Irpu Falls

ಇರ್ಪುಫಾಲ್ಸ್:

   
               ಕೊಡಗು ಜಿಲ್ಲೆಯ ಬ್ರಹ್ಮಗಿರಿಗಳ ಜಲಪಾತವನ್ನು ಇರ್ಪುಫಾಲ್ಸ್ ಎಂದು ಕರೆಯುತ್ತಾರೆ. ಈ ಬೆಟ್ಟಗಳಲ್ಲಿ ಜನಿಸಿದ “ಲಕ್ಷ್ಮಣ ತೀರ್ಥ” ನದಿ ಶಿಖರದ ಮೇಲಿನಿಂದ ಧುಮುಕುತ್ತದೆ.  ಸ್ಥಳ ಪುರಾಣದ ಪ್ರಕಾರ ಸೀತಾರಾಮರು ಈ ಪ್ರಾಂತ್ಯವನ್ನು ದಾಟುವಾಗ ಅವರಿಗೆ ಬಾಯಾರಿಕೆಯಾಯ್ತಂತೆ. ಆಗ ಶ್ರೀರಾಮನು ಕುಡಿಯುವ ನೀರಿದೆಯೋ ಎಂದು ನೋಡಲು ಹೇಳಿದನಂತೆ.  ಅಣ್ಣನ ಆದೇಶದ ಮೇರೆಗೆ ಲಕ್ಷ್ಮಣ ತನ್ನ ಬಿಲ್ಲನ್ನು ಹೊಡೆದು ಈ ಬ್ರಹ್ಮಗಿರಿಯ ಶಿಖರದ ಮೇಲೆ ನೀರನ್ನು ತರಿಸಿದನಂತೆ. ಆ ನೀರು ಅವರ ದಾಹವನ್ನು ತೀರಿಸಿದ ನಂತರವೂ ಉಕ್ಕಿಹರಿಯುತ್ತಾ ಇಂದಿಗೂ ಬೆಟ್ಟದ ಮೇಲಿನಿಂದ ದುಮುಕುತ್ತಿದೆ. ಲಕ್ಷ್ಮಣನಿಂದ ಏರ್ಪಟ್ಟ ಈ ಜಲಧಾರೆಯನ್ನು ಲಕ್ಷ್ಮಣಧಾರಾನದಿ ಎಂದು ಕರೆಯುತ್ತಾರೆ. ಇಲ್ಲೇ ಸೀತಾ ರಾಮ ಲಕ್ಷ್ಮಣ ಮಂದಿರವಿದೆ.


  ಇರ್ಪುವಿನ ಶ್ರೀ ರಾಮೇಶ್ವರ ದೇವಾಲಯ:-

                         ಹಾವಿನ ಹಾಗೆ ಬಳುಕಿ ಸಾಗುವ ರಸ್ತೆಯಲ್ಲಿ  ಸಾಗಿ, ಸಮತಟ್ಟು ನೆಲದ ಹಸಿರು ಗದೆಗಳನ್ನು ದಾಟಿ ಮುಂದೆ ಹೋದರೆ ಬ್ರಹ್ಮಗಿರಿ ಬೆಟ್ಟ ಸಾಲುಗಳ ಮೋಹಕ ದೃಶ್ಯ ಎದುರಾಗುತ್ತದೆ. ಅಲ್ಲೇ ಹಸಿರು ಗದ್ದೆಗಳ ನಡುವೆ ಸಿಗುವ ದೇವಾಲಯವೆ ಇರ್ಪು ಶ್ರೀ ರಾಮೇಶ್ವವರ ದೇವಾಲಯ.ಇರ್ಪು ಕೊಡಗಿನ ವೀರಾಜಪೇಟೆಯಿಂದ 35 ಕಿ.ಮೀ. ದೂರದಲ್ಲಿದೆ. ವೀರಾಜಪೇಟೆಯಿಂದ ಶ್ರೀಮಂಗಲ-ಕುಟ್ಟ ರಸ್ತೆಯಲ್ಲಿ ಬಂದರೆ ಇರ್ಪು ತಲುಪಬಹುದು. ಇರ್ಪುವಿನಲ್ಲಿ ರಾಮೇಶ್ವರ ದೇವಾಲಯದವರೆಗೂ ವಾಹನ ಸಂಚಾರಕ್ಕೆ ಅನುಕೂಲವಾದ ರಸ್ತೆಯಿದೆ.

                     ರಾಮೇಶ್ವರ ದೇವಾಲಯ ಸೊಬಗಿನ ಪರಿಸರದಲ್ಲಿ ನಿರ್ಮಾಣಗೊಂಡಿದ್ದು, ಅದರ ಸರಳತೆ ಹಾಗೂ ವಿನ್ಯಾಸದಿಂದಾಗಿ ವೀಕ್ಷಕರ ಗಮನ ಸೆಳೆಯುತ್ತದೆ. ಇಲ್ಲಿ ಶ್ರೀರಾಮ ಈಶ್ವರ ಲಿಂಗವನ್ನು ಪ್ರತಿಷ್ಠಾಪಿಸಿದನೆಂದು ಹೇಳಲಾಗುತ್ತಿದೆ.  ರಾಮೇಶ್ವರ ದೇವಾಲಯ ದ ಸುತ್ತಲೂ ಬ್ರಹ್ಮಗಿರಿ ಪರ್ವಶ್ರೇಣಿ ಆವರಿಸಿದೆ. ಕಾವೇರಿಯ ಉಪನದಿಗಳಲ್ಲಿ ಒಂದಾದ ಲಕ್ಷ್ಮಣ ತೀರ್ಥವು ದೇವಾಲಯದ ಹಿಂಬದಿಯ ಬೆಟ್ಟದ ಮೇಲಿನಿಂದ ಬೃಹತ್ ಬಂಡೆಗಳ ಬೆನ್ನಮೇಲೆ ಹರಿದು ಕೆಳಕ್ಕೆ ಧುಮುಕುತ್ತದೆ. ಸುಮಾರು 170  ಅಡಿ ಎತ್ತರದಿಂದ ಧುಮುಕುವ ಈ ಜಲಧಾರೆಯ ಸೊಬಗು ಸವಿಯಬಂದವರಿಗೆ ರಾಮೇಶ್ವರ ದೇವಾಲಯವು ತನ್ನ ಸೌಂದರ್ಯವನ್ನು ತೆರೆದಿರುಸುತ್ತದೆ.

                      ದೇವಾಲಯವು ವೃತ್ತಾಕಾರವಾದ ಗರ್ಭ ಗೃಹ, ಅರ್ಧಮಂಟಪ ಹಾಗೂ ಮುಕ್ತ ಮಂಟಪಗಳನ್ನು ಹೊಂದಿದೆ. ಕೇರಳದ ವಾಸ್ತು ಶಿಲ್ಪ ಶೈಲಿಯನ್ನು ಹೋಲುವ ದೇವಾಲಯದ ಗರ್ಭ ಗೃಹಕ್ಕೆ ಸಾಂಧಾರ ಪ್ರದಕ್ಷಿಣಾ ಪಥವಿದೆ. ದೇವಾಲಯದ ಮೇಲ್ಭಾಗದಲ್ಲಿ ಶಂಖುವಿನಾಕಾರದ ಶಿಖರವಿದೆ. ದೇವಾಲಯದ ಹೊರ ಪ್ರಾಕಾರದಲ್ಲಿ ಗಂಧರ್ವ, ಭೈರವ, ಗಣಪತಿ, ಪಾರ್ವತಿ ಗುಡಿಗಳಿವೆ. ದೇವಾಲಯದ ಬಳಿ ಇರುವ ಶಾಸನದಲ್ಲಿ ಕೊಡಗಿನ ಅರಸನಾಗಿದ್ದ ವೀರರಾಜೇಂದ್ರ ಇದನ್ನು ಜೀರ್ಣೋದ್ದಾರಗೊಳಿಸಿದ ದಾಖಲೆಯಿದೆ.

                  1913 ರಲ್ಲಿ ಕುರ್ಚಿ ಗ್ರಾಮದ ಅಜ್ಜಮಾಡ ಕುಟುಂಬಸ್ಥರು ಒಂದು ನೂರು ಭಟ್ಟಿ ಭೂಮಿಯನ್ನು ಈ ದೇವಾಲಯಕ್ಕೆ ಕೊಡುಗೆಯಾಗಿ ನೀಡಿರುವ ಬಗ್ಗೆ ಉಲ್ಲೇಖವಿದೆ. 

                  ಇರ್ಪು ಜಲಪಾತದ ಸೊಬಗನ್ನು ಸವಿಯಲು, ವೈಭವವನ್ನು ಆಸ್ವಾದಿಸಲು ಬಹಳಷ್ಟು ಪ್ರವಾಸಿಗರು ಬರುತ್ತಾರೆ. ಜಲಪಾತದ ವೀಕ್ಷಣೆಗೆ ರಾಮೇಶ್ವರ ದೇವಾಲಯದ ಸನಿಹದ ಕಾಲದಾರಿಯ ಮೂಲಕವೇ ಸಾಗಬೇಕಾಗಿರುವುದರಿಂದ ಪ್ರತಿಯೊರ್ವ ಪ್ರವಾಸಿಗನೂ ದೇವಾಲಯವ್ನು ವೀಕ್ಷಿಸಿ ಸಾಗಬೇಕಾಗುತ್ತದೆ. ಕೆಂಪು ಗೋಪುರಗಳಿಂದ ಕಂಗೊಳಿಸುವ ದೇವಾಲಯ ಜಲಪಾತದ ವೀಕ್ಷಣೆಗೆ ಮತ್ತಷ್ಟು ಚೈತನ್ಯ ನೀಡುತ್ತದೆ.