Karaga Pooja

ಕರಗ ಮತ್ತು ಕೆಂಪೇಗೌಡನ ಕಥೆ :

                        ಕರಗ ಮೂಲತಃ ತಮಿಳು ನಾಡಿನಿಂದ ಬಂದುದೆಂದು ನಂಬಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಒಂದು ಐತಿಹ್ಯ ಹೀಗಿದೆ:

                      14ನೇ ಶತಮಾನದ ಕಾಲದಲ್ಲಿ ತಮಿಳುನಾಡಿನಿಂದ ರೈತ ಕುಟುಂಬವೊಂದು ವಲಸೆ ಬಂದು ಕರ್ನಾಟಕದ ನಂದಿದುರ್ಗದಲ್ಲಿ ನೆಲೆಸಿತು. ಇವರಿಗೆ ತಮಿಳು ಮತ್ತು ತೆಲುಗು ಭಾಷೆಗಳು ಗೊತ್ತಿದ್ದವು. ಹಾಗೆಯೇ ಇವರು ಭೈರವನ ಆರಾಧಕರೂ ಆಗಿದ್ದರೂ. ರಣಭೈರೇಗೌಡ ಇವರ ನಾಯಕ. ಇವರು ಬೆಂಗಳೂರಿನ ಕೆಂಪೇಗೌಡನ ಪೂರ್ವಜರು ಎಂದು ನಂಬಲಾಗಿದೆ.

                      ರಣಭೈರೇಗೌಡ ದೇವನಹಳ್ಳಿ ತಾಲೂಕಿನ ಅವರೆ ಗ್ರಾಮದಲ್ಲಿ ವಾಸಿಸುತ್ತಿದ್ದ. ಮಲ್ಲಭೈರೇಗೌಡ, ಸಣ್ಣ ಬೈರೇಗೌಡ, ವೀರೇಗೌಡ ಅವನ ಅಣ್ಣ ತಮ್ಮಂದಿರು. ಇವರು ಬೆಂಗಳೂರಿನ ಸುತ್ತಮುತ್ತ ನೆಲೆಸಿದರು. ಹಾಗೆಯೇ ಸಣ್ಣ ಸಣ್ಣ ಪಾಳೆಗಾರಿಕೆಯನ್ನೂ ಸ್ಥಾಪಿಸಿದರು. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ಯಲಹಂಕ, ಬೆಂಗಳೂರು, ಆನೇಕಲ್ಲು, ಮಾಗಡಿ ಆ ಕಾಲದ ಪಾಳೆಗಾರಿಕೆಗಳು, ಮುಂದೆ 1418 ರಿಂದ 1433 ರವರೆಗೆ ಜಯಗೌಡ ಎಂಬುವನು ಯಲಹಂಕದಲ್ಲಿ ಪಾಳೆಗಾರಿಕೆ ಆರಂಭಿಸಿದ. ಆತ ರಣಭೈರೇಗೌಡನ ಮಗ. ಇವನ ಮೊಮ್ಮಗನೇ ಬೆಂಗಳೂರನ್ನು ಕಟ್ಟಿಸಿದ. ಹೀಗೆ ಈ ಗೌಡರು ಹೋದಲ್ಲಿಗೆ ಕರಗವೂ ಹೋಯಿತು.

 ಕರಗದ ಆಚರಣೆ ಮತ್ತು ಕುಣಿತ :

ಕರಗ ಅನೇಕ ಕಡೆ ನಡೆಯುವುದಾದರೂ ಮುಖ್ಯವಾಗಿ ಬೆಂಗಳೂರು, ಕೋಲಾರ, ಮಾಲೂರು, ದೇವನಹಳ್ಳಿ ಮತ್ತು ಆನೇಕಲ್ಲುಗಳಲ್ಲಿ ವಿಶೇಷ. ಆ ಸ್ಥಳಗಳಲ್ಲಿ ಕರಗದ ಉತ್ಸವದ ನಡೆವ ಸ್ವರೂಪ ಹೀಗಿದೆ: ಮಣ್ಣಿನ ಮಡಿಕೆಗೆ ಜಲ ತುಂಬಿಸಲಾಗುತ್ತದೆ. ಆಮೇಲೆ ಅದಕ್ಕೆ ಅರಿಶಿನ, ಕುಂಕುಮ ಹೂಗಳಿಂದ ಅಲಂಕರಿಸಿದ ಅದರ ಮೇಲೆ ಗೋಪುರದಂತೆ ಹೂವಿನ ಹಾರಗಳನ್ನು ಇಳಿಬಿಡಲಾಗುತ್ತದೆ. ಇದುವೇ ಕರಗ.

                    ಚೈತ್ರಮಾಸದಲ್ಲಿ ಒಂಬತ್ತು ದಿನ ಕರಗ ನಡೆಯುತ್ತದೆ. ಶುಕ್ಲ ಪಕ್ಷದ ಸಪ್ತಮಿಯ ರಾತ್ರಿ ಧ್ವಜಾರೋಹಣ, ಇದು ಉತ್ಸವದ ಆರಂಭದ ಸೂಚನೆ ಅಂದು ನೂರೆಂಟು ಗಿಣ್ಣುಗಳಿರುವ ಬಿದಿರಿನ ಬೊಂಬನ್ನು ಪುರೋಹಿತರು ಶುದ್ಧಿ ಮಾಡುತ್ತಾರೆ. ಹಾಲು ಮತ್ತು ನೀರಿನಿಂದ ಅದನ್ನು ತೊಳೆದು ಅರಿಶಿನ, ಕುಂಕುಮ, ಗಂಧಗಳಿಂದ ಪೂಜಿಸಿ ಗುಡಿಯ ಮುಂದೆ ನಿಲ್ಲಿಸುತ್ತಾರೆ. ಅದರ ತುದಿಗೆ ಅರಿಶಿನ ಬಟ್ಟೆಯನ್ನು ಕಟ್ಟುತ್ತಾರೆ. ಆಗ ವೀರಕುಮಾರರು ಅಲಗು ಸೇವೆ ಮಾಡಲು ದೀಕ್ಷೆ ತೆಗೆದುಕೊಳ್ಳುವರು. ಇವರು ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ಮಂದಿ ಇರುವುದುಂಟು. ಅವರು ದೀಕ್ಷೆ ತೆಗೆದುಕೊಂಡಾಗ ಐದು ನಿಂಬೆ ಹಣ್ಣುಗಳನ್ನು ಕೊಯ್ಯಲಾಗುತ್ತದೆ. ಅವುಗಳಿಗೆ ಕುಂಕುಮ ಬಳಿದು ವೀರಕುಮಾರರ ನಾಲಿಗೆ, ಭುಜ, ತಲೆ ಮತ್ತು ಕಾಲ ಮೇಲೆ ಇಟ್ಟು ಕೊಯ್ಯುವರು. ಆಗ ತಮಿಳು ಮಂತ್ರವನ್ನು ಹೀಗೆ ಪಠಿಸಲಾಗುವುದು. 

ಆದಿಯಾನ ಒಂದು ಪೊರುವು | ಸೋದಿಯಾನ ಒಂದು ಪೊರವು ಮಂದಿಕ್ಕೆ ಮರಿಯಾನ್ | ದಿಕ್ಕಳುಂಕಾದಿ ಶಕ್ತಿ 

ಪಗಲಿಲೆ ಪಾರ್ತಾಳ ಸುಂದರಿ | ರಾವುಲೆ ಪಾರ್ತಾಳ್ ರಾಕ್ಷಸಂಹಾರಿ ಕೀಳ್ವದಡು ಕೀಳ್ ಲೋಕಂ | ಮೇಲ್‍ವದಡು ಮೇಲ್ ಲೋಕಂ 

ಕ್ಯಾರೆ ಪಲ್ಲುಗಳುಂ ಕ್ಯಾರೆ ದಾಡೆಗಳುಂ | ಕೋಟಿ ಕೋಟಿ ರಣಾತಲ್ ಬೂತುಗಳಂ |

                        ಆಮೇಲೆ ನಿತ್ಯವೂ ಒಂಬತ್ತು ಕೊಳಗಳಲ್ಲಿ ಮೀಯಬೇಕು. ಇದೇ ಸಮಯದಲ್ಲಿ ಕರಗ ಹೊರುವ ಪೂಜಾರಿಗೂ ಇದೇ ನಿಯಮಗಳು ನಡೆಯುವುದು. ಆತನನ್ನು ‘ಕರಗದ ಗುಡ್ಡ’ ಎಂದೂ ಕರೆಯಲಾಗುತ್ತದೆ. ಅವನಿಗೆ ಈ ಮಾದರಿಯಲ್ಲಿ ದೀಕ್ಷೆ ಕೊಟ್ಟು, ಅವನ ನಾಲಿಗೆ ಸುಟ್ಟು ಪಂಚಗವ್ಯದಲ್ಲಿ ಶುದ್ಧ ಮಾಡಿ, ಕುತ್ತಿಗೆಗೆ ಚಿನ್ನದ ತಗಡಿನ ದಾರ ಹಾಕುತ್ತಾರೆ. ಆತ ಅವಿವಾಹಿತನಾಗಿದ್ದರೆ ಕಳ್ಳಿ ಗಿಡ ಇಲ್ಲವೇ ಹುತ್ತದೊಂದಿಗೆ ವಿವಾಹ ನೆರವೇರಿಸಿ ದೀಕ್ಷೆ ಕೊಡಲಾಗುತ್ತದೆ. ವಿವಾಹಿತನಾಗಿದ್ದರೆ ಆತನ ಹೆಂಡತಿಯ ತಾಳಿಯನ್ನು ಬಿಚ್ಚಿ ಮತ್ತೆ ಶಾಸ್ತ್ರೋಕ್ತವಾಗಿ ಕರಗ ಮುಗಿದ ಮೇಲೆ ಕಟ್ಟಲಾಗುತ್ತದೆ. ವೀರಕುಮಾರರು ವಹ್ನಿ ಕುಲದವರಾಗಿರುತ್ತಾರೆ. ಅವರ ಕತ್ತಿಯನ್ನು ಇರಿಸಿ ಗಂಗೆ ಪೂಜೆಯನ್ನು ಮಾಡುವರು. ಆಮೇಲೆ ಕರಗ ಹೊರುವವರನ್ನು ವಾಲಗದ ಸಮೇತ ದೇವಾಲಯಕ್ಕೆ ಕರೆದುಕೊಂಡು ಬರಲಾಗುತ್ತದೆ. ಅಲ್ಲಿ ಪುರೋಹಿತರು ಪಟ್ಟದ ಕತ್ತಿ, ಧ್ವಜ ಪಟ್ಟ, ದೇವರು ಹಾಗೂ ಪುರೋಹಿತರಿಗೆ ಕಂಕಣ ಕಟ್ಟುವರು. ಆಮೇಲೆ ಮಂಗಳಾರತಿ ಪ್ರಸಾದ ವಿನಿಯೋಗ. ಇದಿಷ್ಟು ಮೊದಲನೆಯ ದಿನದ ಕಾರ್ಯಕ್ರಮ.  

2ನೆಯ ದಿನ ಹಸಿ ಕರಗ.:

                     ಅಂದು ಬೆಳಿಗ್ಗೆ ದೇವರಿಗೆ  ಪೂಜೆ ಇರುತ್ತದೆ. ಶಾಂತಿಗಾಗಿ 8 ದಿಕ್ಕಿಗೆ ಬಲಿ ಅನ್ನವನ್ನು ಬಲಿಹರಣ ಮಾಡಲಾಗುತ್ತದೆ. ಸಂಜೆಯ ಹೊತ್ತು ದೇವಾಲಯದ ಅರ್ಚಕರು, ಕರಗ ಹೊರುವವರು, ಪೂಜಾರಿಗಳು, ಭಾರತ ಪಠಣ ಮಾಡುವ ಪೂಜಾರಿ, ದಾಸಯ್ಯ, ಕರಗದ ಪೂಜಾರಿ ಕೋಲ್ಕಾರ (ಈತ ವಹ್ನಿಕುಲದ ಮುಖ್ಯಸ್ಥ) ಇವರೆಲ್ಲಾ ಹಸಿ ಕರಗ ತರಲು ಕೊಳದ ಬಳಿ ಹೋಗುತ್ತಾರೆ. ಆಗ ಇವರು ಹಳದಿ ವಸ್ತ್ರ ಧರಿಸಿ, ಹೂವಿನ ಹಾರ ಹಾಕಿಕೊಂಡಿರುತ್ತಾರೆ. ಅಲ್ಲಿ ಭಾರತದ ಪೂಜಾರಿಯಿಂದ ‘ಭಾರತ ಪಠಣ’ವಾಗುತ್ತದೆ. ಆಮೇಲೆ ಗಂಗೆಯ ಪೂಜೆ, ಆಗ ಕರಗದ ಪೂಜಾರಿಗೆ ತಾಯಿ ಮೈ ಸೇರುವುದುಂಟು. ಆಗ ಆತ ಉರಿಯುವ ಕರ್ಪೂರವನ್ನು ನೀರ ಮೇಲೆ ಬಿಡುವನು. ಅದು ಉರಿಯುತ್ತಾ ಯಾವ ಸ್ಥಳದಲ್ಲಿ ನಿಲ್ಲುವುದೋ ಇಲ್ಲಿಯೇ ಕರಗದ ಕುಂಡ ಇರುತ್ತದೆ. ಅದನ್ನು ಪೂಜಾರಿಯೇ ತರುತ್ತಾನೆ. ಅದೇ ಸಮಯದಲ್ಲಿ ವೀರಕುಮಾರರಿಗೆ ಕಂಕಣ, ಜನಿವಾರ ಕಟ್ಟಲಾಗುತ್ತದೆ. ಅಂದಿನಿಂದ ಅವರು ದೇವಾಲಯದಲ್ಲಿಯೇ ಇದ್ದು ತಾವೇ ಕೈಯಾರೆ ಅಡುಗೆ ಮಾಡಿ ಉಣ್ಣಬೇಕು. ಆಮೇಲೆ ಕರಗಕ್ಕೆ ಸಿಂಗಾರ ಮಾಡಿ ಶಾಂತಿಗೆ ಕುಂಬಳ ಕಾಯಿ ಒಡೆದು, ನಿಂಬೆಹಣ್ಣು ಇರಿಸಿ ಪೂಜೆ ಮಾಡಲಾಗುತ್ತದೆ. ಕರಗವನ್ನು ಕೈಯಲ್ಲಿ ಹಿಡಿದುಕೊಂಡು ತಮಟೆ ವಾದ್ಯಗಳ ಜತೆ ಕುಣಿಯುತ್ತಾ ಊರಿನ ಮುಖ್ಯ ಬೀದಿಗಳ ಮೂಲಕ ದೇವಾಲಯವನ್ನು ತಲುಪುತ್ತಾರೆ. 

  3ನೆಯ ದಿನ ಬೆಳಿಗ್ಗೆ :

                    ಬಲಿ, ಹಾಗೂ ಅಂದೇ ಮಧ್ಯಾಹ್ನ ಪೊಂಗಲ್ ಉತ್ಸವ. ಪ್ರತಿ ಮನೆಯಿಂದಲೂ ಹಾಲು, ಬೆಲ್ಲ ತರುತ್ತಾರೆ. ದೇವಾಲಯದಲ್ಲಿಯೇ ಪೊಂಗಲ್ ಮಾಡಿ ನೈವೇದ್ಯ ಅರ್ಪಿಸುತ್ತಾರೆ. ಆಗ ಉರುಳುಸೇವೆ, ಬಾಯಿಬೀಗ ಇತ್ಯಾದಿ ಸೇವೆಗಳು ಭಕ್ತರಿಂದ ನಡೆಯುತ್ತವೆ. ರಾತ್ರಿಗೆ ಎಲ್ಲಾರಿಂದಲೂ ದೀಪಾರಾಧನೆ ನಡೆಯುತ್ತದೆ. 

4ನೆಯ ದಿನ :

                     ಪೂರ್ಣಿಮೆ. ಅಂದು ಬೆಳಿಗ್ಗೆ ಬಲಿಹರಣ ನಡೆದರೆ ಮಧ್ಯಾಹ್ನ ದೇವರ ಕಲ್ಯಾಣೋತ್ಸವ. ಸಂಜೆ ದಾಸಯ್ಯನವರ ಮಣಿಸೇವೆ. ಆಗ ದಾಸಯ್ಯಗಳು ದೇವಾಲಯದಲ್ಲಿ ಗರುಡಗಂಬ ಇರಿಸುತ್ತಾರೆ. ಆಂಜನೇಯನ ಪೂಜೆ ಮಾಡುತ್ತಾರೆ. ಆ ಬಳಿಕ ಪ್ರಸಾದ ವಿನಿಯೋಗ, ಆಮೇಲೆ ಕರಗ ಹೊರುವವನನ್ನು ಬಾವಿಗೆ ಕರೆದುಕೊಂಡು ಹೋಗಿ ಗಂಗೆ ಪೂಜೆ ಮಾಡಿಸುತ್ತಾರೆ. ಅವನಿಗೆ ಕಪ್ಪುಬಳೆ ತೊಡಿಸುತ್ತಾರೆ. ಆತನನ್ನು ದೇವಾಲಯಕ್ಕೆ ಕರೆದು ತಂದು ಸೀರೆ ಉಡಿಸುತ್ತಾರೆ ಆತನಿಗೆ ಸ್ತ್ರೀಗೆ ಮಾಡುವ ಎಲ್ಲ ಅಲಂಕಾರಗಳನ್ನು ಮಾಡುತ್ತಾರೆ. ಈಗ ಕರಗ ಕುಂಭದ ಮೇಲೆ ಬಿದಿರಿನಿಂದ ಗೋಪುರಾಕೃತಿಯನ್ನು ರಚಿಸುತ್ತಾರೆ. ಅದಕ್ಕೆ ಮಲ್ಲಿಗೆ ಹೂವಿನ ಅಲಂಕಾರ ಮಾಡುತ್ತಾರೆ, ಕರಗಕ್ಕೆ ಪೂಜೆಯಾಗುತ್ತದೆ. ಕರಗವನ್ನು ತಲೆಯಲ್ಲಿ ಹೊತ್ತುಕೊಳ್ಳಲಾಗುತ್ತದೆ. ಆಗ ವೀರಕುಮಾರರು ಅಲಗು ಸೇವೆ ಮಾಡುತ್ತಾರೆ. ಕರಗವು ಮೊದಲು ದೇವಸ್ಥಾನಕ್ಕೆ ಮೂರು ಪ್ರದಕ್ಷಿಣೆ ಮಾಡುತ್ತದೆ. ಆಗ ಹಲಗೆ, ತಮಟೆ ಇತ್ಯಾದಿಗಳನ್ನು ನುಡಿಸುತ್ತಾರೆ. ಅದಕ್ಕೆ ಅನುಗುಣವಾಗಿ ಕರಗ ನರ್ತಿಸುತ್ತದೆ. ಮುಂದೆ ಕತ್ತಿ ಹಿಡಿದು ವೀರಕುಮಾರರಿರುತ್ತಾರೆ. ಹಿಂದೆ ಕುಣಿಯುತ್ತಾ ಕರಗ ಬರುತ್ತದೆ. ಊರಿನ ಮುಖ್ಯ ಸ್ಥಳಗಳಲ್ಲಿ ಕರಗ ಹೆಚ್ಚು ಹೊತ್ತು ಕುಣಿಯುತ್ತದೆ. ಊರಿನ ಎಲ್ಲಾ ದೇವಾಲಯಗಳಲ್ಲಿ ಅಂದು ಪೂಜೆಪುರಸ್ಕಾರಗಳು ನಡೆಯುತ್ತದೆ. ಕರಗ ಎಲ್ಲ ದೇವಾಲಯಗಳಿಗೆ ಹೋಗಿ ಪೂಜೆಯ ನಂತರ ಹಿಂತಿರುಗುತ್ತದೆ. ಮನೆಮಂದಿ ಈ ಸಂದರ್ಭದಲ್ಲಿ ಕರಗಕ್ಕೆ ಹಣ್ಣುಕಾಯಿ ಅರ್ಪಿಸಿ ಪೂಜೆ ಮಾಡುತ್ತಾರೆ. ಊರಿನ ಇತರ ದೇವಾಲಯಗಳಿಂದ ಬಂದ ರಥಗಳು ಮೈದಾನವೊಂದಲ್ಲಿ ಸೇರುತ್ತದೆ. ಅವುಗಳಲ್ಲಿ ರಾವಣೋತ್ಸವದ ಪಲ್ಲಕ್ಕಿ ವಿಶೇಷವಾದುದು. ಕರಗ ಹೊತ್ತವನು ಅಲ್ಲಿ ವಿವಿಧ ಬಗೆಯ ಚಮತ್ಕಾರವನ್ನು ಬಹಳ ಹೊತ್ತು ತೋರಿಸುತ್ತಾನೆ. ಆಗ ಕೀಲು ಕುದುರೆ, ಗಾರುಡಿ ಬೊಂಬೆ, ಇತ್ಯಾದಿ ಕಲೆಗಳೂ ಪ್ರದರ್ಶನವಾಗುತ್ತದೆ. ಕರಗ ಪ್ರದರ್ಶನವಾದ ಮೇಲೆ ಎಲ್ಲ ದೇವರುಗಳೂ ಅವುಗಳ ನೆಲೆ ಸೇರುತ್ತವೆ. 

  5ನೆಯ ದಿನ :

                 ಜಾತ್ರೆ. ಅಂದು ಊರೆಲ್ಲ ಸುತ್ತಿದ ಕರಗ ಸಂಜೆ ದೇವಾಲಯದ ಬಳಿ ಬರುತ್ತದೆ. ಅಷ್ಡರಲ್ಲಿ ಅಗ್ನಿಕುಂಡ ಸಿದ್ಧವಾಗಿರುತ್ತದೆ. ಕರಗ ಮೂರು ಸಲ ಅಗ್ನಿ ಕುಂಡವನ್ನು ಹಾಯುವುದು. ಆಗ ಉಳಿದವರೂ ಹಾಯುತ್ತಾರೆ. ಆನಂತರ ಕರಗಕ್ಕೆ ಪೂಜೆ ಮಾಡಿ ಕೆಳಗೆ ಇಳಿಸುತ್ತಾರೆ. ಹೀಗೆ ಇಳಿಸುವವರೆಗೆ ಕರಗವನ್ನು ಎಲ್ಲಿಯೂ ಇಳಿಸಿರಬಾರದು. ಹಾಗೆಯೇ ಕುಣಿಯುವಾಗಲೂ ಬೀಳಿಸಬಾರದು. ಹಾಗೆ ಬೀಳಿಸಿದರೆ ಇಲ್ಲವೇ ಇಳಿಸಿದರೆ ಕತ್ತಿ ಹಿಡಿದ ವೀರಕುಮಾರರು ಅವನನ್ನು ಅಲ್ಲೇ ಕಡಿಯುತ್ತಾರೆ ಎಂಬ ನಂಬಿಕೆ ಇದೆ. 

  6ನೆಯ ದಿನ:

            ಬೆಳಿಗ್ಗೆ ಬಲಿ. ರಾತ್ರಿ ಮಹಾಭಾರತ ಪಠಣ. ಆಗ ಪೋತಲು ರಾಜುವಿನ ಕಥೆಯನ್ನು ಪಠಣ ಮಾಡಲಾಗುತ್ತದೆ. ರಾತ್ರಿ ಒಂಬತ್ತು ಗಂಟೆಗೆ ಈ ಪಠಣ ಆರಂಭವಾಗುತ್ತದೆ. ಈ ವೇಳೆಗೆ ವೀರಕುಮಾರರಲ್ಲಿ ಒಬ್ಬವಿಗೆ ರಾಕ್ಷಸ ರೂಪ ಮಾಡಿ ಕೂಡಿಸುತ್ತಾರೆ. ಬೆಳಗಿನ ಜಾವ ಮುಂಜಾನೆಯ ವೇಳೆಗೆ ಕತೆಯಲ್ಲಿ ಪೋತಲು ರಾಜುವಿನ ವಿವರ ಬರುವುದು. ಆಗ ವೇಷಧಾರಿಗೆ ರಾಕ್ಷಸ ಆವಾಹನೆಯಾಗುತ್ತದೆ. ಈ ಸಮಯದಲ್ಲಿ ರಾಕ್ಷಸನಿಗೆ ಮೇಕೆ ಮರಿಯನ್ನು ಬಲಿ ಕೊಡಲಾಗುತ್ತದೆ. ಆತ ಅದನ್ನು ಕುತ್ತಿಗೆಗೆ ಕಚ್ಚಿಕೊಂಡು ಬಾಯಿಯಿಂದ ಕಚ್ಚಿ ಅದರ ಎಲ್ಲ ರಕ್ತವನ್ನು ಹೀರುತ್ತಾನೆ. ಆನಂತರ ತನ್ನ ಮುಂದೆಯೇ ಮಾಡಿಟ್ಟಿರುವ  ನೈವೇದ್ಯ (ಬಾಳೆಹಣ್ಣಿನ ರಸಾಯನ ಮತ್ತು ಅನ್ನದ ಮಿಶ್ರಣ)ವನ್ನು ತಿನ್ನುವನು. ಆಗ ಶಾಂತಿಪೂಜೆ ಇರುತ್ತದೆ. ಇದಕ್ಕೆ ‘ಗಾವು ಸಿಗಿಯುವುದು’ ಎನ್ನುತ್ತಾರೆ. 

   7ನೆಯ ದಿನ:

ವಸಂತೋತ್ಸವ. ಅಂದು ಕರಗದ ಪೂಜಾರಿ ತಲೆಯ ಮೇಲೆ ಒಂದು ಒನಕೆ ಅದರ ಮೇಲೆ ಅರಶಿನ ನೀರು ತುಂಬಿದ ಬಿಂದಿಗೆಯೊಂದಿಗೆ ಕುಣಿಯುತ್ತಾನೆ. ಆಗ ವಾದ್ಯಗಳ ನುಡಿತ ಇರುತ್ತದೆ, ಈ ನುಡಿತಕ್ಕೆ ಕುಣಿಯುತ್ತಾ ಪೂಜಾರಿಯು ನೀರು ಚೆಲ್ಲುತ್ತಾನೆ. ಈಗ ವೀರಕುಮಾರರು ಎರಡು ಗುಂಪಾಗಿ ನಿಲ್ಲುವರು. ಒಂದು ಗುಂಪು ಮಾನವ ವರಸೆ. ಇನ್ನೊಂದು ಅಣ್ಣ ತಮ್ಮಂದಿರ ವರಸೆ. ಇವರು ಪರಸ್ಪರ ಇದಿರು ಬದಿರಾಗಿ ನಿಂತು ಅರಿಶಿನದ ನೀರನ್ನು ಎರಚಿಕೊಳ್ಳುವರು. 

  ಆನಂತರ ಎಲ್ಲರೂ ಧರ್ಮರಾಯನ ಮತ್ತು ದ್ರೌಪದಿಯ ಮೂರ್ತಿಗಳನ್ನು ಬಾವಿಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲಿ ಸ್ನಾನ ಮಾಡಿ ಪೂಜೆಯ ಬಳಿಕ ಕಂಕಣ, ಜನಿವಾರ ಇತ್ಯಾದಿಗಳನ್ನು ವಿಸರ್ಜಿಸುತ್ತಾರೆ. ಮತ್ತೆ ದೇವಾಲಯಕ್ಕೆ ಬಂದು ಧ್ವಜ ಇಳಿಸಿ ಮಂಗಳಾರತಿ ಮಾಡಿ ಉತ್ಸವವನ್ನು ಕೊನೆಗೊಳಿಸುವರು. ಇದು ಎರಡು ಮೂರು ಜಿಲ್ಲೆಗಳಲ್ಲಿರುವ ಸಾಮಾನ್ಯ ಆಚರಣೆಯ ರೂಪ. ಬೆಂಗಳೂರು ಕರಗದ ವಿಧಿಗಳು ಇನ್ನೂ ಹೆಚ್ಚು ಸಂಕೀರ್ಣವಾಗಿರುತ್ತದೆ. ಹಾಗೆಯೇ ಬೆಂಗಳೂರು, ಕೋಲಾರ, ದೇವನಹಳ್ಳಿ, ಹೊಸಕೋಟೆ, ಅನೇಕಲ್ ಮುಂತಾದ ಕಡೆ ಆಯಾ ಪ್ರದೇಶಗಳಿಗೆ ಅನುಗುಣವಾಗಿ ವಿಧಿಯಾಚರಣೆಗಳ ವೈವಿಧ್ಯತೆ ಇದೆ. 

   ಕರಗದ ಇತರ ವಿಧಿಗಳು : ಕರಗಕ್ಕೆ ಸಾಂಪ್ರದಾಯಿಕವಾಗಿ ಧರ್ಮರಾಯನ ಕರಗ, ದ್ರೌಪದಮ್ಮನ ಕರಗ ಎಂದು ಕರೆಯುತ್ತಾರೆ. ಒನಕೆ ಕರಗ, ಚೊಂಬಿನ ಕರಗ, ಚಿತ್ರಗೋಪುರ ಕರಗ ಇತ್ಯಾದೆ ವೈವಿಧ್ಯತೆ ಕರಗಗಳಲ್ಲಿದೆ. 

  ಒನಕೆ ಕರಗ :

              ಸುಮಾರು 5-6 ಅಡಿ ಉದ್ದದ ಒನಕೆಯಿರುತ್ತದೆ. ಅದರ ಒಂದು ತುದಿಗೆ ಸೈಕಲ್ಲು ಚಕ್ರವನ್ನು ಅಡ್ಡಲಾಗಿ ಕಟ್ಟಿ ಅದರ ಸುತ್ತು ಹೂವಿನ ಅಲಂಕಾರವಿರುತ್ತದೆ. ಒನಕೆಯ ಮತ್ತೊಂದು ತುದಿಯನ್ನು ತಲೆಯ ಮಧ್ಯದಲ್ಲಿ ನಿಲ್ಲಿಸಿ ವಾದ್ಯದ ನುಡಿತಕ್ಕೆ ಅನುಗುಣವಾಗಿ ಕುಣಿಸುತ್ತಾರೆ. ಇಲ್ಲಿ ಮುಖ್ಯವಾದುದೆಂದರೆ ಒನಕೆಯ ವಾಸರವನ್ನು ತಿದ್ದಿಕೊಳ್ಳುವುದು. ಕೆಂಪು ಬಟ್ಟೆಯ ವೀರಗಾಸೆ, ಸೊಂಟಕ್ಕೆ ನಡುಪಟ್ಟಿ,  ಕೊರಳಿಗೆ ಹಾರ, ಗಂಧ-ಕುಂಕುಮ, ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುವ ವ್ಯಕ್ತಿ ಕುಣಿತದ ಪರಾಕಾಷ್ಠೆಯವರೆಗೂ ಈ ವಾರದ ಕಡೆಗೆ ಗಮನವಿಟ್ಟಿರುತ್ತಾನೆ. 

  ಚೊಂಬಿಗ ಕರಗ :

             ಇದರಲ್ಲಿ ಸಾಮಾನ್ಯವಾಗಿ ಸ್ತ್ರೀಯರೇ ಭಾಗಿಗಳಾಗುತ್ತಾರೆ. ಹೂವು, ಕುಂಕುಮಗಳಿಂದ ಅಲಂಕೃತವಾದ ದುಂಡನೆಯ ಚೊಂಬನ್ನು ಸಿಂಬೆಯಿಲ್ಲದೆ ತಲೆಯ ಮೇಲಿಡಲಾಗುತ್ತದೆ. ವಾದ್ಯ ಪರಿಕರಗಳ ನುಡಿತಕ್ಕೆ ಇದನ್ನು ಬೀಳಿಸದೆ ಕುಣಿಯುವುದು ಇಲ್ಲಿಯ ವಿಶೇಷ. ಕಲಾವಿದರು ಆಗ ಆಕರ್ಷಕವಾದ ಉಡುಗೆಯಲ್ಲಿರುತ್ತಾರೆ. 

  ಚಿತ್ರಗೋಪುರ ಕರಗ :

                 ಗೋಪುರಾಕಾರವಾಗಿ ಹೆಣೆದ ಬುಟ್ಟಿಗೆ ಹೂವಿನಿಂದ ಅಲಂಕಾರ ಮಾಡಲಾಗುತ್ತದೆ. ಇದನ್ನು ತಲೆಯ ಮೇಲಿಟ್ಟು ಬೀಳಿಸದೆ ಕುಣಿಯುವುದು ಚಿತ್ರಗೋಪುರ ಕರಗದ ವಿಶೇಷ. 

   ದೇವನಹಳ್ಳಿಯಲ್ಲಿ ನೂರೆಂಬತ್ತು ವರ್ಷಗಳಿಂದ ಕರಗ ನಡೆಯುತ್ತಿದೆ. ಬೆಂಗಳೂರಿನ ಮಾಲೂರಿನಲ್ಲಿ ಇನ್ನೂರು ವರ್ಷದಿಂದ ಕರಗ ನಡೆಯುತ್ತಿರುವುದಕ್ಕೆ ಆಧಾರಗಳಿವೆ. ಕರಗದ ಪಾತ್ರೆಯೂ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸಗೊಳ್ಳುತ್ತದೆ. ಸಮ್ಮಂದೂರಿನ ಕರಗ ಕಂಚಿನಗಿಂಡಿಯದಾದರೆ, ಆನೇಕಲ್ಲಿನ ಕರಗ ಪಂಚಲೋಹದ್ದು, ದೇವನಹಳ್ಳಿಯದು ಚಿನ್ನದ್ದು. ಹಾಗೆಯೇ ಕರಗದ ಉತ್ಸವದಲ್ಲಿ ಜನಗಳ ಪಾಲ್ಗೊಳ್ಳುವಿಕೆಯೂ ಬದಲಾಗುತ್ತದೆ. ದೇವನ ಹಳ್ಳಿಯಲ್ಲಿ ಮುಸಲ್ಮಾನರು ಕರಗದಲ್ಲಿ ಪಾಲ್ಗೊಳ್ಳುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಉತ್ಸವ ನೆರವೇರಿಸುವವರು ಗಂಗಾ ಮತಸ್ಥರಾದರೂ ಕರಗ ಹೊರುವವರು ತಿಗಳರು, ಅದಲ್ಲದೆ ಇದೇ ಊರಿನಲ್ಲಿ ಹರಿಜನ ಕರಗವೊಂದು ನೆರವೇರುತ್ತದೆ. ಇದು ಹರಿಜನ ಬೀದಿಯಲ್ಲಿ ಆರಂಭಗೊಳ್ಳುವುದಾದರೂ ಮುಸ್ಲಿಮರಾದಿಯಾಗಿ ಸಾರ್ವಜನಿಕರೂ ಪಾಲ್ಗೊಳ್ಳುತ್ತಾರೆ. ಉಳಿದಂತೆ ಈ ಉತ್ಸವ ಕೋಲಾರ, ಮಾಲೂರು, ಯಲಹಂಕ, ಕೆಂಗೇರಿ, ವಿಜಯಪುರ, ಶಿಡ್ಲಘಟ್ಟಗಳಲ್ಲಿಯಂತೆ ನಡೆಯುತ್ತದೆ. 

ಗ್ರಾಮದೇವತೆ ಹಬ್ಬಗಳಲ್ಲಿ ಕರಗ :

                ಮಂಡ್ಯ, ತುಮುಕೂರು, ಹಾಸನ, ಬೆಂಗಳೂರು ಜಿಲ್ಲೆಯ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಗ್ರಾಮದೇವತೆಯ ಹಬ್ಬಗಳಂದು ಅಲಂಕರಿಸಲಾಗುವ ಕರಗ ಮೊದಲು ಹೇಳಿದ ಕರಗಕ್ಕಿಂತ ಸಂಪೂರ್ಣ ಭಿನ್ನವಾದದ್ದು. ಯಾವ ರೀತಿ ಭಿನ್ನ ಅಂದರೆ, ಮೇಲ್ಕಾಣಿಸಿದ ಬೆಂಗಳೂರು ಮತ್ತು ಅದರ ಪೂರ್ವದಿಕ್ಕಿನ ಕರಗದ ಉತ್ಸವದಲ್ಲಿ ಪೂರ್ಣವಾಗಿ ಕರಗಕ್ಕೆ ಮಾತ್ರ ಪ್ರಾಶಸ್ತ್ಯ. ಇಡೀ ಆರಾಧನೆ ಕರಗದ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೆ ಈ ಉಳಿಕೆ ಭಾಗದ ಕರಗ ಸ್ವತಂತ್ರ ಆರಾಧನೆಯಲ್ಲ. ಗ್ರಾಮದೇವತೆಯರ ಹಬ್ಬಗಳಲ್ಲಿ ಜರಗುವ ಒಂದು ಉಪ ಆಚರಣೆ ಇದು. ಅಂದರೆ, ಗ್ರಾಮದೇವತೆಯ ಹಬ್ಬದ ಮೊದಲು ‘ಕಂಬವಿಕ್ಕಿ’ದ ದಿನ ಒಂದು ಹಿತ್ತಾಳೆ ಗಿಂಡಿ (ಚೊಂಬು, ಬಿಂದಿಗೆ, ಕೊಡ ಇತ್ಯಾದಿ)ಗೆ ನೀರು ತುಂಬಿ ಅದರಲ್ಲಿ ಅಡಕೆ ಹೊಂಬಾಳೆಗಳನ್ನಿಟ್ಟು, ಗಿgಡಿಯ ಕೊರಳಿಗೆ ಹೂವಿನ ದಂಡೆ ಕಟ್ಟಿ, ಗಿಂಡಿಯ ತಳಭಾಗಕ್ಕೆ ಸಿಂಬೆ ಬಿಗಿದು ದೇವಿಯ ಪ್ರತಿಮೆಯ ಮುಂದೆ ಪೂಜಿಸಿಡುತ್ತಾರೆ. ಕಂಬ ಇಕ್ಕಿದ ದಿನದಿಂದ ಕೊಂಡ ಹಾಯುವ ದಿನದವರೆಗೆ ಪ್ರತಿದಿನ ದೇವರ ಜೊತೆಯಲ್ಲಿ ಈ ಕರಗವನ್ನು ಪೂಜಿಸಲಾಗುತ್ತದೆಯಲ್ಲದೆ ದೇವರನ್ನು ಎತ್ತಿದಾಗ ಕರಗವನ್ನು ಎತ್ತಲಾಗುತ್ತದೆ. ‘ದೇವರನ್ನು ಎತ್ತವುದು’ ಅಂದರೆ ಗುಡಿಯಲ್ಲಿರುವ ಮೂಲ ವಿಗ್ರಹದ ಬದಲು, ಅದರ ಪ್ರತಿರೂಪವಾಗಿ ತಯಾರಿಸಿದ ಪೂಜೆಯನ್ನು ಸಾಮಾನ್ಯವಾಗಿ ಕೊಂಡು ಹಾಯುವ ಮತ್ತು ಮೆರೆಸುವ ಸಂದರ್ಭಕ್ಕಾಗಿ ಎತ್ತಲಾಗುತ್ತದೆ. ನಿಗದಿಪಡಿಸಿದ ಗುಡ್ಡ ಅದನ್ನು ತಲೆಯ ಮೇಲೆ ಹೊತ್ತು ದೇವಸ್ಥಾನದ ಹೊರಗೆ ಬರುತ್ತಾನೆ. ಹಾಗೆಯೇ ಕರಗದ ‘ಗುಡ್ಡ’ನೂ ಇರುತ್ತಾನೆ. ಕರಗದ ಗುಡ್ಡ ಕೂಡ ನಿಗದಿಪಡಿಸಲಾದ ಪೈಕಿಗೆ ಸೇರಿದವನೇ ಆಗಿರುತ್ತಾನೆ. ಈ ರೀತಿಯ ಗುಡ್ಡರ ವಿಂಗಡಣೆಗೆ ಸಂಬಂಧಿಸಿದಂತೆ ತುಮುಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಉಜ್ಜನಿ ಚೌಡಮ್ಮನ ಹಬ್ಬದಲ್ಲಿ ಒಂದು ನಿಯಮವೇ ಇದೆ. 

ಕರಗದ ಪಾಲು, ಕರಡಿ ಪಾಲು ಕಥೆ :

                   ದೊಡ್ಡನಾರಸೀಗೌಡ ಚಿಕ್ಕನಾರಸೀಗೌಡ ಚೌಡಮ್ಮನ ಒಕ್ಕಲಾಗಿ ಹಬ್ಬ ಮಾಡಲು ಪ್ರಾರಂಭಿಸಿದರು. ಈ ಗೌಡರುಗಳು ತಮ್ಮ ಮಕ್ಕಳಲ್ಲಿ ಒಬ್ಬನನ್ನು ಅರಿಸಿ ‘ಗುಡ್ಡ’ ಎಂದು ಹೆಸರಿಟ್ಟು ಹಬ್ಬದ ಕೊಂಡದಲ್ಲಿ ಅವನು ಓಡುವಂತೆ ನಿಯಮಿಸುತ್ತಾರೆ. ಆ ಗುಡ್ಡ ಒಬ್ಬನೇ ಆಗಿದ್ದುದರಿಂದ ಚೌಡಮ್ಮನ ಪ್ರತಿಮೆಯನ್ನು ತಲೆಯಮೇಲೆ ಹೊತ್ತು ಶ್ರೀಕೃಷ್ಣನ ಪ್ರತೀಕ ಕರಗವನ್ನು ಹೆಗಲಿಗೆ ಕಟ್ಟಿಕೊಂಡು ಅಗ್ನಿ ಕೊಂಡದಲ್ಲಿ ಓಡುತ್ತಿದ್ದ. ಅವನಿಗೆ ಬಹಳ ಕಾಲ ಮಕ್ಕಳಾಗಲಿಲ್ಲ. ಆದ್ದರಿಂದ ಇನ್ನೊಬ್ಬ ಹೆಂಡತಿಯನ್ನು ತರುತ್ತಾನೆ. ಕಿರಿಯ ಹೆಂಡತಿಗೆ ಒಬ್ಬ ಮಗ ಹುಟ್ಟುತ್ತಾನೆ. ಆಗ ಅವನ ಪ್ರೀತಿಯೆಲ್ಲ ಕಿರಿಯವಳ ಕಡೆಗಾಗಿ ಹಿರಿಯವಳ ಬಗ್ಗೆ ಅವನಿಗೆ ಬೇಸರ ಮೂಡುತ್ತದೆ. 

                      ಹೀಗೆ ಇರಲು ಒಂದು ದಿನ ಕಿರಿಯಳು ಹಿರಿಯಳಾದ ತನ್ನ ಸವತಿಯನ್ನು ‘ಬಂಜೆ’ ಎಂದು ಅಪಹಾಸ್ಯ ಮಾಡಿ ನಗುತ್ತಾಳೆ. ಗಂಡನಿಂದ ದೂರವಾಗಿ ಸವತಿಯ ಚುಚ್ಚು ನುಡಿಗೆ ಗುರಿಯಾದ ಅವಳಿಗೆ ದಾರಿ ಕಾಣದಂತಾಗುತ್ತದೆ. ಬಹುವಾಗಿ ಬೇಸರಗೊಂಡ ಅವಳು ಒಂದು ದಿನ ತನ್ನ ತೌರು ಮನೆಗೆ ಹೊರಡುತ್ತಾಳೆ. ಆಕೆ ತನ್ನ ತೌರುಮನೆಯನ್ನು ತಲುಪುವ ವೇಳೆಗೆ ಸರಿಯಾಗಿ ಅವರ ಅಣ್ಣ ಮೇಲುಕೋಟೆಯ ಚೆಲುವರಾಯ ಸ್ವಾಮಿ ಯಾತ್ರೆಗೆ ಹೊರಟಿರುತ್ತಾನೆ. ಅಣ್ಣನೊಂದಿಗೆ ತಾನೂ ಹೊರಡುತ್ತಾಳೆ. ಚೆಲುವರಾಯನ ದರ್ಶನ ಮಾಡಿದ ಮೇಲೆ ಒಂದು ಹರಕೆ ಕಟ್ಟುತ್ತಾಳೆ. ಅದೇನೆಂದರೆ ತಾನು ಮುಂದಿನ ವರ್ಷ ಚೆಲುವರಾಯನ ದರ್ಶನಕ್ಕೆ ಬರುವ ವೇಳೆಗೆ ತನಗೆ ಮಕ್ಕಳಾಗಬೇಕು. ಹೆಣ್ಣು ಮಗುವಾದರೆ ಅದನ್ನು ಚೆಲುವರಾಯನ ಕೊಳಕ್ಕೆ ಎಸೆಯುತ್ತೇನೆ. ಗಂಡಾದರೆ ಚೆಲುವರಾಯನ ಹರಿಯುವ ತೇರಿನ ಗಾಲಿಯ ಮುಂದೆ ಇಡುತ್ತೇನೆ. ಹೀಗೆ ಹರಕೆ ಕಟ್ಟಿ ಅಣ್ಣನೊಂದಿಗೆ ಊರಿಗೆ ಹಿಂದಿರುಗುತ್ತಾಳೆ. ಅವಳ ಹರಕೆಯಂತೆ, ಚೆಲುವರಾಯನ ಕೃಪಾಕಟಾಕ್ಷ ಅವಳ ಮೇಲೆ ಬಿದ್ದಂತೆ ಅವಳಿಗೆ ಒಂದು ಗಂಡು ಮಗುವಾಗುತ್ತದೆ. ಆಗ ತನ್ನ ಹರಕೆಯನ್ನು ಈಡೇರಿಸುವ ಸಲುವಾಗಿ, ತನ್ನ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನ ಮಗನನ್ನು ಮೇಲುಕೋಟೆಯ ಹಬ್ಬದ ಹರಿಯುವ ತೇರಿನ ಮುಂದೆ ಇಡುತ್ತಾಳೆ. ಆದರೆ ತೇರಿನ ಗಾಲಿ ಪುಟ ನೆಗೆದು ಮಗುವಿನ ಪ್ರಾಣವನ್ನು ಉಳಿಸುತ್ತದೆ. ಬಹು ಸಂತೋಷಗೊಂಡ ಆಕೆ ತನ್ನ ಮಗುವಿಗೆ ‘ಚೆಲುವ’ ಎಂದು ಹೆಸರಿಡುತ್ತಾಳೆ. ಕಳೆದುಕೊಂಡಿದ್ದ ತನ್ನ ಗಂಡನ ಪ್ರೀತಿಯನ್ನು ಪುನಃ ಪಡೆಯುತ್ತಾಳೆ. ಬಂಜೆ ಎಂಬ ಸೊಲ್ಲನ್ನು ಇಂಗಿಸಿಕೊಳ್ಳುತ್ತಾಳೆ. ತನ್ನ ಮಗುವನ್ನು ಸುಖದಿಂದ ಸಾಕಿ ದೊಡ್ಡದನ್ನಾಗಿ ಮಾಡುತ್ತಾಳೆ. ಮಗುವಿನ ತಂದೆ ಮೇಲುಕೋಟೆಯಿಂದ ಶಿಲ್ಪಿಯನ್ನು ಕರೆತಂದು ಚೌಡಮ್ಮನ ಶಿಖರವನ್ನು ಗೇಯಿಸುತ್ತಾನೆ. 

                   ಗುಡ್ಡನಿಗೆ ವಯಸ್ಸಾಗುತ್ತದೆ. ಅಗ್ನಿಕೊಂಡದಲ್ಲಿ ಓಡುವುದು ಅವನಿಗೆ ಅಸಾಧ್ಯವಾಗುತ್ತದೆ. ಊರವರೆಲ್ಲ ಸೇರಿ ಗುಡ್ಡನ ಮಕ್ಕಳಿಬ್ಬರನ್ನೂ ಗುಡ್ಡರನ್ನಾಗಿ ನೇಮಿಸುತ್ತಾರೆ. ಅವರಲ್ಲಿ ಕಿರಿಯ ಹೆಂಡತಿ ಮಗ ನಾರಸೀಗೌಡ ಕರಡಿ (ಚೌಡಮ್ಮನ ಪೂಜೆ)ಯನ್ನೂ ಹಿರಿಯ ಹೆಂಡತಿ ಮಗ ಚೆಲುವೇಗೌಡ ಕರಗವನ್ನೂ ಹೊತ್ತು ಕೊಂಡದಲ್ಲಿ ಓಡಾಡುತ್ತಾರೆ. ಹೀಗೇ ಹಕ್ಕು ಪಡೆದ ಮನೆತನದ ಕರಗದ ಗುಡ್ಡ ಕರಗವನ್ನು ಹೊತ್ತು ಸದಾ ಪೂಜೆಯ ಮುಂದೆ ಕುಣಿಯುತ್ತಿರುತ್ತಾನೆ. ಪೂಜೆಯ ಮೆರವಣಿಗೆಯಲ್ಲಾಗಲೀ, ಕೊಂಡ ಹಾಯುವಲ್ಲಾಗಲೀ, ಕುಣಿತದ ಸಂದರ್ಭದಲ್ಲಾಗಲೀ ಕರಗ ಸದಾ ದೇವರ ಕಣ್ಮುಂದೆಯೇ ಇರುತ್ತದೆ. ಬಿಳಿಯ ಜುಬ್ಬ, ಬಿಲಿ ಪಂಚೆ, ತಲೆಗೆ ಪೇಟೆ ನಡುವಿಗೆ ಬಿಗಿದ ವಸ್ತ್ರ, ಕಾಲಿಗೆ ಗೆಜ್ಜೆ, ಹಣೆಗೆ ಕುಂಕುಮ, ಕೊರಳಿಗೆ ಮಲ್ಲಿಗೆ ಹಾರ, ಇವಿಷ್ಟು ಕರಗದ ಗುಡ್ಡನ ವೇಷಭೂಷಣ, ತಮಟೆ ನಗಾರಿಯ ಗತ್ತಿಗೆ ತಕ್ಕಂತೆ ಕರಗದ ಗಿಂಡಿ ಹೊತ್ತು ಕುಣಿಯುವಾಗ, ಗಿಂಡಿಯಲ್ಲಿ ಪಸರಿಸಿ ಇಟ್ಟ ಹೊಂಬಾಳೆ ವಾಲುತ್ತ ಜೋಲುತ್ತಾ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತವೆ. ಗ್ರಾಮ ದೇವತೆಯ ಜೊತೆಗಿನ ಈ ರೀತಿಯ ಕರಗ ಅನೇಕ ಊರುಗಳಲ್ಲಿ ಚಾಲ್ತಿಯಲ್ಲಿದೆ. ಇದು ಸಮೃದ್ಧಿಯ ಸಂಕೇತ ಎಂದು ನಂಬಲಾಗುತ್ತಿದೆ.  ಸಂಗ್ರಹಣೆ – ಕರ್ನಾಟಕ ಜನಪದ ಕಲೆಗಳ ಕೋಶ ಲೇಖಕರು - ಹಿ. ಚಿ. ಬೋರಲಿಂಗಯ್ಯ   

© 2014 AUTHOR CURIOUS KARNATAKA ALL RIGHTS RESERVED