ಕೆಳದಿ ವಸ್ತುಸಂಗ್ರಹಾಲಯ

ಕೆಳದಿ ವಸ್ತುಸಂಗ್ರಹಾಲಯ:

               ವಸ್ತು ಸಂಗ್ರಹಾಲಯವೂಂದು ಗ್ರಾಮಾಂತರ ಕ್ಷೇತ್ರದಲ್ಲಿ ಅಫುರ್ವವೆನಿಸಿದುದು ಕೆಳದಿಯಲ್ಲಿದೆ. ಹಿಂದುಳಿದ ಜನತೆಗೆ ಅಧ್ಯಯನ ಆಸಕ್ತರಿಗೆ ಇದು ವರದಾನವಾಗಿದೆ. ಇದು 1962ರಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಈಗ ಬೃಹದಾಕಾರವಾಗಿ ಬೆಳೆದಿದೆ. ಇಲ್ಲಿ ಆ ಕಾಲದ ಕತ್ತಿ, ಪಂಚವಾಳ, ಬಾಚಣಿಗೆ, ಕಂಚಿನ ವಿಗ್ರಹಗಳು ಲೇಖನಿಗಳು, ಬೀಗಗಳು, ಫಿರಂಗಿ ಗುಂಡುಗಳು, ವ್ಯಾಯಾಮ ಸಾಧನಗಳು, ಅವಶೇಷಗಳು,ಮಿರ್ಜಾ ಇಸ್ಮಾಯಿಲ್, ಜಯಚಾಮರಾಜ ಒಡೆಯರ್,ವಿಶ್ವೇಶ್ವರಾಯ ಮೊದಲಾದವರ ಸ್ವ ಹಸ್ತಾಕ್ಷರದ ಕಾಗದ ಪತ್ರಗಳು, ನಾಣ್ಯಗಳು ತಾಡೆಯೋಲೆ ಹಸ್ತಪ್ರತಿಗಳು, ತಾಮ್ರಶಾಸನ, ಮಹಾಸತಿಕಲ್ಲು, ವೀರಗಲ್ಲು, ಮೊದಲಾದವುಗಳಿವೆ. ಇಲ್ಲಿಯ ತಾಡಯೋಲೆ ಸಂಗ್ರಹ ಮತ್ತು ವೈಜ್ಞಾನಿಕ ರೀತಿಯ ರಕ್ಷಣೆಗಾಗಿ ಕೇಂದ್ರ ಸರಕಾರ ಇದನ್ನು ಹಸ್ತಪ್ರತಿ ಸಂಪನ್ಮೂಲ ಕೇಂದ್ರವಾಗಿ ಗುರುತಿಸಿದೆ. ಈಗ ಸರಕಾರ ಇದನ್ನು ಕುವೆಂಪು ವಿಶ್ವವಿದ್ಯಾನಿಲಯದ ಜೊತೆ ವಿಲೀನ ಗೊಳಿಸಿದೆ. 

                 ಕೆಳದಿ ಲಿಂಗಣ್ಣ ಕವಿಯ ವಂಶಜರಾದ ಎಸ್. ಕೆ. ಲಿಂಗಣ್ಣಯ್ಯನವರ ತೈಲ ವರ್ಣಚಿತ್ರಗಳು, ರಾಮಾಯಣ, ಭಾಗವತ ಪುಸ್ತಕಗಳು, ಶ್ರೀರಾಮ ಪಾಟ್ಟಾಭಿಷೇಕ, ಅರ್ಚರಾಧಿಮಾರ್ಗ, ಭಗವದ್ಗೀತೆ, ವೀರಭದ್ರ ಅವತಾರ, ಲಲಿತಾ ತ್ರಿಪುರ ಸುಂದರಿ, ವಾಯುಸ್ತುತಿ ಮೊದಲಾದವು ಗಮನಿಸುವಂತಹವು. ಭಗವದ್ಗೀತ 18 ಅಧ್ಯಯವನ್ನು ಪಟದಲ್ಲಿ ಬರೆಯಲಾಗಿದೆ. ಲಲಿತಾ ತ್ರಿಪುರ ಸುಂದರಿಯಲ್ಲಿ ಶ್ರೀ ಲಲಿತಾ ಸಹಸ್ರನಾಮವಿದೆ. ವಾಯುಸ್ತುತಿ ಪಟದಲ್ಲಿ ವಯುಸ್ತುತಿ ಇದೆ. ಇದು ಕನ್ನಡ ಮತ್ತು ಸಂಸ್ಕೃತದಲ್ಲಿದೆ. ವಿಕ್ಟೋರಿಯಾ ರಾಣಿ, ಇಂಗ್ಲಿಷರು ಭಾರತ ಆಳುತ್ತಿದ್ದಾಗ ಎಷ್ಟು ವಾಸಾಹತು ಒಳಗೊಂಡಿತ್ತು ಎಂಬುದಕ್ಕೆ ಅನುಗುಣವಾಗಿ ಎಡಗೈ ಅಷ್ಟ್ರೇಲಿಯಾ, ಬಲಗೈ ಕೆನಡಾ, ತಲೆ ಸ್ಕಾಟ್ಲಾಂಡ್, ಐರ್ಲಾಂಡ್, ಎದೆ ಭಾಗ ಇಂಡಿಯಾ, ತೊಡೆಯ ಭಾಗ ಅಮೇರಿಕಾದ ಹದಿನಾಲ್ಕು ವಸಾಹತುಗಳು ಅಟ್ಲಾಂಟಿಕ್ ಸಾಗರದಲ್ಲಿ ಆಕೆ ನಿಂತಿರುವುದು ಮುಂತಾದವು ನೈಜತೆಯ ಕಾಲ್ಪನಿಕ ಸುಂದರ ಕಲಾಕೃತಿಯಾಗಿದೆ. ಇಲ್ಲಿಯ ಸಂಗ್ರಹಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇತ್ತೀಚೆಗೆ ಇಕ್ಕೇರಿಯ ಹಳೆ ರಥವನ್ನು ವಸ್ತುಸಂಗ್ರಹಾಲಯದ ಸಂಗ್ರಹಕ್ಕೆ ಸೇರಿಸಿಕೊಂಡು ರಕ್ಷಣೆ ಮಾಡಲಾಗುತ್ತಿದೆ.

               ಈ ತರಹ ಐತಿಹಾಸಿಕ ಸಾಮಗ್ರಿಗಳನ್ನು ಸಂಗ್ರಹಿಸಿ ಸಂರಕ್ಷಿಸಿ, ಪ್ರದರ್ಶಿಸಿ, ಆ ಮೂಲಕ ಗ್ರಾಮೀಣ ಪ್ರದೇಶದ ಜನತೆಯಲ್ಲಿ ಐತಿಹಾಸಿಕ ವಸ್ತುಗಳನ್ನು ಉಳಿಸುವತ್ತ ಗಮನ ಸೆಳೆಯುವ ಪ್ರಯತ್ನವನ್ನು ಕೆಳದಿ ವಸ್ತು ಸಂಗ್ರಹಾಲಯ ಕಳೆದ ಹಲವು ವರುಷದಿಂದ ಮಾಡುತ್ತ ಬಂದಿದೆ. ಇದರ ಚಟುವತಿಗೆಯನ್ನು ರಾಜ್ಯ, ಕೇಂದ್ರ ಸರಕಾರ, ರಾಷ್ಟ್ರೀಯ ಕಲೆ ಮತ್ತು ಸಂಸ್ಕೃತಿ ಕೇಂದ್ರ, ನವದೆಹಲಿ ಮೊದಲಾದವುಗಳು ಗುರುತಿಸಿವೆ. ಶಿವತತ್ವ ರತ್ನಾಕರ ಎ ಕಲ್ಚರಲ್ ಸ್ಟಡಿ ಮೊದಲಾಗಿ ಹಲವು ಉತ್ತಮ ಪ್ರಕಟಣೆಗಳನ್ನು ವಸ್ತುಸಂಗ್ರಹಾಲಯ ಹೊರತಂದಿದೆ. ಕೆಳದಿ ಮತ್ತು ಆ ಕಾಲದ ಪಾಳೆಯಪಟ್ಟು, ಸಂಸ್ಥಾನಗಳ ಚರಿತ್ರೆಯ ಬಗ್ಗೆ ಸಂಶೋಧನೆ ನಡೆಸಿದೆ.

(ಮರೆಯಲಾಗದ ಕೆಳದಿ ಸಾಮ್ರಾಜ್ಯಡಾ: ಕೆಳದಿ ವೆಂಕಟೇಶ್ ಜೋಯಿಸ್)