Shree Skhethra Monte Thadka Durga Parameshwari Temple

  ಶಿಬಾಜೆ ದುರ್ಗಾಪರಮೇಶ್ವರೀ ಚರಿತ್ರೆ  (ಕ್ಷೇತ್ರ ಪರಿಚಯ)

                    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿದ ಶಿಬಾಜೆ ಗ್ರಾಮದ ಮೊಂಟೆತಡ್ಕದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಾಲಯವು ನಯನ ಮನೋಹರವಾಗಿ ವಿರಾಜಿಸುತ್ತಿದೆ. ಈ ಕ್ಷೇತ್ರದ ಪರಿಸರದಲ್ಲಿ ಅಸಂಖ್ಯಾತ ಕಾಡು ಮೃಗ ಭುಜಗಾದಿ ಪ್ರಾಣಿ ಸಂತತಿಗೆ ಆವಾಸ ಸ್ಥಾನವಾಗಿ ವಿವಿಧ ವೃಕ್ಷ ಲತಾ ತೃಣಗುಲ್ಮ ಸ್ತೋಮದಿಂದೊಪ್ಪಿ ಮುಗಿಲು ಮುಟ್ಟುವ ವಿಸ್ತಾರವಾದ ಕಾಂತಾರವೂ ಅತಿಶಯ ಸತ್ಫಲಭರಿತವಾದ ತೆಂಗು, ಕಂಗು, ಬಾಳೆ, ಗೇರು ಮುಂತಾದ ಮರಗಿಡಗಳ ಸಂದಣಿಯ ಹಲವು ತೋಟಗಳೂ ಸೊಂಪಾಗಿ ಬೆಳೆದ ಕೆಯ್ಗಳಿಂದ ನಳನಳಿಸುವ ವಿಶಾಲವಾದ ಬಯಲು ಗದ್ದೆಗಳೂ ಕಣ್ಗೊಳಿಸುತ್ತಿವೆ. ಹೀಗೆ ಶ್ಯಾಮಲವಾದ ಪ್ರಶಾಂತ ಪ್ರದೇಶದಲ್ಲಿ ಶಿಲ್ಪ ಶಾಸ್ತ್ರಾನುಸಾರ ನಿರ್ಮಾಣಗೊಂಡ ದಿವ್ಯ ದೇವಾಲಯದ ಗರ್ಭಗೃಹದಲ್ಲಿ ಅನೇಕ ಶಿಲಾಪುಂಜ ಸ್ವರೂಪದ ದೇವೀ ಪ್ರತೀಕವು ವಿಸ್ಮಯಕರವಾಗಿ ವಿರಾಜಿಸುತ್ತಿದೆ. ಹೇಗೆ ಕಾನನದ ಮಧ್ಯದಲ್ಲಿ ತನ್ನ ಹಿಂದಣ ನಾನಾವತಾರಗಳನ್ನು ಪ್ರದರ್ಶಿಸುವಂತೆ ಗೋಚರಿಸುವ ಅಸಂಖ್ಯ ಕೃಷ್ಣೋಪಲ ಪ್ರಕಾ ಆಕಾರದ ದುರ್ಗಾಪರಮೇಶ್ವರಿ ಪ್ರಶಸ್ತವಾದ ವನದುರ್ಗೆಯೆಂಬ ವಿಶೇಷಾಭಿಧಾನವನ್ನೂ ಪಡೆದು ಪ್ರಖ್ಯಾತೆಯಾಗಿರುವಳು.
            ಈ ಸಾಕ್ಷಾತ್ ದುರ್ಗಾದೇವಿ ನೆಲಸಿರುವ ಶಿಲಾಮಯ ಪ್ರಾಸಾದದ ಪ್ರಾಕಾರ ಮಂಟಪದ (ಸುತ್ತು ಪೌಳಿಯ) ನೈರುತ್ಯ ಕೋಣದಲ್ಲಿ ಮಹಾಗಣಪತಿಯ ಭವ್ಯ ನಿಕೇತನವೂ, ವಾಯುವ್ಯ ಕೋಣದಲ್ಲಿ ಮಹಿಷಂತಾಯ ಇಷ್ಟದೈವಗಳ ನಿಲಯವು ಚಿತ್ತಾಕರ್ಷಕವಾಗಿ ರಂಜಿಸುತ್ತಿದೆ.ಹೊರವಲಯದಲ್ಲಿ ನೈರುತ್ಯ ದಿಕ್ಕಿನಲ್ಲಿ ಪ್ರೇಕ್ಷಣಿಯ ನಾಗವನವೂ ಈಶಾನ್ಯದಲ್ಲಿ ರಕ್ತೇಶ್ವರೀ ಗುಳಿಗ ದೈವಗಳ ಸನ್ನಿಧಿ ಸ್ಥಾನಗಳೂ ಆಗ್ನೇಯದಲ್ಲಿ ಕುಮಾರ ಕುಮಾರಿತಿ ದಂಪತಿಗಳ ಸ್ಮಾರಕ ಶಿಲಾಸ್ತಂಭಧ್ವಯವೂ ಪೂರ್ವದಿಶೆಯಲ್ಲಿ ಶಾಸ್ತ್ರಾರನ ಸುಂದರ ಮಂದಿರವೂ ವಿಪುಲ ಪತ್ರ ಶಾಖಾವಳಿಯ ಉತ್ತುಂಗ ಅಶ್ವತ್ಥ ವೃಕ್ಷವೂ ವಿಪುಲ ಪತ್ರಶಾಖಾವಳಿಯ ಉತ್ತುಂಗ ಅಶ್ವತ್ಥ ವೃಕ್ಷವೂ ಪರಿಶೋಭಿಸುತ್ತಿದೆ. ಈ ಕ್ಷೇತ್ರದಲ್ಲಿ ಸದಾ ನಿರ್ಮಲ ಸಲಿಲದಿಂದ ತುಂಬಿ ತುಳುಕುವ ಪುಷ್ಕರಿಣಿ ಅತ್ಯಂತ ಪವಿತ್ರ ತೀರ್ಥವೆಂಬ ಪ್ರತೀತಿಯಿದೆ. ಸ್ವಲ್ಪ ದೂರದಲ್ಲಿ ಆಗ್ನೇಯ ದಿಕ್ಕಿನಲ್ಲಿ ಗ್ರಾಮ ದೈವಗಳಾದ ಕೊಡಮಣಿತ್ತಾಯ, ಒರ್ನರ ಪಂಜುರ್ಲಿ, ಕುಪ್ಪೆ ಪಂಜುರ್ಲಿ,  ಪೊಟ್ಟ ಭೂತಗಳ ಸದನವೂ ಶೀರಾಡಿ ಭೂತ, ಬಚ್ಚನಾಯಕ, ಗಿಳಿರಾಮ, ಪಂಜುರ್ಲಿ, ಕಲ್ಲುರ್ಟಿ ಗುಳಿಗ ಮುಂತಾದ ದೈವಗಳ ನಿವಾಸವೂ ರಾಜಿಸುತ್ತಿವೆ.
           ಪ್ರಾಚೀನ ಕಾಲದಲ್ಲಿ ಶಿಬಾಜೆ ಗ್ರಾಮದ ಪಾವನವನ ಪ್ರದೇಶದಲ್ಲಿ ಋಷಿವರ್ಯರು ತಪೋಮಗ್ನರಾಗಿ ಆದಿಶಕ್ತಿಯಾದ ದುರ್ಗಾದೇವಿಯನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ ಲೋಕಕಲ್ಯಾಣ ಚಿಂತನೆಯಿಂದ ಚಂಡಿಕಾಹವನಾದಿಯಾಗಗಳನ್ನು ವಿರಚಿಸುತ್ತಾ ಸಂತೋಷದಿಂದ ಬದುಕುತ್ತಿದ್ದರು. ಒಮ್ಮೆ ಈ ಅರಣ್ಯಕ್ಕೆ ವ್ಯಾಘ್ಯಾಸುರ ಸೈರಿಭಾಸುರ ಕ್ರೋಢಾಸುರಾದಿ ಘೋರ ರಾಕ್ಷಸರು ಗರ್ಜಿಸುತ್ತಾ ಬಂದು ವನ್ಯ ಮೃಗ ಪಕ್ಷಿ ಸಂಕುಲವನ್ನು ಕೊಂದು ಭಕ್ಷಿಸಿ ಋಷ್ಯಾಶ್ರಮವನ್ನು ಪ್ರವೇಶಿಸಿ ಮುನೀಂದ್ರರ ಮುಖ ಶಾಲೆಯ ಒಳಹೊಕ್ಕು ಅವರನ್ನು ಕುಳಿತ ಸ್ಥಳದಿಂದ ಮೇಲಕ್ಕೆಳೆದು ತುಳಿದು ಪೀಡಿಸಿ ನೋಯಿಸಿ  ಯಜ್ಞವನ್ನು ಭಂಗಗೊಳಿಸಿದರು. ಆಗ ಆ ತಪೋಧನರು ಭಯಗ್ರಸ್ತರಾಗಿ ವಿಶ್ವೇಶರಿಯಾದ ದುರ್ಗೆಯನ್ನು ಸ್ಮರಿಸಲು ಅವರ ಆಕ್ರಂದನವನ್ನು ಆಲಿಸಿ ಪರಿವಾರ ಸಮೇತ ಮಹಾಮಾಯೆ ಪ್ರತ್ಯಕ್ಷಳಾಗಿ ರಕ್ತೇಶ್ವರಿ ಮಹಿಷಾನನ ಚಾಮುಂಡಿ ಭೈರವ ಪ್ರಮುಖ ಭೂತಗÀಣವನ್ನು ಆಜ್ಞಾಪಿಸಿದಳು. ಆ  ದೈವ ಸಮೂಹವು ದೈತ್ಯ ಸಂದೋಹವನ್ನು ಸಂಹರಿಸಿ ತಾಪಸರ ಸಂಕಷ್ಟವನ್ನು ಪರಿಹರಿಸಲು ಯೋಗಿವರೇಣ್ಯರು ಅತ್ಯಾನಂದದಿಂದ ಹಿಗ್ಗಿ ಜಗನ್ಮಾತೆಯ ಕರುಣಾ ಪೂರ್ಣ ವಾತ್ಸಲ್ಯವನ್ನು ಶ್ಲಾಘಿಸಿ ವಿವಿಧ ಸ್ತೋತ್ರಗಳಿಂದ ಸಂಸ್ತುತಿಸಿ ಸಾಷ್ಟಾಂಗ ಪ್ರಣಾಮ ಮಾಡಿ ಕೈ ಮುಗಿದು ನಿಂತರು. ಆಗ ಆ ಮಹಾಮಹಿಮಾನ್ವಿತೆ ಮಂದಸ್ಮಿತೆಯಾಗಿ ಆಶೀರ್ವದಿಸುತ್ತಾ ಈ ವನ ಪ್ರದೇಶದಲ್ಲಿ ಸಕಲ ಜೀವಿ ವಿಸ್ತಾರಕ್ಕೆ ಚೈತನ್ಯವೀವ ಉದ್ದೇಶದಿಂದ ಆಗಾಗ ಮೆಯ್ದೋರಿ ಸಂಚರಿಸಿ ಪ್ರೀತಿಯಿಂದ ಪ್ರೀತಿಯಿಂದ ಸಂರಕ್ಷಿಸುವನೆಂದು ಅಭಯವಿತ್ತು ಅನುಗ್ರಹಿಸಿ ಅದೃಶ್ಯಳಾದಳು. ಅಂದಿನಿಂದ ಯತಿಪುಂಗವರು ಅರಮಣೀಯಾರಾಮದ ಸುರಕ್ಷಿತ ಸ್ಥಳದಲ್ಲಿ ನಿರಾತಂಕವಾಗಿ ತಪೋನಿರತರಾಗಿ ಜೀವಿಸುತ್ತಿದ್ದರು.
           ಹಿಂದೆ ಶೆಬಾಜೆ ಗ್ರಾಮದಲ್ಲಿ ವಾಸಿಸುತ್ತಿದ್ದ ಬಿಲ್ಲವ ಜಾತಿಯ ಕುಮಾರನು ಪ್ರತಿದಿನವೂ ಅಡವಿಗೆ ಬಂದು ಈಚಲು, ತಾಳೆ ಮರಗಳಿಂದ ಕಳ್ಳನ್ನು ಮಣ್ಣ ಮಡಿಕೆಯಲ್ಲಿ ತುಂಬಿಸಿ ಮನೆಗೆ ಕೊಂಡೊಯ್ದು ಮಾರುತ್ತಿದನು. ಒಂದು ದಿನ ಆ ಬಿಲ್ಲವನು ಮರದಿಂದ ಮದ್ಯ ಸಂಗ್ರಹ ಮಾಡಿ ಇಳಿದು ಬರುವ ಸಮಯದಲ್ಲಿ ವನದುರ್ಗೆ ಉಯ್ಯಾಲೆಯಲ್ಲಿ ಅಸೀನಳಾಗಿ ಸುತ್ತಣ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ಅವಲೋಕಿಸುತ್ತಿದ್ದಳು. ಅತ್ಯಂತ ಪ್ರಖರ ತೇಜೋಮಾಯೆಯಾದ ಮಹೇಶ್ವರಿಯನ್ನು ಕುಮಾರನು ಕಂಡು ಆಶ್ಚರ್ಯಚಕಿತನಾಗಿ ಆಕೆಯ ಸಮೀಪಕ್ಕೆ ಹೋಗಲು ಧೈರ್ಯವಿಲ್ಲದೆ ಸ್ವಲ್ಪ ದೂರದಲ್ಲಿ ಭೂರುಹದ ಅಡಿಯಲ್ಲಿ ಅವಳಿಗೆ ಕಾಣದಂತೆ ನಿಂತನು. ದೇವಿಯ ಮನೋಮೋಹಕ ಲಾವಣ್ಯವನ್ನು ಕೆಲವು ಗಳಿಗೆಯವರೆಗೆ ಕಣ್ಣೆವೆಯಿಕ್ಕದೆ ನೋಡಿ ಮತ್ತೆ ತನ್ನ ಮನೆಗೆ ಮರಳಿದನು. ಈ ರೀತಿಯಾಗಿ ಪ್ರತಿ ದಿವಸವೂ ಅವನು ಮಹಾದೇವಿಯ ಅನುಪಮ ಶೃಂಗಾರ ರೂಪವನ್ನು ವೀಕ್ಷಿಸುತ್ತಾ ಕೆಲಹೊತ್ತು ನಿಂತು ಬಳಿಕ ತನ್ನ ಗುಡಿಸಲಿಗೆ ತೆರಳುತ್ತಿದ್ದನು. ಹೀಗೆ ಕುಮಾರನು ತಡವಾಗಿ ಬರುವುದನ್ನು ಅವನ ಹೆಂಡತಿ ಕುಮಾರಿತಿ ಕಂಡು ಗಂಡನ ವರ್ತನೆಯಲ್ಲಿ ಸಂಶಯಗೊಂಡು ಇದರ ರಹಸ್ಯವನ್ನು ತಿಳಿಯಬೇಕೆಂದು ಸಂಕಲ್ಪಿಸಿ ಒಂದು ದಿನ ಅವನನ್ನು ಹಿಂಬಾಲಿಸಿ ಹೋದಳು. ಆ ದಿವಸವೂ ಕುಮಾರನು ದೇವಿಯನ್ನು ನೋಡುತ್ತಾ ನಿಲ್ಲಲು ತನ್ನ ಕಾಂತನು ನಿರುಪಮಕಾಂತಿ ಸೌಂದರ್ಯ ಸಂಪನ್ನೆಯಾದ ಕಾಂತಾಮಣಿಯಲ್ಲಿ ಅನುರಕ್ತನಾಗಿರುವನೆಂದು ಭಾವಿಸಿ ಅವನನ್ನು ಅವಾಚ್ಯ ವಾಕ್ಯಗಳಿಂದ ನಿಷ್ಠುರವಾಗಿ ಬಯ್ಯತೊಡಗಿದಳು. ಆ ನೀಚೆಯ ಕಟುನಿಂದೆಯನ್ನು ಪರಮೇಶ್ವರಿ ಕಿವಿಗೊಟ್ಟು ಕೇಳಿ ಸಿಟ್ಟುಗೊಂಡು ಆ ಶೌಂಡಿಕ ದಂಪತಿಗಳನ್ನು ಕೇಸುರಿಗಣ್ಣಿಂದ ನಿಟ್ಟಿಸಿ ತನ್ನನ್ನು ಅಪಮಾನಗೊಳಿಸಿದ ಅಪರಾಧಕ್ಕಾಗಿ ಇಬ್ಬರನ್ನು ಕಲ್ಲಾಗುವಂತೆ ಶಪಿಸಲು ಆ ಗಂಡಹೆಂಡಿರು ಪಾಷಾಣ ರೂಪ ತಾಳಿ ನೆಲಕ್ಕೆ ಬಿದ್ದರು.
ಅನಂತರ ದುರ್ಗಾದೇವಿ ಅಮೋಘ ಶಿಲಾಕೃತಿ ಧರಿಸಲು ಕ್ರೋಧಾವಿಷ್ಟೆಯಾದ ಅವಳ ಶರೀರವು ಕಂಪಿಸಿ ಒಡೆದು ಅನೇಕ ಶಿಲಾಖಂಡಗಳಾಗಿ ರೂಪುಗೊಂಡುವು. ಅವುಗಳಲ್ಲಿ 2 ದಿವ್ಯೋಪಲಕಂಡಗಳು ಸಿಡಿದು ಹೋಗಿ “ಅಮ್ಮಾಜೆ” ಎಂಬ ಸ್ಥಳದಲ್ಲಿಯೂ “ಬೂಡು ಮುಗೇರು” ಎಂಬ ಪ್ರದೇಶದಲ್ಲಿಯೂ ಉರುಳಿಬಿದ್ದು ಧಾತ್ರಿಯಲ್ಲಿ ಅಚಲವಾಗಿ ನೆಲೆಗೊಂಡುವು.
ಶಿಬಾಜೆಯ ವನದುರ್ಗೆ ಶೌಂಡಿಕ ದಂಪತಿಗಳಲ್ಲಿ ಕೋಪಿಸಿ ಅವರಿಗೆ ದರ್ಶನವೀಯಬಾರದೆಂದು ಉತ್ತರ ದಿಕ್ಕಿಗೆ ಮುಖ ತಿರುಗಿಸಿ ಸ್ಥಿರವಾಗಿ ನಿಂತಳು. ಹೊರವಲಯದಲ್ಲಿ ಆಗ್ನೇಯ ದಿಕ್ಕಿನಲ್ಲಿ ಶಾಪಗ್ರಸ್ತರಾಗಿ ಪಾಷಾಣ ರೂಪ ಪಡೆದು ಭೂಗತರಾಗಿದುವ ಕುಮಾರ ಕುಮಾರಿತಿಯರು ದೇವಿಯಲ್ಲಿ ಕ್ಷಮಾಯಾಚನೆ ಬೇಡುತ್ತಾ ಪ್ರಾರ್ಥಿಸುತ್ತಿರುವರೆಂದು ನಿರೂಪಿಸುವ ವಿಶಿಷ್ಟ ವಿಚಿತ್ರ ಕಥೆಗೆ ಪುಷ್ಟಿ ನೀಡುವಂತೆ ಶೌಂಡಿಕ ಶೌಂಡಿಕೆಯರ ಸ್ಮಾರಕವಾಗಿ ಹಿಂದೆ ಸ್ಥಾಪನೆಗೊಂಡ ಉಭಯ ಶಿಲಾಸ್ತಂಭಗಳು ಸಾಕ್ಷಿಯಾಗಿ ಕಣ್ಸೆಳೆಯುತ್ತಿವೆ.
ಈ ದುರ್ಗಾಪರಮೇಶ್ವರಿ ಆಸ್ತಿಕರಿಗೆ ನಿತ್ಯವೂ ತನ್ನನ್ನು ಸಂದರ್ಶಿಸಿ ಆರಾಧಿಸಲು ಅನುಕೂಲವಾಗುವಂತೆ ಬೇರೆ ಬೇರೆ ಮೂರು ಸ್ಥಳಗಳಲ್ಲಿ ಶಿಲಾರೂಪ ಕಳೆದು ನೆಲಸಿರುವಳೆಂದು ಊಹಿಸಿದರೆ ತಪ್ಪಾಗದು. ಒಂದು ದೀಪದ ಜ್ಯೋತಿಯಿಂದ ಹಚ್ಚಿದ ಮತ್ತೊಂದು ದೇವಿಗೆಯ ಜ್ವಾಲೆಯೂ ಅದರಂತೆಯೇ ಪ್ರಕಾಶಿಸುವ ರೀತಿಯಲ್ಲಿ ದುರ್ಗಾ ಸಾನ್ನಿಧ್ಯವು ಈ ಕ್ಷೇತ್ರತ್ರಯದಲ್ಲಿ ಸನ್ನಿಹಿತವಾಗಿದೆ.
             ಈ 3 ದೇವಾಲಯಗಳಲ್ಲಿಯೂ ಶಿಲ್ಪಶಾಸ್ತ್ರೋಕ್ತ ರೀತಿಯ ದೇವಿ ಸ್ವರೂಪದ ವಿಗ್ರಹಗಳಿಲ್ಲ. ವಿಚಿತ್ರಾಕೃತಿಯ ಕೃಷ್ಣ ಶಿಲಾಲಿಂಗಗಳು ಮಾತ್ರವೇ ಗೋಚರಿಸುತ್ತಿವೆ.
ಮಲೆನಾಡಿನ ಕೃಷಿಕರು ತಮ್ಮ ಪಶುಗಳನ್ನು ಹಟ್ಟಿಯಿಂದ ಹೊರಗೆ ಮೇಯಲು ಬಿಡುವಾಗ ದೂರಕ್ಕೆ ಹೋದರೆ ತಮಗೆ ಎಲ್ಲಿವೆಯೆಂಬ ಸುಳಿವು ಸುಲಭವಾಗಿ ಗೊತ್ತಾಗುವಂತೆ ಅವುಗಳ ಕೊರಳುಗಳಿಗೆ ಸದ್ದು ಮಾಡುವ ಬಿದಿರ ಮೊಂಟೆಗಳನ್ನು (ಬೊಂಕಗಳನ್ನು) ಕಟ್ಟುವರು. ಅವರು ತಮ್ಮ ಗೋಧನವನ್ನು ಹುಲಿಗಳು ತಿನ್ನಬಾರದೆಂದು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಪ್ರಾರ್ಥಿಸಿ ಒಂದು ಮೊಂಟೆಯನ್ನು ಒಪ್ಪಿಸಿ ಮತ್ತೊಂದು ಮೊಂಟೆಯನ್ನು  ಪ್ರತ್ಯೇಕವಾಗಿ ದನಕರುಗಳ ಕುತ್ತಿಗೆಗೆ ಬಿಗಿದು ಹುಲ್ಲುಗಾವಲಿಗೆ ಅಟ್ಟುವರು. ಹೀಗೆ ಭುವನೇಶ್ವರಿಗೆ ಜನತೆ ಅರ್ಪಿಸಿ ದೇವಸ್ಥಾನದ ಮಂಟಪದಲ್ಲಿ ತೂಗುಹಾಕಿದ ಹಲವು ಮೊಂಟೆಗಳನ್ನು ನೋಡಿದರೆ ಆಶ್ಚರ್ಯವಾಗುತ್ತಿದೆ.
ದುರ್ಗಾದೇವಿಯ ಪೂಜಾ ಸಮಯದಲ್ಲಿ ಆಗಂತುಕ ಭಕ್ತರು ವಿವಿಧ ವಾದ್ಯಗಳನ್ನು ಮೊಳಗಿಸುವಾಗ ಮೊಂಟೆಗಳನ್ನು ತಮ್ಮ ಕೈಗಳಿಂದ ಅಲ್ಲಾಡಿಸುವರು. ಆಗ ಬೇರೆ ಬೇರೆ ಮೊಂಟೆಗಳಲ್ಲಿ ವಿಶಿಷ್ಟಲಯಾನ್ವಿತವಾದ ವಿಭಿನ್ನನಾದವು ಹೊರಹೊಮ್ಮಿ ಶ್ರೋತೃಗಳಿಗೆ ಕರ್ಣಾನಂದಕರವಾಗಿ ಕೇಳಿಸುತ್ತಿದೆ. ಕೇವಲ ಬಿದಿರ ಮೊಂಟೆಯಿಂದಲೇ ಸಂತುಷ್ಟಳಾಗುವ ಈ ವನ ದುರ್ಗೆಯ ನಿವಾಸ ಪ್ರದೇಶಕ್ಕೆ ಮೊಂಟೆತಡ್ಕ ಎಂಬ ಅನ್ವರ್ಥ ಸ್ಥಳನಾಮವು ಪ್ರಾಪ್ತವಾಗಿದೆ.
           ಈ ದುರ್ಗಾಪರಮೇಶ್ವರಿಗೆ ನಾನಾ ವ್ಯಾಧಿಯಿಂದ ಬಳಲುವ ವ್ಯಕ್ತಿಗಳು ತಮ್ಮ ರೋಗಗ್ರಸ್ತಾಂಗಗಳನ್ನು ಹೋಲುವ ಬೆಳ್ಳಿಯ ಅಥವಾ ಚಿನ್ನದ ಪ್ರತಿರೂಪಗಳನ್ನು ಹರಕೆಯಾಗಿ ಅರ್ಪಿಸುವರು. ಶ್ವಾಸಕೋಶ ಪೀಡಿತರು ಬೆಳ್ಳಿಯ ಸರಿಗೆಗಳನ್ನು ಅಥವ ಬಾವಿಯ ಹಗ್ಗಗಳನ್ನು ಒಪ್ಪಿಸುವರು. ದೇಗುಲದಲ್ಲಿ ದೊಡ್ಡ ರಾಶಿಯಾಗಿ ಬಿಟ್ಟಿರುವ ಹಗ್ಗಗಳು ಇದಕ್ಕೆ ನಿದರ್ಶನವಾಗಿ ಕಾಣಿಸುತ್ತಿವೆ.
           ಕೆಲವರು ತಮ್ಮ ದನಕರುಗಳ ಹಿಂಡಿಗೆ ರೋಗೋಪದ್ರವು ಬಾಧಿಸಿದರೆ ದೇವಿಗೆ ಹರಕೆ ಹೇಳಿ ಅವುಗಳಿಗೆ ಸುಖಾವಾದಾಗ ಅನಂತರ ಒಂದು ಹಸುವನ್ನು ತಂದೊಪ್ಪಿಸುವರು. ಮದುವೆಯಾಗದ ಕನ್ಯೆಯರು ವಿವಾಹ ಯೋಗವು ಶೀಘ್ರವಾಗಿ ಒದಗುವಂತೆ ದೇವಿಯಲ್ಲಿ ಪ್ರಾರ್ಥಿಸಿ ಪ್ರತಿ ಮಾಸದಲ್ಲಿಯೂ ಅರ್ಚಕರಿಂದ ಕುಂಕುಮಾರ್ಚನೆ ಮಾಡಿಸಿ ಪ್ರಸಾದ ಸ್ವೀಕರಿಸುವರು. ಈ ಅಲ್ಪಾರಾಧನೆಯಿಂದ ಸರ್ವಮಂಗಲೆ ಸಂತೃಪ್ತಿಗೊಂಡು ಅವರ ಅಭೀಷ್ಟಸಿದ್ಧಿಯಾಗುವಂತೆ ಅನುಗ್ರಹಿಸುವಳೆಂದು ಜನರಲ್ಲಿ ದೃಢವಿಶ್ವಾಸವಿದೆ. ದೇವಿ ಭಕ್ತರ ಈ ನಂಬುಗೆಗೆ ಅನುಭವ ವೇದ್ಯವಾದ ಅನೇಕ ದೃಷ್ಟಾಂತಗಳೂ ಲಭಿಸುತ್ತಿದೆ. ಅಸಂಖ್ಯ ಭಜಕರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ ದುರ್ಗಾಸನ್ನಿಧಿಯಲ್ಲಿ ದೇವಲಕರಿಂದ ವಿವಿಧ ಪೂಜಾ ಸೇವೆಗಳನ್ನು ಮಾಡಿಸುವರು. ಹಲವು ಗೋಕ್ಷೀರ ಗುಡಾನ್ನ ಪಾಯಸ ಕದಳಿನಾರಿಕೇಳಾದಿ ಫಲ ವಸ್ತುಗಳು ದುರ್ಗೆಗೆ ಬಹಳ ಪ್ರಿಯವೆಂದು ಎಣಿಸಿ ಅರ್ಚಕರಲ್ಲಿ ಕೊಟ್ಟು ಸಮರ್ಪಣೆ ಮಾಡಿಸಿ ಪ್ರಸಾದ ಸ್ವೀಕರಿಸುವರು.
           ಹಿಂದೆ ಭಾರತವನ್ನು ಬ್ರಿಟಿಷರು ಆಳುತ್ತಿದ್ದ ಕಾಲದಲ್ಲಿ ಸರಕಾರದ ಕೆಲವು ಅಧಿಕಾರಿಗಳು ಸೇನಾನಿವೇನಶಕ್ಕಾಗಿ ದುರ್ಗಾಪರಮೇಶ್ವರಿ ದೇವಾಲಯದ ಸುತ್ತಣ ಪ್ರದೇಶದಲ್ಲಿ ಭೂಮಾಪನ ಮಾಡಲು ಪ್ರಾರಂಭಿಸಿದರು. ಆಗ ಈ ಊರಿನ ಮಹನೀಯರು ಅವರಿಗೆ ನಮಸ್ಕರಿಸಿ ದುರ್ಗಾಪರಮೇಶ್ವರಿಯ ನಿತ್ಯಪೂಜೆ ಮಾಡಲು ದೇವಾಲಯಕ್ಕೆ ಅರ್ಚಕರು ಬಂದು ಹೋಗುವಂತೆ ಅನುಮತಿ ನೀಡಬೇಕೆಂದು ವಿನಯದಿಂದ ವಿಜ್ಞಾಪಿಸಿದರು. ಆದರೆ ಗರ್ವಿಷ್ಠರಾದ ಅಧಿಕಾರಿಗಳು ಅದಕ್ಕೆ ಸಮ್ಮತಿಸಿದೆ ಈ ಸ್ಥಳವನ್ನು ಕೂಡಲೇ ಬಿಟ್ಟು ತೊಲಗಬೇಕೆಂದು ಗದರಿಸಿ ಭೂಮಾಪನ ಕಾರ್ಯಕ್ಕೆ ಉದ್ಯುಕ್ತರಾದರು ಆ ಸಮಯದಲ್ಲಿ ಅಲ್ಲಿಗೆ ಎಲ್ಲಿಂದಲೋ ಒಂದು ಬುಸುಗುಟ್ಟುವ ಭಯಂಕರವಾದ ಕಾಳಿಂಗ ಸರ್ಪವು ಸರ್ರನೆ ಬರಲು ಅವರು ದೂರದಿಂದಲೇ ಕಂಡು ಹೆದರಿ ತಮ್ಮ ಸಾವiಗ್ರಿಗಳನ್ನು ಅಲ್ಲಿಯೇ ಬಿಟ್ಟು ಓಡಿಹೋದರು. ಈ ವನದುರ್ಗೆಯ ಪ್ರಭಾವ ಶಕ್ತಿಯನ್ನು ಕಣ್ಣಾರೆ ನೋಡಿ ತಿಳಿದು ಪ್ರಧಾನಾಧಿಕಾರಿಗಳು ದೇವಸ್ಥಾನದ ಪರಿಸರದ ಹತ್ತು ಎಕರೆ ಸ್ಥಳಕ್ಕೆ ದೇವರಕಾಡು ಎಂದು ಹೆಸರಿಟ್ಟು ಇದನ್ನು ಸುರಕ್ಷಿತ ಪ್ರದೇಶವೆಂದು ಅರಣ್ಯ  ಖಾತೆಯ ಪುಸ್ತಕದಲ್ಲಿ ಬರೆದಿಟ್ಟರು. ಈ ಪೂರ್ವ ಸತ್ಯ ಘಟನೆ ದುರ್ಗಾಪರಮೇಶ್ವರಿಯ ಮಹಿಮಾ ವಿಶೇಷವನ್ನು ಜಗತ್ತಿಗೆ ಸಾರುವಂತಿದೆ.
ಆದುದರಿಂದ ಧರ್ಮನಿಷ್ಠ ಸಜ್ಜನರ ನೈಜ ಭಕ್ತಿಗೆ ಒಲಿದು ಸಮಸ್ತ ರೋಗಗಳನ್ನು ನಿವಾರಿಸುವ ಸಮಗ್ರ ಪಾಪವನ್ನು ಪರಿಹರಿಸುವ ಸರ್ವಾಭೀಪ್ಸಿತಸಿದ್ಧಿಯನ್ನು ಕರುಣಿಸುವ ದುರ್ಗಾಪರಮೇಶ್ವರಿಯ ನಿವಾಸ ಸ್ಥಾನವಾದ ಮೊಂಟೆತಡ್ಕ ಪ್ರದೇಶವನ್ನು ಪುರಾತನ ಪವಿತ್ರ ಕ್ಷೇತ್ರವೆಂದು ವರ್ಣಿಸಿದರೆ ಅತಿಶಯೋಕ್ತಿಯಾಗದು.
ಶಿಬಾಜೆ ಗ್ರಾಮದ ಅಮ್ಮಾಜೆಯಲ್ಲಿ ಇನ್ನೊಂದು ದುರ್ಗಾಪರಮೇಶ್ವರಿ ದೇವಾಲಯವೂ ಕಲಪ್ಪಾರು ಎಂಬಲ್ಲಿ ಸುಬ್ರಹ್ಮಣ್ಯ ದೇವಸ್ಥಾನವೂ ಶೀರಾಡಿ ಭೂತ ಇತ್ಯಾದಿ ಅನೇಕ ದೈವಗಳ ಭೂತಾಲಯವೂ ರಾಜಿಸುತ್ತದೆ. ಹತ್ಯಡ್ಕ ಗ್ರಾಮದ ಬೂಡು ಮುಗೇರು ಪ್ರದೇಶದಲ್ಲಿ ಮತ್ತೊಂದು ದುರ್ಗಾಪರಮೇಶ್ವರಿ ದೇವಾಗಾರವೂ ಶೋಭಿಸುತ್ತಿದೆ. ಶೆಬಾಜೆ ನೆರೆಯ ಶಿಶಿಲ ಗ್ರಾಮದಲ್ಲಿ ಬಹಳ ಪ್ರಸಿದ್ಧವಾದ ಶಿಶಿಲೇಶ್ವರ ದೇವಾಲಯವು ಕಪಿಲಾ ನಡಿ ತೀರದಲ್ಲಿ ವಿರಾಜಿಸುತ್ತಿದೆ. ಈ ಕಪಿಲಾ ತರಂಗಿಣಿಯ ಮತ್ಸ್ಯ ತೀರ್ಥಹ್ರದದಲ್ಲಿಯೂ ಮೀನ ಗುಂಡಿಯಲ್ಲಿಯೂ ನೆಲಸಿ ನಲಿದಾಡುವ ಮಹಾಶೇರ್ಷ ಮೀನುಗಳು ಪ್ರೇಕ್ಷಕರ ಮನಸ್ಸನ್ನು ಆಕರ್ಷಿಸುತ್ತಿದೆ. ವಿಶಾಲವಾದ ಶಿಶಿಲ ಸೀಮೆಯ ಈ ಪ್ರಧಾನ ಶಿವಾಲಯಕ್ಕೆ ಶಿಶೀಲ ಗ್ರಾಮ ನಿವಾಸಿಗಳೂ ದೂರದ ಊರುಗಳ ಅನೇಕ ಪ್ರವಾಸಿಗಳೂ ಆಗಮಿಸಿ ಮತ್ಸ್ಯ ಸಮೂಹಕ್ಕೆ ಅಕ್ಕಿಯನ್ನು ಅರ್ಪಿಸಿ ಶಿಶಿಲೇಶ್ವರ, ಗಣಪತಿ, ದುರ್ಗಾ ದೇವರಿಗೆ ಪೂಜಾ ಸೇವೆಯನ್ನು ಅರ್ಚಕರಿಂದ ಮಾಡಿಸಿ ಮರಳುವರು.
          ಹೀಗೆ ಮಲೆನಾಡಿನ ನಿಸರ್ಗ ಸೌಂದರ್ಯ ವೈಭವದಿಂದ ಕಣ್ಣೆಸೆವ ಈ ಮೂರು ನೆರೆಕರೆಯ ಗ್ರಾಮಗಳಲ್ಲಿ ನೆಲೆಗೊಂಡಿರುವ ಶಿಶಿಲೇಶ್ವರ, ಗಣಪತಿ, ದುರ್ಗಾಸುಬ್ರಹ್ಮಣ್ಯ ದೇವಾಲಯಗಳನ್ನು ಸಂದರ್ಶಿಸುವ ಯಾತ್ರಿಕರಿಗೆ ಅಪರಿಮಿತಾಹ್ಲಾದವೂ ದೇವಾನುಗ್ರಹವೂ ಒದಗುವುದರಲ್ಲಿ ಸಂದೇಹವಿಲ್ಲ.
ಲೇಖಕ : ಕ.ಪು. ಸೀತಾರಾಮ ಕೆದಿಲ್ಲಾಯ, ಶಿಶಿಲ ಎಸ್.ಮಹಾದೇವ ಭಟ್, ಭಂಡಿಹೊಳೆ