Karigatta Venkataramana Temple

ಕರಿಘಟ್ಟದ ವೆಂಕಟರಮಣ

                           ಪಟ್ಟಣಕ್ಕೆ ಸಮೀಪವಾಗಿ ಲೋಕಪಾವನಿ ದಡದ ಮೇಲಿರುವ ಕರಿಘಟ್ಟದ ವೆಂಕಟರಮಣಸ್ವಾಮಿ ದೇವಾಲಯ ವಿಜಯನಗರ ಕಾಲದ ಹಲಕೆಲವು ರಚನೆಗಳೊಂದಿಗೆ ಮೈಸೂರು ಅರಸರ ರಚನೆಗಳು ಹೆಚ್ಚು ಸೇರಿಕೊಂಡಿವೆ. ನವರಂಗ ವಿಶಾಲವಾಗಿದೆ. ಅದರ ಕಂಬಗಳು ಸೌಂದರ್ಯವನ್ನು ಹೆಚ್ಚಿಸಿವೆ. ಗರ್ಭಗುಡಿಯಲ್ಲಿ ಮೂಲಮೂರ್ತಿ ಆಕರ್ಷಕವಾಗಿದೆ. ನವರಂಗದ ಎಡ-ಬಲಗಳಲ್ಲಿ ಯೋಗಾ ಮತ್ತು ಭೋಗ ಶ್ರೀನಿವಾಸ ಮೂರ್ತಿಗಳಿರುವುದು ಇಲ್ಲಿನ ವಿಶೇಷವಾಗಿದೆ. ಎದುರಿಗೆ ಗರುಡ ಮಂಟಪದಲ್ಲಿ ಗರುಡ ಶಿಲ್ಪವಿದೆ. ದೇವಾಲಯದ ಬಲಕ್ಕೆ ಪದ್ಮಾವತಿ ಎಡಕ್ಕೆ ಹನುಮಂತನ ಗುಡಿಗಳಿವೆ. ನಿಸರ್ಗ ವಾತಾವರಣದಲ್ಲಿ ಬೆಟ್ಟದ ಕೆಳಗೆ ಚಿಕ್ಕದೇವರಾಯರ ನಾಲೆ ಹೂಮಾಲೆಯಂತೆ ಹರಿದಿದೆ. ಇಲ್ಲಿರುವ ರಾಮಪರಿವಾರ ಶಿಲ್ಪಗಳು ಆಕರ್ಷಕವಾಗಿವೆ. ಹತ್ತಿರದ ಬಾಬುರಾಯ ಕೊಪ್ಪಲಿನ ಗುಂಜಾ ನರಸಿಂಹಸ್ವಾಮಿ ಹೆಸರಿಸಬಹುದಾದ ಪ್ರಾಚೀನ ಗುಡಿ. ಇದೂ ಸಹ ಕಾವೇರಿ ಎಡದಂಡೆಯ ಮೇಲಿದೆ.

                        ವಿಶೇಷವಾಗಿ ಕಾಣಬರುವ ಗಂಜಾಂನ ‘ಅಬ್ಬೆದುಬೆ ಇಗರ್ಜಿ’ ಜನಸೇವಾನಿರತನಾಗಿದ್ದ ಫ್ರೆಂಚ್ ಪಾದ್ರಿ (ಕ್ರಿ.ಶ. 1800-1823)ಯಿಂದ ಸ್ಥಾಪಿತವಾಗಿರುವುದು ಘಂಟೆಗೋಪುರದ ಮೇಲಿರುವ ಕ್ರಿ.ಶ. 1800ರ ಬರಹದಿಂದ ತಿಳಿಯುತ್ತದೆ. ಪಶ್ಚಿಮವಾಹಿನಿ ಸೇರಿದಂತೆ ಕಾವೇರಿತೀರದ ಆಸುಪಾಸು ದಡದಲ್ಲಿ ಇನ್ನೂ ಹಲವು ಪ್ರಾಚೀನ ಗುಡಿಗಳಿರುವುದಲ್ಲದೆ ಆಧುನಿಕವಾಗಿ ಕೃಷ್ಣಪ್ರಜ್ಞಾದಂಥ ಹಲವಾರು ಸಂಸ್ಥೆಗಳು ಆಧ್ಯಾತ್ಮಿಕ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ.

                       ಒಟ್ಟಾರೆ ಇತಿಹಾಸ ಪ್ರಿಯರಿಗೆ, ಸಂಶೋಧಕರಿಗೆ ಶ್ರೀರಂಗಪಟ್ಟಣದ ಅಧ್ಯಯನ ಮಾಡಲು ದಿನ ಅಥವಾ ವಾರಗಳು ಸಾಲದು. ವರ್ಷವಿಡೀ ಬೇಕಾಗುತ್ತದೆ. ಶ್ರೀರಂಗಪಟ್ಟಣದ ಊರುಕೇರಿ, (ಈಗೆಲ್ಲ ಬದಲಾಗುತ್ತಿದೆ) ಮನೆಮಠ, ಅವುಗಳ ಚಿತ್ತಾರಗಳು, ತಾಳೆಗರಿಗಳು, ಗುಡಿಗೋಪುರಗಳು, ಕೋಟೆ ಬುರುಜುಗಳು, ಕಲ್ಲುಮಣ್ಣುಗಳೆಲ್ಲ ಬೆಲೆಬಾಳುವಂತಹವು. ಹಿಂದೊಮ್ಮೆ ದಕ್ಷಿಣ ಭಾರತದ ಸಾಂಸ್ಕೃತಿಕ ಕೇಂದ್ರವಾಗಿದ್ದ ಪಟ್ಟಣದಲ್ಲಿ ಆಳಿದ ಅರಸರು, ಟಂಕಿಸಿದ ನಾಣ್ಯಗಳು, ಕಟ್ಟಿಸಿದ ಸೌಧಗಳು, ತಯಾರಾದ ಆಯುಧಗಳು, ಜೀವಿಸಿದ್ದ ಕವಿಗಳು, ಅವರು ರಚಿಸಿದ ಗ್ರಂಥಗಳು, ಆ ಕಾಲದ ಜನಜೀವನ ಪದ್ಧತಿ ಎಲ್ಲವನ್ನೂ ಅವಲೋಕಿಸಬೇಕಾಗುತ್ತದೆ.

                         ಹಂಪೆಯಲ್ಲಿ ವೈಭವದಿಂದ ಜರುಗುತ್ತಿದ್ದ ದಸರಾ ಹಬ್ಬವನ್ನು ಶ್ರೀರಂಗಪಟ್ಟಣದಲ್ಲಿ ಮುನ್ನಡೆಯುವಂತೆ ಮೈಸೂರು ಅರಸರು ಅದರಲ್ಲಿಯೂ ಮೊದಲ ಸ್ವತಂತ್ರ ಅರಸು ರಾಜಒಡೆಯರ್ ಆದಿಯಾಗಿ ವ್ಯವಸ್ಥೆಗೊಳಿಸಿದರು. ಮೈಸೂರು ಶೈಲಿ ಎಂದೇ ಗುರುತಿಸಿಕೊಳ್ಳುವ ಕಲಾತ್ಮಕ ಚಿತ್ರಗಳು ವಿಶೇಷವಾಗಿ ರಾಮಪರಿವಾರದ ಚಿತ್ರಗಳು ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಭಾಗಗಳಲ್ಲಿ ಹೆಚ್ಚು ಕಾಣಬರುತ್ತವೆ. ತಂಜಾವೂರು ಶೈಲಿ ಚಿತ್ರಗಳನ್ನೂ ಸಹ ಅಲ್ಲಲ್ಲಿ ನೋಡಬಹುದಾಗಿದೆ. ಇವು ಮೈಸೂರು ಮತ್ತು ತಂಜಾವೂರು ಅರಸರ ಪ್ರೋತ್ಸಾಹದಿಂದ ಅರಳಿದವು.

                         ಕವಿಗಳಾದ ಚಿಕ್ಕುಪಾಧ್ಯಾಯ, ಅಳಹಿಯ ಸಿಂಗರಾರ್ಯ, ತಿರುಮಲಾರ್ಯ, ಗೋವಿಂದವೈದ್ಯ, ಗಮಕಿನಂಜಯ್ಯ, ಸಂಚಿಯ ಹೊನ್ನಮ್ಮ, ಶೃಂಗಾರಮ್ಮ ಮುಂತಾದವರಿಗೆ ಸ್ಫೂರ್ತಿಯ ಅಥವಾ  ಪ್ರೋತ್ಸಾಹದ ನೆಲೆಯಾಗಿತ್ತು. ಕವಿ ಗೋವಿಂದವೈದ್ಯ ಅಂತೂ ತನ್ನ ‘ಕಂಠೀರವ ನರಸರಾಜ ವಿಜಯಂ’ ಕಾವ್ಯದಲ್ಲಿ ಶ್ರೀರಂಗಪಟ್ಟಣದ ಜೀವನ ಮತ್ತು ಸಂಸ್ಕೃತಿಯನ್ನು ತೆರೆದಿಟ್ಟಿದ್ದಾನೆ. ರಥಸಪ್ತಮಿ, ಮಹಾನವಮಿಯ ಒಡ್ಡೋಲಗ, ದಸರಾ ಮೆರವಣಿಗೆ, ಘಟಿಸಿದ ಯುದ್ಧಗಳು ಮುಂತಾದ ವಿಷಯಗಳಿಂದ ಆ ಕಾವ್ಯ ಕೂಡಿದೆ.