Pooja Kunitha

      ಪೂಜಾ ಕುಣಿತ :

                 ಬೆಂಗಳೂರು, ಮಂಡ್ಯ, ಕೋಲಾರ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಪೂಜಾ ಕುಣಿತವು ಹೆಚ್ಚು ಪ್ರಚಲಿತ. ಶಕ್ತಿ ದೇವತೆಗಳಿಗೆ ಸಂಬಂಧಿಸಿದ ಕುಣಿತ ಇದು. ಆಯಾ ಗ್ರಾಮದೇವತೆಯರ ಪ್ರತೀಕಗಳೇ ಈ ಪೂಜೆಗಳು. ಹಬ್ಬದ ಸಂದರ್ಭದಲ್ಲಿ ಗುಡಿಯೋಳಗಿನ ದೇವತೆ `ಪೂಜೆ'ಯ ರೂಪದಲ್ಲಿ ಹೊರಬರುತ್ತಾಳೆ. ಬಿದಿರಿನ ತಳಿ (ತಟ್ಟಿ) ಮಧ್ಯೆ ದೇವತೆಯ ಮುಖವಾಡಗಳನ್ನು ಇರಿಸಿಕೊಂಡು ಕುಣಿಯುವುದಕ್ಕೆ ಪೂಜಾ ಕುಣಿತ ಎನ್ನುವರು. ಸುಮಾರು 5 ಅಡಿ ಉದ್ದ, 4 ಅಡಿ ಅಗಲವಿರುವ ಬಿದಿರಿನ `ಗಳು' ಮತ್ತು ಅದರ ಹಚ್ಚೆಗಳನ್ನು ಜೋಡಿಸಿ ಪೂಜೆಯನ್ನು ಸಿದ್ಧಪಡಿಸುತ್ತಾರೆ. ಈ ವಿಧಾನಕ್ಕೆ `ತಳಿ' ಎನ್ನುವರು. ಇದರ ಮಧ್ಯ ಭಾಗದಲ್ಲಿ ದೇವರ ಮುಖವಾಡವನ್ನು ಕಟ್ಟಿರುತ್ತಾರೆ. ಎರಡು ಕಡೆಗಳಲ್ಲಿ ತಳಿಯ ಉದ್ದಕ್ಕೂ ಭಕ್ತರು ಹರಕೆ ಹೊತ್ತು ಸಲ್ಲಿಸಿರುವ ಬಣ್ಣದ ಸೀರೆಗಳನ್ನು ಇಳಿ ಬಿಟ್ಟು, ತಳಿಯ ಮೇಲ್ತುದಿಗೆ ಏಳು ಅಥವಾ ಒಂಬತ್ತು ಹಿತ್ತಾಳೆ ಇಲ್ಲವೆ ಬೆಳ್ಳಿಯ ಕಳಸಗಳಿಂದ ಅಲಂಕರಿಸಿರುತ್ತಾರೆ. ಮುಖವಾಡಕ್ಕೆ ಸೇರಿದಂತೆ ತಳಿಯ ಮೇಲ್ಭಾಗಕ್ಕೆ ಅರ್ಧಚಂದ್ರಾಕಾರದ ಹಿತ್ತಾಳೆ, ಬೆಳ್ಳಿ ಪ್ರಭಾಳೆ (ಪ್ರಭಾವಳಿ) ಕಟ್ಟಿ ಅದರ ಮೇಲುಗಡೆ ತಳಿಯ ಎರಡು ಕಡೆಗಳಲ್ಲಿ ಪೂರ್ಣಚಂದ್ರನ ಆಕಾರದ ಹಿತ್ತಾಳೆ ಪಟ್ಟಿಗಳನ್ನು ಕಟ್ಟಿರುತ್ತಾರೆ. ಭಕ್ತಾದಿಗಳು ಹರಕೆ ಹೊತ್ತು ಸಲ್ಲಿಸಿರುವ ಕಡಗ, ಕಾಲುಮುರಿ, ಹಸ್ತ, ಓಲೆ, ಡಾಬು ಮೊದಲಾದ ಆಭರಣಗಳನ್ನು ಇಟ್ಟು ಅಲಂಕರಿಸಿ ದೇವಿಯ ವಿಗ್ರಹ ಮತ್ತು ತಳಿ ತುಂಬಾ ಹೂವಿನ ಮಾಲೆಯನ್ನು ಇಳಿಬಿಟ್ಟು ಅಲಂಕರಿಸಿರುತ್ತಾರೆ. ತಳಿಯ ಹಿಂಭಾಗಕ್ಕೂ `ಬೆನ್‍ಬಟ್ಟೆ' ಕಟ್ಟಿರುತ್ತಾರೆ.

                  ಇದನ್ನು ಹೊತ್ತು ಕುಣಿಯಲು ಅನುಕೂಲವಾಗುವಂತೆ ತಳಿಯ ಕೆಳಭಾಗದಲ್ಲಿ ಮಧ್ಯೆ ಕಂಚು ಅಥವಾ ಹಿತ್ತಾಳೆಯ ಒಂದು ಗಿಂಡಿಯನ್ನು ಸೇರಿಸಿ ಬಿಗಿದಿರುತ್ತಾರೆ. ಇದು ತಲೆಯ ಮೇಲೆ ಅಲುಗಾಡದಂತೆ ಕೂರುತ್ತದೆ. ಈ ಪೂಜೆಯ ಮಧ್ಯ ಭಾಗದಲ್ಲಿ ಅವರವರ ಗ್ರಾಮದೇವತೆಯ ವಿಗ್ರಹಗಳನ್ನಿರಿಸಿ ದೇವರ ಪೂಜಾ ಕುಣಿತ ಮಾಡುವರು. ಪ್ರತಿಯೊಂದು ದೇವತೆಯ ಹೆಸರಿನಲ್ಲಿ ಗುಡ್ಡನೊಬ್ಬನು ನೇಮಕವಾಗಿರುತ್ತಾನೆ. ಈತ ಪೂಜಾರಿ ಮಾತ್ರ. ಆದರೆ ಪೂಜೆಯನ್ನು ಹೊತ್ತು ಕುಣಿಯುವವರು ಬೇರೆ ಇರುತ್ತಾರೆ. ಹಬ್ಬ ಹರಿದಿನ ಮಾತ್ರ ಅಲ್ಲದೆ ಭಕ್ತಾದಿಗಳು ಹರಕೆ ಮಾಡಿಕೊಂಡಾಗಲೂ ಪೂಜಾ ಕುಣಿತವನ್ನು ಪ್ರದರ್ಶನ ಮಾಡುವುದುಂಟು. ಸಾಮಾನ್ಯವಾಗಿ ಈ ಪ್ರದರ್ಶನದ ಸ್ಥಳ ಹಳ್ಳಿಯ ಗುಡಿಮುಂಭಾಗದ ರಂಗಸ್ಥಳ ಅಥವಾ ವಿಶಾಲವಾದ ಬಯಲಾಗಿರುತ್ತದೆ. ಪೂಜೆಯನ್ನು ಹೊತ್ತು ಕುಣಿಯುವವರು ಬಿಳಿ ಅಂಗಿ ತೊಟ್ಟು ವೀರಗಾಸೆಯ ರೀತಿಯಲ್ಲಿ ಪಂಚೆ ಧರಿಸಿ ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ. ಹಣೆಗೆ ಕುಂಕುಮ ಇಟ್ಟುಕೊಂಡಿರುತ್ತಾರೆ. ತಮಟೆ, ನಗಾರಿ, ಡೋಲು ಬಡಿತಕ್ಕೆ ಅನುಗುಣವಾಗಿ ಮೂರ್ಹೆಜ್ಜೆ, ನಾಲ್ಕೆಜ್ಜೆ, ಐದ್ಹೆಜ್ಜೆ, ಆರ್ಹೆಜ್ಜೆ, ಎಂಟ್ಹೆಜ್ಜೆ, ಹದಿನಾಲಕೆಜ್ಜೆ - ಹೀಗೆ ವಿವಿಧ ಮಟ್ಟುಗಳಲ್ಲಿ ಕುಣಿಯುತ್ತಾರೆ. ಕೆಲ ಪರಿಣತ ಕಲಾವಿದರು ಪೂಜಾ ಕುಣಿತದಲ್ಲಿ ಅನೇಕ ಚಮತ್ಕಾರಗಳನ್ನು ತೋರುವುದುಂಟು. ಭಾರವಾದ ಪೂಜೆಯನ್ನು ಹೊತ್ತು ಸಾಲಾಗಿ ಬೋರಲಿಟ್ಟ ಮಡಿಕೆಗಳ ಮೇಲೆ ಅವು ಒಡೆಯದಂತೆ ತಾಳಕ್ಕೆ ತಕ್ಕಂತೆ ಒಂದೊಂದೇ ಹೆಜ್ಜೆಯಲ್ಲಿ ನಡೆಯುವುದು, ಮುಖವನ್ನು ಒಂದೇ ಕಡೆ ಮಾಡಿಕೊಂಡು ತಲೆಯ ಮೇಲಿರುವ ಪೂಜೆಯನ್ನು ಮಾತ್ರ ಒಂದು ಸುತ್ತು ತಿರುಗುವಂತೆ ಮಾಡುವುದು ಬಹಳ ಸೊಗಸಾಗಿರುತ್ತವೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಹಿನ್ನೆಲೆಯಾಗಿ ಚರ್ಮವಾದ್ಯ ನುಡಿಸುವವರು , ಜೊತೆಗೆ ಗ್ರಾಮದೇವತೆಯ ಮೇಲೆ ಹಾಡುಗಳನ್ನು ವಿವಿಧ ಜಾತಿಯವರು ಹಾಡುತ್ತಿರುತ್ತಾರೆ. ಪೂಜಾ ಕುಣಿತದಲ್ಲಿ ತೊಟ್ಟಿಲು ಕುಣಿತ, ಹಾಯ್ಗುಣಿತ, ಹೆಜ್ಜೆ ಕುಣಿತ, ಗೆಜ್ಜೆ ಕುಣಿತ, ಎದುರು ಕುಣಿತ ಎಂಬ ಅನೇಕ ವಿಧಗಳಿವೆ. ಕೆಲವು ಪ್ರದೇಶಗಳಲ್ಲಿ ಪೂಜಾ ಕುಣಿತ ಸಂದರ್ಭದಲ್ಲಿ ಐದಾರು ಜನರ ತಮಟೆ ಬಾರಿಸುವವರೂ ಇರುತ್ತಾರೆ. ಪೂಜೆಯ ಹೊತ್ತವರಲ್ಲಿ ಕೆಲವರು ಎಂಟು ಹತ್ತು ವರುಷದ ಬಾಲಕರನ್ನು ಎರಡು ಕಡೆಯ ನಡುವಿನ ಮೇಲೆ ಕೂರಿಸಿಕೊಂಡು, ಇಲ್ಲವೆ ಎರಡು ಕೈಯಲ್ಲೂ ಎರಡು `ಪಟ'ವನ್ನು ಹಿಡಿದುಕೊಂಡು ಕುಣಿಯುವುದರೊಂದಿಗೆ ಸಾಹಸವನ್ನು ತೋರುತ್ತಾರೆ. ಇದಲ್ಲದೆ ಪೂಜೆ ಹೊತ್ತು, ಹಗ್ಗದ ಮೇಲೆ ನಡೆಯುವುದು, ನೆಲದ ಮೇಲೆ ಇರಿಸಿದ ರೂಪಾಯಿಯನ್ನು ತುಟಿಯಿಂದ ಕಚ್ಚಿ ಮೇಲೆತ್ತುವುದು, ಮುಂತಾದ ಚಮತ್ಕಾರಗಳನ್ನು ನುರಿತ ಕೆಲವೇ ಕಲಾವಿದರು ಮಾಡಬಲ್ಲರು.

                     ಪೂಜಾ ಕುಣಿತಕ್ಕೆ ಒನಕೆ ಕುಣಿತವೂ ಸೇರುವುದುಂಟು. ಅವರಲ್ಲಿ ಒನಕೆಯನ್ನು ತಲೆಯ ಮೇಲಿಟ್ಟು ಸಮತೋಲನವನ್ನು ಕಾಪಾಡಿಕೊಂಡು ಕುಣಿಯುವುದು ಇದಕ್ಕಿಂತಲೂ ವಿಶಿಷ್ಟವಾದುದು. ಇದು ಗ್ರಾಮದೇವತೆಗಳ ಹಬ್ಬ-ಹರಿದಿನ, ಜಾತ್ರೆ ಸಂದರ್ಭದಲ್ಲಿ ಆಚರಣಾತ್ಮಕ ಕಲೆಯಾಗಿ ಪ್ರದರ್ಶನಗೊಳ್ಳುವುದರಿಂದ ಇದಕ್ಕೆ ಬಹಳ ಭಯ-ಭಕ್ತಿಯ ನೇಮ ನಿಷ್ಠೆಗಳಿವೆ. ಪೂಜೆ ಹೊತ್ತು ಕುಣಿಯುವವರನ್ನು ವಿಶೇಷವಾಗಿ ಗೌರವಿಸಲಾಗುತ್ತದೆ. ಕೆಲವು ಹಬ್ಬಗಳಲ್ಲಿ ಇತರೆ ಊರುಗಳಿಂದ ಆಹ್ವಾನಿಸಲಾದ ಹತ್ತಾರು ದೇವತೆಗಳು ಒಂದೆಡೆ ಸೇರಿ ಹತ್ತಾರು ಪೂಜೆಗಳ ಒಟ್ಟಾರೆ ಕುಣಿತವೇ ಏರ್ಪಡುತ್ತದೆ. ಆಯಾ ಊರುಗಳಿಂದಲೇ ಬಂದ ತಮಟೆ, ನಗಾರಿಯವರು ಒಟ್ಟಿಗೆ ಸೇರಿ `ಗತ್ತು' ಹೊಡೆಯುವಾಗ ಆ ಶಬ್ದ ಮತ್ತು ಸ್ಪರ್ಧಾತ್ಮಕ ಕುಣಿತ ನೋಡಲು ಸೊಗಸಾಗಿರುತ್ತದೆ.
ಕರ್ನಾಟಕದ ಜನಪದ ಕಲೆಗಳ ಕೋಶ - ಸಂಪಾದಕರು - ಹಿ. ಚಿ. ಬೋರಲಿಂಗಯ್ಯ :