Kadamba

ಕದಂಬರ ಕುಲದೇವತೆ ಮಧುಕೇಶ್ವರನ ದೇಗುಲ:

                    ಬನವಾಸಿಯ ಕದಂಬ ಕುಲದೇವತೆಯಾದ ಮಧುಕೇಶ್ವರನ ದೇವಾಲಯದ ಬಗ್ಗೆ ವಿಶೇಷ ವಿವರಗಳನ್ನಿಲ್ಲಿ ಸಂಗ್ರಹಿಸಲಾಗಿದೆ. ದೇವಾಲಯದ ಮಹಾಪ್ರಾಕಾರದೊಳಗಿನ ಇತರ ದೇವಾಯತನಗಳನ್ನೂ ದೇವತಾಮೂರ್ತಿಗಳನ್ನೂ ಅವಲೋಕಿಸಿದರೆ. ಗೋಕರ್ಣ, ನಂಜನಗೂಡುಗಳಲ್ಲಿರುವಂತೆಯೇ ಬನವಾಸಿಯಲ್ಲಿಯೂ ದೇವತಾರಾಧನೆಯ ಪರಂಪರೆಯ ಮಹಾವೈಭವದ ಅವಶೇಷಗಳೆಲ್ಲವನ್ನೂ ಉಳಿಸಿಕೊಂಡು ಬಂದಿರುವುದು ಕಂಡುಬರುತ್ತದೆ. ಬನವಾಸಿಯ ಮಧುಕೇಶ್ವರನಿಗೆ ಸಂಬಂಧಿಸಿದ ಪೌರಾಣಿಕ ಕಥೆ ಈ ಕೆಳಗಿನಂತಿದೆ.

                   ಶ್ರೀ ಭಗವಾನ್ ವಿಷ್ಣುವು ಪ್ರಳಯ ಕಾಲದಲ್ಲಿ ಕ್ಷೀರಸಮುದ್ರದ ಮೇಲೆ ಯೋಗನಿದ್ರಾವೃತನಾಗಿ ಇರುವ ವೇಳೆಯಲ್ಲಿ ವಿಷ್ಣುವಿನ ಕಿವಿಯಿಂದ ಮಹಾನ್ ಪ್ರತಾಪಿ ಮಧು ಮತ್ತು ಕೈಟಭ ಎಂಬ ಇಬ್ಬರು ದೈತ್ಯರು ಉದ್ಭವಿಸುತ್ತಾರೆ. ಈ ದೈತ್ಯ ಬಾಲಕರು ದೊಡ್ಡವರಾಗುತ್ತ ಒಂದು ಸಾವಿರ ವರ್ಷ ತಪಸ್ಸು ಮಾಡುತ್ತಾರೆ. ಶಕ್ತಿಮಾತೆಯು ಇವರ ತಪಸ್ಸಿಗೆ ಮೆಚ್ಚಿ ಅವರ ಇಚ್ಛೆಯಂತೆ ಇಚ್ಛಾಮರಣಿಗಳಾಗಿರೆಂದು ವರವನ್ನೀಯುತ್ತಾಳೆ. ಮುಂದೆ ಆ ದೈತ್ಯರು ಮದೋನ್ಮತ್ತರಾಗಿ ಬ್ರಹ್ಮನಿದ್ದಲ್ಲಿಗೆ ಹೋಗಿ ಅವನನ್ನು ಕಾಣಿಸಿ, ಪೀಡಿಸಿ ಅವನ ಪಟ್ಟಣವನ್ನೇ ಆಕ್ರಮಿಸುವ ಬೆದರಿಕೆ ಹಾಕುತ್ತಾರೆ. ಬ್ರಹ್ಮನು ನಿರುಪಾಯನಾಗಿ ಭಗವಾನ್ ವಿಷ್ಣುವಿದ್ದಲ್ಲಿಗೆ ಬರುತ್ತಾನೆ. ಇಷ್ಟಾದರೂ ಶ್ರೀ ವಿಷ್ಣುವಿನ ಯೋಗನಿದ್ರೆ ಭಗ್ನವಾಗಿರುವುದಿಲ್ಲ. ಬ್ರಹ್ಮನು ಯೋಗನಿದ್ರಾದೇವಿಯನ್ನು ಪ್ರಾರ್ಥಿಸುತ್ತಾನೆ. ಯೋಗನಿದ್ರಾದೇವಿಯು ವಿಷ್ಣುವನ್ನು ಬಿಟ್ಟು ಹೋದ ಮೇಲೆ ವಿಷ್ಣುವು ಎಚ್ಚರಗೊಂಡು ಬ್ರಹ್ಮನಿಂದ ಘಟಿಸಿದ ಎಲ್ಲ ವಿಷಯಗಳನ್ನು ತಿಳಿದುಕೊಳ್ಳುತ್ತಾನೆ. ಬ್ರಹ್ಮನ ಇಚ್ಛೆಯಂತೆ ವಿಷ್ಣುವು ಶಿಷ್ಟರ ಪರಿಪಾಲಕನಾರ್ಥವಾಗಿ ಮಧು-ಕೈಟಭರೊಂದಿಗೆ ಯುದ್ದ ಮಾಡುತ್ತಾನೆ. ಆದರೂ ದೈತ್ಯರನ್ನು ವಧಿಸಲು ಸಾಧ್ಯವಾಗಲಿಲ್ಲ. ಇದು ಶಕ್ತಿದೇವಿಯ ವರಪ್ರಸಾದವೆಂದು ಗ್ರಹಿಸಿ ದೈತ್ಯರನ್ನು ವಧಿಸುವ ಭೇದೋಪಾಯ ಹೂಡುತ್ತಾನೆ. ದೈತ್ಯರೊಡನೆ “ನಿಮ್ಮ ಶೌರ್ಯ-ಪರಾಕ್ರಮಗಳಿಗೆ ಮೆಚ್ಚಿದ್ದೇನೆ. ಬೇಕಾದ ವರಗಳನ್ನು ಕೇಳಿರಿ” ಎಂದು ಹೇಳಿದಾಗ ದಾನವರು “ವರವನ್ನು ಯಾಚಿಸಲು ನಾವು ಭಿಕ್ಷುಕರಲ್ಲ. ನೀನೇ ವರವನ್ನು ನಮ್ಮಿಂದ ಕೇಳು. ನಾವು ಕೊಡಲು ಸಮರ್ಥರಿದ್ದೇವೆ” ಎಂದು ಹೇಳುತ್ತಾರೆ. ಇದೇ ಸಮಯ ಸಾಧಿಸಿ ವಿಷ್ಣುವು “ನನ್ನ ಚಕ್ರದಿಂದ ನಿಮ್ಮಿಬ್ಬರ ವಧೆಯಾಗಬೇಕು ಎಂಬ ವರವನ್ನು ಬಯಸುತ್ತೇನೆ” ಎಂದು ನುಡಿಯುತ್ತಾನೆ. ಕೂಡಲೆ ಮಧು. ಕೈಟಭರು ಗತ್ಯಂತರವಿಲ್ಲದೆ “ಇದೇ ಸಾಗರ ಮಧ್ಯ ನೀರಿಲ್ಲದ ಸ್ಥಳದಲ್ಲಿ ನಮ್ಮನ್ನು ವಧಿಸಬೇಕು ಮತ್ತು ನಮ್ಮಿಬ್ಬರ ಹೆಸರುಗಳು ಆಚಂದ್ರಾರ್ಕವಾಗಿ ಭೂಲೋಕದಲ್ಲಿ ಪ್ರಸಿದ್ದಿಯಾಗುವಂತೆ ಅನುಗ್ರಹಿಸಬೇಕು” ಎಂದು ಮರಣಕ್ಕೆ ಸಿದ್ದರಾದರು. ವಿಷ್ಣುವು ತನ್ನೆರಡು ಕಾಲುಗಳ ಮೇಲೆ ಮಧು, ಕೈಟಭರನ್ನು ಮಲಗಿಸಿಕೊಂಡು ತನ್ನ ಚಕ್ರದಿಂದ ಇಬ್ಬರೂ ರಕ್ಕಸರ ಶಿರವನ್ನು ಕತ್ತರಿಸುತ್ತಾನೆ – ಈ ರೀತಿ ಮಧು, ಕೈಟಭ ರಕ್ಕಸರ ಸಂಹಾರವಾಗುತ್ತದೆ.

                       ಮಧು, ಕೈಟಭರ ಇಚ್ಛಾನುಸಾರ ಅವರ ಕೀರ್ತಿ ಲೋಕದಲ್ಲಿ ಪ್ರಸಿದ್ದಯಾಗುವಂತೆ ಶ್ರೀಮನ್ನಾರಾಯಣನು ಜಯಂತಿ(ಬನವಾಸಿ) ಕ್ಷೇತ್ರದಲ್ಲಿ ಮಧುಕೇಶ್ವರ ಎಂಬ ಹೆಸರಿನಿಂದಲೂ, ಆ ಕ್ಷೇತ್ರದಿಂದ 9 ಮೈಲು ದೂರದಲ್ಲಿ, (ಸೊರಬ ತಾಲೂಕು) ಆನವಟ್ಟಿಯ ಸಮೀಪ “ಕುಬಟೂರು” ಎಂಬಲ್ಲಿ “ಕೈಟಭೇಶ್ವರ” ಎಂಬ ಹೆಸರಿನಿಂದಲೂ ಎರಡು ಲಿಂಗಗಳನ್ನು ವಿಧಿಪೂರ್ವಕವಾಗಿ ಸ್ಥಾಪಿಸಿದನು. ಮಧು, ಕೈಟಭರು ದೈವೀಕೃಪೆಗೆ ಪಾತ್ರರಾದ್ದರಿಂದ ನಾರಾಯಣನು ಮಹಾದೇವನನ್ನು ಆವಾಹನೆ ಮಾಡಿದನು. ಇದರಿಂದ ಸಂಪ್ರೀತನಾದ ಮಹಾದೇವನು ಸತೀಸಮೇತನಾಗಿ ಈ ಲಿಂಗಗಳಲ್ಲಿ ಪೂರ್ಣತೇಜಸ್ಸಿನಿಂದ ಆವಾಹಿತನಾಗಿ ಇಂದಿಗೂ ಪ್ರಸಿದ್ದನಾಗಿರುವನು.ಈ ಕ್ಷೇತ್ರದಲ್ಲಿ ವಾರಾಣಸೀ ಪಟ್ಟಣದ ರತ್ನಾಂಗದ ರಾಜನ ಶಾಪ ವಿಮೋಚನೆಯಾಗಿರುತ್ತದೆ.

                        ದೇವೇಂದ್ರನು ವೃತ್ರಾಸುರನನ್ನು ಕೊಲ್ಲುವಾಗ ದಧೀಚಿ ಋಷಿಯ ಬೆನ್ನು ಮೂಳೆಯಿಂದ ವಜ್ರಾಯುಧವನ್ನು ಮಾಡಿಕೊಂಡದ್ದರಿಂದ ದೇವೇಂದ್ರನಿಗೆ ಬ್ರಹ್ಮಹತ್ಯಾದೋಷ ಪ್ರಾಪ್ತವಾಯಿತು. ಇದನ್ನು ಕಳೆದುಕೊಳ್ಳಲು ದೇವೇಂದ್ರನು ಜಯಂತ್ರಿ ಕ್ಷೇತ್ರದಲ್ಲಿ ನೆಲೆಸಿ ಶ್ರೀ ಮಧುಕೇಶ್ವರನನ್ನು ಕುರಿತು ತಪಸ್ಸು ಮಾಡಿ ತನ್ನ ದೋಷವನ್ನು ನಿವಾರಿಸಿಕೊಂಡನು.ಮೃಕಂಡುಮುನಿಯು ಸಂತತಿ ಇಲ್ಲದ್ದರಿಂದ ಜಯಂತೀ ಕ್ಷೇತ್ರದಲ್ಲಿ ಆಗಮಿಸಿ ಶ್ರೀ ಮಧುಕೇಶ್ವರನನ್ನು ಕುರಿತು ತಪಸ್ಸು ಮಾಡಿ ಮಾಕಾಂಡೇಯನನ್ನು ಪಡೆದನು. 

                           ಜಮದಗ್ನಿ ಋಷಿಯ ಮಗನಾದ ಶ್ರೀ ಭಾರ್ಗವನು ತನ್ನ ತಂದೆಯ ಆಜ್ಞೆಯಂತೆ ತಾಯಿಯಾದ ರೇಣುಕೆಯ ಶಿರಚ್ಛೇದನಗೈದುದರಿಂದ ಉಂಟಾದ ಮಾತೃಹತ್ಯಾ ದೋಷವನ್ನು ಕಳೆದುಕೊಳ್ಳಲು ಜಯಂತೀ ಕ್ಷೇತ್ರಕ್ಕೆ ಬಂದು ಶ್ರೀ ಮಧುಕೇಶ್ವರನನ್ನು ಕುರಿತು ತಪಸ್ಸು ಮಾಡಿ ವiಧುಕೇಶ್ವರದೇವನಿಂದ ಮೃತ ತಾಯಿಯ ಜೀವದಾನ ಪಡೆದನು ಮತ್ತು ವರದಾ ನದಿಯಲ್ಲಿ ಮಿಂದು ಮಾತೃಹತ್ಯಾದೋಷ ಪರಿಮಾರ್ಜನೆ ಮಾಡಿಕೊಂಡನು. ಅಲ್ಲದೇ ಇದೇ ಭಾರ್ಗವ (ಪರಶುರಾಮ)ನು ಜಯಂತೀ ಕ್ಷೇತ್ರದಲ್ಲಿ ಶಿವನನ್ನು ಆರಾಧಿಸಿ ಅಜಯ್ಯವಾದ ಪರಶು(ಗಂಡುಗೊಡಲಿ)ವನ್ನು ಪಡೆದನು.

                          ಶುಕ್ರಾಚಾರ್ಯನು ಸಂಜೀವಿನಿ ವಿದ್ಯೆಯನ್ನು ಜಯಂತೀ ಕ್ಷೇತ್ರದಲ್ಲಿಯೇ ಶ್ರೀ ಮಧುಕೇಶ್ವರನ ಅನುಗ್ರಹದಿಂದ ಪಡೆದನು.

                          ಅತ್ರಿಮಹಾಮುನಿಯ ಪತ್ನಿ ಅನಸೂಯಾದೇವಿಯ ತ್ರಿಮೂರ್ತಿಗಳ ವರದಿಂದ ದುರ್ವಾಸ, ಚಂದ್ರಮ, ದತ್ತಾತ್ರೇಯರೆಂಬ ಮೂವರು ಪುತ್ರರನ್ನು ಜಯಂತೀ ಕ್ಷೇತ್ರದಲ್ಲಿಯೇ ಪಡೆದಳು.

            ಇಂತು ಮಹಾಮಹಿಮನಾಗಿ ಜಯಂತೀ (ಬನವಾಸಿ) ಕ್ಷೇತ್ರದಲ್ಲಿ ವಿರಾಜಮಾನನಾದ ಶ್ರೀ ಮಧುಕೇಶ್ವರನನ್ನು ಆರಾಧಿಸುವವರಿಗೆ ಆಧಿವ್ಯಾಧಿಗಳ ಪೀಡೆ ತಪ್ಪುವುದು, ಕಷ್ಟ-ಸಂಕಟಗಳು ದೂರಾಗುವುವು. ಅಂಥವರು ಜ್ಞಾನ ಸಂಪನ್ನರಾಗುವರು.  ಮಧುಕೇಶ್ವರನ ಪ್ರೀತಿ ಪಾತ್ರರಾಗಿ ಮೋಕ್ಷ ಪಡೆವರು .ಲೇಖಕರು : ಪ್ರೊ.. ಬಿ.ಎಚ್. ಶ್ರೀಧರ