ಕೆಳದಿಯನ್ನು ಆಳಿದ ಪ್ರಮುಖ ಅರಸರು

ಕೆಳದಿಯನ್ನು ಆಳಿದ ಪ್ರಮುಖ ಅರಸರು:

                   ಚೌಡಪ್ಪನಾಯಕನ ನಂತರ ಅವನ ಮಗ ಸದಾಶಿವ ನಾಯಕನು ದೊರೆಯಾದನು. ಇವನು ಕೆಳದಿಯಿಂದ ಇಕ್ಕೇರಿಗೆ ರಾಜಧಾನಿ ಬದಲಾಯಿಸಿದನು. ಈತನೇ ಕೆಳದಿ ಸಂಸ್ಥಾನಕ್ಕೆ ಭದ್ರಬುನಾದಿಯನ್ನು ಕಲ್ಪಿಸಿ ಕೊಟ್ಟನು. ಇವನ ನಂತರ ಬಂದ ದೊಡ್ಡಸಂಕಣ್ಣನಾಯಕ, ಚಿಕ್ಕಸಂಕಣ್ಣನಾಯಕ, ರಾಮರಾಜನಾಯಕರು ಆಡಳಿತ ನಡೆಸಿದರು. ಕ್ರಿ.ಶ. 1565ರಲ್ಲಿ ವಿಜಯನಗರದ ಅವನತಿಯ ನಂತರ ಭಾರತೀಯ ಸಂಸ್ಕೃತಿಯ ಸಂರಕ್ಷಣೆಯತ್ತ ತಮ್ಮನ್ನು ತೊಡಗಿಸಿ ಕೊಂಡವರಲ್ಲಿ ಕೆಳದಿ ಅರಸರು ಪ್ರಮುಖರಾಗುತ್ತಾರೆ. ಇದನ್ನು ದೊಡ್ಡಸಂಕಣ್ಣನಾಯಕನ ಕಾಲದಲ್ಲಿ ಗಮನಿಸಬಹುದು. ದೊಡ್ಡ ಸಂಕಣ್ಣನಾಯಕನು ರಾಜ ವೈಭೋಗವನ್ನು ತ್ಯಜಿಸಿ ಅತೀ ಸರಳ ಉಡುಪು, ವಿಭೂತಿ, ರುದ್ರಾಕ್ಷಿ ಮಾಲೆಗಳನ್ನು ಧರಿಸಿಕೊಂಡು ಧಾರ್ಮಿಕ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಒಬ್ಬ ಜಂಗಮನಂತೆ ಜೀವನ ನಡೆಸಿದನು. ಅಧಿಕಾರವನ್ನು ತಮ್ಮ ಚಿಕ್ಕಸಂಕಣ್ಣನಾಯಕನಿಗೆ ಕೊಟ್ಟು ತಾನು ತೀರ್ಥಯಾತ್ರೆ ಮಾಡಿದನು. ಇದನ್ನು ಕೆಳದಿ ನೃಪವಿಜಯ ಮತ್ತು ಶಿವತತ್ವ ರತ್ನಾಕರಗಳು ಉಲ್ಲೇಖಿಸುತ್ತವೆ. ಅವನ ತೀರ್ಥಯಾತ್ರೆಯ ಘಟನೆಯು ಮಹತ್ವದ್ದಾಗಿದೆ. ಇಂದಿಗೂ ಉತ್ತರ ಭಾರತದಲ್ಲಿ ಇರುವ ಅವಶೇಷಗಳು ಇದನ್ನು ತಿಳಿಸುತ್ತದೆ. 

                  ಇವನು ಕೆಳದಿಯಿಂದ ದಕ್ಷಿಣಕ್ಕೆ ಹೊರಟು ಶಿವಗಂಗೆ, ಕಂಚಿ, ಚಿದಂಬರಂ, ಕುಂಭಕೋಣ, ರಾಮೇಶ್ವರಗಳನ್ನು ಸಂದರ್ಶಿಸಿ ಅಲ್ಲಿಂದ ಉತ್ತರದ ಕಡೆಗೆ ಯಾತ್ರೆ ಮುಂದುವರೆಸಿದನು. ಹಾಗೆ ಬಿಜಾಪುರ ಹೈದರಾಬಾದ್ (ಭಾಗ್ಯನಗರ) ಹಾದು ದೆಹಲಿಗೆ ಪ್ರವೇಶಿಸಿದ್ದನು. ಅವನು ದೆಹಲಿಗೆ ಹೋದ ಸಂದರ್ಭದಲ್ಲಿ ಅಂದರೆ ಕ್ರಿ.ಶ. 1556-1605ರಲ್ಲಿ ಉದಾರ ಮನೋಭಾವದ ಅಕ್ಬರನು ಆಡಳಿತ ನಡೆಸುತ್ತಿದ್ದನು. ಅವನ ಆಸ್ಥಾನದಲ್ಲಿದ್ದ ಅಂಕುಶಖಾನ ಎಂಬುವವನನ್ನು ತನ್ನ ಖಡ್ಗ ಯುದ್ಧ ಕೌಶಲ್ಯದಿಂದ ಇವನು ಸೋಲಿಸುವುದರ ಮೂಲಕ ಅಕ್ಬರನ ಮೆಚ್ಚಿಗೆಯನ್ನು ಪಡೆದುದಲ್ಲದೆ ಎಲ್ಲಾ ಧರ್ಮವನ್ನು ಸಮಾನತೆಯಿಂದ ಕಾಣುತ್ತಿದ್ದ ಅಕ್ಬರನಿಂದ (ಕ್ರಿ.ಶ.1567-1570) ಅವರ ವಶದಲ್ಲಿದ್ದ ಕಾಶಿ ವಿಶ್ವನಾಥ ದೇವರ ಪೂಜೆಗೆ ಮತ್ತು ಉತ್ತರದಲ್ಲಿ ಜಂಗಮ ಮಠಗಳ ಸ್ಥಾಪನೆಗೆ ಅನುಮತಿಯನ್ನು ಪಡೆದು ಕೊಂಡನು. ಅಕ್ಬರನು ತನ್ನ ಅಧೀನ ಅಧಿಕಾರಿಗಳಿಗೆ ದೊಡ್ಡ ಸಂಕಣ್ಣನಾಯಕನ ಬರುವಿಕೆಯನ್ನು ತಿಳಿಸಿ ಇವನಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ನಿರೂಪ ಕಳಿಸಿದನು. ಅಲ್ಲದೆ ಇವನಿಗೆ ಬಿರುದು ಬಾವಲಿಗಳನಿತ್ತು ಹನ್ನೆರಡು ಸಾವಿರ ಹೊನ್ನನ್ನು ಕೊಟ್ಟು ಗೌರವಿಸಿದನು. ಈ ಘಟನೆ ಉತ್ತರ ಭಾರತದ ಇತಿಹಾಸ ಪುಟಗಳಲ್ಲಿ ಹೆಚ್ಚಿನ ಮಹತ್ವ ಪಡೆದಿಲ್ಲ. ಆ ಕಾಲದ ದಾಖಲೆಗಳ ಸಂಶೋಧನೆ ಈ ನಿಟ್ಟಿನಲ್ಲಿ ಆಗಬೇಕಿದೆ.

                   ಹೀಗೆ ಈ ದೊಡ್ಡ ಸಂಕಣ್ಣನಾಯಕನು ಅಧಿಕಾರಿಗಳ ಅನುಮತಿ ಪಡೆದು ಕಾಶಿಯಲ್ಲಿ ಭಗ್ನವಿಶ್ವನಾಥನಿಗೆ ಪೂಜೆ ಸಲ್ಲಿಸಿ, ಅಲ್ಲಿದ್ದ ಮೂಲ ವಿಶ್ವನಾಥನ ಲಿಂಗ ಮತ್ತು ಅದರ ಮೇಲುಭಾಗದ ಗೋಳಕವನ್ನು ಆಗ ಆ ದೇವಾಲಯದ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದ ಮುಸಲ್ಮಾನ ಅಧಿಕಾರಿಗಳಿಗೆ ತಿಳಿಸುವುದರ ಮೂಲಕ ತಾನು ಪಡೆದುಕೊಂಡನೆಂದು ಕೆಳದಿ ನೃಪ ವಿಜಯ ತಿಳಿಸುತ್ತದೆ. ಇದು ಇವನು ಕೆಳದಿಯಿಂದ ತೀರ್ಥಯಾತ್ರೆ ಹೊರಡುವ ಸಂದರ್ಭದಲ್ಲಿ ಹಂಪಿಹತ್ತಿ ಉರಿಯುತ್ತಿದ್ದುದನ್ನು ಗಮನಿಸಿದ್ದ ಅವನ ಆಗಿನ ಮನಸ್ಥಿತಿಯನ್ನು ಅರಿಯಲು ಸಹಕಾರಿಯಾಗಿದೆ. ಅಲ್ಲಿ ಪೂಜಾ ಮಂದಿರಗಳು ನಾಶವಾಗುತ್ತಿದ್ದುದನ್ನು ನೋಡಿದ್ದನು. ಇವನ ನಂತರ ಸುಮಾರು ಹದಿನೈದು ವರ್ಷಗಳ ಮೇಲೆ ಅಕ್ಬರನ ಹತ್ತಿರ ಅಧಿಕಾರಿಯಾಗಿದ್ದ ಹಿಂದೂ ತೋದರಮಲ್ಲನು ಕ್ರಿ.ಶ. 1585ರಲ್ಲಿ ಈ ದೊಡ್ಡ ಸಂಕಣ್ಣನಾಯಕನ ಭಕ್ತಿ ಮತ್ತು ನಿಷ್ಠೆಯಿಂದ ಪ್ರಚೋದಿತನಾಗಿ ಈಗಿನ ವಿಶ್ವನಾಥ ದೇವಾಲಯವನ್ನು ಪುನ: ನಿರ್ಮಾಣಮಾಡಿಸಿದನು. ಅಲ್ಲದೆ ಕಾಶಿಯಲ್ಲಿ ಹಿಂದೆ ಶಿಲವಂತ ಎಂಬ ನಾಯಕನು ಕಾಶಿ ದೊರೆಯನ್ನು ಮೆಚ್ಚಿಸುವುದರ ಮೂಲಕ ಆಗಿನ ಹರಿ ಕೇಶವಾನಂದ ಕಾನನ ಎಂಬಲ್ಲಿ ಮಠವೊಂದನ್ನು ಕಟ್ಟಿಸಿದ್ದನೆಂದು ಒಂದು ಐತಿಹ್ಯವಿದೆ. ಈ ಮಠವು ಮುಂದೆ ಮುಸಲ್ಮಾನ ದೊರೆಗಳ ವಶಕ್ಕೆ ಹೋಗಿತ್ತು. ದೊಡ್ಡಸಂಕಣ್ಣನಾಯಕನು ತನ್ನ ಕಾಶಿ ಪ್ರವಾಸದ ಸಂದರ್ಭದಲ್ಲಿ ಈ ಮಠವನ್ನು ಮುಸಲ್ಮಾನರಿಂದ ಬಿಡಿಸಿಕೊಂಡು ಅಲ್ಲಿ ಜಂಗಮವಾಡಿ ಎಂಬದಾಗಿ ಹೆಸರಿಸಿ ಅಲ್ಲಿ ಪಂಚ ಮಠಗಳನ್ನು ಕಟ್ಟಿ ಅದನ್ನು ಶಿವ ಜಂಗಮರಿಗೆ ಅರ್ಪಿಸಿದನು. ಅದೇ ವೇಳೆಯಲ್ಲಿ ಕಾಶಿಯಲ್ಲಿದ್ದ ಕಪಿಲಧಾರಾ, ಮಾನಸ ಸರೋವರ, ಗಂಧರ್ವಸಾಗರ ಎಂಬ ಗಂಗೆಯ ತೀರ್ಥಗಳನ್ನು ನಿರ್ಮಿಸಿದ್ದಲ್ಲದೆ ಕರ್ದಮೇಶ್ವರ, ನರ್ಮದೇಶ್ವರ, ಭೀಮಚಂಡಿಕೆ, ವೃಷಭ ಧ್ವಜೇಶ್ವರ ದೇವಾಲಯಗಳನ್ನು ತನ್ನ ಮಗ ವೆಂಕಟಪ್ಪನಾಯಕನ ಹೆಸರಿನಲ್ಲಿ ಜೀರ್ಣೋದ್ದಾರ ಮಾಡಿಸಿದನು. ಇಂದೂ ಸಹ ಕಪಿಲಧಾರ ತೀರ್ಥದ ಮೆಟ್ಟಿಲ ಮೇಲೆ ಈ ಕುರಿತ ಶಾಸನಗಳಿವೆ. ಅಲ್ಲಿಂದ ಹೊರಟು ಮುಂದೆ ದೆಹಲಿಯ ಚಾವಲಿಕೆ ಮುಂದೈ (ಅಕ್ಕಿ ಪೇಟೆ) ಎಂಬಲ್ಲಿ ಜಂಗಮ ಮಠವನ್ನು ನಿರ್ಮಿಸಿದನು. ಇದು ದೆಹಲಿಯ ರೈಲು ನಿಲ್ದಾಣದ ಬಲಭಾಗಕ್ಕೆ ಇದೆ ಎಂದೂ, ಅಲ್ಲಿ ಈಗಲೂ ಜಂಗಮ ಮಠದ ಜಾಗ ಎಂದು ಅದನ್ನು ಗುರುತಿಸಲಾಗುತ್ತದ ಇದರ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಇಲ್ಲಿಂದ ಹೊರಟ ಈ ಸಂಕಣ್ಣನಾಯಕನು ಮುಂದೆ ಪ್ರಯಾಗಕೆ ಹೋಗಿ ಅಲ್ಲಿ ಒಂದು ಜಂಗಮ ಮಠವನ್ನು ನಿರ್ಮಿಸಿದನು. ಮುಂದೆ ಇವನು ಕಾಶಿಯ ವಿಶ್ವನಾಥನ ಲಿಂಗದೊಡನೆ0iÉುೀ ಗ0iÉುಗೆ ಹೋಗಿದ್ದಲ್ಲದೆ ಅಲ್ಲಿ ಒಂದು ಮಠವನ್ನು ಕಟ್ಟಿಸಿದನು. ಅನಂತರ ಅವನು ನೇಪಾಳಕ್ಕೆ ಹೋಗಿ ಅಲ್ಲೊಂದು ಮಠವನ್ನು ನಿರ್ಮಿಸಿದನು. ಇದು ಇಂದು ನೇಪಾಳದ ರಾಜಧಾನಿ ಕಠಮಂಡು ಹತ್ತಿರವಿರುವ ಭಕ್ತಪುರ ಎಂಬಲ್ಲಿದೆ. ಈ ಮಠ ಮರದಲ್ಲಿ ಸುಂದರವಾಗಿ ನಿರ್ಮಾಣವಾಗಿದೆ. ಈ ಮಠದ ಆವರಣದಲ್ಲಿ ಒಂದು ಸುಂದರವಾದ ದೇವಾಲಯವಿದ್ದು ಅಲ್ಲಿ ಕಾಶಿಯಿಂದ ತಂದ  ವಿಶ್ವನಾಥನ ಶಿವಲಿಂಗವನ್ನು ಸ್ಥಾಪಿಸಿದನು. ಈ ಪ್ರಾಂತ್ಯದಲ್ಲಿ ಇರುವ ಐತಿಹ್ಯದ ಪ್ರಕಾರ ಮುಸ್ಲಿಮರಿಂದ ನಾಶವಾದ ವಿಶ್ವನಾಥನ ಲಿಂಗವನ್ನು ಜಂಗಮನೊಬ್ಬನು ತಂದು ಇಲ್ಲಿ ಸ್ಥಾಪಿಸಿದನೆಂದು ಹೇಳುತ್ತದೆ. ಇದು ಉತ್ತರ ಕಾಶಿ ಎಂದೂ, ಕಾಶಿಯ ಮೂಲ ವಿಶ್ವನಾಥ ನಮ್ಮಲ್ಲಿದ್ದಾನೆಂದೂ ಇಲ್ಲಿಯವರು ಹೆಮ್ಮೆ ಪಡುತ್ತಾರೆ. ಈ ಜಂಗಮ ಬೇರಾರೂ ಅಗಿರದೆ ಜಂಗಮನಂತಿದ್ದ ದೊಡ್ಡಸಂಕಣ್ಣನಾಯಕನೇ ಎಂದು ಹೇಳಬಹುದು. ಈ ಭಕ್ತಪುರದಲ್ಲಿ ಜಂಗಮ ಮಠವು ಈಗಲೂ ಇದ್ದು ವೀರಶೈವ ಜಂಗಮರ ಅಧೀನದಲ್ಲಿರುವುದಾಗಿಯೂ, ಅಲ್ಲಿಯ ಯಾವುದೆ ಧಾರ್ಮಿಕ ಉತ್ಸವಗಳ ಮೂಲ ಕೇಂದ್ರ ಇದಾಗಿರುವುದಾಗಿಯೂ ತಿಳಿದುಬರುತ್ತದೆ. ಅಲ್ಲಿಯ ಮಠದ ಜಂಗಮರು ತಮ್ಮ ಹೆಸರಿನ ಮುಂದೆ ಜಂಗಂ ಎಂದು ಸೇರಿಸಿಕೊಳ್ಳುವುದು ಇಂದೂ ರೂಢಿಯಲ್ಲಿದೆ. ಈ ಮಠದ ಹಲವು ಶಾಖಾ ಮಠಗಳೂ ಇವೆ. ಕನ್ನಡದ ಎರಡು ಶಾಸನ ಇಲ್ಲಿದೆ.

                    ಮುಂದೆ ಈ ದೊಡ್ಡ ಸಂಕಣ್ಣನಾಯಕನು ನೇಪಾಳದಿಂದ ಹಿಮ ಪ್ರದೇಶವಾದ ಕೇದಾರಕ್ಕೆ ಹೋಗಿ ಅಲ್ಲಿಯೂ ಒಂದು ಜಂಗಮ ಮಠವನ್ನು ಕಟ್ಟಿಸಿದನು. ಇಂದೂ ಆ ಪ್ರದೇಶದಲ್ಲಿ ಜಂಗಮ ಮಠ ಇದೆ. ಅಲ್ಲಿಂದ ಮುಂದೆ ಹರಿದ್ವಾರ, ಕಾಶ್ಮೀರ, ಕುರುಕ್ಷೇತ್ರ, ಹಂಪಿಗಳ ಮೂಲಕ ಇವನು ಕೆಳದಿಗೆ ಹಿಂದಿರುಗಿದನು. ದಕ್ಷಿಣ ಭಾರತದ ಇತಿಹಾಸದಲ್ಲಿ ದೊಡ್ಡ ಸಂಕಣ್ಣನಾಯಕನ ಈ ತೀರ್ಥಯಾತ್ರೆ ಉಲ್ಲೇಖಾರ್ಹವಾಗಿದೆ.

                   ಇವನ ನಂತರ ಬಂದ ರಾಮರಾಜನಾಯಕನು ಬೆಂಗಳೂರಿನ ಅಣ್ಣಮ್ಮ ದೇವಸ್ಥಾನದ ಮುಂದುಗಡೆ ಧ್ವಜಸ್ಥಂಭವನ್ನು ನೆನಪಿಗಾಗಿ ನಿರ್ಮಿಸಿದನೆಂದು ಐತಿಹ್ಯವೊಂದು ಹೇಳುತ್ತದೆ. ಅಲ್ಲದೆ ಆ ಪ್ರದೇಶವನ್ನು ಮತ್ತು ಯಶವಂತ ಪುರದ ಹತ್ತಿರ ಕೆಲ ಪ್ರದೇಶವನ್ನು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯಲ್ಲಿದ್ದ ರಾಮಲಿಂಗೇಶ್ವರ ಮಠಕ್ಕೆ ಬಿಟ್ಟಿದ್ದನೆಂದು ಐತಿಹ್ಯ ತಿಳಿಸುತ್ತದೆ. ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ. 7ನೇ ದೊರೆ ವೀರಭದ್ರನಾಯಕನ (ಕ್ರ್ರಿ.ಶ.1629- 1640) ಕಾಲದಲ್ಲಿ ವಿಜಾಪುರದ ಅದಿಲ್‍ಷಾಹಿ ಸುಲ್ತಾನನ ದಂಡನಾಯಕ ರಣದುಲ್ಲಾಖಾನನ ದಾಳಿಗೆ ಈಡಾಗಿ 1638ರಲ್ಲಿ ರಾಜಧಾನಿ ಇಕ್ಕೇರಿಯು ಹಾಳಾಯಿತು. ಇದರಿಂದಾಗಿ ರಾಜಧಾನಿಯು ಆ ಮರು ವರ್ಷವೇ ಬಿದನೂರಿಗೆ ವರ್ಗಾಯಿಸಲ್ಪಟ್ಟಿತು. ವೇಣುಪುರ ಎಂದು ಕರೆಯಲ್ಪಡುತ್ತಿದ್ದ ಇಂದಿನ ಈ ನಗರವನ್ನು ದಕ್ಷಿಣ ಭಾರತದ ಕಣಜವೆಂದು ಜಾಕೋಬಸ್ ಕ್ಯಾಂಟರ್ ವಿಚರನು ವರ್ಣಿಸಿದ್ದಾನೆ. ವೇಣುಪುರವಾಗಿದ್ದ ನಗರ ಕೆಳದಿ ಅರಸರಿಂದ ಕನ್ನಡೀಕರಿಸಲ್ಪಟ್ಟು ಬಿದನೂರು-ಬಿದರೂರಾಯಿತು.

                   ಕೆಳದಿ ರಾಜವಂಶದಲ್ಲಿ ದಕ್ಷ ಮತ್ತು ಚಾಣಾಕ್ಷ ದೊರೆ ಎಂದು ಹೆಸರಾದವನು ಕೆಳದಿ ಶಿವಪ್ಪನಾಯಕ. ಶಿವಪ್ಪನಾಯಕನ ಸಿಸ್ತು’ ನಾಡಿನಾದ್ಯಂತ ಮನೆ ಮಾತಾಗಿ ಉಳಿದಿದೆ. ಕೆಳದಿ ರಾಜ್ಯದಲ್ಲಿ ಸಾಗುವಳಿ ಭೂಮಿಯನ್ನು ಗುಣ ಮಟ್ಟದ ಮೇಲೆ ಉತ್ತಮ, ಮಧ್ಯಮ, ಕನಿಷ್ಟ, ಅಧಮ ಹಾಗೂ ಅಧಮಾಧಮ ಎಂದು ಐದು ತರಹದ ಭೂಮಿ ವಿಂಗಡಣೆಯನ್ನು ಈ ರಾಜನು ಮಾಡಿಸಿದನು. ಇಂತಹ ಭೂಮಿಯನ್ನು ಹಳ್ಳಿಗಳಲ್ಲಿ ಗುರುತಿಸಿ ಪ್ರತಿ ತರಗತಿಯ ಭೂಮಿಯನ್ನು ಆರಿಸಿ ಸರ್ಕಾರದಿಂದ ಐದು ವರ್ಷ ಸಾಗುವಳಿ ಮಾಡಿಸಿದ್ದಲ್ಲದೆ ಈ ಐದು ವರ್ಷಗಳ ಸರಾಸರಿ ಉತ್ಪನ್ನದ ಆಧಾರದ ಮೇಲೆ ಆಯಾಯ ತರಗತಿಯ ಭೂಮಿಗೆ ಅನುಗುಣವಾಗಿ ಮೂರನೆಯ ಒಂದಂಶದ ಕಂದಾಯವು ನಿಗಿಧಿ ಗೊಳಿಸಿದನು. ಅಡಿಕೆ ಭಾಗಾಯಿತು ಜಮೀನುಗಳಲ್ಲಿ ಒಂದು ಸಾವಿರ ಅಡಿಕೆ ಮರಗಳ ಮಾಪನವಿಟ್ಟುಕೊಂಡು ಪ್ರತಿಯೊಂದು ಮರವೂ ಸುಮಾರು ಐದೂವರೆ ಮೀ.ಅಂತರದಲ್ಲಿ ಇರಬೇಕೆಂದು ಕಟ್ಟು ಮಾಡಿ ಕಂದಾಯವನ್ನು ನಿಗದಿ ಮಾಡಿದನು. ಉದ್ಯಾನಗಳಲ್ಲಿ ಬೆಳೆಯುವ ಬೆಳೆಗಳ ಬಗ್ಗೆಯೂ ಗಮನ ಹರಿಸಿ ಅದಕ್ಕೆ ಕಂದಾಯ ನಿಗದಿ ಮಾಡಿದನು. ಇದನ್ನು ’ಸಿಸ್ತು, ‘ಶಿವಪ್ಪನ ಸಿಸ್ತು‘ಎಂದು ಕರೆಯಲಾಯಿತು. ಕ್ರಿ.ಶ.1700ರವರೆಗೆ ಇದೇ ವ್ಯವಸ್ಥೆಯು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಜಾರಿಯಲ್ಲಿದ್ದಿತು. ಬ್ರಿಟಿಷ್ ಅಧಿಕಾರಿಗಳೂ ಸಹ ಕೆಳದಿ ಕಾಲದ ಕಂದಾಯ ವ್ಯವಸ್ಥೆಯನ್ನು ಬಹುವಾಗಿ ಕೊಂಡಾಡಿದ್ದಾರೆ. (ಮೆಮೋರಂಡಮ್ ಆನ್ ದಿ ಸೇಯರ್ ಸಿಸ್ಟಂ ಇನ್ ಮೈಸೂರು-ಪುಟ 9 ನೋಡಿರಿ) ಶಿವಪ್ಪನಾಯಕನು ಶಿಸ್ತು ಪಾಲಿಸುವುದಲ್ಲಿಯೂ ಹೆಸರಾಗಿದ್ದನು. ಕೊಲ್ಲೂರು ಮೂಕಾಂಬಿಕಾದೇವಿ ಕುರಿತು ಶಿವಪ್ಪನಾಯಕನ ಕಾಲದಲ್ಲಿ ಇದ್ದ ಕಥೆಯು ಆ ಶಿಸ್ತಿಗೆ ಉದಾಹರಣೆಯಾಗಿದೆ. ಅವನು ತುಂಗಾ ತೀರದಲ್ಲಿ ಶಿವರಾಜಪುರ ಅಗ್ರಹಾರವನ್ನು ಸ್ಥಾಪಿಸಿ ಶ್ರೋತ್ರಿಯ ವೃತ್ತಿ ದಯಪಾಲಿಸಿದನು. ಕಾಶಿಯಿಂದ ರಾಮೇಶ್ವರದವರೆಗೆ ಕೆಲವೆಡೆ ಶೈವ, ವೈಷ್ಣವ ದೇವಾಲಯಗಳಲ್ಲಿ ದಾನ, ಧರ್ಮ, ಪೂಜಾದಿಗಳನ್ನು ಸರಿಯಾಗಿ ನಡೆಯುವಂತೆ ಅನುಕೂಲ ಕಲ್ಪಿಸಿದನು. ಕಾಶಿಯ ಕಪಿಲಧಾರಾ ತೀರ್ಥವನ್ನು ಜೀರ್ಣೋದ್ಧಾರ ಮಾಡಿದನು. ಶೃಂಗೇರಿ ಮತ್ತು ಇತರ ಮಠಗಳಲ್ಲಿ ಈ ಹಿಂದಿನಿಂದ ಬಂದಂತಹ ರಾಜಾಶ್ರಯವನ್ನು ಮುಂದುವರಿಸಿದನು. ಕ್ರೈಸ್ತರಿಗೆ ಉಪದೇಶ ಮಾಡುವ, ಭಾರತೀಯರೇ ಚರ್ಚಿನ ಅಧಿಕಾರಿಗಳಾಗಿರಬೇಕೆಂಬ ಕಟ್ಟಪ್ಪಣೆ ಇವನ ಕಾಲದಲ್ಲಿತ್ತು. ಗೃಹಗಳಲ್ಲಿ ನಡೆಸುವ ಗುಡಿಗಾರಿಕೆಯಲ್ಲಿ ಪ್ರಾವೀಣ್ಯತೆ ಪಡೆಯಲು ಜನಗಳಿಗೆ ಪ್ರೋತ್ಸಾಹ ನೀಡಿದನು. ಕೆಳದಿ ರಾಜ್ಯವನ್ನು ವಾಣಿಜ್ಯ ಕೇಂದ್ರವನ್ನಾಗಿ ಮಾಡುವುದು ಇವನ ಗುರಿಯಾಗಿದ್ದಿತು. ಕಾವೇರಿ ನದಿಗೆ ಸೇತುವೆ ನಿರ್ಮಾಣವೇ ಮೊದಲಾದ ಹತ್ತು ಹಲವು ಸಾಮಾಜಿಕ ಕೆಲಸಗಳು ಇವನ ಕಾಲದಲ್ಲಿ ನಡೆಯಿತು.

                    ಭಾರತೀಯ ಇತಿಹಾಸದಲ್ಲಿ ಕೆಚ್ಚೆದೆಗೆ, ಶೌರ್ಯಕ್ಕೆ ಹೆಸರಾಗಿರುವ ಕೆಲವೇ ರಾಣಿಯರಲ್ಲಿ ಕೆಳದಿಯ ರಾಣಿ ಚನ್ನಮ್ಮಾಜಿಯೂ ಒಬ್ಬಳು. ಕೋಟಿಪುರದ ಸಿದ್ದಪ್ಪ ಶೆಟ್ಟರ ಮಗಳಾದ ಇವಳು ಸೋಮಶೇಖರನಾಯಕನ ಹೆಂಡತಿ. ಶಿವಪ್ಪನಾಯಕನ ಸೊಸೆ. ತನ್ನ ಪತಿಯಿಂದ ರಾಜ್ಯಾಡಳಿತದ ಅನುಭವವನ್ನು ಪಡೆದಿದ್ದಳು. ರಾಜ್ಯದ ಆಸೆಗಾಗಿ ಶತ್ರುಗಳಿಂದ ಸೋಮಶೇಖರನಾಯಕನ ಕೊಲೆಯಾದ ನಂತರ ರಾಜ್ಯವು ದುಃಸ್ಥಿತಿಗೆ ಒಳಗಾಗುವ ಸಂದರ್ಭ ಒದಗಿ ಬಂದಾಗ ಅಕಸ್ಮಿಕ ಪರಿಸ್ಥಿತಿಗೆ ಒಳಗಾಗಿ ತನ್ನ ಪತಿಯ ನಿಧನದ ದುಃಖದ ಸಂದರ್ಭದಲ್ಲಿಯೂ ಧೈರ್ಯಗೆಡದೆ ತನ್ನ ಐದು ಜನ ಅತ್ತೆಯರು ಸಹಗಮನ ಮಾಡಿದ್ದರೂ ತಾನೂ ಅದೇ ಕೆಲಸ ಮಾಡದೆ ದೈರ್ಯದಿಂದ ಕೆಳದಿ ರಾಜ್ಯದ ಅಧಿಕಾರವನ್ನು ವಹಿಸಿಕೊಂಡು ಅಪ್ರತಿಮ ಧೈರ್ಯವನ್ನು ತೋರಿಸಿದ ವೀರ ಮಹಿಳೆ. ಆ ಸಂದರ್ಭದಲ್ಲಿಯೂ ಶತ್ರುಗಳು ರಾಜ್ಯದ ಆಸೆಗಾಗಿ ಕೊಲೆ ಮಾಡಿದವರನ್ನು ಸಮಯ ಪ್ರಜ್ಞೆಯಿಂದ ಶತ್ರುಗಳ ದುರಾಸೆಯನ್ನು ಮಣ್ಣಗೂಡಿಸಿ ಅವರನ್ನು ಕೊನೆಗಾಣಿಸಿದಳು. ಅನಂತರ ತನ್ನ ಬುದ್ಧಿವಂತಿಕೆಯಿಂದ ತನ್ನ ಸಂಬಂಧಿಕರ, ಹಿರಿಯ ಅಧಿಕಾರಿ ವರ್ಗದವರ ಆತ್ಮವಿಶ್ವಾಸವನ್ನು ಗಳಿಸಿದಳು. ಚನ್ನಮ್ಮಾಜಿಯ ಪಟ್ಟಾಭಿಷೇಕವು ಕವಲೇದುರ್ಗ (ಭುವನಗಿರಿದುರ್ಗ)ದ ಅರಮನೆಯಲ್ಲಿ ಜರುಗಿತು. ತನ್ನ ಮೇಲೆ ದಂಡೆತ್ತಿ ಬಂದಿದ್ದ ಸೋದೆ, ಬನವಾಸಿ, ಶಿರಸಿ, ಮೊದಲಾದ ಅರಸರನ್ನು, ಮೈಸೂರಿನ ದಳವಾಯಿ ಕುಮಾರಯ್ಯನನ್ನು ಸೋಲಿಸಿ ಕಡೂರು, ಬಾಣಾವರ, ಹಾಸನ, ಬೇಲೂರು ಮೊದಲಾದವುಗಳನ್ನು ವಶ ಪಡಿಸಿಕೊಂಡು ಕೆಳದಿ ರಾಜ್ಯದ ದಕ್ಷಿಣ ಗಡಿಯನ್ನು ಭದ್ರಪಡಿಸಿದಳು. ಬಸವಾಪಟ್ಟಣವನ್ನು ಗೆದ್ದುಕೊಂಡಳಲ್ಲದೆ ’ಹುಲಿಗೆರೆ’ ಕೋಟೆಯನ್ನು ತನ್ನದಾಗಿಸಿಕೊಂಡು ಅದಕ್ಕೆ ’ಚನ್ನಗಿರಿ ಕೋಟೆ’ ಎಂದು ಹೆಸರಿಸಿದಳು. ರಾಣಿ ಚನ್ನಮ್ಮಾಜಿಯ ಪ್ರಮುಖ ಸಾಧನೆಗಳಲ್ಲಿ ಮರಾಠ ದೊರೆ ಶಿವಾಜಿಯ ಮಗ ರಾಜಾರಾಮನನ್ನು ಮೊಗಲ್ ಚಕ್ರವರ್ತಿ ಔರಂಗಜೇಬನ ಉಪಟಳದಿಂದ ರಕ್ಷಿಸಿದುದು. ರಾಜಾರಾಮನು ಕೆಳದಿ ರಾಣಿ ಚೆನ್ನಮ್ಮಾಜಿಯಲ್ಲಿ ತನ್ನ ರಕ್ಷಣೆಗಾಗಿ ಮೊರೆಹೊಕ್ಕಾಗ ಅವನನ್ನು ರಕ್ಷಿಸುವುದಕ್ಕೋಸ್ಕರ (ಔರಂಗಜೇಬ)  ಮೊಗಲರ ದೊಡ್ಡ ಸೈನ್ಯವನ್ನು ಧೈರ್ಯದಿಂದ ಎದುರಿಸಿ ಸೋಲಿಸಿದುದು. ಮರಾಠ ಇತಿಹಾಸಕಾರರು ಈ ವಿಚಾರವನ್ನು ಮನಸಾರೆ ಶ್ಲಾಘಿಸಿದ್ದಾರೆ. ರಾಜಾರಾಮನು ತನಗೆ ದೊರೆತ ರಕ್ಷಣೆಯಿಂದಾಗಿ ಕೆಳದಿಯ ಮೂರನೇ ರಾಜಧಾನಿ ಬಿದನೂರಿನಲ್ಲಿ ಪಾರ್ವತಿ ದೇವಸ್ಥಾನವನ್ನು ನಿರ್ಮಿಸಿದನು. ಇದು ಈಗಲೂ ಅಲ್ಲಿದೆ. ಶೃಂಗೇರಿ ಮಠಕ್ಕೆ ರಾಜಾಶ್ರಯ ನೀಡಿದುದು, ಸೋಮಶೇಖರಪುರ ಎಂಬ ಅಗ್ರಹಾರ ನಿರ್ಮಾಣ, ರಾಜ್ಯದಲ್ಲಿ ಜಂಗಮ ಮಠಗಳ ನಿರ್ಮಾಣ, ಇದು ಮಾತ್ರವಲ್ಲದೆ ಇವಳು 1,96,000 ಜಂಗಮರಿಗೆ ದಾಸೋಹ ಮಾಡಿಸಿದಳು. ಕೊಲ್ಲೂರು ಮೂಕಾಂಬಿಕಾ ದೇವಿಗೆ ಪಚ್ಚೆಯ ಪದಕವನ್ನು ಕೊಟ್ಟಿದ್ದಳು. ಚೆನ್ನಮ್ಮಾಜಿಗೆ ಮಕ್ಕಳಿಲ್ಲದ್ದರಿಂದ ಬಸಪ್ಪನೆಂಬ ಹುಡುಗನನ್ನು ದತ್ತು ತೆಗೆದುಕೊಂಡು ಅವನಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಿದಳು. ಅವನೇ ಮುಂದೆ ಬಸವಭೂಪಾಲನೆಂದು ಪ್ರಖ್ಯಾತನಾಗಿ ’ಶಿವತತ್ವ ರತ್ನಾಕರವೆಂಬ ಬೃಹತ್ ಸಂಸ್ಕøತ ವಿಶ್ವಕೋಶ ರಚನೆ ಮಾಡಿದನು.

                     ಮಹಿಳೆಯೊಬ್ಬಳು 25 ವರ್ಷಕ್ಕೂ ಹೆಚ್ಚುಕಾಲ ಆಡಳಿತ ನಡೆಸಿದವರಲ್ಲಿ ಕೆಳದಿ ರಾಣಿ ಚನ್ನಮ್ಮಾಜಿ ಪ್ರಮುಖ ಸ್ಥಾನ ಪಡೆಯುತ್ತಾಳೆ. ಚೆನ್ನಮ್ಮಾಜಿಯು ತನ್ನ ಮಗನಿಗೆ ಮಾರ್ಗದರ್ಶನ ಮಾಡುತ್ತಾ ’ನುಡಿದದ್ದನ್ನು ಬದಲಿಸದಿರು, ಎಂದಿಗೂ ಕರ್ತವ್ಯಚ್ಯುತನಾಗದಿರು, ಸರ್ವದಾ ಮಧುರವಾಗಿ ಮಾತನಾಡುವಂತೆ ಎಚ್ಚರ ವಹಿಸು. ದುಷ್ಟರಿಗೆ ನಿನ್ನ ಹೃದ್ಗತವನ್ನು ತೋರದಿರು, ದುರ್ಮಾರ್ಗ ಹಿಡಿಯದಿರು, ಸ್ವಜನರಲ್ಲಿ ಭೇದವೆಣಿಸದಿರು. ಪಾಪಕಾರ್ಯ ಮಾಡದಿರು, ಸತ್ಕಾರ್ಯಗಳನ್ನು ಮಾಡು, ಸದಾ ಶಂಭುವಿನ ಪಾದಗಳನ್ನು ಧ್ಯಾನಿಸು, ಸಕಲ ಜೀವಿಗಳಲ್ಲಿ ದಯೆ ತೋರು, ಆಶ್ರಯಿಸಿ ಬಂದವರಿಗೆ ರಕ್ಷಣೆ ನೀಡು, ಪರರನ್ನು ನಿಂದಿಸದಿರು, ಪ್ರಪಂಚದಲ್ಲಿ ಆಶ್ರಯ ಬಯಸಿ ಬಂದವರಿಗೆ ರಕ್ಷಣೆ ನೀಡು, ಪ್ರಪಂಚದಲ್ಲಿ ಆತ್ಮ ಸಂಯಮವಿಲ್ಲದೆ ನಡೆಯದಿರು, ಕಾಮಾದಿ ದೋಷಗಳನ್ನು ಜಯಿಸು, ಹುಟ್ಟು ಸಾವುಗಳಿಂದ ಮುಕ್ತಿಪಡೆ, ವಿಪತ್ಕಾಲದಲ್ಲೂ ಸಹ ಧೃತಿಗೆಡದಿರು, ಸಿರಿತನ ಬಂದಾಗ ಸೊಕ್ಕದಿರು, ತತ್ವವನ್ನು ಕುರಿತು ಚಿಂತಿಸು, ಅದ್ವೈತ ತತ್ವದ ತಿರುಳನ್ನು ತಿಳಿದುಕೋ. ಸುಸಂಧಿಯನ್ನು ಕಳೆದುಕೊಳ್ಳದಿರು, ವೇದಜರನ್ನು ಸನ್ಮಾನಿಸು, ಜೀವನವೊಂದು ಕನಸೆಂದು ತಿಳಿ, ನಾನು ಯಾರು ಎಂಬ ಪ್ರಶ್ನೆಯನ್ನು ವಿವೇಚಿಸು. ನೀನು ನಗೆಗೀಡಾಗದಂತೆ ನಗು. ಉತ್ತಮವಾಗಿ ಮಾತನಾಡು, ಜನಸ್ತುತಿ ಮಾಡುವ ಹಾಗೆ ನಡೆ, ಪುನರ್ಜನ್ಮ ತಾರದ ಮಾರ್ಗವನ್ನು ಅನುಸರಿಸು. ಶಿವನನ್ನು ವಿವಿಧ ರೀತಿಯಲ್ಲಿ ಪೂಜಿಸು. ಹಾಗೂ ಅನಂತ ಆನಂದವನ್ನು ಅನುಭವಿಸು’ ಎಂಬುದಾಗಿ ನೀಡಿದ ಉಪದೇಶಗಳು ಇಂದಿಗೂ ಸಹ ಅನ್ವಯಿಸುವ ಹಾಗಿದೆ.