ThungaBhadhra Puran

ತುಂಗಭದ್ರಾ ಮಹಿಮೆ:

                    ಕಶ್ಯಪ-ದಿತಿ ದೇವಿಯ ಮಕ್ಕಳೇ ಹಿರಣ್ಯಾಕ್ಷ-ಹಿರಣ್ಯಕಶ್ಯಪು ಎಂಬ ದಾನವ ಸಹೋದರರು. ಹಿರಣ್ಯಾಕ್ಷನಿಗೆ ಶ್ರೀಹರಿ(ಪುರುಷರಿಗೆ) ಅತ್ಯಂತ ಪ್ರಿಯವಾದ ಭೂಮಿ(ಪ್ರಕೃತಿ), ಭೂಮಿಯನ್ನೇ ಅಡಗಿಸಿದರೆ ಎಂಬ ಯೋಚನೆ ಬಂತು. ತಪ್ಯಶ್ಶಕ್ತಿ ಸಾಮಥ್ಯ ಬಲದಿಂದ ಭೂಮಿಯನ್ನು ಎತ್ತಿಕೊಂಡು ಅಗಾಧವಾದ ಸಮುದ್ರದಲ್ಲಿ ಅಡಗಿಸಿದನು. ಸಕಲ ಮಾಯಾಮಯವಾದ ದಾನವ ನಾಶಕನಾದ ಶ್ರೀಹರಿಯು ಇದನ್ನು ತಿಳಿದು ಶ್ವೇತವರಾಹರೂಪನಾಗಿ ನೀರೊಳಗೆ ಹೋಗಿ ಅಡಗಿರುವ ಹಿರಣ್ಯಾಕ್ಷನನ್ನು ಕೊಂದು ತನ್ನ ಕೋರೆ ದಾಡೆಗಳ ಮೇಲಿನಿಂದ ಭೂಮಿಯನ್ನು ತಂದು ಮೊದಲಿನಂತೆ ಇಟ್ಟನು. ಇದರಿಂದ ದೇವ-ಋಷಿಗಳು ವರಾಗರೂಪಿಯಾದ ಶ್ರೀಹರಿಯನ್ನು ಸ್ತೋತ್ರ ಮಾಡಿದರು.

                         ವರಾಹ ಸ್ವಾಮಿಗೆ ಸ್ವಾಮಿಗೆ ಭೂಮಿಯನ್ನು ನೀರಿನಿಂದ ಹೊತ್ತು ತಂದು ಮೇಲಿಟ್ಟದ್ದರಿಂದಲೂ ಹಿರಣ್ಯಾಕ್ಷನೊಡನೆ ಯುದ್ಧ ಮಾಡಿಕೊಂಡು ಬಳಲಿಕೆಯಾಗಿದ್ದರಿಂದಲೂ ಆಯಾಸ ಪರಿಹಾರಕ್ಕಾಗಿ ಸಪ್ತ ಕುಲ ಪರ್ವತಗಳಲ್ಲಿ ಪ್ರಸಿದ್ಧವಾದ ಪಶ್ಚಿಮದ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಒಂದು ಸ್ಥಳದಲ್ಲಿ ನಿಂತನು. ವರಾಹ ರೂಪಿಯಾದ ಶ್ರೀಹರಿಯು ನಿಂತ ಪರ್ವತವೇ ‘ವರಾಹ ಪರ್ವತ’ವೆಂದೂ ಅದೇ ಸ್ಥಳವು ‘ವೇದಪಾದ ಪರ್ವತ’ ವೆಂದೂ ಪ್ರಸಿದ್ಧಿಯಾಯುತು. ಯಜ್ಞವೇ- ವರಾಹ, ಯಜ್ಞಸಾಧನವು ವೇದ (ಯಜ್ಞಾ ವಾರಾಹ ಮತುಲಂ ರೂಪಂ ಯಾ ಬಿಭೃತೋ ಹರೇಃ)

                      ಹೀಗೆ ನಿಂತ ವರಾಹ ಸ್ವಾಮಿಯ ಪ್ರಬಲ ಎರಡು ಕೋರೆದಾಡೆಗಳ ಎಡಗಡೆಯಿಂದಲೂ, ಕಣ್ಣಿನ ಭಾಗದಿಂದಲೂ, ಕಣ್ಣಿನ ಭಾಗದಿಂದಲೂ ಧಾರಾಕಾರವಾಗಿ ಜಲರೂಪವಾಗಿ ಪ್ರಕಟವಾಯಿತು. ದೇವನ ಬಲದಂಷ್ಟ್ರ ಭಾಗದಿಂದ ಹರಿದ ಜಲಧಾರೆಯು ‘ಭದ್ರಾ’ ಎಂತಲೂ, ಎಡದಂಷ್ಟ್ರ ಭಾಗದಿಂದ ಹರಿದ ಜಲವು ‘ತುಂಗಾ’ ಎಂತಲೂ ನೇತ್ರಭಾಗದಿಂದ ಹುಟ್ಟಿದ್ದು ‘ನೇತ್ರಾವತೀ’ ನದಿಯೆಂದು ಹೆಸರು ಪೆದವು. ನೇತ್ರಾವತೀ ನದಿಯು ಹಯಗ್ರೀವ (ಈಗಿನ ಕುದುರೆಮುಖವೆಂಬ) ಪರ್ವತದ ತಪ್ಪಲಿನಲ್ಲಿ ಹರಿದು ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ‘ಪರಶುರಾಮ ಕ್ಷೇತ್ರ’ (ದಕ್ಷಿಣ ಕನ್ನಡ ಜಿಲ್ಲೆ) ಧರ್ಮಸ್ಥಳದಲ್ಲಿ ಪ್ರವಹಿಸಿ ಪಶ್ಚಿಮದಲ್ಲಿ ಸಮುದ್ರವನ್ನು ಸೇರುತ್ತದೆ.

                     ತುಂಗಾನದಿಯು ಉತ್ತರಾಭಿಮುಖವಾಗಿ ಪ್ರವಹಿಸಿ ಪಂಚತೀರ್ಥ ವಿಭಾಗವೆಂದಾಗಿ ಮುಂದೆ ಎತ್ತರವಾದ ಬಂಡೆಗಳ ಮೇಲಿಂದ ಧುಮುಕುತ್ತಾ ‘ಶತಬಿಂದು, ಸಹಸ್ರ ಬಿಂದು’ (ಈಗಿನ ಸೂತನಬ್ಬಿ) ತೀರ್ಥವೆನಿದಿದೆ. ಈ ತೀಥಸ್ನಾನದಿಂದ ಶತ-ಸಹಸ್ರ ಗೋದಾನ ಫಲವುಳ್ಳದ್ದಾಗಿದೆ ಎಂದು ಪುರಾಣಗಳು ಸಾರಿವೆ. [ಇದು ಇಂದಿಗೂ ರಾತ್ರಿ ಸಮಯದಲ್ಲಿ ನೀರಿನ ಶಬ್ದವನ್ನು ಕಿವಿಕೊಟ್ಟು ಆಲಿಸಿದರೆ ಒಮ್ಮೆ ಮಂತ್ರ ಹೇಳಿದಂತೆ ಹಾಡಿದಂತೆ, ಮಾತಾಡಿದಂತೆ, ಆರ್ಭಟ ಮಾಡಿದಂತೆ ಕ್ಷಣ ಕ್ಷಣಕ್ಕೂ ಚಿತ್ರವಿಚಿತ್ರತರ ಧ್ವನಿಯಿಂದ ಆನಂದ, ಆಶ್ಚರ್ಯವನ್ನುಂಟುಮಾಡುತ್ತದೆಂದು ಅನುಭವಸ್ತರ ಮಾತಿದೆ.]. ತುಂಗಾನದಿಯ ‘ಗುಂಜಿಮಾಧವ’ (ಈಗಿನ ಗುಲಗಂಜೀ ಮನೆ) ಕ್ಷೇತ್ರದಲ್ಲಿ ‘ವಿಮಲ’ ಸಂಗಮವಾಗಿರುತ್ತದೆ. ಈ ಸಂಗಮದ ಸ್ನಾನವು ಕಲಿ ಕಲ್ಮಷವನ್ನು ದೂರಮಾಡುವುದಾಗಿದೆ. ಮುಂದೆ ಹರಿದ ತುಂಗೆಯು ‘ವಿಭಾಂಡಕರ’ ಆಶ್ರಮವಿದ್ದ ‘ಶೃಂಗ ಗಿರಿ’ [ಶೃಂಗೇರಿ]ಯಲ್ಲಿ ವಿಭಾಂಡಕರ ಅರ್ಚಿತ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಸಾನಿಧ್ಯದ ಮುಂಭಾಗದಿಂದ ಹರಿಯುತ್ತದೆ. ಪರಮ ಶಾಂತಿ ಚಿತ್ತರಾದ ವಿಭಾಂಡಕರ ತಪಃ ಪ್ರಭಾವದಿಂದ ಪ್ರಾಣಿಗಳೂ ವೈರತ್ವವನ್ನು ಮರೆತು ಸ್ನೇಹದಿಂದ ಇರುವುದನ್ನು ನೋಡಿದ ಶಂಕರಭಗವತ್ಪಾದರು ಚತುರಾಮ್ನಾಯಾ ಪೀಠಗಳಲ್ಲಿ ಒಂದಾದ ದಕ್ಷಿಣಾಮ್ಮಾಯದ ಶ್ರೀಶಾರದಾ ಪೀಠವನ್ನು ಸ್ಥಾಪಿಸಿದರು.

                        ತುಂಗೆಯು ಅನೇಕಾನೇಕ ತಸಸ್ವಿಗಳ ಆವಾಸವುಳ್ಳದ್ದಾಗಿ ಹರಿಯುತ್ತಾ ಪರಶುರಾಮನ ಮಾತೃಹತ್ಯಾ ದೋಷವನ್ನು ಸಂಪೂರ್ಣ ಪರಿಹಾರ ಮಾಡಿ (ಈಗಿನ ತೀರ್ಥಹಳ್ಳಿ)ತೆಂದು ಪ್ರಸಿದ್ಧಿ ಹೊಂದಿದೆ. ಮಾರ್ಗಶಿರ ಬಹುಳ ಅಮಾವಾಸ್ಯ ದಿನ ಸೂರ್ಯೋದಯಕ್ಕೆ ಮೊದಲು ಈ ರಾಮತೀರ್ಥದ ರಾಮಕುಂಡದಲ್ಲಿ ಶ್ರೀರಾಮೇಶ್ವರನ ದರ್ಶನ ಸೇವಾದಿಗಳಿಂದ ಮಾತೃಹತ್ಯ ತತ್ಸಮಾನವಾದ ಪಾಪ ಪರಿಹಾರ ನಿವೃತ್ತಿಯಾಗುವುದೆಂದು [ಇಂದಿಗೂ ಈ ತೀರ್ಥಹಳ್ಳಿಯಲ್ಲಿ ಎಳ್ಳು ಅಮಾವಾಸ್ಯೆ ದಿನ ಸಾವಿರಾರು ಮಂದಿ ಪುಣ್ಯ ಸ್ನಾನ ಮಾಡುತ್ತಾರೆ] ನಂಬಲಾಗಿದೆ.

ವರಹಾ ದೇಹ ಸಂಭುತೇ ಗಂಗೇ ತ್ರಿಪಥಗಾಮಿನಿ |    ತುಂಗಭದ್ರೇತಿ ವಿಖ್ಯಾತೇ ಗೃಹಾಣಾಘ್ರ್ಯಂ ಸಮೋಸ್ತುತೇ ||

                        ವರಹಾ ಪರ್ವತದಲ್ಲಿ ತುಂಗ, ಭದ್ರಾ, ನೇತ್ರಾವತೀ ನದಿಗಳ ಮೂಲ ಶಿಖರಭಾಗವೇ-ಉಗಮಸ್ಥಾನವೇ-ಗಂಗಾಮೂಲವೆಂದು ಪ್ರಸಿದ್ಧಿ ಪಡೆದಿದೆ. [ಇದು ಸಮುದ್ರ ಮಧ್ಯದಿಂದ 4781 ಅಡಿ ಎತ್ತರವಿದೆ] ಭದ್ರಾ ನದಿಯು ಮೂಲದಿಂದ ಪೂರ್ವಾಭಿಮುಖವಾಗಿ ಹರಿದು ಬರುವ ಸ್ವಲ್ಪ ದೂರದಲ್ಲಿಯೇ ಇರುವ ತೀರ್ಥಪ್ರದೇಶಕ್ಕೆ ‘ವರಹಾ ತೀರ್ಥ’ವೆಂದು ಹೆಸರು. ಭದ್ರಾ ನದಿಯು ವೇಗದಿಂದ ಹರಿಯುತ್ತಾ ಬಂಡೆಗಳ ಧುಮುಕುತ್ತಾ ಪರ್ವತಗಳ ಮಧ್ಯದಲ್ಲಿ ಶೀತಳಾಗಿ, ಶಾಂತಳಾಗಿ ಹರಿದು ‘ಸೋಮವತೀ’ ನದಿ ಸಂಗಮವಾಗಿ ಕಲಶ ಕ್ಷೇತ್ರವನ್ನು ಪ್ರವೇಶಿಸುತ್ತಾಳೆ. ಹಿಂದೆ ಬ್ರಹ್ಮಾದಿ ದೇವತೆಗಳು ವೇದ ಪರ್ವತದ ತಪ್ಪÀಲಿನಲ್ಲಿ ಯಾಗಕ್ಕಾಗಿ ಯೋಗ್ಯವಾದ ಸ್ಥಳವೊಂದನ್ನಾರಿಸಿ ಸೋಮಲತೆಯನ್ನು- ದೃಷತಉಪಲಗಳಲ್ಲಿ ಕುಟ್ಟಿ-ವಾಲ-ವಸತೀವರಿ ಉದಕದಲ್ಲಿ ಶೋಧಿಸಿ ದ್ರೋಣಕಲಶದಲ್ಲಿ ತುಂಬಿಟ್ಟಿದ್ದರು. ಆ ಸ್ಥಳದ ಪ್ರಾಶಸ್ತ್ಯದಿಂದ ಸೋಮರಸ ಉಕ್ಕಿ ನದಿಯಾಗಿ ಹರಿದ ಕಾರಣ ದೇವತೆಗಳು ‘ಸೋಮವತೀ’ ಎಂದು ಕರೆದರು. ಈ ನದಿಯಲ್ಲಿ ಸೋಮವಾರ ಪೂರ್ಣಿಮ ಯೋಗವು ಸ್ನಾನಾದಿಗಳಿಗೆ ಪ್ರಶಸ್ತವಾದವು. ಆ ದಿನ ಸೂರ್ಯ ಉದಯಾ ನಂತರ, ಪ್ರಾತಃಕಾಲ, ಸಂಗಮಕಾಲ, ಮಧ್ಯಾಹ್ನ ಕಾಲ, ಈ ರೀತಿ ಮೂರು ಸಲ ಸ್ನಾನ ಮಾಡುವುದರಿಂದ ಸಂಚಿತ, -ಪ್ರಾರಬ್ಧ-ಆಗಾಮ ಎಂಬ ಮೂರು ವಿಧವಾದ ಮತ್ತು ಕಾಯೇನ, ವಾಚಾ, ಮನಸಾ ಪಾಪ ಕರ್ಮವು ನಿವೃತ್ತಿಯಾಗಿ ಪರಿಶುದ್ಧನಾಗುತ್ತಾನೆಂದು ಹೇಳುತ್ತಾರೆ.

                  ಸ್ಕಂದ ಪುರಾಣದಲ್ಲಿ ಮಹಾದೇವನು ಸ್ಕಂದನನ್ನು ಕುರಿತು ಶ್ರೀಮನ್ನಾರಾಯಣನು ಯಜ್ಞರೂಪಿ ವರಾಹವೆನಿಸಿದ್ದಾನೆ. ಆ ಯಜ್ಞವು ವೇದ ಮೂಲವಾದಲ್ಲಿ ಯಜ್ಞದ ವೇದಿಕೆಯು ಪರ್ವತವು. ವೇದದಲ್ಲಿ ಪ್ರಧಾನ ಯಾಗವು ನಡೆಯುವಂತೆ ವರಾಹಸ್ಯಾಮಿಯು ನಿಂತಿದ್ದರಿಂದ ಇದಕ್ಕೆ ‘ವೇದ ಪರ್ವತ’ವೆಂದು ಹೆಸರಾಯಿತು. ಈ ವೇದ ಪರ್ವತದ ಶ್ರೇಣಿಗಳು ಭದ್ರಾ ದ್ವಾರದಲ್ಲಿರುವುದೇ ‘ಅಗಸ್ತ್ಯ ಕ್ಷೇತ್ರ’ ಶರೀರದ ಶಿರಸ್ಸಿನಂತೆ ತಪಃಪ್ರಭಾವಿತರಾದ ಅಗಸ್ತ್ಯರಿಂದ ಪೂಜಿಸಲ್ಪಟ್ಟುವುದರಿಂದ ಉತ್ತಮ ಕ್ಷೇತ್ರವೆನಿಸಿದೆ.