ಮಲೆನಾಡಿಗ ನಾ. ಡಿಸೋಜ

ಮಲೆನಾಡಿಗ ನಾ. ಡಿಸೋಜ:

                      ಮಲೆನಾಡಿನ ಮತ್ತೊಂದು ಹೆಸರು ಕುವೆಂಪು. ಒಮ್ಮೆ ಇಡೀ ಮಲೆನಾಡಿನ ಹಸುರಿನ ಹೆಸರೇ ಇಲ್ಲದವರೇ, ಇಡೀ ಮಲೆನಾಡ ಬದುಕೇ ಕಣ್ಮರೆಯಾದರೆ ಇರುವ ಏಕೈಕ ಮಾರ್ಗ ಕುವೆಂಪು ಕೃತಿಗಳು. ಇದೇ ಮಲೆನಾಡಿಗೆ ಮತ್ತೆರಡು ಹೆಸರುಗಳನ್ನು ಸೇರಿಸಬೇಕಾಗುತ್ತದೆ. ಇಬ್ಬರೂ ಮಲೆನಾಡಿನವರು, ಇಬ್ಬರೂ ಮಲೆನಾಡಿಗಾಗಿಯೇ ಇರುವವರು-ತೇಜಸ್ಚಿ ಮತ್ತು ನಾ.ಡಿಸೋಜ. ನಾ.ಡಿಸೋಜ ಸಮಸ್ತ ಕನ್ನಡಿಗರ ಕೈಗಳಲ್ಲಿರುವ ವ್ಯಕ್ತಿ. ನಮ್ಮ ಸಂದರ್ಭದ ಪ್ರಮುಖ ಕತೆಗಾರರು. ಕತೆ, ಕಾದಂಬರಿ, ಲೇಖನಗಳು- ಹೀಗೆ ಸಾಹಿತ್ಯದ ಅನೇಕ ಪ್ರಾಕಾರಗಳಲ್ಲಿ ಇವರು ಕ್ರಿಯಾಶಾಲಿಯಾಗಿದ್ದಾರೆ. ಒಂದರ್ಥದಲ್ಲಿ ಇವರ ಎಲ್ಲಾ ಬರಹಗಳು ಮಲೆನಾಡಿನ ಬದುಕು, ಅಲ್ಲಿಯ ಹಸಿರು ಎಲ್ಲವೂ ಅಧಿಕೃತ ದಾಖಲೆಗಳಾಗಿವೆ. ಕಾಡಿನ ಸುತ್ತ, ನೀರಿನ ಸುತ್ತ, ಹಳ್ಳಿ, ಹಸೆ, ಹಾಡಿನ ಸುತ್ತ, ರೈತ ಕಾರ್ಮಿಕರ ಸುತ್ತ ಸದಾ ಅಕ್ಷರಯಾತ್ರೆ ಮಾಡುತ್ತಿರುವ ಈ ವ್ಯಕ್ತಿಯಲ್ಲಿ ಆರದ ಆಸಕ್ತಿಯಿದೆ. ಕಾಡುಕಾಡಿದ ಹಾಗೆ, ನೀರು ಕಾಡಿದ ಹಾಗೆ ಗ್ರಾಮೀಣ ಬದುಕು ಕಾಡಿದ ಹಾಗೆ. ಮುಳುಗಡೆ ಕಾಡಿದ ಹಾಗೆ ಇವರಿಗೆ ಮತ್ಯಾವದು ಅಷ್ಟಾಗಿ ಕಾಡಲಿಲ್ಲವೇನೂ! ಡಿಸೋಜ ಅಷ್ಟರಮಟ್ಟಿಗೆ ಮಲೆನಾಡಿಗ.

                         ಡಿಸೋಜರ ಕೃತಿಗಲ್ಲಿ ಎದ್ದು ಕಾಣುವ ಅಂಶ ಅವರ ಮುಕ್ತ ಮನಸ್ಸು. ಮುಕ್ತ ಮನಸ್ಸು ಬಹು ಅಪರೂಪದ ವಸ್ತು. ಬಹುಸುಲಭವಾಗಿ ಅದು ಎಲ್ಲರಿಗೂ ದಕ್ಕುವುದಿಲ್ಲ. ಅವರ ಈ ಮನಸ್ಸೇ ಕನ್ನಡ ಸಾಹಿತ್ಯಕ್ಕೆ ಬಹು ವಿಶಿಷ್ಟ ಕೃತಿಗಳನ್ನು ಕೊಟ್ಟಿದೆ. ವ್ಯಕ್ತಿ ಪ್ರಭಾವದ ಹಿನ್ನೆಲೆಯಲ್ಲಿ ಬದುಕನ್ನು ನೋಡುವ ಪರಿ ಬಹುಅನನ್ಯ. ಅದಕ್ಕಾಗಿಯೇ ಯು.ಆರ. ಅನಂತಮೂರ್ತಿ ಅವರು ಹೇಳುವಂತೆ- “ಡಿಸೋಜ ನಮ್ಮ ನಾಡಿನನ ಬಹುಪ್ರೀತಿಯನ್ನು ಗಳಿಸಿಕೊಂಡ ಬರಹಗಾರರು. ನಾನು ಅವರು ಗಳಿಸಿದ ಕೀರ್ತಿಯನ್ನು ಕಂಡು ನಹು ಸಂತೋಷಪಟ್ಟಿದ್ದೇನೆ”

                        ಸುಮಾರು ನಾನೂರಷ್ಟು ಇರುವ ಡಿಸೋಜರ ಕತೆಗಳಲ್ಲಿ ಮಾಟಬಂಧ ಮತ್ತು ನಿರೂಪಣೆಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವಾಗ ಅವರ ಹೆಚ್ಚಿನ ಕತೆಗಳಲ್ಲಿ ಜೀವನ ದೃಷ್ಟಿಯೇ ಕತೆಯ ಚೌಕಟ್ಟಾಗಿರುತ್ತದೆ. ಯಾವ ವ್ಯಾಖ್ಯಾನ ವಿಶ್ಷೇಷಣೆಗೂ ಹೋಗದೆ ಮನುಷ್ಯ ಸ್ವಭಾವದ ನೂರಾರು ಬಗೆಯ ಜೀವನ ಪ್ರೀತಿ, ಸ್ನೇಹ ಅಂತಃರಂಗದ ಪಸೆಗಳನ್ನು ಕ್ರುರ ದ್ವಂದ್ವ ವೈರುದ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿ ಬದುಕಿನ ಕಗ್ಗಂಟನ್ನು ಹುದುವಾಗಿ ನವಿರಾಗಿ, ಮುಖ್ಯವಾಗಿ ವಾಸ್ತವಿಕೆಯಿಂದ ದೂರವಾಗದೆ ಇರುವ ಮನೋವ್ಯಾಪಾರಗಳ ಸನ್ನಿವೇಶಗಳನ್ನು ಇವರ ಕೆತೆಗಳಲ್ಲಿ ಕಾಣಬಹುದು. ಸಾಮಾನ್ಯವಾಗಿ ತೀರಾ ಅಮುಖ್ಯವೆನಿಸುವ ವಸ್ತು ವ್ಯಕ್ತಿ ಸಂದರ್ಭಗಳನ್ನು ಕಲಾತ್ಮಕವಾಗಿ ಹೆಣೆದು ಕತೆಯಾಗಿಸುವ ಡಿಸೋಜರ ಶಕ್ತಿ ಪ್ರತಿಭೆಯನ್ನು ಬಹಳ ಹಿಂದೆಯೇ ಶ್ರೇಷ್ಠ ಚಿಂತಕ, ಸಾಹಿತಿ ಗೌರೀಶ್ ಕಾಯ್ಕಿಣಿಯವರು ಈ ರೀತಿಯಾಗಿ ಗುರುತಿಸಿದ್ದಾರೆ. “ ರಶಿಯನ್ ಕತೆಗಾರ ಆಂಟೋನಿ ಚೆಕೋವ್ ಕುರಿತು ಒಂದು ಹೇಳಿಕೆ ಇದೆ. ಆತ ಹೋಟೇಲ್‍ನಲ್ಲಿ ಕೈಗೆಸಿಕ್ಕ ಮೆನೂಕಾರ್ಡಿನ ವಿವರಣೆಗಳ ಕುರಿತು ಒಂದು ಸುಂದರವಾದ ಕತೆಯನ್ನು ಬರೆಯಬಲ್ಲವನಾಗಿದ್ದನಂತೆ. ನಮ್ಮ ಡಿಸೋಜ. ನಮ್ಮ ಇಂದಿನ ಜಾಯಮಾನದ ಚೆಕೋವ್ ಎಂದು ಕರೆಯಬಲ್ಲೆ. ಅವರು ಯಾವ ಒಂದು ಘಟನೆ, ವ್ಯಕ್ತಿ ವಿಶೇಷ. ಪ್ರಸಂಗ ಕಾರ್ಯರಂಗದೊಳಗಿನಿಂದಲೂ ಒಂದು ಸ್ವಾರಸ್ಯ ಕತೆಯನ್ನು ನಿರೂಪಿಸಬಹುದು. “ಡಿಸೋಜರ ಕಥನ ಶೈಲಿಯಲ್ಲಿ ಚೆಕೋವ್ ಸ್ಪರ್ಶಸ ಸಂಗಡ ಮಾಸ್ತಿ ಅವರ ಮನೋದೃಷ್ಟಿಯಿದೆ. ಇವರ ಕತೆ ಕಾದಂಬರಿಗಳಲ್ಲಿ ಮಾಗಿದ ಮನಸ್ಸು, ವಾಸ್ತವದ ಗಟ್ಟಿತನ, ಮಾನವೀಯ ಸಂಬಂಧಗಳು, ನಿರಾಡಂಬರ ದಾಟಿ. ಪ್ರಾಂಜಲ ಕಾಳಜಿಗಳು-ಇವೆಲ್ಲಾ ತುಂಬಿಕೊಂಡಿರುವುದರಿಂದಲೇ ಡಿಸೋಜ ಕನ್ನಡಕ್ಕೆ ಸಮಚಿತ್ತ ಬೆಳಕಿನ ಕತೆ ಕಾದಂಬರಿಗಳನ್ನು ಕೊಡಲು ಸಾಧ್ಯವಾಗಿದೆ.

                         ಡಿಸೋಜ ರಚಿಸಿರುವ ಸಾಹಿತ್ಯ ಕುರಿತು ಸಾರಾಸಗಟಾಗಿ ಅದರ ಉದ್ದಗಲ ಎತ್ತರವನ್ನು ಒಮ್ಮೆಲೆ ಅಳತೆ ಮಾಡುವುದು ಸಾಧುವೂ ಅಲ್ಲ ಸುಲಭವೂ ಅಲ್ಲ. ಸುಮಾರು ಐವತ್ತು ಕಾದಂಬರಿಗಳು, ನಾನೂರಕ್ಕೂ ಹೆಚ್ಚಿನ ಸಣ್ಣಕತೆಗಳು ಮೂವತ್ತು ಮಕ್ಕಳ ಕಾದಂಬರಿ, ನಾಟಕ, ನವಸಾಕ್ಷರರ ಸಾಹಿತ್ಯ, ಒಂದೆರಡು ಜಾನಪದ ಸಂಗ್ರಹ ಹಾಗೂ ಅಧ್ಯಯನಗಳು ಹಾಗೂ ಮೂರು ಸಾವಿರಕ್ಕೂ ಲೇಖನಗಳಲ್ಲಿ ಹರಿದು ಬಂದಿರುವ ಪ್ರಮುಖ ದನಿಗಳನ್ನು ಎತ್ತಿ ತೋರಿಸುವದಾಗಲಿ ಅಥವಾ ಅವುಗಳಲ್ಲಿರುವ ದೀಘಕಾಲಿಕ ಮೌಲ್ಯಗಳನ್ನು ಗುರುತಿಸುವುದಾಗಲಿ ತಿಳಿದಷ್ಟು ಸುಲಭವಲ್ಲ. ಡಿಸೋಜರ ಸಾಹಿತ್ಯವನ್ನು ಪ್ರತ್ಯೇಕವಾಗಿ ನಾಲ್ಕು ನೆಲೆಗಳಲ್ಲಿ ಅಧ್ಯಯನ ಮಾಡುವುದು ಅರ್ಥಪೂರ್ಣ. 1. ಗಿಡಮರಬಳ್ಳಿ ಪ್ರಾಣಿ ಪಕ್ಷಿ ಪರಿಸರ ಹಿನ್ನೆಲೆ ಸಾಹಿತ್ಯ 2. ಕ್ರೈಸ್ತ ಜನಾಂಗದ ಹಿನ್ನೆಲೆಯಲ್ಲಿ ಬಂದಿರುವ ಸಾಹಿತ್ಯ 3. ಅಣೆಕಟ್ಟು ಮುಳುಗಡೆಯಿಂದ ಹೊರ ಬಂದ ಸಾಹಿತ್ಯ 4. ದೀವರ ಜನಾಂಗದ ಬದುಕಿನಿಂದ ಹೊಮ್ಮಿದ ಸಾಹಿತ್ಯ.

ಪರಿಸರ ಮತ್ತು ಡಿಸೋಜ:

               ನಾವು ನಮ್ಮ ಪರಿಸರವನ್ನು ಹೇಗೆ ಒಂದೇ ಸಮನೆ ತಿನ್ನುತ್ತಿದ್ದೇವೆ ಹಾಗೂ ಇಡೀ ಮಲೆನಾಡಿನ ಜಲ ಐಶ್ವರ್ಯದ ಮೇಲೆ ಮನುಷ್ಯ ಆಕ್ರಮಣದಿಂದ ಉಂಟಾಗಿರುವ ದುರಂತಗಳನ್ನು ಚಿತ್ರೀಸುವ ಅನೇಕ ಕತೆಕಾದಂಬರಿಗಳನ್ನು ಇವರು ಕೊಟ್ಟಿದ್ದಾರೆ. ನೀರು ಡಿಸೋಜ ಅವರ ಬಹಳಷ್ಟು ಕತೆ ಕಾದಂಬರಿಗಳ ಭೌತಿಕ ಪರಿಸರ ಸಾಗರ ತಾಲೂಕ್. ಶರಾವತಿ ನದಿಗೆ ಕಟ್ಟಿದ ಲಿಂಗನಮಕ್ಕಿ ಆಣೆಕಟ್ಟಿನಿಂದ ಹಲವಾರು ಗ್ರಾಮಗಳು ಮುಳುಗಡೆಯಾದದ್ದು ಅವರನ್ನು ಬಹಳವಾಗಿ ಕಾಡಿದೆ. ಉತ್ತರ ಭಾರತ ಹಾಗೂ ನಮ್ಮ ಉತ್ತರ ಕರ್ನಾಟಕದಲ್ಲಿ ಆಣೆಕಟ್ಟಿನ ವಿರುದ್ಧ ಈಗ ತೀವ್ರ ಹೋರಾಟರಗಳು ಆಗುತ್ತಿವೆ. ಆದರೆ ಡಿಸೋಜ ಅವರು ಅದನ್ನು ಸುಮಾರು 20 ವರ್ಷಗಳ ಮುಂಚೆಯೇ ಈ ಜೀವ ವಿರೋಧಿ ನೋವಿಗೆ ಧ್ವನಿಯಾಗಿದ್ದರು. ‘ಮುಳುಗಡೆ’ ಎಂಬ ಶಬ್ಧದ ಗಾಢತೆ ಅರಿವಾದದ್ದೆ ಅವರ “ಮುಳುಗಡೆ” ಕಾದಂಬರಿ ಬಂದ ಮೇಲೆ. ಮುಳುಗಡೆಯ ಮೂಲಕ ನೀರು ಕಣ್ಣೇರಾಗಿದ್ದು ಸರ್ಕಾರಕ್ಕಾಗಲೀ ವಿದ್ಯುಚ್ಛಕ್ತಿಯ ಉತ್ಪಾದಕ ಹಾಗೂ ಬಳಕೆದಾರರಿಗಾಗಲಿ ಒಂದಿಷ್ಟು ಅನಿಸಿರಲಿಲ್ಲ. ಸರ್ಕಾರದ ಫೈಲಿನ ದೃಷ್ಟಿಯಿಂದ, ಸರ್ಕಾರದ ಸಾಧನೆ ದೃಷ್ಟಿಯಿಂದ ಇದೊಂದು ಕೇವಲ ಸುದ್ದಿ. ಒಂದು ಸಾಧನೆ ಅಥವಾ ಕೇವಲ ನೂರಾರು ಹಳ್ಳಿಗಳು ಮುಳುಗಡೆಯಾಯಿತೆಂದಾಗಬಹುದು. ಆದರೆ ಅಲ್ಲಿ ಡಿಸೋಜರಿಗೆ ಕಾಣಿಸಿದ್ದೇ ಬೇರೆ. ಅಭಿವೃದ್ಧಿ ಹೆಸರಿನ ಈ ಮುಳುಗಡೆ ಕಾದಂಬರಿಯಿಂದ. ಹೊರಬಂದ ಮತ್ತೊಂದು ಮುಖವನ್ನು ಇವರು ಅನಾವರಣ ಮಾಡಿದ್ದಾರೆ. 152 ಹಳ್ಳಿಗಳು, 3847 ಕುಟುಂಬಗಳು ಸ್ಥಳಾಂತರವಾದಾಗ ಸರ್ಕಾರಿ ಫೈಲುಗಳಿಗೆ ಏನೂ ತಟ್ಟದಿದ್ದದ್ದು ಬಹು ದೊಡ್ಡ ದುರಂತ. ವಿದ್ಯುದಾಗರಗಳ ನಿರ್ಮಾಣದಲ್ಲಿ ಹೆಮ್ಮೆಯಿಂದ ಬೀಗುವವರಿಗೆ ಕಣ್ಣು ತೆರೆಸಿದ ಕೃತಿಗಳು. ಶತಶತಮಾನಗಳಿಂದ ಹರಿದು ಬಂದ ನೆಲ ಸಂಸತಿಯೊಂದು, ಇಡೀ ಜನಾಂಗದ ಜೀವಾಳವೊಂದು ಆಣೆಕಟ್ಟಿನಲ್ಲಿ ಮುಳುಗಿ ಕಣ್ಣೆದುರೆ ಜಲಮಯವಾದದ್ದನ್ನು ಡಿಸೋಜ ಬಹುನೋವಿನಿಂದ ಸ್ಪಂದಿಸಿದ್ದಾರೆ. ಬಹಳ ಜನಕ್ಕೆ ಈ ನೋವು ತಟ್ಟಲೇ ಇಲ್ಲ. ಕಾದಂಬರಿಯಲ್ಲಿ ಒಂದೆಡೆ ಈ ಮಾತು ಬರುತ್ತದೆ.-“ಮುಳುಗಡೆಯಾದವರಿಗೆ ಅನೇಕರು ಹೇಳಿರುವುದುಂಡು. ಮುಳಗಡೆಯಿಂದ ನಿಮ್ಮ ಮನೆ, ಜಮೀನು ಎಲ್ಲಕ್ಕೂ ಸರ್ಕಾರ ಸಾಕಷ್ಟು ಪರಿಹಾರ ಕೊಟ್ಟಿರಬೇಕಲ್ಲ?” ಅದಕ್ಕೆ ‘ಮುಳುಗಡೆ’ ಯ ಹಿಡತೇರಿ ಪಟೇಲ ಧನಪಾಲಯ್ಯ ಸಂಶೋಧಕನಿಗೆ ಕೊಟ್ಟ ಉತ್ತರ ಅರ್ಥಪೂರ್ಣ. “ಸರ್ಕಾರ ಪರಿಹಾರ ಕೊಟ್ಟಿದೆ, ಜಮೀನು ಕೊಟ್ಟಿದೆ, ಆದರೆ ಎಷ್ಟು ಕೊಟ್ಟರೆ ಏನು? ಹಿರಿಯರು ಬಳಿ ಬದುಕಿದ ಮನೇನ ಕೊಡೋ ತಾಕತ್ತು ಸರ್ಕಾರಕ್ಕೆ ಉಂಟಾ? ನಾನು ಇನ್ನೆಲ್ಲೋ ಹೊಸಮನೆಯನ್ನು ಕಟ್ಟಿಸಬಹುದು. ಆದರೆ ಅದು ಈ ಮನೆ ಆದೀತಾ? ಜನ ಅದನ್ನು ಹಿಡಿತೇರಿ ಅರಮನೆ ಅಂತ ಕರಿತಾರ? ಈ ಮನೆ ವೈಭವ ಇತಿಹಾಸ ಅದಕ್ಕೆ ಬಂದೀತಾ?”

                ಮುಂದಲೆಗೆ ಬಣ್ಣ ಬೇಗಡೆ ಹಚ್ಚುತ್ತಾ ಕುಳಿತ್ತಿದ ಅಪ್ಪಯ್ಯನ ಎದುರು ಕುತೂಹಲ, ಆಸಕ್ತಿಯಿಂದ ಆ ಕೆಲಸವನ್ನೇ ನೋಡುತ್ತಿದ್ದ ನನಗೆ ಅಂದು ಅಪ್ಪಯ್ಯ ಗೋಗಡಿಗೆ ಭಾವಯ್ಯನ ಇದಿರು ಆಡಿದ ಮಾತು ತುಂಬ ಅರ್ಥಪೂರ್ಣ. “ ಆಡು ವಾಣಿ.... ಈ ವರ್ಷ ಯಂಗಳ್ ಮೇಳದ ಕೊನೆ ಕಾಣಿಸ್‍ತು. ಎಲ್ಲಾ ಮುಳುಗಡೆ ಆಗುತ್ತಲ್ಲಾ.... ಯಂಗಳ್ ಮೂಗಾರು ಗಣಪತಿ ಯಕ್ಷಗಾನ ಮಂಡಳಿ ಸಹಾ ಮುಳುಗಡೆ ಆದ ಹಾಂಗೇ... ಇಷ್ಟು ವರ್ಷ ಆನು, ಗುಂಡು ಸೀತಾರಾಮ, ನಾಗಪ್ಪ, ನರಸಿಂಹ, ಯಲ್ಕೋಡು ನಾರ್ಣ, ಬಣ್ಣುಮನೆ ಭಾವ, ಹಕ್ರೆಮಾಣಿ ಹೀಗೆ ಯಾರ್ ಯಾರ್ನೊ ಸೇರಿಸಿ ಈ ಮೇಳ ನಡೆಸಿಕೊಂಡು ಬಂದೆ. ಈಗ ಭಾರಂಗಿ ಸೀಮೆ ಮುಕ್ಕಾಲು ಪಾಲು ಮುಳುಗಡೆ ಆಗ್‍ತು. ... ನಮ್ಮ ಮೇಳದ ಕಲಾವಿದರೆಲ್ಲಾ ದಿಕ್ಕು ಪಾಲಾಗಿ ಹೋಗ್‍ತಾ... ಇನ್ ಆಟ ಕುಣಿಯೋದಾದರೂ ಹ್ಯಾಂಗೇತ… ಈ ಮಂದಲೆ. ಭುಜಕೀರ್ತಿ, ಕಾಂಚಿದಾಮ, ಗೆಜ್ಜೆ ಎಲ್ಲಾನು ಶರಾವತಿ ನದಿಗೆ ಹಾಕಿ ಕೈ ಮುಗಿಯೋದೆ ಸೈ...... ಗಣಪತಿ ಕಿರೀಟವೊಂದನ್ನು ಮಾತ್ರ ಹೊಳೆಗೆ ಎಸೆಯೋಕೆ ಆಗೋದಿಲ್ಲ ನೋಡು... ಅದನ್ನ ಇಡಗುಂಜಿ ಮೇಳಕ್ಕೆ ಕೊಟ್ ಬಿಡೋಣ ಅಂತಿದೀರಿ....” ಹೀಗೆ ಹೇಳುವಲ್ಲಿ ಡಿಸೋಜ ಮುಳುಗಡೆ ದುರಂತದ ದುಃಖ ದುಮ್ಮಾನಗಳನ್ನು ತೋರಿಸುತ್ತಾರೆ. ಕೆರೆಕೈ ರೇಣುಕಮ್ಮ ‘ಮುಳುಗಡೆ’ಯಲ್ಲಿ ಹೇಳಿದಂತೆ “ಹಳೇದರ ಬಗ್ಗೆ ಯಾರಿಗೂ ಮಮತೆ ಇಲ್ಲ ನೋಡಿ, ನಮಗೆ ಹಳಬರಿಗೆ ಹಳೇದು ಅಂದ್ರೆ ಪ್ರೀತಿ. ಏಕೆ ಅಂದ್ರೆ ನಾವು ಅದರ ಜೊತೆಗೇನೆ ಬೆಳೆದು ಬಂದಿರ್ತೀವಲ್ಲ. ಆದರೆ ಹೊಸಬರಿಗೆ ಹಳೇದು ಅಂದ್ರೆ ತಾತ್ಸಾರ... ‘ ಹೀಗೆ ಕೃತಿಯುದ್ದಕ್ಕೂ ವಾಸ್ತವಿಕತೆಯ ನೆಲಗಟ್ಟಿನ ಮೇಲೆ ಸೃಜನಶೀಲತೆಯನ್ನು ಬಿಚ್ಚಿಡುವಲ್ಲಿ ತಮ್ಮ ಅಪ್ಪಟ ಅನುಭವವನ್ನು ಸುರಿದಿದ್ದಾರೆ. “ಮುಳುಗಡೆ” ಪ್ರಭಾವದಿಂದಗಿ ಈರಿನ ಒಂದು ಕತೆಯಾದರೆ ಅದೇ ನೀರಿನ ಮತ್ತೊಂದು ಕತೆ “ದ್ವೀಪ”. ಶರಾವತಿ ಜಲಾಶಯನ ಪ್ರದೇಶದಿಂದಲೇ ಬಂದ ಅವರ ನಾಲ್ಕು ಕಾದಂಬರಿ ಹಾಗೂ ಅನೇಕ ಕತೆಗಳಲ್ಲಿ ಬದುಕಿನ ಸಂಗಡ ಹರಿದು ಬಂದಿರುವ ಮತ್ತೊಂದು ತೊರೆ ಪರಿಸರದ್ದು. ಸಾಮಾನ್ಯವಾಗಿ ನಮ್ಮೆಲ್ಲ ಕತೆ ಕಾದಂಬರಿಗಳ ಹಿನ್ನೆಲೆಯಲ್ಲಿ. ಮರಬಳ್ಳಿ ಗುಡ್ಡಗಾಡು ಸಂಸತಿ-ಇವೆಲ್ಲಾ ಬರುವುದು ಕತೆ ಕಾದಂಬರಿಗಳ ಹಿನ್ನೆಲೆಯಲ್ಲಿ. ಆದರೆ ಕಾರಂತ, ತೇಜಸ್ವಿ ಮತ್ತು ಡಿಸೋಜ ಅವರು ಸಮುದ್ರ, ನದಿ. ಕಾಡು ಪರಿಸರಕ್ಕೆ ಬಹುಮುಖ್ಯ ಪಾತ್ರವೊಂದರ ಸ್ಥಾನವನ್ನೇ ಕೊಟ್ಟಿರುವುದು ಬಹು ವಿಶೇಷ. ಹೆಮಿಂಗ್‍ವೇಯ “ಖಿhe oಟಜ mಚಿಟಿ ಚಿಟಿಜ ಣhe Seಚಿ” ಕಾದಂಬರಿಯಲ್ಲಿ ಸಮುದ್ರವೇ ಬಹು ಅದ್ಭುತ ಪಾತ್ರ ಇರುವಂತೆ ಡಿಸೋಜ “ಮುಳುಗಡೆ”, ಮತ್ತೆ “ದ್ವೀಪ”ದಲ್ಲಿ, ನೀರು ಬಹು ದೊಡ್ಡ ಪಾತ್ರವಾಗಿ ನಿಲ್ಲುತ್ತದೆ.

                 “ದ್ವೀಪ” ಕಾದಂಬರಿಯ ಕತೆ ನಡೆಯುವುದೇ ಮಲೆನಾಡಿನ ಒಂದು ಸಮಾಧಾನದ ಹಂದರವೊಂದರಲ್ಲಿ. ಬೇರೆ ಬೇರೆ ಎರಡು ಕತೆಗಳನ್ನು ಒಟ್ಟೊಟ್ಟಿಗೆ ಹೆಣೆಯುತ್ತಾ ಮುಂದೆ ಅವೆರಡನ್ನು ಒಂದಾಗಿಸುವ ಒಂದು ಕೌಶಲ್ಯದಲ್ಲಿ, ಅಪ್ಪಟವಾದ ಒಂದು ಅನುಭವವನ್ನು ಕೊಡುವುದರಲ್ಲಿ ಡಿಸೋಜ ಯಶಸ್ಸು ಕಾಣುತ್ತಾರೆ. ಇಲಿ, ಅವರು ದುಡಿಸಿಕೊಂಡಿರುವ ಭಾಷೆ ಸಾಗುವುದೇ ಚಂದ. “...... ಸೀತಾ ಪರ್ವತದ ನೆತ್ತಿಯ ಮೇಲೆ ನೀರ ಝರಿಯೊಂದರ ತಿಳಿನೀರು, ಅಡಕೆ ಮರದ ದೊಣಿಯ ಮೂಲಕ ಹರಿದು ನೇರವಾಗಿ ಬಚ್ಚಲು ಮನೆಗೇನೆ ಬಂದು ಬೀಳುತ್ತಿತ್ತು. ನೀರಿನ ತೊಟ್ಟಿಯಲ್ಲಿ ಧಪಧಪ ಎಂದು ಬೀಳುವ ಸದ್ದು ಕಿವಿಗಳಿಗೆ ಹೊಡೆದುಕೊಂಡು ಹೋಗುತ್ತಿತ್ತು. ನಾಗವೇಣಿ ತೊಟ್ಟಿಯ ನೀರನ್ನು ಹಂಡೆಗೆ ಮೊಗೆದಳು. ಬಚ್ಚಲ ಒಲೆಗೆ ಕುಂಟೆಯೊಂದನ್ನು ತುರುಕಿ, ಸೀಗೆ ಪುಡಿಯನ್ನು ಬಚ್ಚಲಕಟ್ಟೆಯ ಮೇಲೆ ತಂದಿರಿಸಿ, ತೆಂಗಿನ ಕತ್ತವ ತರಲು ಒಳಹೋದಾಗ, ಗಣಪಯ್ಯ ಬಿಸಿಬಿಸಿ ನೀರನ್ನು ತಲೆಯ ಮೇಲೆ ಸುರಿದುಕೊಂಡು ಹಾಂ ಎಂದ. ಆವರೆಗಿನ ಆಯಾಸ ದಣಿವು ಎಲ್ಲವೂ ಮಾಯವಾದಂತಿತ್ತು.”

                     ಹೊಸಮನೆ ಹಳ್ಳಿ ಹತ್ತಿರದಲ್ಲೇ ಅಣೆಕಟ್ಟೆಯೊಂದು ತಲೆಯೆತ್ತಿರುವುದರಿಂದ ಆ ಊರಿನವರೆಲ್ಲಾ, ತಮ್ಮ ಪಾಲಿಗೆ ಸಿಕ್ಕ ಪರಿಹಾರವನ್ನು ಹಿಡಿದುಕೊಂಡು ಬೇರೆ ಕಡೆಗೆ ಹೋಗಿ ಜಮೀನು ಮನೆ ಮಾಡಿಕೊಳ್ಳುತ್ತಿದ್ದಾರೆ. ಆ ಊರಿನ ಒಂದು ಕುಟುಂಬದ ಗಣಪಯ್ಯನ ಸಂಸಾರಕ್ಕೆ ಪರಿಹಾರ ಸಿಗುವಲ್ಲಿ ವಿಳಂಬವಾಗುತ್ತದೆ. ಇಲಾಖೆ ಕೊಟ್ಟ ಕಾರಣ ಸಂಬಂಧಿಸಿದ ಫೈಲು ಕಳೆದು ಹೋಗಿದೆಯೆಂದು ತಾನು ಹುಟ್ಟಿ ಬೆಳೆದ ನೆಲವನ್ನು ಬಿಟ್ಟು ಹೋಗಲು ಮನಸ್ಸಿಲ್ಲದ ಗಣಪಯ್ಯನ ತಂದೆಗೆ ಅಷ್ಟೇ ಸಾಕಾಗುತ್ತದೆ. ಪರಿಹಾರ ಬರುವವರೆಗಾದರೂ ಇಲ್ಲಿ ಇರೋಣ ಎಂದು ಅವರು ಗಣಪಯ್ಯ ನಾಗವೇಣಿ ದಂಪತಿಗಳನ್ನು ಒಪ್ಪಿಸುತ್ತಾರೆ. ಅಲ್ಲಿಂದ ಪ್ರಾರಂಭವಾಗುತ್ತಿದ್ದಂತೆಯೇ ಹೊಸಮನೆಯ ಸುತ್ತ ನೀರು ಸುತ್ತುವರಿದು ಅದೊಂದು “ದ್ವೀಪ” ವಾಗುತ್ತದೆ. ಎಂದು ಅಂದುಕೊಳ್ಳುತ್ತಿರುವುರುವಾಗಲೇ ಇನ್ನೊಂದೆಡೆ ತನ್ನ ಕುಟುಂಬದ ಆಖಸಗಿ ಬದುಕನ್ನು ಅಲ್ಲಾಡಿಸುವ ಒಂದು ಘಟನೆಯಿಂದಾಗಿ ತನ್ನನ್ನು ತಾನೇ ದುರಂತದತ್ತ ತಳ್ಳಿಕೊಳ್ಳುತ್ತಾನೆ. ಇದೊಂದು ಅಪರೂಪ ಕಥವಸ್ತು ಅಷ್ಟೇ ಅಪರೂಪ ಹಂದರ, ಶೈಲಿ. ಕತೆ ಬಿಚ್ಚಿಕೊಳ್ಳುತ್ತಾ ಹೋದಂತೆ ಅದು ಕೊಡುವ ಹೊಸಹೊಸ ಹೊಳವುಗಳು ಕಾದಂಬರಿಯನ್ನು ಗಟ್ಟಿಮಾಡುತ್ತಾ ಹೋಗುತ್ತದೆ. ಕೊನೆಯಲ್ಲಿ ಬಿರುಸಾದ ಮಳೆ, ಕಾರ್ಮೋಡಗಳು, ಭಾರಿಗಾಳಿ, ನುಗ್ಗುತ್ತಿರುವ ನೀರು-ಇಂತಹ ವಿವರಗಳಿಂದ ದಟ್ಟವಾದ ಹಿನ್ನೆಲೆಯಲ್ಲಿ ಗಣಪಯ್ಯನ ಕುಟುಂಬಕ್ಕೆ ಅಪಾಯವಾಗದಂತೆ ನೀರು ಅಣೆಕಟ್ಟಿನ ಮೇಲೆ ಹರಿದು ಹೊರಟುಹೋಗುತ್ತದೆ. ಏರಿದ ನೀರು, ಎರಡು ಗಂಡು ಒಂದು ಹೆಣ್ಣು, ಒಂದು ಹಸು, ಹಾವು, ಹುಲಿ, ಇತ್ಯಾದಿಗಳು ಏನೆಲ್ಲ ಸಮಸ್ಯೆಗಳನ್ನು ಒಡ್ಡುತ್ತದೆ. ಮಳೆ ಬೀಳುತ್ತಲೆ ಇತ್ತು-ಮೊಗ್ಗೆ, ಉಬ್ಬೆ... ಉತ್ತರೆ...ಹಸ್ತೆ... ಚಿತ್ತ-ಹೀಗೆ ಈ ನಕ್ಷತ್ರಗಳ ಬಗ್ಗೆ ನಿರ್ದೇಶಕ ಗಿರಿಶ ಕಸರವಲ್ಳಿಯವರು ಹೇಳುವ ಹಾಗೆ “.... ಒಂದೊಂದು ಮಳೆ ಒಂದೊಂದು ಲೆಕ್ಕ. ಈಗ ಮುಳುಗಡೆ ಆಗುತ್ತಿರುವ ಈ ಮಳೆ ನಕ್ಷತ್ರಗಳೇ ತಾವೆಷ್ಟು ಮುಳುಗುತ್ತಿದ್ದೇವೆ ಎಂದು ಲೆಕ್ಕ ಹಾಕುವ ಸಾಧನಗಳಾಗುತ್ತವೆ. ಈ ದೃಶ್ಯ ಗಮನಿಸಿ. ಪುಷ್ಯ: ಮತ್ತೆ ಮಳೆಯಾಗುತ್ತದೆ “ಆಕಾಶದಲ್ಲಿ ಮೋಡಗಳು ಜಮೆಯಾಗಿ ಸುತ್ತಲು ಕವಿಯಿತು. ಗಾಳಿ ಅದೆಲ್ಲಿತ್ತೋ ಮೈಯಲ್ಲಿ ದೆವ್ವ ಹೊಕ್ಕಂತೆ ಬೀಳತೊಡಗಿತು.” ಹೀಗೆ ಗವ್ವೆಂದು ಮುಚ್ಚಿಕೊಂಡ ಮಳೆಯ ವಾತಾವರಣದ ವಿವರಣೆ ದಟ್ಟವಾಗಿ ವಿವರಿಸುತ್ತಾ ಲೇಖಕರು ಆ ದ್ವೀಪ ಮೂವರೇ ವ್ಯಕ್ತಿಗಳ ನಡುವೆ ಮುಸುಕಿದ ಬೇಸರ ನಿರಾಶೆ, ಹತಾಶೆಯ ಪ್ರತಿರೂಪವಾಗುವಂತೆ ಕಾಣಿಸುತ್ತಾರೆ. “ ಪ್ರಕೃತಿಯೇ ಒಂದು ಪಾತ್ರವಾಗಿ ಬಂದದ್ದು ಕನ್ನಡ ಕಾದಂಬರಿಯ ಪ್ರಪಂಚದಲ್ಲಿ ವಿವರಗಳಿವೆ. ಕನ್ನಡ ಚಿತ್ರರಂಗದಲ್ಲಂತೂ ಪ್ರಕೃತಿ ಕೇವಲ ಹಿನ್ನೆಲೆಯಾಗಿ ಬಂದಿದೆ. ಅದೇ ಒಂದು ಪಾತ್ರವಾಗಿ ಬಂದ ನಿದರ್ಶನವೇ ಇಲ್ಲ. “ದ್ವೀಪ”ದಲ್ಲಿ ಅಂತಹ ಸಾಧ್ಯತೆಗಳಿವೆ.

                ಸಿನಿಮಾಕ್ಕಾಗಿ ಬರೆದ ಕತೆಯಲ್ಲದಿದ್ದರೂ ಗಿರಿಶ್ ಕಾಸರವಳ್ಳಿಯವರು ಕಾದಂಬರಿಯಲ್ಲಿ ಕಾಣಿಸಿಕೊಂಡ ಹೊಳವುಗಳ ಮೇಲೆ ತಮ್ಮ ಕಲಾಸ್ಪರ್ಶ ನೀಡಿ ಬಹು ಮಹತ್ವದ ಸಿನಿಮಾವನ್ನಾಗಿ ಮಾಡಿದರು. 2002ರ ಶ್ರೇಷ್ಠ ಚಿತ್ರವೆಂದು ರಾಷ್ಟ್ರಪತಿಗಳ ಸ್ವರ್ಣ ಪದಕ, ರಾಜ್ಯಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ ಹಾಗೂ ಮಾಸ್ಕೋ, ನ್ಯೂಯಾರ್ಕ್, ಜಪಾನ್, ಹವಾಯಿ ರೊಟರ್ ಡ್ಯಾಂ, ಕಥಾರ್, ಸಿಂಗಪೂರ್, ಡರ್ಬಾನ್, ನ್ಯೂಯಾರ್ಕ್, ವ್ಯಾಕೋವರ್-ಹೀಗೆ ಇನ್ನೂ ಅನೆಕ ಕಡೆಗಳ ಚಲನ ಚಿತ್ರೋತ್ಸವದಲ್ಲಿ ಈ ಚಿತ್ರ ಪ್ರಶಸ್ತಿಗಳಲ್ಲಿ ಪಡೆದಿದೆ. ಡಿಸೋಜ ಹಾಗೂ ಕಾಸರವಳ್ಳಿಯಲ್ಲಿ ಸೃಜನಶೀಲತೆ ಕ್ರಿಯೆಗಳು ಒಂದೆಡೆ ಸೇರಿ ‘ದ್ವೀಪ’ದಂತ ಸಿನಿಮಾ ಜಗತ್ತಿಗೆ ಪರಿಚಯವಾಯಿತು.

             ಡಿಸೋಜ ಪ್ರಮುಖ ಕಾದಂಬರಿಗಳಲ್ಲಿ ಒಂದಾದ “ಕುಂಜಾಲು ಕಣಿವೆಯ ಕೆಂಪು ಹೂ” ಇಲ್ಲಿಯೂ ಸಹ ಪರಿಸರದ್ದೇ ಅತೀ ಮುಖ್ಯ ಪಾತ್ರ. ಇದೊಂದು ಕಾಲ್ಪನಿಕ ಪ್ರವಾಸ ಕಥನ. ಡಿಸೋಜ ಎಂದಿನಂತೆ ಇಲ್ಲೂ ಸಹ ಘೋಷಣೆ ಸ್ಟೇಟ್‍ಮೆಂಟ್‍ಗಳನ್ನು ನಿಡದೆ ಪರಿಸರದ ಬಗ್ಗೆ ಎಚ್ಚರಿಕೆಯನ್ನು ಕಲಾತ್ಮಕವಾಗಿ ನೀಡುತ್ತಾರೆ. ಈ ಕಾದಂಬರಿ ಎರಡು ಪೀಳಿಗೆಯ ಮನೊಭಾವವನ್ನು, ಆ ಮನೋಭಾವಕ್ಕೆ ಕಾರಣವಾದ ಜೀವನ ಮೌಲ್ಯವನ್ನು, ಬದಲಾದ ಆ ಮೌಲ್ಯದ ಪ್ರಭಾವದಿಂದ ನಾಶವಾಗುತ್ತಿರುವ ಪರಿಸರವನ್ನು ಬಹು ಆಕರ್ಷಕ ರೀತಿಯಲ್ಲಿ ಅನಾವರಣಗೊಳಿಸುತ್ತದೆ.

                ಮುಂಬಯಿಯ ವೇಗದ ಬದುಕಿನಲ್ಲಿ ಹಣ ಅಧಿಕಾರ ಅಂತಸ್ತು ಒಳ್ಳೆಯ ಹೆಂಡತಿ ಮಕ್ಕಳು ಇದ್ದರೂ ಮುಂಬಯಿಯ ಯಾಂತ್ರಿಕತೆಯಿಂದ ಉಸಿರು ಕಟ್ಟಿಸಿಕೊಳ್ಳುತ್ತಿದ್ದ ಆನಂದರಾಯ ಶಾಂತಿ ಸಮಾಧಾನಕ್ಕಾಗಿ ಆಫೀಸ್‍ಗೆ ಒಂದು ತಿಂಗಳು ರಜೆ ಹಾಕಿ ತನ್ನ ಹಳ್ಳಿಗೆ ಬರುತ್ತಾನೆ. ಸುಮಾರು 50 ವರ್ಷಗಳ ಹಿಂದೆ ತನ್ನ ತಂದೆ ರಾಮರಾಯ ಮಾಡಿದ ಪ್ರವಾಸದ ಅನುಭವದ ದಿನಚರಿಯ ಪುಸ್ತಕವೇ ಆನಂದರಾಯನಿಗೆ ಮಾರ್ಗದರ್ಶನವಾಯಿತು. ತಂದೆ ಹೋಗಿ ನೋಡಿ ಸಂತೋಷಪಟ್ಟಿದ ಕುಂಜಾಲು ಕಣಿವೆಗೆ ಮಗನ ಪ್ರಯಾಣ. ಮಧ್ಯದ ಈ ಐವತ್ತು ವರ್ಷಗಳಲ್ಲಿ ಪರಿಸರದಲ್ಲಾದ ಆಕಾಶ ಪಾತಾಳದಷ್ಟು ಅಂತರ ಎಂಥವರನ್ನು ಕುಸಿದು ಬೀಳುವಂತೆ ಮಾಡುತ್ತದೆ. ಅತ್ಯಂತ ಸುಂದರ ಶೈಲಿಯನ್ನು ಕುತೂಹಲವನ್ನು ಹಿಡಿದಿಟ್ಟು ವಾಸ್ತವಿಕ ಸ್ಥಿತಿಯನ್ನು ಚಿತ್ರಿಸುವಲ್ಲಿ ಡಿಸೋಜ ಸುರಿದಿರುವ ಅನುಭವ ಬೆಳಕು ಅಷ್ಟಿಷ್ಟಲ್ಲ! ಅಪ್ಪ ನೋಡಿದ ಕುಂಜಾಲು ಕಣಿವೆಯ ಕೆಂಪು ಹೂವು ಹೀಗಿತ್ತು- “ಎರಡು ಎರಡೂವರೆ ಅಡಿ ಎತ್ತರದ ಗಿಡ, ಸಣ್ಣ ಪೊದೆಯಂತೆ ಅಷ್ಟಗಲ ಹರಡಿತ್ತು. ವಿಚಿತ್ರವೆಂದರೆ ಗಿಡದಲ್ಲಿ ಒಂದೇ ಒಂದು ಎಲೆ ಇರಲಿಲ್ಲ. ಬರೀ ಹೂವು. ಗಿಡದ ತುಂಬ ಹೂವೇ ಹೂವು. ಸಣ್ಣ ಸಂಪಿಗೆ ಆಕಾರ. ಕಡ್ಡಿಯಂತಿರುವ ಎಸಳುಗಳು. ಈ ಎಸಳು ಮೃದು ಕೋಮಲ, ರೇಶ್ಮೆಯ ನುಣುಪು ಇವುಗಳಿಗೆ. ಗಿಡವು ಸಾವರ ಟಿಸಿಲುಗಳಾಗಿ ಒಡೆದುಕೊಂಡಿತ್ತು. ಪ್ರತಿ ಟಿಸಿಲಿನ ದಂಟಿನ ತುದಿಯಲ್ಲಿ ತಿಳಿ ಹಸಿರಿನ ಪುಷ್ಟ ಪೀಠ. ಈ ಪೀಠದೊಳಗೆ ಅಡಕವಾಗಿ ಕುಳಿತ ನುಣುಪಾದ ಎಸಳುಗಳು. ಗಿಡದಲ್ಲಿ ಹಸಿರು ಎಲೆ ಇಲ್ಲದಿದ್ದರಿಂದ ಇಡೀ ಗಿಡ ಕೆಂಪಾಗಿ ಕೆಂಡದುಂಡೆಯಾಗಿ ಕಾಣುತ್ತಿತ್ತು. ಸಣ್ಣಗಾಳಿ ಬೀಸಿದಾಗ ಗಿಡಕಂಪಿಸಿ ಬೆಂಕಿ ನಾಲಿಗೆ ಅತ್ತಿತ್ತ ಹೊರಳಿದ ಹಾಗೆ ಕಂಡು ಬಂದು, ಆ ದೃಶ್ಯ ಚೇತೋಹಾರಿಯಾಗಿ ಕಾಣುತ್ತಿತ್ತು. ಪ್ರತಿದಂಟಿನ ತುದಿಯಲ್ಲೂ ಕುಳಿತ ಒಚಿಟಿ ಹೂವು ಬಿಡಿಬಿಡಿಯಾಗಿ ಕಾಣುವುದರ ಬದಲು ಎರಡು ಎರಡೂವರೆ ಅಡಿ ವಿಸ್ತಾರವಾದ ಆ ಗಿಡ ದೊಡ್ಡದೊಂದು ಕೆಂಪು ಹೂವಿನ ಹಾಗೆ, ಲಕ್ಷ ಹೂಗಳನ್ನು ಚೆಲ್ಲಿದ ರಾಶಿಯ ಹಾಗೆ ಕಾಣುತ್ತಿದ್ದುದು ಮತ್ತೊಂದು ಕೌತುಕ.” ಇದು ಡಿಸೋಜ ನೀಡಿರುವ ಶಬ್ಧಚಿತ್ರ. ಇಡೀ ಪರಿಸರದ ಹಸಿರನ್ನು, ಸಮಾಧಾನಕರ ಸಂಸತಿ ಹಾಗೂ ಅದರ ವೈಭವವನ್ನು ಸೆರೆಹಿಡಿದಂತೆ ಇದೆ.

                 ಐವತ್ತು ವರ್ಷಗಳ ನಂತರ ಇದೇ ಕುಂಜಾಲು ಕಣಿವೆಯ ಕೆಂಪು ಹೂವನ್ನು ನೋಡಲು ಹೊರಟ ಮಾರ್ಗದಲ್ಲಿ ಆನಂದರಾಯನು ಕಂಡಿದಾದರೂ ಏನು? ತಂದೆ ರಾಮರಾಯರು ನೋಡಿದ ಯಾವುದೇ ಮರ,ಪಕ್ಷಿ, ಪ್ರಾಣಿ, ಹಾವು ಬೆಟ್ಟಗುಡ್ಡ ಯಾವುದೂ ಈಗ ಇಲ್ಲ .ಎಲ್ಲವೂ ಛದ್ರಛಿದ್ರ. ತಂದೆಯ ಪ್ರಯಾಣ ಅನುಭವಕ್ಕೂ ಮಗನ ಪ್ರಯಾಣ ಅನುಭವಕ್ಕೂ ಇದ್ದ ರಾತ್ರಿ ಹಗಲಿನ ವ್ಯತ್ಯಾಸವನ್ನು ಡಿಸೋಜ ವ್ಯಥೆಯಿಂದ ನೈಜವಾಗಿ ಚಿತ್ರಿಸುತ್ತಾರೆ. ಇದು ಕೇಲವ ಈ ಕಾದಂಬರಿಗಾಗಿಯೇ ಪಡೆದುಕೊಂಡ ವ್ಯಥೆ ಅಲ್ಲ. ಇದು ಅವರ ಪ್ರಾಂಜಲ ಕಾಳಜಿ. ಅವಕಾಶ ಸಿಕ್ಕಾಗೆಲ್ಲಾ, ಅವಕಾಶವನ್ನು ಕಲ್ಪಿಸಿಕೊಂಡು ಪರಿಸರದ ಅಕ್ಷರ ಚಳುವಳಿಯನ್ನೇ ಮಾಡುತ್ತಿರುವ ಡಿಸೋಜ ಆನಂದರಾಯ ಕಂಡ ಕುಂಜಾಲು ಕಣಿವೆಯ ದುರಂತವನ್ನು ಚಿತ್ರಿಸುವಾಗ ಇವರಿಗೆ ಸಿಟ್ಟು ದುಃಖ ಎರಡು ಆಗುತ್ತೆ. ಕೊನೆಯಲ್ಲಿ ಮಗ ಕುಂಜಾಲು ಕಣಿವೆಗೆ ಬಂದಗ ಆತ ತನ್ನ ಚ್ಯತನ್ಯವನ್ನೆಲ್ಲಾ ಕಣ್ಣೆಗೆ ತಂದುಕೊಂಡು ಕಟ್ಟಿಟ್ಟ ಆಸಕ್ತಿಯಿಂದ ಬಂಡೆ ಹತ್ತಿ ಬಗ್ಗಿ ನೋಡಿದ. ಏನಿದೆ ಅಲ್ಲಿ? ಕುರುಚಲಗಿಡ, ದತ್ತೂರಿಗಿಡ ಎಕ್ಕದ ಗಿಡ, ನೆಗ್ಗಿಮುಳ್ಳು, ಜಾಳಿಮುಳ್ಳು, ಪಾರ್ಥೇನಿಯಂ, ಯುಪಟೀರಿಯಂ.

               ಹೆಬ್ಬಂಡೆಯ ಮೇಲೆ ಕುಳಿತು ಅನಂತ ಅಳದಳನೆ ಅಳತೊಡಗಿದ. ಇದು ನಮ್ಮ ಸ್ಥಿತಿಯೂ ಹೌದು ಕತೆಗಾರನ ಸಂಕಟವೂ ಗೌದು. ನಮ್ಮ ಸಂದರ್ಭದ ಯಾವುದೇ ಭಾಷೆಗೆ ಸರಿಹೊಂದುವ, ಸತ್ಯವೆನಿಸುವ ಕತೆಯಿದು. ಪರಿಸರಕ್ಕೆ ಸೇರಿಕೊಂಡಂತೆ ಡಿಸೋಜರ ಅನೇಕ ಕತೆಗಳಿವೆ.