Kalasa

ಕಳಸ :

                ಕಳಸ ಬೃಹದಾಕಾರದ ದುಗ್ಗಪ್ಪನ ಬೆಟ್ಟದ ಕೋಟೆ ಕಲ್ಲುಗಳ ಮೇಲೆ ಊರಿಗೆ ಎತದತರದಲ್ಲಿ ಕಲಶ(ಕಳಸ) ಪ್ರಾಯವಾಗಿ ಕಾಣುವ ದೇವ ಮಂದಿರವೇ ಅಗಸ್ತ್ಯ ಸ್ಥಾಪಿತ ಶ್ರೀ ಕಲಶೇಶ್ವರ ದೇವಸ್ಥಾನ. ಶ್ರುತಬಿಂದು ಮಹಾರಾಜನಿಂದ ಕಟ್ಟಲಪಟ್ಟ ಮಂದಿರ.

          ಈ ದೇವ ಮಂದಿರವು ಪಶ್ಚಿಮ ದಿಕ್ಕಿಗೆ ಇರುವ ಹೊರಪ್ರಕಾರವು ಸಾಮಾನ್ಯ ಶಿಲೆ ಮತ್ತು ಮತಗಳಿಂದ ಕೂಡಿರುತ್ತದೆ. ನವರಂಗವು ಉತ್ತರ-ದಕ್ಷಿಣಕ್ಕೆ ಬಾಗಿಲುಗಳನ್ನು ಹೊಂದಿದೆ. ಮೇಲ್ಭಾಗದಲ್ಲಿ 16 ಕೋನಾಕೃತಿಗಳಿವೆ. ಇದನ್ನು ಕಳಸ-ಕಾರ್ಕಳ ಬೈರರಸ ನಾಯಕನ ಕಾಲದ್ದೆಂದು ಶಾಸನಗಳು ಹೇಳುತ್ತವೆ. ಮುಖಮಂಟಪವು ನಾಲ್ಕು ನುಣುಪಾದ ಕಂಬಗಳಿಂದ ಕೂಡಿದ್ದು ಇದರ ದ್ವಾರದ ಅಕ್ಕಪಕ್ಕದಲ್ಲಿ ಎರಡು ಸಿಂಹಗಳನ್ನು ಕೆತ್ತಲಾಗಿದೆ. ಇದು ದ್ರಾವಿಡ ಶೈಲಿಯನ್ನು ಹೊಂದಿದೆ. ಮುಖ್ಯ ದೇವಸ್ಥಾನವು ಕಲ್ಲಿನಿಂದ ಕಟ್ಟಲಾಗಿದೆ. ಶಿಖರವು ಲೋಹದಿಂದ ಮಾಡಲಾಗಿದೆ. ಇದನ್ನು 13ನೇ ಶತಮಾನದಿಂದ 16ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಯಲಾಗಿದೆ. (ಇದು ಕಿಗ್ಗ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನದಂತೆ) ಮಲೆನಾಡಿನಲ್ಲಿ ಸಿಕ್ಕುವ ಕಲ್ಲುಗಳಿಂದಲೇ ನಿರ್ಮಿಸಲಾಗಿದೆ.

               ರಥಬೀದಿಯಿಂದ 36+11 ಮೆಟ್ಟಿಲು ಹತ್ತಿ ಎಡಭಾಗ ನೋಡಿದರೆ ಬಿಂದು ಮಾಧವ ದೇವಾಲಯವಿದೆ. ಅದರ ಮುಂಭಾಗದಲ್ಲಿ ಸ್ವಲ್ಪ ಎತ್ತರದಲ್ಲಿ ಶ್ರೀ ದುರ್ಗಾಮ್ಮರವರ ದೇವಸ್ಥಾನವಿದೆ.ದೇವಸ್ಥಾನದ ಮೆಟ್ಟಿಲೇರಿ ಬರುವಾಗ ಮಹಡಿಯಿಂದ ಕೂಡಿದ ಬಲಭಾಗದಲ್ಲಿ ತಾಳಕಾಸುರರನ್ನು ಸೊಂಡಿಲಿನಿಂದ ಹಿಡಿದು ಕಾಲಲ್ಲಿ ಮೆಟ್ಟಿರುವ ಮತ್ತು ತಾಳಕಾಸುರನು ವೃಕ್ಷರೂಪಿಯಾಘಿ ಬಂದಿದ್ದ ಕಾರಣ ತಾಳೆಯ ವೃಕ್ಷವನ್ನು ಸೊಂಡಿಲು ಮತ್ತು ಕಾಲುಗಳಿಂದ ಹಿಡಿದಿರುವ ಶಕ್ತಿಸಮೇತವಾಗಿ ಗಜಾಕಾರದಿಂದ ನಿಂತಿರುವ ಎರಡು ಕಲ್ಲಿನ ವಿಗ್ರಹಗಳೇ ವಿಘರಾಜನ ಮಂದಿರ. 11 ಮೆಟ್ಟಿಲು ಏರಿದೊಡನೆ ವಿಘರಾಜನ ಮಂದಿರದ ಎದುರುಗಡೆ ಕಲ್ಲು ಮಂಟಪವಿದೆ. ವಿಶೇಷೋತ್ಸವಗಳಲ್ಲಿ ದೇವರನ್ನು ಕೂರಿಸಿ ದೀಪಾರಾಧನೆ ಮುಂತಾದ ದೇವತಾ ಕಾರ್ಯಗಳನ್ನು ಮಾಡುತ್ತಾರೆ. ಇದರ ಬಲಗಡೆ ಶ್ರೀರಾಮನ ಮಂದಿರವಿದೆ. (ಇತ್ತೀಚೆಗೆ ಗಂಗಾಧರೇಸ್ವರ ಕಲಾಕೃತಿಯನ್ನು ನೋಡಬಹುದಾಗಿದೆ.)

                 ಕಲ್ಲು ಮಂಟಪ್ಪದಿಂದ ಬಲಭಾಗದ ಮಹಾದ್ವಾರದಲ್ಲಿ ಒಳಗೆ ಪ್ರವೇಶಿಸಲು ಎದುರಿಗೆ ಕ್ಷೇತ್ರಪಾಲನ ಚಿಕ್ಕಗುಡಿಯಿದೆ. (ಕ್ಷೇತ್ರಪಾಲನ ಚಿತ್ರ) ಇದು ಪ್ರಾಚೀನ ಶೈಲಿಯ ಸುಮಾರು 2 ಅಡಿ ಸುತ್ತಳತೆಯ(Soಚಿಠಿ Sಣoಟಿe) ಬಳಪದ ಕಲ್ಲಿನ ವಿಗ್ರಹವಾಗಿದೆ.

                  ಕ್ಷೇತ್ರಪಾಲನ ಎದುರಿಗೆ ಸರ್ವಾಂಗ ಸುಂದರಿ ಅಮ್ಮನವರ ದೇವಾಲಯವಿದೆ. ಇದು ನಾಯಕನ ಕಾಲದಲ್ಲಿ ನಿರ್ಮಾಣಗೊಂಡಿದೆ. ಈ ದೇವಸ್ಥಾನಕ್ಕೆ ಪ್ರವೇಶದ್ವಾರದಲ್ಲಿ ಎರಡು ಹೆಣ್ಣು ಸಿಂಹಗಳನ್ನು ಕೆತ್ತಿರುವುದು ಒಂದು ವಿಶೇಷವಾಗಿದೆ, ಕ್ಷೇತ್ರಪಾಲನ ಗುಡಿಯಿಂದ ಸ್ವಲ್ಪ ಮುಂದೆ ಬಂದರೆ ತಾಮ್ರದ ಹೊದಿಕೆ ಇರುವ ಧ್ವಜಸ್ತಂಭವಿತ್ತು ಈಗ 6-11-2008ರಲ್ಲಿ 53 ಅಡಿ 7 ಇಂಚು ಉದ್ದ ಶಿಲಾಸ್ತಂಭ ಸ್ಥಾಪಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ಎತ್ತರವಾದ ಕಲ್ಲು ಕಂಬವಿದೆ. ಈ ಕಂಬದ ಮೇಲೆ ಕಾರ್ತಿಕ ಮಾಸ ಒಂದು ತಿಂಗಳು ರಾತ್ರಿ ದೀಪವು ಬೆಳಗುತ್ತಿರುತ್ತದೆ. ಈ ಧ್ವಜಸ್ತಂಭದ ಬಳಿ ನಿಂತು ಒಮ್ಮೆ ಅಗಸ್ತ್ಯಾರ್ಚಿತ ಶ್ರೀ ಕಲಶೇಶ್ವರನ ದರ್ಶನ ಮಾಡಿ. ಈ ಧ್ವಜಸ್ತಂಭದಿಂದ ಮೇಲೆ ಲಿಂಗದವರೆಗೆ ಒಂದು ವಿಭಾಗ. ಶಿವರಾತ್ರಾದಿ ಮಹಾದಿನಗಳನ್ನು ಮತ್ತು ಸೇವಾ ಕರ್ತುಗಳು ಇಷ್ಟ ಪಟ್ಟಾಗ ಈ ವಿಭಾಗದಲ್ಲಿ ಅನ್ನಮುದ್ರೆ, ಭಕ್ಷಾದಿಗಳನ್ನ್ನಿಟ್ಟು ರಂಗಪೂಜೆ ದೀಪಾರಾಧನೆಯನ್ನು ಮಾಡುತ್ತಾರೆ.

                  ಹಿತ್ತಾಳೆಯ ಮಹಾದ್ವಾರ ಪ್ರವೇಶಿಸಿ ಮೊದಲು ಬಲಭಾಗದಲ್ಲಿ ಕೌಂಟರಿನ ಒಳಗೆ ಭೇರಿ ಹನುಮಂತನ ವಿಗ್ರಹವಿದೆ. ಒಳಬಂದರೆ ಅಲ್ಲಿಯೇ ಇರುವ ಶ್ರೀ ಹನುಮಂತ ದೇವರಿಗೆ ಸಮಸ್ಕರಿಸಿ, ಪ್ರದಕ್ಷಿಣಾ ಪತದಲ್ಲಿ ತಿರುಗಿದಲ್ಲಿ ದೇವರ ನೈವೇದ್ಯ ಮಾಡುವ ಪಾಕಶಾಲೆ. ಅಲ್ಲಿ ನಿಂತು ದೇವ ಮಂದಿರದ ಶಿಖರ ದರ್ಶನ ಮಾಡಿ ಮುಂದುವರೆದರೆ ಮುಚ್ಚಿರುವ ಬಾಗಿಲೊಂದು ಕಾಣಿಸುತ್ತದೆ. ಅದೇ ಬಾಗಿಲನ್ನು ಗಿರಿಜಾ ಕಲ್ಯಾಣವಾದ ನಂತರ ಗಿರಿಜಾದೇವಿಯನ್ನು ತವರುಮನೆಗೆ ತೆರಳಿಸುವ ಮಾರ್ಗವಾಗಿದೆ. ಮುಂದೆ ಅಭಿಷೇಕದ ಬಾವಿಯನ್ನು ಪ್ರದಕ್ಷಿಣೆ ಮಾಡಿ, ಖಿಂಡಿ ಬಾಗಿಲಿನಲ್ಲಿ ಒಳಗೆ ಪ್ರವೇಶ ಮಾಡಿ. ಅದು ‘ನಂದಿ’ಯ ಮಂದಿರ ಇಲ್ಲಿ ದೇವರ ದರ್ಶನ ಮನಸ್ಕಾರ ಮಾಡಿ. ನಂದಿಯ ಶೃಂಗ ಮಧ್ಯದಲ್ಲಿ ಲಿಂಗದರ್ಶನ ಮಾಡಬೇಕು. ನಂದಿಯಿಂದ ಮೂಲ ಲಿಂಗದವರೆಗೆ ಒಂದು ವಿಭಾಗ ಇಲ್ಲಿಯೇ ದಂಡ ನಮಸ್ಕಾರ ಮಾಡಬೇಕು. ಅನಂತರ ಎಡಗಡೆ ಇರುವ ನಂದಿ ಮತ್ತು ದ್ವಾರಪಾಲಕರಾದ ಮಹಾಕಾಲರಿಗೆ ನಮಸ್ಕರಿಸಿ ಎಡಗಡೆ ದ್ವಾರಪಾಲಕ ಮಹಾಕಾಲನ ಎಡಗೈಯಲ್ಲಿ ಒಂದು ಗುಲುಗುಂಜೀ ಗುರುತಿರುವುದನ್ನು ಗಮನಿಸಿ, ಅದೇ ಚಿಹ್ನೆಯನ್ನು ಪರಶಿವನು ಕಳಸವು ಕಾಶಿಗಿಂತಲೂ ಮಹತ್ವವುಳ್ಳದಾಗಲಿ ಎಂದು ಅಗಸ್ತ್ಯರಿಗೆ ಅನುಗ್ರಹಿಸಿದ ಸೂಚನೆ ಎಂದು ನಂಬಲಾಗಿದೆ. ಒಳಗಡೆ ದಾಟಿದರೆ ಅದು ರುದ್ರಮಂಟಪ. ಇಲ್ಲಿ ಪುನಃ ಎಡದಲ್ಲೆ ಗಣಪತಿ ಬಲಭಾಗದಲ್ಲಿ ದುರ್ಗಾ ವಿಗ್ರಹಗಳಿವೆ. ಇಲ್ಲಿ ಘಂಟಾನಾ ಮಾಡಿ ಈಶ್ವರನ ಸ್ತೋತ್ರ ಮಾಡಿ ರುದ್ರಮಂಟಪದ ಮೇಲ್ಭಾಗದಲ್ಲಿರುವ ರುದ್ರಯಂತ್ರವನ್ನು ಮರೆಯದೇ ದರ್ಶನ ಮಾಡಬೇಕು. ಗರ್ಭಗುಡಿಯಲ್ಲಿರುವ ಸುಮಾರು 9” ಇಂಚು ಎತ್ತರಕ್ಕಿರುವ ಉತ್ತರಕ್ಕೆ ಬಾಗಿರುವ ಶ್ರೀ ಕಲಶೇಶ್ವರ ಲಿಂಗದರ್ಶನ ಪಡೆದು ದೇವತಾ ಪ್ರಸಾದವನ್ನು ಸ್ವೀಕರಿಸಿ ನಿಮಗೆ ಸಮಯ ಶ್ರದ್ಧೆಗಳಿರುವಷ್ಟು ಹೊತ್ತು ಅಲ್ಲಿ ಇದ್ದು ದಕ್ಷಿಣ ದಿಕ್ಕಿನ ಬಾಗಿಲಿನಿಂದಲೇ ಹೊರಗಡೆ ಬರಬೇಕು. ಪುನಃ ಪ್ರದಕ್ಷಿಣಾಕಾರವಾಗಿ ಬಂದು ಉತ್ತರದ ಬಾಗಿಲಿನ ಸಮೀಪವಿರುವ ಚಂಡೇಶ್ವರನ ದರ್ಶನ ಪಡೆಯುತ್ತಾ “ನೀಲಕಂಠ ಪದಾಂಭೋಜ ಪರಿಸ್ಛುರಿತ ಮಾನಸ ಶಿವಸೇವಾ ಫಲಂ ದೇಹಿ ಚಂಡೇಶ್ವರ ನಮೋಸ್ತುತೇ” ಎಂದು ಪ್ರಾರ್ಥಿಸಿ ದೇವತಾ ಪ್ರಸಾದವನ್ನು ಚಂಡೇಶ್ವರನ ಮೇಲೆ ಹಾಕಿ ‘ಚುಟುಕಿ’ ಯೋ ಚಪ್ಪಾಳೆಯೋ ಹಾಕಬೇಕು. [ಇದು ಸಂಪ್ರದಾಯ ಚಂಡೇಶ್ವರನು ಸದಾ ಈಶ್ವರ ಧ್ಯಾನ ಮಗ್ನನಾಗಿರುವುದರಿಂದ ಅವನನ್ನು ಎಚ್ಚಗೊಳಿಸಿ ನಿನ್ನ ಒಡೆಯನಾದ ಪರಶಿವನಿಗೆ ನಿನ್ನ ಭಕ್ತನಾದ ನಾನು ಬಂದಿದ್ದೇನೆಂದು ತಿಳಿಸಿ ಅನುಗ್ರಹ ಮಾಡೆಂದು ಕೋರುವುದರ ಸಂಕೇತ ಅಷ್ಟೆ.]

                        ದೇವಳದ ಹೊರಭಾಗದಲ್ಲಿ ಧ್ವಜಮರದ ಸಮೀಪ ಒಂದು ಪ್ರದಕ್ಷಿಣಾಕಾರವಾಗಿ ತಿರುಗಲು ಎಡಗಡೆ ಚಚ್ಚೌಕವಾದ ಮಂಟಪವಿದೆ, ಈ ಓಲಗ ಮಂಟಪದಿಂದ ಮುಂದೆ ಬಂದರೆ ಗೋಡೆಗೆ ಅನಿಸಿ ನಿಲ್ಲಿಸಿದ ಶಿಲಾಶಾಸನವನ್ನು ನೋಡಿ. ಶತಮಾನಗಳ ಹಿಂದೆ ಶ್ರೀ ದೇವರ ಸೇವಾಗಾಗಿ ಭೂಮಿ, ವಸ್ತು, ದಾನಾದಿಗಳ ವಿವರಗಳನ್ನು ಇದರಲ್ಲಿ ದಾಖಲಿಸಲಾಗಿದೆ. ಮುಂದೆ ಸಾಕ್ಷಿಕಲ್ಕು ಬಳಸಿಕೊಂಡರೆ ವಾಯುವ್ಯ ಭಾಗದಲ್ಲಿ ನಿಂತು ಶೃಂಗೇರಿ ಶಾರದಾಂಬೆ ಮಲ್ಲಿಕಾರ್ಜುನ ಸ್ವಾಮಿ ಮತ್ತು ಕಿಗ್ಗದ ಋಷ್ಯಶೃಂಗೇಶ್ವರನನ್ನು ಸ್ಮರಿಸಬೇಕು. ಆ ಪುಣ್ಯಕ್ಷೇತ್ರಗಳು ಇಲ್ಲಿಂದ ನೇರವಾಗಿ ವಾಯುವ್ಯ ದಿಕ್ಕಿಗೆ ಇದೆ.

                        ಮುಂದೆ ಬಂದು ಸರ್ವಾಂಗ ಸುಂದರಿ ದೇವಿಯ ದರ್ಶನ ಸೇವೆ ಮಾಡಿ ಬರುವಾಗ ಎಡಗಡೆ ಒಂದು ಮಹಾದ್ವಾರವಿದೆ. ಇದಕ್ಕೆ ಘಂಟೇಬಾಗಿಲು ಎಂದು ಹೆಸರು. ಇದರಲ್ಲಿ ಒಂದನ್ನು ಅಲುಗಾಡಿಸಲು ಘಂಟೆಯ ಕಿರುನಾದ ಕೇಳಿಸುತ್ತದೆ. ಆ ಬಾಗಿಲು ಉತ್ಸವ ಕಾಲದಲ್ಲಿ ದೇವರ ಗಮನಾಗಮನಕ್ಕಾಗಿ ಮಾತ್ರ ಬಳಕೆಯಾಗುತ್ತದೆ. ಅಲ್ಲಿ ಪ್ರವೇಶ ಮಾಡದೇ ನೀವು ಮೊದಲು ಪ್ರವೇಶಿಸಿ ಬಾಗಿಲಿನಿಂದಲೇ ಹೊರಗಡೆ ದರ್ಶನ ಮಾಡಿ. ಅದೇ ದಾರಿಯಲ್ಲಿ ಧ್ವಜಗಂಬದ ಎದುರು ಇರುವ ಸಣ್ಣ ಗೇಟಿನ ಎದುರು ಒಂದು ಚೌಕಾಕಾರದ(ಆಯತಾ) ಕಾರದ ದೊಡ್ಡದಾದ ಒಂದು ಕೊಳವಿದೆ. ತಪ್ಪದೇ ಅದನ್ನು ಗಮನಿಸಿ.

                   ದೇವಸ್ಥಾನದಿಂದ ಪಶ್ವಿಮಾಭಿಮುಖವಾಗಿ ರಥಬೀದಿಯಲ್ಲೇ ಮುಂದಕ್ಕೆ ಸಾಗಿಬಂದರೆ ಅಲ್ಲಿ ರುದ್ರ ಅಗ್ರಹಾರ, ರುದ್ರತೀರ್ಥವೂ ಇದೆ. ಅಲ್ಲಿ ಶ್ರೀ ವೆಂಕಟರಮಣ, ಶ್ರೀ ಚನ್ನಕೇಶವ ದೇವಸ್ಥಾನವಿದೆ.

ಈ ಕೆಳಗೆ ಕ್ಷೇತ್ರದಲ್ಲಿ ನೀವು ನೋಡಬಹುದಾದ ದೇವಸ್ಥಾನಗಳಿವೆ. ಶ್ರೀ ವೀರನಾರಾಯಣ, ಶ್ರೀ ಆಂಜನೇಯ, ಶ್ರೀ ಗೋಪಾಲಕೃಷ್ಣ, ಶ್ರೀ ಕಾಲಭೈರವ ದೇವಸ್ಥಾನಗಳಿವೆ. ಹಾಗೆಯೇ 12ನೇ ಶತಮಾನದೆಂದು ಹೇಳಲಾದ 21ನೇ ತೀರ್ಥಂಕರ ಜೈನ ಬಸದಿ ಇದೆ.

                   ಕಳಸದ ವಸಿಷ್ಠಾಶ್ರಮದ ಗಣಪತಿ, ಕಾಲಭೈರವ, ಶ್ರೀಗಿರಿಜಮ್ಮನವರ ದೇವಾಲಯ ಬಿಂಧು ಮಾಧವ ದೇವಾಲಯ, ಶ್ರೀ ದುರ್ಗಾಮ್ಮನವರ ದೇವಾಲಯಗಳಿವೆ. ಮಾವಿನಕೆರೆ ಶ್ರೀ ವೀರನಾರಾಯಣ ಸ್ವಾಮಿ ದೇವಾಲಯ ಹಾಗೆಯೇ ಕಳಸದಿಂದ 5ಕಿ.ಮಿ. ದೂರದಲ್ಲಿರುವ ಶ್ರೀ ಹಳುವಳ್ಳಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಗಳು ಶ್ರೀ ಕಳಶೇಶ್ವರ ದೇವಾಸ್ಥಾನದ ಆರ್ಥಿಕ ಸಹಾಯದಿಂದ ಆಡಳಿತಕ್ಕೆ ಒಳಪಟ್ಟ ದೇವಾಲಯಗಳಿವೆ.

                  ಕಳಸದ ರುದ್ರಪಾದ ಅಗ್ರಹಾರ ರುದ್ರತೀರ್ಥದ ದರ್ಶನ ಪಡೆದು ಉತ್ತರಾಭಿಮುಖವಾಗಿ ಸಾಗಿದರೆ 5ಕಿ.ಮೀ. ದೂರದಲ್ಲಿ ಜಗತ್ತಿನ ಸಕಲ ಚರಾಚರಗಳಿಗೂ ಅನ್ನ ನೀಡುವ ಜಗದ್ವಿಖ್ಯಾತವಾದ(ಹೊರಿನಾಡು) ಹೊರನಾಡು “ಶ್ರೀಮಾತಾನ್ನಪೂರ್ಣೇಶ್ವರಿ” ದೇವಸ್ಥಾನಕ್ಕೆ ತಲುಪಿಸುತ್ತದೆ. ಹೊರನಾಡಿಗೆ ಹೋಗಬೇಕಾದರೆ ಕಳಸವನ್ನು ಪ್ರವೇಶ ಮಾಡಿಯೇ ಹೋಗಬೇಕಾಗಿದೆ.


Related Information