Temples Of Arakere

ಅರಕೆರೆ ದೇವಾಲಯಗಳು

                       ಶ್ರೀರಂಗಪಟ್ಟಣದಿಂದ ಪೂರ್ವಕ್ಕೆ 18 ಕಿ.ಮೀ. ದೂರದಲ್ಲಿರುವ ಹೋಬಳಿ ಕೇಂದ್ರ. ಚಾರಿತ್ರಿಕ ಮಹತ್ವವುಳ್ಳ ಊರು. ಅರೆ(ಕಲ್ಲು) ಜಾಗದಲ್ಲಿರುವ ಊರು ಮತ್ತು ಕೆರೆ ಸೇರಿ ಅರಕೆರೆ ಆಗಿದೆ. ಕ್ರಿ.ಶ. 1108ರ ಶಾಸನವೊಂದರಲ್ಲಿಯೂ ಅರಕೆರೆ ಎಂದೇ ಉಲ್ಲೇಖಿಸಿದೆ. ಊರೊಳಗೆ ಇರುವ ಚನ್ನಕೇಶವ ಹೊಯ್ಸಳ ಕಾಲದ್ದಾದರೂ ಚೋಳಶೈಲಿಯಲ್ಲಿದೆ. ಗರ್ಭಗೃಹ, ಸುಖನಾಸಿ, ತೆರೆದ ಅರ್ಧಮಂಟಪ, ನವರಂಗ, ವಿಶಾಲವಾದ ಸಭಾಮಂಟಪ, ಮೊಗಸಾಲೆ, ಪ್ರಾಕಾರ ಹಾಗೂ ದ್ವಾರಮಂಟಪಗಳನ್ನು ಹೊಂದಿದೆ. (ಸಾಕಷ್ಟು ಮಾರ್ಪಾಡು ಆಗಿದೆ). ಗರ್ಭಗೃಹದಲ್ಲಿನ ಕೇಶವ ಬದಲಾದದ್ದು ಎನ್ನಲಾಗಿದೆ. ಬಾಗಿಲವಾಡಕ್ಕೆ ತ್ರಿಶಾಖಾಲಂಕಾರವಿದ್ದು, ಸುಖನಾಸಿಯಲ್ಲಿ ರಾಮಾನುಜ ಶಿಲ್ಪವಿದೆ. ನವರಂಗದಲ್ಲಿ ದೇವಿ ಮೂರ್ತಿ ಇದ್ದು ನಡುವಣ ಛತ್ತು ಕಮಲಾಲಂಕೃತವಾಗಿದೆ. (ಮುಖಮಂಟಪದಲ್ಲಿ ಚ್ಯುತಿಗೊಂಡ ಪೂರ್ವದ ಶಿಲ್ಪವಿದೆ) ದೇವಾಲಯದ ಮುಂದೆ ಗರುಡಗಂಬವಿದೆ. ಗುಡಿಯ ಎಡಭಾಗದಲ್ಲಿ ಅಮ್ಮನವರ ಗುಡಿ, ಬಲಕ್ಕೆ ಮಂಟಪವಿದೆ. ಈ ಕೇಶವ ದೇವರಿಗೆ ಐಯ್ಯಿದ್ಯಕೆ ಎಂಬ ಸ್ತ್ರೀ ದಾನಿಯು ತನ್ನ ಪಾಲಿಗೆ ಬಂದ ಭೂಮಿಯ ವೃತ್ತಿಯಲ್ಲಿ ಕಾಲುಭಾಗವನ್ನು ನೀಡಿದ್ದಾಳೆ. ಶಾಸನದಲ್ಲಿ ಇದನ್ನು ಪ್ರೀತಿದಾನ ಎನ್ನಲಾಗಿದೆ. ಹೊಯ್ಸಳ ವೀರಸೋಮೇಶ್ವರನ (ಕ್ರಿ.ಶ. 1235-1253) ಇಪ್ಪತ್ತೊಂದನೆಯ ಆನಂದಸಂವತ್ಸರದ ಕಾರ್ತಿಕ ಶುದ್ಧ ಪಂಚಮಿ ಆದಿವಾರದಂದು... ಕಾಲವನ್ನು ಹೀಗೆ ತಿಳಿಸಿದೆ.

                        ಊರಾಚೆ ಇರುವ ಪ್ರಾಚೀನ ಗುಡಿ ಮರಳೇಶ್ವರ ಅಥವಾ ಮಣಲೇಶ್ವರ (ಶಾಸನದಲ್ಲಿ) ದೇವಾಲಯವೂ ಸಹ ಚೋಳ ಶೈಲಿಯಲ್ಲಿದೆ. ಇದಕ್ಕೆ ಗರ್ಭಗೃಹ, ಸುಖನಾಸಿಗಳಿದ್ದು, ನವರಂಗ ವಿಶಾಲವಾಗಿದೆ. ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಮುಖಮಂಟಪಗಳೊಂದಿಗೆ ದ್ವಾರಗಳಿವೆ. ಬಹುಕೋನಾಕಾರದ ತಳವಿನ್ಯಾಸದಲ್ಲಿರುವ ಈ ಗುಡಿಯ ಗರ್ಭಗೃಹದಲ್ಲಿ ಪ್ರಾಚೀನವಾದ ಲಿಂಗವಿದೆ. ನವರಂಗದಲ್ಲಿ ಮಹಿಷಮರ್ದಿನಿ, ಗಣಪತಿ ಮತ್ತು ದೇವಿಯರ ಶಿಲ್ಪಗಳಿದ್ದು, ದಕ್ಷಿಣ ದ್ವಾರಕ್ಕೆ ಅಭಿಮುಖವಾಗಿ ಇರುವ ಒಂದಂಕಣ ಗುಡಿಯಲ್ಲಿ ದೇವಿಯ ಶಿಲ್ಪವಿದೆ. ನವರಂಗದ ಕಂಬಗಳ ಮೇಲೆ ಮತ್ತು ಮುಖಮಂಟಪದ ಮೇಲ್ಭಾಗದಲ್ಲಿ ಕಮಲಾಕೃತಿಯನ್ನು ಕೆತ್ತಿದ್ದಾರೆ.

                         ಮತ್ತೊಂದು ಲಕ್ಷ್ಮೀನರಸಿಂಹ ಗುಡಿ ವಿಜಯನಗರ (ಕ್ರಿ.ಶ. 1516) ಕಾಲದ್ದಾಗಿದೆ. ಗರ್ಭಗೃಹದಲ್ಲಿ ಬಹು ಸುಂದರವಾದ ಲಕ್ಷ್ಮೀನರಸಿಂಹ ವಿಗ್ರಹವಿದೆ. ದೇವಾಲಯ ಜೀರ್ಣೋದ್ಧಾರವಾಗಿದೆ. ಮತ್ತೊಂದು ರಾಮಲಿಂಗೇಶ್ವರ ಗುಡಿಯೂ ಸಹ ಜೀರ್ಣೋದ್ಧಾರಗೊಂಡಿದೆ. ಇಲ್ಲಿಯ ಗ್ರಾಮದೇವತೆ ಬಿಸಿಲು ಮಾರಮ್ಮನ ಹಬ್ಬದಲ್ಲಿ ಹಲವು ವರ್ಷಗಳಿಗೊಮ್ಮೆ ನಡೆಯುವ ಶೂಲ-ಬಲಿ ರೋಮಾಂಚನಗೊಳಿಸುತ್ತದೆ.