Basruru Garadi

ಬಸ್ರೂರು ಗರಡಿ : 

                      ತುಳುನಾಡು ಭೂತ, ದೈವ ದೇವರ ಆರಾಧನೆಯಿಂದ ವಿಶಿಷ್ಟ ಸಂಸ್ಕøತಿ ಪರಂಪರೆಯನ್ನು ಹೊಂದಿದೆ. ಈ ಆರಾಧನೆಗಳ ಹಿನ್ನೆಲೆಯಲ್ಲಿ ಸತ್ಯಧರ್ಮನ್ಯಾಯವನ್ನು ನಿತ್ಯ ಜೀವನದಲ್ಲಿ ಉಳಿಸಿ ಬೆಳೆಸುವ ಆಶಯವಿದೆ. ಸತ್ಯಧರ್ಮ ನ್ಯಾಯಕ್ಕಾಗಿ ಹೋರಾಟ ನಡೆಸಿ, ಅತಿಮಾನುಷ ಶಕ್ತಿಯನ್ನು ತೋರಿದ ವೀರ ಪುರುಷರಲ್ಲಿ ಕೋಟಿ ಚೆನ್ನಯರು ಪ್ರಮುಖರು. ಕೋಟಿ ಚೆನ್ನಯರ ಆರಾಧನೆಯ ಕೇಂದ್ರಗಳೇ ಗರಡಿಗಳು. ಕೋಟಿ ಚೆನ್ನಯರಿರುವಾಗಲೇ ತುಳುನಾಡಿನ ಆಡಳಿತ ವ್ಯವಸ್ಥೆಯ 66 ಬೀಡುಗಳಲ್ಲಿ ಗರಡಿಯನ್ನು ಸ್ಥಾಪನೆ ಮಾಡಲಾಗಿದೆ. ಈ 66 ಗರಡಿಗಳಲ್ಲಿ ಬಸ್ರೂರು ಗರಡಿಯೂ ಒಂದು. ಬಸ್ರೂರಿನ ಮೂಡುಕೇರಿಯ ಉತ್ತರತುದಿಯಲ್ಲಿ ಗರಡಿ ಇದೆ. ಉತ್ತರದಲ್ಲಿ ತುಂಬಿ ಹರಿಯುವ ವಾರಾಹಿ ನದಿ, ಪೂರ್ವದಲ್ಲಿ ಬಳ್ಕೂರಿನವರೆಗೆ ವಿಶಾಲ ಬಯಲು, ದಕ್ಷಿಣದಲ್ಲಿ ಫಲವತ್ತಾದ ಗದ್ದೆಗಳು, ಪಶ್ಚಿಮದಲ್ಲಿ ತೆಂಗಿನ ತೋಟ, ವಿಶಾಲ ಬಯಲು ಗದ್ದೆಗಳು, ನಿರಂತರವಾಗಿ ಪಶ್ಚಿಮದಿಂದ ಬೀಸುವ ತಂಪು ಗಾಳಿ, ಇಂತಹ ಪರಿಸರದಲ್ಲಿ ಸುಂದರ ವಿಶಾಲ ಕೋಟಿ ಚೆನ್ನಯರ ಗರಡಿ ಸ್ಥಾಪನೆಯಾಗಿದೆ. ಸುಮಾರು 100 ವರ್ಷಗಳ ಹಿಂದೆ ಮಣ್ಣಿನ ಗೋಡೆಯ, ಊರ ಹಂಚ್/ಕುಂಬಾರರ ಹಂಚ್ ಹೊದಿಸಿದ ಮಾಡಿನ ಸಣ್ಣ ಪ್ರಮಾಣದ ಗರಡಿಯಾಗಿತ್ತು. ಆಗ ಶ್ರೀ ಚೆನ್ನ ಪೂಜಾರಿಯವರು ಪಾತ್ರಿಯಾಗಿದ್ದರು. ಇವರ ಅಳಿಯ ಶ್ರೀ ಕುಷ್ಟನ್ ಪೂಜಾರಿಯಾನೆ ಕೃಷ್ಣ ಪೂಜಾರಿಯವರ ಕಾಲದಲ್ಲಿ ಅಭಿವೃದ್ಧಿ ಹೊಂದ ತೊಡಗಿತು.

                      ಕೃಷ್ಣ ಪೂಜಾರಿಯವರು ಪ್ರಭಾವಶಾಲಿ ಪಾತ್ರಿಗಳಾಗಿದ್ದರು. ಇವರ ನೆನಪಿಗಾಗಿ ಒಂದು ಉರು/ಪಾತ್ರಿಬಿಂಬ ಮಾಡಿ, ಬ್ರಹ್ಮಗುಂಡದಲ್ಲಿ ಸ್ಥಾಪಿಸಲಾಗಿದೆ. ಈಗ ಶ್ರೀ ಗೋಪಾಲ ಪೂಜಾರಿಯವರ ಆಡಳಿತದಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿಯಾಗುತ್ತಿದೆ. ಸುಮಾರು 30 ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಿ ವಿಶಾಲಗೊಳಿಸಿದರು. 2012ನೇ ಇಸವಿಯಲ್ಲಿ ಉರುಗಳನ್ನೆಲ್ಲ ನವೀಕರಿಸಿ ಆಧುನಿಕ ಅನುಕೂಲತೆಗಳನ್ನು ಅಳವಡಿಸಿ ಪ್ರತಿಷ್ಠಾಮಹೋತ್ಸವ (25-4-2012)ವನ್ನು ವೈಭವದಿಂದ ಆಚರಿಸಲಾಯಿತು. ಸಂಕ್ರಮಣ, ಕಾಲದ ಪೂಜೆ, ಗೆಂಡ, ಪ್ರತಿಷ್ಠಾ ದಿನದ ಆಚರಣೆಗಳಲ್ಲಿ ಬಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕವಾಗಿ ಮದುವೆ ಮೊದಲಾದ ಸಮಾರಂಭಗಳೂ ನಡೆಯುತ್ತದೆ. ಕುಂದಾಪುರದ ಇತರ ಗರಡಿಗಲ್ಲಿ (ಮೊಳಹಳ್ಳಿ, ಉಳ್ಳೂರು-74, ಅಮಾಸೆಬೈಲು, ಅಸೋಡು, ಕೈರಾಡಿ, ನಾವುಂದ, ತಲ್ಲೂರು ಇತ್ಯಾದಿ) ಮುಂಚೂಣಿಯಲ್ಲಿದೆ. ಬಸ್ರೂರು ಬಸ್ ಸ್ಟ್ಯಾಂಡಿನಿಂದ ಗುಲ್ವಾಡಿಗೆ ಹೋಗುವ ರಸ್ತೆಯಲ್ಲಿ ಸುಮಾರು 1 ಕಿ.ಮೀ. ಹೋದಾಗ ವಾರಾಹಿ ನದೀ ದಂಡೆಗೆ ಹೋಗುವ ಮೊದಲೇ ಎಡಭಾಗದಲ್ಲಿ ಸ್ವಾಗತ ಗೋಪುರವಿದೆ. ಇದನ್ನು ಹಾದು ವಿಶಾಲ ಅಂಗಳ ದಾಟಿ, ಸುಸಜ್ಜಿತವಾದ ಸಭಾಂಗಣ, ಸಭಾಂಗಣವನ್ನು ಹೊಕ್ಕಾಗ, ಎಡಭಾಗದಲ್ಲಿ (ನೈರುತ್ಯ ಮೂಲೆ) ಸ್ವಾಮಿ (ಸ್ಥಳದ ದೇವರು) ಮತ್ತು ನಾಗ ದೇವರ ಗುಡಿ ಇದೆ. ಅದೇ ಸಾಲಿನಲ್ಲಿ ಮುಂದೆ ಭಾವಿ, ಇದಕ್ಕೆ ತಾಗಿ ಹೊರಸುತ್ತಿನ ಹೈಗೂಳಿ, ಮಹಾಂಕಾಳೀ ಮತ್ತು ವೀರ ಮಾಸ್ತಿ (ಲೋಹದ ವಿಗ್ರಹ)ಯ ದರ್ಶನವಾಗುತ್ತದೆ. ಇದೇ ಬದಿಯಲ್ಲಿ ಮುಂದೆ ಶಿವರಾಯರು ದೈವ ಪಂಚಗಣಗಳ ಸಂಯುಕ್ತರೂಪವಿದು-ಡಮರು, ತ್ರಿಶೂಲ, ಖಡ್ಗ ಮತ್ತು ಗುರಾಣಿ ಧರಿಸಿದ ಭಯಂಕರ ಮೂರ್ತಿ (ಉರು). ಕೆಲವು ಗರಡಿಗಳಲ್ಲಿ ಶಿವರಾಯರೇ ಪ್ರಧಾನ/ಯಜಮಾನ ದೈವವಾಗಿರುತ್ತಾರೆ. ಆದರೆ ಬಸ್ರೂರಿನಲ್ಲಿ ಪಂಜುರ್ಲಿ ಯಜಮಾನ ದೈವ, ಚಾವಡಿ ಹತ್ತಿದಾಗ ಪ್ರಧಾನ ಬಾಗಿಲು ಪ್ರವೇಶಿಸುವ ಮೊದಲು ಎಡಭಾಗದಲ್ಲಿ ಬಾಗಿಲು ಬೊಬ್ಬರ್ಯನಿಗೆ ಉರು ಇದೆ. ಒಳಗೆ ಕಾಲಿಡುತ್ತಲೇ ಬಣ್ಣ ಬಣ್ಣದ ವೈವಿಧ್ಯಮಯ ಉರುಗಳು, ಮೋಡ/ಮಾಡಗಳು ಕಣ್ಣಿಗೆ ಬೀಳುತ್ತವೆ.

                         ಎಡಕ್ಕೆ ತಿರುಗಿದಾಗ ಪ್ರತ್ಯೇಕವಾದ ಕೋಣೆಯಲ್ಲಿ ಗರಡಿಯ ಪ್ರಧಾನ ಸ್ಥಾನ-ಬ್ರಹ್ಮಗುಂಡ, ಕುದುರೆ ಮೇಲೆ ಕುಳಿತ ಬ್ರಹ್ಮನ ಲೋಹದ ವಿಗ್ರಹ, ಕೋಟಿ-ಚೆನ್ನಯರು ಆರಾಧನೆಮಾಡಿದ ಬ್ರಹ್ಮ ಎಂದು ಹೇಳುತ್ತಾರೆ. ಪಕ್ಕದಲ್ಲಿ ಪದ್ಮಾವತಿ, ವೆಂಕಟರಮಣ, ಲಕ್ಷ್ಮಿಯ ಚಂದನದ ಗೊಂಬೆಗಳಿವೆ. ಅದಕ್ಕೆ ಬಿಳಿನಾಮವನ್ನು ಹಾಕಲಾಗಿದೆ. ಗುಂಡದ ತುದಿಯ ಶಿಖರದಲ್ಲಿ ನಂದಿಯಿದೆ. ಗುಂಡದ ಎಡಭಾಗದ ಮೂಲೆಯಲ್ಲಿ ಕೋಟಿಚೆನ್ನಯರ ತಾಯಿ ದೇವಿ ಬೈದ್ಯೆತಿ, ಪಕ್ಕದಲ್ಲಿ ಇಟ್‍ಕುರ (ಸೇವಕ) ತುದಿಯಲ್ಲಿ ನೆಗಳ (ವಿಷಭರಿತ ಪ್ರಾಣಿ ಮೈಯೆಲ್ಲ ಹಾವುಗಳಿವೆ, ಕೋಟಿಚೆನ್ನಯರನ್ನು ಕೊಂದು ನಾಶ ಮಾಡಲು ಬಂದ ದುಷ್ಟ ಶಕ್ತಿ) -ಇಷ್ಟು ಉರುಗಳಿವೆ. ಬಲಭಾಗದಲ್ಲಿ ಪಯ್ಯಬೈದ್ಯ, ಚಿಟ್‍ಕುರ ಮತ್ತು ಪಾತ್ರಿ ಬಿಂಬವಿದೆ. ಎಲ್ಲ ಉರುಗಳ ಬುಡದಲ್ಲಿ ಹೆಸರನ್ನು ಬರೆದಿರುವುದು ತುಂಬ ಅನುಕೂಲವಾಗಿದೆ. ಪೂಜೆಯವರನ್ನು ಬಿಟ್ಟರೆ ಬೇರೆ ಯಾರಿಗೂ ಪ್ರವೇಶವಿಲ್ಲ. ಗುಂಡದ ಹೊರಭಾಗದಲ್ಲಿ ಎಡದಿಂದ ಕ್ರಮವಾಗಿ ಪಂಜುರ್ಲಿ (ವರಾಹ ಪಂಜುರ್ಲಿ ಯಜಮಾನ ದೈವ), ಧೂಮಾವತಿ, ಧೂಮಾವತ ಬಾಲಮ್ಮ (ಮೈಂದಾಳ್ತಿ ಮಗಳು) ಮೈದಾಳ್ತಿ (ಮೈಂದಾಳ್ತಿ) ಬಾಲಯ್ಯ (ಮೈಂದಾಳ್ತಿ ಮಗ), ದೊಟ್ಟೆಕಾಲ್ ಬೆಕ್ಕು, ಒಳಸುತ್ತಿನ ಜೋಡು ಹೈಗುಳಿ, ನಂದಿಕೇಶ್ವರ, ಒಂಟಿ ಹೈಗುಳಿ, ದೈವಗಳ ಮೋಡ, ಮರ್ಲ್‍ಬೆಕ್ಕು, ನಾಮದ ಬೆಕ್ಕು, ಚೀನಿಕಾರಭೂತ (ಐದು ಹೆಣ್ಣು ದೈವಗಳ ಉರುಗು); ಉತ್ತರಕ್ಕೆ ಗಣಕೂಟ, (ನಿರ್ದಿಷ್ಟ ಮನೆಗಳ ದೈವಗಳು) ಜೋಡು ಹೈಗುಳು, (ಎರಡು ಮೋಡಗಳು) ಜೋಗಿಪುರುಷ, ಕಳವಿನ ಚಿಕ್ಕ; ಗುಂಡದ ಬಲಭಾಗದಲ್ಲಿ (ಹೊರಗೆ) ಕ್ರಮವಾಗಿ ಬೊಬ್ಬರ್ಯ, ಉಮ್ಮಲ್ತಿ (ಬೊಬ್ಬರ್ಯನ ಹೆಂಡತಿ) ಮಾಸ್ತಿಯಮ್ಮ (ಯಜಮಾನ್ತಿ ದೈವ) ಪ್ರೇತ ಮೋಡ (ಹಿಂದಿನ ಪಾತ್ರಿಗಳಿಗೆ ಸ್ಥಾನವನ್ನು ನೀಡಿ ಪೂಜೆ ಸಲ್ಲಿಸಲಾಗುತ್ತದೆ. ಮೇಲಿನ ದೈವಗಳಲ್ಲಿ ಕೆಲವು ಪ್ರತ್ಯೇಕ ಉರುಗಳಾಗಿವೆ. ಇನ್ನು ಕೆಲವು ಮೋಡ (ಮರದ ಮಂಚ ಅಥವಾ ಗುಡಿಯ ರೂಪದ ರಚನೆ)ಗಳಲ್ಲಿ ಸ್ಥಾಪಿಸಲಾಗಿದೆ. ಕೆಲವು ಮನೆಯವರು ತಾವು ನಂಬಿದ ದೈವಗಳನ್ನು ಗರಡಿಯಲ್ಲಿ ತಂದು ಸ್ಥಾಪಿಸಿ, ವಿಶೇಷ ದಿನಗಳಲ್ಲಿ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಆದರೆ ಇಲ್ಲಿಯ ಗರಡಿ ಮನೆಯವರು ಪ್ರತಿದಿನ ಗಿಂಡಿಯಲ್ಲಿ ನೀರು ಇಟ್ಟು ಹೂ ಏರಿಸಿ ದೂಪ ಹಾಕುತ್ತಾರೆ. ಪೂಜೆ ಮಾಡುತ್ತಾರೆ.

                       ಗರಡಿಯಲ್ಲಿ ನಡೆಯುವ ವಾರ್ಷಿಕ ವಿಶೇಷ ಆಚರಣೆಗಳು - ಪ್ರತಿ ಸಂಕ್ರಮಣಕ್ಕೆ ವಿಶೇಷ ಪೂಜೆ ಮತ್ತು ದರ್ಶನವಲ್ಲದೇ, ಕೈಲಾ ಪೂಜೆ/ಕಾಲದ ಪೂಜೆ; ಗೆಂಡ ಮತ್ತು ಪ್ರತಿಷ್ಠಾ ದಿನ. ಪ್ರತಿ ವರ್ಷ ಕೊಡಿ ತಿಂಗಳಲ್ಲಿ ಕೋಟಿಚೆನ್ನಯರಿಗೆ ಹೊಸ್ತನ್ನು ಕೊಡುವ ಆಚರಣೆಯೇ ಕೈಲಾಪೂಜೆ. ಕಾತಿಬೆಳೆಯ ಭತ್ತವನ್ನು ಹರಕೆಯಾಗಿ ಒಪ್ಪಿಸುತ್ತಾರೆ. ದೈವಗಳ ದರ್ಶನ ಬಂದಾಗ ಹೂಗೊನಿ ಒಪ್ಪಿಸುತ್ತಾರೆ. ಮಕ್ಕಳ ಆರೋಗ್ಯ ಮತ್ತು ಶ್ರೇಯಸ್ಸಿಗಾಗಿ ಹೇಳಿಕೊಂಡ ಬಾಲ್ಯನಿಗೆ ಹಣ್‍ಗೊನಿ ಒಪ್ಪಿಸುವ ಹರಕೆಯನ್ನ ಸಲ್ಲಿಸುತ್ತಾರೆ. ಈ ಆಚರಣೆಯನ್ನು `ಹಾಲಬ್ಬ' ಎಂದೂ ಕರೆಯುತ್ತಾರೆ. ವಾರ್ಷಿಕ ಉತ್ಸವವನ್ನು `ಗೆಂಡ' (ಗರಡಿ ಗೆಂಡ) ಎಂದು ಕರೆಯುತ್ತಾರೆ. ಮೂಡ್ಲಕಟ್ಟೆ ಕಂಬಳ ಮತ್ತು ಗರಡಿಯ ಗೆಂಡಕ್ಕೆ ಹಿಂದಿನಿಂದ ಸಂಬಂಧವಿದೆ. ಬೇರೆ ಬೇರೆ ದಿನ ನಡೆದರೂ, ದಿನ ಇಡುವ ಕಾರ್ಯಕ್ರಮವು ಒಂದೇ ದಿನ ನಡೆಯುತ್ತದೆ. ಹೆಚ್ಚಾಗಿ ವಾರ್ಷಿಕ ಗೆಂಡವೂ ಜನವರಿ 25-26ನೇ ತಾರೀಕುಗಳಂದು ಜರಗುತ್ತದೆ. ಆ ದಿನ ವಿಶೇಷ ಪೂಜೆ, ಎಲ್ಲ ದೈವಗಳ ದರ್ಶನ-ನುಡಿ, ಹರಕೆ, ಪರಿಹಾರ ಕೇಳುವುದು, ಬಳಿಕ ಗರಡಿಯ ಗದ್ದೆಯಲ್ಲಿ ಕೆಂಡದ ರಾಶಿಹಾಕಿ `ಗೆಂಡ ತುಳಿ'ಯುವ ಕಾರ್ಯಕ್ರಮ. ಮೊದಲು ನಂದಿಕೇಶ್ವರ ಕೆಂಡದ ಮೇಲೆ ಹಾರಿ, ತುಳಿದ ಬಳಿಕ ಹರಕೆ ಒಪ್ಪಿಸುವವರು ಸಾಲಾಗಿ ತುಳಿಯುತ್ತಾರೆ. ಮಗುವನ್ನು ಹೊತ್ತ ತಾಯಂದಿರ ಸಂಖ್ಯೆಯೇ ಹೆಚ್ಚು. ಆ ದಿನ ರಾತ್ರಿ ಬೆಳಗಿನ ಜಾವದವರೆಗೆ ಯಕ್ಷಗಾನ ಬಯಲಾಟದ ಸೇವೆ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಭಕ್ತರ ನಂಬಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಮಲೆನಾಡಿನಿಂದ ಕರಾವಳಿಯ ವಿವಿಧ ಕಡೆಗಳ ಕುಟುಂಬದವರಲ್ಲದೆ, ಬೆಂಗಳೂರು, ಮುಂಬೈಯಂತಹ ಪರವೂರುಗಳಿಂದಲೂ ಸೇವೆಸಲ್ಲಿಸಲು ಬರುತ್ತಿದ್ದಾರೆ. ಕಳೆದ ವರ್ಷ (2012)ದಿಂದ ಆಗಮಿಸಿದ ಭಕ್ತರಿಗೆ ಅನ್ನದಾನವೂ ನಡೆಯುತ್ತಿದೆ. ದೂರದ ಊರುಗಳಿಂದ ಬಂದವರು ಹರಕೆ, ಪ್ರಸಾದ, ದೈವದ ಅಭಯ ನುಡಿಗಳಿಂದ ಸಂತೃಪ್ತರಾಗುವುದಲ್ಲದೆ, ಹಸಿವಿನ ಹೊತ್ತು ಹೊಟ್ಟೆ ತುಂಬ ಉಂಡು, ಹಸಿವೆ - ಬಾಯಾರಿಕೆಯನ್ನ ತಣಿಸಿ ತಮ್ಮ ತಮ್ಮ ಊರಿಗೆ ತೆರಳುತ್ತಾರೆ. ಬಸ್ರೂರು ಗರಡಿಯಲ್ಲಿ ಪ್ರಧಾನ ಅಧಿಕಾರವೆಲ್ಲ ಪಂಜುರ್ಲಿ ದೈವದ್ದು. ಬಸ್ರೂರಿನ ಮಾರಿಹಬ್ಬದಲ್ಲೂ ಇಲ್ಲಿಯ ಪಂಜುರ್ಲಿಯು ಮುಂಚೂಣಿಯಲ್ಲಿರುತ್ತದೆ. ಬಸ್ರೂರಿನ ಆಗು ಹೋಗುಗಳಲ್ಲಿ ಧಾರ್ಮಿಕ ವಿಧಿವಿಧಾನಗಳಲ್ಲಿ; ನ್ಯಾಯ ಅನ್ಯಾಯದ ಘಟನೆಗಳಲ್ಲಿ ಪಂಜುರ್ಲಿ ತನ್ನ ಕಾರಣಿಕವನ್ನ ತೋರಿಸಿದ್ದಿದೆ.

                     ಪಂಜುರ್ಲಿಯ ಕಾಲಡಿಯಲ್ಲಿದ್ದ ಬ್ರಾಹ್ಮಣ ಗಣದ ಬಗ್ಗೆ ಮತ್ತು ಚೀನಿಕಾರ ಭೂತಗಳ ಕುರಿತು ಪಂಜುರ್ಲಿಯ ಪ್ರತಾಪವನ್ನು ಶ್ರುತಪಡಿಸುವ ಐತಿಹ್ಯಗಳಿವೆ. ಮಂತ್ರವಾದಿಯೊಬ್ಬರು ಪಂಜುರ್ಲಿಯನ್ನೇ ತನ್ನ ವಶದಲ್ಲಿಟ್ಟುಕೊಳ್ಳಲು ಅಪೇಕ್ಷಿಸಿದಾಗ, 8 ದಿನದಲ್ಲಿ ಮಂತ್ರವಾದಿಯೇ ಪಂಜುರ್ಲಿಯ ಕಾಲಡಿಗೆ ಬಂದು ಬೀಳುವಂತಾಯಿತು. ಚೀನೀ ಹಡಗು ಬಂದಾಗ ಹಡಗಿನವರು ಪಂಜುರ್ಲಿಯನ್ನು ಅಪಹಾಸ್ಯ ಮಾಡಿದರು. ಪರಿಣಾಮವಾಗಿ ಐದು ಮಂದಿಯೂ ರಕ್ತಕಾರಿ ಸತ್ತು ಪಂಜುರ್ಲಿ ಕಾಲಡಿಗೆ ಬಂದರು. ಇಂತಹ ಘಟನೆಗಳು ಪ್ರಾಚೀನವಾಗಿದ್ದರೂ, ಪಂಜುರ್ಲಿಯ ಶಕ್ತಿಯ ಬಗ್ಗೆ ಪೂರ್ಣ ಸಂಬಿಕೆಯನ್ನಿಟ್ಟಿದ್ದಾರೆ. ನಂಬಿಕೆಗೆ ತಕ್ಕಂತೆ ಫಲವನ್ನು ಪಡೆಯುತ್ತಿದ್ದಾರೆ. ಬಸ್ರೂರಿನ ಸಾಂಸ್ಕøತಿಕ ಚರಿತ್ರೆಯಲ್ಲಿ ಗರಡಿಯೂ ಪ್ರಮುಖವಾಗಿದೆ. ಜನ ಜೀವನದಲ್ಲಿ ಸತ್ಯ-ಧರ್ಮ-ನ್ಯಾಯದ ಎಚ್ಚರಿಕೆಯನ್ನು ಮೂಡಿಸಿ, ಸದಾಚಾರ ಸಂಪನ್ನ ಸಂಸ್ಕøತಿಯ ಬೆಳವಣಿಗೆಯಲ್ಲಿ ಗರಡಿಯ ದೈವಗಳು, ಗಣಗಳು, ಶಕ್ತಿಗಳು - ಅವೆಲ್ಲವುಗಳ ಪ್ರತಿನಿಧಿಯಾಗಿ, ಪಾತ್ರಿಯಾಗಿ ಸೆವೆ ಮಾಡುತ್ತಿರುವ ಶ್ರೀ ಗೋಪಾಲ ಪೂಜಾರಿಯವರು ಅಮೂಲ್ಯ ಕೊಡುಗೆಯನ್ನ ನೀಡುತ್ತಿದ್ದಾರೆ. ಇಂತಹ ಅಲೌಕಿಕ ಶಕ್ತಿ-ಧಾರ್ಮಿಕ ಆಚರಣೆಗಳು ಮುಂದಾಳುಗಳು ಇರುವುದರಿಂದ ಅತ್ಯಾಚಾರ-ಅನಾಚಾರ-ಭ್ರಷ್ಟಾಚಾರಗಳ ಬಗ್ಗೆ ಭೀತಿಯಿದೆ. ಧರ್ಮದ ರಕ್ಷಣೆಯಲ್ಲಿ ನಿರಂತರ ಪ್ರೇರಣೆ ನೀಡುತ್ತಾ ಹೋರಾಟ ನಡೆಸುತ್ತಾ ಸೇವೆಯನ್ನು ಮಾಡುತ್ತಿರುವ ಶ್ರೀ ಗರಡಿ ಗೋಪಾಲ ಪೂಜಾರಿಯವರು ಅಭಿನಂದನೀಯರು. ಬಸ್ರೂರು ಗರಡಿಯು ಕೇವಲ ದೈವಸ್ಥಾನವಾಗಿ ಉಳಿಯದೆ, ವಾರಾಹೀ ದಂಡೆಯ ಧಾರ್ಮಿಕ ಕ್ಷೇತ್ರವಾಗಿ ಬೆಳೆಯುತ್ತಿದೆ. ಡಾ. ಕನರಾಡಿ ವಾದಿರಾಜ ಭಟ್ಟ