" Mallara Maadi ---Dharmasthala"

‘ಮಲ್ಲರಮಾಡಿ’ ಧರ್ಮಸ್ಥಳ

               ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತ ಜನರ ಪಾಲಿಗೆ ಭೂಮಿಗಿಳಿದ ಕೈಲಾಸ. ಅಂತರಂಗ ಪರಿಶುದ್ದಿ. ಲೌಕಿಕ ಬದುಕಿನಲ್ಲಿ ಸನ್ಮಾರ್ಗಗಳನ್ನು ಕರುಣಿಸುವ ಭಕ್ತಿ ಬದುಕಿನಲ್ಲಿ ಉತ್ತುಂಗಗರಿ. ವ್ಯಾವಹಾರಿಕ ಪ್ರಪಂಚದಲ್ಲೂ ಧರ್ಮದ ದಶಾವತಾರಗಳಿಗೆ ಇದು ನೆಲೆವೀಡು. ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತ ಜನರ ಪಾಲಿಗೆ ಸಾಕ್ಷಾತ್ ಶಿವ ಸಾನ್ನಿಧ್ಯ ಇರುವ ಕ್ಷೇತ್ರ. ‘ಮಾತು ಬಿಡ ಮಂಜುನಾಥ’ ಎಂಬುದು ಇಲ್ಲಿಗೆ ಅನ್ವರ್ಥ ನಾಮ. ಅಂತರಂಗ ಪರಿಶುದ್ದಿ, ಲೌಕಿಕ ಬದುಕಿನಲ್ಲಿ ಸನ್ಮಾರ್ಗಗಳನ್ನು ಕರುಣಿಸುವಂತೆ ಪ್ರಾರ್ಥಿಸಲು ನಾಡಿನ ನಾನಾ ಮೂಲೆಯಿಂದ ಭಕ್ತಜನರು ಬರುವ ಪಾವನ ನೇತ್ರವತಿ ನದಿ ತಟಾಕ ಇದು. ಕಲೆ, ಸಾಹಿತ್ಯ, ಸಂಸ್ಕøತಿ, ದಾನ, ಧರ್ಮಗಳೆಂಬ ಅಖಂಡ ಸತ್ಕಾರ್ಯಗಳ ನೀಲಗಗನದಲ್ಲಿ ಧರ್ಮಸ್ಥಳ ಎಂಬ ಧ್ರುವ ನಕ್ಷತ್ರ ಜಾಜ್ವಲ್ಯಮಾನವಾಗಿ ಬೆಳೆಗಿದೆ.

800 ವರ್ಷಗಳ ಇತಿಹಾಸ

ಎಂಟು ಶತಮಾನಗಳ ಹಿಂದೆ ಈ ಊರಿನ ಹೆಸರು ಮಲ್ಲರ ಮಾಡಿ ಎಂದಿತ್ತು. ಕುಡುಮ ಎಂಬಲ್ಲಿದ್ದ 'ನೆಲ್ಯಾಡಿ ಬೀಡು' ಜೈನ ಧರ್ಮೀಯರಾದ ಬಿರ್ಮಣ್ಣ ಪೆರ್ಗಡೆ, ಅಮ್ಮು ಬಲ್ಲಾಳ್ತಿ ದಂಪತಿಯ ಒಡೆತನದಲ್ಲಿ ದಾನ ಧರ್ಮಗಳಿಗೆ ಪ್ರಸಿದ್ಧವಾಗಿತ್ತು. ಹಸಿದು ಬಂದವರಿಗೆ ಅಶನವಿಕ್ಕಿದ ದಿನವಿರಲಿಲ್ಲ. ನೊಂದವರ ಕಂಬನಿ ಒರೆಸಿ, ಬೆಂದವರ ಒಡಲು ತಂಪಾಗಿಸುವ ಮಾತೃ ವಾತ್ಸಲ್ಯದ ಶರಧಿಯಾಗಿ ಖ್ಯಾತಿ ಪಡೆದ ಮನೆತನ. ಜೈನ ತೀರ್ಥಂಕರ ಶ್ರೀ ಚಂಥ್ರನಾಥ ಸ್ವಾಮಿಯನ್ನು ಆರಾಧಿಸುತ್ತಿದ್ದರು. ಧರ್ಮ ಪರೀಕ್ಷೆಗಾಗಿ ಕೈಲಾಸದಿಂದ ಧರೆಗಿಳಿದ ಧರ್ಮದೇವತೆಗಳಿಗೆ ಎಲಿ ನೋಡಿದರಲ್ಲಿ ಅಸತ್ಯ, ಅಧರ್ಮಗಳೇ ತಾಂಡವವಾಡುವುದು ಕಂಡು ಧರಣಿಯನ್ನು ಶಿಕ್ಷಿಸುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಧರ್ಮದೈವಗಳ ನಾಯಕನು ವೇಷ ಬದಲಾಯಿಸಿ ಮಲ್ಲರ ಮಾಡಿಗೆ ಬಂದಾಗ ಬಿರ್ಮಣ್ಣ ಪೆರ್ಗಡೆ ದಂಪತಿಯ ದಾನಶೀಲತೆ, ಸ್ನೇಹಪರತೆ, ಪ್ರೀತಿ, ಸೌಹಾರ್ದತೆ, ಧರ್ಮಪ್ರವೃತ್ತಿಯ ಅಸಮಾನ ಗುಣಗಳಿಗೆ ಮಾರುಹೋಗಿ ಅಣ್ಣಪ್ಪನೆಂಬ ಹೆಸರಿನಿಂದ ಆ ಮನೆಯ ಸೇವಕನಾಗಿ ನಿಂತುಬಿಡುತ್ತಾನೆ. ಅವನೊಂದಿಗೆ ಭುವಿಗಿಳಿದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ, ಕನ್ಯಾಕುಮಾರಿ ಎಂಬ ಧರ್ಮದೇವತೆಗಳು ಪೆರ್ಗಡೆಯವರು ಕನಸಿನಲ್ಲಿ ದರ್ಶನ ನೀಡಿ ಹರಸುತ್ತಾರೆ. ಪೆರ್ಗಡೆಯವರು ತನ್ನ ಸ್ವಂತ ಮನೆಯನ್ನೆ ದೈವಗಳ ಆವಾಸಸ್ಥಾನವಾಗಿ ಬಿಟ್ಟುಕೊಡಬೇಕೆಂಬ ಕಠಿಣ ಬೇಡಿಕೆಯನ್ನು ಕೂಡಾ ಪೆರ್ಗಡೆಯವರ ಮುಂದಿಡುತ್ತಾರೆ. ಇದೆಲ್ಲದಕ್ಕೂ ಧರ್ಮ ಕರ್ಮದ ಸಾಕಾರಮೂರ್ತಗಳಂತಿದ್ದ  ಪೆರ್ಗಡೆಯವರು ಮನದುಂಬಿ ಒಪ್ಪಿಗೆ ನೀಡುತ್ತಾರೆ. ಪೆರ್ಗಡೆಯವರ ಮೂಂದಿನ ಜೀವನ ಸತ್ಕಾರ್ಯಗಳಿಗೆ ಮೀಸಲಿಡಬೇಕೆಂಬ ಸಲಹೆಯನ್ನೂ ನೀಡುತ್ತಾರೆ ಹಾಗೆ ಅಂದು ಧರ್ಮದೇವತೆಗಳಿಗೆ ಬಿಟ್ಟುಕೊಟ್ಟ 'ನೆಲ್ಯಾಡಿ ಬೀಡ'ನ್ನು ಇಂದಿಗೂ ಧರ್ಮಸ್ಥಳದಲ್ಲಿ ನೋಡಬಹುದಾಗಿದೆ.

ಬಳಿಕ ಧರ್ಮದೇವತೆಗಳ ಆಶಯದಂತೆ ಪೆರ್ಗಡೆಯವರು ಇಲ್ಲಿ ದೇವಾಲಯವನ್ನು ನಿರ್ಮಿಸಿದರು. ಮನೆಯ ಬಂಧುವಾಗಿದ್ದ ಪರಶಿವನ ಸೇವಕ ಅಣ್ಣಪ್ಪ ಕದ್ರಿಯಿಂದ ತಂದ ಶಿವಲಿಂಗವನ್ನು ಇಲ್ಲಿ ಪ್ರತಿಷ್ಠಾಪಿಸಿ, ದೇಗುಲವೊಂದನ್ನು ನಿರ್ಮಿಸಿ, ಪೂಜೆಯ ವ್ಯವಸ್ಥೆಯನ್ನೂ ಕೈಗೊಂಡಿದ್ದರು. ಧರ್ಮದೇವತೆಗಳು ಮಗದೊಮ್ಮೆ ಪೆರ್ಗಡೆಯವರ ಕನಸಿನಲ್ಲಿ ಕಾಣಿಸಿಕೊಂಡು ನಾಲ್ವರು ಧರ್ಮದೇವತೆಗಳಿಗಾಗಿ ಪ್ರತ್ಯೇಕ ಗುಡಿ ಕಟ್ಟಿಕೊಡಬೇಕೆಂದು ಕೇಳಿಕೊಳ್ಳುತ್ತಾರೆ. ಅಷ್ಟಲ್ಲದೇ ನಾಲ್ವರು ಯೋಗ್ಯ ವ್ಯಕ್ತಿಗಳನ್ನು ದೈವದ ಪಾತ್ರಿಗಳಾಗಿ ನೇಮಿಸುವಂತೆ ಸಲಹೆ ನೀಡುತ್ತಾರೆ. ಇವರು ದೇವಾಲಯದ ಪಟ್ಟಾಧಿಕಾರಿ ಪೆರ್ಗಡೆಯವರ ಜತೆ ಧಾರ್ಮಿಕ ಕಾರ್ಯದಲ್ಲಿ ಸಹಕರಿಸಬೇಕು. ಇದನ್ನು ಪಾಲಿಸಿದರೆ ಹೆಗ್ಗಡೆ ಕುಟುಂಬವನ್ನು ರಕ್ಷಿಸುವ, ಸತ್ಕಾರ್ಯಗಳಿಗೆ, ದಾನ ಧರ್ಮಗಳಿಗೆ ಸಂಪತ್ತು ಒದಗಿಸುವ, ಕ್ಷೇತ್ರದ ಕೀರ್ತಿಯನ್ನು ವಿಸ್ತರಿಸುವ ಭರವಸೆ ನೀಡಿದರು.