Melukote

ಮೇಲುಕೋಟೆ

ದಕ್ಷಿಣದಲ್ಲೇ ಏಕೆ ಸಮಗ್ರ ಭಾರತದಲ್ಲೇ ವಿಶಿಷ್ಟವಾಗಿ ಕರ್ನಾಟಕದಲ್ಲಿ ವಿರಾಜಿಸುವ ಪವಿತ್ರ ಕ್ಷೇತ್ರ ಮೇಲುಕೋಟೆ. ಇದು ಕಾವೇರಿ ನದಿಗೆ ಉತ್ತರದಲ್ಲಿ, ನಾರಾಯಣಗಿರಿಯ ಮೇಲೆ ವಿರಾಜಿಸುತ್ತಿದೆ. ಮೇಲುಕೋಟೆಯು ಸಮುದ್ರ ಮಟ್ಟಕ್ಕಿಂತ ಸುಮಾರು 3 ಸಾವಿರ ಅಡಿಗಳ ಎತ್ತರದ ಬೆಟ್ಟದ ಮೇಲೆ ಒಳ್ಳೆಯ ಪ್ರಕೃತಿ ರಮ್ಯತೆಯಿಂದ ಕೂಡಿ ದಿನವೂ ಅಧಿಕ ಸಂಖ್ಯೆಯಲ್ಲಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಿದೆ. ಇಲ್ಲಿಯ ಆರಾಧ್ಯ ದೇವತೆ ಶ್ರೀ ಚೆಲುವನಾರಾಯಣ. 

ಈ ಕ್ಷೇತ್ರ ಬೆಂಗಳೂರಿನಿಂದ 140 ಕಿ.ಮೀ.ಗಳ ದೂರದಲ್ಲಿದ್ದು, ಮಂಡ್ಯದವರೆಗೂ ರೈಲುಮಾರ್ಗದ ಸೌಲಭ್ಯವಿದ್ದು ಅಲ್ಲಿಂದ ವಾಹನಗಳ ಮೂಲಕ ಮೇಲುಕೋಟೆ ತಲುಪಬಹುದು. ಮಂಡ್ಯದಿಂದ ಮೇಲುಕೋಟೆಗೆ 36 ಕಿ.ಮೀ. ದೂರವಿದೆ.

ಬೆಂಗಳೂರಿನಿಂದ ಬರುವವರು ಬೆಳ್ಳೂರು, ನಾಗಮಂಗಲ ಮೂಲಕವಾಗಿಯೂ ಸಹ ಮೇಲುಕೋಟೆ ತಲುಪಬಹುದು. ನಾಗಮಂಗಲದಿಂದ 24 ಕಿ.ಮೀ. ದೂರದಲ್ಲಿದೆ. ಹಾಸನ, ಮಡಿಕೇರಿಯಿಂದ ಬರುವವರು ಕೆ.ಆರ್.ಪೇಟೆ ಮೂಲಕ ಮೇಲುಕೋಟೆ ತಲುಪಬಹುದು. ಕೆ.ಆರ್.ಪೇಟೆ ಮೇಲುಕೋಟೆಯಿಂದ 24 ಕಿ.ಮೀ. ಗಳ ಅಂತರದಲ್ಲಿದೆ. ಮೈಸೂರಿನಿಂದ ಪಾಂಡವಪುರ ಜಕ್ಕನಹಳ್ಳಿ ಮಾರ್ಗವಾಗಿ ಮೇಲುಕೋಟೆ ತಲುಪಬಹುದು. ಮೈಸೂರು-ನಾಗಮಂಗಲ ಮಾರ್ಗದಲ್ಲಿ ಜಕ್ಕನಹಳ್ಳಿಯಿಂದ ಪಶ್ಚಿಮಕ್ಕೆ 7 ಕಿ.ಮೀ. ಅಂತರದಲ್ಲಿ ಎತ್ತರವಾದ ಬೆಟ್ಟದ ಮೇಲೆ ಮೇಲುಕೋಟೆ ಇದೆ.

ಮೇಲುಕೋಟೆ ಒಂದು ಹೋಬಳಿಕೇಂದ್ರವಾಗಿದ್ದು ಇತ್ತೀಚೆಗೆ ವಿಧಾನಸಭಾ ಕ್ಷೇತ್ರವಾಗಿದೆ. ಮೇಲುಕೋಟೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಎರಡು ಪ್ರವಾಸಿ ಬಂಗಲೆಗಳು, ಹಲವಾರು ಛತ್ರಗಳು, ಕಾಲೇಜುಗಳು, ಶಾಲೆಗಳು ಇದ್ದೂ ಪ್ರವಾಸಿಗರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕ್ಷೇತ್ರವಾಗಿದೆ. ದೇವಾಲಯದಲ್ಲಿ ಉಚಿತ ಪ್ರಸಾದದ ವ್ಯವಸ್ಥೆಯೂ ಸಹ ಇದೆ. 

ಪೌರಾಣಿಕ ಹಿನ್ನೆಲೆಯಲ್ಲಿ ಮೇಲುಕೋಟೆ

ಪುರಾಣಗಳ ಪ್ರಕಾರ ಸಹ್ಯಪರ್ವತಕ್ಕೆ ಪೂರ್ವದಲ್ಲಿಯೂ, ಕಾವೇರಿನದಿಗೆ ಉತ್ತರದಲ್ಲಿಯೂ, ಗಂಗಾ ನದಿಗೆ ದಕ್ಷಿಣದಲ್ಲಿ ಮೇಲುಕೋಟೆ ಎತ್ತರವಾದ ಗಿರಿಶಿಖರಗಳಿಂದ ಶೋಭಿಸುತ್ತಿದೆ. ಸಾಕ್ಷಾತ್ ಆದಿಶೇಷನ ಶರೀರದಂತೆ ಭಾಸವಾಗುತ್ತದೆ. ಕೃತಯುಗದಲ್ಲಿ ಆದಿಶೇಷ ಇಲ್ಲಿ ತಪಸ್ಸನ್ನು ಮಾಡಿ ಸಿದ್ಧಿಯನ್ನು ಪಡೆದನು. ಇಲ್ಲಿ ದತ್ತಾತ್ರೇಯರು ವೇದಗಳನ್ನು ಪ್ರವಚನ ಮಾಡಿದರು. ಆದ್ದರಿಂದ ಇದಕ್ಕೆ ವೇದಾದ್ರಿಯೆಂದೂ, ತ್ರೇತಾಯುಗದಲ್ಲಿ ನಾರಾಯಣಾದ್ರಿ ಎಂದೂ, ದ್ವಾಪರಯುಗದಲ್ಲಿ ಶ್ರೀಕೃಷ್ಣ ಬಲರಾಮರಿಂದ ಪೂಜೆಗೊಂಡು ಯಾದವಾದ್ರಿಯೆಂದೂ, ಕಲಿಯುಗದಲ್ಲಿ ಯತಿಶ್ರೇಷ್ಠರಾದ ಆಚಾರ್ಯ ಶ್ರೀ ರಾಮಾನುಜರಿಂದ ಜೀರ್ಣೋದ್ಧಾರಗೊಂಡು ಈ ಮೇಲುಕೋಟೆಯು ಯತಿಶೈಲವೆಂದೂ ಪ್ರಸಿದ್ಧವಾಗಿದೆ.

ನಾರಾಯಣನಿಗೆ ವೈಕುಂಠಕ್ಕಿಂತಲೂ ಅತ್ಯಂತ ಪ್ರಿಯತಮವಾದ ಸ್ಥಳವಾಗಿರುವುದರಿಂದ ಹಾಗೂ ಎಲ್ಲಾ ಕಾಲದಲ್ಲಿಯೂ ನಾರಾಯಣನೂ ನೆಲೆಸಿರುವುದರಿಂದ ದಕ್ಷಿಣ ಬದರಿ ಕ್ಷೇತ್ರವೆಂದೂ, ವೈಕುಂಠವರ್ಧನ ಕ್ಷೇತ್ರವೆಂದೂ, ದಕ್ಷಿಣ ಬದರಿಕಾಶ್ರಮವೆಂದೂ ಪುರಾಣಗಳಲ್ಲಿ ಕೊಂಡಾಡಲ್ಪಟ್ಟಿದೆ. ಈ ಕ್ಷೇತ್ರದ ಪ್ರಮುಖ ಆಕರ್ಷಣೆ ಎಂದರೆ ಶ್ರೀ ಚೆಲುವನಾರಾಯಣಸ್ವಾಮಿ ದೇವಸ್ಥಾನ.

ಶ್ರೀ ಚೆಲುವರಾಯ ಸ್ವಾಮಿ ದೇವಾಲಯ ಪೌರಾಣಿಕ ಹಿನ್ನೆಲೆ: 

ಅನೇಕ ಪುರಾಣಗಳಲ್ಲಿ ಮೇಲುಕೋಟೆಯ ಮಹಾತ್ಮೆಯು ವಿಸ್ತಾರವಾಗಿ ಹೇಳಲ್ಪಟ್ಟಿದ್ದರೂ, ಪ್ರಸ್ತುತ ಈ ವಿವರವನ್ನು ದೇವಾಲಯದಲ್ಲಿ ನಿತ್ಯಪಾರಾಯಣವಾಗುತ್ತಿರುವ ನಾರದೀಯ ಪುರಾಣದ ಜ್ಞಾನಕಾಂಡದಿಂದ ಆರಿಸಿಕೊಳ್ಳಲಾಗಿದೆ.

ಶ್ರೀ ತಿರುನಾರಾಯಣ ಮೂರ್ತಿ ಈ ಕ್ಷೇತ್ರಕ್ಕೆ ಬಂದದ್ದು:

ಪೂರ್ವಕಾಲದಲ್ಲಿ ಋಷಿಗಳೆಲ್ಲರೂ ನಾರಾಯಣನನ್ನು ಯಾದವಗಿರಿ ಮಹಾತ್ಮೆಯನ್ನು ಹೇಳಬೇಕೆಂದು ಪ್ರಾರ್ಥಿಸಿದರು. ಅವರ ಪ್ರಾರ್ಥನೆಗೆ ಓಗೊಟ್ಟ ಭಗವಂತನು ನಾರದನಿಗೆ ಯಾದವಗಿರಿ ಮಹಾತ್ಮೆ ಹೇಳಲು ಆದೇಶಿಸಿದನು. ಅದರಂತೆ ನಾರದನು ಈ ಯಾದವಗಿರಿ ಮಹಾತ್ಮೆಯನ್ನು ಋಷಿಗಳಿಗೆ ಉಪದೇಶಿಸಿದನು : ಒಂದು ಕಾಲದಲ್ಲಿ ಸೃಷ್ಟಿಕರ್ತನಾದ ಚತುರ್ಮುಖ ಬ್ರಹ್ಮನು, ಸೃಷ್ಟಿಯ ಪ್ರೇರಣೆಗಾಗಿ ಹಾಗೂ ತಾನು ಸದಾಕಾಲ ಆರಾಧಿಸುವುದಕ್ಕೆ ಒಂದು ಅರ್ಚಾಮೂರ್ತಿಯನ್ನು ಕರುಣಿಸಲು ಮಹಾವಿಷ್ಣುವನ್ನು ಕೇಳಲು, ಪರಮಾತ್ಮನು ತನ್ನ ಹೃದಯ ಕಮಲದಿಂದ ಈಗ ಮೇಲುಕೋಟೆಯಲ್ಲಿ ಪ್ರತಿಷ್ಠಿತವಾಗಿರುವ ನಾರಾಯಣಮೂರ್ತಿಯನ್ನು ಬ್ರಹ್ಮನಿಗೆ ಅನುಗ್ರಹಿಸಿದನು. ತನಗೆ ಸಾಕ್ಷಾತ್ಕಾರವಾದ ಈ ದೇವರನ್ನು ಶ್ರೀನಾರಾಯಣನೆಂದು, ಬ್ರಹ್ಮದೇವನು ಬಹಳ ಕಾಲ ಸೇವೆ ಸಲ್ಲಿಸುತ್ತಿದ್ದನು. ಆ ತಿರುನಾರಾಯಣದೇವರು ಆನಂದಮಯ ದಿವ್ಯವಿಮಾನದಲ್ಲಿ ವಿರಾಜಮಾನರಾಗಿದ್ದರು. ಅನೇಕ ಕಲ್ಪಗಳವರೆಗೆ ಬ್ರಹ್ಮ ಮತ್ತು ಸರಸ್ವತಿಯರು ಈ ಮೂರ್ತಿಯನ್ನು ಭಕ್ತಿಶ್ರದ್ಧೆಗಳಿಂದ ಆರಾಧಿಸುತ್ತಿದ್ದರು.

ಒಮ್ಮೆ ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬರಾದ ಸನತ್ಕುಮಾರರಿಗೆ ಅವರ ಇಚ್ಛೆಯಂತೆ ಈ ಮೂರ್ತಿಯನ್ನು ಬಿಜಯ ಮಾಡಿಸಿಕೊಟ್ಟನು. ಸನತ್ಕುಮಾರನು ಭೂಲೋಕದಲ್ಲಿ, ದಕ್ಷಿಣದ ಈ ಗಿರಿಗೆ ತಂದು ಮೂರ್ತಿಯನ್ನು ಸ್ಥಾಪನೆ ಮಾಡಿ ಆನಂದಮಯ ವಿಮಾನವೆಂದೂ, ಈ ಗಿರಿಗೆ ನಾರಾಯಣಾದ್ರಿ ಎಂದು ಹೆಸರಿಸಿ ಪೂಜೆ ಮಾಡಿಕೊಂಡು ಬಂದರು. ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಿದ ಸನತ್‍ಕುಮಾರನು ತನ್ನ ತಮ್ಮಂದಿರಾದ ಸನಕ, ಸನತ್‍ಸುಜಾತ, ಸನಂದನರ ಜೊತೆಯಲ್ಲಿ ಬಹಳಕಾಲ ಆರಾಧಿಸುತ್ತಿದ್ದನು.

ಉತ್ಸವಮೂರ್ತಿ ಈ ಕ್ಷೇತ್ರಕ್ಕೆ ದಯಮಾಡಿಸಿದ್ದು

ಬ್ರಹ್ಮನು ಈ ತಿರುನಾರಾಯಣ ಮೂರ್ತಿಯನ್ನು ತನ್ನ ಪುತ್ರನಿಗೆ ಬಿಜಯ ಮಾಡಿಸಿ ಕೊಟ್ಟ ತರುವಾಯ, ಪೂಜೆಗೆ ಮತ್ತೊಂದು ಮೂರ್ತಿಯನ್ನು ಅನುಗ್ರಹಿಸುವಂತೆ ಬ್ರಹ್ಮನು ಪ್ರಾರ್ಥಿಸಲಾಗಿ ನಾರಾಯಣನು ಆತನಿಗೆ ತನ್ನ ಹೃದಯ ಕಮಲದಿಂದ ಶ್ರೀ ಭೂನೀಳಾ ಸಹಿತವಾದ ಒಂದು ಮೂರ್ತಿಯನ್ನು ಬಿಜಯ ಮಾಡಿಕೊಟ್ಟನು. ಅದು ಅವನ ಆರಾಧನೆಯಲ್ಲಿ ಬಹಳ ಕಾಲವಿದ್ದು, ರಾಮಾವತಾರ ಕಾಲದಲ್ಲಿ ಭೂಲೋಕಕ್ಕೆ ದಯಮಾಡಿಸಿತು.

ರಾಮಾಯಣದ ರಾಮರಾವಣರ ಯುದ್ಧದ ನಂತರ ವಿಭೀಷಣನು ಲಂಕೆಯ ರಾಜನಾದನು. ಅವನು ಶ್ರೀರಾಮರ ಬಳಿ ಇದ್ದ, ಶ್ರೀರಂಗದ ರಂಗನಾಥನನ್ನು ತನಗೆ ಕೊಡುವಂತೆ ಪ್ರಾರ್ಥಿಸಿದನು. ಶ್ರೀರಾಮನು ವಿಭೀಷಣನ ಅಪೇಕ್ಷೆಯಂತೆ ಶ್ರೀರಂಗದ ರಂಗನಾಥನನ್ನು ಅವನಿಗೆ ಬಿಜಯ ಮಾಡಿಸಿ ಕೊಟ್ಟ ಮೇಲೆ ತನ್ನ ಪೂಜೆಗೆ ದೇವರಿಲ್ಲದೇ ಚಿಂತಿಸುತ್ತಿದ್ದನು. (ಶ್ರೀರಾಮನೇ ಸಾಕ್ಷಾತ್ ಪರಮಾತ್ಮನಾದರೂ ಭೂಲೋಕದಲ್ಲಿ ಮನುಷ್ಯ ಅವತಾರಿಯಾದ. ಇಲ್ಲಿ ತಾನೂ ಕೂಡ ಹಾಗೆಯೇ ಇದ್ದು ಜನರಲ್ಲಿ ಭಕ್ತಿಭಾವ ಬೆಳೆಯಲು ಕಾರಣನಾದನು).

ಇದನ್ನು ಕಂಡ ಬ್ರಹ್ಮನು ತಾನು ಇಟ್ಟು ಪೂಜಿಸುತ್ತಿದ್ದ ಚೆಲುವರಾಯನ ಈ ಮೂರ್ತಿಯನ್ನು, ಇದೊಂದು ದೈವಲೀಲೆಯೆಂದು ಶ್ರೀರಾಮನಿಗೆ ಸಮರ್ಪಿಸಿಬಿಟ್ಟನು. ಅಂದಿನಿಂದ ಶ್ರೀರಾಮನು ಈ ಚೆಲುವನಾರಾಯಣ ಮೂರ್ತಿಯನ್ನು ಪ್ರೇಮದೊಡನೆ ಆರಾಧಿಸುತ್ತಿದ್ದುದರಿಂದ ಈ ಮೂರ್ತಿಗೆ ರಾಮಪ್ರಿಯನೆಂದೇ ಹೆಸರಾಯಿತು. ರಾಮನ ಕಾಲಾನಂತರ ರಾಮನ ಮಗನಾದ ಕುಶ ಮಹಾರಾಜನು ಈ ಮೂರ್ತಿಯನ್ನು ಪೂಜಿಸುತ್ತಿದ್ದನು. ಕುಶನಿಗೆ ಕನಕಮಾಲಿನಿ ಎಂಬ ಹೆಣ್ಣು ಮಗಳು ಹುಟ್ಟಿದಳು. ಆಕೆಯನ್ನು ಅತೀ ಪ್ರೀತಿಯಿಂದ ಬೆಳೆಸಿ, ಯದುವಂಶದ ಯದುಶೇಖರನಿಗೆ ಕೊಟ್ಟು ವಿವಾಹ ಮಾದಿದಾಗ, ಅನೇಕ ಬಳುವಳಿಯನ್ನು ಇತ್ತರೂ ತೃಪ್ತಳಾಗದೇ ತನ್ನ ತಾತನ ಪ್ರೀತಿಯ ಈ ರಾಮಪ್ರಿಯನನ್ನೇ ಪಡೆದುಕೊಂಡು ಬಂದಳು.

ಹೀಗೆ ಚೆಲುವನಾರಾಯಣಮೂರ್ತಿ ಯದುವಂಶಕ್ಕೆ ಬಂದು ಶ್ರೀಕೃಷ್ಣ ಬಲರಾಮರ ಕಾಲದವರಿಗೂ ಮಥುರೆಯಲ್ಲಿಯೇ ಇದ್ದಿತು. ಒಮ್ಮೆ ಬಲರಾಮನು ತೀರ್ಥಯಾತ್ರೆ ಮಾಡುತ್ತಾ ಈ ಕ್ಷೇತ್ರಕ್ಕೆ ಬಂದಾಗ ಇಲ್ಲಿಯ ತಿರುನಾರಾಯಣಮೂರ್ತಿಗೂ, ತಮ್ಮಲ್ಲಿರುವ ರಾಮಪ್ರಿಯನಿಗೂ ಸಾಮ್ಯತೆಯನ್ನು ಕಂಡು ಆಶ್ಚರ್ಯಪಟ್ಟು, ದ್ವಾರಕೆಗೆ ತೆರಳಿ ಈ ವಿಷಯವನ್ನು ಕೃಷ್ಣನಿಗೆ ತಿಳಿಸಿ, ತಮ್ಮ ಪೂಜೆಯಲ್ಲಿದ್ದ ರಾಮಪ್ರಿಯನನ್ನು (ಚೆಲುವರಾಯಸ್ವಾಮಿ) ಇಲ್ಲಿಗೆ ಕೃಷ್ಣನ ಸಹಿತ ಬಿಜಯ ಮಾಡಿಸಿಕೊಂಡು ಬಂದು ಉತ್ಸವ ಮೂರ್ತಿಯನ್ನಾಗಿ ಮಾಡಿದರು. ಇಲ್ಲಿ ಕೆಲಕಾಲ ಯಾದವರು ಈ ದೇವರನ್ನು ಆರಾಧಿಸುತ್ತಾ ಇದ್ದ ಕಾರಣ ಈ ಕ್ಷೇತ್ರಕ್ಕೆ ಯಾದವಾದ್ರಿಯೆಂದೂ ಹೆಸರಾಯಿತು.

ಕಲಿಯುಗದ ಆರಂಭದ ಅನೇಕ ವರ್ಷಗಳವರೆಗೂ ದೇವಾಲಯವಿದ್ದು ಕಾಲನ ಮಹಿಮೆಯಿಂದ ಲೂಟಿಗೆ ಒಳಪಟ್ಟು ದೇವಾಲಯ ಕೊಳ್ಳೆ ಹೊಡೆಯಲ್ಪಟ್ಟು ಪಾಳುಬಿದ್ದು ಇಲ್ಲಿನ ಉತ್ಸವಮೂರ್ತಿ ಅಪಹೃತವಾಗಿ ಊರು ಸಂಪೂರ್ಣ ನೆಲಸಮವಾಗಿ ಶ್ರೀ ತಿರುನಾರಾಯಣ ಮೂರ್ತಿಯನ್ನು ಹುತ್ತವು (ವಲ್ಮೀಕ) ಆವರಿಸಿಬಿಟ್ಟಿತು. ಆಗಿನಿಂದ ಅನೇಕ ಕಾಲದವರೆಗೆ ವನ್ಯಮೃಗಗಳ ಆವಾಸಸ್ಥಾನವಾಗಿ, ಕಾಡಾಗಿ ಬಿಟ್ಟು ದೇವಾಲಯ ಹೇಳ ಹೆಸರಿಲ್ಲದಂತಾಯಿತು. ಕೃಷ್ಣನ ಕಾಲಾನಂತರವೂ ದೇವಾಲಯವಿದ್ದು ಊರು ನೆಲೆಗೊಂಡಿತ್ತೆಂದು ಸಂಪ್ರದಾಯ ಗ್ರಂಥಗಳು ಹೇಳುತ್ತವೆ. ಮತ್ತೆ ಈ ದೇವಾಲಯವು ಜೀರ್ಣೋದ್ಧಾರಗೊಂಡಿದ್ದು ಆದಿಶೇಷನ ಅವತಾರವಾದ ಶ್ರೀರಾಮಾನುಜಾಚಾರ್ಯರಿಂದ. (ಮೇಲುಕೋಟೆ ಪರಿಚಯ : ನಾಗರಾಜ ಅಯ್ಯಂಗಾರ್)