Kodava Dance

ಕೊಡವರ ಕುಣಿತಗಳು

   ಕೊಡಗಿನ ಪ್ರಾಚೀನ ಜನಾಂಗಗಳಲ್ಲಿ ಕೊಡವ ಜನಾಂಗವೂ ಮುಖ್ಯವಾದುದು. ಕ್ರಿ.ಶ.1174ರ ಹುಣಸೂರು ತಾಲೂಕಿನ ಶಾಸನದಲ್ಲಿ ಮೊದಲ ಬಾರಿಗೆ ಕೊಡವರ ಉಲ್ಲೇಖವಿರುವುದರಿಂದ ಅವರ ಇತಿಹಾಸ ಅಷ್ಟರಮಟ್ಟಿಗೆ ಹಿಂದಕ್ಕೆ ಹೋಗುತ್ತದೆ. ಕೆಲವು ಸಂಶೋಧಕರು ಕೊಡವರು ಉತ್ತರ ಭಾರತದಿಂದ ಕೊಡಗಿಗೆ ವಲಸೆ ಬಂದವರೆಂದು ಅಭಿಪ್ರಾಯ ಪಡುತ್ತಾರೆ. ಸ್ಕಂದ ಪುರಾಣದಲ್ಲಿ ಚಂದ್ರವರ್ಮನೆಂಬುವನು ಕೊಡವರ ಮೂಲ ಪುರುಷನೆಂದು ಹೇಳಲಾಗಿದೆ. ಕೊಡವರು ಕದಂಬ ವಂಶದವರೆಂಬ ಊಹೆಯೂ ಇದೆ. ಹಾಗೆಯೇ ಕೊಡಗಿಗೆ ಇವರು ಸುಮಾರು 5-6ನೇ ಶತಮಾನದಲ್ಲಿ ವಲಸೆ ಬಂದಿರಬೇಕೆಂದೂ ನಂಬಲಾಗಿದೆ.

   ಸಾಂಪ್ರದಾಯಿಕ ಉಡುಪುಗಳಲ್ಲಿ ಕೊಡವರನ್ನು ತಕ್ಷಣ ಗುರುತಿಸಬಹುದು. ಪುರುಷರಿಗೆ ನೀಳವಾದ ಕುಪ್ಪಸ (ಉದ್ದವಾದ ಕರಿಕೋಟು) ದಟ್ಟಿ, ರುಮಾಲು, ಪೀಚೆಕತ್ತಿ, ಪಾನಿಮಂಡೇತುಣಿ, ಸೊಂಟದ ಸುತ್ತಲೂ ಚೇಲೆಗಳಿರುತ್ತವೆ. ಕುಪ್ಪಸವನ್ನು ಬಿಗಿದು ಕಟ್ಟುವುದಕ್ಕೆ ಮತ್ತು ಪೀಚೆಕತ್ತಿ (ಚಿಕ್ಕದಾದ ಕತ್ತಿ) ಯನ್ನು ಸೊಂಟದ ಎಡಭಾಗದಲ್ಲಿ ಸಿಕ್ಕಿಸಿಕೊಳ್ಳುವುದಕ್ಕೆ ಚೇಲೆ ಉಪಯೋಗವಾಗುತ್ತದೆ. ಇದು ರೇಷ್ಮೆಯಾಗಿದ್ದು ಸೊಂಟಕ್ಕೆ ಸುತ್ತಿದಾಗ ಎರಡೂ ಕಡೆ ನೇತು ಬಿದ್ದಿರುತ್ತದೆ. ಕುಪ್ಪಸವು ಮುಂಭಾಗದಲ್ಲಿ ತೆರೆದಿದ್ದು ಮಂಡಿಯವರೆಗೂ ಇಳಿದಿರುತ್ತದೆ. ಕೊಡವ ಸ್ತ್ರೀಯರ ಸಾಂಪ್ರದಾಯಿಕ ಉಡುಪಿನಲ್ಲಿ ಎದ್ದುಕಾಣುವ ವೈವಿಧ್ಯವೆಂದರೆ ಸೀರೆಯ ನೆರಿಗೆಯನ್ನು ಹಿಂಭಾಗಕ್ಕೆ ಬರುವಂತೆ ತೊಡುವುದು. ಇದರೊಂದಿಗೆ ಪೂರ್ಣವಾಗಿ ಕೈಮುಚ್ಚುವಂತೆ ಉದ್ದ ಕೈಯಿನ ರವಿಕೆಯನ್ನು ತೊಡುತ್ತಾರೆ.

   ಕೊಡವರು ಮಾತಾಡುವ ವಿಶಿಷ್ಟ ಭಾಷೆಯನ್ನೇ ‘ಕೊಡವ’ ಎಂದು ಕರೆಯಲಗುತ್ತದೆ. ಈ ಭಾಷೆಯಲ್ಲಿ ಕನ್ನಡ, ಮಲಯಾಳಿ ಮತ್ತು ತುಳು ಭಾಷೆಗಳ ಪದಗಳು ಯಥೇಚ್ಛವಾಗಿವೆ. ಕೊಡವರ ಪಾರಂಪರಿಕ ಮೌಖಿಕ ಸಾಹಿತ್ಯವೆಲ್ಲವೂ ಈ ಭಾಷೆಯಲ್ಲೇ ಇದೆ. ಆದರೆ ಗಮನಾರ್ಹ ಅಂಶವೆಂದರೆ ‘ಕೊಡವ ಭಾಷೆ’ ಕೇವಲ ಕೊಡವ ಜನಾಂಗದ ಭಾಷೆಯಾಗಿರದೆ ಅಲ್ಲಿಯ ಅನೇಕ ಪ್ರಾಚೀನ ಜನಾಂಗಗಳ ಭಾಷೆಯೂ ಆಗಿದೆ.

   ಮುಂದೆ ವಿವರಿಸಲಾಗುವ ಕಲೆಗಳು ಕೊಡವರ ಸಾಂಸ್ಕøತಿಕ ವಿವರಗಳನ್ನು ಹೆಚ್ಚು ನಿಖರವಾಗಿ ಸ್ಪಷ್ಟಪಡಿಸಬಲ್ಲವಾಗಿವೆ.

  ಬೊಳಕಾಟ :ಶಿವನು ಭಸ್ಮಾಸುರನನ್ನು ಸಂಹರಿಸಿದ ಕಾಲಕ್ಕೆ ಮೂವತ್ತೆರಡು ನೃತ್ಯ ಭಂಗಿಗಳನ್ನು ಪ್ರದರ್ಶಿಸಿದನಂತೆ. ಅದರ ಪ್ರತಿರೂಪವೇ ಬೊಳಕಾಟ. ಬೊಳಕ್ ಎಂದರೆ ‘ಬೆಳಕು’ ಎಂದರ್ಥ. ಬೆಳಕಿನ ಸುತ್ತ ಕುಣಿಯುವ ಆಟವೇ ಬೆಳಕಾಟ. ಇದು ಕೊಡವ ಗಂಡಸರು ಮಾಡುವ ಯುದ್ಧ ನೃತ್ಯವಾಗಿದೆ.

   ಕಲಾವಿದರು ಚಾಮರ ಮತ್ತು ಬಿಚ್ಚುಗತ್ತಿಗಳನ್ನು ಹಿಡಿದುಕೊಳ್ಳುತ್ತಾರೆ. ದೇವರ ಸ್ತುತಿ, ಪುರಾಣ, ಇತಿಹಾಸ ಹಾಗೂ ಸಾಂಸ್ಕøತಿಕ ವೀರರಿಗೆ ಸಂಬಂಧಿಸಿದ ಹಾಡುಗಳನ್ನು ಈ ಸಂದರ್ಭದಲ್ಲಿ ಹಾಡಲಾಗುತ್ತದೆ. ಸುಮಾರು 30 ರೀತಿಯ ನೃತ್ಯ ಪ್ರಕಾರಗಳಲ್ಲಿ ಈಗ 11 ಬಗೆಯವು ಉಳಿದುಕೊಂಡಿವೆ. ಇವುಗಳಲ್ಲಿ ಎರಡು ಬಗೆಗಳಿವೆ. ಮೊದಲನೆಯ ರೀತಿಯಾಗಿ ಸಾಂಪ್ರದಾಯಿಕ ದುಡಿವಾದ್ಯ ಮತ್ತು ಹಾಡಿಗೆ ಹಿನ್ನಲೆಯಾಗಿ ಕುಣಿಯುವುದಾದರೆ ಎರಡನೆಯ ರೀತಿ ವಾದ್ಯ ಸಂಗೀತದೊಂದಿಗೆ ಕುಣಿಯುವುದು. 

ಕಪ್ಪೆ ಆಟ : ವೇದಿಕೆಯ ಮಧ್ಯದಲ್ಲಿ ದೀಪವೊಂದಿರುತ್ತದೆ. ಅದರ ಸುತ್ತ ನಿಂತು ಬಿಳಿ ಕುಪ್ಪಸ ತೊಟ್ಟ ನಾಲ್ವರು ದುಡಿ ನುಡಿಸುತ್ತಾರೆ. ಅವರ ಸುತ್ತಲೂ ಉಳಿದವರು ಕುಣಿಯುತ್ತಾ ಮಧ್ಯೆ ಮಧ್ಯೆ ‘ಹೋ ಹೇ ಹಾ’ ಎಂದು ಶಬ್ದ ಹೊರಡಿಸುತ್ತಿರುತ್ತಾರೆ. ನಮಸ್ತೆ ಆಟ್, ಚಾರಿ ಆಟ್, ಕರ್ವೆ ಆಟ್, ಪೀಟ್ ಕುರ್ತಿ ಆಟ್, ಕೈಡವುರ್ ಆಟ್, ವಾಲಗತ್ತಾಟ್, ಅದರಲ್ಲಿನ ಕೆಲವು ಇನ್ನಿತರ ಪ್ರಕಾರಗಳು.

   ಸಾಂಪ್ರದಾಯಿಕ ವಾದ್ಯ ಸಂಗೀತದೊಂದಿಗಿನ ಕುಣಿತದಲ್ಲಿ ವಾಲಗದ ನುಡಿತವೇ ಕುಣಿತಕ್ಕೆ ಪ್ರಧಾನ ಹಿನ್ನಲೆಯಾಗಿರುತ್ತದೆ. ಇದು ಮುಖ್ಯವಾಗಿ ದೇವತಾರಾಧನವಾದ ನೃತ್ಯ.

ಕೊಂಬಾಟ್ : ಕೊಡವರು ತಮ್ಮ ಗ್ರಾಮದೇವತೆಯ ಹಬ್ಬದ ಸಂದರ್ಭದಲ್ಲಿ ಈ ಕಲೆಯನ್ನು ಪ್ರದರ್ಶಿಸುತ್ತಾರೆ. ಕೈಯಲ್ಲಿ ಜಿಂಕೆಯ ಕೊಂಬನ್ನು ಹಿಡಿದುಕೊಂಡು ಕುಣಿಯುವುದು ಇಲ್ಲಿಯ ವಿಶೇಷ. ಭಸ್ಮಾಸುರನ ಸಂಹಾರದ ಸಂದರ್ಭದಲ್ಲಿ ಅವತಾರವೆತ್ತಿದ ವಿಷ್ಣುವು ನರ್ತಿಸುವಾಗ ಜಿಂಕೆಯ ಕೊಂಬನ್ನು ಹಿಡಿದುಕೊಂಡಿದ್ದನೆಂಬುದು ಇಲ್ಲಿಯ ನಂಬಿಕೆ.

ಪೀಲಿಯಾಟ : ಪೀಲಿ ಎಂದರೆ ನವಿಲುಗರಿಯ ಕಂತು. ವಿಷ್ಣುವು ಜಿಂಕೆಯ ಕೊಂಬನ್ನು ಹಿಡಿದುಕೊಂಡು ಒಮ್ಮೆ ನರ್ತಿಸಿದರೆ ಮತ್ತೊಮ್ಮೆ ಪೀಲಿಯನ್ನು ಹಿಡಿದುಕೊಂಡು ನರ್ತಿಸಿದನೆಂದು ನಂಬಲಾಗುತ್ತದೆ. ಆ ಸಲುವಾಗಿ ಪೀಲಿಯಾಟ ಇರುತ್ತದೆ. ಇವೆರಡೂ ಪುರುಷರ ಕಲೆಗಳೇ.

ವಾಲಗತ್ತಾಟ : ಇದು ಸಾಮಾನ್ಯವಾಗಿ ಹಬ್ಬ, ಮದುವೆ, ಸಾರ್ವಜನಿಕ ಸಭೆ-ಸಮಾರಂಭ, ಸಂತೋಷ ಕೂಟಗಳಲ್ಲಿ ಪ್ರದರ್ಶನವಾಗುವ ಕಲೆ. ಇದು ಸಾಮಾಜಿಕ ನೃತ್ಯವಾಗಿರುವಂತೆಯೇ ಹಲವು ವಾದ್ಯವಿಶೇಷಗಳ ಸಮ್ಮಿಳನವೂ ಆಗಿದೆ. ಓಲಗ, ಮೋರಿ, ಡೋಲು, ತಾಳ, ಕುಡಿಕೆ, ಪರೆ, ಕೊಂಬು, ತಮ್ಮಟೆ, ಗೆಜ್ಜೆಗಳು ಇಲ್ಲಿಯ ವಾದ್ಯ ಪರಿಕರಗಳು. ಪುರುಷರು ಕೈಯಲ್ಲಿ ಪೀಚೆಕತ್ತಿ, ಒಡಿಕತ್ತಿಯೊಂದಿಗೆ ಕುಣಿಯುತ್ತಾರೆ. ಇವರೊಂದಿಗೆ ಸ್ತ್ರೀಯರೂ ಭಾಗವಹಿಸುವುದುಂಟು.

  ಇದರಂತೆಯೇ ನಡೆಯುವ ಇನ್ನೊಂದು ನೃತ್ಯ ವಿಶೇಷವೆಂದರೆ ‘ಕೊಂಬು ಕೊಟ್ಟು ವಾಲಗ’. ಕೊಂಬು, ಮೋರಿ, ಶೃತಿ, ತಾಳ, ತಡೆ, ಡೋಲು, ಇಲ್ಲಿಯ ವಾದ್ಯ ವಿಶೇಷಗಳು. ಸಾಮಾನ್ಯವಾಗಿ ಏಳು ಜನರಿಂದ ಈ ಮೇಳದಲ್ಲಿ ಒಬ್ಬೊಬ್ಬರು ಒಂದೊಂದು ವಾದ್ಯವನ್ನು ನುಡಿಸುತ್ತಾರೆ. ಜಾತ್ರೆ ಉತ್ಸವ ಮದುವೆ ಮೊದಲಾದ ಮಂಗಲ ಕಾರ್ಯಗಳಲ್ಲದೆ ಮರಣ ಸಂದರ್ಭದಲ್ಲಿಯೂ ಇವನ್ನು ನುಡಿಸಲಾಗುತ್ತದೆ. 

ಹುತ್ತರಿ ಕೋಲಾಟ : ಹೆಸರೇ ಹೇಳುವಂತೆ ಹುತ್ತರಿ ಹಬ್ಬದ ಸಂದರ್ಭದಲ್ಲಿ ನಡೆಯುವ ಕಲೆಯಿದು. ಸುಮಾರು ಮೂರುವರೆ ಅಡಿ ಉದ್ದದ ಬೆತ್ತದ ಜೊಪ್ಪಕೋಲ್‍ಗಳನ್ನು ಹಿಡಿದು ಹಾಡಿನೊಂದಿಗೆ ಕೋಲಾಟವಾಡಲಾಗುತ್ತದೆ. ಇದರಲ್ಲಿ ‘ಜಪ್ಪೈಕೋಲ್’ ‘ಚಂದ ತೊರೆಕೋಲ್’ ‘ಪಾತುರೆಕೋಲ್’ ಮೊದಲಾದ ಪ್ರಕಾರಗಳೂ ಇವೆ. ಕೋಲಾಟದ ಕೊನೆಯಲ್ಲಿ ಕೊಂಬು, ಕೊಟ್ಟ, ವಾಲಗದೊಂದಿಗೆ ಪದಕಳಿ ಅಥವಾ ‘ಪರಿಯಕಳಿ’ ಎಂಬ ನೃತ್ಯವನ್ನು ಮಾಡಲಗುತ್ತದೆ.

ಪರಿಯಕಳಿ : ಕೋಲಟದ ಮುಂದಿನ ಪ್ರಕಾರವೇ ಪರಿಯಕಳಿ. ಕೋಲಟಕ್ಕೆ ಉಪಯೋಗಿಸುವ ಬೆತ್ತಗಳನ್ನು ಇಲ್ಲಿಯೂ ಉಪಯೋಗಿಸಲಾಗುತ್ತದೆ. ಕುಣಿತ ನಿಲ್ಲಿಸುವಾಗ ‘ಮೇದಪರೆ’ ಹೊಡೆಯಬೇಕು. ಆಗ ಕಲಾವಿದರು ಗುಂಪಾಗಿ ಒಂದು ಬೆತ್ತವನ್ನು ಪೆಟ್ಟು ತಡೆಯುವುದಕ್ಕಾಗಿಯೂ ಮತ್ತೊಂದನ್ನು ಹೊಡೆಯುವುದಕ್ಕಾಗಿಯೂ ಹಿಡಿಯುತ್ತಾರೆ. ಮೊಣಕಾಲಿನ ಕೆಳಗೆ ಹೊಡೆಯಬೇಕಾದುದು ಕ್ರಮ. ಮೇಲೆ ಹೊಡೆದರೆ ದಂಡ ಕೊಡಬೇಕಾಗುತ್ತದೆ. ನಂತರ ಸಾಮೂಹಿಕವಾಗಿ ಒಬ್ಬರನೊಬ್ಬರು ಆಲಂಗಿಸಿ ನೃತ್ಯ ಕೊನೆಗೊಳಿಸುತ್ತಾರೆ.

ತಟ್ಟೆ ಪರಿಯಕಳಿ : ತಟ್ಟೆ ಪರಿಯಕಳಿಯಲ್ಲಿ ಒಬ್ಬನೇ ಭಾಗವಹಿಸುವುದು. ಇಲ್ಲಿ ಬೆತ್ತದ ಗುರಾಣಿ ಮತ್ತು ಸುಮಾರು ಆರು ಅಡಿ ಉದ್ದದ ಬೆತ್ತವನ್ನು ಬಳಸುತ್ತಾರೆ. ಯಾರು ತಟ್ಟೆ ಪರಿಯಕೆಳಗೆ ಇಳಿಯಲು ಇಷ್ಟಪಡುತ್ತಾರೋ ಅವರು “ನಾಬಾಳ್, ನೀಬಾಳ್, ಏಡೆ ಕೊಡೆ ಇಳಿವ ಚಂಜಾದಿ ಬಾಳ್” ಎಂದು ಪ್ರತಿಸ್ಪರ್ಧಿಯನ್ನು ಆಹ್ವಾನಿಸುತ್ತಾನೆ. ಆಗ ಪ್ರತಿಸ್ಪರ್ಧಿಯು ಕೂಡ ಇದೇ ರೀತಿ ಹೇಳಿ ಈತನನ್ನು ಕೆಣಕುತ್ತಾನೆ. ಇದರಲ್ಲಿಯೂ ಮೊಳಕಾಲಿನ ಕೆಳಗೆ ಹೊಡೆಯಬೇಕೆಂಬ ನಿಯಮ ಇದೆ. ಪರಸ್ಪರ ಇಬ್ಬರೂ ಸಮ ಸ್ಪರ್ಧಿಗಳಾದಾಗ ಇತರರು ಬಿಡಿಸುತ್ತಾರೆ. ಆ ಬಳಿಕ ಸ್ಪರ್ಧಿಗಳು ಪರಸ್ಪರ ಆಲಂಗಿಸಿಕೊಳ್ಳುತ್ತಾರೆ.

ಜೋಯಿಪಾಟ್ : ಜೋಯಿಪಾಟ್ ಕಲೆಯನ್ನು ಹುತ್ತರಿಯ ಮಾರನೆಯ ದಿನ ಅಂದರೆ ರೋಹಿಣಿ ಮತ್ತು ಕೃತಿಕಾ ನಕ್ಷತ್ರಗಳು ಬಂದಾಗ ಪ್ರದರ್ಶಿಸಲಾಗುತ್ತದೆ. ಜೋಯಿಪಾಟ್ ಎಂದರೆ ಜೋತಿಷ್ಯ ಪಾಟ್ ಎಂದು ಹೇಳಲಾಗುತ್ತದೆ. ಅದರ ಪ್ರತಿರೂಪವೇ ಜೋಯಿಪಾಟ್ ಎಂದು ನಂಬಿಕೆ ಇದೆ. ಈ ಪ್ರದರ್ಶನದಲ್ಲಿ ಸುಮಾರು ಹತ್ತು ಜನ ಕಲಾವಿದರು ಕೊಡವರ ದುಡಿಯೊಂದಿಗೆ ಪಾಲ್ಗೊಳ್ಳುತ್ತಾರೆ. ಇದು ಕೂಡ ಗಂಡಸರ ಕಲೆಯೇ. ಬಿಳಿಯ ಕುಪ್ಪಸ, ದಟ್ಟಿ, ರುಮಾಲು, ಕೈಯಲ್ಲಿ ಚೌಲಿ ಕಲಾವಿದರ ಉಡುಗೆ ತೊಡುಗೆಗಳು. ಪರೆ ಇಲ್ಲವೇ ಮೇದರ ಡೋಲು, ಜಾಗಟೆಯಾಕಾರದ ಕಂಚಿನ ತಟ್ಟೆ, ಇವು ಹಿಮ್ಮೇಳದ ವಾದ್ಯಗಳಾಗುತ್ತವೆ.

ಕೈತಲೆ ಆಟ : ಇದು ಮಹಾಕಾಳಿಯ ಆರಾಧನೆಗೆ ಸಂಬಂಧಿಸಿದ ಕಲೆ. ಕೊಡಗಿನಲ್ಲಿ ಮಹಾಕಾಳಿಯ ದೇವಸ್ಥಾನಗಳಲ್ಲಿ ಮಾತ್ರ ಈ ಕಲೆಯನ್ನು ಪ್ರದರ್ಶಿಸಲಾಗುತ್ತದೆ.

ಬಿಲ್ಲಾಟ್ : ವರ್ಷಕ್ಕೊಂದು ಸಲ ನಡೆಯುವ ಭದ್ರಕಾಳಿಯ ಉತ್ಸವ ಸಂದರ್ಭದಲ್ಲಿ ನಡೆಯುವ ಕಲೆಯೇ ಬಿಲ್ಲಾಟ್. ಇದಕ್ಕೆ ಹಿಮ್ಮೇಳವಾಗಿ ಮಣಿ, ಕಂಚಿನ ವಾದ್ಯವಿರುತ್ತದೆ. ಕೈಯಲ್ಲಿ ಸಣ್ಣ ಚರಿ, ಕೊಂಬುಗಳನ್ನು ಹಿಡಿದಿರುತ್ತಾರೆ. ನರ್ತಕರ ಕೈಯಲ್ಲಿ ಕಪ್ಪು ಕುಪ್ಪಿಯಿದ್ದರೆ, ಹಾಡುವವರು ಬಿಳಿಯ ಕುಪ್ಪಿಯನ್ನು ಹಿಡಿದಿರುವುದು ರೂಢಿ.

ಚೇರಿಯಾಟ್ : ಇದನ್ನು ಚೌರಿಯಾಟ್ ಅಂತಲೂ ಕರೆಯುತ್ತಾರೆ. ಚಮರೀಮೃಗದ ಕೂದಲುಗಳ ಗುಚ್ಛವನ್ನು ಹಿಡಿದುಕೊಂಡು ಕುಣಿಯುವ ಒಂದು ಕಲೆ.

ಕೊಡಿಪಾಟ್ : ಉದ್ದವಾದ ಬೆತ್ತವೊಂದಕ್ಕೆ ಕೆಂಪು ಬಟ್ಟೆಯನ್ನು ಕಟ್ಟಿ  ಅವುಗಳನ್ನು ವಿವಿಧ ಭಂಗಿಯಲ್ಲಿ ತಿರುಗಿಸುತ್ತ ಕುಣಿಯುವ ಕಲೆ.

ಡೋಳುಪಾಟ್ : ಭಗವತಿ ಮತ್ತು ಭದ್ರಕಾಳಿ ಹಬ್ಬದ ಸಂದರ್ಭದಲ್ಲಿ ಈ ಕಲೆಯನ್ನು ಪ್ರದರ್ಶಿಸಲಗುತ್ತದೆ. ಡೋಳುಪಾಟ್ ಮುಖ್ಯವಾಗಿ ಗಾಯನಕಲೆಯಾಗಿದ್ದು ಡೊಳ್ಳನ್ನು ನುಡಿಸುತ್ತ ಹಾಡಲಾಗುತ್ತದೆ.

ಬಾಳೋಪಾಟ್ : ಇದು ಒಂದು ರೀತಿಯ ಗಾಯನ ಪ್ರಧಾನವಾದ ಕಲೆ. ಕಲಾವಿದರಿಗೆ ಬಿಳಿ ಬಣ್ಣದ ಉದ್ದನೆಯ ನಿಲುವಂಗಿ ಅಥವಾ ಕುಪ್ಪಿ, ಸೊಂಟಕ್ಕೆ ಕೆಂಪು ವರ್ಣದ ಉದ್ದದ ರೇಷ್ಮೆಯ ದಟ್ಟಿ ಅಥವಾ ಚೇಲೆ, ತಲೆಗೆ ಬಿಳಿಯ ರುಮಾಲು ಅಥವಾ ಕೆಂಪು ವಸ್ತ್ರವಿರುತ್ತದೆ.

ಬಿಮ್ಮತ್ತಾಟ್ : ಬಿಮ್ಮತ್ತ ಎಂದರೆ ಕಂಚಿನ ತಾಳ ಎಂದರ್ಥ. ಕಂಚಿನ ತಾಳಗಳನ್ನು ಹಿಡಿದು ದೀಪಸ್ತಂಭ (ಕುತ್ತುಂಚೊಳತ)ದ ಸುತ್ತ ಕುಣಿವ ನೃತ್ಯವಿದು. ಕೊಡವ ಹೆಂಗಸರೇ ಪಾಲ್ಗೊಳ್ಳುವ ಈ ನೃತ್ಯದಲ್ಲಿ ಸುಮಾರು ಏಳು ಬಗೆಯ ನೃತ್ಯಗಳಿವೆ. ಕಾವೇರಿ ಮಾತೆ, ಕೊಡಗಿನ ಜನತೆ, ಪರಿಸರ, ವನ್ಯಸಂಪತ್ತು, ಅತಿಥಿ ಸತ್ಕಾರಗಳಿಗೆ ಸಂಬಂಧಸಿದ ಹಾಡುಗಳು ಇಲ್ಲಿವೆ. ‘ಕಾವೇರಮ್ಮಾದೇವಿ ತಾಯಿ ಕಪಾಡೆಂಗಳಾ’ ಎಂದು ಪ್ರಾರಂಭವಾಗುವ ಈ ಹಾಡು ‘ಮಂಗಳ’ ‘ಜಯಮಂಗಳಂ’ ಎಂದು ಮುಕ್ತಾಯವಾಗುತ್ತದೆ. ಇದನ್ನು ‘ಉಮ್ಮತ್ತಾಟ’ ಎಂದೂ ಕರೆಯಲಾಗುತ್ತದೆ.

ಬೋಡ್ ನಮ್ಮೆ ಆಟ್‍ಪಾಟ್ : ಇದು ದೊಡ್ಡಾಟದೊಂದಿಗೆ ಹೋಲಿಕೆ ಇರುವ ಹಾಸ್ಯ ಪ್ರಧಾನವಾದ ಕಲೆ. ಇದನ್ನು ಕೊಡವರು ಸುಗ್ಗಿಯ ನಂತರ ಪ್ರದರ್ಶಿಸುತ್ತಾರೆ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳ ಮಧ್ಯಭಾಗದಲ್ಲಿ ಪ್ರಾರಂಭವಾಗುವ ಈ ಪ್ರದರ್ಶನ ಮೇ ತಿಂಗಳವರೆಗೆ ಮುಂದುವರಿಯುತ್ತದೆ. ಇದರಲ್ಲಿ ಯುವಕರು ವಿವಿಧ ವೇಷಗಳನ್ನು ಹಾಕಿಕೊಂಡು ಮನೆಮನೆಗೆ ಹೋಗುತ್ತಾರೆ.

  ಇದರಲ್ಲಿ ಮಾಪಿಳ್ಳೆ, ಒಡ್ಡ, ಸನ್ಯಾಸಿ, ಜೋಗಿ, ಚೂಳೇ (ನೃತ್ಯನಾಟ) ಮೊದಲಾದ ವೇಷಗಳಿರುತ್ತವೆ.

ತಾಲಿ ಲಲ್ಲೆ ಲೆಲ್ಲೊಲಟ್ಟು ತಾಲಿ ತೆಲ್ಲಲ್ಲೋ

ತಾಲಿಯ ಡೆಂಬಡ್ ಯನ್ನತ್ತ ತಾಲಿ ತೆಲ್ಲಲ್ಲೋ

ತಾಲಿಯ ಪುಳಿಯಲ್ಲಿ ಬೈರಿ ಮರೆತ ತೆಲ್ಲಲ್ಲೋ

ಎಂದು ಹಾಡುತ್ತಾ ಮೇಳ ಮನೆಮನೆಗೆ ಸಾಗುತ್ತದೆ.

ತಲುಲ್ ಆಟ : ಇದನ್ನು ಕೊಡಗಿನ ದೇವಾಲಯಗಳಲ್ಲಿ ಊರ ಹಬ್ಬದಂದು ಪ್ರದರ್ಶಿಸುತ್ತಾರೆ. ಸಾಮನ್ಯವಾಗಿ ರುಮಾಲು, ದಟ್ಟಿಕುಪ್ಪಸ, ಬಿಳಿರೇಷ್ಮೆ ಪಂಚೆ ಇವು ಕಲಾವಿದರ ಸಾಮಾನ್ಯ ಉಡುಗೆ ತೊಡುಗೆಗಳು. 

   ಈ ಕಲೆಯು ದೇವಾಲಯದ ಮುಂಭಾಗದ ಸಂಪಿಗೆಯ ಮರದ ಸುತ್ತ ಕೊಡವ ಕಲಾವಿದರಿಂದ ಪ್ರದರ್ಶನಗೊಳ್ಳುತ್ತದೆ. ಕುಣಿತಕ್ಕೆ ಉದ್ದವಾದ ಚೆಂಡೆಯನ್ನು ಹಿಮ್ಮೇಳವಾಗಿ ನುಡಿಸುತ್ತಾರೆ. ಪ್ರಾರಂಭದಲ್ಲಿ ತಂಡದ ಮುಖ್ಯಸ್ಥ ನಿರ್ದಿಷ್ಟ ಸ್ಥಳದಲ್ಲಿ ‘ಓಂ”ಕಾರ ಮಾಡುತ್ತಾರೆ. ಈ ಸಂದರ್ಭದಲ್ಲಿ ಎರಡು ಕೈಗಳನ್ನು ಜೋಡಿಸಿ ದೇವರಿಗೆ ಕೈಮುಗಿದು ಅನಂತರ ದೀರ್ಘವಾಗಿ “ಓಂ”ಕಾರ ಮಾಡುತ್ತ ಕುಣಿಯುತ್ತಾರೆ. ಆಗ ಉಳಿದವರೂ ಅವರನ್ನು ಹಿಂಬಲಿಸುತ್ತಾರೆ. ಈ ಕುಣಿತದಲ್ಲಿ ಹನ್ನೆರಡು ವಿಧವಾದ ಕುಣಿತಗಳಿವೆ.