Souparnika River Story

ಸೌಪರ್ಣಿಕಾ:

                         ತಾಯಿಯ ಬಂಧವಿಮೋಚನೆಗಾಗಿ ನಾನೇನು ಮಾಡಬೇಕು? ಎಂದು ಕೇಳಿದ ಗರುಡನಿಗೆ ಹಾವುಗಳು ಮತ್ತು ಅವುಗಳ ತಾಯಿ ‘ನಮಗೆ ಅಮೃತವನ್ನು ತಂದು ಕೊಡು’ ಎಂದು ಹೇಳಿದವು. ಅಮೃತವನ್ನು ತರಲು ಸ್ವರ್ಗಕ್ಕೆ ಹೊರಟ ಗರುಡ ಹಸಿದು ‘ನನಗೇನಾದರೂ ತಿನ್ನಲು ಕೊಡಮ್ಮಾ’ ಎಂದು ತಾಯಿಯನ್ನು ಕೇಳಿದ. ಆಕೆಯ ಬಳಿ ಏನೂ ಇರಲಿಲ್ಲ. ‘ದ್ವೀಪಾಂತರದಲ್ಲಿರುವ ನಿಷಾದರನ್ನು ಭಕ್ಷಿಸು’ ಎಂದು ಮಗನಿಗೆ ವಿನತೆ ಸಲಹೆ ನೀಡಿದಳು. ಗರುಡ ಅಮ್ಮ ಹೇಳಿದ ದ್ವೀಪವನ್ನು ಸೇರಿದನು. ನಿಷಾದರನ್ನು ಭಕ್ಷಿಸಲು ಆರಂಭಿಸಿದನು. ಅವರೊಳಗೊಬ್ಬ ಸಜ್ಜನನಿದ್ದ. ಆತನನ್ನು ನುಂಗುವಾಗ ಗರುಡನ ಗಂಟಲು ಸುಟ್ಟಿತು. ತಕ್ಷಣ ಅವನನ್ನು ಉಗುಳಿ ಉಳಿದವರನ್ನು ತಿನ್ನಲು ತೊಡಗಿದನು. ಆದರೂ ಹೊಟ್ಟೆ ತುಂಬಲಿಲ್ಲ. ಆದುದರಿಂದ ಅಲ್ಲಿಂದ ಹಾರಿ ತನ್ನ ತಂದೆಯಾದ ಕಶ್ಯಪರ ಆಶ್ರಮವನ್ನು ಸೇರಿದನು. ತನ್ನ ಕಷ್ಟವನ್ನು ಹೇಳಿಕೊಂಡನು. ಅವರು ಒಂದು ಸರೋವರದಲ್ಲಿ ಜಗಳವಾಡುವ ಆನೆ ಮತ್ತು ಆಮೆಯನ್ನು ತಿನ್ನು ಎಂದು ಸೂಚಿಸಿದರು. ಗರುಡನು ಕಶ್ಯಪರು ಹೇಳಿದ ಸರೋವರದ ಬಳಿಗೆ ಹಾರಿ ಆನೆ ಮತ್ತು ಆಮೆಯನ್ನು ತನ್ನ ಪಾದಗಳಲ್ಲಿ ಎತ್ತಿ ಆಕಾಶಕ್ಕೆ ಹಾರಿದನು. ಒಂದು ಆಲದ ಮರದ ರೆಂಬೆಯಲ್ಲಿ ಕುಳಿತನು. ಲಟಲಟನೆ ಆ ಗೆಲ್ಲು ಮುರಿಯಿತು. ಅದರಲ್ಲಿ ವಾಲಖಿಲ್ಯರೆಂಬ ಮುನಿಗಳು ತಪಸ್ಸನ್ನಾಚರಿಸುತ್ತಿದ್ದರು. ಅದನ್ನು ನೋಡಿದ ಗರುಡ ಅವರ ತಪಸ್ಸಿಗೆ ಭಂಗ ಉಂಟಾಗಬಾರದೆಂಬ ಉದ್ದೇಶದಿಂದ ಆ ದೊಡ್ಡ ರೆಂಬೆಯನ್ನು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡನು. ಅಕಾಶಕ್ಕೆ ಹಾರಿದನು.

                         ಮರಳಿ ತಂದೆಯ ಬಳಿ ಬಂದು ‘ಇದನ್ನೇನು ಮಾಡಲಿ?’ ಎಂದು ಕೇಳಿದನು. ಅವರು ವಾಲಖಿಲ್ಯರನ್ನು ಸಮಾಧಾನ ಮಾಡಿ ಗರುಡನೊಡನೆ ಮೇರು ಪರ್ವತದ ಮೇಲಿರಿಸಿ ಅದನ್ನು ತಿನ್ನಲು ಹೇಳಿದರು. ತಂದೆಯ ಸಲಹೆಯಂತೆ ಆನೆ ಮತ್ತು ಆಮೆಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡ ಗರುಡನು ಆಕಾಶಕ್ಕೆ ಹಾರಿ ಸ್ವರ್ಗಲೋಕಕ್ಕೆ ಪ್ರಯಾಣಿಸಿದನು. ಆ ಲೋಕವೆಲ್ಲಾ ಸುತ್ತುತ್ತಾ ಅಮೃತವಿರಿಸಿದ ತಾಣವನ್ನು ಕಂಡು ಹುಡುಕಿದನು. ಧಗಧಗಿಸುವ ದಳ್ಳುರಿಯ ಜ್ವಾಲೆಯ ಕೋಟೆಯ ಒಳಗೆ, ಕ್ಷುರದಂತೆ ಹರಿತವಾದ ಬಾಯಿ ಇರುವ ಗರಗರನೆ ತಿರುಗುವ ಚಕ್ರದ ಮಧ್ಯೆ ಭಯಂಕರ ಘಟಸರ್ಪಗಳ ರಕ್ಷಣೆಯಲ್ಲಿ ಅಮೃತದ ಭಾಂಡವಿತ್ತು. ಅವೆಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಾ ಅತ್ಯಂತ ಚಾಣಾಕ್ಷತನದಿಂದ ಅಮೃತ ಭಾಂಡವನ್ನು ಗರುಡ ಎತ್ತಿಕೊಂಡು ಬಂದನು. ಇದನ್ನೆಲ್ಲ ನೋಡುತ್ತಿದ್ದ ಮಹಾವಿಷ್ಣುವಿಗೆ ಬಹಳ ಸಂತಸವಾಯಿತು. ಅತ್ಯಂತ ಪರಾಕ್ರಮಿ. ಮಹಾಜಾಣ. ಜೊತೆಗೆ ನಿಸ್ಪøಹ. ಅತನನ್ನು ತನ್ನವನನ್ನಾಗಿ ಮಾಡಿಕೊಳ್ಳಬೇಕೆಂದು ಹರಿಗೆ ಮನಸ್ಸಾಯಿತು.  ಆಕಾಶ ಮಾರ್ಗದಲ್ಲಿ ಗರುಡನನ್ನು ತಡೆದು, ಮಾತನಾಡಿಸಿ, ಹೊಗಳಿ ತನ್ನ ವಾಹನವಾಗುವಂತೆ ಕೇಳಿದನು. ಗರುಡನು ಅದಕ್ಕೆ ‘ನೀನು ನನ್ನನ್ನು ಧ್ವಜವನ್ನಾಗಿ ಸ್ವೀಕರಿಸಬೇಕೆಂದು ಕೇಳಿಕೊಂಡನು. ಮಹಾವಿಷ್ಣು ಅದಕ್ಕೆ ಒಪ್ಪಿ ಗರುಡಧ್ವಜನಾದನು. ಅಷ್ಟರಲ್ಲಿ ಅಮೃತವನ್ನು ಗರುಡ ಅಪಹರಿಸಿದ ಸುದ್ದಿ ಇಂದ್ರನಿಗೆ ತಿಳಿಯಿತು. ಅವನು ವಜ್ರಾಯುಧವನ್ನು ಧರಿಸಿ ಬಂದು ಗರುಡನನ್ನು ತಡೆದನು. ಯುದ್ಧವಾಯಿತು. ಗರುಡನನ್ನು ಗೆಲ್ಲಲು ಇಂದ್ರನಿಗೆ ಸಾಧ್ಯವಾಗಲಿಲ್ಲ. ವಜ್ರಾಯುಧವನ್ನು ಪ್ರಯೋಗಿಸಿದನು. ಅದನ್ನು ಗೌರವಿಸುವುದಕ್ಕಾಗಿ ತನ್ನ ಒಂದೇ ಒಂದು ಗರಿಯನ್ನು ಗರುಡ ಉದುರಿಸಿದನು. ಆ ಗರಿ ಭೂಮಿಗೆ ಬಿತ್ತು. ಋಷಿಗಳು ಆ ಗರಿಯನ್ನು ಕಂಡು ಗರುಡನನ್ನು ‘ಸುಪರ್ಣ’ ಎಂದು ಕರೆದರು.

                            ಇಂದ್ರನು ಗರುಡನಿಗೆ ಹಾವುಗಳು ಸಾಯದೇ ಇರುವುದರಿಂದ ಲೋಕಕ್ಕಾಗುವ ಹಾನಿಯನ್ನು ವಿವರಿಸಿದನು. ತಾಯಿಯ ಬಂಧನವನ್ನು ಬಿಡಿಸುವುದಕ್ಕಾಗಿ ಗರುಡ ಹಾವುಗಳಿಗೆ ಅಮೃತ ಕೊಡುವುದು. ಅದನ್ನು ಇಂದ್ರನು ಅಪಹರಿಸುವುದು ಎಂದು ತಂತ್ರವನ್ನು ರೂಪಿಸಿದ ಬಳಿಕ ಅದಕ್ಕೊಂದು ಉಪಾಯವನ್ನು ಮಾಡಿ ಗರುಡ ಅಮೃತವನ್ನು ಭೂಮಿಗೆ ತಂದು ತಾಯಿಯ ಬಂಧವಿಮೋಚನೆ ಮಾಡಿದನು. ಗರುಡನ ಗರಿ ಭೂಮಿಗೆ ಬಿದ್ದಾಗ ಆದ ಹೊಡೆತದಿಂದ ಅಲ್ಲಿ ಒಂದು ನದಿಯು ಹುಟ್ಟಿತು. ಸುಪರ್ಣನ ಗರಿಯ ಘಾತದಿಂದ ಹುಟ್ಟಿ ಬಂದ ನದಿಯನ್ನು ಋಷಿಗಳು ‘ಸೌಪರ್ಣಿಕಾ’ ಎಂದು ಕರೆದರು. - ಲೇಖಕರು : ತಾರಾನಾಥ ವರ್ಕಾಡಿ