Chakra River Story

ಚಕ್ರಾ:-

                ಒಂದಾನೊಂದು ಕಾಲದಲ್ಲಿ ಕಿರಾತ ದೇಶವನ್ನು ರಾಜಾ ಧರ್ಮಾಂಗದನು ಆಳುತ್ತಿದ್ದನು. ಶಿವನ ಪರಮ ಭಕ್ತನಾದ ಈತ ಸತ್ಯ-ಧರ್ಮದಿಂದ ರಾಜ್ಯಭಾರ ನಡೆಸುತ್ತಿದ್ದನು. ಪ್ರಜೆಗಳೆಲ್ಲರೂ ಈತನ ಆಳ್ವಿಕೆಯಿಂದ ಸಂತೃಪ್ತರಾಗಿದ್ದರು. ಇವನ ಪತ್ನಿ ಸುಧರ್ಮಿ. ಈಕೆ ಪತಿ ಪರಾಯಣೆ. ಇವರಿಗೆ ಓರ್ವ ಕಂದ ಜನಿಸಿದನು. ರಾಜ ದಂಪತಿಗಳು ಆ ಶಿಶುವಿಗೆ ಹೇಮಾ ಎಂದು ಹೆಸರಿಸಿದರು. ಕಂದನ ಬಾಲಲೀಲೆಗಳನ್ನು ಕಂಡು ತಂದೆ-ತಾಯಿಗಳು ಅತ್ಯಂತ ಸಂತೋಷ ತಾಳುತ್ತಿದ್ದರು. ಮಗು ದಿನ ದಿನ ಬೆಳೆಯುತ್ತಿತ್ತು. ಐದು ವರುಷ ತುಂಬಿತು. ಆಗ ಆತನಿಗೆ ಪೂರ್ವಸ್ಮರಣೆ ಉಂಟಾಯಿತು. ಇದರಿಂದ ತನ್ನ ಆಟಪಾಠಗಳನ್ನೆಲ್ಲಾ ಬದಿಗಿರಿಸಿದ ಹೇಮ ಸದಾ ಶಿವಪೂಜೆಯಲ್ಲೇ ಕಾಲ ಕಳೆಯತೊಡಗಿದನು. ಇದ್ದಕ್ಕಿದ್ದ ಹಾಗೆ ಕಂದ ವಿರಾಗಿಯಾಗಿ ಶಿವನ ಪೂಜೆ ಮಾಡಲು ಆರಂಭಿಸಿರುವುದನ್ನು ಕಂಡು ರಾಜದಂಪತಿಗಳಿಗೆ ಆಶ್ಚರ್ಯವಾಯಿತು. ಜತೆಗೆ ದುಃಖವೂ ಉಂಟಾಯಿತು. ಹೇಗಾದರೂ ಮಗನನ್ನು ವೈರಾಗ್ಯದಿಂದ ವಿಮುಖನನ್ನಾಗಿ ಮಾಡಬೇಕೆಂದು ಬಯಸಿದರು. ಬೇರೆ ಬೇರೆ ರೀತಿಯಿಂದ ಪ್ರಯತ್ನಿಸಿದರು. ಪ್ರಯೋಜನವಾಗಲಿಲ್ಲ. ಮಗನ ಚಿಂತೆ ಸುಧರ್ಮಿ-ಧರ್ಮಾಂಗದರನ್ನು ತೀವ್ರವಾಗಿ ಕಾಡಿತು. 

                       ಒಂದು ದಿನ ಕಣ್ವ ಮಹರ್ಷಿಗಳು ಅರಸನ ಆಸ್ಥಾನಕ್ಕೆ ಬಂದರು. ಬಂದ ಮುನಿಯನ್ನು ರಾಜದಂಪತಿಗಳು ಆದರದಿಂದ ಸ್ವಾಗತಿಸಿದರು. ಸತ್ಕರಿಸಿದರು. ಆದರೂ ಅರಸ ನಿರುತ್ಸಾಹಿಯಾಗಿದ್ದನು. ಅದನ್ನು ಅರಿತ ಮಹರ್ಷಿಗಳು ಅರಸನೊಡನೆ ಚಿಂತೆಯ ಕಾರಣವನ್ನು ಕೇಳಿದನು. ರಾಜದಂಪತಿಗಳು ವಿನಯಪೂರ್ವಕ ಕಣ್ವ ಮಹರ್ಷಿಗಳಿಗೆ ನಮಿಸಿ ‘ಮಗನು ವೈರಾಗ್ಯವನ್ನು ತಾಳಿದರೆ ಮುಂದೆ ನನ್ನ ರಾಜ್ಯದ ಉತ್ತರಾಧಿಕಾರಿ ಯಾರು? ನಾನೇನು ಮಾಡಲಿ?’ ಎಂದು ತಮ್ಮ ಹೃದಯಾಂತರಾಳದ ನೋವನ್ನು ತೋಡಿಕೊಂಡರು. ಮಹರ್ಷಿಗಳು ರಾಜನನ್ನು ಸಂತೈಸಿದರು. ದಿವ್ಯದೃಷ್ಟಿಯನ್ನು ತೆರೆದರು. ಬಾಲಕನ ಪೂರ್ವಜನ್ಮದ ವೃತ್ತಾಂತ ಅವರಿಗೆ ಗೋಚರಿಸಿತು. ಅದನ್ನು ತಾನು ಕಂಡಂತೆಯೇ ಅರಸನಿಗೆ ವಿವರಿಸಿದರು.

                       " ನನ್ನ ಆಶ್ರಮ ಚಕ್ರಾ ನದಿಯ ತೀರದಲ್ಲಿತ್ತು. ಒಂದು ದಿನ ಬ್ರಾಹ್ಮಣನೋರ್ವ ನನ್ನ ಆಶ್ರಮದ ಸಮೀಪ ಹೋಮ ಮಾಡುತ್ತಿದ್ದ ಬಳಿಕ ಜಪ-ತಪಗಳಲ್ಲಿ ನಿರತನಾದ ಸಂದರ್ಭ ಅಲ್ಲಿಗೊಂದು ನಾಯಿ ಬಂತು. ತಕ್ಷಣ ಬ್ರಾಹ್ಮಣನ ಪತ್ನಿ ಆ ನಾಯಿಯ ಮೇಲೆ ನೀರೆರಚಿದಳು. ನಾಯಿ ಮೈಕೊಡವಿ ಅಲ್ಲೇ ನಿಂತಿತು. ಆಗ ಬಡಿಗೆ ಎತ್ತಿ ಆಕೆ ಆ ನಾಯಿಯನ್ನು ಹೊಡೆದೋಡಿಸಿದಳು. ತಕ್ಷಣ ಅದು ಓಡಿ ಹೋಗಿ ಚಕ್ರಾ ನದಿಗೆ ಹಾರಿತು. ಆ ನದಿಯಲ್ಲೊಂದು ಮೊಸಳೆ ಇತ್ತು. ಅದು ಧಾವಿಸಿ ಬಂತು. ನಾಯಿ ಈಜುತ್ತಾ ಮುಂದೆ ಸಾಗುತ್ತಿದ್ದಂತೆಯೇ ಮೊಸಳೆ ನಾಯಿಯನ್ನು ನುಂಗಿಬಿಟ್ಟಿತು. ನಾಯಿಯ ಆತ್ಮ ಯಮಲೋಕ ಸೇರಿತು. ಯಮನು ನಾಯಿಗೆ ಶಿಕ್ಷೆಯನ್ನು ವಿಧಿಸದೆ ಮರುಜನ್ಮಕ್ಕಾಗಿ ಕಳುಹಿಸಿದ. ‘ಚಕ್ರಾ ನದಿಯಲ್ಲಿ ಮುಳುಗಿದುದರಿಂದ ನಿನ್ನ ಪಾಪ ನೀಗಿ, ಪುಣ್ಯ ಲಭಿಸಿದೆ. ಧರ್ಮಾಂಗದ ರಾಜನ ಮಗನಾಗಿ ನೀನು ಹುಟ್ಟು’ ಎಂದು ಹರಸಿ ಕಳುಹಿದ ಕಾರಣದಿಂದ ಆ ನಾಯಿಯೇ ನಿನ್ನ ಮಗನಾಗಿ ಹುಟ್ಟಿದ"’ ಎಂದನು. 

                       ಕಣ್ವ ಮಹರ್ಷಿಗಳ ಮಾತನ್ನು ಕೇಳಿ ದೊರೆಯು ಆ ನದಿಯ ಕಥೆಯನ್ನು ಹೇಳುವಂತೆ ವಿನಯದಿಂದ ವಿನಂತಿಸಿದನು. ಋಷಿಗಳು ಕಥೆಯನ್ನು ಆರಂಭಿಸಿದರು. ಪೂರ್ವದಲ್ಲಿ ಸುದರ್ಶನ ಚಕ್ರ ತನ್ನ ಒಡೆಯನಾದ ಶ್ರೀಹರಿಯೊಡನೆ, ‘ನನಗೆ ಅಸ್ತ್ರಾಧಿಪತ್ಯವನ್ನು ದಯಪಾಲಿಸೆಂದು ವಿನಂತಿಸಿದನು. ಆಗ ಹರಿಯು ನೀನು ಶಿವನನ್ನು ತಪಸ್ಸಿನಿಂದ ಒಲಿಸಿ ಆತನಿಂದ ವರವನ್ನು ಪಡೆದರೆ ಮಾತ್ರ ಇದು ಸಾಧ್ಯ’ ಎಂದು ಸಲಹೆಯಿತ್ತನು. ಸುದರ್ಶನ ಸಹ್ಯಾದ್ರಿಯ ಗೌರೀ ಶಿಖರಕ್ಕೆ ಬಂದು ಒಂದು ಲಿಂಗಸ್ಥಾಪನೆ ಮಾಡಿ ಶಿವನನ್ನು ಅಭಿಷೇಕದಿಂದ ತೃಪ್ತಿಗೊಳಿಸಲು ನೀರಿಗಾಗಿ ಒಂದು ಹೊಂಡ ತೋಡಿದನು. ಶಿವಪೂಜೆಯ ಬಳಿಕ ಉಗ್ರವಾದ ತಪಸ್ಸನ್ನು ಕೈಗೊಂಡನು. ಸಾವಿರ ವರುಷಗಳು ಕಳೆಯಿತು. ಸುದರ್ಶನನ ತಪಸ್ಸಿಗೆ ಶಿವನು ಪ್ರತ್ಯಕ್ಷನಾದನು. ಶಿವನೊಡನೆ ಆತ ಅಸ್ತ್ರಾಧಿಪತ್ಯವನ್ನು ಬೇಡಿದನು. ಹರನು ‘ನನ್ನ ತ್ರಿಶೂಲವನ್ನು ಹೊರತುಪಡಿಸಿ ಅಸ್ತ್ರಗಳಲ್ಲಿ ನೀನೇ ಶ್ರೇಷ್ಠ’ ಎಂದು ವರವಿತ್ತನು. ಸುದರ್ಶನ ಧನ್ಯತೆಯಿಂದ ವೈಕುಂಠಕ್ಕೆ ತೆರಳಿದನು. ಆತ ಶಿವನ ಅಭಿಷೇಕದ ನೀರಿಗಾಗಿ ತೋಡಿದ ಹೊಂಡದಲ್ಲಿ ಒಂದು ನದಿಯು ಹುಟ್ಟಿ ಪ್ರವಹಿಸಿತು. ಅದು ಚಕ್ರಾ ನದಿಯೆಂದು ಪ್ರಸಿದ್ಧವಾಯಿತು’. ಋಷಿಗಳ ಕಥೆ ಕೇಳಿ ಎಲ್ಲರೂ ನಿಬ್ಬೆರಗಾದರು. - ಲೇಖಕರು : ತಾರಾನಾಥ ವರ್ಕಾಡಿ