Kudli

ಕೂಡಲಿ ಕ್ಷೇತ್ರ


  ಶಿವಮೊಗ್ಗ ಜಿಲ್ಲೆಯು ನದಿಗಳಿಗೆ ಹೆಸರುವಾಸಿಯಾಗಿದೆ. ತುಂಗಾ, ಭದ್ರಾ, ಶರಾವತಿಗಳೆಂಬ ಮುಖ್ಯ ನದಿಗಳು ಹಾಗೂ ವರದಾ ಮತ್ತು ಕುಮದ್ವತಿ ಎಂಬ ಉಪನದಿಗಳು ಇಲ್ಲಿ ಹರಿದು ಇಲ್ಲಿನ ಜನರಿಗೆ ಆಸರೆಯಾಗಿದೆ. ಆದರೆ ತುಂಗೆ ಮತ್ತು ಭದ್ರೆ ಎಂಬ ಈ ಎರಡೂ ನದಿಗಳು ಪಶ್ಚಿಮ ಘಟ್ಟ್ದ ಸನಿಹದಲ್ಲಿ ಹುಟ್ಟಿ ಸ್ವಲ್ಪ ದೂರ ಸಮಾನಾಂತರವಾಗಿ ಹರಿದು ಒಂದು ಪುಣ್ಯ ಕ್ಷೇತ್ರದಲ್ಲಿ ಒಂದಾಗಿ ಸೇರುತ್ತವೆ. ಆ ಪುಣ್ಯ ಕ್ಷೇತ್ರವೇ “ಕೂಡಲಿ ಕ್ಷೇತ್ರ”.


           ಯುಗಾದಿ ಹಬ್ಬದ ಮಾರನೇ ದಿನ ಇಲ್ಲಿನ ತುಂಗಾ ಭದ್ರಾನದಿಗಳ ಸಂಗಮದ ತುದಿಯಲ್ಲೇ ಇರುವ ಸಂಗಮೇಶ್ವರನ ಜಾತ್ರೆ ಬಹಳ ಅದ್ದೂರಿಯಿಂದ ನೆರವೇರುತ್ತದೆ. ವಿಜಯದಶಮಿಯಂದು ಇಲ್ಲಿನ ಶ್ರೀ ಮಜ್ಜಗದ್ಗುರು ಶಂಕರನ ಶೃಂಗೇರಿ ಮಠದಲ್ಲಿ ಮಾತೆ ಶ್ರೀ ಶಾರದಾಂಬೆಯ ರಥೋತ್ಸವ ನಡೆಯುತ್ತದೆ. ಅಲ್ಲದೆ ಕಾರ್ತಿಕ ಶುದ್ದ ಹುಣ್ಣಿಮೆಯಂದು ಶ್ರೀ ನರಸಿಂಹ ದೇವರ ರಥೋತ್ಸವ ನಡೆಯುತ್ತದೆ. ಇದರ ಇನ್ನೊಂದು ವಿಶೇಷವೆಂದರೆ ಹಿಂದೂ ಮತ್ತು ಮುಸಲ್ಮಾನರು ಇಲ್ಲಿ ಸಹಬಾಳ್ವೆಯ ಜೀವನ ನಡೆಸುತ್ತಿರುವುದಾಗಿದೆ. ಇದೂ ಕೂಡ ಕೂಡಲಿ ಎಂಬ ಹೆಸರಿಗೆ ನಿಜ ಅರ್ಥ ನೀಡುತ್ತದೆ. ಮಳೆಗಾಲದಲಿ ಈ ಎರಡೂ ನದಿಗಳು ತುಂಬಿ ಹರಿದಾಗ ಇದರ ಪಾತ್ರದಲ್ಲಿನ ನೀರು ನಮಗೆ ಸಮುದ್ರವನ್ನು ಕಾಣುವಂತಹ ದೃಶ್ಯವನ್ನು ನೀಡುತ್ತದೆ. ಆನಂತರ ಅದು ತುಂಗಾಭದ್ರಾ ಎಂಬ ಹೆಸರಿನೊಂದಿಗೆ ಒಂದೇ ನದಿಯಾಗಿ ಹರಿಯುತ್ತದೆ.