Shishila Puran

ಶಿಶಿಲದ ಸ್ಥಳ ಪುರಾಣ :-

                         ಪರಶುರಾಮ ಕ್ಷೇತ್ರದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಶಿಶೀಲ ಗ್ರಾಮವು ಮನೋಹರ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಈ ಶಿವಕ್ಷೇತ್ರದಲ್ಲಿ ಸ್ವಯಂಭೂಲಿಂಗ ಸ್ವರೂಪಿಯಾಗಿ ಶ್ರೀ ಶಿಶಿಲೇಶ್ವರನು ನೆಲೆಸಿರುವುದರಿಂದ ಇದೊಂದು ಕಾರಣಿಕ ಕ್ಷೇತ್ರವಾಗಿದೆ. ಈ ದೇವರು ಶಿಶಿಲದಲ್ಲಿ ಲಿಂಗಾಕೃತಿ ತಾಳಿ ಆವಿರ್ಭವಿಸಲು ಪೌರಾಣಿಕವಾಗಿ ವಿಶಿಷ್ಟ ಕಾರಣವಿದೆ. ಪರಮಪಾವನವಾದ ಕೈಲಾಸ ಪರ್ವತದಲ್ಲಿ ಭಕ್ತವತ್ಸಲನಾದ ಮಹೇಶ್ವರನು ಒಮ್ಮೆ ಭದ್ರಾಸನಾರೂಢನಾಗಿ ವಿರಾಜಿಸುತ್ತಿದ್ದನು. ಅವನೊಂದಿಗೆ ಪಾರ್ವತಿ ದೇವಿ, ಗಣಪತಿ ಷಣ್ಮಖರು ಆಸೀನರಾಗಿದ್ದರು. ವಾಹನವಾದ ವೃಷಭೇಶ್ವರನು ಮುಂದುಗಡೆ ನಿಂತಿದ್ದನು. ಸಭೆಯಲ್ಲಿ ವೀರಾಭದ್ರಾದಿ ಪ್ರಮಥವೀರರೂ ಕುಮಾರಾದಿ ಭೂತಾಗ್ರೇಸರರೂ ನೆರೆದಿದ್ದರು. ದೇವಾನುದೇವತೆಗಳು ಮಹೇಶ್ವರನನ್ನು ಸೇವಿಸಿ ಪ್ರಾರ್ಥಿಸುತ್ತಿದ್ದರು. ಯತಿಗಡಣವು ನಮಿಸಿ ಸ್ತುತಿಸುತ್ತಿದ್ದರು. ತ್ರಿಲೋಕ ಸಂಚಾರಿಯಾದ ನಾರದ ಮಹರ್ಷಿಗಳು ಅದೇ ಸಮಯದಲ್ಲಿ ಭೂಲೋಕ ಸಂಚಾರವನ್ನು ಮುಗಿಸಿ ಅಲ್ಲಿಗೆ ಬಂದು ಶಿವನಿಗೆ ವಂದಿಸಿದರು. ಆಗ ಶಿವನು ಭೂಲೋಕದ ತನ್ನ ಭಜಕರ ಸಂಗತಿಯನ್ನು ನಾರದರಲ್ಲಿ ವಿಚಾರಿಸಲು, ನಾರದರು, “ಭೂತಳದಲ್ಲಿ ಮಹಾತಪಸ್ವಿಗಳು ನಿರಾಕಾರನಾದ ದೇವನನ್ನು ಅಂತರಂಗದಲ್ಲಿ ಧ್ಯಾನಿಸಿ ಸಂತೃಪ್ತಿಪಡುತ್ತಿದ್ದಾರೆ. ಆದರೆ, ಪಾಮರ ಭಕ್ತರಿಗೆ ಆ ರೀತಿ ಏಕಾಗ್ರತೆಯಿಂದ ಸ್ಮರಿಸಲು ಅಸಾಧ್ಯವಾಗಿರುವುದರಿಂದ , ಅವರು ಅರ್ಚಿಸಲು ಅನುಕೂಲವಾಗುವಂತೆ ಸಾಕಾರಮೂರ್ತಿಯಾಗಿ ಪ್ರಕಟಗೊಂಡು, ಅನುಗ್ರಹಿಸಬೇಕು” ಎಂದು ವಿಜ್ಞಾಪಿಸಿದರು. ಅದನ್ನು ಪರಿಗ್ರಹಿಸಿದ ಮಹಾದೇವನು, ಭಕ್ತರು ತನ್ನನ್ನು ಸಗುಣರೂಪದಿಂದ ಪೂಜಿಸಲು ಅನುಕೂಲವಾಗುವಂತೆ, ಭೂಲೋಕದ ಅನೇಕ ಪ್ರಶಕ್ತ ಕ್ಷೇತ್ರಗಳಲ್ಲಿ ಲಿಂಗಾಕಾರದಿಂದ ಪ್ರತ್ಯಕ್ಷನಾದನು. ಅಂತೆಯೇ, ಶಿಶಿಲ ಗ್ರಾಮದ ಕೇಂದ್ರ ಪ್ರದೇಶದಲ್ಲಿರುವ ಪರ್ವತದಲ್ಲಿ ಲಿಂಗರೂಪಿಯಾಗಿ ಆವಿರ್ಭವಿಸಿ ಶಿಶೀಲೇಶ್ವರನೆನಿಸಿದನು. ಅವನೊಂದಿಗೆ, ಕ್ಷೇತ್ರರಕ್ಷಕನಾಗು ಕುಮಾರ-ಇಷ್ಟದೇವತೆ-ಮಹಿಷಾನನ-ವರಾಹಮುಖರೆಂಬ ನಾಲ್ಕು ಮಂದಿ ಭುತಾಗ್ರಣಿಗಳೂ ನೆಲೆಸಿದರು. ಕ್ಷೇತ್ರ ರಕ್ಷಕನಾದ ಕುಮಾರನಿಂದಾಗಿ ಅದು ಭೂತಾಗ್ರಣಿಗಳೂ ನೆಲೆಸಿದರು. ಕ್ಷೇತ್ರ ರಕ್ಷಕನಾದ ಕುಮಾರನಿಂದಾಗಿ ಅದು ಮುಂದೆ ಕುಮಾರ ಗಿರಿ ಎಂಬ ಹೆಸರನ್ನು ಪಡೆಯಿತು.  

ಕಪಿಲಾ ನದಿಯ ಉಗಮ :-

                         ಶ್ರೀ ಶಿಶಿಲೇಶ್ವರ ದೇವಾಲಯದ ಸನ್ನಿಧಿಯಲ್ಲಿ ಹರಿಯುತ್ತಿರುವ ಪವಿತ್ರ ಕಪಿಲಾನದಿಯ ಮೂಡುಗೆರೆಯ ಗುತ್ತಿ ಗ್ರಾಮದ “ದೇವರಮನೆ”ಯೆಂಬ ಊರಿನ ಸಮೀಪದ ಹುಳ್ಕು ಮಲೆಯಲ್ಲಿ ಉಗಮಿಸಿದೆ. ಪ್ರಾಚೀನ ಕಾಲದಲ್ಲಿ ಈ ಅರಣ್ಯವು ಶಿಶಿಲ ಕ್ಷೇತ್ರದಲ್ಲಿ ಸೇರಿಕೊಂಡಿತ್ತು. ಶ್ರೀ ಶಿಶಿಲೇಶ್ವರನು ಶಿಶಿಲ ಪ್ರದೇಶದ ಸಮಸ್ತ ಜೀವಿಗಳ ಹಿತವನ್ನು ಬಯಸಿ, ನದಿಯೊಂದನ್ನು ಸೃಜಿಸಬೇಕೆಂದು ಸಂಕಲ್ಪಿಸಲು, ವೇಷಭ ಮಾಸದ ಸಂಕ್ರಮಣದ ಸುಮುಹೂರ್ತವೇ ನದಿಯ ಉಗಮಕ್ಕೆ ಪ್ರಸಕ್ತ ಕಾಲವೆಂದು ಮನಗಂಡನು. ಅಂತೆಯೇ ಆ ಸುಮುಹೂರ್ತ ಕಾಲದಲ್ಲಿ ಹುಳ್ಕು ಮಲೆಯಲ್ಲಿ ಗೋಸ್ವರೂಪದ ಕಲಿಲ ವರ್ಣದ ಶಿಲೆಯ ಎಡೆಯಿಂ ಕಲಿಲಾನದಿಯ ಉಗಮವಾಯಿತು. ಈ ನದಿಯು ಅಲ್ಲಿಂದ ಹರಿದು ಭೈರವಪುರ ಗ್ರಾಮದಲ್ಲಿ ಪ್ರವಹಿಸುತ್ತಾ ಬಯಲು ನಾಡಿನಿಂದ ಕೆಳಗೆ ಧುಮುಕಿ, ಗೊಂಡಾರಣ್ಯದಲ್ಲಿ ಸಾಗಿ, ಅನೇಕ ಹಳ್ಳತೋಡುಗಳನ್ನು  ತನ್ನೊದಿಂಗೆ ವಿಲೀನಗೊಳಿಸಿ ವಿಶಾಲವಾಗುತ್ತ ಶಿಶಿಲ ಗ್ರಾಮವನ್ನು ಪ್ರವೇಶಿಸಿ, ಶ್ರೀ ಶಿಶಿಲೇಶ್ವರನ ಸನ್ನಿಧಿಯಲ್ಲಿ ಕಪಿಲ(ಮತ್ಸ್ಯ) ತೀರ್ಥವಾಗಿ ದೇವರ ಅಭಿಷೇಕದ ಪಾವನಜಲವಾಯಿತು. ಇಲ್ಲಿಂದ ಮುಂದೆ ಸಾಗಿ ಶಿಬಾಜೆ, ಹತ್ಯಡ್ಕ, ಕೌಕ್ರಾಡಿ, ಕೊಕ್ಕಢ ಗ್ರಾಮಗಳಲ್ಲಿ ಹರಿದು ಪಟ್ರಮೆಯಲ್ಲಿ ನೇತ್ರಾವತಿ ನದಿಯಲ್ಲಿ ವಿಲೀನವಾಗಿದೆ.  

 ದಾನವ ವಧೆ :- 

                           ಹಿಂದೆ ಸಹ್ಯಾದ್ರಿ ವಲಯ ಪ್ರಾಂತ್ಯವನ್ನು ವ್ಯಾಘ್ರಾಸ್ಯನೆಂಬ ರಾಕ್ಷಸನು ಆಳುತ್ತಿದ್ದನು. ಒಮ್ಮೆ ಆತನು ತನ್ನ ದಾನವಸೇನೆಯೊಂದಿಗೆ ಶಿಶಿಲ ಕ್ಷೇತ್ರವನ್ನು ಪ್ರವೇಶಿಸಿ ಕೋಲಾಹಲವೆಬ್ಬಿಸಿದನು. ಮನಬಂದಂತೆ ಪರಿಸರದ ಕಾಡುಪ್ರಾಣಿಗಳನ್ನು ಸಂಹರಿಸಿ ತಿಂದು ತೇಗಿದ ಆ ದಾನವ ಪಡೆ, ಕಪಿಲಾನದಿಯ ಭೂಮ ಗಾತ್ರದ ಮತ್ಸ್ಯಸಂಕುಲವನ್ನು ಕಂಡು ಜೊಲ್ಲು ಸುರಿಸಿತು. ಅವುಗಳನ್ನೂ ತಿಂದು ತೇಗಬೇಕೆಂಬ ಹೆಬ್ಬಯಕೆಯಿಂದ ಲಗುಬಗೆಯಿಂದ ಅವುಗಳನ್ನು ಹಿಡಿಯತೊಡಗಿತು. ಇದನ್ನು ತದೇಕಚಿತ್ತದಿಂದ ಗಮನಿಸಿದ ಶಿಶಿಲೇಶ್ವರನು ತನ್ನ ಕ್ಷೇತ್ರ ರಕ್ಷಕ ಪಡೆಗೆ, ಆ ದುಷ್ಟರನ್ನುಸಂಹರಿಸಲು ಆದೇಶಿಸಿದನು. ದೇವನ ಅಪ್ಪಣೆ  ಸಿಗುತ್ತಲೇ ಕ್ರೋಧೋನ್ಮತ್ತರಾದ ಕುಮಾರಾದಿ ಕ್ಷೇತ್ರ ರಕ್ಷಕರು ಬಾಣ ಪ್ರಯೋಗದಿಂದ ಆ ದುಷ್ಟರನದನು ಸಂಹರಿಸತೊಡಗಿದರು. ಹಲವಾರು ದಾನವರು ಹತರಾದರು. ಇದರಿಂದ ಕುದ್ಧನಾದ ವ್ಯಾಘ್ರ್ಯಾಸನೂ ಅಳಿದುಳಿದ ಅನುಚರರೂ ಶಿಶಿಲೇಶ್ವರನ ಸನ್ನಿಧಿ ಸ್ಥಾನವನ್ನು ಆಕ್ರಮಿಸಲು ಮುನ್ನುಗ್ಗಿದರು. ಆಗ ಅದರ ರಕ್ಷಣೆಯಲ್ಲಿದ್ದ ಶೈವಭೂತಗಳು ಆ ಅಸುರ ಸೇನೆಯನ್ನು ಹೊಡೆದುರುಳಿಸಿದವು. ಮಹಾಪಾತಕಿ ವ್ಯಾಘ್ರ್ಯಾಸನನ್ನು ಕಡುಪರಾಕ್ರಮಿ ಕುಮಾರನು ಇರಿದು ಸಂಹರಿಸಿದನು. ಈ ರೀತಿ ಸಮಸ್ತ ದಾನವ ಸಮೂಹವು ನಾಶವಾಗಿ, ಈ ಪ್ರದೇಶದಲ್ಲಿ ಸುಖಶಾಂತಿ ನೆಲೆಸಿತು. ದಾನವರ ಪೀಡನೆಯಿಂದ ತತ್ತರಿಸಿ ಹೋಗಿದ್ದ ಮೂಲ ನಿವಾಸಿಗಳಿಗೆ ನೆಮ್ಮದಿಯ ಬದುಕು ಸಿಕ್ಕಿತು. ಇದರಿಂದ ಸಂತುಷ್ಟನಾದ ಶಿಶಿಲೇಶ್ವರನು ಭೂತಾಗ್ರಗಣ್ಯನಾದ ಕುಮಾರನ ಶೌರ್ಯವನ್ನು ಪ್ರಶಂಸಿಸಿ ತನ್ನ ವಾಸಸ್ಥಳವಾದ ಆ ಗಿರಿಗೆ ಕುಮಾರಗಿರಿ ಎಂದು ಹೆಸರಿಟ್ಟನು. ಅಂದಿನಿಂದ ಆ ಗಿರಿ ಕುಮಾರಾದಿ ಭೂತಹಣಗಳ ಆಶ್ರಯ ತಾಣವಾಯಿತು. ಆ ಗಿರಿಯ ತಪ್ಪಲಲ್ಲಿ ಕುಮಾರಾದಿ ಕ್ಷೇತ್ರರಕ್ಷಕರು, ರಾಕ್ಷಸರಿಗೆ ಪ್ರಯೋಗಿಸಿದ ಬಾಣಗಳು ಭೂಮಿಗೆ ಚುಚ್ಚಿ ಶಿಲಾಕೃತಿ ತಾಳಿ ಈಗಲೂ ಅಲ್ಲಲ್ಲಿ ಗೋಚರಿಸುತ್ತಿವೆ. ಅವುಗಳಲ್ಲಿ ಹಿರಿದಾದ ದೈವಿಕ ಶಕ್ತಿಯಿರುವ ಪಗರಿಕಲ್ಲು (ಬಾಣೋಪಲ), ಈ ವೀರರ ಅಪ್ರತಿಮ ಸಾಹಸದ ದ್ಯೋತಕವಾಗಿ (ಭೂತ-ರಾಕ್ಷಸ ಯುದ್ಧದ ಸಾಕ್ಷಿ ರೂಪವಾಗಿ) ನೆಲದಲ್ಲಿ ಬಲವಾಗಿ ನಾಟಿನಿಂತಿದೆ! ಶಿಶಿಲೇಶ್ವರ ಸನ್ನಿಧಿ ಪ್ರದೇಶವನ್ನು ಅಪವಿತ್ರಗೊಳಿಸಬಾರದೆಂದೂ, ದೇವರ ಮೀನನ್ನು ಹಿಡಿಯಬಾರದೆಂದೂ, ಇದಕ್ಕೆ ವಿರುದ್ಧವಾಗಿ ನಡೆದರೆ ಒಳಿತಾಗದೆಂದೂ ಈ ಪುರಾಣಕಥೆಯಿಂದ ತಿಳಿದುಕೊಳ್ಳಬಹುದು.

ಶ್ರೀ ಶಿಶಿಲೇಶ್ವರ ದರ್ಶನ :-

                         ಶ್ರೀ ಶಿಶಿಲೇಶ್ವರನ ದಿವ್ಯ ಸಾನಿಧ್ಯವಿರುವ ಶಿಶಿಲ ಗ್ರಾಮವು ಬೆಟ್ಟಗುಡ್ಡಗಳಿಂದ ಸುತ್ತುವರಿದಿದ್ದು, ತಂಪು ತಂಪಾದ ಪ್ರಶಾಂದ ತಾಣವಾಗಿದೆ. ಪರಿಶುದ್ಧ ಕಪಿಲಾ ನದಿಯು ಹರಿಯುತ್ತಿರುವ ಈ ಹಚ್ಚಹಸಿರಿನ ಪ್ರದೇಶದಲ್ಲಿ ಮೂಲನಿವಾಸಿಗಳು ಮತ್ತು ಅನಂತರ ವಲಸೆ ಬಂದ ಜನರು ಪ್ರಾಚೀನ ಕಾಲದಿಂದಲೂ ಶಾಂತಿ, ನೆಮ್ಮದಿಯಿಂದ ಜೀವಿಸಿದರು. ವಲಸೆ ಬಂದ ಜನರು ಪ್ರಾಚೀನ ಕಾಲದಿಂದಲೂ ಶಂತಿ ನಿಮ್ಮದಿಯಿಂದ ಜೀವಿಸಿದರು. ವಲಸೆ ಬಂದವರು ವಿವಿಧ ಕೃಷಿಗಳನ್ನು ಅವಲಂಬಿಸಿದರೆ, ಮೂಲ ನಿವಾಸಿಗಳು, ಅವರಿಗೆ ಕಾರ್ಮಿಕರಾಗಿ ಸಹಕರಿಸುವುದರೊಂದಿಗೆ, ಕಾಡುತ್ಪತ್ತಿ ಸಂಗ್ರಹದಿಂದಲೂ ಜೀವನ ನಿರ್ವಹಿಸುತ್ತದ್ದರು. ಇಂಥ ಸಂದರ್ಭದಲ್ಲಿ ಒಮ್ಮೆ ಇಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಕುಮಾರ ಗಿರಿಯ ತಪ್ಪಲಿನಲ್ಲಿ ಪರಿಶಿಷ್ಟ ಜಾತಿಯ ಮುಗೇರ ಪಂಗಡಕ್ಕೆ ಸೇರಿದ ಜನರು ವಾಸಮಾಡಿಕೊಂಡಿದ್ದು. ಅವರಲ್ಲಿ ಕಿಲಮರತ್ತಾಯನೆಂಬವನು ಅವರ ಮುಖಂಡನಾಗಿದ್ದನು. ಒಂದು ದಿನ ಆತನ ಪತ್ನಿ ದೆಸಿಲು ಎಂಬವಳು ಕುಮಾರಗಿರಿಯಲ್ಲಿ ಕುರುಡು ಮತ್ತು ನರೆ ಎಂಬ ಗುಡ್ಡೆಗಳನ್ನು ಆಹಾರಕ್ಕಗಿ ಸಂಗ್ರಹಿಸುತ್ತಿರುವುದರಲ್ಲಿ ತೊಡಗಿದ್ದಳು. ನರೆಯನ್ನು ಬಿದಿರಿನ ಬರ್ಚಿಯಿಂದ ಅಗೆದು, ಕತ್ತಿಯಿಂದ ತುಂಡರಿಸುತ್ತಿದ್ದಾಗ, ಆ ಕತ್ತಿ ನೆಲದ ಒಳಗಿನ ಕಲ್ಲಿಗೆ ತಾಗಲು, ಅದರಿಂದ ರಕ್ತ ಚಿಮ್ಮಿ ಹರಿಯಿತು! ಇದನ್ನು ಕಂಡು ಗಾಬರಿಗೊಂಡ ಆಕೆ, ಮರವೇರಿ ಯಾವುದೋ ಹಣ್ಣುಗಳನ್ನು ಕೀಳುತ್ತಿದ್ದ ಕೆಲಮರತ್ತಾಯನ್ನು ಕರೆದು ಆ ವಿವರವನ್ನು ತಿಳಿಸಿದಳು. ಮರದಿಂದ ಜಿಗಿದು  ಓಡೋಡಿ  ಬಂದ ಆತನು ಆ ಕಲ್ಲಿನ ಗಾಯವನ್ನು ಒತ್ತಿ ಹಿಡಿದರೂ, ರಕ್ತಸ್ರಾವವು ನಿಲ್ಲಲಿಲ್ಲ. ಕುತೂಹಲಗೊಂಡ ಆತ ಆ ಕಲ್ಲನ್ನು ಬರ್ಚಿಯಿಂದ ಎಬ್ಬಿಸಲು ಶ್ರಮಿಸಿದನು. ಅದು ಅಲುಗಾಡಲೇ ಇಲ್ಲ. ರಕ್ತ ಒಸರುತ್ತಲೇ ಇತ್ತು. ಆ ವಿಚಿತ್ರ ಶಿಲೆಯಲ್ಲಿ ಅದ್ಭುತ ಶಕ್ತಿಯಿರಬೇಕೆಂದು ನಿರ್ಧರಿಸಿದ ಅವರು ಅಲ್ಲಿಂದ ಕೆಳಗಿಳಿದು ಕಾಣಸಿಕ್ಕಿದವರಿಗೆಲ್ಲ ಈ ಘಟನೆಯನ್ನು ವಿವರಿಸಿದರು. ಈ ಸೋಜಿಗದ ವಾತೇ ಇಡೀ ಊರಿಗೇ ಹರಡಲು, ಗ್ರಾಮ ನಿವಾಸಿಗಳು ತಂಡೋಪತಂಡವಾಗಿ ಕುಮಾರಗಿರಿಗೆ ತಲುಪಿ, ಈ ದೃಶ್ಯವನ್ನು ಕಂಡು ಹಿಂದಿರುಗುತ್ತಿದ್ದರು. ಹಲವು ದಿನಗಳ ಪರ್ಯಂತ ಈ ಘಟನೆ ನಡೆದೇ ಇತ್ತು. ಆಗ ಶಿಶಿಲದಲ್ಲಿ ಅನೇಕ ಉತ್ಪಾತಗಳಾಗಿ, ನಾನಾ ವಿಧದ ಸಂಕಷ್ಟಗಳು ಸಂಭವಿಸಿದವು. ಈ ವಿಚಿತ್ರ ಘಟನೆಯಿಂದ ಮಾನಸಿಕ ಒತ್ತಡಕ್ಕೊಳಗಾದ ಡೆಸಿಲು ಮಹಿಳೆ ಆವೇಶಗೊಂಡು ಬಾಯಿಗೆ ಬಂದಂತೆ ನುಡಿಯುತ್ತಾ ಅಲೆದಾಡತೊಡಗಿದಳು. ಗಾಬರಿಗೊಂಡ ಕಿಲಮರತ್ತಾಯನು ಆಕೆಯನ್ನು ಸಂತೈಸುತ್ತಾ ಬೆಂಗಾವಲಾಗಿ ನಿಂತನು. ಒಂಬತ್ತು ದಿನಗಳು ಹೀಗೆಯೇ ಉರುಳಿದವು. ಕೊನೆಗೆ ಊರಿನ ಮುಖಂಡರು, ಕುಮಾರ ಗಿರಿಯ ಆ ಶಿಲೆಯಲ್ಲಿ ದೈವಿಕ ಶಕ್ತಿ ಇರುವುದರಿಂದ, ಅದಕ್ಕೆ ಗಾಯವಾಗಿ ರಕ್ತ ಒಸರುತ್ತಿರುವ ಕಾರಣ, ಆ ಅನಾಹುತವಾಗಿರಬಹುದೆಂದು ಭಾವಿಸಿದರ. ಇದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳದಿದ್ದರೆ, ಇನ್ನಷ್ಟು ಅನಿಷ್ಟಗಳಾಗಬಹುದೆಂದು ಗಾಬರಿಗೊಂಡರು. ಕೊನೆಗೆ ಎಲ್ಲರೂ ಸಮಾಲೋಚಿಸಿ ಆ ವಿಚಿತ್ರ ಶಿಲೆಯನ್ನು ಪರಿಶೀಲಿಸಲು ಓರ್ವ ಅನುಭವಿ ವಿದ್ವಾಂಸನನ್ನು ಕರೆಯಿಸಿರು. ಹತ್ತನೆಯ ದಿನ ಅವನನ್ನು ಊರವರು ಆ ಶಿಲೆಯಲ್ಲಿಗೆ ಕರೆತಂದರು. ಆ ವಿದ್ವಾಂಸನು ಆ ಶಿಲೆಯ ದಿವ್ಯ ಲಕ್ಷಣವನ್ನು ಪರಿಶೀಲಿಸಿ, ಅದನ್ನು ಈಶ್ವರ ಪ್ರತೀಕವೇಂದು ಗುರುತಿಸಿದನು. ಎಲ್ಲರೂ ಆ ಶಿಲೆಗೆ ತಲೆಬಾಗಿ ಕೈ ಮುಗಿದು, ಅದನ್ನು ಪ್ರತಿದಿನವೂ ಆರಾಧಿಸುವೆವೆಂದೂ, ಊರಿಗೆ ಯಾವುದೇ ವಿಪತ್ತು ಬಾರದಿರಲೆಂದೂ ಬೇಡಿಕೊಂಡರು. ಅಲ್ಲೇ ನಿಂತಿದ್ದ ದೆಸಿಲು, ಕಿಲಮರತ್ತಾಯರು, ತಮ್ಮ ಅಪರಾಧಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದು ನಿರ್ಧರಿಸಿ, ತಮ್ಮ ಹಣೆಯನ್ನು ಕತ್ತಿಯಿಂದ ತಿವಿದುಕೊಂಡರು. ಅವರ ಹಣೆಯಿಂದ ನೆತ್ತರು ಚಿಮ್ಮಿ ನೆಲಕ್ಕೆ ಬೀಳುತ್ತಲೇ, ಆ ದಿವ್ಯ ಶಿಲೆಯಿಂದ ಒಸರುತ್ತಿದ್ದ ರಕ್ತಸ್ರಾವವು ನಿಂತುಬಿಟ್ಟಿತು! ದೈಹಿಕವಾಗಿಯೂ ಮಾನಸಿಕವಾಗಿಯೂ ನೊಂದು ಬೆಂದು, ಹಲವು ದಿನಗಳಿಂದ ಸರಿಯಾಗಿ ಉಣ್ಣದೆ, ನಿದ್ರಿಸದೆ ಕೊರಗಿದ್ದ ದೆಸಿಲು-ಕಿಲಮರತ್ತಾಯರು, ಎಲ್ಲರೂ ನೋಡನೋಡುತ್ತಿದ್ದಂತೆ ನಿತ್ರಾಣದಿಂದ ಕುಸಿದು ಬಿದ್ದರು! ಆಗ ಆ ವಿದ್ವಾಂಸನ ಸೂಚನೆಯಂತೆ ಶಿವಪ್ರತೀಕದ ರಕ್ತದಿಂದ ತೋಯ್ದ ಶಿಲೆಯ ಬುಡದಲ್ಲಿದ್ದ ಮೃತ್ತಿಕೆಯನ್ನು ಅವರ ಹಣೆಗೆ ಸಂಗಡಿಗರು ಲೇಪಿಸಿದರು. ಆಗ ಅವರು ಚೇತರಿಸಿ ಎದ್ದು ನಿಂತರು! ಈಶ್ವರ ಪ್ರತೀಕದಿಂದ ಅನಂತರ ರಕ್ತಸ್ರಾವವಾಗದಿದ್ದರೂ, ಅದಕ್ಕಾದ ಗಾಯವು ಮಾಯವಾಗದೆ ಉಳಿದುಬಿಟ್ಟಿತು! ಎಲ್ಲರೂ ಭಕ್ತಿಭಾವದಿಂದ ಅದಕ್ಕೆ ಪ್ರದಕ್ಷಿಣೆ ಬಂದು ವಂದಿಸಿ ಸ್ತುತಿಸಿದರು. ಹಾಗೆ ಅಲ್ಲಿಗೆ ಬಂದು ಈ ಸಮಸ್ಯೆಗೆ ಪರಿಹಾರ ಸೂಚಿಸಿದ ಆ ವಿದ್ವಾಂಸರು “ ಆ ಶೀಲೆಯು ಶಿವನ ಆತ್ಮಲಿಂಗ, ಅದಕ್ಕೆ ನಿತ್ಯಪೂಜೆ ಆಗಲೇ ಬೇಕು” ಎಂಬ ಸೂಚನೆ ಕೊಟ್ಟಾಗ, ಅದಕ್ಕೆ ಶುದ್ಧ ಕ್ರಿಯಾವಿಧಿಗಳನ್ನು ಮಾಡಿಸಿ , ಮಾರನೆಯ ದಿನದಿಂದಲೇ ಆ ವಿದ್ವಾಂಸನೇ ದೇವಪೂಜೆಯನ್ನು ನೆರವೇರಿಸಿಕೊಡುವ ಅರ್ಚಕನಾಗಬೇಕೆಂದು ಎಲ್ಲರೂ ಒಕ್ಕೂರಳಿನಿಂದ ವಿಜ್ಞಾಪಿಸಿಕೊಂಡರು. ಆ ವಿದ್ವಾಂಸನು ಸಂತೋಷದಿಂದ ಅದಕ್ಕೆ ಸಮ್ಮತಿಸಿದನು. ಎಲ್ಲರೂ ಸಂತೋಷಪಟ್ಟು, ಆತನಿಗೆ ಬೇಕಾದ ಸವಲತ್ತುಗಳೊಂದಿಗೆ ಉತ್ತಮ ಮನೆಯನ್ನು ಒದಗಿಸಿಕೊಟ್ಟರು. ಅಂದು ರಾತ್ರಿ ಆ ವಿದ್ವಾಂಸ ಅರ್ಚಕನಿಗೆ ಕನಸಿನಲ್ಲಿ ಶಿವನು ತನ್ನ ಪರಿವಾರ ಗಣದೊಡನೆ ಗೋಚರಿಸಿ, ಕ್ಷೇತ್ರ ರಕ್ಷಕ ಭೂತಗಳ ನಿರ್ದಿಷ್ಟ ನಿವಾಸ ಸ್ಥಳಗಳನ್ನು ನಿರ್ದೇಶಿಸಿ, ಆರಾಧಿಸಲು ಸೂಚಿಸಿದನು. ಅದರಂತೆ ಅರ್ಚಕನು ಅರ್ಹ ವಿಧಿವಿಧಾನಗಳೊಂದಿಗೆ ಶಿವನನ್ನೂ, ಶಿವನ ಪರಿವಾರವನ್ನೂ ಆರಾಧಿಸಿದನು. ಇತ್ತ ದೆಸಿಲು, ಕಿಲಮರತ್ತಾಯರು, ಶಿವಲಿಂಗಕ್ಕೆ ಗಾಯಮಾಡಿದ ವೇದನೆಯಿಂದ ನಿತ್ಯವೂ ಕೊರಗುತ್ತಿದ್ದರು. ಆಗ ಒಂದು ದಿನ ಕನಸಿನಲ್ಲಿ ಅವರಿಗೆ ಶಿವನು ಕಾಣಿಸಿಕೊಂಡು, ‘ಮಕ್ಕಳೇ, ನೀವು ಶುದ್ಧಾಂತಃಕರಣದ ಭಕ್ತರಾದುದರಿಂದ ಈ ರೀತಿ ಪಶ್ಚಾತ್ತಾಪಪಡುತ್ತಿರುವಿರಿ. ಅರಿಯದೆ ಮಾಡಿದ ತಪ್ಪಿಗಾಗಿ ನಾನು ನಿಮ್ಮನ್ನು ಕ್ಷಮಿಸಿದ್ದೇನೆ. ಧೈರ್ಯಸ್ಥರಾಗಿರಿ. ಪ್ರತಿ ವರ್ಷವೂ ಮೇಷ ಮಾಸ ಇಪ್ಪತೆರಡನೆಯ ದಿನದಿಂದ ಹತ್ತು ದಿನಗಳ ತನಕ ರಾತ್ರಿ ಕಾಲದಲ್ಲಿ ನಿಮ್ಮ ಹಣೆಯನ್ನು ಗೀರಿ ರಕ್ತವನ್ನು ಭೂಮಿಗೆ ಅರ್ಪಿಸಿ ಪುನೀತರಾಗಿರಿ” ಎಂದು ನಿರೂಪಿಸಿದನು. ಇದರಿಂದ ಅವರ ನೋವು, ಸಂಕಟ ಅಂಜಿಕೆಗಳೆಲ್ಲ ದೂರವಾಗಿ ಅವರಿಗೆ ನೆಮ್ಮದಿ ಒದಗಿತು. ಮರುದಿನ ಪ್ರಭಾತ ಕಾಲದಲ್ಲಿ ಆ ಅರ್ಚಕನೂ, ಗ್ರಾಮಸ್ಥರೂ ಕುಮಾರಗಿರಿಗೆ ಹೋದು. ಮೊದಲೇ ಶುದ್ಧೀಕರಿಸಿದ ಆ ಶಿವಲಿಂಗವನ್ನು ಶ್ರೀ ಶಿಶಿಲೇಶ್ವರನೆಂದು ಕರೆದು, ಮಂಗಲ ದ್ರವ್ಯಗಳಿಂದ ಪೂಜಿಸಿದನು. ಅನತಿ ದೂರದಲ್ಲಿ ಕುಮಾರ-ಇಷ್ಟದೇವತೆ-ಮಹಿಷಾನನ (ಮಹಿಷಂತಾಯ)-ವರಾಹಮುಖ (ಪಂಜುರ್ಲಿ) ಭೂತಗಳಿಗೆ ಸ್ಥಾನಗಳನ್ನು ಕಲ್ಪಿಸಿ ಆರಾಧಿಸಿದನು. ಎಲ್ಲರೂ ಎಲ್ಲ ದೇವತೆಗಳಿಗೂ ನಮಿಸಿ, ಪ್ರಸಾದ ಸ್ವೀಕರಿಸಿ ಹಿದಿರುಗಿಸಿದರು. ಅರ್ಚಕನು ಅಂದು ರಾತ್ರಿ ಶ್ರೀ ಶಿಶಿಲೇಶ್ವರನಿಗೆ ರಾತ್ರಿಯ ಪೂಜೆ ಮಾಡಿದ ಬಳಿಕ, ದೆಸಿಲು-ಕಿಲಮರತ್ತಶಯರು ಕುಮಾರ ಗಿರಿಯ  ತಪ್ಪಲಿನಲ್ಲಿ ದೇವರಿಗೆ ಮುಖಮಾಡಿ ನಿಂತು, ತಮ್ಮ ಹಣೆಯನ್ನು ಕತ್ತಿಯಿಂದ ಗೀರಿ ನೆಲಕ್ಕೆ ರಕ್ತವನ್ನು ಬೀಳಿಸಿದರು. ಅನಂತರ ಅರ್ಚಕನು ನೀಡಿದ ಗಂಧ ಪ್ರಸಾದವನ್ನು ಹಣೆಗೆ ಲೇಪಿಸಿದರು. ಹೀಗೆ ಅವರು ಹತ್ತು ದಿನಗಳ ತನಕ ಈ ಕಾರ್ಯ (ಬೋಳುವಿಧಿ) ಮಾಡಿದರು. ಅರ್ಚಕನು ಶ್ರೀ ಶಿಶಿಲೇಶ್ವರನಿಗೆ ಪ್ರತಿ ದಿನವೂ ತ್ರಿಕಾಲ ಪೂಜೆ ಮಾಡುತ್ತಿದ್ದನು. ಈ ರೀತಿ ಶಿಶಿಲದಲ್ಲಿ ಈಶ್ವರಾರಾಧನೆಯನ್ನು ಆರಂಭಿಸಿದ ಬಳಿಕ ಸಮಸ್ತ ಜನತೆಗೆ ಕ್ಷೇಮವುಂಟಾಯಿತು.

ಶ್ರೀ ಶಿಶಿಲೇಶ್ವರ ದೇವಾಲಯ :- 

                               ಶ್ರೀ ಶಿಶಿಲೇಶ್ವರನ ಮೂಲಸ್ಥಾನವಾದ ಕುಮಾರಗಿರಿಗೆ ಅರ್ಚಕನು ನಿತ್ಯವೂ ಪೂಜೆಗೆ, ಕೊಡದ ನೀರಿನೊಂದಿಗೆ ಹೋಗುತ್ತಿದ್ದನು. ಮಳೆಗಾಲದಲ್ಲಿ ಒಂದು ದಿವಸ ಕೊಡದ ನೀರನ್ನು ಹೊತ್ತುಕೊಂಡು ಹೋಗುವಾಗ ಜಾರಿ ಬಿದ್ದು ಬಿಟ್ಟನು. ಹಾಗಾಗಿ ಪುನಃ ಹೋಗಿ ಮಿಂದು ನೀರು ತರಬೇಕಾಯಿತು. ಇದರಿಂದ ಬಳಲಿದ ಆ ವೃದ್ಧ ಅರ್ಚಕರು ‘ಶೀ ಶಿಶಿಲೇಶ್ವರನು ಕಪಿಲಾ ನದಿಯ ತಟದಲ್ಲಿಯೇ ಉದ್ಭವಿಸುತ್ತಿದ್ದರೆ ನನಗೆ ಕಷ್ಟ ಇರುತ್ತಿರಲಿಲ್ಲ. ಪೂಜಿಸಲು, ಅಭಿಷೇಕ ಮಾಡಲು ಅನುಕೂಲವಾಗುತ್ತಿತ್ತು” ಎಂದು ಯೋಚಿಸುತ್ತಾ, ಕುಮಾರ ಗಿರಿ ತಲಪಿ, ಪೂಜೆ ಸಲ್ಲಿಸಿ ಹಿಂದಿರುಗಿದರು. ಅರ್ಚಕರು ಆ ರಾತ್ರಿ ನಿದ್ದೆಯಲ್ಲಿರುವಾಗ ಕನಸಿನಲ್ಲಿ ಗೋಚರಿಸಿದ ದೇವನು, ತಾನು ಕಪಿಲಾ ತಟಾಕದಲ್ಲಿಯೇ ಉದ್ಭವಿಸುವೆನೆಂದೂ, ಗುಡ್ಡೆಯೇರಿ ಪೂಜಿಸುವ ಕಷ್ಟ ಬೇಡವೆಂದೂ, ಅಲ್ಲಿಯೇ ತನ್ನನ್ನು ಪೂಜಿಸಬಹುದೆಂದೂ ಹೇಳಿದಂತಾಯಿತು. ಮರುದಿನ ಅರ್ಚಕನು ಬಂದು ನೋಡುತ್ತಾನೆ! ಗಾಯ ಹೊಂದಿದ ಅದೇ ಶಿವಲಿಂಗವು ಕಪಿಲಾ ತಟಾಕದಲ್ಲಿ ಶೋಭಿಸುತ್ತಿದೆ! ನಿಜ ಸಂಗತಿ ತಿಳಿಯಲು ಕುಮಾರಗುಡ್ಡೆಯೇರಿ ಅರ್ಚಕನು ನೋಡುತ್ತಾನೆ, ಅಲ್ಲಿ ಶಿವಲಿಂಗವು ಮಾಯವಾಗಿ, ಶಿಲಾತಳದಲ್ಲಿ ಶಿವಪಾದ ಚಿಹ್ನೆಗಳು ಕಾಣುತ್ತಿವೆ! ಕೂಡಲೇ ಕೆಳಗಿಳಿದು ಬಂದು ಊರವರಿಗೆ ಈ ಮಹಿಮೆಯನ್ನು ವಿವರಿಸಿದಾಗ, ಈ ಶಿವಕಾರುಣ್ಯಕ್ಕಾಗಿ ಅತುಲ ಸಂತೋಷಪಟ್ಟರು. ಕಪಿಲಾ ತಟದಲ್ಲಿ ಶ್ರೀ ಶಿಶಿಲೇಶ್ವರ ಲಿಂಗವನ್ನು ಕಂಡು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸಾಷ್ಟಾಂಗ ಎರಗಿದರು. ಶಿವ ಕೃಪೆಯಿಂದ ವೃದ್ಧ ಅರ್ಚಕನ ಸಂಕಷ್ಟ ದೂರವಾಗಿ, ಕಪಿಲಾ ನದೀ ತೀರದಲ್ಲಿ ಶಿವಲಿಂಗವನ್ನು ಪೂಜಿಸಲು ಪ್ರಾರಂಭಿಸಿದನು. ಅನಂತರ ಊರವರೆಲ್ಲರೂ ಸೇರಿ, ರಾಜಾಶ್ರಯದೊಂದಿಗೆ ಶ್ರೀ ಶಿಶಿಲೇಶ್ವರ ದೇವಾಲಯವನ್ನೂ, ಮಹಾಗಣಪತಿ ಗುಡಿಯನ್ನೂ ನಿರ್ಮಾಣ ಮಾಡಿದರು.

 ದೆಸಲು – ಕಿಲಮರತ್ತಾಯ ಭೂತಗಳು :- 

                                    ಶ್ರೀ ಶಿಶಿಲೇಶ್ವರ ಪರಮ ಭಕ್ತರಾಗಿದ್ದು ದೆಸಿಲು ಕಿಲಮರತ್ತಾಯರು ಕುಮಾರ ಗಿರಿಯ ತಪ್ಪಲು ಪ್ರದೇಶದಲ್ಲಿ ಸಾರ್ಥಕ ಜೀವನ ನಡೆಸಿ ಅನೇಕ ವರ್ಷಗಳ ಕಾಲ ಬಾಳಿದರು. ಕಾಲಧರ್ಮದಂತೆ ಅವರಿಗೆ ವೃದ್ಧಾಪ್ಯ ಉಂಟಾಗಲು, ದೈಹಿಕ ಚೈತನ್ಯ ಕ್ಷೀಣಿಸಿತು. ಆದರೆ, ಅವರಲ್ಲಿರುವ ದೈವಭಕ್ತಿಗೇನೂ ಕುಂದುಂಟಾಗಲಿಲ್ಲ. ಪ್ರತಿವರ್ಷದಂತೆ ಆ ವರ್ಷವೂ ಹತ್ತು ದಿನಗಳ ಬೋಳು ವಿದಿ ಆಚರಿಸಿದರು. ಮೇಷ ಮಾಸದ ಮೂವತ್ತೊಂದನೆಯ ದಿನ (ವೃಷಭ ಸಂಕ್ರಮಣ) ರಾತ್ರಿ, ಹತ್ತನೆಯ ದಿನದ ಬೋಳುವಿಧಿ ನೆರವೇರಿಸಿ, ಶ್ರೀ ಸ್ವಾಮಿಯ ಪ್ರಸಾದವನ್ನು ಸ್ವೀಕರಿಸಿ, ಶಿವಸ್ಮರಣೆ ಮಾಡುತ್ತಾ ಮಲಗಿದವರು ಅಲ್ಲಿಯೇ ದೈವಾಧೂನರಾದರು. ಭೂ ಲೋಕದಲ್ಲಿ ತನ್ನ ಕುರುಹನ್ನು ತೋರಿಸಿದ್ದ ಇವರನ್ನು ಶ್ರೀ ಶಿಶಿಲೇಶ್ವರನು ತನ್ನ ಪರಿವಾರದ ಭೂತಗಳನ್ನಾಗಿ ಮಾಡಿದರು. ಈ ಭೂತಗಳು, ದೆಸಿಲು – ಕಿಲಮರತ್ತಾಯ ಸಂತತಿಯ ಓರ್ವ ಸ್ತ್ರೀ ಮತ್ತು ಓರ್ವ ಪುರುಷನ ಮೈಮೇಲೆ ಬಂದು, ತಾವು (ದೆಸಿಲು – ಕಿಲಮರತ್ತಾಯರು) ದೈವಾಧೀನರಾದ ಬಳಿಕ, ಶಿವನ ಅನುಗ್ರಹದಿಂದ ಭೂತಗಳಾಗುವೆ ಎಂದೂ, ತಮ್ಮನ್ನು ನಿಯಮ ನಿಷ್ಠೆಗಳೊಂದಿಗೆ ಆರಾಧಿಸಬೇಕೆಂದೂ ಆದೇಶಿಸಿದವು. ಅದರಂತೆ ಆ ದೈವಗಳಿಗೆ ಕುಮಾರ ಗಿರಿಯ ತಪ್ಪಲಿನಲ್ಲಿ ಸಾನಿಧ್ಯ ಸ್ಥಾನಗಳನ್ನು ನಿರ್ಮಿಸಿ, ಜನರು ಭಕ್ತಿಯಿಂದ ಪೂಜಿಸತೊಡಗಿದರು.  ಆನಂತರ ದೆಸಿಲು ಕಿಲಮರತ್ತಾಯರ ಎಂಟು ಮಂದಿ ಮಕ್ಕಳು (ಪುತ್ರ ಪುತ್ರಿಯರು) ಶ್ರೀ ಶಿಶಿಲೇಶ್ವರನ ಸನ್ನಿಧಿಯಲ್ಲಿ ಪ್ರತಿವರ್ಷವೂ ಬೋಳುವಿಧಿಯನ್ನು ನೆರವೇರಿಸಿದರು. ಕಾಲಾಂತರದಲ್ಲಿ ತಮ್ಮ ಮರಣದ ಬಳಿಕ ಅವರು ಈ ದೈವಗಳ ಬಳಗವಾದರು. ಆ ದಿನದಿಂದ ಪರಿವಾರ ಸಮೇತ ದೆಸಿಲು – ಕಿಲಮರತ್ತಾಯ ಭೂತಗಳನ್ನು ಆರಾಧಿಸುವ ರೂಢಿ ಬಂತು.  ಈ ರೀತಿಯಿಂದಾಗಿ ಶಿಶಿಲದಲ್ಲಿ ಶ್ರೀ ಶಿಶಿಲೇಶ್ವರನೂ, ಅನೇಕ ಪರಿವಾರ ದೇವತೆಗಳೂ, ಶ್ರೀ ಆಚಿಜನೇಯ ಸ್ವಾಮಿಯೂ, ಅಸಂಖ್ಯಾತ ಭೂತಗಳೂ ನೆಲೆಸಿರುವುದರಿಂದ ಈ ಪ್ರದೇಶವು ಪವಿತ್ರ ಕಾರಣಿಕ ಶಿವಕ್ಷೇತ್ರವಾಗಿ ಮೆರೆಯುತ್ತಿದೆ.   ಶ್ರೀ ಶಿಶಿಲೇಶ್ವರನ ಪ್ರತೀಕವನ್ನು ಆದಿಯಲ್ಲಿ ಕಂಡು ಹಿಡಿದ ಮಹಾಮಹಿಳೆ ದೆಸಿಲುವಿನ ಸ್ಮರಣಾರ್ಥವಾಗಿ ಈ ಊರಿಗೆ ದೆಸಿಲು ಎಂಬ ಹೆಸರಾಯಿತು. ಪರವೂರಿನವರಿಗೆ ಇದೀಗ ಶಿಶಿಲವಾದರೂ, ಊರವರಿಗೆ ಇದು “ದೆಸಿಲು” ಆಗಿಯೇ ಉಳಿದಿದೆ. 

ಹುಲಿಕಲ್ಲು-ಕಪಿಲೆಕಲ್ಲು :-

                             ಶ್ರೀ ಶಿಶಿಲೇಶ್ವರ ದೇವಾಲಯದ ಪಕ್ಕದಲ್ಲಿ ಪ್ರವಹಿಸುವ ಕಪಿಲಾ ನದಿಯ ಮತ್ಯ್ಸತೀರ್ಥದ ಬದಿಯಲ್ಲಿ ಎರಡು ಚಿಕ್ಕ-ದೊಡ್ಡ ಬಂಡೆಗಳಿವೆ. ಇವು ಶ್ರೀ ಶಿಶಿಲೇಶ್ವರನ ಮಹಿಮೆಯನ್ನೂ, ಕಪಿಲಾ ನದಿಯ ಪಾವಿತ್ರ್ಯವನ್ನೂ ಸಾರುತ್ತಿವೆ. ಪ್ರಾಚೀನ ಕಾಲದಲ್ಲಿ ಒಂದು ದಿನ ಕಪಿಲೆ ಎಂಬ ದನವು ಕುಮಾರಗಿರಿಯ ತಪ್ಪಲು ಪ್ರದೇಶದಲ್ಲಿ ಮೇಯುತ್ತಿರಲು ಒಂದು ಹೆಬ್ಬುಲಿಯು ಅದನ್ನು ಹಿಡಿಯಲು ಮುನ್ನುಗ್ಗಿತು. ಇದನ್ನು ಕಂಡು ಪ್ರಾಣ ಭಯದಿಂದ ಅದು ಓಡೋಡಿ ಬಂದು ಕಪಿಲಾ ನದಿಗೆ ಧುಮುಕಿಬಿಟ್ಟಿತು! ಅದನ್ನು ಕೊಂದು ತಿನ್ನಲೇಬೇಕೆಂದು ಆಶಿಸಿದ ಆ ಹುಲಿ ಬೆನ್ನಟ್ಟಿ ಬಂದು ನದಿಗೆ ಜಿಗಿದರೂ, ಆ ಗೋವಿಗೆ ಶಿವಾನುಗ್ರಹ ಒದಗಿದ ಕಾರಣ ಅದನ್ನು ಹಿಡಿಯಲು ಹುಲಿಗೆ ಸಾಧ್ಯವಾಗಲಿಲ್ಲ! ಕಪಿಲಾ ನದಿಯ ಪವಿತ್ರ ಜಲಸ್ಪರ್ಶದಿಂದ ಹುಲಿಯು ಪರಿಶುದ್ಧಗೊಂಡು, ಸ್ವಭಾವ ಮಾಯವಾಯಿತು. ಲಿಂಗವನ್ನು ನೋಡನೋಡುತ್ತಲೇ ಅದಕ್ಕೆ ಪಾಪಪ್ರಜ್ಞೆಯ ಅರಿವುಂಟಾಗಿ ಪಶ್ವಾತ್ತಾಪಟ್ಟಿತು. ತನ್ನನ್ನು ಹಿಂಬಾಲಿಸಿದ ಹೆಬ್ಬುಲಿಯು ಈ ರೀತಿ ಸ್ತಬ್ಧವಾಗಿ ನಿಂತಿರುವುದನ್ನು ನೋಡಲು ಆ ಗೋವು ಹಿಂದಿರುಗಿದಾಗ, ಅದಕ್ಕೂ ಶಿವಲಿಂಗದ ದರ್ಶನವಾಯಿತು. ಆಗ, ಆ ಹುಲಿದನಗಳು ಶಿಲೆಗಳಾಗಿ ತನ್ನ ಸನ್ನಿಧಿಯಲ್ಲೇ ಇರುವಂತಾಗಲೆಂದು ಶಿವನು ಸಂಕಲ್ಪಿಸಲು, ಅವು ನಿಂತ ಸ್ಥಳಗಳಲ್ಲಿ ದಿವ್ಯ ಬಂಡೆಗಳಾದವು. ದೈವ ಸಂಕಲ್ಪವನ್ನು ಮೀರಲುಂಟೆ! ಅವುಗಳಿಗೆ ಹುಲಿಕಲ್ಲು-ಕಪಿಲೆಕಲ್ಲು ಎಂಬ ಹೆಸರಾಯಿತು. ಅವುಗಳಲ್ಲಿ ದೊಡ್ಡ ಬಂಡೆ-ಹುಲಿಕಲ್ಲು, ಚಿಕ್ಕ ಬಂಡೆ-ಕಪಿಲೆಕಲ್ಲು ಎಂದು ಜನರು ಗುರುತಿಸಿಕೊಂಡಿದ್ದಾರೆ. ಶ್ರೀ ಶಿಶಿಲೇಶ್ವರ ಸನ್ನಿಧಿ ಪ್ರದೇಶಕ್ಕೆ ಬರುವ ದುಷ್ಟ ಜೀವಿಗಳು ತಮ್ಮೊಳಗಿನ ವೈರಾಭಾವವನ್ನು ತೊರೆದು ಪರಸ್ಪರ ಮೈತ್ರಿಯಿಂದ ಬಾಳುವುದೆಂದು ಜಗತ್ತಿಗೆ ಸಾರುವಂತೆ ಈ ಎರಡು ಹೆಬ್ಬಂಡೆಗಳು ಕಪಿಲಾನದಿಯಲ್ಲಿ ಸ್ಥಿರವಾಗಿ ನಿಂತಿವೆ.  

ಶ್ರೀ ಶಿಶಿಲೇಶ್ವರನ ಮತ್ಸ್ಯಾಪರಾಹ! :-

                                        ಶ್ರೀ ಶಿಶಿಲೇಶ್ವರ ದೇವಾಲಯದಿಂದ ಅಂದಾಜು ಹದಿನಾರು ಕಿಲೋಮೀಟರ್‍ಗಳ ದೂರದಲ್ಲಿ, ಶಿಶಿಲ ಸೀಮೆಗೆ ಸೇರಿದ ಕೊಕ್ಕಡದ ಶ್ರೀ ವೈದ್ಯನಾಥೇಶ್ವರನ ದೇವಾಲಯವಿದೆ. ಇದರ ಪರಿಸರದಲ್ಲಿ ಶಿವಪರಿವಾರ ದೇವತೆಗಳ ಮಂದಿರಗಳೂ, ಶ್ರೀ ವಿಷ್ಣುಮೂರ್ತಿ ದೇವಾಲಯವೂ, ಪಕ್ಕದಲ್ಲಿರುವ ಸರೋವರದ ಮಧ್ಯದಲ್ಲಿ ಶ್ರೀ ನೀಲಕಂಠೇಶ್ವರನ ಗುಡಿಯೂ ವಿರಾಜಿಸುತ್ತಿವೆ. ಈ ಸರೋವರದಲ್ಲಿ ‘ಮಡೆಂಜಿ’ ಎಂಬ ವಿಶಿಷ್ಟ ಜಾತಿಯ ಮೀನುಗಳಿವೆ. ಇವುಗಳ ಸೃಷ್ಟಿಯ ಕುರಿತು ಒಂದು ವಿಶಿಷ್ಟ ಕಥೆ ಜನಜನಿತವಾಗಿದೆ.  ಹಿಂದೆ ಕೊಕ್ಕಡದ ಮುಖಂಡರು ಶಿಶಿಲದ ಪೆರುಮೇಲು ಮೀನುಗಳನ್ನು ತಂದು ಈ ಸರೋವರದಲ್ಲಿ ಸಾಕಿ, ಅವುಗಳ ಸೊಬಗನ್ನು ನೋಡಬೇಕೆಂದು ಆಶಿಸಿದರು. ಅದರಂತೆ ಶಿಶಿಲಕ್ಕೆ ಬಂದು ಮತ್ಸ್ಯ ತೀರ್ಥ ಮಡುವಿನಿಂದ ಪೆರುವೇಲು ಮೀನುಗಳನ್ನು ಅನುಮತಿಯಿಲ್ಲದೆ ಹಿಡಿಯತೊಡಗಿದರು. ಅದನ್ನು ಶಿಶಿಲದವರು ಆಕ್ಷೇಪಿಸಿದರು. ಹರಿಯುವ ನದಿಯಿಂದ ಮೀನುಗಳನ್ನು ಹಿಡಿಯಲು ಯಾರ ಅನುಮತಿಯೂ ಬೇಕಿಲ್ಲವೆಂದು ಹೇಳುತ್ತಾ ಅವರು ಕೆಲವು ಪೆರುವೇಲುಗಳನ್ನು ಹಿಡಿದೇ ಬಿಟ್ಟರು. ಆಗ ಶಿಶಲದವರು ಅದನ್ನು ತಡೆದಾಗ, ವಿವಾದ ಬೆಳೆದು ಕಲಹವುಂಟಾಯಿತು. ಶಿಶಿಲದವರು ಅಧಿಕ ಸಂಖ್ಯೆಯಲ್ಲಿದ್ದರಿಂದ ಕೊಕ್ಕಡದವರಿಗೆ ಸೋಲಾಯಿತು. ಹಿಡಿದ ಮೀನುಗಳನ್ನು ನದಿಗೆ ಬಿಡಬೇಕಾಗಿ ಬಂತು. ಹಾಗೆ ಬಿಡುವಾಗ ಒಂದೆರಡು ಮೀನುಗಳನ್ನು ಅಡಗಿಸಿ ಇಟ್ಟುಕೊಂಡು ಹೋಗಿ ಕೊಕ್ಕಡದ ದೇವರ ಕೆರೆ (ಸರೋವರ)ದಲ್ಲಿ ಬಿಟ್ಟರು. ಇದರಿಂದ ಅಸಮಾಧಾನಗೊಂಡ ಶ್ರೀ ಶಿಶಿಲೇಶ್ವರನು ಕೊಕ್ಕಡದ ಸರೋವರದಲ್ಲಿ ಬಿಟ್ಟ ಆ ಮೀನುಗಳು ಮಡೆಂಜಿಗಳಗಲಿ”ಎಂದು ಶಪಿಸಿದನು. ಆ ಶಾಪದ ಪ್ರಭಾವದಿಂದ ಆ ಪೆರುವೇಲು ಮೀನುಗಳು ಆ ಕ್ಷಣವೇ ಮಡೆಂಜಿ ಮೀನುಗಳಾಗಿ ಪರಿವರ್ತನೆಗೊಂಡವು. ಹೀಗೆ ಕೊಕ್ಕಡದವರು ಬಹಳ ಪರಿಶ್ರಮದಿಂದ ಶ್ರೀ ಶಿಶಿಲೇಶ್ವರÀ ಪೆರುವೇಲು ಮೀನುಗಳನ್ನು ಅಪಹರಿಸಿದರೂ, ಅವರ ಬಯಕೆ ನೆರವೇರಲಿಲ್ಲ. ಆದುದರಿಂದ ಆ ಪಾವನ ಮತ್ಸ್ಯಗಳನ್ನು ಬೇರೆ ಕಡೆಗಳಿಗೆ ಒಯ್ಯಬಾರದೆಂದೂ, ಅವುಗಳನ್ನು ಹಿಂಸಿಸಬಾರದೆಂದೂ ಶ್ರೀ ಶಿಶಿಲೇಶ್ವರನ ಸಂಕಲ್ಪವೆಂಬುದು ಇದರಿಂದ ತಿಳಿದುಬರುತ್ತದೆ. 

ಇತರ ಕ್ಷೇತ್ರಗಳು :-  

                         ಶಿಶಿಲದ ಶ್ರೀ ಮಹಾಕಾಳ ಸನ್ನಿಧಿಯ ಸಮೀಪವಿರುವ ವಿಶಾಲ ಸಂಪಿಗೆ ವೃಕ್ಷದ ನೆರಳುದಾಣ, ಶ್ರೀ ಶಿಶಿಲೇಶ್ವರ ದೇವಾಲಯದ ಮುಂಭಾಗದಲ್ಲಿರುವ ನಾಗಬನ, ಒಂದು ಕಿಲೋಮೀಟರ್ ದೂರದ ಕಾವಿನಕಾನದ ವನದೇವತೆಯ ನಿವಾಸ ಸ್ಥಾನ, ಕೋಡಿಪಾದೆ (ಕೊಡ್ಯಪಾದೆ) ಎಂಬಲ್ಲಿ ಚಾಮುಂಡಿಯ ಸಾನಿಧ್ಯವಿರುವ ಶಿಲಾಸಂಕೇತ ಇವೆಲ್ಲ ಶಿಶಿಲದ ಇನ್ನಿತರ ಕ್ಷೇತ್ರಗಳಾಗಿವೆ. ಶಿಶಿಲದಿಂದ ನಾಲ್ಕು ಕಿಲೋಮೀಟರ್‍ಗಳ ದೂರದಲ್ಲಿ, ಶಿಬಾಜೆ ಗ್ರಾಮದ ಮೊಂಟೆತ್ತಡ್ಕ ಎಂಬಲ್ಲಿ ವನದುರ್ಗಾ ದೇವಾಲಯವು ರಮಣೀಯವಾಗಿ ಕಂಗೊಳಿಸುತ್ತದೆ. ಇಲ್ಲಿಂದ ಅನತಿ ದೂರದ ಅಮ್ಮಾಜೆಯಲ್ಲಿ ಇನ್ನೊಂದು ದುರ್ಗಾ ಮಂದಿರವಿದೆ. ಶಿಶಿಲದಿಂದ ಆರು ಕಿಲೋಮೀಟರ್ ದೂರದ ಶಿರಾಡಿ ಗ್ರಾಮದಲ್ಲಿ ಶಿರಾಡಿಭೂತ-ಬಚ್ಚನಾಯಕ ಮುಂತಾದ ದೈವಗಳ ಮೂಲಸ್ಥಾನವೆಂದು ಪ್ರಖ್ಯಾತಿಗೊಂಡ ಭೂತಾಲಯವೂ, ಶ್ರೀ ಸುಬ್ರಹ್ಮಣ್ಯ ದೇವಾಲಯವೂ ಸಂಶೋಭಿಸುತ್ತಿದೆ. ಶಿಶಿಲದ ನೆರೆಯ ಹತ್ಯಡ್ಕ ಗ್ರಾಮದ ಬೂಡುಮುಗೇರು ಎಂಬಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ಪ್ರಖ್ಯಾತವಾಗಿದೆ. ಇವೆಲ್ಲವೂ ಶ್ರೀ ಶಿಶಿಲೇಶ್ವರ ದೇವಾಲಯಕ್ಕೆ ಸಂಬಂಧಿಸಿದ ಪ್ರಧಾನ ಕ್ಷೇತ್ರಗಳಾಗಿವೆ. ಹಿಂದೆ ಶಿಶಿಲವನ್ನು ಆಳಿದ ಜೈನ ಅರಸರ ಕಾಲದಲ್ಲಿ ಶಿಶಿಲ ದೇವಾಲಯವು ಶಿಲಾಮಯವಾಗಿ ನಿರ್ಮಾಣಗೊಳ್ಳುವುದರೊಂದಗೆ, ಕಗ್ಗಲ್ಲಿನ ಬಸದಿಗಳು, ಕೋಟೆಕೊತ್ತಲಗಳೂ, ರಚಿತವಾದವು. ಆದರೆ ಅವೆಲ್ಲ ಈಗ ಭಗ್ನಾವಶೇಷವಾಗಿದೆ. 

ಶ್ರೀ ಶಿಶಿಲೇಶ್ವರ ದೇವಾಲಯದ ಪೂಜಾ ಪದ್ಧತಿ :- 

                            ಶ್ರೀ ಶಿಶಿಲೇಶ್ವರ, ಶ್ರೀ ಮಹಾಗಣಪತಿ, ಶ್ರೀ ದುರ್ಗದೇವಿ ಮತ್ತು ಶ್ರೀ ಆಂಜನೇಯ ಸ್ವಾಮಿಗೆ ನಿತ್ಯ ಪೂಜೆ ಇದೆ. ಆಶ್ವಯುಜ ಅಮಾವಾಸ್ಯೆಯ ದೀಪಾವಳಿ ದಿನದಿಂದ ವೃಷಭ ಮಾಸದ ಹತ್ತನೆಯ ದಿನದವರೆಗೆ ಶ್ರೀ ಶಿಶಿಲೇಶ್ವರ ಮೂರ್ತಿಯ ನಿತ್ಯಬಲಿ ಉತ್ಸವವು ನೆರವೇರುವುದು. ಈ ನಿತ್ಯ ಪೂಜಾ ವಿಧಿಗಳಲ್ಲದೆ, ವಿವಿಧ ಪರ್ವ ದಿನಗಳಲ್ಲಿ ವಿಶೇಷ ಪೂಜೋತ್ಸವಗಳು ಶಾಸ್ತ್ರೋಕ್ತ ಪದ್ಧತಿಯಂತೆ ಜರುಗುವುವು.  ಸೌರಯುಗಾದಿಯಾದ ಮೇಷ ಮಾಸದ ಪ್ರಥಮ ದಿನದಲ್ಲಿ ನೂತನ ಸಂವತ್ಸರದ ಪಂಚಾಂಗಪಠನ ನಡೆಯುತ್ತದೆ. ಅನಂತರ ಮೇಲೆ ಕಾಣಿಸಿದ ಎಲ್ಲ ದೆವರಿಗೂ ಮಹಾಪೂಜೆಯಾಗುವುದು.  ಶ್ರಾವಣ ಮಾಸ ಶುಕ್ಲಪಕ್ಷದ ನಾಗಪಂಚಮಿಯ ದಿನ ಪೂರ್ವಾಹ್ನದಲ್ಲಿ ದೇವಾಲಯದ ಪೂರ್ವ ದಿಕ್ಕಿನಲ್ಲಿರುವ ನಾಗವನದಲ್ಲಿ ವಿಶೇಷ ನಾಗಾರಾಧನೆಯಾಗುವುದು. ಭಾದ್ರಪದ ಮಾಸದ ಶುಕ್ಲ ಪಕ್ಷದ ಗಣೇಶ ಚತುರ್ಥಿಯಂದು ಪೂರ್ವಾಹ್ನದಲ್ಲಿ ಗಣಪತಿ ಹೋಮವೂ ಮಧ್ಯಾಹ್ನದಲ್ಲಿ ಎಲ್ಲ ದೇವರಿಗೂ ಮಹಾಪೂಜೆಯೂ ಜರಗುವುದು.  ಆಶ್ಚಯುಜ ಮಾಸ ದೀಪಾವಳಿ ಅಮಾವಾಸ್ಯೆಯ ದಿನ ರಾತ್ರಿ ಕಾಲದಲ್ಲಿ ಬಲೀಂದ್ರ ಪೂಜೆಯಾದ ಬಳಿಕ ಶ್ರೀ ಶಿಶಿಲೇಶ್ವರ ಮೂರ್ತಿಯ ನಿತ್ಯಬಲಿ ಉತ್ಸವವು ಪ್ರಾರಂಭವಾಗುವುದು. ಕಾರ್ತಿಕ ಮಾಸದ ಪೌರ್ಣಮೀ ದಿವಸ ರಾತ್ರಿ ಕಾಲದಲ್ಲಿ ಊರವರು ತಂದುಕೊಟ್ಟು ಅಡಿಕೆ ರಾಶಿಪೂಜೆಯೊಂದಿಗೆ ರಂಗಪೂಜೆಯಾಗುವುದು. ಕಾರ್ತಿಕ ಮಾಸದ ಅಮಾವಾಸ್ಯೆಯ ದಿನ ರಾತ್ರಿ ಲಕ್ಷದೀಪೋತ್ಸವವು ಜರುಗುವುದು. ಮಾಘ ಮಾಸ ಕೃಷ್ಣ ಪಕ್ಷ ಚತುರ್ದಶಿಯ ಮಹಾಶಿವರಾತ್ರಿ ದಿವಸ ರಾತ್ರಿ ಶಿವರಾತ್ರಿ ಮಹೋತ್ಸವವೂ, ಮಾರಣೆಯ ದಿನ ಪೂರ್ವಾಹ್ನ ಶ್ರೀ ಶಿಶಿಲೇಶ್ವರನ ದರ್ಶನಬಲಿ ಉತ್ಸವವೂ ಸಂಭ್ರಮದಿಂದ ಜರಗುವುದು. ಚಾಂದ್ರ ಯುಗಾದಿಯಾದ ಚೈತ್ರ ಮಾಸ ಶುಕ್ಲ ಪಕ್ಷ ಪಾಡ್ಯದ ದಿನ ಪೂರ್ವಾಹ್ನ ಭಜಕರಿಂದ ದೇವ ಭಜನ ಕಾರ್ಯವೂ, ಶ್ರೀ ಶಿಶಿಲೇಶ್ವರನಿಗೆ ವಿಶೇಷ ಮಹಾಪೂಜೆಯೂ ನೆರವೇರುವುದು.  ಚೈತ್ರ ಮಾಸದ ಪ್ರಥಮ ಸೋಮವಾರ ದಿನ ಮಧ್ಯಾಹ್ನ ಶ್ರೀ ಶಿಶಿಲೇಶ್ವರನಿಗೆ ಶತರುದ್ರಾಭಿಷೇಕ ಸಹಿತ ಮಹಾಪೂಜೆಯಾಗುವುದು. ಈ ನಿಶ್ಚಿತ ಪೂಜಾಕಾರ್ಯಗಳಲ್ಲದೆ ಆಗಾಗ ಭಕ್ತರಿಂದ ವಿವಿಧ ರೀತಿಯ ದೇವಾರ್ಚನಾ ಸೇವೆಗಳೂ ಜರುಗುವುದು. 

ಶಿಶಿಲದ ಪ್ರೇಕ್ಷಣೀಯ ಸ್ಥಳಗಳು 

1. ಶ್ರೀ ಶಿಶಿಲೇಶ್ವರ ದೇವಾಲಯ       2. ಮಹಾಗಣಪತಿ ಮಂದಿರ, ಶ್ರೀ ದೇವಿ ಸನ್ನಿಧಿ, ಆಚಿಜನೇಯ ಗುಡಿ    3. ಮಹಾಕಾಳೀ ಸನ್ನಿಧಿ         4. ಭೂತ ಸ್ಥಾನಗಳು     5. ನಾಗವನ       6. ಕಪಿಲಾ ನದಿಯ ಮತ್ಯ್ಸತೀರ್ಥ

7. ಕುಮಾರಗುಡ್ಡೆ       8.ಕೂಡುಕಲ್ಲು ಮಜಲಿನ ದುರ್ಗಾ ದೇವಾಲಯ   9.ಮೀನಗುಂಡಿ       10. ಕಾವಿನಕಾನ (ಕಾವೋತ ಕಾನೊ)       11. ಕೋಡಿಪಾದೆ (ಕೊಡ್ಯ ಪಾದೆ)     12. ಕೆಳಗಿನ ಹಿತ್ತಲಿನ ಭಗ್ನಗೊಂಡ ಬಸದಿ

13. ಕೋಟೆ ಬಾಗಿಲಿನ ಕೋಟೆ ಮತ್ತು ಅರಮನೆಯ ಕುರುಹು    14. ಕೋಟೆ ಬಾಗಿಲಿನ ಬಸದಿಯ ನೆಲಗಟ್ಟುಗಳು  15. ಕೋಟೆತಾರಿನ ಕೋಟೆಯ ಕುರುಹು .

                                 (ಶಿಶಿಲ ಗ್ರಾಮದ ವಿಸ್ತೀರ್ಣ – 12211 ಎಕ್ರೆ 98 ಸೆಂಟ್) by: ಶಿಶಿಲೇಶ್ವರ ಪ್ರಕಾಶನ, ಶಿಶಿಲ, ಬೆಳ್ತಂಗಡಿ ತಾಲೂಕು, ದ.ಕ - 574198