Chickmagalur Dist

ಚಿಕ್ಕಮಗಳೂರು ಜಿಲ್ಲೆ:

ಕರ್ನಾಟಕ ರಾಜ್ಯದ ಪಶ್ಚಿಮ ದಿಕ್ಕಿನ ಪಶ್ಚಿಮ ಘಟ್ಟಗಳ ಮಾಲಿಕೆಯಲ್ಲಿದೆ. ಸಹ್ಯಾದ್ರಿಯ ಪರಿಸರದಲ್ಲಿ ಪ್ರಕೃತಿಯ ಆಡುಂಬೊಲ ರಮಣೀಯವಾದ ಮಲೆನಾಡು ಪ್ರದೇಶವಿದು. ದಟ್ಟವಾದ ನಿಬಿಡವಾದ ಗಿರಿಕಾನನಗಳಿಂದಲ್ಲೂ ಚಹಪುಡಿ, ಪಾಫಿಪುಡಿ, ರಬ್ಬರ್, ತೋಟಗಳಿಂದಲೂ, ಸಮೃದ್ಧವಾದ ಸಂಪನ್ಮೂಲಗಳಿಂದಲೂ, ಭೂಗರ್ಭದೊಳಗಿರುವ ಅಪಾರ ಬೆಲೆಯುಳ್ಳ ಖನಿಜ ಸಂಪತ್ತಿನಿಂದಲೂ ತುಳುಕಿದೆ. ಇಲ್ಲಿ ಪ್ರವಹಿಸುವ ಪವಿತ್ರ ನದಿಗಳು, ಅಲ್ಲಲ್ಲಿಗೆ ನೆಲೆಗೊಂಡಿರುವ ಧರ್ಮಕ್ಷೇತ್ರಗಳು, ಗುರುಪೀಠಗಳು ಇಲ್ಲಿವೆ. ಉನ್ನತ ಗಿರಿಶಿಖರಗಳು ಗಿರಿಧಾಮಗಳು ಪ್ರಕೃತಿಯ ಸುಂದರ ಪರಿಸರ ಈ ಜಿಲ್ಲೆಯನ್ನು ಸಂಪತ್ಸಮೃದ್ಧಗೊಳಿಸಿವೆ.

ಜಿಲ್ಲೆಯ ಐತಿಹಾಸಿಕ ಪರಿಸರ

    ಚಿಕ್ಕಮಗಳೂರು ಜಿಲ್ಲೆ ಉತ್ತರಕ್ಕೆ ಶಿವಮೊಗ್ಗ ಜಿಲ್ಲೆ, ಪೂರ್ವಕ್ಕೆ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳು, ದಕ್ಷಿಣಕ್ಕೆ ಹಾಸನ ಜಿಲ್ಲೆ, ಪಶ್ಚಿಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯನ್ನು ತನ್ನ ಸೀಮೆಯನ್ನಾಗಿಸಿಕೊಂಡಿದೆ. ಇಲ್ಲಿಯ ಮುಳ್ಳಯ್ಯನ ಗಿರಿ ನಮ್ಮ ನಾಡಿನಲ್ಲಿಯೇ ಎತ್ತರವಾದ ಶಿಖರ, ಸಮುದ್ರಮಟ್ಟದಿಂದ 920 ಮೀಟರ್ ಎತ್ತರದಲ್ಲಿದೆ. ಇದರೊಂದಿಗೆ ಬಾಬಾಬುಡಗಿರಿ, ಕಲ್ಪತ್ತಿಗಿರಿ, ಕುದುರೆಮುಖ, ಸೀತಾಳಯ್ಯನಗಿರಿ, ಬಲ್ಲಾಳರಾಯನದುರ್ಗಗಳು ಹೆಸರಿಸಬಹುದಾದ ಶಿಖರಗಳೆನಿಸಿವೆ. ಬಾಬಾಬುಡನ ಸಂತರ ಸಮಾಧಿ ಇದೆ. ಈ ಪವಿತ್ರ ಕ್ಷೇತ್ರವು ಶ್ರೀ ದತ್ತಾತ್ರೇಯ ಸ್ವಾಮಿ ಬಾಬಾಬುಡನ್‍ಸ್ವಾಮಿ ಜಗದ್ಗುರು ಪೀಠವೆಂದು ಪ್ರಸಿದ್ಧವಾಗಿದೆ. ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕುರುಹುವಾಗಿದೆ. ಇಲ್ಲಿ ದತ್ತಾತ್ರೇಯರು ತಪಸ್ಸು ಮಾಡಿದರೆಂದು ನಂಬಿಕೆ. ಇಲ್ಲಿ ಮೆಕ್ಕಾದಿಂದ ಬಂದ ಬಾಬಾಬುಡನ್ ಸಂತರು ಇಲ್ಲಿನ ಪ್ರಶಾಂತತೆಗೆ ಮನಸೋತು ಇಲ್ಲಿ ಮಠವನ್ನು ಸ್ತಾಪಿಸಿರುವರು. ಈ ಗಿರಿಯ ಬುಡದಲ್ಲಿ ನಿರ್ಮಾಣಸ್ವಾಮಿಗಳ ಗದ್ದುಗೆ ಇದೆ.

ಜಿಲ್ಲೆಯ ಪೌರಾಣಿಕ ಪರಿಸರ

    ಪೌರಾಣಿಕ ಮತ್ತು ಐತಿಹಾಸಿಕ ದೃಷ್ಟಿಗಳಿಂದ ಗಮನಿಸಿದರೆ, ಈ ಜಿಲ್ಲೆ ಮಹತ್ವದ ಸ್ಥಾನವನ್ನು ಪಡೆದಿದೆ.ಮಹಾರಣ್ಯ ಪ್ರದೇಶವಾದ ಈ ಜಿಲ್ಲೆ ಅನೇಕ ಋಷಿಪುಂಗವರ ಆಶ್ರಯಸ್ಥಾನವಾಗಿದೆ. ವಿಭಾಂಡಕ, ಋಷ್ಯಶೃಂಗ, ಮಾರ್ಕಂಡು, ಮಾರ್ಕಡೇಯ, ಗೌತಮ, ವಸಿಷ್ಟ ಮತ್ತು ಅಗಸ್ತ್ಯರೇ ಮೊದಲಾದ ಮುನಿಗಳು ವಾಸವಾಗಿದ್ದು, ತಪಸ್ಸು ಮಾಡಿದ ಸ್ಥಳಗಳಿಂದ ಕೂಡಿದೆ. ಪರಶುರಾಮ, ಸೀತೆ ಲಕ್ಷ್ಮಣರ ಸಮೇತ ಶ್ರೀರಾಮ, ಸಂಜೀವಿನಿ ಪರ್ವತವನ್ನು ತಂದ ಆಂಜನೇಯಾದಿಗಳು ಈ ಜಿಲ್ಲೆಯಲ್ಲಿ ಸಂಚಾರ ಮಾಡಿದ್ದಾರೆ. ಮಹಾಭಾರತದ ಕುಂತಿದೇವಿ, ಭೀಮ, ಅರ್ಜುನ, ಜನಮೇಜಯ, ವಿರಾಟರಾಜ ಮೊದಲಾದವರು ಇಲ್ಲಿಗೆ ದರ್ಶನಾರ್ಥಿಗಳಾಗಿ ಬಂದಿದ್ದರೆಂಬುದು ತಿಳಿದು ಬರುವ ವಿಚಾರ. ಅಲ್ಲದೆ ಜನಮೇಜಯನು ಮಾಡಿದ ಸರ್ಪಯಾಗದ ಗುರುತಾಗಿ ಯೂಪಸ್ತಂಭವು ಹಿರೇಮಗಳೂರುನಲ್ಲಿ ಈಗಲೂ ಇದೆ. ಆದಿ ಶಂಕರ, ವಿದ್ಯಾತೀರ್ಥರು, ವಿಜಯನಗರದ ಸ್ಥಾಪಕರಾದ ವಿದ್ತಾರಾಣ್ಯರು ಅವರ ಸಹೋದರರಾದ ಸಾಯಣಾಚಾರ್ಯರು, ಲಿಂಗೋದ್ಭವರಾದ ರೇಣುಕಾಚಾರ್ಯರು, ಮೆಕ್ಕಾದ ಮಹಮ್ಮದೀಯ ಸಂತರಾದ ಬಾಬಾಬುಡನ್ ಮೊದಲಾದವರು ಇಲ್ಲಿ ವಾಸಮಾಡಿದ್ದಂತೆ ಉಲ್ಲೇಖವಿದೆ. ಹೊಯ್ಸಳ ಸಾಮ್ರಾಜ್ಯದ ಮೂಲಪುರುಷನಾದ ಸಳನು, ಸಮಾಜ ಸುಧಾರಕಳಾದ ಪಂಡಿತ ರಮಾಬಾಯಿ ಸರಸ್ವತಿ. ವಿವೇಕಾನಂದರನ್ನು ಅಮೇರಿಕ ದೇಶದಲ್ಲಿ ನಡೇದ ಸರ್ವಧರ್ಮ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಕಳಿಸಲು ನೆರವಾದ ಅಳಸಿಂಗ ಪೆರುಮಾಳರು ಈ ಜಿಲ್ಲೆಯಲ್ಲಿ ಹುಟ್ಟಿರುವರು.
    ಈ ಜಿಲ್ಲೆಯಲ್ಲಿರುವ ಗಿರಿಗುಡ್ಡಗಳು ಜೌನ್ನತ್ಯದಲ್ಲಿಯೂ, ಖನಿಜಸಂಪತ್ತಿನಲ್ಲಿಯೂ ಶ್ರೀಮಂತವಾಗಿರುವುದಷ್ಟೇ ಅಲ್ಲ. ಅನೇಕ ದೇವದೇವಿಯರ ಇಲ್ಲವೆ ಸಂತಮಹಾಂತರ ವಿಷಯವನ್ನೊಳಗೊಂಡತಾಗಿದೆ. ಉದಾಹರಣೆಗೆ ಶೃಂಗೇರಿ, ಕಿಗ್ಗ, ಬಾಳೇಹೊನ್ನೂರು, ಹೊರನಾಡು, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ದೇವನೂರು, ಹಿರೇಮಗಳೂರು, ನಿರ್ವಾಣಸ್ವಾಮಿ ಮಠ, ಅಯ್ಯನಕೆರೆ, ಶಕುನಗಿರಿ ಮೊದಲಾದವುಗಳನ್ನು ನೋಡಬಹುದು.

ಚಿಕ್ಕಮಗಳೂರು ಹೆಸರು ಬಂದ ಬಗೆ:

ದ್ವಾಪರಯುಗದಲ್ಲಿ ರುಕ್ಮಾಂಗದ ರಾಯನೆಂಬ ಅರಸನು ಸುಖರಾಯ ಪಟ್ಟಣದಲ್ಲಿ ರಾಜ್ಯಭಾರ ಮಾಡುತ್ತಿದ್ದನು. ಅವನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದಾಗ ಅವರನ್ನು ಯೋಗ್ಯನಾದ ವರನಿಗಿತ್ತು ಮದುವೆ ಮಾಡಿದರು. ಅನೇಕ ಧನ ಕನಕ ವಸ್ತು ವಾಹನಗಳನ್ನು ದಾಸದಾಸಿಯರನ್ನು ಬಳುವಳಿಯಾಗುತ್ತು ಕಳಿಸಿದನು. ಇವರಿಗೆ ನೀಡಿದ ಕೊಡುಗೆ ಹಿರಿಯಳಿಗೆ ಕೊಟ್ಟುದು ಹಿರೇಮಗಳೂರು, ಕಿರಿಯರಿಗೆ ಕೊಟ್ಟದು ಚಿಕ್ಕಮಗಳೂರೆಂದು ಹೆಸರಾಯಿತು. ಲಕ್ಕವಳ್ಳಿ ಬಳಿಯಲ್ಲಿ ವಜ್ರಮುಕ್ತರಾಯ ಆಳಿದಂತೆಯೂ, ಅವನ ಇಬ್ಬರೂ ಮಕ್ಕಳಾದ ಚಿತ್ರಶೇಖರ ಮತ್ತು ಸೂಮಶೇಖರರು ನೀಲಾವತಿ ಮತ್ತು ರತ್ನಾವತಿಯರೆಂಬ ರಾಜಕುಮಾರಿಯರನ್ನು ಮದುವೆಯಾಗಿದ್ದ ಕಥೆಗಳು ಈ ಜಿಲ್ಲೆಗೆ ಸಂಬಂಧಿಸಿವೆ.
    ಇದರ ಪ್ರಾಚೀನ ಹೆಸರು ಕಿರಿಯ ಮುಗಳಿ ಎಂದಿದ್ದು, ಅದು ಒಂದು ಅಗ್ರಹಾರವಾಗಿತ್ತು. ಕ್ರಿ.ಶ. 1257 ರ ಶಾಸನದಲ್ಲಿ ಇದನ್ನು ದೇವಳಿಗೆನಾಡು ಎಂದು ಕರೆಯಲಾಗಿದೆ. ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಸಂಬಂಧಪಟ್ಟಂತೆ ಅನೇಕ ಪೌರಣಿಕ ಐತಿಹ್ಯಗಳಿವೆ. ಮೂಡಿಗೆರೆ ತಾಲೂಕಿನ ಹೆರಿಕೆಗೆ ಸಮೀಪದಲ್ಲಿರುವ ಪಾಂಡವರ ಗುಡ್ಡದಲ್ಲಿ ಹಿಂದೆ ಪಾಂಡವರು ವಾಸವಾಗಿದ್ದರೆಂದೂ ಅಲ್ಲಿಯ ಸ್ಥಳಪುರಾಣ ತಿಳಿಸಿದೆ. ಕಲ್ಲಿನ ಉಪಕರಣಗಳನ್ನು ಅವರು ಬಳಸುತ್ತಿದ್ದರೆಂದೂ, ಬಹುಶಃ ಶಿಲಾಯುಗದ ಜನರ ವಾಸಸ್ಥಳವಾಗಿರಬೇಕು.


ಚಿಕ್ಕಮಗಳೂರು ಪಟ್ಟಣಕ್ಕೆ ಎರಡು ಮೈಲು ದೂರವಿರುವ ಹಿರೇಮಗಳೂರು ಐತಿಹಾಸಿಕ ಸ್ಥಳ. ಈ ಗ್ರಾಮದಲ್ಲಿ ಗಂಗರ ಹಳೆಯ ಕಾಲದ ಕೋಟೆ ಹಾಗೂ ಸ್ತಂಭವಿದೆ. ಕಳಸಾಪುರ ಚೆಲುವನಾರಾಯಣಸ್ವಾಮಿ ದೇವಾಲಯ ಆಕರ್ಷಿಕ ಪಾದಪೀಠವೂ ಸೇರಿದಂತೆ ಅಲ್ಲಿಯ ವಿಗ್ರಹ ಏಳು ಅಡಿ ಎತ್ತರದಲ್ಲಿದೆ. ಇದರ ತುದಿಯಲ್ಲಿ ಹೊಯ್ಸಳ ಲಾಂಛನವಿದೆ. ಎರಡೂ ದೇವಾಲಯಗಳ ನವರಂಗದಲ್ಲಿ ಪರಿವಾರ ದೇವತೆಗಳನ್ನು ಕೆತ್ತಲಾಗಿದೆ.

ಕೋಟೆಯೂರಿನ ಸ್ಥಳದಲ್ಲಿ ಎಂಟನೇ ಶತಮಾನದ ಶಾಸನವೊಂದಿದೆ. ಅದರಲ್ಲಿ ರಾಜವಂಶದ ವಿವರಗಳಿವೆ ಮನು ಇಕ್ಷಾಕು, ಹರಿಶ್ಚಂದ್ರ, ದಿಲೀಪ ಮತ್ತು ರಾಘವರು ಈ ವಂಶದ ಪೂರ್ವಜರೆಂದು ಹೇಳಲಾಗಿದೆ. ಇದು ಕದಂಬರ ಶಾಸನವೆಂಬ ಪ್ರತೀತಿ. ಇಲ್ಲಿ ಇನ್ನೂ ಅನೇಕ ಶಾಸನಗಳು ವೀರಗಲ್ಲುಗಳಿವೆ.

ಮಹಾತ್ಮಾಗಾಂಧಿ ರಸ್ತೆ ಈ ಊರಿನ ಮುಖ್ಯ ಬೀದಿಗಳು. ಇಲ್ಲಿ ಸೇರಿಕೊಂಡಂತಿರುವ ರತ್ನಗಿರಿ ಎತ್ತರದ ದಿಬ್ಬ ಸಂಜೆಯ ವಿಹಾರಸ್ಥಳ. ಇಲ್ಲಿಯ ಗಂಧನಕೋಟೆ ಎಂಬ ಸ್ಥಳದಲ್ಲಿ ರಾಮೇಶ್ವರ ದೇವಾಲಯವು ಅನೇಕ ನಾಗವಿಹಾರಗಳು ಇವೆ. ಕನ್ಯಕಾ ಪರಮೇಶ್ವರ ದೇವಾಲಯಗಳನ್ನು ಆದುನಿಕವಾಗಿ ಅಷ್ಟೇ ಭವ್ಯವಾಗಿದೆ ಕಟ್ಟಲಾಗಿದೆ.

ಮೂಡಗೆರೆ ತಾಲೂಕಿನಲ್ಲಿ ನಾಲ್ಕಾರು ಗ್ರಾಮಗಳದವರು ಸೇರಿ ಸಾವಿರದವರೆಂಬಂತೆ ಒಟ್ಟಾಗಿ ಹಬ್ಬ ಆಚರಿಸುತ್ತಾರೆ. ಉಗ್ಗೆಹಳ್ಳಿ ಇದಲ್ಲೆ ಉತ್ತಮ ಉದಾಹರಣೆ. ಸುಮಾರಾಗಿ 12 ರಿಂದ 18 ದಿವಸಗಳವರೆಗೆ ಈ ಹಬ್ಬ ಜರುಗುವುದು. ಆಗ ಜನ ಮಧ್ಯ ಮಾಂಸ ವರ್ಜಿಸಿ ಉಪವಾಸ ಆಚರಿಸುತ್ತಾರೆ.  ಈ ಸಂದರ್ಭದಲ್ಲಿ ಕೆಂಡ ಹಾಯುವುದು ಪ್ರಮುಖ ಆಚರಣೆ. ಹಬ್ಬದ ಕೊನೆಯ ದಿನ ದೇವರ ಉತ್ಸವ ಜರುಗುತ್ತದೆ.

ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ಸುಗ್ಗಿಯ ಹಬ್ಬ ಆಚರಿಸುತ್ತಾರೆ. ಇದು ಮುಖ್ಯವಾಗಿ ಹೆಣ್ಣು ಮಕ್ಕಳು ಮಾಡುವ ಹಬ್ಬ.ದೇವವೃಂದದಲ್ಲಿ ನಡೆಯುವ ಜಾತ್ರೆ ಈ ನಾಡಿನ ದೊಡ್ಡ ಹಬ್ಬ. ಒಂದೇ ಊರು ಪ್ರತ್ಯೇಕವಾಗಿ ನಡೆಸುವುದು ಉಂಟು.ಜಾತ್ರೆಗಳಲ್ಲಿ ಮುಖ್ಯವಾದವು ದಾರದಹಳ್ಳಿಯ ಸುಗ್ಗಿಹಬ್ಬ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ನಿರ್ವಾಣಸ್ವಾಮಿ ಮಠದ ನಿರ್ವಾಣಸ್ವಾಮಿ ಜಾತ್ರೆ, ಸೀತಾಳಮಲ್ಲಿಕಾರ್ಜುನ ಸ್ವಾಮೀ ತೇರು, ಸಖರಾಯಾಪಟ್ಟಣದ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ರಥೋತ್ಸವ, ಕೊಪ್ಪ ತಾಲೂಕಿನಲ್ಲಿರುವ ಭೈರವದೇವರ, ಶ್ರೀಕಾಲಭೈರವಸ್ವಾಮಿ ರಥೋತ್ಸವ, ಕಳಸದ ಕಳಸೇಶ್ವರ ಜಾತ್ರೆ, ಶೃಂಗೇರಿಯ ಚಂದ್ರಮೌಳೇಶ್ವರ ಮತ್ತು ಶಾರದಾಂಬಾ ನವರಾತ್ರಿ ಉತ್ಸವಗಳು, ಪುರದ ಮಲ್ಲಿಕಾರ್ಜುನಸ್ವಾಮಿ ತೇರು, ಚಿಕ್ಕಮಗಳೂರು ತಾಲೂಕು ಹಿರೆಮಗಳೂರಿನ ಕೋದಂಡರಾಮಸ್ವಾಮಿಯ ರಥೋತ್ಸವ, ಖಾಂಡ್ಯದ ಮಾರ್ಕಂಡೇಯಸ್ವಾಮಿ ರಥೋತ್ಸವ, ಬಾಬಾಬುಡನಗಿರಿಯ ಉರುಸು, ಮಹಮ್ಮದೀಯ ಜಾತ್ರೆ ಸಂತ ಜೊಸೆಫರ ಉತ್ಸವವೆಂಬ ಕ್ರೈಸ್ತರ ಜಾತ್ರೆ, ಕಡೂರು ತಾಲೂಕಿನಲ್ಲಿರುವ ಅಂತರಗಟ್ಟದಲ್ಲಿರುವ ದುರ್ಗಮ್ಮನ ಜಾತ್ರೆ, ಕಿಗ್ಗದ ಶ್ರೀಋಷ್ಯಶೃಂಗೇಶ್ವರ ರಥೋತ್ಸವ, ಮೂಡಗೆರೆ ತಾಲೂಕಿನ ಗೋಣಿ ಬಸವೇಶ್ವರ ಬೀಡು, ಶ್ರೀಸುಬ್ರಮಣ್ಣೇಶ್ವರ ರಥೋತ್ಸವ, ಶ್ರೀರಾಮೇಶ್ವರ ಜಾತ್ರೆ, ಫಾಲ್ಗುಣಿ ಶ್ರೀರಾಮನಾಥೇಶ್ವರ ಸ್ವಾಮೀ ಜಾತ್ರೆ, ಅನೇಕ ಕಡೆ ದೇವರ ದರ್ಶನಕ್ಕೆ ಬರುತ್ತಾರೆ. ಕಿಸುವೊಳಲಿನ ಮಹಾರುದ್ರ ದೇವರು ನೂರಾರು ಭಕ್ತರನ್ನು ಆಕರ್ಷಿಸಿದೆ.

ಜೈನಧರ್ಮ ಅವಶೇಷಗಳು

ಕ್ರಿ.ಶ. 11 ರಿಂದ 14 ಶತಮಾನದವರೆಗೆ ಕರ್ನಾಟಕದ ಬಹುಭಾಗವನ್ನಾಳಿದ ಹೊಯ್ಸಳ ಮೂಲಪುರುಷನಿಗೆ ಜನ್ಮ ನೀಡಿದ ಸ್ಥಳವಿದು. ಮೂಡಿಗೆರೆಯಿಂದ ದೂರ ಸೊಸೆವೂರು ಅಥವಾ ಎಂಬ ಗ್ರಾಮದಲ್ಲಿ ಹೊಯ್ಸಳರಾಜ್ಯ ಸ್ಥಾಪನೆ ಮಾಡಿದರು. ಅಲ್ಲಿಯ ವಾಸಂತಿಕಾ ದೇವಾಲಯದಲ್ಲಿ ಸಳನೆಂಬ ಯುವಕ ತನ್ನ ಗುರುವಿನ ಆದೇಶದ ಮೇರೆಗೆ ಹುಲಿಯನ್ನು ಕೊಂದದ್ದರಿಂದ ಅವನ ಬಳಿಕ ರಾಜವಂಶಕ್ಕೆ ಹೊಯ್ಸಳವೆಂಬ ಹೆಸರು ಬಂತೆಂದು ಹೇಳಲಾಗಿದೆ.

ಚಿಕ್ಕಮಗಳೂರಿನಿಂದ ಸುಮಾರು ಐದು ಕಿ. ಮೀ. ದೂರದಲ್ಲಿ ಮತ್ರಾವರ ಎಂಬಲ್ಲಿ ಪಾಶ್ರ್ವನಾಥನ ಬಸದಿ ಇದೆ. ಕ್ರಿ.ಶ. 1120 ರ ಒಂದು ಕಾಲಕ್ಕೆ ಚಿಕ್ಕಮಗಳೂರು ವಿವಿಧ ಪ್ರದೇಶಗಳಲ್ಲಿ ಜೈನಧರ್ಮ ಅತ್ಯಂತ ವೈಭವದಿಂದ ಬಾಳಿ ಮೆರೆದಿದೆ. ಭೂಮಿಯಲ್ಲಿ ಸಿಕ್ಕಿರುವ ಜಿನಬಿಂಬಗಳು ಅಲ್ಲಲ್ಲಿ ತೋರ್ಪಡುವ ಬಸದಿಗಳು ಜೈನಧರ್ಮ ಬಿತ್ತರಿಸುವ ಶಾಸನಗಳು ಇಲ್ಲಿ ಮಹತ್ವ ಪೂರ್ಣವಾಗಿದೆ.

ಅಂಗಡಿ ಗ್ರಾಮದ ಸಮೀಪ ಹಳೆಕೋಟೆ ಎಂಬ ಪ್ರದೇಶ ಅಂದು ಕೋಡೆಹರ ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು. ಕೋಡೆಹರ ಸ್ಥಳದಲ್ಲಿ, ಕಾರ್ತಿಕೋತ್ಸವ ತುಂಬ ವೈಭವದಿಂದ ಜರುಗುತ್ತದೆ. ಇಲ್ಲಿಗೆ ಸಮೇಪದ ಕಣದೂರು ಎಂಬ ಗ್ರಾಮದಲ್ಲಿರುವ ಶಾಸನಗಳಲ್ಲಿ ಹೊಯ್ಸಳರ ಅಧ್ಯಕ್ಷತೆಯಲ್ಲಿ ಭೂಮಿಯನ್ನು ದಾನ ಮಾಡಿದ ದಾಖಲೆ ಇದೆ. ತರುವಾಯ ಹೊಯ್ಸಳರು ತಮ್ಮ ರಾಜಧಾನಿಯನ್ನು ಇಲ್ಲಿಂದ ವರ್ಗಾಯಿಸಿದರು.

ಚಿಕ್ಕಮಗಳೂರಿನ ಅವಶೇಷಗಳು:

ಇಲ್ಲಿನ ಸ್ಥಾಪನೆಯಾದ ನಂತರ ಕಾರ್ಕಳದ ನಾಯಕರ ವಂಶದಲ್ಲಿ ಶೃಂಗೇರಿ ಸ್ವತಂತ್ರವಾಗಿ ಬೆಳೆಯತೊಡಗಿತು. ಅಂದಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಧರ್ಮಸಂಸ್ಕೃತಿ ಹೆಚ್ಚಿನ ಪ್ರಾಬಲ್ಯ ಸಿಕ್ಕಿದರಿಂದ ನಾಡಿನಲ್ಲೆಲ್ಲ ಜೈನಧರ್ಮ ಅತ್ಯಂತ ವೈಭವದಿಂದ ಮೆರೆದಿದೆ. ಇಲ್ಲಿಯ ಪ್ರಾಚೀನ ದೇವಸ್ಥಾನಗಳಲ್ಲಿ ಬೋಳಾರಾಮೇಶ್ವರ ಜಾತ್ರೆ ಪ್ರತಿವರ್ಷ ಏಪ್ರಿಲ್ ತಿಂಗಳಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ. ಕೊಲ್ಲಾಪುರದ ಮಹಾಲಕ್ಷ್ಮೀ ಮಂದಿರವು ಇಲ್ಲಿರುವ ಇನ್ನೊಂದು ಪ್ರಾಚೀನ ಗುಡಿಯಾಗಿದೆ.
       
ಪರ್ವತ ಪ್ರದೇಶದಲ್ಲಿ ಎತ್ತರವಾದ ಸ್ಥಳದಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ದೇವಸ್ಥಾನವಿದೆ. ಇನ್ನು ಕೆಳಕ್ಕೆ ಬಂದರೆ ಸಿಗುವುದು ನಿರ್ವಾಣಸ್ವಾಮಿ ಮಠ, ನಿರ್ವಾಣಸ್ವಾಮಿಗಳ ಲೀಲೆಗಳ ಬಗ್ಗೆ ಜನಪದ ಕಾವ್ಯಗಳಿವೆ. ಮೂಡಗೆರೆ ತಾಲೂಕಿನ ಬಿಜ್ಜಳರಾಯನದುರ್ಗದಲ್ಲಿ ಹೊಯ್ಸಳ ಕಾಲದ ಒಂದು ಕೋಟೆ ಇದೆ. ಇದರ ಒಂದು ಕಡೆಯ ಬಾಗಿಲಿಗೆ ದಿಡ್ಡಿ ಬಾಗಿಲವೆಂದು ಇನ್ನೊಂದು ಕಡೆಯ ಬಾಗಿಲಿಗೆ ಸಿಂಹಬಾಗಿಲವೆಂದೂ ಕರೆಯುವರು. ದಕ್ಷಿಣ ಕನ್ನಡ ಜಿಲ್ಲೆಯ ಮಾರ್ಗದಲ್ಲಿ ಒಂದು ಕೊಳವಿದೆ.
 
17ನೇ ಶತಮಾನದಲ್ಲಿ ಈ ನಾಡಿನ ಬಹುಭಾಗವನ್ನು ಶಿವಪ್ಪ ಆಕ್ರಮಿಸಿಕೊಂಡ. ಕೆಲಕಾಲ ಅವನ ಆಶ್ರಯದಲ್ಲಿಯೆ ಸುಖರಾಯಪಟ್ಟಣ, ಬೆಳಲೂರು ಮತ್ತು ನೆಲೆಯ ಪ್ರದೇಶಗಳನ್ನು ಶಿವಪ್ಪನೇ ಆಳ್ವಿಕೆ ಕೈಕೊಂಡಿದ್ದನು. ಬಸವ ಪಟ್ಟಣದ ಪ್ರದೇಶಗಳು ಪ್ರಥಮತಃ ಬಿಜಾಪುರ ಸೈನ್ಯಕ್ಕೆ ತರುವಾಯ ಮೊಗಲ ಸೈನ್ಯದ ವಶವಾದವು. 1687 ರಲ್ಲಿ ಈ ಪ್ರದೇಶ ಶಿರಾಪ್ರಾಂತಕೆ ಸೇರಿತ್ತು. ಇವರೆಲ್ಲ ವಿಜಯನಗರದ ಸಾಮಂತರಾಗಿದ್ದರು. ಮತ್ತವಾರದ ಶಿವದೇವಾಲಯ ಜೀರ್ಣವಾಗಿದೆ. ಅಲ್ಲಿಯ ಭೈರವನದು ನಾಲ್ಕು ಕರಗಳುಳ್ಳ 4 ಫೂಟು ಎತ್ತರದ ವಿಗ್ರಹ ನೋಡಲು ತುಂಬ ಸುಂದರವಾಗಿದೆ.

ಹೀಗೆ ಅನೇಕ ಜಾತ್ರೆಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜರುಗುತ್ತದೆ. ಈ ಜಿಲ್ಲೆಯಲ್ಲಿ ಮತ್ತಾವರದಲ್ಲಿ ಆಂಜನೇಯ ದೇವಿರಮ್ಮ ಮತ್ತು ಚೌಡೇಶ್ವರಿ ದೇವಾಲಯಗಳಿವೆ. ಸೈರುತ್ಯ ಇಪ್ಪತ್ತು ಕಿ.ಮೀ. ದೂರದಲ್ಲಿ ಆಲದೂರು ಎಂಬ ಸ್ಥಳದಲ್ಲಿ ಹೊಯ್ಸಳ ವಿಷ್ಣುವರ್ಧನನ ಆಳ್ವಿಕೆಕಾಲದ ಕ್ರಿ.ಶ. 116 ಎರಡು ವೀರಗಲ್ಲುಗಳಿದ್ದು, ಇವನ್ನು ಯುದ್ಧದಲ್ಲಿ ಮಡಿದ ಮಾಚಯ್ಯ, ಬೊಮ್ಮಯ್ಯ ಎಂಬಾತರ ಸ್ಮರಣಾರ್ಥವಾಗಿ ನಿಲ್ಲಿಸಲಾಗಿದೆ. ಕ್ರಿ.ಶ. 959ದ ಅಮ್ಮೆಲೆಯ ಶಾಸನದಲ್ಲಿ ಚೆನ್ನಿಗರಾಯ ಲೋಕೇಶ್ವರ, ವೀರಭದ್ರ ಮತ್ತು ಗೋಪಾಲಕೃಷ್ಣ ಎಂಬ ನಾಲ್ಕು ದೇವಾಲಯಗಳಿವೆ.

ಇದರಲ್ಲಿ ಮೂಲ ದೇವಾಲಯದ ಪ್ರತಿಮೆಯನ್ನು ವೀರಬಲ್ಲಾಳ ಕೇಶವ ಎಂದೂ ಕರೆಯಲಾಗುತ್ತದೆ. ಈ ದೇವಾಲಯವನ್ನು ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಅದರಲ್ಲಿ ಗರ್ಭಗೃಹ, ಶುಕನಾಸಿ ಮತ್ತು ನವರಂಗಗಳಿವೆ. ಲೋಕೇಶ್ವರ ದೇವಾಲಯವನ್ನು ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗೋಪಾಲಕೃಷ್ಣ ಮಂದಿರದಲ್ಲಿಯ ವೇಣುಗೋಪಾಲನ ಮೂರ್ತಿ ಹೊಯ್ಸಳ ಕಾಲದಿದ್ದು, ಅತ್ಯಂತ ನಯವಾದ ಕೆತ್ತನೆಗಳಿಂದ ಕೂಡಿದೆ. ಖಾಂಡ್ಯವು  ಪಂಚಕ್ಷೇತ್ರಗಳಲ್ಲಿ ಒಂದಾಗಿದೆ. ಕಳಸ, ಹೆಬ್ಬೆ, ಸೊಮಪುರ ಮತ್ತು ಕೂಡ್ಲಿ ಎಂಬವು ಉಳಿದ ನಾಲ್ಕು ಕ್ಷೇತ್ರಗಳು ಖಾಂಡ್ಯದಲ್ಲಿರುವ ಅತ್ಯಂತ ಪುರಾತನ ದೇವಾಲಯಗಳಲ್ಲಿ ಮಾರ್ಕಂಡೇಶ್ವರ ದೇವಾಲಯವಿದೆ. ಈ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಂಟಿಕೆ ಪಂಟಿಕೆ ಸಂಪ್ರದಾಯವಿದ್ದು ಕಾರ್ತಿಕದಲ್ಲಿ ಜಾತ್ರೆ ಜರುಗುತ್ತದೆ.

ಭದ್ರಾನದಿಯ ದಂಡೆಯ ಮೇಲಿರುವ ಬಾಳೇಹೊನ್ನೂರು ಮಠವನ್ನು ವೀರಶೈವಮಠ ಸಾಥಪನಾಚಾರ್ಯರಾದ ಶ್ರೀರೇಣುಕಾರ್ಚಾರ್ಯರು ಸ್ಥಾಪಿಸಿದರು. ಇವರು ಪಂಚಚಾರ್ಯರಲ್ಲಿ ಮೊದಲಿಗರು. ಈ ಮಠದಲ್ಲಿ ಶ್ರೀಮತ್‍ ರಂಭಾಪೂರು ವೀರಸಿಂಹಾಸನ ಮಠವೆಂದು ಕರೆಯಲಾಗಿದೆ. ಈ ಮಠ ಪುರಾತನ ಕಾಲಾದಾಗಿದ್ದು ಹಿಂದಿನ ಕಾಲದಿಂದಲೂ ಇಕ್ಕೇರಿ ಪಾಳೆಯಗಾರರು, ಮೈಸೂರಿನ ರಾಜಮನೆತನ ಅನೇಕ ರೀತಿಯಲ್ಲಿ ಮಠದ ಅಬಿವೃದ್ಧಿಗಾಗಿ ಸನ್ನದು ದತ್ತಿಗಳನ್ನು ಮಾಯ ಮಾಡಿದ್ದಾರೆ. ಇದರ ಬಗ್ಗೆ ಅನೇಕ ತಾಮ್ರ ಪಟಗಳಿವೆ. ಪೀಠಾಧಿಪತಿಗಳಾದ ಶ್ರೀಪ್ರಸನ್ನ ರೇಣುಕ ವೀರಗಂಗಾಧರ ಶಿವಯೋಗಿ ಶಿವಾಚಾರ್ಯಸ್ವಾಮಿಗಳು ತುಂಬ ತಪೋನಿಷ್ಠರಾಗಿದ್ದರು. ವಿಶ್ವ ಶಾಂತಿಯ ಚಿಂತನೆಯಲ್ಲಿ ಮುಳುಗಿ ಧರ್ಮಬೋಧನೆಯನ್ನೆಸಗುತ್ತಿದ್ದಾರೆ.

ಚಂದ್ರದ್ರೋಣ ಪರ್ವತದಲ್ಲಿ ದತ್ತಾತ್ರೇಯ ಮುನಿ ತಪಸ್ಸು ಮಾಡಿದರೆಂಬ ನಂಬಿಕೆ ಇದೆ. ಈ ಗಿರಿಯ ಬುಡದಲ್ಲಿ ನಿರ್ವಾಣ ಸ್ವಾಮಿಗಳು ಗದ್ದುಗೆ ಇದೆ. ಅದಲ್ಲದೆ ಈ ಜಿಲ್ಲೆಯಲ್ಲಿ ನೂರಾರು ದೇವಾಲಯಗಳು. ಮಹಮ್ಮದೀಯರ ದರ್ಗಾ ಮತ್ತು ಮಸೀದಿಗಳು ಕ್ರೈಸ್ತರ ಚರ್ಚುಗಳು, ಪ್ಲೇಗಮ್ಮ, ಅಂತರಗಟ್ಟಮ್ಮ, ಕರಾಳಮ್ಮ, ಚಾಮುಂಡಮ್ಮ, ಕೊಲ್ಲಾಪುರದಮ್ಮ ಮೊದಲಾದ ದೇವತೆಗಳ ಹೆಸರಿನ್ಲಲಿ ನಿವಾಸಸ್ಥಾನಗಳು ಹೇರಳವಾಗಿದೆ. ಉರಸು ಎಂಬ ಮಹಮದೀಯರ ಜಾತ್ರೆ, ರಥೋತ್ಸವ, ದನಗಳ ಪರಿಷೆಗಳು, ಸಂತ ಜೋಸೆಫರ ಉತ್ಸವವೆಂಬ ಕ್ರೈಸ್ತರ ಜಾತ್ರೆ ನಡೆಯುತ್ತದೆ.(ಚಿಕ್ಕಮಗಳೂರು ಜಿಲ್ಲೆಯ ಗಿರಿ ಶೃಂಗಗಳ ವೈಶಿಷ್ಟ್ಯಗಳು-ಡಾ.ಚನ್ನಕ್ಕ. ಪಾವಟೆ)