Hemavathi River

ಹೇಮಾವತೀ ಮಹಿಮೆ:

                 ವರಾಹ ಪವ್ತದಿಂದ ಚಂದ್ರಶಿಲಾ ಪರ್ವತದ ವರೆಗೆ ಶ್ರೀಕಲಶ ಕ್ಷೇತ್ರದಿಂದ ಖಾಂಡ್ಯ ಕ್ಷೇತ್ರದವರೆಗೂ ಮೂರು ಯೋಜನ ವಿಶಾಲ ಸ್ಥಳವು ಅಗಸ್ತ್ಯ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಈ ಕ್ಷೇತ್ರದಲ್ಲಿ ಕ್ಷೇತ್ರ ಪಾವನೆಯರಾದ ತುಂಗ, ಭದ್ರಾ, ನೇತ್ರಾವತೀ, ಸೋಮಾವತೀ, ಹೇಮಾವತೀ ಎಂಬ ಪಂಚ ನದಿಗಳು ಹುಟ್ಟಿ ಲೋಕೋಪಕಾರವನ್ನು ಮಾಡುತ್ತಿವೆ.

                 ಹಿಂದೆ ದಕ್ಷಬ್ರಹ್ಮನ ಯಾಗದ ಸಮಯದಲ್ಲಿ ತಂದೆಯ ಮನೆಯಲ್ಲಿ ಅವಮಾನಿತಳಾದ ದಾಕ್ಷಾಯಣಿಯು ಯಜ್ಞಕುಂಡವನ್ನು ಪ್ರವೇಶ ಮಾಡಿದಳಷ್ಟೇ. ಜೊತೆಗೆ ‘ಸಖೀ’ಯೂ ಯಜ್ಞಕುಂಡವನ್ನು ಪ್ರವೇಶಿಸಿದಳು. ದೇವತೆಗಳು ಆತುರದಿಂದ ಸತೀ-ಸಖೀ ಇಬ್ಬರನ್ನೂ ಯಜ್ಞಕುಂಡದಿಂದ ಮೇಲೆ ತೆಗೆದರು. ಸತೀ ದೇವಿ ಹೇಮ ವರ್ಣದವಳಾಗಿ ಸಖೀಯೂ ಕಪಿಲ ವರ್ಣದವಳಾಗಿದ್ದಳು. ನಾನು ಮುಂದೆ ಲೋಕೋಪಕಾರಕ್ಕಾಗಿ ಈ ದೇಹದಿಂದ ನದಿಯಾಗಿ ಹರಿಯುತ್ತೇನೆ. ನಂತರದಲ್ಲಿ ಸಂಪೂರ್ಣಾಂಶ ವೈಶ್ವಾನರತ್ವದಿಂದ ಹಿಮವಂತನ ಮಗಳಾಗಿ ಮೇನಾ(ಮೇನಕೆ)ಯಲ್ಲಿ ಅವತಾರ ಮಾಡುತ್ತೇನೆ, ಅಗ್ನಿಯಿಂದ ತೆಗೆದ ಪುನೀತ ದೇಹದಲ್ಲಿ ಪ್ರಾಜ್ಞಾಜೀವ ಒಂದನ್ನು ನನ್ನಂಶದಿಂದ ಲೋಕೋಪಕಾರಕ್ಕಾಗಿ ಕರುಣಿಸುವೆನೆಂದು ಹೇಳಿ ದಾಕ್ಷಾಯಣಿಯು ಹಿಮವಂತನ ಮಗಳಾದಳು. ಯೋಗಿನೀತ್ವದಿಂದ ಪ್ರಕಾಶಿಸುತ್ತ ಹೇಮ ಕಪಿಲೆಯರು ವಿಮಾನ ರೂಪವಾಗಿ ದೇವಲೋಕಕ್ಕೆ ಹೋದರು. ಅವರಿಬ್ಬರ ದೇಹದ ಕಾಂತಿಯಿಂದಾಗಿ ‘ಹೇಮ’. ‘ಕಪಿಲ’ ಎಂಬ ಹೆಸರನ್ನು ಪಡೆದರು.