“ಚರಕ ಮಹಿಳಾ ವಿವಿಧ್ದೋಶ ಕೈಗಾರಿಕಾ ಸಂಘ ನಿ., ಭೀಮನಕೋಣೆ”

‘ಚರಕ’ದ ಪ್ರಸನ್ನರು :

                        ಇಡೀ ಭಾರತದ ರಂಗಭೂಮಿ ಸಂದರ್ಭದಲ್ಲಿ ಪ್ರಸನ್ನ ಬಹು ಹೆಮ್ಮೆಯಿಂದ ಹೇಳಬಹುದಾದ ಒಂದು ಹೆಸರು. ಸಾಹಿತ್ಯಿಕ ಒಲವು, ಸೈಂದ್ಧಾಂತಿಕ ಬದ್ಧತೆ, ರಂಗಪ್ರೀತಿ, ಕಾರ್ಯತತ್ಪರತೆ, ಸಂಘಟನಾಶಕ್ತಿ, ಅವಿರತ ಸೃಜನಶೀಲತೆ, ಪಾರದರ್ಶಕತೆ, ಸಾಮಾಜಿಕ ಕಳಕಳಿ- ಇವುಗಳು ಇವರನ್ನು ರಾಷ್ಟ್ರಮಟ್ಟಕ್ಕೇರಿಸಿದೆ. ಮೂಲಕಹ ರಂಗಜೀವಿಯಾಗಿರುವ ಪ್ರಸನ್ನ ಹೆಗ್ಗೋಡು ಮತ್ತು ಭೀಮನಕೋಣೆಯಲ್ಲಿ ಸಾಧಿಸಿ ತೋರಿಸಿರುವ ಚರಕ ಹಾಗೂ ದೇಸಿ ಚಳುವಳಿ ಬಹುಶಃ ಇಡೀ ನಾಡಿಗೊಂದು ಮಾದರಿ ಆದೀತು. ಕಳೆದ ಸುಮಾರು ಎರಡು ದಶಕಗಳಲ್ಲಿ ಹೆಗ್ಗೋಡು ಹಾಗೂ ಆಸುಪಾನಿನಲ್ಲಿ ಪ್ರಸನ್ನ ಹಮ್ಮಿಕೊಂಡು ಬಂದಿರುವ ಕಾರ್ಯಕ್ಷೇತ್ರಗಳಲ್ಲಿ, ಗ್ರಾಮಾಭಿವೃದ್ಧಿ, ಕೈಮಗ್ಗ ಚಳುವಳಿ, ಸಹಕಾರ ಕ್ಷೇತ್ರಗಳಲ್ಲಿ ಮಾಡಿರುವ ಕೆಲಸ ಅನನ್ಯ ಮಾತ್ರವಲ್ಲ ಅಧ್ಯಯನಕ್ಕೆ ಒಳಪಡಿಸಬೇಕಾದ ಸಂಗತಿಯೂ ಹೌದು. ಚಿಂತಕ, ಎಡಪಂಥೀಯ ಮನುಷ್ಯ, ರಂಗಕರ್ಮಿ, ನಾಟಕಕಾರನೊಬ್ಬ ಈ ರಿತಿಯ ಚರಕ ಪರಂಪರೆಯನ್ನು ಹುಟ್ಟುಹಾಕಿ ದಲಿತರ ಹಾಗೂ ಹಿಂದುಳಿದ ಮಹಿಳೆಯರ ಬದುಕಿನ ನೆಲೆಯನ್ನು ಕಟ್ಟಿಕೊಟ್ಟಿರುವುದು ನಮ್ಮ ಸಂದರ್ಭದಲ್ಲಿ ಅಪರೂಪ. ನಾಟಕಗಳ ಪ್ರಸನ್ನ ತನ್ನ ರಂಗಕರ್ಮವನ್ನು ಹೆಚ್ಚಾಗಿ ದೆಹಲಿ ಹಾಗೂ ಬೆಂಗಳುರಿನಲ್ಲಿ ನಡೆಸಿ ಈಗ ಗ್ರಾಮಾಂತರ ಪ್ರದೇಶದಲ್ಲಿ ದೇಸಿ ಚಳುವಳಿಯನ್ನು ಹುಟ್ಟು ಹಾಕಿರುವುದು ಅವರ ಸಮಾಜಿಕ ಬದ್ಧತೆಗೊಂದು ಸಾಕ್ಷಿ.

ಚರಕ ಮತ್ತು ದೇಸಿ:

               ಮಲೆನಾಡಿನ ಕೃಷಿ ಜನರಿಗೆ ಪರ್ಯಾಯವಾಗಿ ದುಡಿಯುವ ಮೂಲ ಒದಗಿಸಿಕೊಡಬೇಕೆಂದು ಪ್ರಸನ್ನರ ಲಾಗಾಯ್ತಿನ ಕನಸು. ಎರಡು ಕೈಮಗ್ಗ ಯಂತ್ರ ಮತ್ತು ಎರಡು ಹೊಲಿಗೆ ಯಂತ್ರಗಳ ಮೂಲಕ ಶುರುಗೊಂಡ ‘ಚರಕ’ ಸಂಸ್ಥೆ ಹತ್ತು ವರ್ಷಗಳಲ್ಲಿ ಸುಮಾರು 200 ಜನ ಗ್ರಾಮೀಣ ದಲಿತ, ಹಿಂದುಳಿದ ಮಹಿಳೆಯರಿಗೆ ಕೆಲಸ ಕೊಡುವ ಒಂದು ದೊಡ್ಡ ಗ್ರಾಮೀಣ ಕೈಗಾರಿಕೆಯಾಗಿ ಬೆಳೆದು ನಿಂತಿದೆ. ಕರ್ನಾಟಕದಲ್ಲಿ ಲಾಭದಾಯಕವಾಗಿ ನಡೆಯುವ ಕೈಮಗ್ಗ ಘಟಕಗಳಲ್ಲಿ ‘ಚರಕ’ವೂ ಒಂದು, ಈ ಸಂಗತಿ ಸಣ್ಣದೇನೂ ಅಲ್ಲ. ಚರಕದ ಪೂರ್ತಿ ಹೆಸರು “ಚರಕ ಮಹಿಳಾ ವಿವಿಧ್ದೋಶ ಕೈಗಾರಿಕಾ ಸಂಘ ನಿ., ಭೀಮನಕೋಣೆ”. ಇದೊಂದು ಮಹಿಳಾ ಸಹಕಾರಿ ಸಂಘಟನೆ. ನೂಲಿಗೆ ನೈಸರ್ಗಿಕ ಬಣ್ಣಗಾರಿಕೆ, ಕೈಮಗ್ಗದ ಬಟ್ಟೆಯ ಉತ್ಪಾದನೆ ಮತ್ತು ಸಿದ್ಧ ಉಡುಪಿಗಳ ತಯಾರಿಕೆ. ಈ ಘಟಕ ಸುಮಾರು 40 ನಮೂನೆಯ ವೈವಿಧ್ಯಮಯ ವಸ್ತುಗಳನ್ನು ಇಲ್ಲ್ಲಿ ಉತ್ಪಾದಿಸುತ್ತಾರೆ. ಕೈಮಗ್ಗ ಬಟ್ಟೆಗೆ ವಿಶ್ವದಲ್ಲಿ ಬೇಡಿಕೆ ಹೆಚ್ಚುತ್ತಿರುವಾಗ ಭಾರತದಲ್ಲಿ ಕೈಮಗ್ಗಗಳು ಕ್ರಮೇಣ ನಿಶಬ್ಧವಾಗುತ್ತಿರುವುದು ಪ್ರಸನ್ನರಿಗೆ ಬಹಳವಾಗಿ ಕಾಡಿದೆ. ಇದರ ಪರಿಣಾಮವೆ ಈ ಚರಕ ಚಳುವಳಿ. ಮಲೆನಾಡಿನಲ್ಲಿ ವೃತ್ತಿಪರ ನೇಕಾರರು ಇಲ್ಲವೆ ಇಲ್ಲ. ಆದರೂ ಈ ರೀತಿ ಕೈಗೆತ್ತಿಕೊಂಡಿರುವ ಯೋಜನೆಯಿಂದಾಗಿ ಕ್ರಮೇಣ ಬಯಲು ಸೀಮೆಯಂತೆ ಮಲೆನಾಡಿನಲ್ಲೂ ನೇಕಾರಿಕೆ ಒಂದು ಪ್ರಮುಖ ಗೃಹ ಕೈಗಾರಿಕೆ ಆಗುತ್ತದೆ ಎಂಬುದು ಪ್ರಸನ್ನ ಅವರ ಅಚಲ ವಿಶ್ವಾಸ. ‘ಚರಕ’ ತನ್ನದೆ ಆದ ಬಣ್ಣದ ಮನೆಯನ್ನು ಹೊಂದಿದ್ದು ವಸ್ತ್ರಗಳ ವರ್ಣವಿನ್ಯಾಸದ ಸಾಧ್ಯತೆಗಳಲ್ಲಿ ವೈವಿಧ್ಯತೆ ಹೆಚ್ಚಿದೆ. ಸಂಪೂರ್ಣ ನೈಸರ್ಗಿಕ ಬಣ್ಣಗಾರಿಕೆಯ ಘಟಕಗವನ್ನು ಹೊಂದಿರುವುದು ವಿಶೇಷ. ಅಡಿಕೆ ಚೊಗರು, ಅಳಲೆಕಾಯಿ ಮುಂತಾದ ಸ್ಥಳಿಯ ಕಾಡು ಉತ್ಪನ್ನಗಳನ್ನು ಬಳಸಿಕೊಂಡು ನೈಸರ್ಗಿಕ ಬಣ್ಣಗಳನ್ನು ಹಾಕುತ್ತಿದ್ದರೆ. ಇಲ್ಲಿಯ ಪ್ರತಿಯೊಂದು ಕಾರ್ಯವೈಖರಿಯನ್ನು ಪ್ರಸನ್ನ ಬಹು ಕಾಳಜಿಯಿಂದ ರೂಢಿಸಿಕೊಂಡು ಬಂದಿದ್ದಾರೆ. ಚರಕಗಳಿಗೆ ಯಾವುದೇ ವಿದ್ಯುತ್ ಅವಲಂಬಿತ ಯಂತ್ರಗಳಿಲ್ಲ. ಮಣ್ಣಿನ ಗೋಡೆ ಹಂಚಿನಮನೆ. ಮಳೆನೀರನ್ನು ಸಂಗ್ರಹಿಸುವ ಸುಂದರ ವ್ಯವಸ್ಥೆ. ಕೊಳವೆ ಬಾವಿಗಳ ಬದಲು ತೆರೆದ ಬಾವಿಗಳು. ಸುತ್ತಮುತ್ತ ಹಲವಾರು ಇಂಗುಗುಂಡಿಗಳು. ಅಸ್ತ್ರದ ಒಲೆಗಳು. ಸೌರಶಕ್ತಿಯ ವಾಟರ್ ಹೀಟರ್ ಹಾಗೂ ದೀಪದ ವ್ಯವಸ್ಥೆ. ಗುಡ್ಡದ ತುದಿಯಲ್ಲೊಂದು ಬಯಲು ರಂಗಮಂದಿರ-ಇವುಗಳ ಹಿಂದೆ ಪ್ರಸನ್ನ ಇದ್ದೆ ಇರುತ್ತಾರೆ.

           ಉತ್ಪಾದನೆಗೆ ಮಾರಾಟವೇ ಜೀವ. ಚರಕದ ಈ ವಸ್ತುಗಳ ಮಾರಾಟಕ್ಕೆಂದೇ ಬೆಂಗಳೂರಿನಲ್ಲಿರುವ ಎರಡು ಅಂಗಡಿಗಳನ್ನು ಹೊಂದಿದ್ದು, ಅವು ಜನರ ಮನವನ್ನು ಗೆದ್ದಿವೆ. ದೇಸಿ ಅಂಗಡಿಗೆ ಭೇಟಿ ಕೊಡುವುದೇ ಒಂದು ಹೆಮ್ಮೆಯ ಸಂಗತಿಯಾಗಿದೆ. ಈ ಕಾರ್ಯ ಸಾಧನೆಯಲ್ಲಿ ಪ್ರಸನ್ನ ತಮ್ಮ ಸೃಜನಶೀಲತೆ ಹಾಗೂ ಕ್ರಿಯಾಶೀಲ ಶಕ್ತಿಯನ್ನು ಸುರಿದಿದ್ದಾರೆ. ಚರಕದ ಮಹಿಳೆಯರಿಂದ ಆಡಳಿತ ಹಾಗೂ ಅವರೆ ಹಣಕಾಸಿನ ವಹಿವಾಟನ್ನು ನೋಡಿಕೊಳ್ಳುತ್ತಿದ್ದಾರೆ. ಇವರಿಗೆಲ್ಲಾ ಸಿಕ್ಕಿರುವ ತರಬೇತಿ ಕೂಡ ಬಹು ವಿಶಿಷ್ಟ.

ಆದರ್ಶ ಮತ್ತು ವಾಸ್ತವ:

ಆದರ್ಶ ಕಾಲದಲ್ಲಿ ಸೈದ್ಧಾಂತಿಕ ಆದರ್ಶಗಳಿಗೆ ವಾಸ್ತವವೆಂದು ಭ್ರಮಿಸಿ ದಿನನಿತ್ಯದ ಬದುಕಿನೊಳಗಣ ವಾಸ್ತವ ಸತ್ಯಗಳಿಗೆ ಸ್ಪಂದಿಸಲು ತಿಣುಕಾಡುತ್ತಿದ್ದ ಪ್ರಸನ್ನಗೆ ಆಗ ಎಲ್ಲವೂ ಕೆಂಪಾಗಿ ಕಾಣುತ್ತಿತ್ತು. ಅವರ ಬಳಿಯಲ್ಲಿ ದೇವರನ್ನೇ ಧಿಕ್ಕರಿಸಿ ನಿಲ್ಲಬಲ್ಲಷ್ಟು ನಂಬಿಕೆ ಸಿದ್ಧಾಂತಗಳಿದ್ದವು. “ಈಗ ಸಂಕೀರ್ಣವಾಗಿರುವ ಬದುಕಿನ ಸಂಕೀರ್ಣವಾಗಿದೆ. ಸೈದ್ಧಾಂತಿಕ ಅನುಮಾನಾಸ್ಪದವಾಗಿ ಕಾಣುತ್ತಿದೆ. ಯಾರನ್ನೇ ನಂಬುವ ಮೊದಲು ಅವರು ಬದುಕಿರುವ ರೀತಿಯನ್ನು ಪರೀಕ್ಷಿಸುತ್ತೇನೆ. ಯಾವುದೇ ಸಿದ್ದಾಂತವನ್ನು ಒಪ್ಪುವ ಮೊದಲು ಅದು ಪ್ರೇರೇಪಿಸಲಿರುವ ಜೀವನ ಶೈಲಿಯನ್ನು ಪರಿಕ್ಷಿಸುತ್ತೇನೆ. ಕೆಂಪಿನೊಳಗೆ ಇತರ ಬಣ್ಣಗಳನ್ನು ಪ್ರಯತ್ನ ಮಾಡುತ್ತೇನೆ. ನನಗೆ ತಿಳಿದಂತೆ ಜನಸಾಮಾನ್ಯರು ಹೀಗೆ ಮಾಡುತ್ತಿದ್ದರು. ಯಾವನು ಯಾವ ಘನತೆ ಸಿದ್ಧಾಂತವನ್ನು ಬಾಯಿಂದ ಉದುರಿಸಿದರೇನಂತೆ, ಅವನು ನಂಬಿಗಸ್ತನೇ ಅಲ್ಲವೇ ಎನ್ನುವ ಸಂಗತಿ ಬರಿದೆ ಬಾಯಿಮಾತಿನಿಂದ ತಿಳಿಯಲಾರದೆಂದು ಅವರಿಗೆ ಗೊತ್ತಿತ್ತು. ಹಾಗಾಗಿ ಅವರು ಸಿದ್ಧಾಂತಗಳಿಗಿಂತ ಮಿಗಿಲಾಗಿ ಸಂಸತಿಯನ್ನು ನಂಬಿದ್ದರು.  ನನಗೀಗ ಜೀವನ ಪದ್ಧತಿ ಮಹತ್ವದ ಸಂಗತಿಯಾಗಿ ಕಾಣುತ್ತದೆ. ಜಗತ್ತು ಬದಲಾಗಬೇಕಾದರೆ ಜಗತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಬದಲಾವಣೆಯಾಗಬೇಕೆಂದು ನಂಬಿದ ನಾನು ಈಗ ಜೀವನ ಪದ್ಧತಿಯಲ್ಲಿ ಬದಲಾವಣೆಯಾಗಬೇಕು ಎಂದು ನಂಬುತ್ತೇನೆ. ಜಗತ್ತು ಹಾಳಾಗಿದೆಯೆಂದರೆ ಜೀವನ ಪದ್ಧತಿ ಹಾಳಾಗಿದೆಯೆಂದರ್ಥ. ರಾಜಕೀಯ ಕೇವಲ ಸಿದ್ಧಾಂತ ಮಾತ್ರವೇ ಆಗಿರುವುದರಿಂದ ಅದು ಭ್ರಷ್ಟವಾಗಿದೆ. ಧರ್ಮ ಹಾಳಾಗಿದೆಯೆಂದರೆ ಧರ್ಮ ನಾಯಕರುಗಳ ಜೀವನ ಪದ್ಧತಿ ಹಾಳಾಗಿದೆಯೆಂದರ್ಥ”. (“ದೇಸಿ ಜೀವನ ಪದ್ಧತಿ”- ಪ್ರಸನ್ನ). ಈ ಚಿಂತನೆಯ ಹಿನ್ನೆಲೆಯಲ್ಲಿ ಈಗ ಕೇವಲ ಸೈದ್ಧಾಂತಿಕ ಮಟ್ಟದಲ್ಲಿ ಉಳಿಯಿತ್ತಿರುವ ಪ್ರಗತಿಪರ ಆಶಯಗನ್ನು ಬದಿಗಿಡಲು ಪ್ರಸನ್ನ ಪ್ರಗತಿಶೀಲರಿಗಿಂತ ಹೆಚ್ಚು ಸಮಕಾಲೀನವಾಗಿ, ಹೆಚ್ಚು ಕ್ರಿಯಾಶಾಲಿಯಾಗಿ ಸಮುದಾಯವನ್ನು ಕಟ್ಟುವುದರಲ್ಲಿ ತೀವ್ರವಾಗಿ ನಿರತರಾಗಿದ್ದಾರೆ.

ಬಾಲ್ಯ ಶಿಕ್ಷಣ:

           ಪ್ರಸನ್ನರ ಬಾಲ್ಯ, ಶಿಕ್ಷಣವೇ ಒಂದು ರೀತಿಯಲ್ಲಿ ವಿಶಿಚ್ಟ, ಪ್ರಸನ್ನ ಎಂದೇ ಪ್ರಸಿದ್ಧರಾದ ಇವರ ಪೂರ್ಣ ಹೆಸರು ಆರ್.ಪಿ. ಪ್ರಸನ್ನಕುಮಾರ. ತಂದೆ ಪ್ರಹ್ಲಾದಾಚಾರ್. ತಾಯಿ ಹೇಮಾವತಿ. ಇವರ ಪೂರ್ವಿಕರ ಊರು ರಾಯದುರ್ಗ. ಈಗ ಅದು ಆಂಧ್ರಪ್ರದೇಶದ ಅನಂತಪುರದಲ್ಲಿದೆ. ಪ್ರಸನ್ನರ ಹುಟ್ಟು(23-2-1951) ಶಿವಮೊಗ್ಗ ಜಿಲ್ಲೆಯ ಆವನಟ್ಟಿಯ, ಇವರ ತಾಯಿತ ತವರಿನಲ್ಲಿ. ಕೆಳಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದವರು. ತಂದೆ ಆಸಿಸ್ಟೆಂಟ್ ಕಮೀಶನರ್‍ನವರ ಕಛೇರಿಯಲ್ಲಿ ಗುಮಾಸ್ತರಾಗಿದ್ದು ವರ್ಗಾವಣೆ, ಬಾಡಿಗೆ ಮನೆಗಳ ಕತೆಗಳನ್ನುಂಡವರು. ಪ್ರಸನ್ನ ಪ್ರಾಥಮಿಕ ಶಾಲೆಗೆ ಸೇರಿದ್ದು ಚಿತ್ರದುರ್ಗದಲ್ಲಿ. ಎಲ್ಲರಂತೆ ಈ ಬಾಲ್ ಒಂದನೆ ತರಗತಿಯಿಂದಲೇ ತನ್ನ ಶಿಕ್ಷಣವನ್ನು ಪ್ರಾರಂಭಿಸಲಿಲ್ಲ. ತನ್ನ ಪ್ರತಿಭೆ ಚುರುಕುತನಗಳಿಂದ ಮುಮ್ಮಡಿ ಬಡ್ತಿ ಪಡೆದು ನೇರವಾಗಿ ನಾಲ್ಕನೆ ಕ್ಲಾಸಿನಿಂದ ವಿದ್ಯಾಭ್ಯಾಸ ಆರಂಭಿಸಿದರು. ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರಿನಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಆನರ್ಸಗೆ ಸೇರಿಕೊಂಡರು. ಬೆಂಗಳೂರು ಪ್ರಸನ್ನರ ಬದುಕಿನ ಮಹತ್ವದ ತಿರುವಿಗೆ ಕಾರನವಾಯಿತು. ಅವರ ರಂಗ ಪ್ರೀತಿ ಅನಾವರಣಗೊಂಡ ಸ್ಥಳ. ನಂತರ ಬೆಂಗಳುರು ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ. (ಕೆಮಿಸ್ಟ್ರಿ-ಡಿಸ್ಟಿಂಕ್ಸನ್ ಬಂಗಾರದ ಪದಕ) ಪದವಿ ಪಡೆದರು. ಭಾರತದಲ್ಲೇ ಹೆಸರುವಾಸಿಯಾದ ಕಾನಪುರ ಇಂಡಿಯನ್ ಇನ್‍ಸ್ಟಿಸ್ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಡಾಕ್ಟೋರೇಟ್ ಸಂಶೋಧನೆಗಾಗಿ ಸೇರಿಕೊಂಡರು. ಆದರೆ ಈ ಮನುಷ್ಯನ ನಿಜವಾದ ಆಸ್ತೆ ವಿಜ್ಞಾನವಾಗಿರಲಿಲ್ಲ. ರಂಗಾಸಕ್ತಿ ಹಾಗೂ ಸಾಹಿತ್ಯ ಹೀಗಾಗಿ ನಾಟಕದ ಸೆಳೆತಕ್ಕೆ ಸಿಕ್ಕಿದ ಪ್ರಸನ್ನ ದಿಲ್ಲಿಯ ಎಸ.ಎಸ್.ಡಿ. (ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ)ಯಲ್ಲಿ ನಿರ್ದೇಶನ ವಿಷಯದಲ್ಲಿ ವಿಶೇಷ ಅಧ್ಯಯನ ಮಾಡಿ ಪದವಿ ಪಡೆದರು. ನಂತರ ಮರಳಿ ಬೆಂಗಳೂರಿಗೆ.

             ದಿಲ್ಲಿಯಲ್ಲಿ ಪ್ರಸನ್ನ 15 ವರ್ಷ ಸತತವಾಗಿ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾಥಿರ್üಗಳಿಗೆ ಹಿಂದಿ ಮತ್ತು ಇಂಗ್ಲೀಷ್‍ನಲ್ಲಿ ನಾಟಕ ಆಡಿಸಿದ್ದಾರೆ. ಈ ಎಲ್ಲಾ ನಾಟಕಗಳು ಪ್ರಸನ್ನರ ಕಲಾತ್ಮಕ ಮಹತ್ವದ ಘಟ್ಟಗಳು ಎಂಬುದನ್ನು ಮರೆಯುವಂತಿಲ್ಲ. ಅವರ ಹಲವು ಮಹತ್ವದ ಪ್ರಯೋಗಗಳು ಈ ವಿದ್ಯಾರ್ಥಿ ನಾಟಕಗಳ ಮೂಲಕವೇ ಮೈದಾಳಿತು. ಭವಭೂತಿಯ ‘ಉತ್ತರ ರಾಮ ಚರಿತ’ ಅವರದೇ ರಚನೆಯಾದ ‘ಗಾಂಧೀ ರಸಿಯನ್ ನಾಟಕ ‘ಪ್ಯೂಜಿಯಾಮಾ’ ಸ್ಟ್ರಿಂಡ್‍ಬರ್ಗನ ‘ದಿ ಫಾದರ್’ ಇತ್ಯಾದಿ ಪ್ರಯೋಗಗಳನ್ನು ಸ್ಮರಿಸಬಹದು.

                 ಪ್ರಸನ್ನ ಸಮಕಾಲೀನ ಕನ್ನಡ ರಂಗಭೂಮಿಯಲ್ಲಷ್ಟೇ ಅಲ್ಲ, ಭಾರತೀಯ ರಂಗಭೂಮಿಯಲ್ಲಿ ಒಬ್ಬ ದೇಶಿ ಪ್ರಜ್ಞೆಯ ನಿರ್ದೇಶಕ. ಇಡೀ ಮನುಷ್ಯಕುಲವೇ ಅಸಂಗತವಾದ ಧರ್ಮಯುದ್ಧದಲ್ಲಿ ಸಿಲುಕಿ ಸಾಯುವಂತಹ ಸಂದರ್ಭದಲ್ಲಿ ಪ್ರಸನ್ನ ನಿರಾಶರಾಗದೆ ಪರಂಪರೆ ಹಾಗೂ ಆಧುನಿಕತೆಗಳ ನಡುವೆ ಹೆಗ್ಗೂಡಿನಲ್ಲಿ ಒಂದಿಷ್ಟು ಹಿತಕರವಾದ ಅರ್ಥಪೂರ್ಣ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಜಾಗತೀಕರಣ ಬಹುರಾಷ್ಟ್ರೀಯ ಕಂಪನಿಗಳಿಂದ ಗ್ರಾಮಾಂತರ ಬದುಕು ಹಾಗೂ ಕೈಗಾರಿಕೆಗಳು ತತ್ತರಿಸಿ ಹೋಗುತ್ತಿರುವ ಸಂದಿಗ್ಧದಲ್ಲಿ ಹಳ್ಳಿಗರು, ಕುಶಲಕರ್ಮಿಗಳು ಒಬ್ಬೊಬ್ಬರಾಗಿ ಏನೂ ಮಾಡಲು ಸಾಧ್ಯ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಸನ್ನ ಕೈಗೊಂಡಿರುವ ಚರಕ, ದೇಸಿ ಯೋಜನೆಗಳು ಬಹು ಅರ್ಥಪೂರ್ಣವೆಂಬ ದೃಢ ನಂಬಿಕೆ ಎಲ್ಲರಲ್ಲಿ ಹುಟ್ಟಿದೆ. ಪ್ರಸನ್ನ ಎಂದೂ ದಂತ ಗೋಪುರದ ಶುಷ್ಕ ಬುದ್ಧಿ ಜೀವಿಯಲ್ಲ. ಸದಾ ಒಂದಲ್ಲ ಒಂದು ಕಾಯಕದ ಮಂತ್ರ ಕೈಯಲ್ಲಿ ಇದ್ದೇ ಇರುತ್ತದೆ.

                 ಪ್ರಸನ್ನರ ಸೃಜನಶೀಲತೆ ನಿತ್ಯ ಹರಿಯುವ ಹಳ್ಳ. ಇದು ಹತ್ತು ಹರಿವುಗಳಲ್ಲಿ ಗೊತ್ತುಗುರಿಯಿಲ್ಲದೆ ಹರಿಯುವ ಹಳ್ಳವಲ್ಲ. ಇದರ ಪ್ರತಿಯೊಂದು ಹರಿವಿಗೂ ಬಹು ಸ್ಪಷ್ಟವಾದ ನಡೆಯಿದೆ. ನೆಲೆಯಿದೆ. ಗುರಿಯಿದೆ. ಮೈಸೂರಿನಲ್ಲಿರುವ ‘ರಂಗಾಯಣ ಸಂಸ್ಥೆಗೆ ನಿರ್ದೇಶಕರಾದ ಮೇಲೆ ಆ ಸಂಸ್ಥೆಗೆ ಕೊಟ್ಟ ಒಂದು ಪೇಸ್‍ಲಿಪ್ಟ್ ಬಹು ವಿಶೇಷ. ಸಂಸ್ಥೆಗೆ ಅವರಿಂದ ಆ ಸ್ಥಾನಕ್ಕೊಂದು ಗ್ಲಾಮರ್ ಸಹ ಬಂತು. ಬಿ.ವಿ.ಕಾರಂತರ ನಂತರ ರಾಷ್ಟ್ರಮಟ್ಟದ ಪ್ರಸಿದ್ಧಿ ಮತ್ತು ರಂಗ ಸುಗ್ಗಿ ಮತ್ತು ಜನಪ್ರಿಯತೆಯನ್ನು ರಂಗಾಯಣಕ್ಕೆ ತಂದು ಕೊಟ್ಟ ಕೀರ್ತಿ ಪ್ರಸನ್ನ ಅವರದು. ದಿಲ್ಲಿಯ ಎನ್.ಎಸ್.ಡಿ. ಯ ನಮತರ ರಾಷ್ಟ್ರಮಟ್ಟದ ಪ್ರಸಿದ್ಧ ಸಂಸ್ಥೆಯನ್ನಾಗಿ ರಂಗಾಯಣವನ್ನೂ ಬೆಳೆಸಿದ ಕೀರ್ತಿ ಪ್ರಸನ್ನರಿಗೆ ಸಲ್ಲುತ್ತದೆ. ಪ್ರತಿ ವರ್ಷ ‘ಅಕ್ಕ’ ‘ಬಹುರೂಪಿ’ಯಂತಹ ರಂಗ ಹಬ್ಬವನ್ನು ಪ್ರಸನ್ನ ಪ್ರಾರಂಭಿಸಿದವರಿಂದ ಮೈಸೂರು ಹಾಗೂ ನಾಡಿನ ಹವಲು ಕಡೆಯಿಂದ ಜನ ರಂಗಾಯಣಕ್ಕೆ ಬರಲಾರಂಭಿದರು. ರಂಗಾಯಣದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಸನ್ನ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಸ್ವೀಡನ್ ಮತ್ತು ರಂಗಾಯಣದ ಮಧ್ಯೆ ಸಾಂಸತಿಕ ಸೇತುವೆಯನ್ನು ಕಟ್ಟುವುದರಲ್ಲಿ ಪ್ರಸನ್ನ ಬಹು ವಿಶೇಷ ಕೆಲಸ ಮಾಡಿದ್ದಾರೆ. ಇವುಗಳ ಫಲಗಳು ಬರುತ್ತಿರುವಾಗಲೇ ಪ್ರಸನ್ನ ರಂಗಾಯಣದಿಂದ ಹೊರಬಂದರು.

                  ಪ್ರಸನ್ನರವರು ಒಂದು ರೀತಿಯಲ್ಲಿ ಹಲವು ವೈರುದ್ಧ್ಯಗಳಿರುವ ವ್ಯಕ್ತಿತ್ವ. ಹಿಂದೆ ಮುಂದೆ ನೋಡದೆ ತಟಕ್ಕನೆ ಹೇಳುವ ಮನುಷ್ಯ. ಬಹು ನಿಷ್ಟುರವಾದಿ. ತುಂಬಾ ಸ್ವಾಭಿಮಾನಿ, ಆತ್ಮ ಗೌರವದ ಬಗ್ಗೆ ಸದಾ ಜಾಗೃತ, ತುಂಬ ಸೂಕ್ಷ್ಮಜ್ಞ, ಅಷ್ಟೇ ಸಂವೇದನಾಶೀಲಾ. ತಮ್ಮ ಸಿದ್ಧಾಂತಗಳಿಗೆ ಧಕ್ಕೆ ಆದಾಗ ಅವುಗಳಿಂದ ತಾವಾಗಿಯೇ ಹೊರಬರುತ್ತಾರೆ. ಇದು ರಾಜಿಗಳ ಕಾಲ. ಪ್ರಸನ್ನರಿಗೆ ಇದು ಮಾತ್ರ ಆಗದ ಸಂಗತಿ. ರಂಗಾಯಣವನ್ನು ಅಧಿಕಾರಾವಧಿಗಿಂತ ಮುಂಚೆಯೇ ಬಿಟ್ಟು ಬರಲು ಇದೇ ಕಾರಣ. ವ್ಯವಸ್ಥೆಯ ಸಂಗಡ ರಾಜಿ ಮಾಡಿಕೊಳ್ಳಲು ಕಷ್ಟವಾದಾಗ ಧುತ್ತನೆ ರಾಜಿನಾಮೆ ನೀಡಿ ಹೊರಬಂದರು. 1987-89ರಲ್ಲಿ ಪ್ರಸನ್ನ ದಾಲ್ಮಿಯ ಗುಂಪಿನ ಇಡಿಪೆಂಡೆಂಟ್ ಟೆಲಿವಿಜನ್‍ನಲ್ಲಿ ಕಂಪನಿಯ ಮುಖ್ಯಸ್ಥನಾಗಿ ಕೆಲಸ ಮಾಡಿದರು. ಭಾರತದಲ್ಲಿ ಪ್ರಪ್ರಥಮವಾಗಿ ಟಿ.ವಿ. ಕಾರ್ಯಕ್ರಮ ಮಾಡುವ ಬಹು ಪ್ರಸಿದ್ಧ ಮೊದಲ ಕಂಪನಿ. ಇವರ ಹುದ್ದೆಗೆ ಸರ್ವಾಕರ್ಷಣೆ ಇತ್ತು. ಎಲ್ಲಾ ಸೌಕರ್ಯಗಳ ಸಂಗಡ 25,000/- ರೂ. ಸಂಬಳ. ಪ್ರಸನ್ನ ಕಂಪನಿಗೆ ಪ್ರವೇಶ ಮಾಡುವಾಗ ಆ ಕಂಪನಿ ಪ್ರತಿ ತಿಂಗಳು 5 ಲಕ್ಷ ರೂ. ನಷ್ಟ ಅನುಭವಿಸುತ್ತಿತ್ತು. ಇವರು ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಿನಲ್ಲಿ ಅನೇಕ ಉಳಿತಾಯ ನೀತಿಗಳ ಮೂಲಕ ಕಂಪನಿ ಲಾಭದಾಯಕವಾಗಿ ಗಟ್ಟಿ ನಿಲ್ಲುವಂತೆ ಮಾಡಿದರು. ಆದರೆ ಪ್ರಸನ್ನರಿಗೆ ಒದಗಿಸಿದ್ದ ಪಂಚತಾರ ಜೀವನ ಶೈಲಿ, ವಿಮಾನ ಹಾರಾಟಗಳು ಅಲ್ಲದೆ ಪದೆ ಪದೆ ಆಗುತ್ತಿದ್ದ ಪ್ರೆಸ್‍ಮೀಟ್‍ಗಳು, ಸ್ಟೇಟ್ ಮೆಂಟ್ಸ್‍ಗಳ ತಯಾರಿ- ಇಂತಹ ಹತ್ತು ಹಲವು ಕಾರಣಗಳಿಂದ ತನ್ನ ಸೃಜನಶೀಲತೆ ಕರಗಿ ಕಂಗಾಲು ಆದೀತೆಂಬ ಹೆದರಿಕೆಯಿಂದ ತಕ್ಞಣ ರಾಜಿನಾಮೆ ಕೊಟ್ಟು ಹೊರಬಂದ ವ್ಯಕ್ತಿ. ತಾನು ಪ್ರವೇಶ ಮಾಡುವ ಯಾವುದೇ ಸಂಸ್ಥೆಯಾಗಲಿ ಪ್ರಸನ್ನ ಅದನ್ನು ಸುಧಾರಿಸಿಯೇ ಹೊರಗೆ ಬರುವ ಮನುಷ್ಯ. ಹೊರಗೆ ಬಂದ ಮೇಲೆ ಯಾವ ರಿಗ್ರೆಟ್ಸ್ ಇರುವುದಿಲ್ಲ. ಯಾವುದೇ ಕೆಲಸ ಹಚ್ಚಿಕೊಂಡಾಗ ತುಂಬ ಇಂಟೆನ್ಸ್ ಆಗಿ ತಗೋತ್ತಾರೆ. ಕೆಲಸದಲ್ಲಿ ಕೇವಲ ದೈತ್ಯ. ಇವರ ಕೆಲಸದ ವೇಗಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಸಹ ಕೆಲಸಗಾರರಿಗೆ ಸುಲಭವಲ್ಲ. ಇವರು ಕೆಲಸಗಾರರಿಂದ ಬಹಳಷ್ಟು ನಿರೀಕ್ಷಿಸುತ್ತಾರೆ. ಗ್ರಹಿಕೆ ಬಹುಬೇಗ. ಅಂತೆಯೇ ಸಿಟ್ಟು ಸಹ. ಹಿಂದೆಲ್ಲಾ ಸಿಟ್ಟು ಅವರಿಗಿಂತ ಮುಂದೆ ಇರುತ್ತಿತ್ತು. ಈಗ ಬದುಕು ಮಾಗಿದೆ. ಅನುಭವ ಮುಂಗೋಪವನ್ನು ಪಳಗಿಸಿದಿದೆ. ಆದರು ಪ್ರಸನ್ನರ ಸಿಟ್ಟಿಗೆ ಇತಿಹಾಸವಿದೆ. ಒಬ್ಬ ದೊಡ್ಡ ಕಲಾವಿದನಿಗೆ ಸಿಟ್ಟು ಮುಂಗೋಪ ಒತ್ತಡಗಳನ್ನು ಸಹ ಸೃಜನಶೀಲ ಪ್ರಕ್ರಿಯೆ ಚಾನಲೈಟ್ ಮಾಡುವ ಶಕ್ತಿಯನ್ನು ಹೊಂದಿದ್ದಾರೆ. ಸ್ನೇಹಿತರ ಮಧ್ಯದಲ್ಲಿ ಇರುವಾಗಲೂ ಕಾಡು ಹರಟೆ ಅನಿಸಿದರೆ ಸೌಜನ್ಯದಿಂದ ತಕ್ಷಣ ಎದ್ದು ಬಿಡುವ ವ್ಯಕ್ತಿ. ಪರಸ್ಪರ ಗೌರವದ ಪ್ರಾಂಜರ ಸ್ನೇಹಕ್ಕೆ ಬಾಗುತ್ತಾರೆ. ಪ್ರಸನ್ನರದೇ ಒಂದು ವಿಶಿಷ್ಟ ವ್ಯಕ್ತಿತ್ವ. ಮಧ್ಯಮ ಎತ್ತರ, ಗೌರವರ್ಣ, ಬೊಕ್ಕತಲೆ, ಕಪ್ಪುಮಿಶ್ರಿತ ಬಿಳಿಗಡ್ಡ, ಚುರುಕು ಕಣ್ಣುಗಳು. ಆಗೊಮ್ಮೆ ಈಗೊಮ್ಮೆ ಬರುವ ಮುಗಳನಗೆ, ಸದಾ ಕೈಮಗ್ಗದ ಬಟ್ಟೆ-ಇವೆಲ್ಲಾ ಪ್ರಸನ್ನ.

ನಾಟಕಗಳು- ರಂಗಪ್ರಯೋಗಗಳು:

                    ಪ್ರಸನ್ನ ಸುಮಾರು 40 ನಾಟಕಗಳಿಗಿಂತಲೂ ಹೆಚ್ಚು ನಿರ್ದೇಶಿಸಿದ್ದಾರೆ. ಒಬ್ಬ ದೊಡ್ಡ ಕಲಾವಿದನಿಗೆ ಸುಮಾರು 50 ನಾಟಕಗಳು ಹೆಚ್ಚಲ್ಲವೆನಿಸಿದರೂ ಪ್ರಸನ್ನರಂತಹ ಸೃಜನಶೀಲ ವ್ಯಕ್ತಿಗೆ ಇದು ಕಡಿಮೆಯೇನಲ್ಲ. ಹತ್ತು ಹಲವು ವಿಚಾರಗಳಿಗೆ ವಿನ್ಯಾಸ ಕೊಡುವುದರಲ್ಲಿಯೇ ಹೆಚ್ಚು ಮಗ್ನರಾಗಿರುತ್ತಾರೆ. ಮನೆಯನ್ನು ಕಟ್ಟುವಾಗ, ಕಟ್ಟಿಸುವಾಗ, ಬಟ್ಟೆ ನೇಯುಸುವಾಗ, ಕುರ್ಚಿ ಮಾಡುವಾಗ, ಮಾಡಿಸುವಾಗ ಇವರಿಗೆ ಒಳ್ಳೆಯ ಪದ್ಯ ಬರೆದಾಗ ಸಿಗುವ ಸುಖದಷ್ಟೆ ಸುಖ. ಇವರ ಬದುಕಿನಲ್ಲಿ ಹೆಚ್ಚಿನ ಭಾಗ ಸಂಘಟನೆ ನುಂಗಿದೆ. ಸಂಘಟನೆ ಸಹ ಪ್ರಸನ್ನರ ಒಂದು ಹವ್ಯಾಸ. ಇವರ ನಿರ್ದೇಶಿಸಿದ ನಾಟಕಗಳಲ್ಲಿ ‘ತುಘಲಕ್’, ‘ಪ್ಯೂಜಿಯಾಮಾ’, ‘ಹುಲಿಯ ನೆರಳು’ ‘ಗಾಂಧೀ’, ‘ಉತ್ತರ ರಾಮ ಚರಿತ’, ‘ತಾಯಿ’, ‘ಗೆಲಿಲಿಯೋ’- ಇವೆಲ್ಲಾ ಸದಾ ನೆನಪಿನಲ್ಲಿರುವ ನಾಟಕಗಳು. ಪ್ರಸನ್ನ ಯಾವುದೇ ಭಾಷೆಯ, ಕಾಲದ ನಾಟಕಗಳನ್ನು ಕೈಗೆತ್ತಿಕೊಂಡರೂ ತನ್ನ ಸಮಕಾಲೀನ ಸಾಂಸತಿಕ ಸಂದರ್ಭಕ್ಕೆ ಪ್ರಸ್ತುತವಾಗುವಂತೆ ಪ್ರಯೋಗಗಳನ್ನು ಸಿದ್ಧಪಡಿಸುತ್ತಾರೆ. ‘ಒಂದು ಲೋಕದ ಕತೆ’, ‘ದಂಗೆಯ ಮುಂಚಿತ ದಿನಗಳು’, ‘ತದ್ರೂಪಿ’, ‘ಮಹಿಮಾಪುರ’ ‘ಉಲಿ’, ‘ಜಂಗಮ ಬದುಕು’, ‘ಹದ್ದು ಮೀರಿದ ಹಾದಿ’, ‘ಮನ್ಮಥ ವಿಜಯ’- ಇವರು ಬರೆದಿರುವ ಪ್ರಮುಖ ನಾಟಕಗಳು. ‘ನೌಟಂಕಿ’ ‘ಸ್ವಯಂವರ’ ಕಾದಂಬರಿಗಳ ಸಂಗಡ ‘ಮಾಗಿ’, ‘ದೇವದಾರು’, ಕವನ ಸಂಕಲನಗಳು ಬಂದಿವೆ. ‘ಮುಕ್ತ’ ‘ರುಜುವಾತು’ ಪತ್ರಿಕೆಗಳನ್ನು ಸಂಪಾದಿಸಿದ ಹಾಗೆ ‘ಜರ್ನಲ್ ಆಪ್ ಆಟ್ರ್ಸ್ ಆ್ಯಂಡ್ ಐಡಿಯಾಸ’ ಎಂಬ ಇಂಗ್ಲೀಷ್ ಪತ್ರಿಕೆಯನ್ನು ಸಂಪಾದಿಸಿದ್ದರು. ಇಂಗ್ಲೀಷ್‍ನ್ನು ಬಹು ಸಹಜವಾಗಿ ಸಂಪಾದಿಸಿಕೊಂಡಿರುವ ಪ್ರಸನ್ನ ಬಹಳ ಕಷ್ಟಪಟ್ಟು ಸಂಪಾದಿಸಿಕೊಂಡಿದ್ದಾರೆ. ‘ಒಂಟಿದನಿ’ ಎಂಬ ಪ್ರಕಾಶವನ್ನು ಪ್ರಾರಂಭಿಸಿ ಅದರಲ್ಲಿ ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ಸಾಗರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ನೆರವಿನಿಂದ ಪ್ರಾರಂಭಿಸಿರುವ ‘ಪುಸ್ತಕದ ಅಂಗಡಿ’ ಬಹು ಸುಂದರ ಮಾತ್ರವಲ್ಲದೆ ಅವರ ಕನಸಿಗೊಂದು ಮಾದರಿ. ಪ್ರತಿಷ್ಠಿತ ಇಂಗ್ಲೀಷ್ ಪತ್ರಿಕೆಗಳಿಗೆ ಲೇಖನ ಬರೆಯುವ ಪ್ರಸನ್ನಗೆ ಕನ್ನಡ ಹಾಗೂ ಇಂಗ್ಲೀಷ್ ಬರಹಕ್ಕೆ ಬಹುಸ್ಪಷ್ಟ ಲಯ, ಅನ್ನಿಸಿದನ್ನು ತಕ್ಷಣವನ್ನು ಹೇಳುವ ಜಾಯಮಾನವಿದೆ. ಅಕ್ಷರ ನಿಷ್ಪವಾದ ಪರಿಯಲ್ಲಿಯೇ ಸಂಸತಿ ನಿಷ್ಪವೂ ಆಗಿರುವುದೇ ಅವರ ಬರಹದ ವೈಶಿಷ್ಟ್ಯ. ಸಾಮಾನ್ಯವಾಗಿ ಪ್ರಸನ್ನರವರನ್ನು ‘ಸಮುದಾಯ’ ದಿಂದ ಗುರಿತಿಸುವುದುಂಟು. ಕೇವಲ ‘ಕಥೆಗಾಗಿ ನಾಟಕ’ ಎನ್ನುವುದರಿಂದ ರಂಗಭೂಮಿ ಬೆಳೆಯುವುದಿಲ್ಲ. ಸಮುದಾಯಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಅದನ್ನು ದುಡಿಸಿಕೊಳ್ಳಬೇಕೆನ್ನುವುದು ಯೋಚಿಸುತ್ತಿದ್ದ ಕಾಲದಲ್ಲಿಯೇ ಸಮಾನ ಮನಸ್ಕರೆಲ್ಲಾ ಸೇರಿ ‘ಸಮುದಾಯ’ ವನ್ನು ಹುಟ್ಟುಹಾಕಿದರು. ಆಗ ಪ್ರಸನ್ನ ರೂಪಿಸಿದ ಸಾಂಸರಿಕ ಜಾಥಾ ಎಂಬ ಗುರಿ ಹೊತ್ತು ಈ ಜಾಥಾ ಸರ್ವಾಧಿಕಾರಿ ಶಕ್ತಿ ವಿರುದ್ಧ ನಡೆಸಿದ ಜನಜಾಗೃತಿ ಕಾರ್ಯಕ್ರಮ. ಈ ಮಧ್ಯೆ ನಾಲ್ಕೈದು ಹಿಂದಿ ಟೆಲಿಚಿತ್ರಗಳನ್ನು ನಿರ್ದೆಶಿಸಿದ್ದಾರೆ. ಡಾ|| ಲೋಹಿಯಾ, ಡಾ|| ವಿ.ಕೃ ಗೋಕಾಕ್, ಭರತೇಂದು ಹರಿಶ್ಚಂದ್ರರ ಬಗೆಗಿನ ‘ಕಾಲೆ ಹರಖ್‍ಚಂದ್ ಕೀ ಡ್ಯೌಢೀ’ ಮುಖ್ಯವಾದದ್ದು. ಬ್ಲೂ ಹಾರ್ಸಸ್ ಆನ್ ರೆಡ್ ಗ್ರಾಸ್’ ಎಂಬ ಮಿಖ್ಯೆಲ್ ಶಾತ್ರೋವ್‍ನ ನಾಟಕ “ಲಾಲ್ ಘಾಸ್ ಪರ್ ನೀಲೇ ಘೋಡೇ” (ಕೆಂಪು ಹುಲ್ಲಿನ ಮೇಲೆ ನೀಲಿ ಕುದುರೆಗಳು) ಎಂಬ ಟೆಲಿಚಿತ್ರವನ್ನು ಸಿದ್ಧಮಾಡಿದ್ದಾರೆ. ಇಷ್ಟರಲಿ ಸಾಧಿಸಿದ್ಧು ಒಂದಲ್ಲ ಎರಡಲ್ಲ. ಜನಮನ್ನಣೆಯ ಸಂಗಡ ಕೆಲವು ಪ್ರಶಸ್ತಿಗಳು ಬಂದಿವೆ. ಯುವ ನಾಟಕಕಾರ ಫೆಲೋಶಿಪ್ (1981-83) ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಹೊಸದಿಲ್ಲಿ. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ, ಬೆಂಗಳೂರು- ಇದು ಪ್ರಸನ್ನರ ಎರಡು ನಾಟಕ ಕೃತಿಗಳಿಗೆ ಪುಸ್ತಕ ಬಹುಮಾನ ನೀಡಿದೆ. “ತದ್ರೂಪಿ(1982) “ ಮಹಿಮಾಪುರ” (1987) ಕಲ್ಕತ್ತೇಯ ನಂದಿಕಾರ ಪ್ರಶಸ್ತಿ (97-98) ನಿರ್ದೇಶನಕ್ಕಾಗಿ ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಹೊಸದಿಲ್ಲಿ’ ಪ್ರಶಸ್ತಿ(2000), ಕರ್ನಾಟಕ ರಾಜ್ಯ ಪ್ರಶಸ್ತಿ, ಶ್ರೀ ಶಿವಕುಮಾರ ಪ್ರಶಸ್ತಿ- ಹೀಗೆ ಈ ಪಟ್ಟಿ ಸಾಗುತ್ತೆ.

               ಹೆಗ್ಗೋಡು ಬಹು ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ಅದೆಷ್ಟು ರೀತಿಯ ಸೃಜನಶೀಲ ಕೆಲಸಗಳು, ಚಿಂತನೆಗಳು, ಚಳುವಳಿಗಳು! ಒಂದಲ್ಲ ಎರಡಲ್ಲ. ಹೆಗ್ಗೊಡೇ ಹಾಗೆ.