Kavale Durga Fort

ಕವಲೇದುರ್ಗ(ಭುವನಗಿರಿ ದುರ್ಗ):

           ಕ್ರಿ.ಶ. 1499ರಲ್ಲಿ ಜನ್ಮ ತಾಳಿದ ಕೆಳದಿ ಸಂಸ್ಥಾನಕ್ಕೆ ದಕ್ಷಿಣ ಭಾರತದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ. ಮಧ್ಯಕಾಲೀನ ಇತಿಹಾಸದ ಹಾಗೂ ಆಧುನಿಕ ಯುಗದ ಮೊದಲ ಕಾಲದ ಅರಸು ಮನೆತನಗಳಲ್ಲಿ ಕೆಳದಿ ಅರಸು ಮನೆತನವು ಬಹು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಕ್ರಿ.ಶ. 1565ರಲ್ಲಿ ವಿಜಯನಗರ ಅರಸೊತ್ತಿಗೆಯ ಪತನಾನಂತರ ಕೆಳದಿ ಅರಸರು ಸ್ವತಂತ್ರರಾದರು. ವಿಜಯನಗರ ಅರಸರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆದರು. ತಮ್ಮ 265 ವರ್ಷಗಳ ಸುದೀಘವಾದ ಆಡಳಿತಾವಧಿಯಲ್ಲಿ ವಿಶೇಷ ನೈಪುಣ್ಯತೆಯನ್ನು ತೋರುತ್ತಾ ಭಾರತೀಯ ಸಂಸ್ಕøತಿಗೆ ಕುಂದು ಬಾರದಂತೆ ನಡೆದು ಬಂದವರು ಕೆಳದಿ ಅರಸರು. ರಾಷ್ಟ್ರೀಯ ಭಾವೈಕ್ಯತೆಯನ್ನು ಹೂಡ ಹೊತ್ತು ಮೆರೆದವರು ಕೆಳದಿ ಮಲ್ಲರಸರು.

        ಭುವನಗಿರಿದುರ್ಗ (ಕವಲೇ ದುರ್ಗ) ತೀರ್ಥಹಳ್ಳಿಯಿಂದ ಸುಮಾರು 22 ಕಿ/ಮೀ ದೂರದಲ್ಲಿರುತ್ತದೆ. ಕೆಳದಿ ಅರಸರ ಕೊನೆಯ 4ನೇ ರಾಜಧಾನಿಯಾಗಿತ್ತು. ಇದಕ್ಕೆ ಮೊದಲು ಕೌಲೇದುರ್ಗ ಎಂಬ ಹೆಸರಿತ್ತು. ಇದು ಮೊದಲು ಬೆಳಗುತ್ತಿ ಆಡಳಿತದಲ್ಲಿದ್ದ ‘ಚೆಲುವರಂಗಪ್ಪ’ನು 1361 ರಿಂದ 1381ರಲ್ಲಿ ಕೋಟೆಯನ್ನು ಕಟ್ಟಿಸಿದವನೆಂದು ಬೆಳಗುತ್ತಿಯ “ಕೈಫಿಯತ್ತಿನಲ್ಲಿದೆ”. ಕೆಳದಿ ಅರಸ ಹಿರಿಯ ವೆಂಕಟಪ್ಪ ನಾಯಕನು ಇಲ್ಲಿ ಆಳುತ್ತಿದ್ದ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಸಹೊದರರನ್ನು ಸೋಲಿಸಿ ಕೋಡೆಯನ್ನು ವಶಪಡಿಸಿಕೊಂಡು ಭುವನಗಿರಿದುರ್ಗ ಎಂದು ನಾಮಕರಣ ಮಾಡಿದನು.

         ಕವಲೇದುರ್ಗ ಸಮುದ್ರ ಮಟ್ಟದಿಂದ ಸುಮಾರು 3000 ಅಡಿಗಳ ಎತ್ತರದ ಭುವನಗಿರಿದುರ್ಗದ ಬೆಟ್ಟದ ಮೇಲೆ ಅಭೇದ್ಯವೆನಿಸಿದ್ದ ಏಳು ಸುತ್ತಿನ ಕೋಟೆ ಹೊಂದಿದ್ದು, ಇದರಲ್ಲಿ ಅರಮನೆ, ದೇವಾಲಯಗಳು, ಕೆರೆಕಟ್ಟೆಗಳು, ಮಹಾದ್ವಾರಗಳು, ಕಾವಲು ಗೋಪುರಗಳು ಮತ್ತು ಬತೇರಿಗಳಿವೆ. ಇದು ದೊಡ್ಡ ಸೈನಿಕ ಕೇಂದ್ರವಾಗಿತ್ತು. “ಹಿರಿಯ ವೆಂಕಟಪ್ಟ ನಾಯಕ” ನು ಈ ಕೋಟೆಯನ್ನು ಬಲಿಷ್ಠಗೊಳಿಸಿ ಅಭುವೃದ್ಧಿಪಡಿಸುತ್ತಾನೆ. ಟಂಕಶಾಲೆ, ಸುಂಕದಕಟ್ಟೆ, ತಳವಾರ ಕಟ್ಟೆ, ಲೆಕ್ಕದ ಕಟ್ಟೆಗಳನ್ನು ನಿರ್ಮಿಸಿದ್ದಾನೆ. ಭುವನಗಿರಿದುರ್ಗದ ಹೊರಗೆ “ರಾಜಗುರು ಕಲ್ಯಾಣ ಮಹಲ್” ಕಟ್ಟಿಸಿದ್ದಾನೆ, ಅಲ್ಲದೆ ಕೋಟೆಯ ಹೊರಭಾಗದಲ್ಲಿ ಕೆರೆಕಟ್ಟೆಗಳನ್ನು ಮತ್ತು ಸುಂದರವಾದ ಉದ್ಯಾನವನ್ನು ಕೂಡ ನಿರ್ಮಿಸಿದ್ದಾನೆ.

         ಕವಲೇ ದುರ್ಗದಲ್ಲಿರುವ ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠ” ವನ್ನು ಕ್ರಿ.ಶ. 1642ರಲ್ಲಿ ಸ್ಥಾಪಿಸಿ “ದುರ್ಗದ ತಿಮ್ಮಣ್ಣನಾಯಕ”ನನ್ನು ಅದರ ಅಭಿವೃದ್ಧಿಗೆ ನಿಯೋಜಿನಿ ಸಾಕಷ್ಟು ಉಂಬಳಿಗಳನ್ನು ದಾನವಾಗಿ ನೀಡಿ ರಾಜಗುರುಗಳ ಕೃಪಾಶೀರ್ವಾದಕ್ಕೆ ಪಾತ್ರನಾಗುತ್ತಾನೆ. ಕೆಳದಿ ಅರಸ “ಹಿರಿಯ ವೆಂಕಟಪ್ಪ ನಾಯಕ” ಕೋಟೆಯಲ್ಲಿರುವ “ಕಾಶೀ ವಿಶ್ವೇಶ್ವರ” ದೇವಾಲಯವನ್ನು ನಿರ್ಮಾಣ ಮಾಡುತ್ತಾನೆ. ಇದರಲ್ಲಿ ತುಲಾಭಾರ ಮಂಟಪವಿದ್ದು ಎದುರಿನಲ್ಲಿ ಎರಡು ಧ್ವಜಸ್ತಂಭಗಳಿವೆ. ದುರ್ಗದ ಒಳಭಾಗದಲ್ಲಿ ಪುಟ್ಟ ಪುಟ್ಟ ಕೆರೆಗಳು ಮತ್ತು ವಿವಿಧ ವಿನ್ಯಾಸದ ಕೊಳಗಳು ಕೂಡ ಇವೆ. ವೇಳೆಯನ್ನು ಅಳೆಯುತ್ತಿದ್ದ “ಕಲ್ಲಿನ ಗಳಿಗೆ ಬಟ್ಟಲು” ಇದ್ದು ಈಗ ಹಾಳಾಗಿದೆ.

       ಕವಲೇದುರ್ಗ ಅರಮನೆಯನ್ನು ಬಿದನೂರಿನ ಅರಮನೆಯಂತೆ “ಚೈನಾ” ಮಾದರಿಯ ಇಟ್ಟಿಗೆಯಿಂದ ಕಟ್ಟಿಸಿದ್ದು ಚಿತ್ರ ವಿಚಿತ್ರ ಕೆತ್ತನೆಗಳ ಸುಂದರ ವಿನ್ಯಾಸವಾಗಿರುತ್ತದ. ಇದರ ಗೋಪುರಗಳನ್ನು “ನಾಗಪ್ಪಾಚಾರಿ’ ಎಂಬುವವನು ನಿರ್ಮಿಸಿದ್ದಾನೆ. ಇಲ್ಲಿದ್ದ 8 ಅಡಿ ಉದ್ದ 7 ಅಡಿ ಅಗಲದ ಕಲ್ಲಿನ ಮಂಚವು ಈಗ ಮೈಸೂರಿನ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿದೆ. ಇದೇ ಅರಮನೆಯಲ್ಲಿ “ಕೆಳದಿ ರಾಣಿ ಚೆನ್ನಮ್ಮಾಜಿಗೆ” ಕವಲೇದುರ್ಗ ಕೆಳದಿ ಸಂಸ್ಥಾನ ರಾಜಗುರುಗಳ ದಿವ್ಯ ಸಾನಿಧ್ಯದಲ್ಲಿ ಪಟ್ಟಾಭಿಷೇಕ ನೆರವೇರುತ್ತದೆ. ಬಿಜಾಪುರದ ಸುಲ್ತಾನನ ಸೈನ್ಯವು ಇದನ್ನು ವಶಪಡಿಸಿಕೊಳ್ಳಲು ಹಲವಾರು ಬಾರಿ ಮುತ್ತಿಗೆ ಹಾಕಿತ್ತು. ರಾಜ್ಯದ ಅತ್ಯಂತ ಸುಭದ್ರ ನೆಲೆಯಾಗಿದ್ದ “ಭುವನಗಿರಿದುರ್ಗಕ್ಕೆ” ಅರಸರು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದರು. ಊರಿನ ಅಗಸೆಯಲ್ಲಿ 30ಕ್ಕಿಂತ ಹೆಚ್ಚು ವೀರರ ಸಮಾಧಿಗಳಿವೆ. ಅದರಲ್ಲಿ ಕೆಲವು ಸಮಾಧಿಗಳು ಅರಸರ ಸಮಾಧಿಗಳನ್ನು ಹೋಲುವಂತಿವೆ. ಅವು ತಜ್ಞರಿಂದ ಗುರುತಿಸಲ್ಪಡಬೇಕಾಗಿದೆ. ಹಲವಾರು ವೀರಗಲ್ಲುಗಳನ್ನು ಇಲ್ಲಿ ಕಾಣಬಹುದಾಗಿದೆ. ಕವಲೇದುರ್ಗ ರಾಜಗುರು ಮಠದ ಸರ್ವೆ ನಂ. 19ರ ಅಡಕೆ ತೋಟದ ಅಜುಬಾಜುವಿನಲ್ಲಿ ಕೆಳದಿ ಅರಸರ ಸಮಾಧಿಯನ್ನು ಹೋಲುವಂತಹ ಸಮಾಧಿಯನ್ನು ಇತಿಹಾಸಕಾರರಾದ ಶ್ರೀ ಜಯದೇವಪ್ಪ ಜೈನಕೇರಿಯವರು ಗುರುತಿಸುತ್ತಾರೆ.

1. ಬಿಜಾಪುರದ ಸುಲ್ತಾನನೊಡನೆ ಯುದ್ಧ:

ಕ್ರಿ.ಶ. 1662-63: ಭದ್ರಪ್ಪ ನಾಯಕನು ಭುವನಗಿರಿದುರ್ಗದಿಂದ ಶತ್ರು ಸೈನಿಕರ ವಿರುದ್ಧ ಕಾದಾಡಿದನು. ಆದರೆ

ಸುಲ್ತಾನನ ಸೈನ್ಯವು ಭುವನಗಿರಿಯ ಮೇಲೂ ದಾಳಿ ನಡೆಸಿತು. ಕೆಳದಿ ಸೈನ್ಯದ ತೋಪುಗಳ ದಾಳಿಯಿಂದ ಸುಲ್ತಾನನ ಸೈನ್ಯವು ಹಿಮ್ಮೆಟ್ಟಿತು.

2. ಮೊಘಲರೊಡನೆ ಯುದ್ಧ:

                          ಕ್ರಿ.ಶ.1690ರಲ್ಲಿ ಮೊಗಲ್ ಚಕ್ರವರ್ತಿ ‘ಜೌರಂಗಜೇಬನು’ ಶಿವಾಜಿಯ ಮಗನಾದ ‘ರಾಜಾರಾಮ’ ನನ್ನು ಕೈಸೆರೆಹಿಡಿಯಲು ಅಬ್ದುಲ್ ಖಾನ್ ಎಂಬ ಸೇನಾಧಿಪತಿಯ ನೇತೃತ್ವದಲ್ಲಿ ಸೈನ್ಯವನ್ನು ಕಳುಹಿಸಿದನು. ರಾಜಾರಾಮನು ತಲೆ ತಪ್ಪಿಸಿಕೊಂಡು ಕೌಲೇದುರ್ಗಕ್ಕೆ ಬಂದಾಗ ಕೆಳದಿ ಚೆನ್ನಮ್ಮ ಆಶ್ರಯ ನೀಡಿ ರಕ್ಷಿಸುತ್ತಾಳೆ. ಅಲ್ಲಿಯೂ ಮೊಘಲ ಸೈನ್ಯವು ಮುತ್ತಿಗೆ ಹಾಕಿತು. ರಾಜಾರಾಮನು ತನ್ನನ್ನು ‘ಚಂದಿ’ ಎಂಬ ಸ್ಥಳಕ್ಕೆ ಹೋಗಲು ರಕ್ಷಣೆ ನೀಡಬೇಕೆಂದು ಚೆನ್ನಮ್ಮಾಜಿಯನ್ನು ಕೇಳಿಕೊಂಡನು. ರಾಜಾರಾಮನನ್ನು ಮಾರು ವೇಷದಿಂದ ಶಿವಮೊಗ್ಗ ಮತ್ತು ಗಾಜನೂರು ಮೂಲಕ ‘ಚಂದಿ’ಗೆ ಹೋಗುವಂತೆ ಮಾಡಿದಳು. ಇದರಿಂದ ಕೋಪಗೊಂಡ ಜೌರಂಗಜೇಬನು ಕೆಳದಿ ಸಂಸ್ಥಾನವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿ, ತನ್ನ ಮಗನಾದ ‘ಅಜಮತಾರ’ ನೊಂದಿಗೆ ಪ್ರಬಲವಾದ ಸೈನ್ಯವನ್ನು ಕಳುಹಿಸಿದನು. ಸೇನಾಧಿಪತಿ ‘ಜಾನ್ ಸರಖಾನ’ ನೊಂದಿಗೆ ಅಜಮತಾರನು ಕ್ರಿ.ಶ. 1690ರಲ್ಲಿ ಬಿದನೂರನ್ನು ಆಕ್ರಮಿಸಿಕೊಂಡನು. ಚೆನ್ನಮ್ಮಾಜಿಯು ಭುವನಗಿರಿಯಿಂದ ಸಶಸ್ತ್ರ ಪಡೆಯನ್ನು ಕಳುಹಿಸಿದಳು. ದುರ್ಗಮವಾದ ಸ್ಥಳದಲ್ಲಿ ಯುದ್ಧ ಮಾಡುವ ಅಭ್ಯಾಸವಿಲ್ಲದ ಮೊಘಲ ಸೈನ್ಯವು ಸೋಉ ಹೋಯಿತು.

3. ಕೌಲೇದುರ್ಗದ ಕೆಳದಿ ರಾಜಗುರು ಮಹಾಮಹತ್ತಿನ ಮಠ:

                         ಹಿರಿಯ ವೆಂಕಟಪ್ಪನಾಯಕ’ ನಿಬಿಡವಾದ ಕಾನನದ ಮಧ್ಯದಲ್ಲಿ ‘ಕೌಲಿಗ್ರಾಮಕ್ಕೆ’ ಮುತ್ತಿಗೆಹಾಕಿ ‘ತೊಲೆ ತಮ್ಮ ಮತ್ತು ಮಂಡಿಗೆ ತಮ್ಮ ಎಂಬ ಸೋದರರನ್ನು ಸೇನೆ ಸಹಿತ ಸೋಲಿಸಿ ಕೋಟೆಯನ್ನು ಗೆದ್ದುಕೊಂಡನು ಅದನ್ನು ಕಲಾತ್ಮಕವಾಗಿ ನಿರ್ಮಿಸಿ “ಭುವನಗಿರಿದುರ್ಗ ವೆಂದು ಹೆಸರಿಸಿ ಅಲ್ಲಿ ತನ್ನ ತಂದೆ ‘ದೊಡ್ಡ ಸಂಕಣ್ಣ ನಾಯಕ’ನು ಕಾಶಿಯಿಂದ ತಂದ ದೊಡ್ಡ ಶಿವಲಿಂಗವನ್ನು ‘ವಿಶ್ವೇಶ್ವರ’ ಎಂಬ ಅಭಿದಾನದೊಡನೆ ಪ್ರತಿಷ್ಠಾಪಿಸಿದನು. ಅಲ್ಲಿಯ ಮಹಾಮಹತ್ತಿನ ಜಂಗಮ ಮಠ’ ವನ್ನು ಗುರುಮಠವಾಗಿ ಸ್ವೀಕರಿಸಿ ರಾಜಗುರು ಮಠವನ್ನು ವಿನೂತವಾಗಿ ಕಟ್ಟಿಸಿ ಅದಕ್ಕೆ ಭೂಸ್ವಾಸ್ತುಗಳನ್ನು ನೀಡಿದನು. ನಾಯಕನು ಭುವನಗಿರಿದುರ್ಗದಲ್ಲಿ ಸುಂಕದಕಟ್ಟೆ, ಆನೆಯ ಮಹಲು, ಕುದುರೆ ಲಾಯ, ಗಜಶಾಲೆ, ವಾಹನಗಳ ನಿಲ್ದಾಣ, ಉಗಾಣ, ಕಡತಗಳ ಕಛೇರಿ ಮೊದಲಾದವುಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿದನು. (ಸುಂಕದಕಟ್ಟೆ ಹತ್ತಿರದ ಕೆಳದಿ ರಾಜಗುರು ಮಹಾಮಹತ್ತಿನ ಮಠ ಕೃಷಿಯ ಶಿಸ್ತಿನ ಕರಗಳ (ಬಿಡಾರಗಳ) ಆಕರಣೆ ಮತ್ತು ವಾಣಿಜ್ಯ ಸುಂಕದ ವಸೂಲಿಯ ಲೆಕ್ಕಪತ್ರಗಳ ಪುಸ್ತಕ ಮತ್ತು ಕಡತಗಳ ಚಾವಡಿಯಾಗಿತ್ತು.)

                  ಕೌಲೇದುರ್ಗದ ಕೋಟೆಯ ಹೊರಭಾಗದಲ್ಲಿರುವ ಒಂದು ಕಟ್ಟಡದಲ್ಲಿ ಕೆಲವು ಕೊಠಡಿಗಳು ಮಾತ್ರ ಉಳಿದಿವೆ ಇವುಗಳ ಬಾಗಿಲು ಕಮಾನಿನ ಆಕೃತಿಯಲ್ಲಿದೆ. ಇಟ್ಟಿಗೆಯಿಂದ ಗೋಡೆಯನ್ನು ಕಟ್ಟಿದ್ದು ನೆಲಕ್ಕೆ ಗಚ್ಚುಗಾರೆ ಹಾಕಿದೆ. ಸಾಕಷ್ಟು ವಿಶಾಲವಾಗಿದ್ದು ಈ ಕಟ್ಟಡವು ಅರಮನೆಯೇ ಅಥವಾ ಆಡಳಿತ ಕಛೇರಿಯೆ ಎಂಬುದು ತಿಳಿಯುವುದಿಲ್ಲ. ಕೆಳದಿ ನೃಪವಿಜಯದಲ್ಲಿ ಹೇಳಿರುವ ‘ಕಲ್ಯಾಣಮಹಲ್’ ಎಂಬುದು ರಾಜಗುರು ಕಲ್ಯಾಣ ಮಹಲ್ ಆಗಿರಬಹುದಾಗಿದೆ.

                 ಧೀರರಾಣಿ ಚೆನ್ನಮ್ಮಾಜಿ ಕೌವಲೇದುರ್ಗ (ಭುವನಗಿರಿದುರ್ಗ)ದ ಅರಮನೆಯಲ್ಲಿ ಪಟ್ಟಾಭಿಷಿಕ್ತಳಾದಳು. ಕೆಳದಿ ಅರಸರ ಕಾಲದ ಕೋಟೆ-ಕೊತ್ತಲದ ಅವಶೇಷಗಳು ಇಂದಿಗೂ ಇವೆ. ಸುಮಾರು 8-10 ಕಿ.ಮೀ ಸುತ್ತಳತೆಯ ದುರ್ಗದ ನೋಲೆ ರಮಣೀಯವಾಗಿದೆ. ಕೆಲವು ಸ್ಥಳಗಳಲ್ಲಿ 30-40 ಅಡಿ ಎತ್ತರದ ಗೋಡೆಯ ಮೇಲೆ ಬತೇರಿಗಳನ್ನು ನಿರ್ಮಿಸಲಾಗಿದೆ. ದುರ್ಗದ ಒಳಗೆ ಏಳು ಕೊಳಗಳಿವೆ. ಐದು ಸುತ್ತಿನ ಕೋಟೆಯ ಪ್ರತಿ ಸುತ್ತಿನಲ್ಲೂ ವಿವಿಧ ವಿನ್ಯಾಸದ ಅನೇಕ ಕೊಳಗಳಿವೆ. ಏಳು ಮಹಾದ್ವಾರಗಳಲ್ಲಿ ಈಗ ನಾಲ್ಕು ಮಾತ್ರ ಉಳಿದಿದೆ. ಮೂರನೇಯ ಸುತ್ತಿನಲ್ಲಿ ವಿಶಾಲ ಸ್ಥಳದಲ್ಲಿ ಅರಮನೆಯ ಅವಶೇಷವಿದೆ. ಸರೋವರ ಇದರ ಮಧ್ಯದಲ್ಲಿದೆ. ಅರಮನೆ ಅವಶೇಷಕ್ಕೆ ಎರಡು ಮಹಾದ್ವಾರಗಳಿವೆ. ಮುಂಭಾಗದಲ್ಲಿ ವಿಶಾಲ ಪ್ರಾಂಗಣವಿದೆ. ಮಹಾದ್ವಾರದ ಮುಂಭಾಗದಲ್ಲಿ 10-15 ಅಡಿ ಉದ್ದ 5-6 ಅಡಿ ಅಗಲದ ತೊಟ್ಟಿ ಇಡಲಾಗಿದೆ.

                 ಭುವನಗಿರಿದುರ್ಗದಲ್ಲಿ (ಕೌಲೇದುರ್ಗ) ಸುಮಾರು 15ಕ್ಕಿಂತ ಹೆಚ್ಚು ದೇವಾಲಯಗಳು ಇವೆ. ಐತಿಹಾಸಿಕ ಹಾಗೂ ಪೌರಾಣಿಕ ಭವ್ಯ ಪರಂಪರೆಯನ್ನು ಕವಲೇದುರ್ಗ ಹೊಂದಿದೆ. ಇದು ‘ದ್ಯುಮ್ನ ಮಹಾಋಷಿ’ಗಳು ತಪೋಗೈದ ಪುಣ್ಯದಾಣ ‘ರಾಜಗುರು ಮರುಳ ಸಿದ್ಧೇಶ್ವರ ಮಹಾಸ್ವಾಮಿ ಯೋಗಗೈದ ಪರಮ ಪವಿತ್ರದಾಣ. ಪಾಂಡವರ ನೆಲೆಸಿರುವಿಕೆಯನ್ನು ತೋರುವ ಗಡಾತೀರ್ಥ ಇಲ್ಲಿದೆ. ಕೋಟೆ ಕೊತ್ತಲಗಳನ್ನು, ಸುಂದರ ಪುರಾತನ, ವಾಸ್ತುಶಿಲ್ಪಗಳಿಂದ ಕೂಡಿದ ದೇವಾಲಯಗಳನ್ನು ಮಹಾಸತಿ ಹಾಗೂ ಮಹಾಪುರುಷರ ಸಮಾಧಿಗಳನ್ನು ಇನ್ನೂ ಅನೇಕ ಆಕರ್ಷಣೀಯ ನೆಲೆಗಳನ್ನು ಈ ಪ್ರಕೃತಿಯ ರಮ್ಯ ರಮನೀಯ ಪ್ರದೇಶಗಳಲ್ಲಿ ನಾವು ಕಾಣಬಹುದು. ಕಾಮ್ಯಕವನ, ಕಪಿಲೇದುರ್ಗ, ಕೌಲೇದುರ್ಗ, ಕಾವಲುದುರ್ಗ, ಭುವನಗಿರಿದುರ್ಗ ಹಾಗೂ ಕವಲೇದುರ್ಗಗಳೆಂಬ ಹೆಸರುಗಳೊಂದಿಗೆ ಇಂದಿಗೂ ಕೂಡ ಕವಲೇದುರ್ಗ ಪ್ರಚಲಿತವಾಗಿರುತ್ತದೆ.

4. ಕೋಟೆ-ಕೊತ್ತಲದಲ್ಲಿ ನೋಡಲು ಸಿಗುವ ಮಹತ್ವದ ಸ್ಥಳಗಳು ಮತ್ತು ದೇವಾಲಯಗಳು:

                        1). ಶಿಖರೇಶ್ವರ  2). ಬಂದಿ ಖಾನೆ  3). ಗಡತೀರ್ಥ  4). ಅರಮನೆ  5). ಪಟ್ಟದಕೆರೆ  6). ಕುದುರೆಲಾಯ  7). ಲಕ್ಷ್ಮೀನಾರಾಯಣ  8). ಎಣ್ಣೆ ಮತ್ತು ತುಪ್ಪದ ಬಾವಿ  9). ಗರುಡ ಕಂಬಗಳು  10). ಕಾಶಿ ವಿಶ್ವನಾಥ ಮಂದಿರ  11). ಶಾಸನಗಳು  12). 1ನೇ ಆಂಜನೇಯ ದೇವಸ್ಥಾನ  13). ದ್ವಾರಬಾಗಿಲುಗಳು  14). ನರಸಿಂಹ ದೇವಸ್ಥಾನ  15). 2ನೇ ಆಂಜನೇಯ ದೇವಸ್ಥಾನ  16). ಮಠದ ಕೆರೆ  17). ಮಹಾಸತಿ ಕಲ್ಲು  18). ರಾಜಗುರು ಕಲ್ಯಾಣ ಮಹಲು  19). ಕೆಳದಿ ರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠ  20). ಮಸೀದಿ  21). ಭುವನೇಶ್ವರಿ ದೇವಸ್ಥಾನ  22). ಮಾರಿಕಾಂಬ ದೇವಸ್ಥಾನ  23). 3 ನೇ ಆಂಜನೇಯ ದೇವಸ್ಥಾನ  24). ವೀರಭದ್ರ ದೇವಸ್ಥಾನ  25). ಈಶ್ವರ ದೇವಸ್ಥಾನ  26). ವಿಠಲ ಮಂದಿರ  27). ಸಹಗಮನ ಕಲ್ಲು  28). ಅಶ್ವತ್ಥ ಕಟ್ಟೆ  29). ತಿಮ್ಮಣ್ಣ ನಾಯಕನ ಕೆರೆ  30). ಅರಸರ ಸಮಾಧಿಗಳು  31). ವಿನಾಯಕ ದೇವಸ್ಥಾನ  32). ನಾಗತೀರ್ಥ ಟಂಕಸಾಲೆ, ಅರಮನೆ ಅವಶೇಷಗಳು ಆಸಕ್ತರನ್ನು ಆಕರ್ಷಿಸುತ್ತವೆ.

                              ಈ ಕೋಟೆಯನ್ನು ಭಾರತ ಸರ್ಕಾರ ಸಂರಕ್ಷಣೆಯ ಮಾಡಿದರೆ ಇದು ಚಿತ್ರದುರ್ಗ ಕೋಟೆಯನ್ನು ಮೀರಿ ಆಕರ್ಷಿಸುವುದರಲ್ಲಿ ಅನುಮಾನವಿಲ್ಲ. ಮೊದಲು ಕಾವಲದುರ್ಗವಾಗಿದ್ದ ಕವಲೇದುರ್ಗ ಅನಂತರ ರಾಜಧಾನಿಯಾಗಿ ಪರಿವರ್ತನೆಗೊಂಡಿದ್ದು, ಕೋಟೆಯ ವಿಸ್ತೀರ್ಣ 90-100 ಎಕರೆ ಹೊಂದಿರುತ್ತದೆ. ಕರ್ನಾಟಕ ಸರ್ಕಾರದ ಮತ್ತು ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದ ಪ್ರಗತಿ ಹೊಂದದೆ ಐತಿಹಾಸಿಕ ಗತವೈಭವದ ಪಳೆಯುಳಿಕೆಯಂತೆ ಇಂದಿಗೂ ಕೂಡ ಶೋಭಾಯಮಾನವಾಗಿದೆ. ಶೋಧಕರು, ಸಂಶೋಧಕರು, ಆಧ್ಯಾಪಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಚಾರಣ ಪ್ರಿಯರಿಗಂತೂ ಅತೀ ಸಂತಸ ನೀಡುವ ಪ್ರವಾಸಿ ತಾಣವಾಗಿದೆ ಕವಲೇದುರ್ಗದುರ್ಗ ಕೋಟೆ. ತನ್ನ ಐತಿಹಾಸಿಕ ದಾಖಲೆಯನ್ನು ವೈಭವೀಕರಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇನ್ನಾದರೂ ಕರ್ನಾಟಕ ಸರ್ಕಾರ-ಭಾರತ ಸರ್ಕಾರ ಹಾಗೂ ನಮ್ಮ ಮೆಚ್ಚಿನ ರಾಜಕಾರಣಿಗಳು ಕವಲೇದುರ್ಗ ಐತಿಹಾಸಿಕ ಕೋಟೆಯನ್ನು ಅಭಿವೃದ್ಧಿ ಪಡಿಸಿದರೆ ದಿನಂಪ್ರತಿ ಸಾವಿರಾರು ಜನ ಸೇರುವ ಯಾತ್ರಾಸ್ಥಳವಾಗಿ ಬಹು ಆಕರ್ಷಣೆಯನ್ನು ಹೊಂದುತ್ತದೆ.    ಕವಲೇದುರ್ಗ ಕೋಟೆ ಶಿವಮೊಗ್ಗ ಜಿಲ್ಲೆಯ ಬಹುಆಕರ್ಷಣೀಯ ಐತಿಹಾಸಿಕ ತಾಣ-ರಾಜಗುರು ಡಾ|| ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕವಲೇದುರ್ಗ.