Karaga

ಕರಗ :

                   ‘ಕರಗ’ ಎನ್ನುವ ಪದಕ್ಕೆ ‘ಕುಂಭ’, ‘ಜಲಪಾತ್ರೆ’, ‘ಕಮಂಡಲ’, ಇತ್ಯಾದಿ ಅರ್ಥಗಳಿವೆ. ಸಂಸ್ಕøತದಲ್ಲಿ ಕರ ಎಂಬುದಕ್ಕೆ ‘ಜಲ’ ಸಂವಾದಿಯಾದ ಅರ್ಥಗಳಿವೆ. ಅಲ್ಲಿ ಕರವೆಂದರೆ ನೀರು. ತುಳು ಭಾಷೆಯಲ್ಲಿ ಇಂದಿಗೂ ‘ಕರ’ವೆಂದರೆ ಮಣ್ಣಿನ ಮಡಿಕೆ ಎಂದರ್ಥ. ಹೀಗೆ ‘ಕರಗ’ ಪದಕ್ಕೆ ಕುಂಭ, ಜಲಪಾತ್ರೆ ಇತ್ಯಾದಿ ಜಲಸಂಬಂಧಿ ಅರ್ಥಗಳಿರುವುದಾದರೂ ‘ಕರಗ’ ಉತ್ಸವಕ್ಕೆ ಸಂಬಂಧಪಟ್ಟಂತೆ ದ್ರಾವಿಡ ಪದಗಳಲ್ಲಿರುವ ಮಣ್ಣಿಗೆ ಸಂವಾದಿಯಾದ ಅರ್ಥ ಕಲ್ಪನೆಯೇ ಸೂಕ್ತವಾಗುತ್ತದೆ. 

                    ಕರಗ ಉತ್ಸವಕ್ಕೆ ಸಂಬಂಧಿಸಿದಂತೆ ಅನೇಕ ಪುರಾಣಗಳಿವೆ. ಅದರಲ್ಲಿ ಮುಖ್ಯವಾದ ಪುರಾಣವೊಂದು ಅದನ್ನು ಆಚರಿಸುವ ವಹ್ನಿ ಕುಲಜರಿಗೆ ಸಂಬಂಧಪಡುತ್ತದೆ. ಆ ಪುರಾಣ ಹೀಗಿದೆ:

ಪುರಾಣ-1 :-

            ಬ್ರಹ್ಮನು ಯಾಗ ಮಾಡಿದಾಗ ಅಗ್ನಿಕುಂಡದಿಂದ ಭೃಗು, ಅಂಗಿರಸ, ಕವಿ ಎಂಬ ಮೂವರು ವ್ಯಕ್ತಿಗಳು ಸೃಷ್ಟಿಯಾಗುತ್ತಾರೆ. ಭೃಗುವನ್ನು ವರುಣ, ಅಂಗೀರಸನನ್ನು ಅಗ್ನಿ, ಕವಿಯನ್ನು ಬ್ರಹ್ಮ ತಂತಮ್ಮ ಮಕ್ಕಳನ್ನಾಗಿ ಸ್ವೀಕರಿಸಿದರು. ಹೀಗೆ ಅಗ್ನಿ ಸಂತಾನಿಯಾದ ಅಂಗೀರಸನ ಕುಲದೇವರೇ ವಹ್ನಿ ಕುಲಜರು. ಅಗ್ನಿಯಿಂದ ಹುಟ್ಟಿದವರೇ ವಹ್ನಿಗಳು ಎಂದು ನಂಬಲಾಗುತ್ತದೆ. ಹೀಗಾಗಿ  ಕರಗವನ್ನು ಹೊರುವವರು ತಮ್ಮನ್ನು ತಾವು ವಹ್ನಿ ಕುಲದವರು ಎಂದು ಕರೆದುಕೊಳ್ಳುತ್ತಾರೆ. 

ಪುರಾಣ-2 :-

             ಕುರುಕ್ಷೇತ್ರ ಯುದ್ಧದ ಬಳಿಕ ಸ್ವಾರ್ಗಾರೋಹಣ ಕಾಲದಲ್ಲಿ ಪತಿಗಳನ್ನು ಹಿಂಬಾಲಿಸುತ್ತಿದ್ದ ದ್ರೌಪದಿ ಮೂರ್ಛೆ ಹೋದಳು. ಎಚ್ಚರಗೊಂಡು ನೋಡಿದರೆ ಪತಿಗಳಿರಲಿಲ್ಲ. ಆಕೆ ಭಯದಿಂದ ರೋದಿಸ ತೊಡಗಿದಳು. ಆಗ ತಿಮಿರಾಸುರನೆಂಬ ರಾಕ್ಷಸ ಆಕೆಯನ್ನು ಪೀಡಿಸಿದ. ಆಗ ಆಕೆ ರುದ್ರರೂಪ ಧರಿಸಿ ಆತನ್ನು ಕೊಂದಳು. ಹೀಗೆ ರುದ್ರ ರೂಪ ಧರಿಸುವಾಗ ಆಕೆಯ ತಲೆಯ ಮೇಲೆ ಕರಗವೊಂದಿತ್ತು. ಅದರ ಸಲುವಾಗಿಯೇ ಈಗಿನ ಆರಾಧನೆ. ಈ ಕತೆಯನ್ನೇ ಇನ್ನೊಂದು ರೀತಿಯಿಂದಲೂ ಹೇಳಲಾಗುತ್ತದೆ. 

  ಮತ್ಸ್ಯಯಂತ್ರವನ್ನು ಭೇದಿಸಿ ನಂತರ ಅರ್ಜುನನನ್ನು ವರಿಸಿದ ದ್ರೌಪದಿಯು ಕುಂತಿಯ ಆಜ್ಞೆಯಂತೆ ಉಳಿದ ನಾಲ್ವರು ಪಾ0ಡವರನ್ನು ವರಿಸುತ್ತಾಳೆ. ಆಸಂದರ್ಭದಲ್ಲಿ ಆನಂದಾಶಯದಿಂದ ಆಕೆ ತಲೆಯ ಮೇಲೆ ಕಳಶವೊಂದನ್ನು ಹೊತ್ತುಕೊಂಡಿದ್ದಳು. ಅದುವೇ ಇಂದಿನ ಕರಗ, ಹಾಗೆಯೇ ದ್ರಾಪದಿಗೆ ಸಂಬಂಧಿಸಿದಂತೆ ಇನ್ನೊಂದು ಕತೆÉಯೂ ಇದೆ. 

ಪುರಾಣ-3 :-

            ಐವರನ್ನು ಮದುವೆಯಾದ ಬಳಿಕ ದ್ರೌಪದಿ ಒಂದೊಂದು ವರ್ಷ ಒಬ್ಬೊಬ್ಬರನ್ನು ಸೇರುತ್ತಿದ್ದಳು. ಹಾಗೆ ವರ್ಷ ಕಳೆದು ಮತ್ತೊಬ್ಬನ್ನು ಸೇರುವ ಸಂದರ್ಭದಲ್ಲಿ ಮಿಂದು ಮಡಿಯಾಗಿ ಹೊಳೆಯಿಂದ ಗಂಗೆ ತುಂಬಿದ ಕರಗವನ್ನು ಹೊತ್ತು ಬರುತ್ತಿದ್ದಳು. ಹಾಗೆ ಬರುವಾಗ ಆಕೆ ಮತ್ತೆ ಕನ್ಯೆಯೇ ಆಗಿರುತ್ತಿದ್ದಳು. ಈ ಸಲುವಾಗಿ ಕರಗಾಚರಣೆ. 

ಪುರಾಣ-4 :-

              ಪಾಂಡವರು ದ್ರೌಪದಿಯ ಪಾತಿವ್ರತ್ಯವನ್ನು ಪರೀಕ್ಷಿಸಲೋಸುಗ ಪೋತಲು ಎಂಬ ರಾಜನಿಂದ ಕರಗವನ್ನು ತರಿಸಿದರು. ಆಕೆ ಅರಶಿನ ಬಟ್ಟೆಯುಟ್ಟು, ಕರಗವನ್ನು ತಲೆಯ ಮೇಲಿಟ್ಟು, ವೀರಚಾವುಟಿಯನ್ನು ಹಿಡಿದು ಊರೆಲ್ಲ ಸುತ್ತಾಡಿ ಅಗ್ನಿಪ್ರವೇಶಿಸಿ ಯಾವುದೇ ಅಪಾಯವಿಲ್ಲದೆ ಹೊರಬಂದಳು. ಅದರ ಸಲುವಾಗಿ ಈ ಕರಗದಾಚರಣೆ. 

ಕರಗದ ಪ್ರಾಚೀನತೆ :-

                 ಹೀಗೆ ಅನೇಕ ಪುರಾಣಗಳೊಂದಿಗೆ ಸಂಬಂಧವಿರುವ ‘ಕರಗ’ ಒಂದು ರೀತಿಯ ಕುಣಿತವೂ ಹೌದು. ಕರಗವೊಂದು ಕುಣಿತ ಎಂದು ಪರಿಗಣಿಸಿ ಮುಂದುವರಿಯುವುದಾದರೆ, ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಈ ಕಲೆ, ಪ್ರಾಚೀನವಾದುದು ಮತ್ತು ಹೆಚ್ಚು ಕಡಿಮೆ ಭಾರತದಾದ್ಯಂತ ಬಳಕೆಯಲ್ಲಿರುವಂತಹದ್ದು. ಅದು ಕರ್ನಾಟಕ, ಆಂಧ್ರ, ತಮಿಳುನಾಡು, ಗುಜರಾತ್ ಪ್ರಾಂತ್ಯಗಳಲ್ಲಿಯೂ ಇರುವುದನ್ನು ಗುರುತಿಸಲಾಗಿದೆ. 

                 ಆದರೆ ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲಿ ಅದಕ್ಕೆ ‘ಆದಿಶಕ್ತಿ’ಯ ಅರಾಧನಾ ಸ್ವರೂಪ ಬಂದಿದೆ. ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದ್ದು ಆಕೆಯನ್ನು ‘ಕರಗದಮ್ಮ’ ಎಂದೂ ಕರೆಯಲಾಗುತ್ತದೆ. ಹೀಗೆ ಇದನ್ನು ಶಕ್ತಿಯ ಆರಾಧನೆ ಎಂದು ಪರಿಗಣಿಸಿರುವುದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾತ್ರ. ಆ ಶಕ್ತ್ಯಾರಾಧನೆಗೆ ಸಂಬಂಧಿಸಿದ ಅದರ ಪ್ರಾಚೀನತೆಯು 1429ರ ಚಿಕ್ಕಬಳ್ಳಾಪುರದ ತಾಮ್ರ ಶಾಸನದ ಕಾಲಕ್ಕೆ ಹಿಂದಿರುಗುತ್ತದೆ. ಆ ಶಾಸನದಲ್ಲಿ-

                    "ನಮಗೆ ಕುಲದೈವ ಭೈರವ ಜನಕ ತಾನು  ಮನೆದೇವರು ಕರಗದಮ್ಮನ ಪತಿ ತಾನಾದ ಕಾರಣ ನಮಗೆ ದೇವತಾಂತರವಿಲ್ಲ..."ಎಂಬ ಉಲ್ಲೇಖವಿದೆ. ಅದಲ್ಲದೆ ಕರಗ ಹೊರುವ ಪೂಜಾರಿಗೆ ದಾನಬಿಟ್ಟ ವಿವರವೂ ಇದ್ದು ಅದನ್ನು ‘ಮಾನ್ಯದ ಹೊಲ’ ಎಂದು ಕರೆಯಲಾಗಿದೆ.  ಸಂಗ್ರಹಣೆ – ಕರ್ನಾಟಕ ಜನಪದ ಕಲೆಗಳ ಕೋಶ ಲೇಖಕರು - ಹಿ. ಚಿ. ಬೋರಲಿಂಗಯ್ಯ