Pannangalathamme Temple

ಪನ್ನಂಗಾಲತಮ್ಮೆ ದೇವಾಲಯ :

                    ಕೊಡಗಿನ ಕಕ್ಕಬ್ಬೆ ವ್ಯಾಪ್ತಿಯಲ್ಲಿರುವ ಯವಕಪಾಡಿ ಗ್ರಾಮದ ಪನ್ನಂಗಾಲದಲ್ಲಿ ಪ್ರತಿ ವರ್ಷ ಜರುಗುವ ‘ಪನ್ನಂಗಾಲತಮ್ಮೆ’ ಹಬ್ಬ ವಿಶಿಷ್ಟ ರೀತಿಯಿಂದ ಆಚರಿಸಲ್ಪಡುವ ದೇವಿಯ ಹಬ್ಬ. ವರ್ಷಪ್ರತಿ ಏಪ್ರಿಲ್ 12ರಂದು ಜರುಗುತ್ತದೆ. ಸುತ್ತಮುತ್ತಲಿನ ಊರುಗಳ ಹಲವಾರು ಮಂದಿ ಪಾಲ್ಗೊಂಡು ಈ ಹಬ್ಬದ ಅಚರಣೆಯನ್ನು ವೀಕ್ಷಿಸುತ್ತಾರೆ.

                    ಈ ಹಬ್ಬ ಕಕ್ಕಬ್ಬೆ, ಕುಂಜಿಲ, ಯವಕಪಾಡಿ, ಕೈಕಂಬ, ಕಬ್ಬಿನಕಾಡು ಮುಂತಾದ ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿರುವ ಪರಿಶಿಷ್ಟ ವರ್ಗದವರ ಹಬ್ಬ, ಎರಡು ವರ್ಷಗಳಿಗೊಂದು ಸಾರಿ ದೊಡ್ಡ ಹಬ್ಬ ಜರುಗುತ್ತದೆ. ಇಲ್ಲಿನ ಪರಿಶಿಷ್ಟ ವರ್ಗದವರು ಪನ್ನಂಗಾಲತಮ್ಮೆ ದೇವಿಯ ಹಬ್ಬವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಾರೆ. ಪ್ರಮುಖ ಹಬ್ಬ ಒಂದು ದಿನ ಜರುಗಿದರೂ, ಹಬ್ಬಕ್ಕೆ ಸಂಬಂಧಿಸಿದ ಇನ್ನಿತರ ಕಾರ್ಯಕ್ರಮಗಳು 2-3 ದಿನ ಜರುಗುತ್ತದೆ. ನಿತ್ಯಪೂಜಿಸಲ್ಪಡುವ ಪನ್ನಂಗಾಲತಮ್ಮೆಯ ದೇವಾಲಯ ಯವಕಪಾಡಿಯಲ್ಲಿದೆ. ಕಕ್ಕಬೆಯಿಂದ ವೀರಾಜಪೇಟೆಯತ್ತ ಸಾಗುವಾಗ ಕಬ್ಬಿನಕಾಡು ಎಂಬಲ್ಲಿ ಇಳಿದು ಎಡಭಾಗದ ಮಣ್ಣು ರಸ್ತೆಯಲ್ಲಿ ಒಂದರ್ಥ ಕಿಲೋಮೀಟಾರ್ ಕ್ರಮಿಸಿದರೆ ದೇವಾಲಯ ತಲುಪಬಹುದು. ಕಕ್ಕಬೆಯಲ್ಲಿಳಿದರೆ ಸನಿಹದ ಪ್ರೌಢಶಾಲೆಯ ಬಳಿಗಾಗಿ ಗದ್ದೆಗಳಲ್ಲಿ ಸಾಗಬೇಕು. ಗದ್ದೆಗಳ ಬದಿಯಲ್ಲಿ ಕಾಡಿನಿಂದಾವೃತ್ತವಾದ ತಾಣದಲ್ಲಿ ಪನ್ನಂಗಾಲತಮ್ಮೆಯ ದೇಗುಲವಿದೆ. ಈ ದೇವಾಲಯದ ಎದುರು ಭಾಗದಲ್ಲಿ ವಿಶಾಲ ವೃಕ್ಷಗಳಿಂದ ಕೂಡಿದ ದೈವತಾಣವಿದೆ. ಇದರ ಸುತ್ತ ಪೂಜಾಕಾರ್ಯಗಳು ಜರುಗುತ್ತವೆ.ಇಲ್ಲಿನ ಕಾಡು ಗುಡ್ಡದಲ್ಲಿ ಪನ್ನಂಗಾಲತಮ್ಮೆಯ ಹಬ್ಬವೆಂದರೆ ಮನದಣಿಯೆ ಆಸ್ವಾದಿಸಬಹುದಾದ, ಹಿರಿಯ ಕಿರಿಯರೆಲ್ಲರೂ ಸಂಭ್ರಮದಿಂದ ನಲಿಯಬಹುದಾದ ಹಬ್ಬ, ಹಬ್ಬದ ಕಾರ್ಯಕ್ರಮ ಬಿಸಿಲೇರುವ ಮೊದಲೇ ಆರಂಭವಾಗುತ್ತದೆ.

                   ದೇವಾಲಯದ ಅವರಣವನ್ನು ಶುಚಿಗೊಳಿಸತೊಡಗಿದಂತೆ ಊರವರು. ಓಲಗದವರು ಆಗಮಿಸುತ್ತಾರೆ. ಶ್ರೀ ಆದಿ ಪನ್ನಂಗಾಲತಮ್ಮೆ, ಯುವಕಪಾಡಿಯ ತಕ್ಕಮುಖ್ಯಸ್ಥರಾದ ಅಂಜಪರವಂಡ ಅಯ್ಯಪ್ಪನವರಲ್ಲಿಂದ ಭಂಡಾರವನ್ನು ತರಲಾಗುತ್ತದೆ. ಇವರ ಮಾರ್ಗದರ್ಶನದಂತೆ ಊರಿನ ಪ್ರಮುಖ ಪರಿಶಿಷ್ಟ ವರ್ಗದವರು ಸೇರಿ ದೇವಾಲಯಕ್ಕೆ ತೆರಳುತ್ತಾರೆ. ದೇವಿಯ ಮೂರ್ತಿಯನ್ನು ಪೂಜಿಸಿ ಕೆಳಕ್ಕೆ ಇಳಿಸಿ ತೊಳೆಯುವ, ಅಲಂಕರಿಸುವ ಕಾರ್ಯ ಮಾಡುತ್ತಾರೆ. ಮೇಲಿನ ದೇವಾಲಯಕ್ಕೆ ಮೂಲ ಸುತ್ತು ಬಲಿ ಬರುವ ಸಂಪ್ರದಾಯವಿದೆ.

                     ದೇವಾಲಯದ ಸುತ್ತ ದೇವರನ್ನು ತಲೆಯ ಮೇಲೆ ಹೊತ್ತು ಸಾಗುವ ಸಂದರ್ಭದಲ್ಲಿ ದೈವ ಭಕ್ತವೃಂದ ಕುತೂಹಲಭರಿತರಾಗಿ ದಿಟ್ಟಿಸುತ್ತಾರೆ. ಜೀವನದಲ್ಲಿ ಕಷ್ಟನಷ್ಟಗಳನ್ನು ಅನುಭವಿಸಿದವರು ತಮ್ಮ ಸಂಕಷ್ಟಗಳನ್ನು ತೋಡಿಕೊಂಡು ಪರಿಹಾರ ಬಯಸುತ್ತಾರೆ. ಅವರವರ ಭಕ್ತಿಭಾವಗಳಿಗೆ ತಕ್ಕಂತೆ ದೈವಾನುಗ್ರಹ ದೊರೆಯುತ್ತದೆ.

                    ಪೂಜಾ ಕಾರ್ಯಕ್ಕೆಂದು ಅಣಿಮಾಡಲ್ಪಟ್ಟ ಸ್ಥಳದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ತಂದಿರಿಸಿದ ನಂತರ ಸುಮಾರು ಮಧ್ಯಾಹ್ನದ ವೇಳೆಗೆ ಸ್ವಲ್ಪಹೊತ್ತುಬಿಡುವು. ನಂತರದ ಕಾರ್ಯಕ್ರÀಮ ಮೂರು ಗಂಟೆಗೆ ಆರಂಭ. ಓಲಗದವರ ವಾದ್ಯಕ್ಕೆ ತಕ್ಕಂತೆ ಹರ್ಷಚಿತ್ತರಾಗಿ ಹಿರಿಯರು ಕಿರಿಯರು ನರ್ತಿಸುತ್ತಾರೆ. ಸುಮಾರು 1ಗಂಟೆ ಕಾಲ ವೀಕ್ಷಕರಿಗೆ ಈ ಕುಣಿತವನ್ನು ನೋಡÀಬಹುದು. ನಂತರ ದೇವಾಲಯದ ಎದುರಿನ ವಿಶಾಲ ಪ್ರಾಂಗಣದಲ್ಲಿ ಬಲಿ ಕೊಡುವ ಕಾರ್ಯಕ್ರಮ ವೀಕ್ಷಣೆಗೆ ಆರ್ಹ, ರೋಚಕ ಸಂಪ್ರದಾಯವಾಗಿ ಗಮನ ಸೆಳೆಯುತ್ತದೆ. ಕೆಲವರು ವಸ್ತ್ರಧರಿಸಿ, ಕೊರಳಿಗೆ ಹೂ ಮಾಲೆ, ಕೈಯಲ್ಲಿ ತ್ರಿಶೂಲ, ಕತ್ತಿಯಂತಹ ಆಯುಧ, ಸೊಂಟದಲ್ಲಿ ಡಾಬು ಧರಿಸಿ ದೈವಾಂಶವನ್ನು ಹೊಂದಿದಂತೆ ಆವೇಶದಿಂದ ಹೂಂಕರಿಸುತ್ತಾ ಆಯುಧಗಳನ್ನು ಝಳಪಿಸುತ್ತಾ ಹತ್ತು ಹನ್ನೆರಡು ಮಂದಿ ಪೂಜಾ ಸ್ನಾನದ ಸುತ್ತು ಬರುವಾಗ ಭಕ್ತ ಸಮೂಹ ಅಚ್ಚರಿಯಿಂದ ದಿಟ್ಟಿಸುತ್ತದೆ. ನಡುನಡುವೆ ದೈವಾಂಶ ಹೊಂದಿದವರಲ್ಲಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ತೋಡಿಕೊಂಡು ಪರಿಹಾರ ಬಯಸುವ ಭಕ್ತರೂ ಇಲ್ಲದಿಲ್ಲ.

                    ಸಣ್ಣ ಹಬ್ಬಕ್ಕೆ ಎರಡು ಕೊಡೆಗಳನ್ನು ಬಳಸುವುದು ಇಲ್ಲಿನ ಕ್ರಮ. ಆದರೆ ಎರಡು ವರ್ಷಕ್ಕೊಮ್ಮೆ ಜರುಗುವ ದೊಡ್ಡ ಹಬ್ಬದಲ್ಲಿ ನಾಲ್ಕು ಕೊಡೆಗಳನ್ನು ಬಳಸಲಾಗುವದು. ಈ ಕೊಡೆಗಳಾದರೂ ಎಂಥವು ಎಂದುಕೊಂಡಿದ್ದಿರಾ ಬಿದಿರಿನಿಂದ ಮಾಡಲ್ಪಟ್ಟ ಎರಡು ವಿಭಿನ್ನ ಗಾತ್ರದ ಕೊಡೆಗಳನ್ನು ಪ್ರಾಂಗಣದ ನಾಲ್ಕು ಮೂಲೆಗಳಲ್ಲಿ ನೇರವಾಗಿ ಊರುವ ಪ್ರಯತ್ನ ಮಾಡುತ್ತಾರೆ. ದೈವಮಹಿಮೆಯಿಂದÀ ಆ ಕೊಡೆಗಳನ್ನು ನೇರವಾಗಿ ಊರವರುಸಾಧ್ಯವಾಗುವದಿಲ್ಲವಂತೆ. ಇಲ್ಲಿನ ಸಂಪ್ರದಾಯದ ಪ್ರಕಾರ ಸಣ್ಣ ಕೊಡೆ ತೆಗೆಯದೆ. ದೊಡ್ಡ ಕೊಡೆಯನ್ನು ತೆಗೆಯುವಂತಿಲ್ಲ.ದೇವಿಯ ಮೂರ್ತಿಯನ್ನು ಹೊತ್ತು ಈ ಪ್ರಾಂಗಣಕ್ಕೆ ಮೂರು ಸುತ್ತು ಬಲಿ ಬರುವ ಕ್ರಮವಿದೆ. ನಂತರ ಮೇಲಿನ ದೇವಾಲಯದತ್ತ ಸಾಗುವದು. ಆ ದಿನ ರಾತ್ರಿ ದೇವಿಗೆ ಬಲಿನೀಡುವ ಹರಕೆ ಒಪ್ಪಿಸುವ ಪರಿಪಾಠವಿದೆ.

                    ಹಬ್ಬದ ಸಂದರ್ಭದಲ್ಲಿ ಹದಿನಾಲ್ಕು ಚಾಮುಂಡಿಗಳು ಇಲ್ಲಿಗೆ ಬರುತ್ತದಂತೆ. ಮಂಜುವುಂಡಿ, ಕರಿಚೌಂಡಿ ಪುಂಚವುಂಡಿ, ಕಾಖೊಟಜ್ಜಪ್ಪ,. ಹೀಗೆ ವಿಭಿನ್ನ ಹೆಸರುಗಳಿಂದ ಊರಿನ ಪ್ರಮುಖರು ಅವುಗಳನ್ನು ಗುರುತಿಸುತ್ತಾರೆ. ಈ ಹಿಂದಿನಿಂದಲೂ ಬರುವ ದೈವ ಸ್ವರೂಪಕೆಂಪು ವಸ್ತ್ರವನ್ನೂ ಹೊಸದಾಗಿ ಆಗಮಿಸಿದ ದೈವ ಸ್ವರೂಪ ಬಿಳಿಬಟ್ಟೆಯನ್ನೂ ಧರಿಸುವದು ಎಂದು ಪ್ರತ್ಯೇಕವಾಗಿ ಗುರುತಿಸುತ್ತಾರೆ.

                       ವಿಶೇಷ ಕಟ್ಟುಪಾಡುಗಳಿಂದ, ವಿಭಿನ್ನ ಕ್ರಮಗಳಿಂದ ಆಚರಿಸಲಪಡುವ ‘ಪನ್ನಂಗಾಲತಮ್ಮೆ’ಯ ಹಬ್ಬಕ್ಕೆ ಆಗಮಿಸಿದ ಭಕ್ತಾದಿಗಳು ಇತರ ಪಂಗಡದವರಾಗಿದ್ದರೂ, ಪೂಜಾ ಕಾರ್ಯಗಳಿಗೆ ಮಾತ್ರ ಪರಿಶಿಷ್ಟ ವರ್ಗದವರೇ ಆಗಬೇಕಾಗಿರುವದು ಇಲ್ಲಿನ ವೈಶಿಷ್ಟ್ಯ ಇದಕ್ಕೆ ಸಂಬಂಧಿತವಾದ, ಜನಬಳಕೆಯಲ್ಲಿರುವ ಕಥೆಯೊಂದು ಹೀಗೆ ಸಾಗುತ್ತದೆ:-ಕಾಷ್ರಾಲ್, ತಿರ್ಬೇಂದ್ರಪ್ಪ, ದೇಂದ್ರ ಕೋಲಪ್ಪ, ಇಗ್ಗುತ್ತಪ್ಪ ಮುಂತಾಗಿ ಒಬ್ಬಳು ಸಹೋದರಿ ಸಹಿತ ಏಳು ಮಂದಿಮಾಯೆಯಿಂದ ಕೇರಳದ ಉತ್ತರ ಭಾಗದಲ್ಲಿ ಜನಿಸಿದರು. ಅವರೆಲ್ಲರೂ ಜನರಿಗೆ ಉಪಕಾರ ಮಾಡಿ ಜನರನ್ನು ಭಕ್ತರನ್ನಾಗಿ ಮಾಡಬೇಕೆಂಬ ಬಯಕೆಯುಳ್ಳವರಾಗಿದ್ದರು. ಅವರಲ್ಲಿ ಕೊನೆಯ ನಾಲ್ಕು ಮಂದಿ ಮ¯ಯಾಳವನ್ನು ಬಿಟ್ಟು ಕೊಡಗಿನ ನಾಲ್ಕು ನಾಡು ಬೆಟ್ಟಕ್ಕೆ ಬಂದರು. ಆ ಬೆಟ್ಟದ ಮೇಲೆ ನಿಂತು ನಾಲ್ವರು ತಮ್ಮ ಸಾಮಥ್ರ್ಯದಂತೆ ಎಂದು ಅಣ್ಣಂದಿರು ಒಪ್ಪಿದರು.

                      ಅನಂತರ ಬೆಟ್ಟದಿಂದ ಕೆಳಗಿಳಿದು ಬಂದು ಕಕ್ಕಬ್ಬೆಯ ಹೊಳೆಯ ತೀರದಲ್ಲಿ ತಂಗಿದ ಅವರು, ತಾವು ಅಕ್ಕಿಯನ್ನು ತಂದು ಕೊಡುತ್ತೇವೆಂದೂ ತಂಗಿಯು ಉಪ್ಪಿಲ್ಲದೆ ಅಡಿಗೆ ಮಾಡಿ ಊಟ ಹಾಕಬೇಕೆಂದು ಹೇಳಿದರು. ತಂಗಿಯುಅಣ್ಣಂದಿರ ಮಾತಿಗೊಪ್ಪಿ ಸಮೀಪದಲ್ಲಿಯೇ ವಾಸವಾಗಿದ್ದ ಪರದಂಡ ಮನೆಯವರ ಹಸುವನ್ನು ತಂದು ಕರೆದು ಆ ಹಾಲಿನಲ್ಲಿ ಅನ್ನವನ್ನು ಬೇಯಿಸಿದಳು. ಅಲ್ಲದೆ, ಊಟಕ್ಕಾಗಿ ಬಾಳೆ ಎಲೆ ಕೊಯ್ಯಲು ಅದೇ ಮನೆಯ ತೋಟಕ್ಕೆ ಹೋದಳು. ಅದನ್ನು ನೋಡಿದ ಆ ಮನೆಯ ಹೆಂಗಸು ಉಮ್ಮವ್ವ ಎಂಬವಳು ಬಾಳೆ ಎಲೆ ಕುಯ್ಯುತ್ತಿರುವಾಗಇಗ್ಗುತ್ತಪ್ಪನ ತಂಗಿಯನ್ನು ಬೈದಳು. ಅದರಿಂದ ಸಿಟ್ಟುಗೊಂಡ ಅವಳು ಪರದಂಡ ಮನೆಯವರ ತೋಟದಲ್ಲಿ ಬಾಳೆ ಬೆಳೆಯದೆ ಹೋಗಲೆಂದು ಶಾಪ ಹಾಕಿ ಮುತ್ತುಗದ ಎಲೆಗಳನ್ನು ತಂದು ಊಟ ಬಡಿಸಿದಳು.

                         ಶಾಪದ ವೃತ್ತಾಂತವನ್ನು ತಿಳಿದ ಮನೆಯ ಯಜಮಾನನು ಓಡಿ ಬಂದು ಆ ನಾಲ್ಕು ಮಂದಿಗೂ ಸಾಷ್ಟಾಂಗ ನಮಸ್ಕಾರ ಮಾಡಿ ಶಾಪವನ್ನು ಹಿಂತೆಗೆದುಕೊಳ್ಳಬೇಕೆಂದು ಬೇಡಿದನು. ಅದಕ್ಕೆ ಹಿರಿಯವನಾದ ಇಗ್ಗುತ್ತಪ್ಪನು-ಶಾಪವನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಬದಲಾಗಿ ನಾನು ಇಲ್ಲಿಯೇ ನೆಲೆಸುವೆನು. ಪರದಂಡ ಮನೆಯವರಾದ ನೀವು ಇಲ್ಲಿ ನನಗೆ ದೇವಾಲಯ ಕಟ್ಟಬೇಕು. ಮತ್ತು ಎಂದೇ ತಕ್ಕಮುಖ್ಯಸ್ಥರಾಗಿ ಇರುವಂತಾಗಲಿ. ಮಾತ್ರವಲ್ಲ. ನನ್ನ ನೈವೆದ್ಯದ ಅನ್ನಕ್ಕಾಗಿ ನೀವು ಒಂದು ಎಲೆ ಸಾನಿಧ್ಯಕ್ಕೆ ಕೊಡುತ್ತಾ ಬರುವಂತಾಗಲಿ’ ಎಂದು ಅನುಗ್ರಹಿಸಿದರು.

                       ಊಟವಾದ ಮೇಲೆ ಎಲೆ ಅಡಿಕೆ ಜಗಿಯುತ್ತಾ ನಾಲ್ವರು ಕುಳಿತಿರುವಾಗ ಪಾಲೂರಪ್ಪನು ತಮಾಷೆಗಾಗಿ ‘ಯಾರ ತಾಂಬೂಲ ಕೆಂಪಾಗಿದೆ?” ಎಂದನು. ಬಣ್ಣವನ್ನು ನೋಡಲು ಎಲ್ಲರೂ ತಮ್ಮ ಎಡ ಅಂಗೈಯಲ್ಲಿ ಬಾಯಿಯಿಂದ ಎಲೆಅಡಿಕೆಯನ್ನು ಉಗುಳಿದರು. ಅಣ್ಣ ತಮ್ಮಂದಿರು ಮೂವರು ಅದನ್ನು ಮರಳಿ ಬಾಯೊಳಗೆ ಹಾಕುವಂತೆ ನಟಿಸಿ ಹಿಂದಕ್ಕೆಸೆದರು. ತಂಗಿ ಮಾತ್ರ ಆದನ್ನಗಿದರೆ ಪುನ: ಬಾಯಿಯೊಳಗೆ ಹಾಕಿಕೊಂಡಳು. ಇದನ್ನು ನೋಡಿದ ಅಣ್ಣಂದಿರು ಎಂಜಲು ತಿಂದ ಕಾರಣ ಅವಳ ಜಾತಿ ಹೋಯಿತೆಂದೂ ಅವಳು ತಮ್ಮೊಡನೆ ಇರಬಾರದೆಂದೂ ಗುಡುಗಿದರು. ಇದರಿಂದ ತಂಗಿಯ ಅಳುವನ್ನು ನೋಡಿ ಕನಿಕರಪಟ್ಟ ಇಗ್ಗುತ್ತಪ್ಪನು ‘ತಂಗೀ ಆಳಬೇಡ, ನೀನು ಆಗ ಬಿಟ್ಟ ಬಾಣ ಬಿದ್ದಲ್ಲಿ ಹೋಗಿ ನೆಲಸು. ಎಂಜಲನ್ನು ತಿಂದ ನಿನ್ನನ್ನು ನೋಡುತ್ತಿರುವೆನು’ ಎಂದು ಸಂತೈಸಿದನು. ಇದರಿಂದ ಸಮಾಧಾನಗೊಂಡ ತಂಗಿ ಕೊಕ್ಕರೆ ರೂಪ ತಾಳಿ ಹಾರತೊಡಗಿದಳು. ಹಾರುವ ಆ ಕೊಕ್ಕರೆಯನ್ನು ಒಬ್ಬ ಹೊಲೆಯನು ಹಿಡಿದನು. ಕೂಡಲೇ ಕೊಕ್ಕರೆ ಕಾಣಿಸಿದಾಗ ಹೊಲೆಯನಿಗೆ ಮೈತುಂಬಿ ಬಂತು. ಆವೇಶ ಬಂದ ಆ ಹೊಲೆÉಯನು ಹಾರಿ ಕುಣಿದಾಡುತ್ತಾ ಬಂದು ಬಾಣ ಬಿದ್ದ ಜಾಗದಲ್ಲಿ ನಿಂತನು. ಆ ಸ್ಥಳದಲ್ಲಿಯೇ ಆಕೆ ‘ಪನ್ನಂಗಾಲತಮ್ಮೆ’ ಎಂಬ ಹೆಸರಿನಿಂದ ನೆಲೆಸಿಳು. ಮತ್ತು ಪರಿಶಿಷ್ಟ ವರ್ಗದ ಜನಾಂಗದಿಂದಲೇ ಜಾತ್ರೆ, ಉತ್ಸವಗಳ ಕೈಂಕಾÀರ್ಯವನ್ನು ತೆಗೆದುಕೊಳ್ಳತೊಡಗಿದರು.

                    ಇಂದಿಗೂ ಇಗ್ಗುತ್ತಪ್ಪ ಮತ್ತು ಸಹೋದರರ ಜಾತಿಬ್ರಷ್ಟ ತಂಗಿ ಪನ್ನಂಗಾಲಮ್ಮೆ ಎಂಬ ಹೆಸರಿನಲ್ಲಿ ಪರಿಶೀಷ್ಟ ವರ್ಗದವರಿಂದ ಪೂಜಿಸಲ್ಪಡುತ್ತಿದ್ದಾಳೆ. ಪ್ರತಿ ವರ್ಷದ ಏಪ್ರಿಲ್ ತಿಂಗಳಲ್ಲಿ ಪನ್ನಂಗಾಲತಮ್ಮೆ ದೇವಿಗೆ ಪೂಜೆ-ಪುನಸ್ಕಾರಗಳು ಸಲ್ಲುತ್ತದೆ. ಆ ಸಂದರ್ಭದಲ್ಲಿ ಆವೇಶಭರಿತ ದೇವಿ-ನನಗೆ ಅಣ್ಣನನ್ನು ನೋಡಬೇಕು’ ಎಂದು ಇಗ್ಗುತ್ತಪ್ಪ ದೇಗುಲಕ್ಕೆ ಅಭಿಮುಖ ಮಾಡಿ ಹೊರಡಲು ಅಣಿಯಾಗುವದು. ಭಕ್ತರು ಆಕೆಯನ್ನು ತಡೆಯುವರು. ಸಂಪ್ರದಾಯವೆಂಬಂತೆ ನಡೆದು ಬಂದಿದೆ.

                                                                                                                                                                                                                                                                      ಲೇಖಕರು.ಸಿ.ಎಸ್. ಸುರೇಶ್