Kemmannu Gundi

 ಕೆಮ್ಮಣ್ಣು ಗುಂಡಿ:

ಚಿಕ್ಕಮಗಳೂರು ಜಿಲ್ಲೆಯ ಒಂದು ಸುಂದರವಾದ ಹಿಲ್‍ಸ್ಟೇಷನ್ ಈ ಕೆಮ್ಮಣ್ಣುಗುಂಡಿ. ಸಮುದ್ರ ಮಟದಿಂದ 1434 ಮೀಟರ್‍ಗಳ ಎತ್ತರದಲ್ಲಿರುವ ಈ ಪರ್ವತ ಪ್ರದೇಶ ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಪ್ರತೀಕವಾಗಿದೆ. ಮೈಸೂರಿನ ರಾಜ ಕೃಷ್ಣರಾಜೇಂದ್ರ ಒಡೆಯರ್ ತಮಗಾಗಿ ಇಲ್ಲೊಂದು ಬೇಸಿಗೆಯ ಶಿಬಿರವನ್ನು ಕಟ್ಟಿಸಿಕೊಂಡಿದ್ದರು. ಆದರೆ ನಂತರ ಆ ಭವನವನ್ನು ಸರ್ಕಾರಕ್ಕೆ ಬಹುಮಾನವಾಗಿ ನೀಡಿದ್ದಾರೆ. ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ಈ ಭವನದ ನಿರ್ವಹಣೆಯನ್ನು ಮಾಡುತ್ತಿದೆ.

ಕೆಮ್ಮಣ್ಣು ಗುಂಡಿಯನ್ನು ಕೃಷ್ಣರಾಜೇಂದ್ರ ಗಿರಿಧಾಮವೆಂದೂ ಕರೆಯುತ್ತಾರೆ. ಈ ಬೆಟ್ಟಗಳಲ್ಲಿ ಅನೇಕ ಝರಿಗಳು ಪ್ರವಹಿಸುತ್ತವೆ. ಸುತ್ತಲೂ ಅಂದವಾದ ಹೂದೋಟಗಳಿಂದ ಇಲ್ಲಿನ ಉದ್ಯಾನವನಗಳೆಲ್ಲಾ ಸರ್ವಾಂಗ ಸುಂದರವಾಗಿವೆ. ಪ್ರಾಚೀನ ಕಾಲದಲ್ಲಿ ಈ ಬೆಟ್ಟವನ್ನು ‘ಚಂದ್ರದ್ರೋಣ’ ಪರ್ವತ ಎಂದೂ ಕರೆಯುತ್ತಿದ್ದರು.

ಬಾಬಾಬುಡನ್‍ಗಿರಿ, ಮುಳ್ಳಯ್ಯಗಿರಿ, ಕಲ್ಲತ್ತಿ ಜಲಪಾತ ಇಲ್ಲಿನ ಇತರ ಆಕರ್ಷಣೆಗಳಾಗಿವೆ. ಪ್ರವಾಸಿಗರು ಇಲ್ಲಿಗೆ ಪಿಕ್‍ನಿಕ್ ನಿಮಿತ್ತ ಬರುತ್ತಾರೆ. ಬೆಂಗಳೂರಿನಿಂದ ಬಸ್ಸುಗಳ ಸೌಕರ್ಯವಿದೆ.

        ಮುಳ್ಳಯ್ಯನಗಿರಿ : ಇದು ಕರ್ನಾಟಕದಲ್ಲಿ ಎತ್ತರವಾದ ಪರ್ವತ ಶಿಖರ. ಚಿಕ್ಕಮಗಳೂರಿಗೆ 6 ಕಿ.ಮೀ. ದೂರದಲ್ಲಿದೆ. 6000 ಅಡಿಗಳ ಎತ್ತರವಿರುವ ಈ ಬೆಟ್ಟಕ್ಕೆ ಸೂರ್ಯಾಸ್ತಮಾನವನ್ನು ನೋಡಲು ಅನೇಕ ಜನ ಬರುತ್ತಾರೆ. ಇದಕ್ಕೆ ಬರುವ ಮೊದಲು ಭದ್ರಾ ಸಂರಕ್ಷಿತ ಪ್ರದೇಶವನ್ನು ದರ್ಶಿಸುತ್ತಾರೆ.

ದತ್ತಾತ್ರೇಯ ಪೀಠ :  ಈ ಪೀಠ ಬಾಬಾಬುಡನ್‍ಗಿರಿ ಶಿಖರದ ಮೇಲಿದೆ. ಇದು ಚಿಕ್ಕಮಗಳೂರಿಗೆ 32 ಕಿ.ಮೀ. ದೂರದಲ್ಲಿದೆ. ಕಾಫಿಯನ್ನು ಮೊದಲ ಬಾರಿ ಭಾರತದಲ್ಲಿ ಪ್ರವೇಶಗೊಳಿಸಿದ ಬಾಬಾಬುಡನ್ 16ನೆಯ ಶತಮಾನದಲ್ಲಿ 7 ಕಾಫೀ ಬೀಜಗಳನ್ನು ತಂದು ಇಲ್ಲಿ ನಾಟಿದನಂತೆ, ಆ ಬೀಜಗಳು ಇಂದು ವಿಶಾಲವಾದ ಕಾಫಿ ತೋಟಗಳನ್ನು ಪ್ರಸಾದಿಸಿವೆ.