Heggade Legacy

ಹೆಗ್ಗಡೆ ಪರಂಪರೆ :-

                   ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಖ್ಯಾತಿಯನ್ನು ಚಿರಸ್ಥಾಯಿಗೊಳಿಸಲು ಇದುವರೆಗೆ ಹೆಗ್ಗಡೆ ಮನೆತನದ 20 ಮಂದಿ ಹೆಗ್ಗಡೆಯವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದದಾರೆ. ನಿಃಸ್ವಾರ್ಥಸೇವೆ. ದೇವರ ಮೇಲೆ ಭಕ್ತಿ, ಸಕಲ ಜೀವನದಲ್ಲಿ ಪ್ರೀತಿ, ಧಾರ್ಮಿಕ ಕಾರ್ಯದಲ್ಲಿ ಅನುಪಮ ನಿಷ್ಠೆ, ಸಾಮಾಜಿಕ ಕಾಳಜಿ ಇವು ಕ್ಷೇತ್ರದ ಬೆಳವಣಿಗೆಯಲ್ಲಿ ಅನೂಚಾನವಾಗಿ ಬೆಳೆದು ಬಂದಿದೆ.

ಇದುವರೆಗಿನ ಹೆಗ್ಗಡೆಯವರು :-

.1. ಬಿರ್ಮಣ್ಣ ಹೆಗ್ಗಡೆಯವರು

 2. ಪದ್ಮಯ್ಯ ಹೆಗ್ಗಡೆಯವರು  

3. 1ನೇ ಚಂದಯ್ಯ ಹೆಗ್ಗಡೆಯವರು  

4. ದೇವರಾಜ ಹೆಗ್ಗಡೆಯವರು

 5. 1ನೇ ಯ ಮಂಜಯ್ಯ ಹೆಗ್ಗಡೆಯವರು

 6. ಜಿನ್ನಪ್ಪ ಹೆಗ್ಗಡೆಯವರು  

7. ಇಮ್ಮಡಿ ಚಂದಯ್ಯ ಹೆಗ್ಗಡೆಯವರು  

8. ದೇವಪ್ಪ ರಾಜ ಹೆಗ್ಗಡೆಯವರು  

9. ಅನಂತಯ್ಯ ಹೆಗ್ಗಡೆಯವರು  

10. ವೃಷಭಯ್ಯ ಹೆಗ್ಗಡೆಯವರು  

11. ಗುಮ್ಮಣ್ಣ ಹೆಗ್ಗಡೆ  

12. ವರ್ಧಯ್ಯ ಹೆಗ್ಗಡೆಯವರು  

13. ಮುಮ್ಮಡಿ ಹೆಗ್ಗಡೆಯವರು  

14. ಕುಮಾರಯ್ಯ ಹೆಗ್ಗಡೆಯವರು

15. ನಾಲ್ವಡಿ ಚಂದಯ್ಯ ಹೆಗ್ಗಡೆಯವರು

16. ಇಮ್ಮಡಿ ಮಂಜಯ್ಯ ಹೆಗ್ಗಡೆಯವರು

17. ಧರ್ಮಪಾಲ ಹೆಗ್ಗಡೆಯವರು

18. 5ನೇಯ ಚಂದಯ್ಯ ಹೆಗ್ಗಡೆಯವರು

19. ಮಂಜಯ್ಯ ಹೆಗ್ಗಡೆಯವರು

20. ರತ್ನವರ್ಮ ಹೆಗ್ಗಡೆಯವರು

21. ವೀರೇಂದ್ರ ಹೆಗ್ಗಡೆಯವರು

  ಶ್ರೀ ವೀರೇಂದ್ರ ಹೆಗ್ಗಡೆಯವರು:

                   ‘ಗಗನಂ ಗಗನಾಕಾರಂ ಸಾಗರಂ ಸಾಗರೋಪಮಮ್’ ಎಂಬತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅವರೇ ಸಾಟಿ.  ಅವರ ಮೇರು ವ್ಯಕ್ತಿತ್ವಕ್ಕೆ ಇನ್ನೊಂದು ಹೋಲಿಕೆ ಇಲ್ಲ. ಧರ್ಮಸ್ಥಳದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದ ಅಗ್ರಗಣ್ಯ. ‘ಸ್ವಾಮಿ ಮಂಜುನಾಥನೇ, ಧರ್ಮದೇವತೆಗಳೇ ಧರ್ಮಾಧಿಕಾರಿಗಳಲ್ಲಿ ನೆಲೆಗೊಂಡು ಸತ್ಕಾರ್ಯಗಳನ್ನು ಮಾಡಿಸುತ್ತಾರೆ. ಎಂಬ ನಂಬಿಕೆ ವೀರೇಂದ್ರ ಹೆಗ್ಗಡೆಯವರಲ್ಲಿ ಸಾರ್ಥಕ್ಯಗೊಂಡಿದೆ’ ಎಂದು ದಕ್ಷಿಣದ ಸಿರಿನಾಡು ಗ್ರಂಥದಲ್ಲಿ ಕೆ.ಅಂನತರಾಮು ಎಂಬುವರು ಉಲ್ಲೇಖಿಸಿದ್ದಾರೆ. ಮಂಜಯ್ಯ ಹೆಗ್ಗಡೆಯವರು ಧಮಾಧಿಕಾರಿಗಳಾಗಿದ್ದಾಗ ರತ್ನವರ್ಮ ಹೆಗ್ಗಡೆ ಹಾಗೂ ರತ್ನಮ್ಮ ಹೆಗ್ಗಡೆ ದಂಪತಿಗಳಿಗೆ ಗಂಡು ಮಗು ಜನನವಾದ ಸುದ್ದಿ ತಿಳಿಸಿದಾಗ ಅವರ ಬಾಯಲ್ಲಿ ಬಂದ ಉದ್ಗಾರ ‘ಧರ್ಮಸ್ಥಳದ ದೀಪ ಪ್ರಜ್ವಲಿಸುತ್ತದೆ’ ಎಂಬುದಾಗಿತ್ತು ಎಂದು ಪ್ರೊ| ಎಸ್.ಪ್ರಭಾಕರ್ ರತ್ನಶ್ರೀ ಗ್ರಂಥದಲ್ಲಿ ದಾಖಲಿಸಿದ್ದಾರೆ. ‘ಕೊಡುಮ’ ಎಂಬುದೇ ಬಳಿಕ ‘ಕುಡುಮ’ವಾಗಿ ಪರಿವರ್ತಿತಗೊಂಡು ಧರ್ಮದ ದೆಸೆಯಿಂದಲೇ ಧರ್ಮಸ್ಥಳ ಎಂಬ ಅಭಿದಾನಕ್ಕೆ ಮಹತ್ವ ತಂದವರು ಧರ್ಮಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ರತ್ನವರ್ಮ ಹೆಗ್ಗಡೆ ರತ್ನಮ್ಮ ದಂಪತಿಯ ಜ್ಯೇಷ್ಠ ಪುತ್ರ.

                     ವೀರೇಂದ್ರ ಹೆಗ್ಗಡೆಯವರು ಎಳೆಯರಾಗಿದ್ದಾಗ ಧರ್ಮಸಂಸ್ಕಾರ ನೀಡಿದವರಲ್ಲಿ ಶ್ರೀ ನೇಮಿಸಾಗರ ವರ್ಣಜೀಯವರು ಪ್ರಮುಖರು. ರಾಜ್ಯದ ಧಾರ್ಮಿಕ ಇತಿಹಾಸದಲ್ಲಿ ಅವರದ್ದು ಪ್ರತಿಷ್ಠೆಯ ಹೆಸರಾಗಿತ್ತು. ಮೇರು ಜ್ಞಾನಿಯಾಗಿದ್ದ ಅವರು ಬಾಲಕ ವೀರೇದ್ರರನ್ನು ತಮ್ಮ ತೊಡೆಯ ಮೇಲೆ ಕುಳ್ಳಿರಿಸಿ ಸಾಮಾಜಿಕ, ಪೌರಾಣಿಕ, ಧಾರ್ಮಿಕ ಕಥೆಗಳನ್ನು ಪ್ರಾಪಂಚಿಕ ಲೋಕದ ಅನುಭವ ಕಥನಗಳನ್ನು ಹೇಳುತ್ತಿದ್ದರೆ ಮೈಮನವೆಲ್ಲ ಹರಿಯುತ್ತಿದ್ದುದು ಧರ್ಮ ಜಾಗೃತಿಯ ಅಮೃತ ಸೆಲೆ.

                    ಬಾಲಕ ವೀರೇಂಧ್ರ ಪ್ರಾಥಮಿಕ ವಿದ್ಯಾಭ್ಯಸವಾದದ್ದು ಬಂಟ್ವಾಳದ ಬೋರ್ಡ ಶಲೆಯಲ್ಲಿ. ಮಗನಿಗೆ ಶಿಸ್ತು ಸಂಯಮದ, ಧರ್ಮ ಸಮನ್ವಯಗಳ ಪಾಠ ಕಲಿಸಬೇಕಾದರೆ ಗುರುಕುಲ ವಾತಾವರಣವೇ ಸೂಕ್ತ ಎಂದು ತೀರ್ಮಾನಿಸಿದ ರತ್ನವರ್ವ ಹೆಗ್ಗಡೆಯವರು ಮುಂದಿನ ವಿದ್ಯಾಭ್ಯಾಸಕ್ಕೆ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ವ್ಯವಸ್ಥೆ ಮಾಡಿದರು. ಆರ್ಥಿಕವಾಗಿ, ಸಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೇ ಮೀಸಲಿದ್ದ ಗುರುಕುಲದಲ್ಲಿ ತಮ್ಮ ಮಗ ಸಾಮಾನ್ಯರಂತೆ ಬೆಳೆಯಲಿ ಎಂಬುದು ಅವರ ಉದ್ದೇಶವಾಗಿತ್ತು. ಆ ಬಳಿಕ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಬೆಂಗಳೂರಿನಲ್ಲಿ  ಪ್ರತ್ಯೇಕ ಮನೆಯೊಂದರಲ್ಲಿ ವ್ಯವಸ್ಥೆ ಮಾಡಲಾಯಿತು. ಶೇಷದ್ರಿಪುರಂ ಪ್ರೌಢ ಶಾಲೆ, ಸೈಂಟ್ ಜೋಸೆಫ್ ಶಾಲೆಗಳಲ್ಲಿ ಶಿಕ್ಷಣ ಮುಂದುವರೆದು 1963ರಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ತೇರ್ಗಡೆ ಹೊಂದಿದರು.

                     ವೀರೇಂದ್ರರಿಗೆ ತುಂಬಾ ಎನ್ನುವಷ್ಟು ಕ್ರಿಕೆಟ್‍ನಲ್ಲಿ ಆಸಕ್ತಿ. ಅದಕ್ಕೆ ಪೂರಕ ಎಂಬಂತೆ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಇವರ ತರಗತಿಯಲ್ಲಿದ್ದರು. ಪಿಯುಸಿ ಬಳಿಕ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಪದವಿ ತರಗತಿಗೆ ಸೇರಿಕೊಂಡ ಅವರಿಗೆ ಪ್ರೊ.ಹಂ.ಪ. ನಾಗರಾಜಯ್ಯ, ಪ್ರೊ.ಜಿ.ಬ್ರಹ್ಮಪ್ಪರಂಥ ವಿದ್ವಾಂಸರು ಪ್ರಾಧ್ಯಾಪಕರಾಗಿದ್ದರು. 

ಶ್ರೀಮತಿ ಹೇಮಾವತಿ ಹೆಗ್ಗಡೆಯವರು

             ಇವರ ವಿವಾಹ ನಡೆದದ್ದು 1972ರ ಡಿ.26ರಂದು. ಕೈ ಹಿಡಿದವರು ಹೇಮಾವತಿ ಹೆಗ್ಗಡೆಯವರು.ಧರ್ಮಾಧಿಕಾರಿಯವರ ಬಾಳ ಸಂಗಾತಿಯಾಗಿ ಕೈ ಹಿಡಿದು ತಾನೂ ಬೆಳಗಿ, ಸಮಾಜವನ್ನೂ ಬೆಳಗಿದ ಹೇಮಾವತಿ ವೀ. ಹೆಗ್ಗಡೆಯವರ ಜನನ ದ.ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ. ಬಳಿಕ ನೆಲೆಸಿದ್ದು ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ. 1951ರ ಎಪ್ರಿಲ್ 2ರಂದು ಜನಿಸಿದರು. ಬಿ.ಎ. ಪದವೀಧರೆ. ತುಳು, ಕನ್ನಡ, ಇಂಗ್ಲೀಷ್, ಹಿಂದಿ ನಿರರ್ಗಳ. ಹೆಗ್ಗಡತಿಯಾಗಿ ಅತಿ ದೊಡ್ಡ ಜವಾಬದ್ದಾರಿಯನ್ನು ನಿಭಯಿಸಬೇಕಾಗಿ ಬಂತು. ಸಂಪ್ರದಾಯಸ್ಥ ಮನೆತನಗಳ ಹೆಣ್ಣುಮಕ್ಕಳಂತೆ ಬೀಡಿನ ಯಜಮಾನತಿಯಾಗಿ ಅತ್ತೆ ರತ್ನಮ್ಮ ಹೆಗ್ಗಡೆಯವರ ಮಾತೃವಾತ್ಸಲ್ಯದಿಂದ ಕಲಿಯತೊಡಗಿದರು. 300ಕ್ಕೊ ಅಧಿಕ ಇರುವ ಜಾನುವಾರುಗಳು, ಆಳು ಕಾಳುಗಳ ಉಸ್ತುವಾರಿ,ಕೆಲಸ ಹಂಚುವಿಕೆ,ಬೀಡಿಗೆ ಬರುವ ಅತಿಥಿಗಳ ಸತ್ಕಾರ ಕಾರ್ಯ,ಪ್ರತಿನಿತ್ಯ ತಪ್ಪದೇ ನಡೆಯುವ ಧಾರ್ಮಿಕ ಕಾರ್ಯಕ್ಕೆ ಸಹಕಾರ,ಊಟದ ಅಡುಗೆಗೆ ಮೆನು ಸಿದ್ಧಪಡಿಸುವುದರಿಂದ ಹಿಡಿದು ಪ್ರತೀ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸತೊಡಗಿದರು.ಅತಿಥಿಗಳ ಮನನೋಯದಂತೆ ಸತ್ಕರಿಸುವುದರ ಜತೆಗೆ ಕ್ಷೇತ್ರಕ್ಕೆ ಆಗಮಿಸುವ ಮುನಿಗಳ ಸೇವೆ ಕೂಡಾ ಮಾಡುವ ಮೂಲಕ ಅಕ್ಷರಶ: ಧರ್ಮಾಧಿಕಾರಿಣಿಯಾದರು. ಹೆಗ್ಗಡೆಯವರು ಬಾಹ್ಯ ವ್ಯವಹಾರಗಳನ್ನು ನೋಡಿಕೊಂಡರೆ ಹೇಮಾವತಿ ಹೆಗ್ಗಡೆಯವರು ಆತಂರಿಕ ವ್ಯವಹಾರ, ಸಂಸಾರದ ನಿಭಾವಣೆ, ಕೃಷಿ ಮೇಲ್ವಿಚಾರಣೆಗೂ ಸೈ ಎಂದರು. ನಾದಿನಿ ಸುಪ್ರಿಯಾ ಮೊದಲಾದವರ ಜತೆಗೆ ಕ್ಷೇತ್ರದ ಚಟುವಟಿಕೆಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡರು.ಮನೆಯ ಹಿರಿಯ ಸೊಸೆಯಾಗಿ ಎಲ್ಲರ ಜತೆ ಆತ್ಮೀಯತೆಯಿಂದ ಸಂಸಾರ ನಿಭಾಯಿಸುವ ಕಲೆಯನ್ನು ಬೇಗನೇ ಕರಗತ ಮಾಡಿಕೊಂಡರು. ತಮಗೇ ತಿಳಿಯದಂತೆ ದಾನ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ದೇಹಿ ಎಂದು ಬಂದವರನ್ನು ಬರಿಗೈಯಲ್ಲಿ ಕಳುಹಿಸಿದವರಲ್ಲ. ಜಾಗೃತ ಮನಸ್ಸಿನ ಪ್ರತೀಕರಾಗಿ,ಗ್ರಾಮೀಣ ಕುಟುಂಬ,ಸಮಾಜದ ಸ್ತರದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದರು. ನಾಡಿನ ಧರ್ಮಕ್ಕೆ ಸಮರ್ಥ ಅಧಿಕಾರಿಯನ್ನು ರೂಪಿಸಿದವರು. ಸಾಮಾಜಿಕ ಚಟುವಟಿಕೆಗಳಿಗೆ ಪ್ರೇರಣೆಯಾದ ಮಾದರಿ ಮಹಿಳೆ. ಹಳ್ಳಿ ಹಳ್ಳಿಯಲ್ಲಿ ಸೇವೆ ಮಾಡುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯ ಸಾವಿರಾರು ಮಂದಿ ಸೇವಾನಿರತರು ಶ್ರಮಕ್ಕೆ ಬೆಲೆ ದೊರಕಿಸಿಕೊಟ್ಟು ಗ್ರಾಮ ಸ್ವರಾಜ್ಯದ ಕನಸನ್ನು ನನಸಾಗಿಸುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಯಾಗಿ ಮಹಿಳಾ ಸಬಲೀಕರಣದಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದ 16 ಜಿಲ್ಲೆಗಳಲ್ಲಿ 21 ಲಕ್ಷ ಕುಟುಂಬಗಳಲ್ಲಿ ಯೋಜನೆಯ ಫಲಾನುಭವಿಗಳಿದ್ದು ಗ್ರಾಮೀಣರ ಬದುಕಿನಲ್ಲಿ ಮಾರ್ಪಾಡುಗಳಾಗಲು ಕಾರಣೀಭೂತರು. ಗ್ರಾಮಾಭಿವೃದ್ಧಿ ಯೋಜನೆ ತನಗೆ ಆಪ್ತವಾದ ಕಾರ್ಯಕ್ರಮ ಎನ್ನುವ ಹೇಮಾವತಿ ಹೆಗ್ಗಡೆಯವರಿಗೆ ಸಿರಿ,ಜ್ಞಾನ ವಿಕಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ.

              ಉತ್ತಮ ಲೇಖಕಿ, ಕವಿ ಮನಸ್ಸಿನ ಕವಯಿತ್ರಿ, ನೂರಾರು ಕವನಗಳನ್ನು ಬರೆದಿದ್ದಾರೆ, ‘ಮಂಜುವಾಣಿ' ಹಾಗೂ ‘ನಿರಂತರ ಪ್ರಗತಿ' ಮಾಸ ಪತ್ರಿಕೆಗೆ ಅಂಕಣ ಬರೆಯುತ್ತಿದ್ದಾರೆ. ಸಾಧನೆಗೆ ಮನವು ಬೇಕು, ಛಲವು ಬೇಕು, ಒಲವೂ ಬೇಕು ಎಂಬ ನಿಲುವು ಉಳ್ಳವರು ಹೇಮಾವತಿ ಹೆಗ್ಗಡೆಯವರು.