Bhaghavan Bhahubali

ಭಗವಾನ್ ಬಾಹುಬಲಿ

                   ಧಾರ್ಮಿಕ ಸಹಿಷ್ಣುತೆಯ ಸಂಕೇತವಾಗಿರುವ ಧರ್ಮಸ್ಥಳ ಜೈನ ಯಾತ್ರಿಕರ ಪಾಲಿಗೆ ಜೈನಕಾಶಿಯೂ ಆಗಿನಿಂತಿದೆ. ಭಗವಾನ್ ಬಾಹುಬಲಿಯ ಮನಮೋಹಕವಾದ ಬೃಹದಾಕಾರದ ವಿಗ್ರಹ ಇಲ್ಲಿ ಭಕ್ತ ಜನರನ್ನು ಕೈ ಬೀಸಿ ಕರೆಯುತ್ತಿದೆ. ಜೈನ ಧರ್ಮವನ್ನು ಉಪದೇಶಿಸಿದ ಮೊದಲನೆಯ ತೀರ್ಥಂಕರರು ವೃಷಭನಾಥರು. ಇವರಿಗೆ ಯಶಸ್ವತಿ, ಸುನಂದ ಎಂಬ ಇಬ್ಬರು ಪತ್ನಿಯರು. ಇವರಿಂದ ನೂರು ಜನ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. ಬಾಹುಬಲಿ ಸುನಂದೆಯ ರಾಜಕುಮಾರ. ವೃಷಭನಾಥರಿಗೆ ವೈರಾಗ್ಯ ಉಂಟಾದಾಗ ಕುಮಾರರಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳಿ ಸಕಲ ಕರ್ಮಗಳನ್ನು ಜಯಿಸಿ ಕೇವಲಜ್ಞಾನವನ್ನು ಪಡೆದು ಜನರಿಗೆ ಮುಕ್ತಿ ಮಾರ್ಗವನ್ನು ಉಪದೇಶಿಸುತ್ತಿದ್ದರು. 

                    ವೃಷಭನಾಥರ ಪ್ರಥಮ ಕುಮಾರನಾದ ಭರತನು ದಿಗ್ವಿಜಯವನ್ನು ಮುಗಿಸಿ ಬರುವಾಗ ಆತನ ಚಕ್ರರತ್ನವು ಪುರ ಪ್ರವೇಶ ಮಾಡಲಿಲ್ಲ. ಭರತನು ತನ್ನ ತಮ್ಮಂದಿರನ್ನು ಜಯಿಸಿಲ್ಲ ಅದಕ್ಕಾಗಿ ಹೀಗಾಗಿದೆ ಎಂದು ಪುರೋಹಿತರು ಹೇಳಿದರು. ಕಪ್ಪ ಕಾಣಿಕೆಗಳೊಡನೆ ಬಂದು ಶರಣಾಗುವಂತೆ ತಮ್ಮಂದಿರಿಗೆ ಆಜ್ಞಾಪಿಸಿದಾಗ ಬಾಹುಬಲಿಯನ್ನುಳಿದು ಇತರರು ಭರತನಿಗೆ ಶರಣಾಗುವುದಕ್ಕಿಂತ ವೃಷಭನಾಥರ ಬಳಿ ಹೋಗಿ ದೀಕ್ಷೆ ಪಡೆಯುವುದು ಲೇಸೆಂದು ರಾಜ್ಯತ್ಯಾಗ ಮಾಡಿ, ಕೈವಲ್ಯದ ಹಾದಿ ಹಿಡಿದರು. ಬಾಹುಬಲಿಯು ಭರತನ ಆಜ್ಞೆಗೆ ಈ ರಾಜ್ಯವು ತನಗೆ ತಂದೆಯಿಂದ ಬಂದುದು. ಹಿರಿಯಣ್ಣನೆಂದು ಆತನಿಗೆ ತಲೆಬಾಗುವೆನು ಆದರೆ ಚಕ್ರವರ್ತಿಯೆಂದು ತಲೆಬಾಗಲಾರೆ. ಇದಕ್ಕಾಗಿ ಯುದ್ಧಕ್ಕೆ ಸಹ ಸಿದ್ಧನೆಂದು ಭರತನಿಗೆ ಹೇಳಿ ಕಳುಹಿಸಿದನು. ಭರತನು ಈ ಸುದ್ದಿಯನ್ನು ಕೇಳಿ ಯುದ್ಧಕ್ಕೆ ಸಿದ್ಧನಾದನು. ಎರಡೂ ಸೈನ್ಯಗಳು ಯುದ್ಧ ಪ್ರಾರಂಭಿಸುವ ಮುಂಚೆ ಮಂತ್ರಿಗಳು ಯೋಚಿಸಿ ಭರತ, ಬಾಹುಬಲಿ ಇಬ್ಬರೂ ವಜ್ರದೇಹಿಗಳಾಗಿರುವುದರಿಂದ ಚತುರಂಗ ಬಲವೆಲ್ಲ ಅಳಿದು ರಾಜ್ಯವೆಂಬುದು ಗೋಡೆಯಿಲ್ಲದ ಚಿತ್ರವಾಗುವುದು ಹೊರತು ಈ ಇಬ್ಬರಿಗೂ ಏನೂ ಹಾನಿ ಆಗುವುದಿಲ್ಲ. ಆದ್ದರಿಂದ ಈ ಇಬ್ಬರ ಮಧ್ಯೆಯೆ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯಲಿ ಎಂದು ತೀರ್ಮಾನಿಸಿದರು. 

                     ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು ತದೇಕಚಿತ್ತವಾಗಿ ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವಂತೆ ರಭಸದಿಂದ ನೀರೆರಚುವುದು ಜಲಯುದ್ಧ. ಪರಸ್ಪರ ಬಾಹು ಯುದ್ಧ ಜಟ್ಟಿಕಾಳಗ ಮಾಡುವುದು ಮಲ್ಲಯುದ್ಧ. ಈ ಮೂರೂ ಯುದ್ಧಗಳಲ್ಲಿ ಅಪ್ರತಿಮ ವೀರನಾದ ಬಾಹುಬಲಿಯೇ ಗೆದ್ದನು. ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಎರಡೂ ಕೈಗಳಿಂದ ಮೇಲೆತ್ತಿದ ಬಾಹುಬಲಿಗೆ ಇನ್ನೇನು ಅಣ್ಣನನ್ನು ನೆಲಕ್ಕುರುಳಿಸಿ ಸೋಲಿಸಬೇಕೆನ್ನುವಷ್ಟರಲ್ಲಿ, ತಾನು ಹೀಗೆ ಸಹೋದರನನ್ನು ಕೆಳಗೆ ಎತ್ತಿ ಹಾಕಬಾರದೆಂಬ ವಿವೇಕ ಮೂಡಿ ನಿಧಾನವಾಗಿ ಕೆಳಗಿಳಿಸಿದನು. ಭ್ರಾತೃವಿನಿಂದ ಸೋತು ಅವಮಾನ ಹೊಂದಿದ ಭರತನು ತನ್ನ ಚಕ್ರರತ್ನವನ್ನು ಪ್ರಯೋಗಿಸಿದರೂ ಸಹ ಅದು ಬಾಹುಬಲಿಗೆ ಹಾನಿ ಮಾಡದೇ ಅವನಿಗೆ ಪ್ರದಕ್ಷಿಣೆ ಮಾಡಿ ಅವನ ಬಲಗಡೆ ನಿಂತಿತು.  ಬಾಹುಬಲಿ ವಿಜಯಿಯಾದನು. ಎಲ್ಲರೂ ಜಯಕಾರ ಮಾಡಿದರು. ಆದರೆ ಬಾಹುಬಲಿಗೆ ವೈರಾಗ್ಯ ಉಂಟಾಗಿ ನಶ್ವರವಾದ ಪ್ರಾಪಂಚಿಕ ಸಂಪತ್ತಿಗಾಗಿ ಸಹೋದರರನ್ನೇ ಯುದ್ಧಕ್ಕೆ ಪ್ರೇರೇಪಿಸಿದ ಈ ರಾಜ್ಯ, ಅಧಿಕಾರ ಸಲ್ಲದು ಎಂದು ಅತೀಂದ್ರಿಯ ಸುಖವೇ ಶ್ರೇಷ್ಠ ಎಂದು ರಾಜ್ಯ ಮೋಹವನ್ನು ತ್ಯಾಗ ಮಾಡಿ ತಂದೆ ವೃಷಭನಾಥರ ಬಳಿ ತೆರಳಿ ಅವರಿಂದ ದೀಕ್ಷೆಯನ್ನು ಪಡೆದು ತಪಸ್ಸಿಗೆ ತೊಡಗಿದನು.  ಬಹುಕಾಲ ತಪಸ್ಸು ಆಚರಿಸಿದರೂ ಬಾಹುಬಲಿಗೆ ಕೇವಲಜ್ಞಾನವನ್ನು ಪಡೆಯಲಾಗಲಿಲ್ಲ. ಇದಕ್ಕೆ ತಾನು ಅಣ್ಣನ ಭೂಮಿಯಲ್ಲಿ ತಪಸ್ಸಿಗೆ ನಿಂತಿರುವೆನೆಂಬ ಸ್ವಾಭಿಮಾನದ ಚಿಂತೆಯೇ ಕಾರಣವಾಗಿತ್ತು. ಇದನ್ನು ತಿಳಿದ ನಂತರ ಭರತನು ಬಂದು ಈ ರಾಜ್ಯವನ್ನು ನೀನು ಗೆದ್ದವನು. ನಿನ್ನಿಂದ ನಾನು ಮರಳಿ ಪಡೆದವನು. ನನಗೆ ನೀನೇ ಕೊಟ್ಟಿರುವೆ ಆದ್ದರಿಂದ ಮನದಲ್ಲಿರುವ ಈ ಪರಕೀಯ ಭಾವನೆ ತೊರೆದು ಬಿಡು ಎಂದು ಬೇಡಿದನು. ಭರತನು ಬಾಹುಬಲಿ ಸನ್ನಿಧಿಗೈದು ಎರಗಿ ವಿವಿಧಾರ್ಚನೆಗೈದು ‘ಮಾನೋನ್ನತನೆ, ನೆಲವಿದು ನಿನ್ನ ಮಡುಗೂಳು. ನೀನೀಯೆ ಬಂದುದೆನಗೆ. ಇದೆನ್ನದೆಂದು ನೀನೂ ಬಗೆಯದಿರು’ ಎಂದು ಪ್ರಾರ್ಥಿಸಿದ. ಅದರಿಂದ ಬಾಹುಬಲಿಗೆ ‘ಅಂತಃಕರಣದೊಳಿನಿಸಾನುಂ ನಿಂದುದೊಂದು ಮಾನಃ ಕಷಾಯ’ ಮಾಯವಾಯಿತು.  ಭರತನು ಇಷ್ಟು ಹೇಳಿದಾಗ ಬಾಹುಬಲಿಯ ಮನವನ್ನಾವರಿಸಿದ ಆತಂಕವು ತೊಲಗಿ ಈ ಭೂಮಿ ಯಾರ ಸೊತ್ತೂ ಅಲ್ಲ ಎಂಬ ಭಾವನೆ ಮೂಡಿತು. ನಂತರ ಬಾಹುಬಲಿಯು ನಿರ್ಮಲವಾದ ಮನದಿಂದ ತಪಸ್ಸನ್ನು ಮಾಡಿ ಕೇವಲಜ್ಞಾನ ಪಡೆದನು. ವಿಶ್ವವನ್ನೇ ಜಯಿಸುವ ಧ್ಯೇಯದಿಂದ ಹೊರಟ ಭರತನು ರಾಜ್ಯ ಅಧಿಕಾರಕ್ಕಾಗಿ ತನ್ನ ತಮ್ಮ ಬಾಹುಬಲಿಯೊಂದಿಗೆ ಹೋರಾಡಿ ಪರಾಜಯದ ಹೊಸ್ತಿಲಲ್ಲಿದ್ದ. ಆದರೆ ಬಾಹುಬಲಿಯು ಈ ಘಟನೆಯಿಂದ ರಾಗದ್ವೇಷಗಳ ಕೋಲಾಹಲವನ್ನು, ಭೂತಳ ರಾಜ್ಯ ವಿಮೋಹದಿಂದ ಮನುಷ್ಯ ಹೊಂದುವ ಅಧಃಪತನದ ದುರಂತವನ್ನು ಅರ್ಥಯಿಸಿಕೊಂಡು ಎಲ್ಲ ಅಧಿಕಾರವನ್ನೂ ಅಣ್ಣನಿಗೆ ಒಪ್ಪಿಸಿ, ತ್ಯಾಗಿಯಾಗಿ, ವಿರಾಗಿಯಾಗಿ, ವಿರಾಟ್ ಯೋಗಿಯಾಗಿ ಆಕಾಶದೆತ್ತರ ಬೆಳೆದು ನಿಂತು ಸಮಸ್ತ ಸುರ ಸಮುದಾಯವಡಿಗೆರಗುವಂಥ ದಿವ್ಯಜ್ಞಾನಿಯಾಗಿ ಲೋಕಕ್ಕೆ ತ್ಯಾಗದ ಸಂದೇಶ ನೀಡಲು ಮಹೋನ್ನತಿಯ ಉತ್ತುಂಗಕ್ಕೇರಿದ. 

ಧರ್ಮಸ್ಥಳದಲ್ಲಿ ಬಾಹುಬಲಿಯ ಪ್ರತಿಷ್ಠೆ :

ತ್ಯಾಗ, ಆತ್ಮ ಸಂಯಮ, ಅಹಂಕಾರ ನಿಗ್ರಹಗಳ ಪ್ರತೀಕವಾಗಿರುವ ಬಾಹುಬಲಿ ವಿಗ್ರಹವನ್ನು ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿಸಬೆಕೆಂಬ ಕನಸು ಡಾ| ಡಿ. ವೀರೇಂದ್ರ ಹೆಗ್ಗಡೆಯವರ ತೀರ್ಥರೂಪರು ಹಾಗೂ ಹಿಂದಿನ ಧರ್ಮಾಧಿಕಾರಿಗಳಾದ ರತ್ನವರ್ಮ ಹೆಗ್ಗಡೆ ಮತ್ತು ರತ್ಮಮ್ಮ ದಂಪತಿಯದು. ಕ್ಷೇತ್ರದ ಪರಂಪರೆಯಂತೆ ಕಾರ್ಯಕ್ರಮಗಳ ಅನುಷ್ಠಾನದ ಜತೆಗೆ ನಾಡಿನ ಅನೇಕ ಕಡೆ ನಡೆಯುತ್ತಿದ್ದೆಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರು ಭಾಗಿಗಳಾಗುತ್ತಿದ್ದರು. 1967ರಲ್ಲಿ ಅವರು ಆರಂಭಿಸಿದ ಬಾಹುಬಲಿ ಕೆತ್ತನೆಯ ಮಹತ್ಕಾರ್ಯವನ್ನು ಪೂರ್ಣಗೊಳಿಸಿ, 1982ರಲ್ಲಿ ವಿಗ್ರಹದ ಪ್ರತಿಷ್ಠಾಪನಾ ಮಹೋತ್ಸವವನ್ನು ನೆರವೇರಿಸಿದವರು ಡಾ| ಡಿ. ವೀರೇಂದ್ರ ಹೆಗ್ಗಡೆಯವರು.

‘ಬೈರಾಗಿ’ಯ ಜತೆ ಬಂದ ‘ವಿರಾಗಿ’

ಬಾಹುಬಲಿಯ ಬೃಹತ್ ಮೂರ್ತಿಯ ಪ್ರತಿಷ್ಠಾಪನೆಯ ಕನಸು ಅಂದಿನ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆಯವರ ಮನಸ್ಸಿನಲ್ಲಿ ಬಹುಕಾಲದಿಂದಲೂ ಮಿಡಿಯುತ್ತಿತ್ತು. ಚಂದ್ರನಾಥ ಸ್ವಾಮಿಯ ಬಸದಿಯಲ್ಲಿರುವ ಬಾಹುಬಲಿಯ ಸಣ್ಣ ವಿಗ್ರಹವನ್ನು ನೋಡಿದಾಗಲೆಲ್ಲ ಇಲ್ಲೊಂದು ಅಪೂರ್ವವಾದ ತ್ರಿವಿಕ್ರಮಾಕಾರದ ಮೂರ್ತಿ ಇರುತ್ತಿದ್ದರೆ ಅದೆಷ್ಟು ಅರ್ಥಪೂರ್ಣವಾಗಿರುತ್ತಿತ್ತು ಎಂಬ ಚಿಂತನೆ ಅವರನ್ನು ಕಾಡುತ್ತಿತ್ತು. ಅಷ್ಟೇ ಅಲ್ಲ, ರತ್ನವರ್ಮ ಹೆಗ್ಗಡೆ, ರತ್ನಮ್ಮ ಹೆಗ್ಗಡೆ ಸಾತ್ವಿಕ ದಂಪತಿ ಜೈನ ಧರ್ಮದ ಪ್ರತಿನಿಧಿಗಳಾಗಿ ಶ್ರವಣಬೆಳಗೊಳ, ವೇಣೂರು, ಕಾರ್ಕಳ ಮೊದಲಾದೆಡೆ ನಡೆಯುತ್ತಿದ್ದ ಮಹಾಮಸ್ತಕಾಭಿಷೇಕಕ್ಕೆ ತೆರಳುತ್ತಿದ್ದಾಗಲೂ ಇಂತಹ ಅವಕಾಶ ತಮ್ಮ ಕ್ಷೇತ್ರದಲ್ಲೂ ಲಭಿಸುವಂತಾದರೆ ಎಂಬ ಆಶಯ ಹೊಂದಿದ್ದರು. ಇದನ್ನು ತಮ್ಮ ಆತ್ಮೀಯರಾದ ವಕೀಲ ಕೆ.ಬಿ. ಜಿನರಾಜ ಹೆಗ್ಡೆಯವರ ಬಳಿ ತೋಡಿಕೊಂಡಾಗ ಅವರು ಕಾರ್ಕಳದ ಶಿಲ್ಪಿ ರೆಂಜಾಳ ಗೋಪಾಲ ಶೆಣೈ ಅವರ ಪರಿಚಯ ಮಾಡಿಸಿದರು. ಹೆಗ್ಗಡೆಯವರ ಮಾತಿಗೆ ಸಮ್ಮತಿಸಿದ ಶೆಣೈ ಅವರು ಎಷ್ಟು ದೊಡ್ಡ ವಿಗ್ರಹ ಕಡೆಯಬೇಕು ಎಂದು ಪ್ರಶ್ನಿಸಿದರು. ಆಗ ಹೆಗ್ಗಡೆಯವರ ಬಾಯಿಂದ ಬಂದ ಮಾತು ‘ಸ್ವಾಮಿ ಚಿತ್ತ’ ಎಂದು. ಹೀಗೆ ಮೂರೂವರೆ ಶತಮಾನಗಳಿಂದ ವರ್ಷಗಳಿಂದ ನಡೆಯದ ಕಾರ್ಯವೊಂದು ಶ್ರೀ ಕ್ಷೇತ್ರದ ವತಿಯಿಂದ ಶುಭಾರಂಭಗೊಳ್ಳಲು ಚಾಲನೆ ದೊರೆಯಿತು.

ಬೈರಾಗಿಯೂ... ವಿರಾಗಿಯೂ...

ಶಿವನೆಂದರೆ ಬೈರಾಗಿ. ಆತನ ಸಾನಿಧ್ಯವಿರುವ ಧರ್ಮಸ್ಥಳದಲ್ಲಿ ವಿರಾಗಮೂರ್ತಿ ಬಾಹುಬಲಿಯ ಪ್ರತಿಷ್ಠೆ ಆಗಲು ರತ್ನವರ್ಮ ಹೆಗ್ಗಡೆ – ರತ್ನಮ್ಮ ಹೆಗ್ಗಡೆ ದಂಪತಿ ಅನೇಕ ಬಾರಿ ಚಿಂತನ ಮಂಥನ ನಡೆಸಿದ್ದರು. ವಿಗ್ರಹ ಕೆಲಸ ಆರಂಭಿಸಿ ಸರಿಯಾಗಿ ವರ್ಷದೊಳಗೆ ರತ್ನವರ್ಮ ಹೆಗ್ಗಡೆಯವರು ಅಕಾಲಿಕವಾಗಿ ವಿಧಿವಶರಾದರು. ಆದರೂ ಅವರ ಆಶಯಕ್ಕೆ ಚ್ಯುತಿ ಬಾರದಂತೆ ಮುಂದಿನ ಧರ್ಮಾಧಿಕಾರಿಯಾದ ಡಾ| ವೀರೇಂದ್ರ ಹೆಗ್ಗಡೆಯವರು ವಿಗ್ರಹವನ್ನು ಪೂರ್ಣಗೊಳಿಸಲು ಬೇಕಾದ ಸಹಾಯವನ್ನು ಶಿಲ್ಪಿಗಳಿಗೆ ಒದಗಿಸಿಕೊಟ್ಟಿದ್ದರು. ಡಾ| ವೀರೇಂದ್ರ ಹೆಗ್ಗಡೆಯವರು ಮಹಾಮೂರ್ತಿಯ ನಿರ್ಮಾಣದ ಪ್ರತಿ ಹಂತದಲ್ಲೂ ವಿಗ್ರಹ ರಚನಾ ಸ್ಥಳಕ್ಕೆ ಭೇಟಿನೀಡಿ ತನ್ನ ತೀರ್ಥರೂಪರ ಉದಾತ್ತ ಧ್ಯೇಯ ಧರ್ಮಸ್ಥಳದಲ್ಲಿ ಶಾಶ್ವತ ನೆಲೆಗೊಳ್ಳಲು ಕಾರಣಕರ್ತರಾದರು. ಸುಮಾರು ಐದೂವರೆ ವರ್ಷಗಳಲ್ಲಿ ವಿಗ್ರಹ ಒಂದು ಹಂತದವರೆಗೆ ರೂಪುಗೊಂಡಿತು. ದಿನದಿಂದ ದಿನಕ್ಕೆ ವಿರಾಟ ಯೋಗಿಯ ಮನ್ಮಥ ರೂಪದ ಮೂರ್ತಿ ಕುಡಿಯೊಡೆಯುತ್ತ ಸಾಕಾರವಾಯಿತು. ಬಾಹುಬಲಿಯ ಶರೀರವನ್ನು ಅಡರುತ್ತಿರುವ ಮಾಧವೀಲತೆಯನ್ನು ಸೂಕ್ಷ್ಮವಾಗಿ ಬಿಡಿಸುತ್ತಿರುವ ಇಬ್ಬರು ರಾಜಕನ್ಯೆಯರು, ಜ್ಞಾನೋದಯದ ಸಂಕೇತವಾಗಿ ಸೊಂಡಿಲಿನಿಂದ ಹೂಮಳೆಗರೆಯುತ್ತಿರುವ ಆನೆಗಳು, ತಪೋನಿಧಿಯ ಸನ್ನಿಧಿಯಲ್ಲಿ ಜಾತಿ ವೈರ ಮರೆತ ದನ ಹುಲಿ, ಕುಕ್ಕುಟ ಸರ್ಪಗಳ ಸ್ನೇಹ ಮುಂತಾದ ಕಾವ್ಯ ರಸಾತ್ಮಕ ಬಣ್ಣನೆಗಳು ಸ್ವಾಮಿಯ ಪದತಲದಲ್ಲಿ ಮೈದಳೆದವು. ಕರ್ನಾಟಕ ಶಿಲ್ಪಕಲಾವೈಭವಕ್ಕೆ ಈ ಮಹತ್ವದ ಕೊಡುಗೆ ಪೋಣಿಸಿದ ಡಾ| ವೀರೇಂದ್ರ ಹೆಗ್ಗಡೆ ಅವರು ಅಭಿನಂದನಾರ್ಹವಾದ ‘ಅಭಿನವ ಚಾವುಂಡರಾಯ’ರಾದದ್ದು ಹೀಗೆ.