Halebeedu

ಹಳೇಬೀಡು

                    ಹಿಂದೊಮ್ಮ ಹಳೇಬೀಡು ಒಂದು ಚಿಕ್ಕಹಳ್ಳಿ. ಇದರ ಹೆಸರು ದ್ವಾರಸಮುದ್ರ ಇಂದಿಗೂ ಹಳೇಬೀಡು, ಹಾಸನ-ಬೇಲೂರು ಮಾರ್ಗ ಮಧ್ಯದಲ್ಲಿಯ ಅಂದಿನ ಕೋಟೆಯ ಶಿಥಿಲಗಳು ಕಂಡುಬರುತ್ತವೆ. ಕನ್ನಡದಲ್ಲಿ ಹಳೆ ಎಂದರೆ ‘ಹಳೆಯದು’ ಎಂದರ್ಥ. ಬೀಡು ಎಂದರೆ ಪಟ್ಟಣ ‘ಹಳೆಯಬೀಡು’ ಎಂದರೆ ಹಳೆಯ ಪಟ್ಟಣ ಎಂದರ್ಥ.

               ಹಳೇಬೀಡಿನ ದೇವಾಲಯ ವಿಶಾಲ ಮೈದಾನದಲ್ಲಿದೆ. ಹೊರಗಿರುವ ಪ್ರಾಕಾರದಿಂದ ಒಳಗೆ ನೂರು ಗಜಗಳ ದೂರದಲ್ಲಿ ಆಲಯವಿದೆ. ಪ್ರಾಕಾರವನ್ನು ದಾಟಿ ಒಳಗಿರುವ ದೇವಾಲಯದ ಹತ್ತಿರಕ್ಕೆ ಹೋಗುವುದಕ್ಕೆ ಮೊದಲೇ ಎಡಭಾಗಕ್ಕೆ ಐವತ್ತು ಗಜಗಳ ದೂರದಲ್ಲಿ ಒಂದು ಚಿಕ್ಕ ಭವನವಿದೆ. ಇದು ಭಾರತೀಯ ಪುರಾತತ್ತ್ವ ಇಲಾಖೆಯವರ ಆಫೀಸು!

                  ಬೇಲೂರು ದೇವಾಲಯದಂತೆಯೇ ಈ ಹಳೇಬೀಡು ದೇವಾಲಯವೂ ಇದೆ! ಆರಡಿಗಳ ಎತ್ತರವಿರುವ ವಿಶಾಲವಾದ ವೇದಿಕೆಯ ಮೇಲೆ ನಿರ್ಮಿಸಲ್ಪಟ್ಟ. ದೇವಾಲಯ ಅರವತ್ತನಾಲ್ಕು ಕೋನಗಳಿಂದ ನಿರ್ಮಿಸಲ್ಪಟ್ಟಿದೆ. ಗೋಡೆಗಳ ಕೆಳಗೆ ಸುತ್ತಲೂ ವಿವಿಧ ರೀತಿಯ ಪ್ರಾಣಿಗಳು, ನಾಟ್ಯ ಮಾಡುತ್ತಿರುವ ಗಣೇಶ, ತಾಂಡವ ಮಾಡುತ್ತಿರುವ ಶಿವ, ಕೈಲಾಸ ಪರ್ವತವನ್ನು ಮೇಲಕ್ಕೆತ್ತಬೇಕೆಂದು ಕೊಳ್ಳುವ ರಾವಣ, ಐರಾವತದ ಮೇಲೆ ಸವಾರಿ ಮಾಡುತ್ತಿರುವ ದೇವೇಂದ್ರ, ಹಂಸವಾಹನದ ಮೇಲಿರುವ ಬ್ರಹ್ಮದೇವ, ನಾಟ್ಯ ಸರಸ್ವತಿ, ದಶಾವತಾರಗಳಿಗೆ ಸಂಬಂಧಿಸಿದ ಘಟ್ಟಗಳು ಶ್ರೀರಾಮನು ಒಂದೇ ಬಾಣದಿಂದ ಏಳು ತಾಳೆ ಮರಗಳನ್ನು ನೆಲಕ್ಕುರುಳಿಸಿದ್ದು, ತನ್ನ ತಲೆಯ ಮೇಲೆ ಬಿಲ್ಲನ್ನು ಹೆದೆಯೇರಿಸುತ್ತಿರುವ ಅರ್ಜುನ, ಪುಟ್ಟ ಕೃಷ್ಣನ ಚೇಷ್ಟೆಗಳು, ಹೀಗೆ ಎಷ್ಟೋ ಚಿತ್ರವಿಚಿತ್ರವಾದ ಪುರಾಣದ ಕಥೆಗಳನ್ನು ತಿಳಿಸುವ ಶಿಲ್ಪಗಳು ಬಹಳವಿದೆ.

                ದೇವಾಲಯದೊಳಗೆ ಶಾಂತಲೇಶ್ವರಸ್ವಾಮಿ ಇರುವ ಗರ್ಭಗುಡಿಯ ದ್ವಾರದ ಎರಡೂ ಕಡೆಗಳಲ್ಲೂ ಎರಡು ದ್ವಾರಪಾಲಕರ ವಿಗ್ರಹಗಳಿವೆ. ಇವು ಒಂದೊಂದು ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು ಕೃಷ್ಣಶಿಲೆ ವಿಗ್ರಹಗಳ ಸೂಕ್ಷ್ಮ ಕೆಲಸಗಳು ಅದ್ಭುತವಾಗಿದೆ. ಹಣೆಯ ಮಧ್ಯದಲ್ಲಿ ಬೆಂಕಿಕಡ್ಡಿ ತೂರುವಷ್ಟು ಖಾಲೀಸ್ಥಳ ಬಿಟ್ಟು ಕಿರೀಟದ ಸಣ್ಣನೆಯ ಅಂಚಿಗೆ ಅತೀ ಸೂಕ್ಷ್ಮವಾದ ಕುಸುರಿ ಕೆಲಸವನ್ನು ನೋಡಬಹುದು. ಇದನ್ನು ನೋಡಿದರೆ ಇಲ್ಲಿನ ಶಿಲ್ಪಗಳಲ್ಲಿನ ಕೌಶಲ್ಯತೆ ಅರ್ಥವಾಗುತ್ತದೆ.

                ಒಳಗಿರುವ ಎರಡು ದೇವಾಲಯಗಳಿಗೆ ಎದುರಾಗಿ ಬೇರೆ ಒಂದು ಮಂಟಪದಲ್ಲಿ ಎರಡು ನಂದಿ ವಿಗ್ರಹಗಳಿವೆ. ಭಾರತ ದೇಶದಲ್ಲಿರುವ ನಂದಿ ವಿಗ್ರಹಗಳಿಗಿಂತ ಗಾತ್ರದಲ್ಲಿ ಇವು ಐದು, ಆರು ಸ್ಥಾನಗಳಲ್ಲಿವೆ. ಇದರಲ್ಲಿ ಒಂದು ಸ್ವಲ್ಪ ದೊಡ್ಡದು, ಎರಡನೆಯದು ಚಿಕ್ಕದು. ಇದನ್ನು ಸೂಕ್ಷ್ಮವಾಗಿ ನೋಡಿದರೆ ಅಥವಾ ಪರಿಶೀಲಿಸಿ ನೋಡಿದರೆ ಶಿವನ ತಾಂಡವ ನೃತ್ಯವನ್ನು ಏಕಾಗ್ರತೆಯಿಂದ ನೋಡುತ್ತಾ ತನ್ನ ಕಿವಿಗಳನ್ನು ನಿಮಿರಿಸಿಕೊಂಡು, ಆ ನೃತ್ಯದ ವೀರ ರಸಕ್ಕೆ ಉಂಟಾಗುವ ಆವೇಶದ ಅನುಭೂತಿಯ ಗುರುತಾಗಿಯೂ ಮೂಗಿನ ಪುಟಗಳನ್ನು ಹಿಗ್ಗಿಸಿ ತಾನೂ ನೃತ್ಯ ಮಾಡಬೇಕೆಂಬ ಉತ್ಸಾವುಂಟಾಗುತ್ತಿರುವಂತೆ, ತೀಕ್ಷ್ಣವಾಗಿರುವ ಕಣ್ಣಗಳು, ನೆಲಕ್ಕೆ ಕಾಲನ್ನು ಕುಟ್ಟಿ ಮೇಲಕ್ಕೇಳಲು ಸಿದ್ಧವಾಗುತ್ತಿರುವ ಕಾಲಿನ ಗೊರಸುಗಳನ್ನು ನೋಡಿದರೆ ಶಿಲ್ಪಿಯ ಊಹಾಶಕ್ತಿಗೆ ಕೌಶಲ್ಯತೆಗೆ ಬೆರಗಾಗಲೇ ಬೇಕು. ದೇವಾಲಯಕ್ಕೆ ಮತ್ತೊಂದೆಡೆ ವಿಶಾಲವಾದ ಪ್ರದೇಶದಲ್ಲಿ ಶಿಥಿಲಗೊಂಡ ಅನೇಕ ಶಿಲ್ಪಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ದೇವಾಲಯದ ಬಲಭಾಗದ ಮೂಲೆಯಲ್ಲಿ ಈ ಒಡೆದ ಶಿಲ್ಪಗಳನ್ನು ಭದ್ರಪಡಿಸಿದ್ದಾರೆ.

                ವಿಷ್ಣುವರ್ಧನ ಚಕ್ರವರ್ತಿಯ ಸೇನಾಧಿಪತಿ ಕೇತುಮಲ್ಲ ಎಂಬಾತ ಕ್ರಿ.ಶ. 1121ರಲ್ಲಿ ಈ ದೇವಾಲಯದ ನಿರ್ಮಾಣ ಕೈಗೊಂಡ. ಇದು ಪೂರ್ತಿಯಾಗುವುದಕ್ಕೆ 105 ವರ್ಷಗಳು ಬೇಕಾಯ್ತು. “ಶಿಲ್ಪ ನಿರ್ಮಾಣದಲ್ಲಿ ಹಳೇಬೀಡು ದೇವಾಲಯಕ್ಕೆ ಸರಿಸಾಟಿಯಾದುದು ಮತ್ತೊಂದಿಲ್ಲ” ಇದು ವಿದೇಶೀ ಶಿಲ್ಪ ಪಂಡಿತರ ಅಭಿಪ್ರಾಯ. ಭಾರತೀಯ ಶಿಲ್ಪಗಳ ಔನ್ಯತ್ಯ, ನೈಪುಣ್ಯತೆ ಎಷ್ಟು ಅದ್ವಿತೀಯವಾದುದೋ ತಿಳಿದುಕೊಳ್ಳಬೇಕೆಂಬ ಆಸಕ್ತಿ ಇರುವವರು ಈ ದೇವಾಲಯವನ್ನು ತಪ್ಪದೇ ನೋಡಬೇಕಾಗಿದೆ.