Manjusha Museum / Car Museum / Chariots / Leaf Inscription

ವಸ್ತು ಸಂಗ್ರಹಾಲಯ :

                          ಮಂಜೂಷಾ :- ವೈವಿಧ್ಯದ ಕಣಜ ಮಂಜೂಷಾ ವಸ್ತು ಸಂಗ್ರಹ ಭಂಡಾರ. ಇದು ಜಗತ್ತಿನ ವೈವಿಧ್ಯಗಳ ದರ್ಶನ ಮಾಡಿಸುತ್ತದೆ. ಕಣ್ಣಳತೆಯಲ್ಲಿ ನೋಡಿ ನಿಲುಕದ, ಒಂದೆರಡು ದಿನದಲ್ಲಿ ನೋಡಿ ಮುಗಿಯದ ವಸ್ತುಗಳ ಸಂಗ್ರಹ ಇಲ್ಲಿದೆ. ಹೆಗ್ಗಡೆಯವರು ತಮ್ಮ ಆಸಕ್ತಿಯಿಂದ ವಿವಿಧೆಡೆ ಸಂಗ್ರಹಿಸಿದ ಅಪಾರ ವಸ್ತುಗಳನ್ನು ಜತನವಾಗಿ ಕಾಪಿಟ್ಟುಕೊಂಡು ಇಲ್ಲಿ ಪ್ರದರ್ಶನದ ವ್ಯವಸ್ಥೆ ಮಾಡಿದ್ದಾರೆ. ಸತತ 35 ವರ್ಷಗಳಿಂದ ಹೆಗ್ಗಡೆಯವರು ಸಂಗ್ರಹಿಸಿದ ವಸ್ತುಗಳು ಇಲ್ಲಿದ್ದು ಒಂದೊಂದು ವಸ್ತುಗಳೂ ಒಂದೊಂದು ಕಥೆ ಹೇಳುತ್ತಿವೆ. ಕಲ್ಲಿನ ಲೋಹದ ಕಲಾಕೃತಿಗಳು, ವರ್ಣಚಿತ್ರಗಳು, ಆಭರಣಗಳು, ಪೂಜಾ ಸಾಮಗ್ರಿಗಳು, ಗೃಹ ಬಳಕೆಯ ವಸ್ತುಗಳು, ಖ್ಯಾತನಾಮರ ವಸ್ತುಗಳು, ಇತಿಹಾಸದ ಅಧ್ಯಯನಕ್ಕೆ ಪೂರಕವಾದ ವಸ್ತುಗಳು ಅಬ್ಬ ಒಂದೆರಡಲ್ಲ ನೋಡಲೆರಡು ಕಣ್ಣು ಸಾಲದು ಎಂಬಂತಿದೆ.

                          ಸಾಮಾನ್ಯ ದಿನಬಳಕೆಯ ವಸ್ತುಗಳಾದ ಪೆನ್ನುಗಳು, ಕನ್ನಡಕಗಳು, ಅಡಕತ್ತರಿಗಳು ಕಾಲ ಕಾಲಕ್ಕೆ ಹೇಗೆ ಬದಲಾವಣೆಗೊಂಡು ತಮ್ಮ ರೂಪವನ್ನು ಬದಲಿಸಿಕೊಂಡಿವೆ ಎಂಬುದನ್ನು ನಿದರ್ಶಿಸುವ ಅಸಂಖ್ಯ ವಸ್ತುಗಳನ್ನೆಲ್ಲ ಇಲ್ಲಿ ನೋಡಬಹುದಾಗಿದೆ. ನೂರಾರು ವರ್ಷಗಳ ಹಿಂದಿನ ವೈಭವ ಇಲ್ಲಿ ಮೇಳೈಸಿದೆ. ಸ್ವತ: ಕಲಾಸಕ್ತಿ ಹೊಂದಿ ಛಾಯಾಗ್ರಾಹಕರಾಗಿರು ಡಾ.ವೀರೇಂದ್ರ ಹೆಗ್ಗಡೆಯವರ ಮೆಚ್ಚಿನ ಕ್ಯಾಮೆರಾಗಳಿಂದ ತೂಡಗಿ ದೊಡ್ಡ ದೊಡ್ಡ ಕ್ಯಾಮೆರಾಗಳವರೆಗೆ ಇಲ್ಲಿವೆ. ಹಳೆಯ ಕಾಲದ ಕ್ಯಾಮೆರಾಗಳು ಇಂದಿನ ಡಿಜಿಟಲ್ ಯುಗದಲ್ಲಿ ಕಾಣ ಸಸಿಗುವುದೇ ಅಪರೂಪ ಎಂಬ ಆಸಕ್ತರಿಗೆ ಇಲ್ಲಿದೆ ಕ್ಯಾಮೆರಾ ನಡೆದು ಬಂದ ಹಾದಿಯ ದರ್ಶನ. ಪಾರಂಪರಿಕ ವಸ್ತುಗಳ ಸಂಗ್ರಹ ಇತಿಹಾಸಕ್ಕೆ ದೊಡ್ಡ ಕೊಡುಗೆಯೂ ಹೌದು. ಗತ ದಿನಗಳ ನೆನಪಿನ ದೋಣಿಗೆ ನಾವಿಕನಂತಿರುವ ಈ ಸಂಗ್ರಹಾಲಯ ಕರ್ನಾಟಕದ ದೊಡ್ಡ ಆಸ್ತಿ.             

ಹಳೆಯ ಕಾರುಗಳು :-

                          ಕಾರುಗಳ ಸಂಗ್ರಹ ಅತ್ಯಾಕರ್ಷಕ ಮನಮೋಹಕವಾಗಿದೆ. ಶತ ಶತಮಾನಗಳ ಐತಿಹ್ಯದ ಕಾರುಗಳು, ರಾಜ ಮಹಾರಾಜರು ಪ್ರೆಯಾಣಿಸುತ್ತಿದ್ದ, ಐತಿಹಾಸಿಕ ವ್ಯಕ್ತಿಗಳು ಬಳಸುತ್ತಿದ್ದ, ವಿದೇಶಗಳಿಗಷ್ಟೇ ಸೀಮಿತವಾಗಿದ್ದ ಕಾರುಗಳು ಇಲ್ಲಿದೆ. ಮೊತ್ತ ಮೊದಲ ಮೋಟಾರು ಕಾರಿನ ಮಾದರಿ ಇಲ್ಲಿದೆ. ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರೂ, ಇಂದಿರ ಗಾಂಧಿ , ಮೈಸೂರು ಅರಸರು ಬಳಸುತ್ತಿದ್ದ ಕಾರಿನ ವೀಕ್ಷಣೆ ಒಟ್ಟಾಗಿ ಸಿಗುವುದು ಬಹುಶ: ಇಲ್ಲಿ ಮಾತ್ರ. ಅದೆಷ್ಟೇ ಹಳೆಯ ಕಾರಾದರೂ ಇಂದಿಗೂ ಒಪ್ಪ ಓರಣವಾಗಿ ಚಾಲೂ ಸ್ಥಿತಿಯಲ್ಲಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ನಿಷ್ಣಾತ ಕೆಲಸಗಾರರಿಂದ ಕಾರಿನ ಅಧ್ಯಯನ ಮಾಡಿಸಿ, ದುರಸ್ತಿಗೊಳಿಸಿ ಅದನ್ನು ತಿಂಗಳಿಗೊಮ್ಮೆ ಬಳಸುವುದು ಹೆಗ್ಗಡೆಯವರ ಹವ್ಯಾಸ . ಎತ್ತಿನ ಬಂಡಿ, ಕುದುರೆ ಗಾಡಿ. ಹಳೆಯ ಕಾರುಗಳ ಜತೆಗೆ ಹೊಸ ಕಾರುಗಳೂ ಇಲ್ಲಿವೆ. ಅತಿ ಉದ್ದನೆಯ, ಅತಿ ದಪ್ಪನೆಯ,  ಹಿಂದಿನ ಕಾಲದಲ್ಲಿಯೇ ಈಗಿನಷ್ಟು ಸೌಕರ್ಯಗಳನ್ನು ಹೊಂದಿದ ಕಾರುಗಳೂ  ಜಾಗ ಪಡೆದಿವೆ. ಸಣ್ಣ,ದೊಡ್ಡ ವಿಮಾನಗಳೂ, ರೈಲ್ವೆ  ಎಂಜಿನ್‍ಗಳು ಕೂಡ ಈ ಸಂಗ್ರಹಾಲಯದಲ್ಲಿರುವುದು ವಿಶೇಷ ಆಕರ್ಷಣೆ ಎನಿಸಿದೆ.

ರಥಗಳು :- ಪ್ರಾಚೀನ ಪರಂಪರೆಯ ರಕ್ಷಣೆಯ ಮಹತ್ವದ ಹೆಜ್ಜೆಗಳ ಪೈಕಿ ರಥಗಳು ಸಂಗ್ರಹವೂ ಒಂದು. ಕಾಲನ ದಾಳಿಗೆ ತುತ್ತಾಗಿ ಶಿಥಿಲಗೊಂಡು ರಥಗಳು ನೋಡಲು ಆಕರ್ಷಕವಾಗಿರುವಂತೆ ಸುಸ್ಥಿತಿಗೆ ತಂದು ಇಲ್ಲಿ ಇರಿಸಲಾಗಿದೆ. ಅನುಭವೀ ಕುಶಲಕರ್ಮಿಗಳ ತಂಡ ರಥಗಳನ್ನು ದುರಸ್ತಿ ಮಾಡಿ ವೈಭವೋಪೇತವಾಗಿಡುತ್ತದೆ. ಸಾವಿರಾರು ವೀಕ್ಷಕರು ಹಳೆಯ ಕಾಲದ ರಥಗಳ ವೀಕ್ಷಣೆ ಮಾಡುತ್ತಾರೆ.

ಹೆಗ್ಗಡೆಯವರು ಹೇಳಿದ್ದು :-  ಈ ಜಗತ್ತಿನಲ್ಲಿ ಜನರ ಸ್ವಭಾವವೇ ಬೇರೆಯವರ ತಪ್ಪು, ಕುಂದುಕೊರತೆಗಳನ್ನು ನೋಡಿದಾಗ ನಾವು ಅಸಮಾಧಾನ ವ್ಯಕ್ತಪಡಿಸಿತ್ತೇವೆ. ಅಸಂತೋಷದಿಂದ ನಮ್ಮನ್ನು ನಾವು ಏಕೆ ಹೀಗೆ ದಂಡಿಸಿಕೊಲ್ಲಬೇಕು? ಅನೇಕ ತಪ್ಪುಗಳಿಂದ ವ್ಯಕ್ತಿಯಲ್ಲೂ ಕೆಲವೊಂದು ಒಳ್ಳೆಯ ಗುಣಗಳಿರುವ ಸಾಧ್ಯತೆಗಳಿವೆ. ಸೂಕ್ಷ್ಮವಾಗಿ ಪರಶೀಲಿಸಿದಾಗ ಪ್ರತಿಯೊಬ್ಬರಲ್ಲೂ ಗುಣದೋಷಗಳೆರಡೂ ಸಮಾನವಾಗಿರುತ್ತವೆ. ಗುಣಗಳನ್ನು ಗುರುತಿಸುವ, ಆಯ್ದುಕೊಳ್ಳುವ ಹಾಗೂ ಅವುಗಳಿಂದ ಪ್ರಯೋಜನ ಪಡೆಯುವ ಜಾಣ್ಮೆ ನಮ್ಮಲ್ಲಿರಬೇಕು. ಅದರ ಬದಲಿಗೆ ಇತರರ ಕುಂದು ಕೊತರೆಗಳೇ ನಮ್ಮನ್ನು ಕಾಡುತ್ತಿದ್ದರೆ ನಮ್ಮ ಎಲ್ಲಾ ನೆಮ್ಮದಿ, ಸಮಾಧಾನಗಳು ದೂರವಾಗುವ ಅಪಾಯವಿದೆ. ದೋಷಮಯವಾದ ಜಗತ್ತೆಲ್ಲವನ್ನೂ ತಿದ್ದಲು ನಮ್ಮ ಆಯುಷ್ಯವೇ ಸಾಕಾಗಲಾರದು. ಇತರರನ್ನು ತಿದ್ದುವ ನಮ್ಮ ಬದಲು ನಮ್ಮ ದೋಷಗಳನ್ನು ನಾವೇ ಗುರುತಿಸಿ ತಿದ್ದಕೊಳ್ಳಲು ಪ್ರಯತ್ನಿಸಬೇಕು. ಇತರರ ಒಳ್ಳೆಯ ಗುಣಗಳನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದಾಗ ಇಬ್ಬರಿಗೂ ಪ್ರಯೋಜನ ಸಿಗಬಹುದು.

ತಾಳೆಗರಿ ಗ್ರಂಥಗಳ ಈ ನಿಧಿ:
                       ಧರ್ಮಸ್ಥಳದ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಎಂಬ ‘ಪುಸ್ತಕದರಮನೆ' ನಮ್ಮ ಸಂಸ್ಕೃತಿ  ,ಪರಂಪರೆಗಳ ಬಗೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗಿರುವ ಅಪಾರ ಕಳಕಳಿ, ಶ್ರದ್ಧೆಗಳ ಪ್ರತೀಕವಾಗಿ ಸೃಷ್ಟಿಯಾಗಿದೆ ಶ್ರೀ ಕ್ಷೇತ್ರದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ  ಸಂಶೋಧನ ಪ್ರತಿಷ್ಠಾನ. ಇಂತಹ ಸುಂದರ ಹೆಸರನ್ನು ಪ್ರತಿಷ್ಠಾನಕ್ಕಿಟ್ಟವರು ದಿವಂಗತ ರಾಷ್ಟ್ರಕವಿ ಕುವೆಂಪು ಅವರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಕೃತಿ  ಸಂಶೋಧನಾ ಪ್ರತಿಷ್ಠಾನ ಎಂದು ಕರೆಯಲ್ವಡುವ ಈ ಸಂಸ್ಥೆಯನ್ನು 1988ರಲ್ಲಿ ರಾಷ್ಟ್ರ ಕವಿ ಕುವೆಂಪು ಮೈಸೂರಿನಲ್ಲಿ ಉದ್ಘಾಟಿಸಿದ್ದರು. ಅದಾದ ಬಳಿಕ ಪ್ರತಿಷ್ಠಾನದ ಬೊಕ್ಕಸ ತುಂಬುತ್ತಲೇ ಹೊಯಿತು. ನಾಲ್ಕುನೂರು ವರ್ಷ ಹಳೆಯ ಗ್ರಂಥ ಈಗಲೂ ಹೊಚ್ಚ ಹೊಸದರಂತೆ ಇದೆ. ನಾಡಿನ, ಅಲ್ಲಲ್ಲಿ ದೇಶದ ಉದ್ದಗಲಗಳಿಂದ ಸಂಗ್ರಹಿಸಿದ ಅತಿ ಅಪೂರ್ವ, ವಿಶೇಷ, ವಿಶಿಷ್ಟ, ಅಮೂಲ್ಯ ತಾಳೆಗರಿ ಗ್ರಂಥಗಳಿಂದ ಸಂಪನ್ನಗೊಂಡು ಇಂದಿನ ಮುಂದಿನ ಪೀಳಿಗೆಗಾಗಿ ಉಳಿಸಿಕೊಟ್ಟಿರುವ ಒಂದು ಬೆಲೆ ಕಟ್ಟಲಾಗದ ಸಾಂಸ್ಕøತಿಕ ರತ್ನದ ಗಣಿಯೆಂಬ ಹೊಗಳಿಕೆಗೆ ಅರ್ಹವಾಗಿದೆ.
                 
                   ಸಂಸ್ಕೃತಿ  ಪ್ರತಿಷ್ಠಾನ ಸಂಗ್ರಹಿಸಿ ಜೋಪಾನ ಮಾಡುತ್ತಿರುವ ತಾಡವಾಲೆ ಗ್ರಂಥಗಳ ಸಂಖ್ಯೆ ಬಹು ದೊಡ್ಡದು. 6000 ಗ್ರಂಥಗಳಿದ್ದು, ಇದರಲ್ಲಿ 1870 ಕನ್ನಡ ಲಿಪಿಯಲ್ಲೆ ಬರೆಯಲ್ವಟ್ಟಿದೆ. ಇದಲ್ಲದೆ ತೆಲುಗು, ತಮಿಳು, ಮಲಯಾಳಿ, ತುಳು, ನಂದಿನಾಗರಿ ಮತ್ತು ಗ್ರಂಥ ಲಿಪಿಯ ಗ್ರಂಥಗಳಿವೆ. ಅಪರೂಪದ ದೇವನಾಗರಿ ಲಿಪಿಯ ಒಂದು ಗ್ರಂಥವೂ ಸೇರಿದೆ. ಅಸಂಖ್ಯ ಕಾವ್ಯಗಳಿವೆ, ವೇದೋಪನಿಷತ್‍ಗಳಿವೆ. ಯೋಗ, ಅಲಂಕಾರ, ತತ್ವಜ್ಞಾನ, ವ್ಯಾಕರಣ, ನಿಘಂಟು, ಗಣಿತ, ಜ್ಯೋತಿಷ್ಯಗಳ ಜತೆಗೆ ವೈದ್ಯಗ್ರಂಥಗಳಿವೆ. ಅಧ್ಯಯನ ಆಸಕ್ತರಿಗೆ ಜ್ಞಾನದ ಬರಿಗೊಳವನ್ನು ತುಂಬಬಲ್ಲ ಅನುಭವದ ಕಡಲು ಇದೆ.
ಬಣ್ಣ ಬಣ್ಣದ ಚಿಕಣಿ ಮತ್ತಿತರ ಕಲಾಪದ್ಧತಿಯ ಚಿತ್ರಗಳಿರುವ ಕಾವ್ಯಗ್ರಂಥಗಳಿವೆ. ಶ್ರೀಗಂಧವೂ ಸೇರಿದಂತೆ ಬೇರೆಬೇರೆ ಮರಗಳಲ್ಲದೆ ಮಲಯಾಳಿ ಲಿಪಿಯಲ್ಲಿರುವ ವಾಲ್ಮೀಕಿ ರಾಮಾಯಣದ ಹೊರಹೊದಿಕೆ ಆನೆಯ ದಂತದಿಂದ ತಯಾರಿಸಿದ್ದು ಗಮನ ಸೆಳೆಯುವಂತಿದೆ.
                     
                       ಸುಮಾರು ಎರಡೂವರೆ ಅಡಿ ಉದ್ದವಿರುವ ತಾಡವಾಲೆ ಗ್ರಂಥ ಒಂದೆಡೆ ಇನ್ನೊಂದೆಡೆ ಬೆಂಕಿ ಪೆಟ್ಟಿಗೆಯಷ್ಟೇ ಪುಟ್ಟ ಪುಟ್ಟ ಗ್ರಂಥಗಳೂ ಮೌಲಿಕವಾಗಿ ದೊಡ್ಡದೆನಿಸಿವೆ. ಅತಿ ಹಳೆಯ 19 ಸಾವಿರಕ್ಕಿಂತ ಅಧಿಕ ಮುದ್ರಿತ ಪುಸ್ತಕಗಳು ಸುರಕ್ಷಿತಗೊಂಡಿವೆ. ಅವುಗಳ ಬದುಕು ಶತಮಾನಗಳ ಹಿಂದಿನದು. ಕಲ್ಲಚ್ಚಿನ ಚಿತ್ರಮಯ ಗ್ರಂಥಗಳು, ಹಳೆಯ ಲೆಕ್ಕ ಪತ್ರದ ಕಡತಗಳಿವೆ. ಹಳೆಯ ಪತ್ರಿಕೆಗಳಿವೆ. ಸಾಹಿತಿಗಳು ಬರೆದ ಅವರ ಸ್ವಹಸ್ತಾಕ್ಷರದ ಗ್ರಂಥಗಳಿವೆ. ಭೂರ್ಜಪತ್ರಗಳಿವೆ. ಕಾಗದದ ಲೇಖನ ಸುರುಳಿಗಳಿವೆ. 85 ಸೆ.ಮೀ. ಉದ್ದ, 5 ಸೆ.ಮೀ. ಅಗಲವಿರುವ ಕನ್ನಡ ವಾಲ್ಮೀಕಿ ರಾಮಾಯಣ ಈ ಸಂಗ್ರಹದಲ್ಲಿ ಪಿರಿದೆನಿಸಿದ ಗ್ರಂಥ. ಇದರಲ್ಲಿ ಮನಸೆಳೆಯುವ ವರ್ಣಚಿತ್ರಗಳಿವೆ. ಇದಕ್ಕಾಗಿ ಪ್ರತ್ಯೇಕ ಪೆಟ್ಟಿಗೆಯನ್ನು ಮಾಡಿ ಅದರೊಳಗಿರಿಸಲಾಗಿದೆ. ಇದಕ್ಕಿಂತ ಒಂದು ಸೆ.ಮೀ.ಕಡಿಮೆ ಉದ್ದವಿರುವ ಕುಮಾರ ವ್ಯಾಸ ಭಾರತ ಎರಡನೆಯದು. ತೆಲುಗು, ಮರಾಠಿ, ಕನ್ನಡ, ನಂದಿನಾಗರಿ, ದೇವನಾಗರಿ, ತಮಿಳು, ತುಳು(ತಿಗಳಾರಿ), ಸಂಸ್ಕ್ರತ ಮೊದಲಾದ ಭಾಷೆಗಳ ಸಾಹಿತ್ಯ ಕೃತಿಗಳ ಸಂಗ್ರಹ ಗ್ರಂಥಗಳ ಹೆಸರು ಹೇಳಿ ಮುಗಿಯದಷ್ಟಿದೆ.
                       
                        ಮರದ ಒಳಗಿನ ತೆಳ್ಳಗಿನ ತೊಗಟೆಯಲ್ಲಿ ಶಾರದಲಿಪಿಯಿಂದ ಬರೆದ ಕಾಶ್ಮೀರದ ಭೂರ್ಜ ಪತ್ರ ಗ್ರಂಥ ನೋಡಲು ಕಾಶ್ಮೀರಕ್ಕೇ ಹೋಗಬೇಕಾಗಿಲ್ಲ. ಧರ್ಮಸ್ಥಳಕ್ಕೆ ಬಂದರೆ ಸಾಕು. ಈ ಗ್ರಂಥಾಲಯದೊಳಗೆ ಕುಳಿತೇ ಹದಿನೈದು ಪಿಎಚ್‍ಡಿ ಮಾಡಬಹುದು ಎಂದರೆ ಅತಿಶಯೋಕ್ತಿ ಅನಿಸದು. ಸಾಕಷ್ಟು ಮಂದಿ ಇಲ್ಲಿಯ ನೆರವು ಪಡೆದು ಪಿಎಚ್‍ಡಿ ಮಾಡಿದ್ದಾರೆ. ಸಂಶೋಧನೆ ಮಾಡುವವರಿಗೆ ಅನುಕೂಲವಾಗುವ ಹಾಮಾನಾ ಸಂಶೋಧನಾ ಕೇಂದ್ರದಲ್ಲಿ ಸಹಸ್ರಾರು ಮೌಲಿಕ ಗ್ರಂಥಗಳಿವೆ. ಸ್ವತ: ಕಲಾವಿದರೇ ಆಗಿರುವ ಡಾ| ಹೆಗ್ಗಡೆಯವರು ಹಿಂದಿನ ಧರ್ಮಾಧಿಕಾರಿ ದಿ| ಮಂಜಯ್ಯ ಹೆಗ್ಗಡೆಯವರ ಹೆಸರಿನಲ್ಲಿ ಬೆಂಗಳೂರಿನ ಚಿತ್ತಕಲಾಪರಿಷತ್‍ಗೆ ಒಂದು ಸಭಾಭವನವನ್ನು ನಿರ್ಮಿಸಿಕೊಟ್ಟು ಕಲಾವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದಾರೆ.