Shri Kshethra Southadka

ಶ್ರೀ ಕ್ಷೇತ್ರ ಸೌತಡ್ಕ || ಶ್ರೀ ಗಣೇಶಯ ನಮಃ||

                     ಪೂರ್ವಕಾಲದಲ್ಲಿ ರಾಜರಿಂದ ಕಟ್ಟಲ್ಪಟ್ಟ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ಅರ್ಚನೆ ಸ್ವೀಕರಿಸಿಕೊಡಿದ್ದ ಗಣಪ ಕಾಲ ಕಾರಣಗಳಿಂದ ದೇವಸ್ಥಾನ ನಾಶವಾಗಿ ದೊಡ್ಡ ಕುಂಟಾಲ ಮರಗಳಡಿಯಲ್ಲಿದ್ದ. ಗೋವುಗಳನ್ನು ಮೇಯಿಸುತ್ತಿದ್ದ ಗೋವಳರು ಗಣೇಶ ಮತ್ತು ಪರಿವಾರ ಮೂರ್ತಿಗಳನ್ನು ಕಂಡು ಹೂ ಹಣ್ಣುಗಳಿಂದ ಪೂಜಿಸಲು ತೊಡಗಿದರು. ವಿಶೇಷವಾಗಿ ಮನೆಯಿಂದ ಬರುವಾಗ ಸೌತೆಕಾಯಿಯನ್ನು ತಂದು ಗಣಪತಿಗೆ ಅರ್ಪಿಸಿ ತಾವು ತಿನ್ನುತ್ತಿದ್ದರು. ಇದರಿಂದ ಊರವರೆಲ್ಲಾ ಗಣೇಶನನ್ನು ಸೌತೆ ಗಣಪ ಎಂಬುದಾಗಿ ಕರೆಯುತ್ತಿದ್ದರು. ಕಾಲ ಕ್ರಮೇಣ ಈ ಬಯಲು ಪ್ರದೇಶ ಸೌತೆಡ್ಕ ಎಂದು ಪ್ರಸಿದ್ಧವಾಯಿತು. ಸೌತೆಡ್ಕ ಗಣಪನಬ್ಬು ಪೂಜಿಸಿದ ಪ್ರತಿಯೊಬ್ಬರಿಗೂ ಅವರವರ  ಇಷ್ಟಾರ್ಥ ಸಿದ್ಧಸುವುದು ಅನುಭವಕ್ಕೆ ಬರತೊಡಗಿತು. ಊರ ಮತ್ತು ಪರವೂರ ಜನರು ತಮ್ಮ ಮನೆಗಳಲ್ಲಿ ಭಕ್ಷ್ಯಗಳು ಪಂಚಕಜ್ಜಾಯಗಳನ್ನು ಮಾಡಿ ತಂದು ತಾವೇ ಗಣಪತಿಗೆ ಸಮರ್ಪಣೆ ಮಾಡುತ್ತಿದ್ದರು. 9-4-1965 ಕುಡ್ತ್ಲಾಜೆ ಕೃಷ್ಣ ಭಟ್ಟರೆಂಬುವರು ನಿತ್ಯ ಪೂಜೆ ಮಾಡಿಸಲು ನಿಶ್ಚಯಿಸಿದರು. ನಾರಾಯಣ ಪರ್ಲತ್ತಾಯರು ಅರ್ಚಕರಾಗಿ ಗಣಪತಿ ಸಾನಿಧ್ಯದಲ್ಲಿ ಊರ ಪರವೂರ ಭಕ್ತರ ಪರವಾಗಿ ಪೂಜೆ ಸಲ್ಲಿಸಲು ಪ್ರಾರಂಭಿಸಿದರು. 7-2-1973 ಶ್ರೀ ಗಣಪತಿ ಸನ್ನಿಧಾನದಲ್ಲಿ ಭಕ್ತ ಮಹಾಜನರ ಸಹಕಾರದಿಂದ ಕಲ್ಲಿನ ಕಟ್ಟೆ ಕಟ್ಟಿಸಿ ಗಣಹೋಮ ಮತ್ತು ಪ್ರತಿಷ್ಟಾ ಕಲಶ ಅಭಿಷೇಕ ಕುಡ್ತಲಾಜೆ ಕೃಷ್ಣ ಭಟ್ಟರು ಮಾಡಿಸಿದರು.

                  1975 ಜನವರಿ 16 ಊರಿನ ಮತ್ತು ಪರವೂರಿನ ಭಕ್ತರೆಲ್ಲಾ ಸೇರಿ ಸೌತಡ್ಕ ಗಣಪತಿಗೆ ಪ್ರಥಮ ಮೂಡಪ್ಪ ಸೇವೆ ಸಲ್ಲಿಸಿದರು. 20-1-1991 ರಿಂದ 28 ದಿನಗಳ ಕಾಲ ಊರ ಪರವೂರ ಭಕ್ತರ ನೆರವಿನಿಂದ ರಂಗನಾಥ ಕಾಮತ್ ಎಂಬವರು ಕೋಟಿನಾಮಾರ್ಚನೆ ಜರಗಿಸಿ ಕೃತಾರ್ಥರಾದರು. 1992ರಲ್ಲಿ ಲಕ್ಷ ಮೋದಕ ಹವನ, ಸಹಸ್ರನಾಳಿಕೇರ ಯಾಗ 1993ರಲ್ಲಿ ಋಕ್  ಸಂಹಿತಾ ಯಾಗ ಶ್ರೀ ರಂಗನಾಥ ಕಾಮತರು ಮಾಡಿಸಿ ಶ್ರೀ ಸೌತಡ್ಕ ಮಹಾಗಣಪತಿ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾದರು. 1974ರಿಂದ ಶ್ರೀ ಗಣಪತಿ ಕ್ಷೇತ್ರದ ಅಭಿವೃದ್ಧಿಗಾಗಿ ಊರ ಹಾಗೂ ಪರವೂರ ಭಕ್ತರೆಲ್ಲಾ ಸೇರಿ ಶ್ರೀ ಸೌತೆಡ್ಕ ಮಹಾಗಣಪತಿ ದೇವರ ಸೇವಾ ಸಮಿತಿ ರಚಿಸಿಕೊಂಡು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. 1995ರಲ್ಲಿ ಶ್ರೀ ಕ್ಷೇತ್ರ ಸೌತೆಡ್ಕ ಮಹಾಗಣಪತಿ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆಗೊಂಡಿದ್ದು 2004ರಲ್ಲಿ ಪೂರ್ಣ ಶಿಲಾಮಯ ಕಟ್ಟೆಯಲ್ಲಿ ಗಣಪ ವರದ ಮೂರ್ತಿಯಾಗಿ ವಿರಾಜಮಾನನಾಗಿದ್ದಾನೆ. ಪರಮಾತ್ಮನು ಭಕ್ತಾಧೀನ. ಭಕ್ತ ಗೋಪಾಲಕರಿಂದ ತನ್ನನ್ನು ದೂರವಿರಿಸುವ ‘ಅಭದ್ರ ಮಂದಿರ’ ತನಗೇಕೆ ಎನಿಸಿತು. ಕಟ್ಟಿಸುವುದಿದ್ದರೆ ಕಾಶೀ ವಿಶ್ವನಾಥನಿಗೆ ತೋರುವಂತೆ ಕಟ್ಟಲಿ; ಹಾಗೆ ಕಟ್ಟುವಾಗ ಈ ಪ್ರಪಂಚವೇ ತಳಹದಿಯಾಗಬೇಕು. ಆಗ ಆ ಮಂದಿರವು ಆತನಿಗೆ ಬಂಧನವಾಗದು. ಆ ಮಂದಿರದಲ್ಲಿ ಭಕ್ತರೆಲ್ಲರೂ ಸಮಾವೇಶಗೊಳ್ಳುವರು. ಆಗ ಮಾತ್ರ ಅದು “ಪ್ರಭು ಮಂದಿರ.” ಹೀಗಿದೆ ನಮ್ಮ ಗಣೇಶನ ಭಕ್ತ ವತ್ಸಲತೆ. ಗೋಪಾಲರಿಗೆ ಒಲಿದು ಮಂದ ‘ಗಣಪ’ ಮರದ ನೆರಳಿನಲ್ಲಿ ನೆಲೆಯೂರಿದ. ಮನಸ್ಸು ಬಂದಾಗ, ಬಯಸಿದ ಹೊತ್ತಿಗೆ ಬೇಕಾದವರು ಈತನ ದರ್ಶನ ಪಡೆಯಬಹುದು. ‘ದೇಸ್ಥಾನ’ಗಳಲ್ಲಿರುವಂದೆ ಇವನನ್ನು ಪೂಜಿಸಲು ವೈದಿಕ ವಿಧಾನ ತಿಳಿದಿರಬೇಕೆಂಬ ಕಟ್ಟಾಜ್ಞೆ ಇಲ್ಲ. ಪೂಜಾ ದ್ರವ್ಯಗಳು ಆಗಮದಲ್ಲಿ ತಿಳಿಸಿರುವಂತೆ ಪ್ರಮಾಣ, ಪರಿಮಿತಿಯನ್ನು ಒಳಗೊಂಡಿರಬೇಕೆಂದಿಲ್ಲ. ಗಣೇಶನಲ್ಲಿಗೆ ಹೋಗುವಾಗ ನಮ್ಮ ಹೃದಯವೋದೇ ಸಾಕು. ಯಾವ ಹೊತ್ತಿಗೂ “ಮುಕ್ತ ದ್ವಾರ”ವಿದೆ ಅಲ್ಲ! ಶಾಸ್ತ್ರೋಕ್ತವಾಗಿ ಮಾಡಿದ ಪೂಜೆಯನ್ನು ಸ್ವೀಕರಿಸಿದಷ್ಟೇ ಸಂತೋಷದಿಂದ ಅಥವಾ ಅದಕ್ಕಿಂತಲೂ ಹೆಚ್ಚಿನ ಸಂತೋಷದಿಂದ ನಮ್ಮ ಭಕ್ತಿಯ ಮಾನಸ ಪೂಜೆಯನ್ನು ಸ್ವೀಕರಿಸುತ್ತಾನೆ. ನಮ್ಮ ಭಕ್ತಿಗೆ ಲಭಿಸಿದ ಹೂ, ಹಣ್ಣು, ಧೂಪ, ದೀಪ ಏನು ಬೇಕಾದರೂ ಕೊಂಡು ಹೋಗೋಣ, ಎಷ್ಟು ಹೊತ್ತಾದರೂ ಇರೋಣ ನಮ್ಮನ್ನು ಅಲ್ಲಿಂದ ಹೊರಡಿಸುವವರಿಲ್ಲ. ಆತನೊಡನೆ ಗಂಟೆಗಟ್ಟಲೆ ಇರಬಹುದು; ದಿನಗಟ್ಟಲೆ ಕಳೆಯಬಹುದು. ಒಂದೇ ಕ್ಷಣದಲ್ಲಿ ಬೇಕಾದರೆ ನಮ್ಮ ಸರ್ವಸ್ವವನ್ನರ್ಪಿಸಿ ತೆರಳಲೂಬಹುದು. ಅರ್ಚಕರ, ಅಧಿಕಾರಿಗಳ, ಸಮಯ ನಿರೀಕ್ಷೆಯಲ್ಲಿ ಆಯುಷ್ಯವನ್ನು ವ್ಯರ್ಥಗೊಳಿಸಬೇಕಾಗಿಲ್ಲ. ಸೌತಂತ್ರವಾದ ಗಣೇಶನ ಭಕ್ತರಿಗೆ ಮಾತ್ರವೇ ಇಂತಹ ಸ್ವಾತಣತ್ರ್ಯವಿರಬಲ್ಲುದು.

                    ‘ಗಂಪ’ನಿಗೊಬ್ಬನಿಗೆ ಬೇಸರವಾಗದಿರಲೆಂದು ಶಿವಗಣದ ಸದಸ್ಯರಿಬ್ಬರನ್ನು ಗೋವಳರೇ ಕರೆ ತಂದರೆಂದು ಹೇಳುತ್ತಾರೆ. ಮತ್ತೆ ಕೆಲವರು ಸೌತೆಕಾಯಿ ಮೆಲ್ಲುವುದರಲ್ಲಿ ತನ್ನನ್ನೇ ಮರೆತಿದ್ದ ‘ಗಂಪ’ ಕೈಲಾಸಕ್ಕೆ ತೆರಳಲಿಲ್ಲವಷ್ಟೆ, ಆಗ ಪಾರ್ವತಿ ಗಾಬರಿಯಾಗಿ ಹರಿಯ ರೂಪ ಧರಿಸಿ ತಾನೇ ಬಂದಳಂತೆ. ಶಿವನೂ ಗಾಬರಿಯಾಗಿ ‘ದಕ್ಷ ಯಜ್ಞ’ದಲ್ಲಿ ಸೃಷ್ಟಿಯಾದ ‘ವೀರಭದ್ರ’ನನ್ನೇ ಕಳುಹಿಸಿದನಂತೆ. ಅವನೂ ಇಲ್ಲೇ ‘ನೆಲೆಯೂರಿದ’ನೆನ್ನುತ್ತಾರೆ. ಬಹುಶಃ ಇಂತಹ ಸ್ವಾತಂತ್ರ್ಯ ಅವರಿಗೆ ಕೈಲಾಸದಲ್ಲಿ ದೊರೆಯುತ್ತಿರಲಾರದೆಂದೋ, ಈ ಗೋವಳರಿತ್ತ ನಲ್ಮೆಯ ಸೌತೆಕಾಯಿಯ ಸವಿ ಆ ಕೈಲಾಸದ ಧವಲಚ್ಛಚಿಯನ್ನು ಮರೆಯುವಂತೆ ಮಾಡಿತೋ ಹೇಳಲಾರೆವು. ಅಂತೂ ಈರ್ವರು ದೇವತೆಗಳೂ ಗಜಾನನನ ಅತ್ತಿತ್ತ ಕತ್ತಲುಗಿಸದೆ ಭಕ್ತರಿತ್ತ ಭಾವ ಭಕ್ತಿಯ ಸುಮಗಳನ್ನು ಹೊತ್ತುಕೊಂಡು ಸುತ್ತಲೂ ಪಸರಿಸಿರುವ ನಿರ್ನಿಮಿತ್ತ-ಸುಪ್ತ-ಮತ್ತು ನಿಸರ್ಗದತ್ತ ಸೌಂದರ್ಯವನ್ನು ಆನಂದಮತ್ತರಾಗಿ ಸವಿಯುತ್ತಿರುವುದು ಮಾತ್ರ ಸತ್ಯ. ಸೌತೆತಡ್ಕದಲ್ಲಿ ನೆಲೆ ನಿಂತ ಗಣೇಶನಿಗೆ ಮೊದಲು ಒಬ್ಬ ಖಾಯಂ ಅರ್ಚಕನಿರಲಿಲ್ಲ. ಮಾಡಿಲ್ಲ; ಮಠವಿಲ್ಲ. ಆದರೆ ಅವನಿಗೆ ಬಹುಶಃ ಪೂಜೆಯಿಲ್ಲದ ದಿನವಿಲ್ಲವೇ ಇಲ್ಲ. ಪೂಜೆ ಎಂದರೆ ಆತನಿಗೆ ಧೂಪ, ದೀಪ, ಮಂಗಳಾರತಿ, ನೈವೇದ್ಯಗಳು ಬೇಕಾಗಿಯೂ ಇಲ್ಲ. ದಾರಿಯಲ್ಲಿ ಹೋಗುವ ನೂರಾರು ಮಂದಿ ಭಕ್ತರನ್ನು ನಿರ್ಮಲ-ನಿರಭ್ರ ಆಕಾಶದಂತೆ, ತನ್ನೆಡೆಗೆ ಆಕರ್ಷಿಸುತ್ತಾನೆ, ಅವರ ಭಾವುಕತೆಯನ್ನು ಬೆಳಗುತ್ತಾನೆ. ಕೆಲವರು ಮೋದಕ, ಚಕ್ಕುಲಿ, ಲಾಡು, ಹೋಳಿಗೆಗಳನ್ನಿತ್ತರೆ ಕೆಲವರು ಗರಿಕೆ ಹುಲ್ಲಿನ ಮಾಲೆಯನ್ನಷ್ಟೇ ಅರ್ಪಿಸುತ್ತಾರೆ. ಇನ್ನು ಕೆಲವರು ಬರೇ ಪ್ರದಕ್ಷಿಣೆ ನಮಸ್ಕಾರಗಳನ್ನಷ್ಟೇ ಅರ್ಪಿಸಿದರೆ ಮತ್ತೇ ಕೆಲವರು ನೂರೆಂಟು-ನೂರಿಪ್ಪತ್ತು ಎಲೆಯ ‘ರಂಗ ಪೂಜೆ’ ಸಲ್ಲಿಸುವವರೂ ಇದ್ದಾರೆ. ‘ವಸಂತ’ದಲ್ಲಿ ವಿವಿಧ ಭಕ್ಷ್ಯಗಳಿಂದ ಆತನ್ನಾರಾಧಿಸಿ ಬಂಧು ಬಾಂಧವರೊಡನೆ ಆತನ ಸನ್ನಿಧಿಯಲ್ಲಿ ‘ಸಮಾರಾಧನೆ’ ನಡೆಸುವುದೂ ಇದೆ. ಸರ್ವ ಸಾಕ್ಷಿಯಾಗಿ ನಿರಾವರಣದಲ್ಲಿ ಕುಳಿತಿರುವ ಆತನೆದುರು ಕಲಾವಿದರು ತಮ್ಮ ಕಲೆಯ ಸಿದ್ಧಿಗಾಗಿ ಇಡೀ ರಾತ್ರಿ ಸೇವೆ ಸಲ್ಲಿಸುವುದೂ ಇದೆ. ಊರಲ್ಲಿ ಎಲ್ಲೇ ಏನೇ ಮದುವೆ ಹಬ್ಬ ನಡೆಯಲಿ, ಸೌತೆಡ್ಕ ಗಣಪತಿಗೆ ರಂಗ ಪೂಜೆ ಸಲ್ಲುತ್ತದೆ. ಬೆಳೆ ಹಾಳಾಗದ ಹಾಗೆ, ಮಳೆ ಬಾರದಾಗ, ಮಳೆ ಹೆಚ್ಚಾದಾಗ ಜನರ ಯೋಗ ಕ್ಷೇಮಗಳನ್ನು ನೋಡಿಕೊಳ್ಳಬಲ್ಲವನು ಈ ಮನೆ ಮಠವಿಲ್ಲದ ಛಾಯಾ ವಿಹಾರಿ. ದನಗಳಿಗೆ ಕಾಯಿಲೆ ಬರಲಿ, ಜನರಿಗೆ ಕ್ಷಾಮ ತೋರಲಿ, ಕಳ್ಳಕಾಕರ ಕಾಟ ಕಾಡಲಿ, ಹೆರಿಗೆ ಬೇನೆ ಬರಲಿ, ಪ್ರಣಯಿಗಳಿಗೆ ವಿಯೋಗ ಒದಗಲಿ - ಆರ್ತ ತ್ರಾಣ ಪರಾಯಣನಾಗಿ ಸೌತೆಡ್ಕ ಗಣಪತಿಯು ಅಭಯದಾತನಾಗಿ ಎಲ್ಲರ ದಾರಿಗೂ ಬೆಳಕು ನೀಡುತ್ತಿರುವನು. ಅಹರ್ನಿಶಿ ಏಕೆಂದಾಗ ನಾವಾತನ ದರ್ಶನ ಪಡೆಯಬಲ್ಲೆವು. ಭಕ್ತಿಯಲ್ಲಿದ್ದುದನ್ನು ಅರ್ಪಿಸಬಲ್ಲೆವು - ಶಕ್ತಿಯಲ್ಲಿದ್ದದನದನು ಒಪ್ಪಿಸಬಲ್ಲೆವು. ಮಳೆ ಬಿಸಿಲು ಗಾಳಿಗಳ ಪರಿವೆಯಿಲ್ಲದೆ, ಕಾಲ ದೇಶಗಳ ವ್ಯಾಪ್ತಿ ಇಲ್ಲದೆ, ಜಾತಿ ಖ್ಯಾತಿಗಳ ಗೊಡವೆ ಯಿಲ್ಲದೆ “ಸರ್ವ ಸಮದರ್ಶಿತ್ವ”ವು ಸಾರ್ಥಕವೆನಿಸುವಂತೆ ದೇವತ್ವವು ಅನ್ವರ್ಥವಾಗಿರುವ ಈ ಮಹಾಮಹಿಮನಿಂದ ಸ್ಫೂರ್ತಿ ಪಡೆಯದಿರಲು ಹೇಗೆ ಸಾಧ್ಯ? ಈಗ ನಿಮಗೆ ಸೌತೆಡ್ಕ ಗಣಪತಿ ಎಂಬ ಶಿರೋನಾಮೆಯ ಅರ್ಥ ಸರಿಯಾಗಿ ತಿಳಿದಿರಬಹುದು. ಸೌತೆಡ್ಕ ಎಂದಾಗ ಸೌಭಾಗ್ಯವತಿ ಎಂದು ಭ್ರಮಿಸಬಹುದು. ಅದು ಗಣಪತಿಯ ಜೊತೆಯಲ್ಲಿ ಬಂದಾಗ ಇನ್ನಷ್ಟು ಭ್ರಮೆ ಜಾಸ್ತಿ. ಪ್ರಪಂಚದಲ್ಲಿರುವ  ಸ್ತ್ರೀ ವ್ಯಕ್ತಿಯಲ್ಲೆಲ್ಲಾ ಮಾತೃತ್ವವನ್ನು ಕಂಡು ಮದುವೆಯಾಗದೆಯೇ ಉಳಿದ ಈತನಿಗೆ ತನ್ನ ಹೆಸರಿನ ಮುಂದೆ ಏಕೆ ಸೌಭಾಗ್ಯವತಿ ಎಂದು? ಸೌತೆತಡ್ಕದಲ್ಲಿನ ‘ಸೌ’ ಅನ್ನು ‘ಎಸ್’ ಎಂಬುದಾಗಿ ಪರಿವರ್ತಿಸಲು ಆತನ ‘ಸ್ವಾತಂತ್ರ್ಯ ಪ್ರೇಮ’ವನ್ನರಿತವರು ಸರ್ವಥಾ ಒಪ್ಪಲಾರದೆಂಬುದು ನಿಜವಲ್ಲವೇ?

                            ಹಿಂದೆ ಪುಡಿಗಲ್ಲಿನ ಕಟ್ಟೆ ಇತ್ತು . ಆ ಜಾಗಕ್ಕೆ ಮೊದಲು ಕಡಿದ ಕಗ್ಗಲ್ಲು ಬಂತು, ಬಾವಿ ಆಯಿತು, ಉಗ್ರಾಣ ಬಂತು, ಒಮ್ಮೆ ಕೋಟಿ ನಾಮಾರ್ಚನೆ ನಡೆಯಿತು. ಆಗ ಕ್ಷೇತ್ರ ಇಡೀ ನಾಡಿಗೆ ಪರಿಚಿತವಾಯಿತು. ಇಂದಿನ ಜನರ ಅವಶ್ಯಕತೆಗೆ ಅನುಗುಣವಾಗಿ ಮಧ್ನಾಹ್ನ ಭಕ್ತರಿಗೆ ಪ್ರಸಾದ (ಭೋಜನ) ವಿತರಣೆ ಮಾಡಲು ‘ಸುಮುಖ’ ಸಜ್ಜಾಯಿತು. ಕಲೆ, ಸಾಹಿತ್ಯ, ಸಾಂಸ್ಕøತಿಕ ಹಾಗೂ ಶುಭ ಸಮಾರಂಭಗಳಿಗಾಗಿ ‘ಗಣೇಶ ಕಲಾಮಂದಿರ’ ಮೈ ತಳೆಯಿತು. ಕಣ್ಮನ ಸೆಳೆಯುವ ಪುಷ್ಪವನ ಎದ್ದು ನಿಂತಿತು. ಎಳೆಯ ಮಕ್ಕಳಿಗೆ ಹಿಂದೂ ಸಂಸ್ಕøತಿಯ ಬೋಧನೆ ನೀಡುವ ಬಾಲ ಶಿಶುಮಂದಿರ ನಿರ್ಮಾಣವಾಯ್ತು. ಹರಿಕೆಯಾಗಿ ಒಪ್ಪಿಸಿರುವ ಗೋವುಗಳ ರಕ್ಷಣೆಗಾಗಿ ಗೋಶಾಲೆ ನಿರ್ಮಾಣವಾಯ್ತು. ‘ಅನಿಕೇತನ’ನ ಎದುರು ಬರಲು ಸಂಕೋಚದಿಂದಲೋ ಎಂಬಂತೆ ಎಲ್ಲವೂ ಹಿಂದುಗಡೆಯಲ್ಲಿಯೇ ಎದ್ದು ನಿಂತಿದೆ. ಭಕ್ತರಿಂದ ತಮ್ಮನ್ನು ದೂರವಿರಿಸುವ ಗೋಡೆ-ಮಾಡುಗಳ ಗೊಡವೆ ಸರ್ವಥಾ ಬೇಡವೆನ್ನುವ ಅನಿಕೇತನನ ಭಕ್ತ ವಾತ್ಸಲ್ಯವೇ ನಾಡಿನ ಮೂಲೆ-ಮೂಲೆಗಳಿಂದಲೂ ಪ್ರತಿದಿನ ಅಸಂಖ್ಯಾತ ಭಕ್ತರನ್ನು ಆಕóರ್ಷಿಸುತ್ತಿದೆ. ಇತ್ತೀಚೆಗೆ ಕೇರಳದ ಪ್ರಸಿದ್ಧ ಜ್ಯೋತಿಷ್ಯರುಗಳಾದ ವಳಕ್ಕುಂಜ ವೆಂಕಟ್ರಮಣ ಭಟ್ ಮತ್ತು ಕಾಪಾಲಿ ನಂಬೂದ್ರಿಪಾಡ್ ಇವರುಗಳ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಬಗ್ಗೆ ಅಷ್ಟ ಮಂಗಲ ಪ್ರಶ್ನೆಯನಗನು 13 ದಿನಗಳಲ್ಲಿ ಚಿಂತನೆ ಮಾಡಿದಾಗ 1.5ಕಿ.ಮೀ ಸಮೀಪ ಹಿಂದೆ ರಾಜವಂಶ ಆಡಳಿತಕ್ಕೊಳಪಟ್ಟ ದೇವಾಲವು ಯುದ್ಧ ಸಮಯ ನಾಶಗೊಂಡಾಗ, ಅಲ್ಲಿಯ ಉಪದೇವರಾಗಿರುವ ಗಣಪತಿ ಮೂರ್ತಿಯನ್ನು ಗೋವಳರ ಮಕ್ಕಳೆಲ್ಲರೂ ಸೇರಿಕೊಂಡು ಹೊತ್ತುಕೊಂಡು ಅಲ್ಲಲ್ಲಿಟ್ಟು ಪೂಜೆ ಮಾಡುತ್ತಾ ಕೊನೆಗೆ ಈಗ ಇರುವ ಸನ್ನಿಧಿಯಲ್ಲಿ ಮರದ ಬುಡದಲ್ಲಿ ಕಾಟುಕಲ್ಲುಗಳ ರಾಶಿಯ ಮೇಲೆ ಇಟ್ಟು, ಬೆಳೆಸಿದ ಸೌತೆ ಮಿಡಿಗಳನ್ನು ನೈವೇದ್ಯವಾಗಿ ಅರ್ಪಿಸಿ ಪೂಜೆ ಮಾಡಿಕೊಂಡು ಬಂದಿರುವುದರಿಂದ ಈ ಕ್ಷೇತ್ರಕ್ಕೆ ಸೌತೆತಡ್ಕ ಎಂಬ ಹೆಸರು ಬಂತೆಂದೂ, ಗಣಪತಿಗೆ ಯಾವುದೇ ಗುಡಿ ಗೋಪುರಗಳನ್ನು ಮಾಡದೆ, ಬಂಧನಕ್ಕೊಳಗಾಗದೆ ಮಾನವನೂ ಪಶು ಪಕ್ಷಿ ಸಕಲ ಜೀವಾತ್ಮಗಳು ಸ್ವ ಇಚ್ಛೆಯಂತೆ ಸೇವೆ ಮಾಡಲು ಮುಕ್ತ ಅವಕಾಶ ಸದಾ ಊರ್ಜಿತದಲ್ಲಿಡುವಂತೆ ತಿಳಿದು ಬಂದಿರುತ್ತದೆ. ಶ್ರೀ ಗಣೇಶನು ಸೌತೆತಡ್ಕದಲ್ಲಿ ಗೋವಳರ ಒಲುಮೆಯಿಂದ ಬದ್ಧನಾದಾಗ ಪಾರ್ವತಿಯು ಶ್ರೀ ಹರಿಯ ರೂಪದಲ್ಲಿ ಹುಡುಕಿಕೊಂಡು ಬಂದವಳು ಬಲಗಡೆಯಲ್ಲಿ ನಿಂತುಬಿಟ್ಟಳು. ಶಿವನಿಂದ ಕಳುಹಿಸಲ್ಪಟ್ಟ ವೀರಭದ್ರ ಎಡಗಡೆಯಲ್ಲಿ ನಿಂತನಷ್ಟೇ! ಇವರ ಆಸರೆಯಾದ ಕಟ್ಟೆ ಏಕಶಿಲಾ ನಿರ್ಮಿತವಾದಾಗ ಬ್ರಹ್ಮ ಕಲಶೋತ್ಸವವೂ ನಡೆಯಿತು. ಏನೇ ಆದರೂ ತಾನು ಎಂದೆಂದೂ ‘ಅಪಟಲ’ನಾಗಿಯೇ ಇರುವೆನೆಂದು ಆತನ ನಿರ್ಧಾರ ಅಚಲವೆನ್ನೆವುದು ಆತನ ಭಕ್ತರಿಗೆ ಸಂತಸ ಹಾಗೂ ಹೆಮ್ಮೆಯ ವಿಷಯ. . . .ಪ್ರಕಾಶಕರು ; ಆಡಳಿತ ಮಂಡಳಿ ಶ್ರೀ ಸೌತಡ್ಕ ಮಹಾಗಣಪತಿ ಕ್ಷೇತ್ರ ಕೊಕ್ಕಡ.