Simhana Gadde Jwala Malini Kshethra

ಶ್ರೀ ಸಿಂಹನಗದ್ದೆ ಅತಿಶಯ ಕ್ಷೇತ್ರದ ಸಂಕ್ಷಿಪ್ತ ಪರಿಚಯ:

                  ಒಂದು ಕ್ಷೇತ್ರದಲ್ಲಿ ಅಧಿವಾಸವಾಗಿರುವ ಶ್ರೀ ಜಿನಶಾಸನ ದೇವ, ದೇವಿಯರ ಮತ್ತು ಅತಿಶಯಯುಕ್ತವಾದ ಅವರುಗಳ ಪ್ರತಿಕೃತಿಯು ಕಾಲದೋಷದಿಂದ ಆ ಕ್ಷೇತ್ರವನ್ನು ಬಿಟ್ಟು ಹೋಗಬೇಕಾದ ಸಮಯ ಬರಬಹುದು. ಆಗ ಆ ಕ್ಷೇತ್ರದ ಭಕ್ತರಿಗೆ ಅಥವಾ ವ್ಯವಸ್ಥಾಪಕರಿಗೆ ಜಿನ ಶಾಸನ ದೇವತೆಗಳು ಸ್ವಪ್ನದಲ್ಲಿ ಪ್ರತ್ಯಕ್ಷರಾಗಿ. ಕ್ಷೇತ್ರವು ಕ್ಷೀಣದೆಸೆಗೆ ಬರುವುದಾಗಿಯೂ ನಾವು ಬೇರೆ ಕ್ಷೇತ್ರಕ್ಕೆ ಪ್ರಸ್ಥಾನ ಬೆಳೆಸಬೇಕಾಗಿದೆ. ನೀವು ಈ ರೀತಿ ವರ್ತಿಸಿಯೆಂದು ಮಾರ್ಗದರ್ಶನ ಮಾಡುವುದುದೆಂದು ಹಿಂದಿನ ಕೆಲವು ಚರಿತ್ರೆಗಳ ಆಧಾರದಿಂದ ತಿಳಿದುಬರುತ್ತದೆ. ಶ್ರೀ ಜ್ವಾಲಾಮಾಲಿನಿ ದೇವಿಯು ಗೇರುಸೊಪ್ಪೆಯಿಂದ ಸಿಂಹನಗದ್ದೆ ಕ್ಷೇತ್ರಕ್ಕೆ ಬಂದ ಸನ್ನಿವೇಶವು ಇದೇ ರೀತಿಯಿದೆ.

                  ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಜೋಗದಿಂದ ಕೆಲವೇ ಮೈಲುಗಳ ದೂರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಹದಿನೆಂಟು ಮೈಲುಗಳ ದೂರದಲ್ಲಿ ಇರುವ ಸ್ಥಳ. ಗೇರುಸೊಪ್ಪೆ. ಇದು ಮೊದಲು ಸಾಳುವ ವಂಶದ ರಾಜಧಾನಿಯಾಗಿತ್ತು. ಇಂದು ಪೂರ್ಣವಾಗಿ ಹಾಳುಬಿದ್ದಿದೆ. ಅಲ್ಲಿ ಕೆಲವು ಬಸದಿಗಳ ಕಟ್ಟಡಗಳ ಅಡಿಪಾಯಗಳು ಬಾವಿಗಳು ಕಂಡುಬರುತ್ತಿವೆ. ಶರಾವತಿ ದಂಡೆಯಲ್ಲಿ ಈ ಅವಶೇಷಗಳುಳ್ಳ ಪ್ರದೇಶವಿದ್ದರೆ, ಈಚೆ ದಂಡೆಯಲ್ಲಿ ಹೊಸದಾಗ ಊರು ಎದ್ದಿದೆ. ಈಗ ಜನರು ಈ ಹೊಸ ಊರನ್ನೇ ಗೇರುಸೊಪ್ಪೆಯೆಂದು ಕರೆಯುತ್ತಾರೆ. ಹಿಂದಿನ ಸ್ಥಳವನ್ನು ………………… ಬಸ್ತಿಕೇರಿ ಎಂದು ಕರೆಯುತ್ತಾರೆ. ಸಾಳುವ ವಂಶಸ್ಥರು ಇಲ್ಲಿ ಸುಮಾರು ಹದಿಮೂರನೇ ಶತಮಾನದಲ್ಲಿ ರಾಜ್ಯ ಸ್ಥಾಪಿಸದರು. ಆಗ ಕಟ್ಟಿಸಿದ ಅನೇಕ ಬಸದಿಗಳ ಪೈಕಿ ಇಂದು ಕೆಲವು ಮಾತ್ರ ನಾದುರಸ್ತಿಯಲ್ಲಿ ಉಳಿದಿವೆ. ಜೈನರು ಪ್ರಮುಖವಾಗಿ ಪೂಜಿಸುತ್ತಿರುವ, ಜ್ವಾಲಾಮಾಲಿನಿ ಮೂಲಕ್ಷೇತ್ರ ಇದೇ ಆಗಿತ್ತೆಂದು ತಿಳಿದುಬರುತ್ತದೆ. ಈ ಗೇರುಸೊಪ್ಪೆ ಕ್ಷೇತ್ರ ಅವನತಿಯನ್ನು ಹೊಂದಿದ ಸಂದರ್ಭದಲ್ಲಿ ಆಕೆಯ ಮೂರ್ತಿಯನ್ನು ದೇವಿಯ ಅಪ್ಪಣೆಯಂತೆ ಇಲಿಂದ ನರಸಿಂಹರಾಜಪುರಕ್ಕೆ ಸಾಗಿಸಲಾಯಿತೆಂದೊ ತಿಳಿದು ಬರುತ್ತದೆ. ಆ ಬಳಿಕ ಅಲ್ಲಿ ಚಿಕ್ಕ ಜ್ವಾಲಾಮಾಲಿನಿಯ ಮೂರ್ತಿಯನ್ನು ತಂದಿಟ್ಟರೆಂದೂ ಹೇಳುತ್ತಾರೆ. ಈಗ ಈ ಮೂರ್ತಿ ಹಿರೇಬಸದಿಯಲ್ಲಿದೆ. ಗೇರುಸೊಪ್ಪೆಯಲ್ಲಿ ಹಿಂದೆ ಅನೇಕ ಚೈತ್ಯಾಲಯಗಳಿದ್ದುವೆಂದು ತಿಳಿದು ಬರುತ್ತದೆ. ಈ ರಾಜ್ಯ ಆಳಿದರೂ, ಅದರ ಕುರುಹು, ದೇವಾಲಯಗಳ ಭಗ್ನಾವಶೇಷಗಳು ಭಿನ್ನಮೂರ್ತಿಗಳು ಅಲ್ಲಲ್ಲಿ ಈಗಲೂ ಕಂಡು ಬರುತ್ತವೆ.

                  ಹಿಂದೆ ಅಲ್ಲಿ ಶ್ರೀ ಸಮಂತಭದ್ರಸ್ವಾಮಿಗಳು ಶ್ರೀ ಜ್ವಾಲಾಮಾಲಿನಿ ದೇವಿಯು ಆರಾಧಕರಾಗಿದ್ದು, ಮಠ ಸ್ಥಾಪನೆಯನ್ನು ಮಾಡಿ, ಧರ್ಮ ಪ್ರಭಾವನೆಯನ್ನು ಮಾಡುತ್ತಾ ಇದ್ದರು. ಪ್ರಕೃತಿ ದೋಷದಿಂದ ಆ ಕ್ಷೇತ್ರದಲ್ಲಿ ಅಧಿವಾಸವಾಗಿದ್ದ ದೇವಿಯು ಅಲ್ಲಿಂದ ಬೇರೆ ಕಡೆಗೆ ಪ್ರಸ್ಥಾನವಗುವ ಸಮಯ ಪ್ರಾಪ್ತವಾಯ್ತು. ಆಗ ಒಂದು ದಿವಸ ಶ್ರೀ ಜ್ವಾಲಾಮಾಲಿನಿ ದೇವಿಯು ಶ್ರೀ ಸಮಂತಭದ್ರ ಸ್ವಾಮಿಗಳಿಗೆ ಸ್ವಪ್ನದಲ್ಲಿ ಪ್ರತ್ಯಕ್ಷವಾಗಿ ಈ ಕ್ಷೇತ್ರವು ಕ್ಷೀಣದೆಸೆಯನ್ನು ಹೊಂದುವ ಕಾಲವು ಪ್ರಾಪ್ತವಾಗುವುದಿದೆ, ಆದುದರಿಂದ ನಾನು ಇಲ್ಲಿ ಇನ್ನು ನಿಲ್ಲಲಾರೆ, ನನ್ನನ್ನು ಬೇರೆ ಕಡೆಗೆ ಕೊಂಡು ಹೋಗಿ ಸ್ಥಾಪಿಸಿ, ಅಲ್ಲಿಂದ ನೀವು ಧರ್ಮ ಪ್ರಭಾವನೆಯನ್ನು ಮಾಡುತ್ತಾ ಬರಬಹುದು. ಅದಕ್ಕಾಗಿ ನನ್ನನ್ನು ಎತ್ತಿನ ಬಂಡಿಯಲ್ಲಿ ಕೊಂಡು ಹೋಗಬೇಕು,ಹೋಗುತ್ತಾ ಹೋಗುತ್ತಾ ಯಾವ ಸ್ಥಳದಲ್ಲಿ ಸಿಂಹ ಮತ್ತು ದನಗಳು, ತಮ್ಮ ವೈರಭಾವವನ್ನು ಬಿಟ್ಟು ಅನ್ಯೋನ್ಯವಾಗಿ ಆಡುತ್ತಾ ಇರುತ್ತವೆಯೊ, ಆ ಸ್ಥಳದಲ್ಲಿ ನನ್ನನ್ನು ಸ್ಥಾಪಿಸಬೇಕೆಂದು ಹೇಳಿದರು. ಅದರಂತೆಯೆ ದೇವಿಯ ಆ ವಚನವು ಪ್ರಯಾಣವೆಂದು ತಿಳಿದು, ಶ್ರೀ ಸಮಂತಭದ್ರಸ್ವಾಮಿಗಳು ಶ್ರೀ ಜ್ವಾಲಾಮಾಲಿನಿಯ ವಿಗ್ರಹವನ್ನು ಎತ್ತಿನ ಬಂಡಿಯಲ್ಲಿ ಏರಿಸಿಕೊಂಡು ಗೇರುಸೊಪ್ಪೆಯಿಂದ ಪ್ರಯಾಣ ಬೆಳೆಸಿದರು. ಅಲ್ಲಿಂದ ದೇವಿಯು ಕನಸಿನಲ್ಲಿ ತೋರಿದ ಸ್ಥಳವನ್ನು ಅನ್ವೇಷಣೆ ಮಾಡುತ್ತಾ ಬರುವಲ್ಲಿ,ಈಗ ಶ್ರೀ ಜ್ವಾಲಾಮಾಲಿನಿ ದೇವಿಯ ಬಿಂಬವು ಸ್ಥಾಪನೆಯಾಗಿರುವ ಶ್ರೀ ಸಿಂಹನಗದ್ದೆಕ್ಷೇತ್ರದ (ಎನ್.ಆರ್.ಪುರ) ಸಮೀಪ ಬರಬರುತ್ತಾ ಸ್ವಾಮಿಗಳ ಮನಸ್ಸಿಗೆ ಆಹ್ಲಾದ ಮತ್ತು ಉತ್ಸಾಹವು ತೋರಿದಂತೆ ಕಂಡುಬಂತು. ಆಗ ತಮ್ಮ ಆತ್ಮಬಲದಿಂದ ಅಮ್ಮನವರು ಅಧಿವಾಸವಾಗುವ ಸ್ಥಳವು ಇದೇ ಇರಬಹುದೇನೋ ಎಂಬುದಾಗಿ ಅಲೋಚಿಸುತ್ತಾ ಸ್ವಲ್ಪ ದೂರ ನಡೆದ ಕೂಡಲೆ, ಒಂದು ಗದ್ದೆಯಲ್ಲಿ ದನಗಳು ಮೇಯುತ್ತಿದ್ದವು ಆ ಗುಂಪಿನ ಮದ್ಯದಲ್ಲಿ ಒಂದು ಸಿಂಹವು ಕರುಗಳೊಡನೆ ಆಟವಾಡುತ್ತಿತ್ತು. ಇದನ್ನು ಕಂಡಸ್ವಾಮಿಗಳು ಆನಂದದಿಂದ ಪುಲಕಿತರಾಗಿ, ದೇವಿಯ ವಚನವನ್ನು ಸ್ಮರಿಸಿ, ಈ ಕಲಿಕಾಲದಲ್ಲಿಯೂ ದೇವಿಯು ಅನುಗ್ರಹದಿಂದ ಇಂತಹ ಸನ್ನಿವೇಶವು ಯಾವ ಸಂದೇಹವೂ ಇಲ್ಲವೆಂದು ತಮ್ಮಲ್ಲಿ ತಾವೇ ನಿಶ್ಚಯಿಸಿಕೊಂಡು, ಅಮ್ಮನವರನ್ನು ಇಲ್ಲಿಯೇ ಶುಭ ಮುಹೂರ್ತದಲ್ಲಿ ಸ್ಥಾಪಿಸಿ, ಅವರು ಅಲ್ಲಿಯೆ ನೆಲಸಿ ಧರ್ಮ ಪ್ರಭಾವನೆಯನ್ನು ಮಾಡುತ್ತಾ ಬಂದರು. ಮತ್ತು ದನಗಳು ಮೇಯುತ್ತಿದ್ದ ಈ ಗದ್ದೆಯಲ್ಲಿ ಅಮ್ಮನವರನ್ನು ಸ್ಥಾಪನೆ ಮಾಡಿ ಈ ಸ್ಥಳಕ್ಕೆ ಸಿಂಹನಗದ್ದೆಯೆಂದು ಹೆಸರಿಟ್ಟಿರುವುದಾಗಿ ಕರ್ಣ ಪರಂಪರೆಯಿಂದ ತಿಳಿದು ಬರುತ್ತದೆ. ನರಸಿಂಹರಾಜಪುರಕ್ಕೆ ಮೊದಲು ………………… ಯೆಂಬ ಹೆಸರಿತ್ತು. ಈ ವಿಚಾರ ಮಠದಲ್ಲಿರುವ ತಾಮ್ರಪತ್ರಯೂ ಕಂಡು ಬರೆಯಲ್ಪಟ್ಟಿದೆ.