Sagara

ಪ್ರವಾಸಿ ಸಾಗರ:                      

                                ಶಿವಮೊಗ್ಗ ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಮತ್ತು ವೈವಿಧ್ಯತೆಯುಳ್ಳ ಪ್ರವಾಸ ಯೋಗ್ಯ ಸ್ಥಳಗಳನ್ನು ಹೊಂದಿದ ತಾಲೂಕು ಸಾಗರ. ಐತಿಹಾಸಿಕ, ಧಾರ್ಮಿಕ, ಪ್ರಾಕೃತಿಕ ಮತ್ತು ಚಾರಣ ಯೋಗ್ಯ ಪ್ರವಾಸಿ ಸ್ಥಳಗಳು ಇಲ್ಲಿವೆ. ಹೊಸಗುಂದ, ಕೆಳದಿ, ಇಕ್ಕೇರಿ ಮತ್ತು ನಾಡಕಲಸಿ ಇಲ್ಲಿನ ಪ್ರಮುಖ ಐತಿಹಾಸಿಕ ಸ್ಥಳಗಳು. ಈ ಸ್ಥಳಗಳಲ್ಲಿರುವ ಶಿಲ್ಪ ವೈಭವದ ದೇವಾಲಯಗಳು ಮತ್ತು ಇತರ ಸ್ಮಾರಕಗಳು ಪ್ರವಾಸಿಗರ ಆಕರ್ಷಣೆಗಳಾಗಿವೆ. ಸಿಗಂದೂರು, ವರದಹಳ್ಳಿ, ವರದಾಮೂಲ ಮತ್ತು ಭೀಮೇಶ್ವರಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಾಳಗಿದ್ದು ಭಕ್ತರನ್ನು ಸೆಳೆಯುತ್ತಿವೆ. ವಿಶ್ವಪ್ರಸಿದ್ಧ ಜೋಗದ ಜಲಪಾತ, ಹೊನ್ನೆಮರಡು, ಮುಪ್ಪಾನೆ ಇವುಗಳು ಪ್ರಕೃತಿ ಪ್ರಿಯರ ಪ್ರವಾಸಿ ಸ್ಥಳಗಳು. ಹೊಸಗದ್ದೆ ದಬ್ಬೆ ಜಲಪಾತ, ಕಾನೂರುಕೋಟೆ, ಮೇಘನಿಗುಡ್ಡ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳಗಳಾಗಿವೆ. ಈಗ ಸಾಗರದಲ್ಲಿ ಪ್ರವಾಸಕ್ಕೆ ನಿರ್ದಿಷ್ಟ ಸೀಸನ್‍ಗಳಿಲ್ಲ. ಇಲ್ಲಿರುವ ಪ್ರವಾಸಿ ಸ್ಥಳಗಳು ತಮ್ಮದೇ ವೈವಿಧ್ಯತೆಯಿಂದ ವರ್ಷವಡೀ ಪ್ರವಾಸಿಗರು ಸಾಗರಕ್ಕೆ ಬರಲು ಕಾರಣವಗಿವೆ. ಮಳೆಗಾಲದಲಿ ಜೋಗ ಜಲಪಾತದ ಸೌಂದರ್ಯ ಕಣ್‍ತುಂಬಿಕೊಳ್ಳಲು, ಮಳೆಗಾಲದ ನಂತರ ಬೇಸಿಗೆಯವರೆಗೆ ಪ್ರಾಕೃತಿಕ ಮತ್ತು ಚಾರಣಯೋಗ್ಯ ಪ್ರದೇಶಗಳಿಗೆ ಹಾಗೂ ಧಾರ್ಮಿಕ ಶ್ರದ್ಧಾಕೇಂದ್ರಗಳಿಗೆ ವರ್ಷದ ಎಲ್ಲಾ ಋತುಗಳಲ್ಲಿಯೂ ಭಕ್ತರು ಬರುತ್ತಿದ್ದಾರೆ. ಕೆಲವು ವಿಶೇಷ ದಿನಗಳಲ್ಲಿ ಅವರ ಸಂಖ್ಯೆ ಹೆಚ್ಚಿರುತ್ತದೆ. ಹಾಗೆ ಬಂದಾಗ ಐತಿಹಾಸಿಕ ಸ್ಥಳಗಳಿಗೂ ಭೇಟಿ ನೀಡುತ್ತಾರೆ. ಶೈಕ್ಷಣಿಕ ವರ್ಷದ ಒನೆಯಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಹೀಗಾಗಿ ಸಾಗರವೀಗ ಸರ್ವಋತು ಪ್ರವಾಸಿ ಕೇಂದ್ರವಾಗಿದೆ.

                         ಸಾಗರಕ್ಕೆ ಪ್ರತಿದಿನ ಮೈಸೂರಿನಿಂದ ಎರಡು ರೈಲುಗಳು ಹಾಗೂ ಬೆಂಗಳೂರಿನಿಂದ ಒಂದು ರೈಲು ಸಂಚರಿಸುತ್ತದೆ. ಉತ್ತಮ ರಸ್ತೆ ಸಂಪರ್ಕವಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆ ಅವರಿಗೆ ಅಗತ್ಯವಾದ ವಾಹನ ಮತ್ತು ವಸತಿ ಸೌಲಭ್ಯಗಳು ಕೂಡಾ ಹೆಚ್ಚಿವೆ. ಬೆಳಿಗ್ಗೆ ರೈಲಿನಲ್ಲಿ ಸಾಗರಕ್ಕೆ ಬಂದವರಿಗೆ ರೈಲ್ವೆ ನಿಲ್ದಾಣದಲ್ಲಿ ಪ್ರವಾಸಿ ಸ್ನೇಹಿ ಬಾಡಿಗೆ ಬಾಹನಗಳು ದೊರಕುತ್ತವೆ. ನಂತರ ಟ್ಯಾಕ್ಸಿ ನಿಲ್ದಾಣದಲ್ಲಿ ವಾಹನಗಳು ಲಭ್ಯವಿರುತ್ತವೆ ಉಳಿದುಕೊಳ್ಳುವವರಿಗೆ ಗ್ರಾಹಕ ಸ್ನೇಹಿ ವಸತಿ ನಿಲಯಗಳು ಇವೆ. ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಬಹುದಾಗಿದೆ. ಸವಂತ ವಾಹನಗಳಲ್ಲಿ ಬಂದವರಿಗೆ ಆನಂದಪುರ, ಸಾಗರ ಪೇಟೆ ಮತ್ತು ತಾಳಗುಪ್ಪಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಂಕ್‍ಗಳಿವೆ. ಸಾಗರ-ಜೋಗ ರಸ್ತೆಯಲ್ಲಿ ವಾಹನಗಳಿಗೆ ಗ್ಯಾಸ್ ಪುರೈಸುವ ಬಂಕ್‍ವೊಂದಿದೆ. ಊಟ-ಉಪಹಾರಗಳಿಗೆ ಸೂಕ್ತವಾದ ಹಲವು ಹೋಟೆಲ್‍ಗಳು ಮತ್ತು ಕೆಲವು ಖಾನಾವಳಿಗಳಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವೆಡೆ ಈಗ ಹೋಂ ಸ್ಟೇಗಳು ಆರಂಭವಾಗಿವೆ. ದೂರದಿಂದ ಬರುವವರು ಅಂತರ್ಜಾಲ ಮತ್ತು ಪೋನ್‍ಗಳ ಮೂಲಕ ಸಂಪರ್ಕಿಸಬಹುದು.

                        ಸಾಗರದ ಸುತ್ತ-ಮುತ್ತಲಿನ ಸ್ಥಳಗಳಲ್ಲದೇ ಸಾಗರವನ್ನು ಕೇಂದ್ರವಾಗಿಟ್ಟುಕೊಂಡು ವೀಕ್ಷಿಸಬಹುದಾದ ಹಲವು ಪ್ರವಾಸಿ ಸ್ಥಳಗಳಿವೆ. ಅವರವರ ಆಸಕ್ತಿಗೆ ತಕ್ಕಂತೆ ಪ್ರವಾಸ ಮಾರ್ಗದ ಪ್ಲಾನ್ ಮಾಡಿಕೊಳ್ಳಬಹುದಾಗಿದೆ. ಅಂತಹ ಕೆಲವು ಮಾರ್ಗದ ಆಯ್ಕೆಗಳು ಹೀಗಿವೆ.

ಸಾಗರ: ಬಳ್ಳಿಗಾವೆ-ಬಂದಣಿಕೆ-ಉದ್ರಿ-ಗುಡವಿ-ಸೊರಬ ಮಾರ್ಗವಾಗಿ ಸಾಗರಕ್ಕೆ ವಾಪಸ್.

ಸಾಗರ: ಶಿರಸಿ-ಸೋಂದಾ-ಸ್ವರ್ಣವಲ್ಲಿ ಮಠ- ಸಹಸ್ರಲಿಂಗ-ಬನವಾಸಿ-ಗುಡವಿ-ಸೊರಬದ ಮಾರ್ಗವಾಗಿ ವಾಪಾಸು ಸಾಗರಕ್ಕೆ.

ಸಾಗರ: ಶಿರಸಿ- ಸಹದ್ರಲಿಂಗ-ಯಾಣ-ಅಪ್ಸರಕೊಂಡ-ಇಡುಗುಂಜಿ-ಮುರುಡೇಶ್ವರ-ಹೊನ್ನಾವರ ಮಾರ್ಗವಾಗಿ ವಾಪಾಸ್ಸು ಸಾಗರಕ್ಕೆ.

ಸಾಗರ: ಬಂಗಾರಮಕ್ಕಿ-ಹೊನ್ನಾವರ-ಇಡಗುಂಜಿ-ಮುರುಡೇಶ್ವರ-ಹೊನ್ನಾವರ ಮಾರ್ಗವಾಗಿ ವಾಪಾಸ್ಸು ಸಾಗರಕ್ಕೆ.

ಸಾಗರ: ಶಿರಸಿ-ಸಹಸ್ರಲಿಂಗ-ಮಂಜುಗುಣಿ-ಕುಮಟಾ-ಗೋಕರ್ಣ-ಶಿರಸಿ ಮಾರ್ಗವಾಗಿ ಸಾಗರಕ್ಕೆ ವಾಪಾಸ್ಸು.

ಸಾಗರ: ಸಿಗಂದೂರು-ಕೊಲ್ಲುರು-ಮುರುಡೇಸ್ವರ ಮತ್ತು ಇಡಗುಂಜಿ-ಹೊನ್ನಾವರ ಮಾರ್ಗವಾಗಿ ಸಾಗರಕ್ಕೆ ವಾಪಾಸ್ಸು.

ಸಾಗರ: ಹುಂಚ-ಅಂಬುತೀರ್ಥ-ಕುಪ್ಪಳ್ಳಿಯ ಕವಿಶೈಲ-ಶೃಂಗೇರಿ ಮತ್ತು ಸಿರಿಮನೆ ಜಲಪಾತ, ಅದೇ ಮಾರ್ಗವಾಗಿ ವಾಪಾಸ್ಸು.

ಸಾಗರ: ಹೊಸಗುಂದ-ತಾವರೆಕೊಪ್ಪ ಸಿಂಹಧಾಮ-ಗಾಜನೂರು ಅಣೆಕಟ್ಟು-ಸಕ್ರಬೈಲು ಆನೆ ಶಿಬಿರ-ಶಿವಮೊಗ್ಗದ ಶಿವಪ್ಪನಾಯಕನ ಅರಮನೆ ವಾಪಾಸ್ಸು ಸಾಗರ.

         ಸಾಗರ ಪ್ರಾಂತ್ಯದ ಪ್ರಮುಖ ಪ್ರವಾಸಿ ಸ್ಥಳಗಳ ಸಂಕ್ಷಿಪ್ತ ವಿವರಗಳನ್ನು ಆಸಕ್ತರಿಗೆ ಈ ಮುಂದೆ ನೀಡಲಾಗಿದೆ.