Kumaralingeshwara temple Shanthalli

ಶಾಂತಹಳ್ಳಿಯ ಕುಮಾರಲಿಂಗೇಶ್ವರ ದೇವಾಲಯ:

                    ಕೊಡಗು ಜಿಲ್ಲೆಯ ಶಾಂತಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ದೇವಾಲಯ ಸುತ್ತಮುತ್ತಲಿನ ಊರುಗಳ ಭಕ್ತಾದಿಗಳಿಗೆ ಒಂದು ಆಕರ್ಷಕ, ದೈವಿಕ ತಾಣ. ಸೋಮವಾರಪೇಟೆಯಿಂದ ಪುಷ್ಪಗಿರಿಯತ್ತ ಸಾಗುವಾಗ ಸಿಗುವ ಶಾಂತಹಳ್ಳಿಯ ಮುಖ್ಯರಸ್ತೆಯ ಬದಿಯಲ್ಲಿಯೇ ಇದೆ ಈ ದೇವಾಲಯ. ಈ ದೇಗುಲವನ್ನು ಒರಟಾದ ಕಗ್ಗಲ್ಲಿನಿಂದ ನಿರ್ಮಿಸಲಾಗಿದೆ. ದೇವಾಲಯವು ಮೂರು ಅಂಕಣಗಳನ್ನು ಹೊಂದಿದೆ. ಮೊದಲನೆಯದು ಶಿವಲಿಂಗವಿರುವ ಗರ್ಭಗುಡಿ, ಎರಡನೆಯದು ವೇದಪಠನ ರಂಗ ಹಾಗೂ ಮೂರನೆಯರು ನವರಂಗ, ದೇವಾಲಯದ ಎದುರು ಭಾಗದಲ್ಲಿ ಅತ್ಯಂತ ಒರಟಾದ ಒಂದೇ ಕಲ್ಲಿನಿಂದ ನಿರ್ಮಾಣವಾದ ಮೂವತ್ತು ಅಡಿಗಳಷ್ಟು ಎತ್ತರವಾದ ಗರುಡ ಕಂಬವಿದೆ. ತುಪ್ಪದ ನಂದಾದೀಪವನ್ನು ಬೆಳಗಿಸುವುದರ ಮೂಲಕ ಜಾತ್ರೆಯು ಪ್ರಾರಂಭವಾಗುತ್ತದೆ.

                   ಈ ದೇಗುಲದ ಸ್ಥಾಪನೆಯ ಬಗೆಗೆ ಯಾವುದೇ ದಾಖಲೆಗಳು, ಪುರಾವೆಗಳು ದೊರಕುವುದಿಲ್ಲ ಎನ್ನಲಾಗಿದೆ. ಆದರೂ ದೇವಾಲಯದ ನವರಂಗ ಮಂಟಪದ ನಡುವಿನಲ್ಲಿರುವ ಗುಮ್ಮಟದಲ್ಲಿ ಕೆತ್ತಲಾಗಿರುವ ಚಂದ್ರನ ಚಿಹ್ನೆಯಿಂದ ಈ ದೇಗುಲವನ್ನು ಬಹಳ ಹಿಂದೆ ಈ ಭಾಗವನ್ನಾಳಿದ ಚಂದ್ರವಂಶದ ಅರಸರ ಆಡಳಿತ ಕಾಲದಲ್ಲಿ ನಿರ್ಮಿಸಿದ್ದಿರಬಹುದು ಎಂದು ಅಂದಾಜು ಮಾಡಲಾಗಿದೆ.

                   ಈ ದೇವಾಲಯದ ಬಹುತೇಕ ಭಾಗವನ್ನು ಬಲವಾದ ಒರಟು ಕಲ್ಲಿನ ಶಿಲೆಯ ಹಲಗೆಗಳಿಂದ ನಿರ್ಮಿಸಲಾಗಿದೆ. ನವರಂಗ ಮಂಟಪ ಭಾಗದಲ್ಲಿ ನಾಲ್ಕು ಬಲವಾದ ಕಲ್ಲಿನ ಕಂಬಗಳಿವೆ. ಗರ್ಭಗುಡಿಯ ಗೋಫುರವನ್ನು ಮತ್ತು ದೇಗುಲದ ಮೇ¯ಭಾಗವನ್ನು ತೆಳ್ಳಗಿನ ಅಗಲವಾದ ಇಟ್ಟಿಗೆಗಳಿಂದ ಕಟ್ಟಲಾಗಿದೆ. 

                   ಬಹಳ ಹಿಂದಿನಿಂದಲೂ ಈ ದೇಗುಲದಲ್ಲಿ ನಿತ್ಯಪೂಜೆ ಸಲ್ಲಿಸಲಾಗುತ್ತಿದೆ. ಪ್ರತಿವರ್ಷ ಜನವರಿಯಲ್ಲಿ ಪ್ರಾಪ್ತವಾಗುವ ಮಕರ ಸಂಕ್ರಮಣದ ಪೂಣ್ಯಕಾಲದಂದು ಶಾಂತಳ್ಳಿಗೆ ಸಂಬಂಧಿಸಿದ ಭಕ್ತವೃಂದ ಪೂಜಾಕಾರ್ಯಗಳಿಗೆ ಆಗಮಿಸುವುದು ಸಂಪ್ರದಾಯವಾಗಿದೆ. ಈ ರೀತಿಯ ಪೂಜಾ ಕಾರ್ಯಕ್ರಮಗಳಿಗೆ “ಅರಸು ಬಲಸೇವೆ” ಎಂದು ಹೆಸರಿಸಲಾಗಿದೆ.

                   ಶಾಮತಳ್ಳಿ ಬಹಳ ಕಾಲದವರೆಗೆ ‘ದೇವರಜನ’ ಎಂದೆನಿಸಿತ್ತು. ಕೊಡಗನ್ನು ಲಿಂಗಾಯತ ಅರಸರು ಆಳುತ್ತಿದ್ದ ಕಾಲದಲ್ಲಿ ನಿರ್ಜನವಾಗಿದ್ದ ದೇವರ ಬನ ಪ್ರದೇಶಕ್ಕೆ ಮಂಜರಾಬಾದ್ ತಾಲ್ಲೂಕಿನ ಸಾಂತಳ್ಳಿ ಎಂಬ ಭಾಗದಿಂದ ‘ಕರೇಗೌಡ’ ಎಂಬ ಮೂಲವ್ಯಕ್ತಿಯ ಕುಟುಂಬದವರನ್ನು ಈ ಪ್ರದೇಶಕ್ಕೆ ಕರೆಸಿ ಬದುಕಿಗೆ ಆಸ್ಪದ ಕಲ್ಪಿಸಿದರು. ಅಂತೆಯೇ ಇಂದಿಗೂ ಶಾಂತಹಳ್ಳಿಯಲ್ಲಿ ಬಹುತೇಕ ಕುಟುಂಬಗಳು ಕರೇಗೌಡನ ಹೆಸರಿನ ಸಂತತಿಯಿಂದಲೇ ಮುಂದುವರಿಯುತ್ತಿವೆ. ‘ದೇವರ ಬನ’ ಎಂಬ ಹೆಸರು ಕಾಲಕ್ರಮೇಣ ಅಳಿಸಿ ಹೋಗಿ ‘ಸಾಂತಳ್ಳಿ’ ಎಂಬ ಹೆಸರು ಪ್ರಚಲಿತವಾಯಿತು. ಕೆಲವಾರು ವರ್ಷಗಳ ನಂತರ ‘ಸಾಂತಳ್ಳಿ’ಯ ಹೆಸರು ಶಾಮತಹಳ್ಳಿಯಾಗಿ ಮಾರ್ಪಾಡು ಹೊಂದಿತ್ತು.

                    ಶಾಂತಳ್ಳಿಯ ಕುಮಾರಲಿಂಗೇಶ್ವರ ದೇವಾಲಯದಲ್ಲಿ ಹಿಂದೆ ಇದ್ದ ಜಾತ್ರಾಪದ್ದತಿಯೇ ಬೇರೆ. ಸುಮಾರು ನಲವತ್ತು ವರ್ಷಗಳ ಹಿಂದೆ ನಾಡಿನ ಹಲವು ಪ್ರಮುಖರು ಒಂದೆಡೆ ಸಭೆ ಸೇರಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ಹಳೆಯ ಜಾತ್ರಾಪದ್ದತಿಯನ್ನು ಬದಲಿಸಿ ವೇದಾಗಮ ಪದ್ದತಿಗಳಿಗನುಸಾರವಾಗಿ ರಥೋತ್ಸವವನ್ನು ನಡೆಸಲು ತೀರ್ಮಾನಿಸಿದರು. ಉಡುಪಿಯಿಂದ ವಿಶೇಷವಾಗಿ ಪಳಗಿದ ವಿಶ್ವಕರ್ಮ ಕೆಲಸಗಾರರಿಂದ ಸಿಂಹಾಸನವನ್ನು ಹೊಂದಿದ ಅತ್ಯಂತ ಆಕರ್ಷಕವಾದ ರಥವನ್ನು ನಿರ್ಮಿಸಲಾಯಿತು.

                    ಹಿಂದೆ ಕುಮಾರಲಿಂಗೇಶ್ವರ ಜಾತ್ರೆ ಕೇವಲ ಒಂದು ದಿನಕ್ಕೆ ಸೀಮಿತವಾಗಿತ್ತು. ರಥೋತ್ಸವದ ಮೂಲಕ ಜಾತ್ರೆಯನ್ನು ಪ್ರಾರಂಭಿಸಿ ಅಂದಿನಿಂದ ಪ್ರತಿನಿತ್ಯ ಶಾಸ್ತ್ರೋಕ್ತವಾಗಿ ಯಜ್ಷಗಳನ್ನು ದೇಗುಲದಲ್ಲಿ ಕೈಗೊಳ್ಳಲಾಗುತ್ತಿದೆ. ಮಕರ ಸಂಕ್ರಮಣದ ದಿನದಂದು ದೇಗುಲದ ಎದುರಿನ ಗರುಡ ಗಂಬದ ತುದಿಯಲ್ಲಿ ತುಪ್ಪದ ನಂದಾದೀಪವನ್ನು ಬೆಳಗಿಸುವುದರ ಮೂಲಕ ಜಾತ್ರೆಯ ಆರಂಭಗೋಳ್ಳುತ್ತದೆ. ಮಕರ ಸಂಕ್ರಾತಿಯಂದು ಪ್ರಾಚೀನ ಪದ್ದತಿಯ ಅರಸಸುಬಲ ಸೇವೆಯು ಜರುಗುತ್ತದೆ. ಅದರ ಮರುದಿನವೇ ವೈಭವದ ರಥೋತ್ಸವ. ಊರಿನ ಮುಖ್ಯಸ್ಥರಿಂದ ರಥಚಾಲನೆಯ ಶಾಸ್ತ್ರವನ್ನು ನೆರವೇರಿಸಿಯಾದ ನಂತರ ಊರವರೆಲ್ಲ ಸೇರಿ ರಥವನ್ನು ಎಳೆಯುತ್ತಾರೆ. by :ಲೇಖಕರು. ಸಿ.ಎಸ್. ಸುರೇಶ್