study of Basruru

ಬಸರೂರು - ಒಂದು ಸಮೀಕ್ಷೆ

ಡಾ. ಪಿ. ಗುರುರಾಜ್ ಭಟ್, ಎಂ.ಎ.ಬಿ.ಟಿ.ಪಿಎಚ್.ಡಿ. :

               ತುಳುನಾಡಿನಲ್ಲಿ ಐತಿಹಾಸಿಕ ಪಟ್ಟಣಗಳಲ್ಲಿ ಕುಂದಾಪುರ ತಾಲೂಕಿನ ಬಸರೂರೆಂಬುದು ಒಂದಾಗಿದೆ. ಈಗ ಈ ಊರು ಒಂದು ಸಾಮಾನ್ಯ ಪಂಚಾಯತು ಪ್ರದೇಶವಾದರೂ ಚಾರಿತ್ರಿಕ ಕಾಲದಲ್ಲಿ ಸಾಕಷ್ಟು ಮೆರೆದ ಹಾಗೂ ಪ್ರಸಿದ್ಧಿ ಪಡೆದ ಪಟ್ಟಣವಾಗಿತ್ತು. ಇದು ದೇವಾಲಯಗಳ ಆಗರ. ಸಾಮಾಜಿಕ ಘಟಕಗಳ ಕೇಂದ್ರ. ರಾಜಕೀಯ ವೈಶಿಷ್ಟವುಳ್ಳ ಪ್ರದೇಶ. ಮಾತ್ರವಲ್ಲದೆ ಆರ್ಥಿಕ ವ್ಯವಹಾರಗಳ ಕೇಂದ್ರವೂ ಆಗಿತ್ತು. ವ್ಯವಹಾರದಲ್ಲಿಯೂ ಪುರಾಣ ರೀತಿಯಲ್ಲಿಯೂ ಈ ಊರು `ವಸುಪುರ'ವೆಂಬ ಅಭಿದಾನವನ್ನು ಪಡೆದಿದೆ. ವಸು ಚಕ್ರವರ್ತಿ ಎಂಬ ಅರಸನು ಆಳಿಕೊಂಡಿದ್ದ ಕೇಂದ್ರ ಸ್ಥಳ ಬಸರೂರೆಂಬುದು ನಂಬಿದವರ ಸಂಗತಿ. ವಿಚಾರ ಮಾಡೋಣ. ನಮಗಿಷ್ಟರ ತನಕ ದೊರಕಿದ ಯಾವ ಶಾಸನಗಳಲ್ಲಿಯೂ `ವಸುಪುರ'ವೆಂಬ ಈ ಹೆಸರಿನ ಬಗೆಗೆ ದಾಖಲೆ ಸಿಕ್ಕಲಿಲ್ಲ. ಬದಲಿಗೆ `ಬಸರೂರು' ಎಂಬ ಹೆಸರು ಸುಮಾರು ಆರೇಳು ಶತಮಾನಗಳಿಂದಲೂ ಬಳಕೆಯಲ್ಲಿ ಇದ್ದುದು ದಾಖಲೆಯಿಂದ ತಿಳಿಯುತ್ತದೆ. ಈ ಬಸರೂರು ಎಂಬ ಹೆಸರಿನ ಸಂಸ್ಕøತೀಕರಿಸಲ್ಪಟ್ಟ ರೂಪಾಂತರ `ವಸುಪುರ'ವಿರಬೇಕೆಂದು ನನಗನಿಸುತ್ತದೆ. (ಡಾ. ಸಾಲೆತೋರರು ಅವರ ಹಿಸ್ಟರಿ ಆಫ್ ತುಳುವ ಎಂಬ ಹೆಸರಿನ ಅರಸನು ಕಾಲ್ಪನಿಕ ವ್ಯಕ್ತಿ ಎಂಬುದಾಗಿ ಈಗ ತಿಳಿದು ಬಂದಿದೆ. ಆದುದರಿಂದ ವಿಭುದವಸುವಿಗೂ ವಸುಪುರಕ್ಕೂ ಯಾವ ಸಂಬಂಧವೂ ಇದ್ದಂತೆ ಕಂಡು ಬರುವುದಿಲ್ಲ.)

               ಬಸರೂರಿಗೆ ಶಾಸನಗಳಲ್ಲಿ ಕಂಡು ಬರುವ ಪ್ರಥಮ ಉಲ್ಲೇಖ ಯಾವುದು ಮತ್ತು ಯಾವಾಗ? ಕ್ರಿ.ಶ. 1155ರ ಕವಿಯಾಳುಪೇಂದ್ರನೆಂಬ ಆಳುಪರಸನ ಶಾಸನದಲ್ಲಿ `ಹೊಸ ಪಟ್ಟಣ ಬಸುರೆಪುರ'ವೆಂದಿದೆ. ಈ ಬಸುರೆಪುರವೆಂಬುದು ಬಸರೂರಾಗಿ ರೂಪಾಂತರ ಹೊಂದಿರಬಹುದು. ಕಾಲಕ್ರಮೇಣ ಅದು ವಸುಪುರವಾಗಿ ಪರಿವರ್ತನೆ ಹೊಂದಿರಬಹುದು. ಲಿಂಗಣ್ಣ ಕೃತ ಕೆಳದಿ ನೃಪ ವಿಜಯದಲ್ಲಿ `ವಸುಪುರ'ದ ಉಲ್ಲೇಖವಿದೆ. ಈ ಹೆಸರನ್ನು ಬಳಸಿಕೊಂಡ ಪ್ರಥಮ ಗ್ರಂಥವಿದು. ಇದರ ಕಾಲ ಕ್ರಿ.ಶ. 18ನೆಯ ಶತಮಾನ. ಗಿಳಿಯಾರು ಶಂಕರಪುರವಾದಂತೆ, ತಾರೆಗುಡ್ಡೆ ದೇವರು ನಾರಿಕೇಳ ದೇವರಾದಂತೆ, ಶೀವಳ್ಳಿ (ಶಿವಹಳ್ಳಿ) ಶಿವವಲ್ಲಿಯಾದಂತೆ, ಬ್ರಹ್ಮಪುರ (ಬ್ರಾಹ್ಮಣರ ವಸತಿ) ಅಜಪುರ (ಬ್ರಹ್ಮನವೂರು)ವಾದಂತೆ, ಬಸರೂರು ವಸುಪುರವಾಗಿರಬಹುದು. ಇಷ್ಟು ಜಿಜ್ಞಾಸೆ ಇಲ್ಲಿ ಸಾಕೆಂದೆಣಿಸುತ್ತದೆ. ಹೊಸಪಟ್ಟಣ ಬಸುರೆಪುರವೆಂದಿದ್ದುದರಿಂದ ಪ್ರಾಯಶಃ ಕ್ರಿ.ಶ. 12ನೇ ಶತಮಾನಕ್ಕೆ ಬಸರೂರು ಹೊಸ ಪಟ್ಟಣವಾಗಿ ಪುನನಿರ್ಮಾಣಗೊಂಡಿರಬಹುದು. ಬಸರೂರಿನ ಪ್ರಾಚೀನತೆಯನ್ನು ಕ್ರಿ.ಶ. 2ನೇ ಶತಮಾನಕ್ಕೂ ಕೊಂಡೊಯ್ಯಬಹುದೋ ಏನೋ? ಸೀವೆಲನ ಂಟಿಣiquಚಿಡಿಚಿiಟಿ ಖemಚಿiಟಿs oಜಿ ಣhe Pಡಿesiಜeಟಿಛಿಥಿ oಜಿ ಒಚಿಜಡಿಚಿs (ಗಿoಟ. 1). ಎಂಬ ಗ್ರಂಥದಲ್ಲಿ ಬಸರೂರನ್ನು ಬಾರ್ಸಲೋರ್ ಎಂದೂ ಈ ಬಾರ್ಸಲೋರ್ ಎಂಬುದು ಟೊಲೆಮಿ ಗ್ರಂಥದ ಬರೇಸ್ ಆಗಿರಬೇಕೆಂದೂ ಕ್ರಿ.ಶ. 2ನೇ ಶತಮಾನದ ಸುಮಾರಿಗೆ ಇದು ವಿಶೇಷ ತರದ ವ್ಯವಹಾರಿಕ ಚಟುವಟಿಕೆಯನ್ನು ಅರೇಬಿಯಾ ಮತ್ತು ಐಗುಪ್ತ ದೇಶಗಳೊಡನೆ ನಡಸುತ್ತಿತ್ತೆಂದೂ ಬರೆದಿದೆ. ಬಸರೂರು ಕ್ರಿ.ಶ. ದ ಆದಿಯಿಂದಲೂ ಒಂದು ಬಂದರಾಗಿತ್ತೆಂಬುದರಲ್ಲಿ ಹೆಚ್ಚಿನ ಸಂದೇಹವಿರಲಾರದು. ಇತ್ತೀಚೆಗೆ ಇದರ ಪ್ರಾಮುಖ್ಯವು ಮಸುಕಾಗಿದೆ. ಸ್ಥಳೀಯವಾಗಿ ಬಸರೂರಿನಲ್ಲಿ ಯಾವ ಅರಸನಿದ್ದನೆಂಬುದು ಇಂದಿಗೂ ವಿಸ್ಮಯವಾಗಿಯೇ ಉಳಿದಿದ್ದರೂ ತುಳುನಾಡನ್ನು ಅವ್ಯಾಹತವಾಗಿ ಒಂದು ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲದ ವರೆಗೆ ಆಳಿಕೊಂಡಿದ್ದ ಆಳುಪರಸರ ಅಧೀನವಾಗಿ ಈ ಪಟ್ಟಣವಿತ್ತೆಂದು ತಿಳಿಯಬಹುದು. ಈ ಪಟ್ಟಣದ ವೈಶಿಷ್ಟವನ್ನು ಬಾದಾಮೀ ಚಾಳುಕ್ಯರೂ ವಿಜಯ ನಗರದ ಅರಸರೂ ಅನಂತರ ಕೆಳದಿ ನಾಯಕರೂ ಕಂಡುಕೊಂಡು ಇದನ್ನು ಒಂದು ಉತ್ತಮ ರೇವಾಗಿಯೂ ಸುಭದ್ರ ಸ್ಥಳವಾಗಿಯೂ ಕಾಪಾಡಿಕೊಂಡಿರಬೇಕು. ಮಧ್ಯಕಾಲದಲ್ಲಿ ಎಂದರೆ ಕ್ರಿ.ಶ. 15ನೆ ಶತಮಾನದಿಂದ ಕ್ರಿ.ಶ. 18ನೇ ಶತಮಾನದವರೆಗೆ ಇದರ ಆಡಳಿತವನ್ನು ಸೂರಾಲಿನ ತೊಳಹರು ಬಾರಕೂರಿನ ವಿಜಯನಗರದ ರಾಜ್ಯಪಾಲರ ಕೈಕೆಳಗೂ ಅನಂತರ ಕೆಳದಿ ನಾಯಕರೂ ಕಂಡುಕೊಂಡು ಇದನ್ನು ಒಂದು ಉತ್ತಮ ರೇವಾಗಿಯೂ ಸುಭದ್ರ ಸ್ಥಳವಾಗಿಯೂ ಕಾಪಾಡಿಕೊಂಡಿರಬೇಕು.

                      ಮಧ್ಯಕಾಲದಲ್ಲಿ ಎಂದರೆ ಕ್ರಿ.ಶ. 15ನೆ ಶತಮಾನದಿಂದ ಕ್ರಿ.ಶ. 18ನೇ ಶತಮಾನದವರೆಗೆ ಇದರ ಆಡಳಿತವನ್ನು ಸೂರಾಲಿನ ತೊಳಹರು ಬಾರಕೂರಿನ ವಿಜಯನಗರದ ರಾಜ್ಯಪಾಲರ ಕೈಕೆಳಗೂ ಅನಂತರ ಇಕ್ಕೇರಿ ನಾಯಕರ ಕೈಕೆಳಗೂ ನಡೆಸುತ್ತಿದ್ದಿರಬೇಕು. ಈ ಪಟ್ಟಣದ ಪ್ರಾದುರ್ಭಾವ ಕಾಲದಲ್ಲಿ ಇದು ಏಳು ಕೇರಿಯಾಗಿ ವಿಭಾಗಿಸಲ್ಪಟ್ಟಿತ್ತು. ಅವುಗಳಾವುವೆಂದರೆ: ಕೋಟೆಯ ಕೇರಿ, ಚೋಳಿಯಕೇರಿ, ಹೊಸಕೇರಿ, ಸಾಲಿಗರ ಕೇರಿ, ಮೂರು ಕೇರಿ (ಮೂಡುಕೇರಿ), ಪಡುಕೇರಿ, ಮತ್ತು ದೇವರ ಕೇರಿ. ಈಗ ಸ್ಮರಣೆಯಲ್ಲಿರುವ ಹೆಸರುಗಳು ಬೇರೆ ಇರಬಹುದು. ಒಂದೊಂದು ಕೇರಿ ಎಂಬುದು ಈಗಣ ಪಟ್ಟಣದ `ವಾರ್ಡ್' ಇದ್ದಂತೆ. ಈ ಪಟ್ಟಣದ ಆಡಳಿತ ವ್ಯವಸ್ಥೆ ಅದರದ್ದೇ ಆದ ವೈಶಿಷ್ಟವನ್ನು ಹೊಂದಿತ್ತು. ಆಡಳಿತೆಯ ಸೌಲಭ್ಯಕ್ಕೋಸ್ಕರ `ಹಲರು' ಮತ್ತು `ಸೆಟ್ಟಿಕಾರರು' ಎಂಬವರ ಪ್ರತಿನಿಧಿಗಳ ಸಮಿತಿ ಇತ್ತೆಂದೂ ಶಾಸನಗಳಿಂದ ತಿಳಿದು ಬರುತ್ತದೆ. ಈ `ಹಲರು' ಯಾರೆಂದು ಇಂದಿಗೂ ಸರಿಯಾಗಿ ತಿಳಿಯದಿದ್ದರೂ ಇವರು ಜೈನಧರ್ಮದ ಜನರ ಪ್ರತಿನಿಧಿಗಳೆಂಬುದಾಗಿ ಸ್ಥೂಲವಾಗಿ ಒಪ್ಪಿಕೊಳ್ಳಬಹುದು. ಸೆಟ್ಟಿಕಾರರೆಂದರೆ ಶ್ರೇಷ್ಠಿಗಳು, ವ್ಯಾಪಾರಸ್ಥರು. ಇಲ್ಲಿ ಒಂದೆರಡು ದೃಷ್ಟಾಂತಗಳನ್ನು ಕೊಡಬಹುದು. ಕ್ರಿ.ಶ. 1455ರ ಶಾಸನವು ಪಡುವಕೇರಿ ಮತ್ತು ಮೂಡಕೇರಿಗೊಳಗಾದ ಒಂದು ಒಪ್ಪಂದವನ್ನು ತಿಳಿಯಪಡಿಸುತ್ತದೆ. ದೇವಿ ದೇವಾಲಯಕ್ಕೆ ಅಡಿಕೆ ಮರ ಮತ್ತು ಕುರಿಗಳನ್ನು ಕೊಂಡೊಯ್ಯುವ ಬಗೆಗೆಪರಸ್ಪರ ಅನುಸಂಧಾನದಿಂದ ವ್ಯವಹರಿಸಿಕೊಳ್ಳಬೇಕೆಂದು ಇದರ ಒಕ್ಕಣೆ ಆಗಿದೆ. ಇದೇ ರೀತಿ ಇತರ ದೃಷ್ಟಾಂತಗಳೂ ಇವೆ. ಒಂದೊಂದು ಕೇರಿಗೆ ಒಂದೊಂದು ಕೆರೆ ಇದ್ದಂತೆ ಕಂಡು ಬರುತ್ತದೆ. ಈ ಕೆರೆಗಳು ನೀರಾವರಿಯ ಮುಖ್ಯ ಸಾಧನಗಳೂ ಆಗಿದ್ದವು. ಪ್ರತಿ ಕೇರಿಗೂ ಒಂದು ದೇವಾಲಯವಿತ್ತು. ಬಸರೂರು ಮತ್ತು ಬಾರಕೂರು ಪಟ್ಟಣಗಳ ರಚನೆ ಮತ್ತು ವ್ಯಾಪಾರ, ವ್ಯವಹಾರ ಒಂದೇ ರೀತಿಯಲ್ಲಿ ಕಂಡುಬರುತ್ತದೆ. ಬಾರಕೂರು ಗಾತ್ರದಲ್ಲಿ ದೊಡ್ಡ ಪಟ್ಟಣವಾಗಿತ್ತು. ಬಸರೂರಿನ ದೇವಮಂದಿರಗಳನ್ನು ಪರಿಶೀಲಿಸಿದರೆ ಇಲ್ಲಿ ಶೈವ, ಶಾಕ್ತ, ವೈಷ್ಣವ ಈ ಮೂರು ಪಂಥಗಳೂ ಸಾಕಷ್ಟು ಪ್ರಸಿದ್ಧಿ ಪಡೆದಿದ್ದುವೆನ್ನಬಹುದು. ಕಲವು ದೇವಾಲಯಗಳ ಚಿಕ್ಕ ವಿವರಗಳನ್ನು ಇಲ್ಲಿ ಕೊಡಲಾಗಿದೆ. ನಖರೇಶ್ವರ ದೇವಾಲಯವು ಬಸರೂರಿನ ಹಿರಿಯ ದೇಗುಲ `ನಖರ'ವೆಂಬ ವ್ಯಾಪಾರ ಸಂಸ್ಥೆಯಿಂದ ಸ್ಥಾಪಿತವಾದ ದೇಗುಲವಿದು. ಇದನ್ನು ಈಗ ಮಹಾಲಿಂಗೇಶ್ವರವೆಂದು ಕರೆಯುತ್ತಾರೆ. ಈ ದೇಗುಲಕ್ಕೆ ಕ್ರಿ.ಶ. 12ನೇ ಶತಕದ ಉಲ್ಲಖವಿದೆ. ಇದಕ್ಕಿಂತಲೂ ಒಂದು ಶತಮಾನ ಪ್ರಾಚೀನವೆನ್ನಬಹುದಾದ ದೇವಾಲಯವಿದು. ಇಲ್ಲಿ ಗಣೇಶ, ಭೈರವ ಮತ್ತು ಮಹಿಷಾಮರ್ದಿನಿ ಬಿಂಬಗಳು ಕಲ್ಯಾಣಿ ಚಾಲುಕ್ಯರ ಕಾಲದ್ದಾಗಿವೆ. ಪಂಚಲೋಹದ ದ್ವಾರಪಾಲ ಮೂರ್ತಿಗಳು ಅಖಿಲ ಕರ್ನಾಟಕದ ವೈಶಿಷ್ಟ್ಯವುಳ್ಳವುಗಳಾಗಿವೆ. ವಿಜಯನಗರದ ಕಾಲದ ರಚನೆಯೂ ಕೆಳದಿಯವರ ಕಾಲದ ರಚನೆಯೂ ಇಲ್ಲಿ ಕಂಡುಬರುತ್ತದೆ. ಈಗ `ತೊಳಸೇಸ್ವರ'ವೆಂದು ಕರೆಯಲ್ಪಡುವ `ತುಳುವೇಶ್ವರ' ದೇವಾಲಯವು ಈ ಹೆಸರಿನ ಏಕಮಾತ್ರ ದೇವಮಂದಿರ. ಈಗ ಇದು ಸಂಪೂರ್ಣ ಬಿದ್ದು ಹೋಗಿದೆ. ಇದು ಎಷ್ಟೆಂದರೂ ಕ್ರಿ.ಶ. 11ನೇ ಶತಕಕ್ಕಿಂತ ಅರ್ವಾಚೀನವಲ್ಲದ ದೇವಗೃಹ. ತುಳುವರಿಂದ ನಿರ್ಮಾಣವಾದ ದೇವ ಮಂದಿರವಿದಾಗಿರಬೇಕು. ವೆಂಕಟ್ರಮಣ ದೇವಾಲಯವು ವಿಶೇಷ ಮಹತ್ವವನ್ನೊಳಗೊಂಡಿರದಿದ್ದರೂ ಇಲ್ಲಿಯ ಗಜಲಕ್ಷ್ಮೀ, ಗರುಡ ಮತ್ತು ಆಂಜನೇಯ ಶಿಲಾಮೂರ್ತಿಗಳು ಮಧ್ಯಕಾಲೀನ ಉತ್ತಮ ಶಿಲ್ಪಗಳಾಗಿವೆ. ಅಂತೆಯೇ ಅದರ ಸಮೀಪವಿರುವ ಉಮಾಮಹೇಶ್ವರ ಬಿಂಬ. ಬಸರೂರಿನಲ್ಲಿರುವ ನಾಥ ಪಂಥವು ಪ್ರಬಲವಾಗಿದ್ದಿತು. ಸದಾನಂದ ಮಠವೆಂಬುದು ನಾಥ ಪಂಥದ ಕೇಂದ್ರ. ದೇವೀ ದೇವಸ್ಥಾನವೂ ಈ ಪಂಥಕ್ಕೆನೇ ಸೇರಿದ್ದಾಗಿದೆ. ಮೂರು ಲಿಂಗಗಳು ಬ್ರಾಹ್ಮೀ, ಮಾಹೇಶ್ವರೀ, ವೈಷ್ಣವೀ ಪ್ರತೀಕವಿರಬಹುದು ಅಥವಾ ಕಾಳಿ, ಲಕ್ಷ್ಮಿ ಮತ್ತು ಸರಸ್ವತಿ ನಿರ್ದೇಶವಿರಬಹುದು. ಬಸರೂರಿನಲ್ಲಿ ಹಂಜಮಾನವೆಂಬ ಮಹಮ್ಮದೀಯ ವರ್ತಕ ವರ್ಗವೂ ಇದ್ದುದು ಶಾಸನಗಳಿಂದ ಅರಿವಾಗುತ್ತದೆ. ಪ್ರಾಕ್ತನ ವಿಭಾಗದಿಂದ ರಕ್ಷಿಸಲ್ಪಡುವ ಯೋಗ್ಯವಾದ ಒಂದು ಅವಶೇಷವೆಂದರೆ ಹರಿಕಾರರ ಮನೆಯಲ್ಲಿರುವ ಪಡಸಾಲೆಯ ಮರದ ಚೌಕಟ್ಟು 200ಕ್ಕಿಂತಲೂ ಅಧಿಕ ತಾವರೆ ಹೂವಿನ ವೈವಿಧ್ಯಪೂರ್ಣವಾದ ಶಿಲ್ಪವನ್ನೊಳಗೊಂಡ ಈ ಮೆಚ್ಚಿಗೆ ನಿಜವಾಗಿಯೂ ಆಶ್ಚರ್ಯವನ್ನುಂಟು ಮಾಡುವಂತಹುದಾಗಿದೆ.

                    ಬಸರೂರಿನ ಸಮೀಪ ಹಟ್ಟಿಅಂಗಡಿ ಇದೆ. ಇದೊಂದು ಪ್ರಾಚೀನ ಜೈನ ಕೇಂದ್ರ. ಹಳೆಗಾಲದಲ್ಲಿ ಘಟ್ಟದ ಮೇಲಣ ಹುಂಬುಚ್ಚಕ್ಕೂ ಇಲ್ಲಿಗೂ ಸಂಬಂಧವಿದ್ದಿತ್ತು. ಇಲ್ಲಿ ಕ್ರಿ.ಶ. 9ನೇ ಶತಕದ ಒಂದು ಶಾಸನವು ದೊರಕಿದ್ದು ಧಾರವಾಡದ ಲಕ್ಷ್ಮೇಶ್ವರದ ಉಲ್ಲೇಖವನ್ನು ಮಾಡುತ್ತದೆ. ಇಲ್ಲಿಯ ಲೋಕನಾಥೇಶ್ವರ ದೇಗುಲವು ಒಂದು ಸಾವಿರ ವರ್ಷಗಳಿಗಿಂತಲೂ ಪ್ರಾಚೀನವಾದುದು. ಇಲ್ಲಿಯ ಉಪಸ್ಥಾನ ಮೂರ್ತಿಯಾದ ಗಣೇಶನ ಉಬ್ಬು ಶಿಲ್ಪವು ಗಣಪತಿ ಶಿಲ್ಪ ಜ್ಞಾನಾಭ್ಯಾಸಿಗಳಿಗೆ ವಿಶೇಷ ಮಹತ್ವದ್ದಾಗಿದೆ. ಇದೊಂದು ದ್ವಿಬಾಹು ಮೂರ್ತಿ ಅಂತೆಯೇ ಗಣಪತಿ ದೇವಾಲಯದ ಇನ್ನೊಂದು ದ್ವಿಬಾಹು ಮೂರ್ತಿ ಪ್ರಾಚೀನವಾದುದು. ಅಂತೆಯೇ ಹಟ್ಟಿಅಂಗಡಿ ಮಧ್ಯಕಾಲೀನ ಶ್ರೀ ವೇಣುಗೋಪಾಲ ಬಿಂಬವೊಂದು ಉತ್ಕøಷ್ಟ ಶಿಲ್ಪವಾಗಿದೆ. ಬಸರೂರಿನ ಸಮೀಪವಿರುವ ಕೋಣಿ ಎಂಬಲ್ಲಿರುವ ಮಹಾಕಾಳಿ ಗುಡಿಯ 15' ಎತ್ತರದ ಮರದ ಮೂರ್ತಿಯು ನಂದಿ ವಾಹನವಾಗಿರುವ ವಿಶೇಷ ಬಿಂಬವಾಗಿದೆ. ಹೀಗೆ ಬಸರೂರು ಪ್ರಾಚೀನ ಇತಿಹಾಸವನ್ನೊಳಗೊಂಡ ಸ್ಥಳ ಇಲ್ಲಿಯ ಅವಶೇಷಗಳಲ್ಲಿ ಕೆಲವನ್ನಾದರೂ ಚೆನ್ನಾಗಿರಿಸಿಕೊಳ್ಳಬಹುದು. ಇಲ್ಲಿ ಉತ್ಖನನ ಮಾಡುವುದರಿಂದ ಪ್ರಾಚೀನ ಸಂಸ್ಕøತಿಯ ಕುರುಹುಗಳು ದೊರಕಬಹುದು. ವಿಜಯನಗರ ಕಾಲದಲ್ಲಿ ಇದರ ಪ್ರಸಿದ್ಧಿ ವ್ಯಾಪಕವಾಗಿತ್ತು. ತುಳುನಾಡಸಿರಿಗಳು ಬಸರೂರಿನವರಂತೆ. 


town
P. Gururaja Bhat