಿ ವನ” ಎಂದು ಕೂಡ ಹೇಳುತ್ತಾರೆ. ಈ ಸುವರ್ಣ ಕದಲಿ ವನದಲ್ಲಿ ಶ್ರೀ ದೇವೇಂದ್ರನು ಬೇಟಿ ಕೊಟ್ಟಾಗ ಇಲ್ಲಿಯ ಹಸಿರು ಬೆಟ್ಟ, ನದಿ, ಮಲೆನಾಡಿನ ವೈಭವಗಳನ್ನು ಕಂಡು ಸಂತೋಷ ಪಟ್ಟು ಎಲ್ಲಾ ದೇವಾನು ದೇವತೆಗಳನ್ನು ಕರೆ ತಂದು ಬ್ರಹ್ಮ, ವಿಷ್ಣು, ಮಹೇಶ್ವರರ ಪೂಜೆಯನ್ನು ಮಾಡಿಸಿ ದೇವೇಂದ್ರನ ಎರಡನೆಯ ಸ್ವರ್ಗ ಮಾಡಿಕೊಂಡಿದ್ದನಂತೆ. ಎಲ್ಲಾ ದೇವಾನು ದೇವತೆಗಳು ಇಲ್ಲಿ ಬಂದು ಸೇರಿದ್ದರಿಂದ ದೇವಾನು ದೇವತೆಗಳ ವೃಂದವಾಗಿ ಪರಿವರ್ತನೆಗೊಂಡು ದೇವವೃಂದ ಎಂಬ ಹೆಸರು ನಾಮಾಂಕಿತವಾಗಿರುವುದು ಇತಿಹಾಸವಿದ್ದು, ದೇವವೃಂದ ಗ್ರಾಮವು ಒಂದು ಕಾಲದಲ್ಲಿ ದೊಡ್ಡ ನಗರವಾಗಿತ್ತು ಎಂದು ತಿಳಿದು ಬಂದಿದೆ.