Sri Dharmasthala Manjunatheshwara Dharmotthana Trust

ಪುರಾತನ ಸ್ಮಾರಕಗಳ ಸಂರಕ್ಷಕ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್

                    ಧರ್ಮಸ್ಥಳ ಸರ್ವಧರ್ಮ ಸಮನ್ವಯ ಕೇಂದ್ರವೆಂಬುದು ಜನಜನಿತ. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯ ಮೂಲಕ ಭಾರತದ ಸಂಸ್ಕøತಿಯನ್ನು ಪ್ರಜ್ವಲಗೊಳಿಸುವ ಧರ್ಮೋತ್ಥಾನ ಟ್ರಸ್ಟ್ ಸ್ಥಾಪನೆ ಮೂಲಕ ಅನೇಕಾನೇಕ ಪಾಳು ಬಿದ್ದ ದೇಗುಲಗಳ ಜೀರ್ಣೋದ್ಧಾರ ಮಾಡಿಸಿದರು ಡಾ| ಹೆಗ್ಗಡೆಯವರು. ಇವರ ಸೇವಾ ಕೈಂಕರ್ಯ ನಿಃಸ್ವಾರ್ಥವನ್ನು ಮನಗಂಡ ಕರ್ನಾಟಕ ಸರಕಾರ ಇವರ ಸಹಯೋಗದಿಂದ ಈಗ ದೇಗುಲ ಜೀರ್ಣೋದ್ಧಾರಕ್ಕೆ ಮುಂದಾಗಿ ಅನೇಕ ದೇಗುಲಗಳ ಪುನರುತ್ಥಾನ ಮಾಡಿಸಿದೆ. 

                     ಹೇರಳ ಹಣ ವೆಚ್ಚ ಮಾಡಿ ಹೊಸ ದೇವಾಲಯವನ್ನು ನಿರ್ಮಿಸುವುದಕ್ಕಿಂತ ಐತಿಹಾಸಿಕ ಹಿನ್ನೆಲೆಯಿರುವ ಪುರಾತನ ದೇವಾಲಯಗಳನ್ನು ಸಂರಕ್ಷಿಸುವುದೇ ಲೇಸು ಎಂಬುದು ಧರ್ಮಾಧಿಕಾರಿ ಡಾ| ಹೆಗ್ಗಡೆಯವರ ಅಭಿಮತ. ಈ ನಿಟ್ಟಿನಲ್ಲಿ ದೇವಾಲಯದ ಸಂರಕ್ಷಣಾ ಕಾರ್ಯವನ್ನು ನಿರ್ವಹಿಸುವಾಗ ಕಟ್ಟಡದ ಮೂಲ ಸ್ವರೂಪಕ್ಕೆ ಧಕ್ಕೆಯುಂಟಾಗದಂತೆ ಅಧಿಕೃತ ಸಂರಕ್ಷಣಾ ಕೈಪಿಡಿಗಳಲ್ಲಿ ನಮೂದಿಸಿದ ನಿಯಮಾವಳಿ ಮತ್ತು ವಿಧಾನಗಳಂತೆ ಹಾಗೂ ಇತ್ತೀಚಿಗಿನ ವೈಜ್ಞಾನಿಕ ಪ್ರಮೇಯ/ವಿಧಾನಗಳನ್ನು ಅನುಸರಿಸಿಕೊಂಡು, ತಜ್ಞರ ಸಲಹೆಯಂತೆ ಕೆಲಸ ನಿರ್ವಹಿಸುವ ಅಗತ್ಯವನ್ನು ಮನಗಂಡು ಪುರಾತತ್ವ, ಶಾಸ್ತ್ರ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ, ಸಂಗೀತ, ಕಲೆ ಶಿಲಾಖಂಡಗಳನ್ನು ಪರಸ್ಪರ ಜೋಡಿಸುವ ವಿಭಿನ್ನ ತಂತ್ರಗಾರಿಕೆ ಮತ್ತು ಆಡಳಿತ ಇತ್ಯಾದಿ ಕ್ಷೇತ್ರಗಳಲ್ಲಿ ಅಪಾರ ಪರಿಜ್ಞಾನವುಳ್ಳ ತಜ್ಞರನ್ನೊಳಗೊಂಡ ಪ್ರತ್ಯೇಕ ಸಲಹಾ ಸಮಿತಿಯೊಂದನ್ನು ರಚಿಸಿದರು. ಟ್ರಸ್ಟಿನ ಕಾರ್ಯಚಟುವಟಿಕೆಗಳನ್ನು ಸಕ್ರಿಯವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಪೂಜ್ಯರ ಸಹೋದರ ಡಿ. ಸುರೇಂದ್ರ ಕುಮಾರ್ ಮುತುವರ್ಜಿಯಿಂದ ವಹಿಸಿಕೊಂಡಿದ್ದಾರೆ. 

ಉದ್ದೇಶಗಳು :

                      ಐತಿಹಾಸಿಕ ಮಹತ್ವವುಳ್ಳ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸುವುದು ಅವುಗಳಲ್ಲಿ ಇರುವ ಶಿಲ್ಪಕಲಾಕೃತಿಗಳನ್ನು ಸಂರಕ್ಷಿಸಿ, ಉಳಿಸಿಕೊಂಡು ಬರುವುದು. ಇತಿಹಾಸ, ಪರಂಪರೆ, ಸಂಸ್ಕøತಿಯನ್ನು ಪುನರುಜ್ಜೀವಿತಗೊಳಿಸುವುದು. ದೇವಾಲಯಗಳನ್ನು ಪುನರಪಿ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕøತಿಕ ಕೇಂದ್ರಗಳನ್ನಾಗಿಸುವುದು. ಧರ್ಮೋತ್ಥಾನ ಟ್ರಸ್ಟ್ ಪ್ರಾರಂಭಗೊಂಡ ನಂತರದ 20 ವರ್ಷಗಳಲ್ಲಿ ರಾಜ್ಯದ 25 ಜಿಲ್ಲೆಗಳ ವ್ಯಾಪ್ತಿಯಲ್ಲಿ 143 ಪುರಾತನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಕೈಗೊಂಡು, ಅವುಗಳ ಪೈಕಿ 131 ದೇವಾಲಯಗಳ ಕೆಲಸವನ್ನು ಪೂರೈಸಲಾಗಿದೆ. ಈ ತನಕ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಂಡಿರುವ 143 ದೇವಸ್ಥಾನಗಳ ಕಾಮಗಾರಿಗಾಗಿ ಒಟ್ಟು ರೂ. 1183.32 ಲಕ್ಷಗಳು ವೆಚ್ಚವಾಗಿದ್ದು ಧರ್ಮೋತ್ಥಾನ ಟ್ರಸ್ಟ್ ವತಿಯಿಂದ – ರೂ. 459.29 ಲಕ್ಷ, ಕರ್ನಾಟಕ ಸರಕಾರದ ವತಿಯಿಂದ – ರೂ. 347.49 ಲಕ್ಷ, ದೇವಸ್ಥಾನಗಳ ಸಮಿತಿ ಅಥವಾ ಊರವರ ವತಿಯಿಂದ ರೂ. 376.54 ಲಕ್ಷ ವ್ಯಯಿಸಲಾಗಿದೆ. 

ಕರ್ನಾಟಕದ ಸರಕಾರದ ಸಹಭಾಗಿತ್ವದೊಂದಿಗೆ ಧರ್ಮೋತ್ಥಾನ ಟ್ರಸ್ಟ್ : 

                   ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಪ್ರಾರಂಭದ 10 ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯವನ್ನು ಗಮನಿಸಿದ ಕರ್ನಾಟಕ ಸರಕಾರವು ಈ ಟ್ರಸ್ಟ್‍ನ್ನು ಸ್ಮಾರಕಗಳ ಸಂರಕ್ಷಣಾ ಕಾರ್ಯದಲ್ಲಿ ಸರಕಾರದ ಸಹಭಾಗಿತ್ವದ ಸಂಸ್ಥೆಯೆಂದು ಭಾವಿಸಿ, 2002-03ರ ಆರ್ಥಿಕ ಸಾಲಿನಿಂದ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿದೆ. ಪ್ರತಿ ವರ್ಷ ಕಾಮಗಾರಿಯಲ್ಲಿ ವೆಚ್ಚದ ತಲಾ ಶೇ.40 ರಷ್ಟನ್ನು ಕರ್ನಾಟಕ ಸರಕಾರ ಹಾಗೂ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಭರಿಸಿ ಇನ್ನುಳಿದ ಶೇ. 20ರಷ್ಟನ್ನು ಮಾತ್ರ ಸ್ಥಳೀಯರಿಂದ ಭರಿಸಲಾಗುತ್ತಿದೆ.

                   ಈ ಕ್ರಿಯಾಯೋಜನೆಯಡಿ ಈ ತನಕ ಒಟ್ಟು 160 ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ, ಸರಕಾರದ ಸಹಭಾಗಿತ್ವದಲ್ಲಿ ಧರ್ಮೋತ್ಥಾನ ಟ್ರಸ್ಟ್ ದೇಶದಲ್ಲಿಯೇ ಪುರಾತನ ಸ್ಮಾರಕಗಳ ಸಂರಕ್ಷಣಾ ಕಾರ್ಯವನ್ನು ನೆರವೇರಿಸುತ್ತಿರುವ ಏಕೈಕ ಖಾಸಗಿ ಸಂಸ್ಥೆಯಾಗಿರುವುದರಿಂದ ಪೂಜ್ಯರ ಕಾರ್ಯಕ್ಷೇತ್ರಕ್ಕೆ ಸರಕಾರದಿಂದ ದೊರೆತ ಮನ್ನಣೆಯ ಮಣೆ ಎನ್ನಬೇಕು.

ಕ್ರಿ,ಶ. 11ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದ ರಾಷ್ಟ್ರಕೂಟ ವಾಸ್ತುಶಿಲ್ಪ ಶೈಲಿಯನ್ನು ಹೊಂದಿರುವ ರಾಣಿಬೆನ್ನೂರು ತಾಲೂಕು, ಹಿರೇಮಾಗನೂರು ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನ.

ಕ್ರಿ.ಶ. 10ನೇ ಶತಮಾನದಲ್ಲಿ ರಾಷ್ಟ್ರಕೂಟರ ಶಿಲ್ಪಿ ಶೈಲಿಯಲ್ಲಿ ನಿರ್ಮಿಸಲಾಗಿದ್ದ ಹಾನಗಲ್ ತಾಲೂಕು, ಎಳವಟ್ಟಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ.

ಕ್ರಿ.ಶ. 11ನೇ ಶತಮಾನದಲ್ಲಿ ನಿರ್ಮಿತವಾದ ರಾಷ್ಟ್ರಕೂಟ ಹಾಗೂ ಹೊಯ್ಸಳ ಶಿಲ್ಪ ಶೈಲಿಯನ್ನು ಹೊಂದಿರುವ ಬ್ಯಾಡಗಿ ತಾಲೂಕು, ಮುತ್ತೂರು ಗ್ರಾಮದ ಶ್ರೀ ಕಲ್ಲೇಶ್ವರ ದೇವಸ್ಥಾನ.

ಕ್ರಿ.ಶ. 11-12ನೇ ಶತಮಾನದಲ್ಲಿ, ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿತವಾದ ಶಿಲಾ ದೇಗುಲಗಳ ಪೈಕಿ ಇಟ್ಟಿಗೆ ಹರ ಮತ್ತು ಶಿಖರವಿರುವ ದೇವಸ್ಥಾನಗಳು ಅತ್ಯಪೂರ್ವ.

                 ಹಾವೇರಿ ತಾಲೂಕು ಕಲ್ಕೇರಿಯ ಶ್ರೀ ಬಸವೇಶ್ವರ ದೇವಸ್ಥಾನವು ಹಿಂದೆ ಶಿಥಿಲಗೊಂಡು ಶಿಖರವು ಪೂರ್ತಿ ಬಿದ್ದು ಹೋಗಿತ್ತು. ಛಾವಣಿಯಲ್ಲಿ ಗಿಡಮರಗಳು ಬೆಳೆದಿದ್ದವು. ಶಿಖರದ ಅವಶೇಷಗಳನ್ನು ಜಾಗರೂಕತೆಯಿಂದ ಬಿಚ್ಚಿ, ಇಟ್ಟಿಗೆಗಳನ್ನು ಪ್ರತ್ಯೇಕಿಸಿ ಹಿಂದಿನ ನಮೂನೆಯ ಸುಮಾರು 20 ಮಾದರಿ ಇಟ್ಟಿಗೆಗಳನ್ನು ಹೊಸದಾಗಿ ತಯಾರಿಸಿ, ಕಟ್ಟಡವನ್ನು ಪುನರ್ ನಿರ್ಮಿಸಿದ ನಂತರ ರಚಿಸಿದ ಶಿಖರವು ಇಂದು ತನ್ನ ಮೂಲ ಸ್ವರೂಪವನ್ನು ಮರುಪಡೆದು ಅತ್ಯಾಕರ್ಷಕವಾಗಿದೆ.

                 ಟ್ರಸ್ಟ್ ವತಿಯಿಂದ ಸಂರಕ್ಷಿಸಲ್ಪಟ್ಟ ಮಂಡ್ಯ ತಾಲೂಕು, ಹೊಸ ಬುದನೂರು ಗ್ರಾಮದ ಶ್ರೀ ಕಾಶಿ ವಿಶ್ವೇಶ್ವರ ದೇವಸ್ಥಾನ, ಕೆ.ಆರ್. ಪೇಟೆ ತಾಲೂಕು ಅಘಾಲಯದ ಶ್ರೀ ಮಲ್ಲೇಶ್ವರ ದೇವಸ್ಥಾನ ಮತ್ತು ಸಿಂದಘಟ್ಟದ ಶ್ರೀ ಸಂಗಮೇಶ್ವರ ದೇವಸ್ಥಾನದ ಕಟ್ಟಡಗಳು ಪುನರ್ ನಿರ್ಮಾಣ ಮಾಡುವ ಸ್ಥಿತಿಯಲ್ಲಿರಲಿಲ್ಲ. ಇವುಗಳು ರಾಜ್ಯ ಸಂರಕ್ಷಿತ ಸ್ಮಾರಕಗಳಾಗಿದ್ದು ಪುನರ್ ನಿರ್ಮಾಣ ಸಾಧ್ಯವಾಗದೆ ಅನಾಥ ಸ್ಥಿತಿಯಲ್ಲಿತ್ತು.

                 ಧರ್ಮೋತ್ಥಾನ ಟ್ರಸ್ಟ್ ಇದರ ಸಂರಕ್ಷಣಾ ಕಾರ್ಯ ಕೈಗೆತ್ತಿಕೊಂಡ ಬಳಿಕ ನಿರ್ಲಕ್ಷಗೊಳಗಾಗಿದ್ದ ದೇವಾಲಯಗಳು ಭಕ್ತರನ್ನು ಸೆಳೆಯತೊಡಗಿದವು. ಇವುಗಳ ಸಂರಕ್ಷಣಾ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿದ ಟ್ರಸ್ಟ್‍ನ ಕೆಲಸಗಾರರ ಶ್ರಮ ಹಾಗೂ ಕೈಚಳಕವು ಜನರ ಪ್ರಶಂಸೆಗೊಳಪಟ್ಟಿತು. ಶಿಥಿಲಗೊಂಡಿದ್ದ ಕಟ್ಟಡದ ಸುತ್ತಲೂ ಹೆಚ್ಚಿನ ಕಲ್ಲುಗಳು ಅಸ್ತವ್ಯಸ್ತವಾಗಿ ಬಿದ್ದಿದ್ದಲ್ಲದೆ, ಕೆಲವಂತೂ ಮಣ್ಣಿನಲ್ಲಿ ಹುದುಗಿ ಹೋಗಿ ಕಣ್ಮರೆಯಾಗಿತ್ತು. ಇಂತಹ ಕಲ್ಲುಗಳನ್ನೆಲ್ಲಾ ಜಾಗ್ರತೆಯಾಗಿ ಹುಡುಕಿ ಪ್ರತ್ಯೇಕಿಸಿ, ಶುಚಿಗೊಳಿಸಿ, ತುಂಡಾಗಿರುವ ಕಲ್ಲುಗಳನ್ನು ಮರುಜೋಡಿಸಿ, ಕಳೆದು ಹೋಗಿರುವ ಕಲ್ಲುಗಳ ಬದಲಿಗೆ ಹೊಸ ಕಲ್ಲುಗಳನ್ನು ತಯಾರಿಸಿ ದೇವಸ್ಥಾನದ ಕಟ್ಟಡಗಳ ಮೂಲಸ್ವರೂಪದ ನಕಾಶೆಯನ್ನು ತಯಾರಿಸಿ ಪುನರ್ ನಿರ್ಮಾಣಗೊಂಡ ದೇವಸ್ಥಾನದ ಕೆಲಸ ಇಂದು ಜನರಿಗೆ ಧರ್ಮೋತ್ಥಾನ ಟ್ರಸ್ಟ್  ಕೆಲಸದ ಬಗ್ಗೆ ಅಭಿಮಾನ.

                 ಶಿವಮೊಗ್ಗ ಜಿಲ್ಲೆ ಹೊಸಗುಂದ ಗ್ರಾಮದ ಶ್ರೀ ಉಮಾ-ಮಹೇಶ್ವರ ದೇವಾಲಯ ಕ್ರಿ.ಶ. 12-13ನೇ ಶತಮಾನದ್ದಾಗಿದ್ದು ಪ್ರಾದೇಶಿಕ ಶಾಂತರ ಶೈಲಿಯದ್ದಾಗಿದೆ. ದುಸ್ಥಿತಿಯಲ್ಲಿದ್ದ ದೇವಸ್ಥಾನದ ಕಟ್ಟಡದೊಳಗೆ ಮರದ ಬೇರುಗಳು ಸೇರಿಕೊಂಡು ನೆಲದ ಚಪ್ಪಡಿಗಳು ಅಸ್ತವ್ಯಸ್ತವಾಗಿ ಶಿಥಿಲಗೊಂಡಿದ್ದವು.

                 ಕಾನನದಲ್ಲಿ ಅಡಗಿದ್ದ ಈ ದೇವಸ್ಥಾನದ ಸಂರಕ್ಷಣಾ ಕಾರ್ಯವನ್ನು ಟ್ರಸ್ಟಿನ 100ನೇ ಅಭಿವೃದ್ಧಿ ಕೆಲಸವಾಗಿ ಗುರುತಿಸಿಕೊಂಡು, ನವರಂಗದ ಮಧ್ಯಭಾಗದಲ್ಲಿದ್ದ ಬೃಹದಾಕಾರದ ಏಕಶಿಲಾ ಹಾಸುಗಲ್ಲು ಒಡೆದು ಹೋಗುವ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಅದರ ಭದ್ರತೆಗಾಗಿ ಸಮರ್ಪಕ ಕ್ರಮ ಕೈಗೊಂಡು, ಕಟ್ಟಡದ ಕಲ್ಲುಗಳನ್ನು ಪೂರ್ತಿ ಬಿಚ್ಚಿ, ಅಧಿಷ್ಠಾನವನ್ನು ಭದ್ರಪಡಿಸಿ ಪುನರ್ ನಿರ್ಮಿಸಲ್ಪಟ್ಟ ದೇವಸ್ಥಾನ ಈಗ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರನ್ನು ಕೂಡಾ ಆಕರ್ಷಿಸುತ್ತಿದೆ. 

                   ಧರ್ಮೋತ್ಥಾನ ಟ್ರಸ್ಟಿನ ಕಾರ್ಯಚಟುವಟಿಕೆಗಳ ಪ್ರಗತಿಗಾಗಿ ಟ್ರಸ್ಟ್‍ನ ಅಧ್ಯಕ್ಷರಾದ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ, ಕರ್ನಾಟಕ ಸರಕಾರದ ಪ್ರಾಚ್ಯ ವಸ್ತು ಇಲಾಖಾ ಸಹಭಾಗಿತ್ವದಲ್ಲಿ ಡಿ. ಸುರೇಂದ್ರ ಕುಮಾರ್‍ರ ನೇತೃತ್ವ, ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಅವರ ಪ್ರೋತ್ಸಾಹ ಗಣನೀಯ. 

" ಒಬ್ಬ ವ್ಯಕ್ತಿ ತಾನು ಜೀವಿಸುತ್ತಿರುವ ಸಮಾಜದಲ್ಲಿ ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ಯಾವ ರೀತಿಯಲ್ಲಿ ವ್ಯವಹರಿಸುತ್ತಾನೋ ಅದಕ್ಕೆ ಅನುಸಾರವಾಗಿ ಆತನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಬೇರೆ ಬೇರೆ ಜನರ ಸಂಪರ್ಕದಿಂದ, ವ್ಯವಹಾರ ಬಳಕೆಯಿಂದ ವಿವಿಧ ರೀತಿಯ ಬಗೆ ಬಗೆ ಅನುಭವಗಳನ್ನು ಸಂಪಾದಿಸುತ್ತಾನೆ. ಇದರಿಂದಾಗಿ ಅವನಲ್ಲಿ ಶ್ರೇಷ್ಠವಾದ ಯೋಗ್ಯತೆಯು ಹೆಪ್ಪುಗಟ್ಟುತ್ತದೆ. ಅವನು ಉನ್ನತ ಸ್ಥಾನ ಮಾನಗಳನ್ನು ಗಳಿಸಲು ನೆರವಾಗುತ್ತದೆ."