Chandhra natha Basadi / Vadhi Rajaru

 ಚಂದ್ರನಾಥ ಸ್ವಾಮಿ ಬಸದಿ :-

                ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಜನೆಗೆ ಅನತಿ ದೂರದಲ್ಲಿ ಕಳೆದ ಅನೇಕ ಶತಮಾನಗಳಿಂದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯೂ ಅಸ್ತಿತ್ವದಲ್ಲಿದೆ. ಶ್ರೀ ಮಂಜುನಾಥ ಸ್ವಾಮಿಯ ಅರ್ಚನೆಗೆ ಸಂಬಂಧಿಸಿದ ಎಲ್ಲ ಕಾರ್ಯಗಳ ನೇತೃತ್ವ ವಹಿಸಿರುವ ಹೆಗ್ಗಡೆ ಮನೆತನದವರು ಆರಾಧಿಸಿಕೊಂಡು ಬಂದ ಬಸದಿ ಇದಾಗಿದೆ. ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿನ ಆರಾಧನೆಯಂತೆಯೇ ಇಲ್ಲಿಯೂ ನೂರಾರು ವರ್ಷಗಳಿಂದ ಚ್ಯುತಿಯಾಗದಂತೆ ಧಾರ್ಮಿಕ ಕಾರ್ಯಗಳನ್ನು ಅನೂಚಾನವಾಗಿ ನಡೆಸಿಕೊಂಡು ಬರಲಾಗುತ್ತಿದೆ. ದಕ್ಷಿಣ ಭಾರತದ ಪ್ರಸಿದ್ಧ ದಿಗಂಬರ ಸಂಪ್ರದಾಯದ ದೇವಾಲಯಗಳಲ್ಲಿ ಒಂದೆಂಬ ಖ್ಯಾತಿ ಪಡೆದ ಇದನ್ನು ಪ್ರಾಚೀನ ಶೈಲಿಗೆ ಧಕ್ಕೆ ಉಂಟಾಗದಂತೆ ವೀರೇಂದ್ರ ಹೆಗ್ಗಡೆಯವರು 2001ರಲ್ಲಿ ಶಿಲಾಮಯವಾಗಿ ನವೀಕರಿಸಿದ್ದಾರೆ. ಶ್ರೇಷ್ಠ ಜೈನ ಮುನಿವರ್ಯರು ಇಲ್ಲಿ ಬಂದು ಶ್ರೀ ಚಂದ್ರನಾಥ ಸ್ವಾಮಿಯ ದರ್ಶನ ಮಾಡಿದ್ದಾರೆ. ಉತ್ತರ ಭಾರತ ಸಹಿತ ದೇಶದ ನಾನಾ ಕಡೆಯಿಂದ ಶ್ರಾವಕರು ಇಲ್ಲಿಗೆ ಆಗಮಿಸಿ ಪುನೀತರಾಗುತ್ತಾರೆ  

 ವಾದಿರಾಜರ ಆಗಮನ :-

                 16 ನೇಯ ಶತಮಾನದಲ್ಲಿ ಇಲ್ಲಿ ಪೆರ್ಗಡೆ ವಂಶದ ದೇವರಾಜ ಹೆಗ್ಗಡೆಯವರು ಧರ್ಮಾಧಿಕಾರಿಗಳಾಗಿದ್ದಾಗ ಉಡುಪಿಯ ವಾದಿರಾಜ ಯತಿಗಳು ಈ ಭಾಗಕ್ಕೆ ಆಗಮಿಸಿದ್ದರು. ದೇವಾಲಯದ ಶಿವಲಿಂಗವನ್ನು ವೈದಿಕ ವಿಧಿಗಳಿಂದ ಪವಿತ್ರಗೊಳಿಸಿರಲಿಲ್ಲ ಎಂಬ ಕಾರಣಕ್ಕೆ ಅವರು ಭಿಕ್ಷೆ (ಭೋಜನ) ಸ್ವೀಕರಿಸಲು ಸಮ್ಮತಿಸಲಿಲ್ಲ. ಕ್ಷೇತ್ರದಲ್ಲಿ ಚ್ಯುತಿಯಿಲ್ಲದೆ ದಾನಧರ್ಮಾದಿ ಸತಕಾರ್ಯಗಳನ್ನು ಆಚರಿಸುತ್ತಿದ್ದ ಹೆಗ್ಗಡೆಯವರು ಶಿವಲಿಂಗವನ್ನು ಪವಿತ್ತಗೊಳಿಸಲು ವಾದಿರಾಜ ಯತಿಗಳನ್ನೇ ಪ್ರಾರ್ಥಿಸಿದರು..

ಧರ್ಮಸ್ಥಳವಾಯಿತು ಕುಡುಮ : -

                  ಉಡುಪಿಯ ಶ್ರೀ ವಾದಿರಾಜ ಯತಿಗಳು ಕುಡುಮದ ಶ್ರೀ ಮಂಜುನಾಥ ಸ್ವಾಮಿ ದೇವಾಲಯವನ್ನು ವೈದಿಕ ವಿಧಿಗಳಿಂದ ಶುದ್ಧೀಕರಿಸಿ ಶಿವಲಿಂಗವನ್ನು ಪವಿತ್ರಗೊಳಿಸಿದರು. ದಾನ ಧರ್ಮಾದಿ ಕಾರ್ಯಗಳು ಅನೂಚಾನವಾಗಿ ನಡೆದು ಬರುತ್ತಿರುವುದರಿಂದ, ಧರ್ಮದ ನೆಲೆವೀಡಾಗಿ ಇದು ಕಂಗೊಳಿಸಬೇಕು, ಜಗತ್ತಿನಲ್ಲಿ ಈ ಕ್ಷೇತ್ರದ ಕೀರ್ತಿ ಪಸರಿಸಬೇಕು ನಾಡಿನ ಭಕ್ತರಿಗೆ ಕ್ಷೇತ್ರದ ದೇವರ ಆಶೀರ್ವಾದ ದೊರೆಯಬೇಕು ಎಂಬ ಸದಾಶಯದಿಂದ ಈ ಕ್ಷೇತ್ರವು ‘ಧರ್ಮಸ್ಥಳ’ವೆಂದು ಹೆಸರು ಪಡೆದು ಸಕಲ ದಾನಧರ್ಮಗಳ ನೆಲೆಯಾಗಲೆಂದು ಹರಸಿದರು. ಹೀಗೆ ವಾದಿರಾಜ ಯತಿಗಳಿಂದ ಅಭಿದಾನ ಪಡೆದ ಈ ಕ್ಷೇತ್ರವು ಅಂದಿನಿಂದ ನಿರಂತರವಾಗಿ ಧರ್ಮ ಕಾರ್ಯಗಳ ನೆಲೆವೀಡಾಗಿ ಸತ್ಕಾರ್ಯಗಳ ಆಚರಣೆಯನ್ನು ನಡೆಸುತ್ತಾ ಬಂದಿದೆ. ತನ್ನ ಹೆಸರಿಗೆ ಲವಲೇಶವೂ ವ್ಯತ್ಯಾಸ ಬರದಂತೆ ಧರ್ಮಸ್ಥಳ ಎಲ್ಲ ರೀತಿಯ ದಾನಧರ್ಮಗಳಿಗೂ ಪವಿತ್ರ ನೆಲೆಯಾಗಿ ಸಂಪನ್ನಗೊಂಡಿದೆ, ಬೆಳಗಿ ನಿಂದಿದೆ. ಜಾತಿ ಮತ ಪಂಥ ಸಂಸ್ಕøತಿ ಭೇದವಿಲ್ಲದೆ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಅತಿಥಿಗೂ ಅನ್ನ ಮತ್ತು ವಸತಿ ನೀಡುತ್ತಿದೆ. ಜ್ಞಾನದಾನವೆಂಬ ಮಹತ್ಕಾರ್ಯದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮೂಲಕ ಅಸಂಖ್ಯ ವಿದ್ಯಾರ್ಥಿಗಳ ಜ್ಞಾನ ತೃಷೆಯನ್ನು ಇಂಗಿಸಿ ಬದುಕಿನ ಉನ್ನತಿಗೇರಿಸುತ್ತಿದೆ. ಮನಸ್ಸು, ದೇಹ ಮತ್ತು ಆತ್ಮಗಳಿಗೆ ಚಿಕಿತ್ಸೆ ನೀಡಬಲ್ಲ ಕಾಯಕಲ್ಪ ಕೇಂದ್ರಗಳನ್ನು ಸ್ಥಾಪಿಸಿದೆ. ಯೋಗಯಜ್ಞವೆಂಬ ಸತ್ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

                  ಮಂಜಯ್ಯ ಹೆಗ್ಗಡೆಯವರು 19ನೆಯ ಧರ್ಮಾಧಿಕಾರಿಗಳಾದ ಬಳಿಕ ಕ್ಷೇತ್ರದ ವ್ಯಾಪ್ತಿ ವಿಸ್ತಾರವಾಗುತ್ತಾ ಹೋಯಿತು. ರತ್ನವರ್ಮ ಹೆಗ್ಗಡೆಯವರ ಕಾಲದಲ್ಲಿ 1955ರಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ದಿಯತ್ತ ದಾನ ಪರಂಪರೆ ಮುಂದುವರಿಯಿತು. 1968ರಲ್ಲಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಮೇಲೆ ಕ್ಷೇತ್ರದ ಹೆಸರು  ಜಗತ್ತಿನ ಭೂಪಟದಲ್ಲಿ  ಮಿಂಚುವ ‘ಮಿನುಗುತಾರೆ’ ಯಾಗಿದೆ. ಧರ್ಮಸ್ಥಳದ ಖ್ಯಾತಿಯನ್ನು ಅನ್ವರ್ಥಗೊಳಿಸಿದ ಅವರು ಬಹುಜನರ ಪಾಲಿಗೆ ದೇವರ ಇನ್ನೊಂದು ರೂಪ. ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ತಳಮಟ್ಟದಲ್ಲಿದ್ದ ಜನರ ಜೀವನವನ್ನು ಉದ್ಧಾರದ ಔನ್ನತ್ಯಕ್ಕೇರಿಸಿದ್ದಾರೆ. ಪ್ರಗತಿಬಂಧು ತಂಡ ಎಂಬ ಸ್ವ ಸಹಾಯ ಸಂಘಗಲ ಕಲ್ಪನೆಗೆ ಮೂರ್ತ ರುಊಪ ನೀಡಿ ನಿರಂತರ ಪ್ರಗತಿಯ ಜ್ಯೋತಿ ಬೆಳಗಿದ್ದಾರೆ. ಜ್ಞಾನವಿಕಾಸ ಯೋಜನೆಯ ಮೂಲಕ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೊ ಅಲ್ಲಿ ದೇವತೆಗಳಿರುತ್ತಾರೆ ಎಂಬ ಆರ್ಯೋಕ್ತಿಗೆ ಚಿನ್ನದ ಮೆರುಗು ಲೇಪಿಸಿದ್ದಾರೆ. ಜನಜಾಗೃತಿ ಯೋಜನೆಯ ಅನುಷ್ಠಾನದಿಂದ ಪಾನಭಕ್ತರ ಮನಸ್ಸು ಪಾನಮುಕ್ತಿಯೆಡೆಗೆ ತಿರುಗುವಲ್ಲಿ ಪವಾಡಸದೃಶ ಕೆಲಸವನ್ನೇ ಮಾಡಿದ್ದಾರೆ.

ಸರ್ವ ಧರ್ಮ ಸಮನ್ವಯ ಕೇಂದ್ರ:-

                    ಧರ್ಮಸ್ಥಳ ಸರ್ವ ಧರ್ಮ ಸಮನ್ವಯ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯ ಮೂಲಕ ಭಾರತೀಯ ಸಂಸ್ಕøತಿಯನ್ನು ಉಜ್ವಲಗೊಳಿಸುವ ಧರ್ಮೋತ್ಥಾನ ಟ್ರಸ್ಟ್‍ನ ಸ್ಥಾಪನೆ ಡಾ| ವೀರೇಂದ್ರ ಹೆಗ್ಗಡೆಯವರ ಧಾರ್ಮಿಕ ಕಳಕಳಿಯ ಪ್ರತೀಕ. ಕಲೆಗಳಿಗೆ ನೆಲೆ, ಕಲಾವಿದರಿಗೆ ನೆಲೆ ಕಲಾವಿದರಿಗೆ ಬೆಲೆ ಇದು ಈ ಕ್ಷೇತ್ರದ ವೈಶಿಷ್ಟ್ಯ. ಹಸ್ತಪ್ರÀ್ರತಿಗಳ ಸಂರಕ್ಷಣೆ, ವಸ್ತು ಸಂಗ್ರಹಾಲಯ ಇದೆಲ್ಲವೂ ಅವರ ಹಿರಿಮೆಯ ಕಿರೀಟಕ್ಕಿರಿಸಿದ ಗರಿಗಳು. ‘ಮನುಜಕುಲ ಒಂದೇ ವಲಂ’ ಎನ್ನುವ ಪಂಪನ ಮಾತು ಡಾ| ವೀರೇಂದ್ರ ಹೆಗ್ಗಡೆಯವರ ನಡೆ ನುಡಿಗಳಲ್ಲಿ ಪ್ರತಿಬಿಂಬಿತ. ಧರ್ಮ ಜಾತಿ ಮತ ತತ್ವಗಳ ಭೇದ ಈ ಕ್ಷೇತ್ರಕ್ಕಿಲ್ಲ ಎಂಬ ಸತ್ಸಂಪ್ರದಾಯದ ನೆಲೆಗಟ್ಟು ಅವರು ಧರಿಸಿದ ಕೀರ್ತಿಯ ಕರೀಟದ ಮಣಿ. ಇದರ ಪ್ರತೀಕವಾಗಿ ಮಂಜುನಾಥ ಸ್ವಾಮಿಯೊಂದಿಗೆ ಜೈನ ಮತದ ಪವಿತ್ರವಾದ ಜ್ಯನ ಬಸದಿಯಲಿ ಚಂದ್ರನಾಥ ಸ್ವಾಮಿಯನ್ನೂ ಆರಾಧಿಸುತ್ತಾ ಬಂದಿದ್ದಾರೆ. ಧಾರ್ಮಿಕ ಸಮರಸ್ಯಕ್ಕೆ ಶ್ರೇಷ್ಠ ಕೊಡುಗೆಯಾಗಿ ಧರ್ಮಸ್ಥಳ ಕಣ್ಣ ಮುಂದೆ ನಿಂತಿದೆ. ಕ್ಷೇತ್ರದ ಆಡಳಿತ ಜೈನ ಧರ್ಮೀಯರಾದ ಹೆಗ್ಗಡೆ ಮನೆತನದವರದ್ದು. ಕ್ಷೇತ್ರದ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿ ಶೈವ (ಶಿವ). ಶಿವನ ಆರಾಧನೆಗೆ ನೇಮಿಸಲ್ಪಡುವ ಅರ್ಚಕರು ವೈಷ್ಣವರು ತ್ರಿವಳಿ ಸಂಗಮ ಧರ್ಮಸ್ಥಳದ ವೈಸಿಷ್ಟ್ಯ.