Lakshmi Narasimha Temple

ಲಕ್ಷ್ಮೀನರಸಿಂಹ ದೇವಾಲಯ

            ಶ್ರೀರಂಗನಾಥ ದೇವಾಲಯದ ಸಮೀಪದಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯದ ಮೂಲಶಿಲ್ಪ ಹೊಯ್ಸಳ ರಚನೆಯೇ ಆಗಿದೆ. ಎತ್ತರದ ಪೀಠದ ಮೇಲೆ ತನ್ನ ಎಡತೊಡೆಯ ಮೇಲೆ ಲಕ್ಷ್ಮಿಯನ್ನು ಆಲಿಂಗನ ಭಂಗಿಯಲ್ಲಿ ಕೂರಿಸಿಕೊಂಡಿರುವ ನರಸಿಂಹ ಶಿಲ್ಪವು ಮನೋಹರವಾಗಿದೆ. ಅಲ್ಲಿಯೇ ಇರುವ ಅಂಬೆಗಾಲು ಕೃಷ್ಣನ ವಿಗ್ರಹವೂ ಅತ್ಯಾಕರ್ಷಕವಾಗಿದೆ. ದೇವಾಲಯದ ಬಹುಪಾಲು ರಚನೆ ಮೈಸೂರು ಅರಸು ಶ್ರೀರಂಗಪಟ್ಟಣವಾಸಿ (ಇವರುಗಳ ಅರಮನೆ ಈ ದೇವಾಲಯದ ಹಿಂಭಾಗದಲ್ಲಿತ್ತು) ರಣಧೀರ ಕಂಠೀರವ ಎನಿಸಿದ ನರಸರಾಜ ಒಡೆಯರ್ (ಕ್ರಿ.ಶ. 1638-1659) ನಿರ್ಮಿಸಿದರೆಂದು ತಿಳಿದು ಬರುತ್ತದೆ. ಇದಕ್ಕೆ ಸಾಕ್ಷಿಯಾಗಿ ರಂಗಮಂಟಪದ ಎಡಭಾಗದ ಕೊಠಡಿಯಲ್ಲಿ ಕೈಮುಗಿದು ನಿಂತಿರುವ ಸುಮಾರು ಮೂರೂವರೆ ಅಡಿ ಎತ್ತರದ ಮೈಸೂರು ಅರಸರು ಧರಿಸುವ ಪೋಷಾಕು ಮತ್ತು ನಡುವಿನಲ್ಲಿರುವ ಕಠಾರಿ ಸಹಿತ ನಿಂತಿರುವ ಕಂಠೀರವ ನರಸರಾಜ ಒಡೆಯರ ಭಕ್ತಿಭಾವದ ಶಿಲ್ಪವೊಂದು ಮೈಸೂರು ಶಿಲ್ಪಶೈಲಿ ಕೆತ್ತನೆಗೆ ಸಾಕ್ಷಿಯಾಗಿದೆ. ಈತ ಪಟ್ಟಣದಲ್ಲಿ ಒಂದು ಟಂಕಸಾಲೆಯನ್ನು ಸ್ಥಾಪಿಸಿ ‘ಕಂಠೀರವ ಪಣ’ ಎಂಬ ನಾಣ್ಯಗಳನ್ನು ಅಚ್ಚುಹಾಕಿಸಿದ. ಒಟ್ಟು ದೇವಾಲಯ ವಿಶಾಲವಾಗಿದ್ದು, ಹೊರಪ್ರಾಕಾರ ಭಗ್ನಗೊಂಡಿದೆ. ದೊಡ್ಡದಾದ ಗರ್ಭಗೃಹ, ವಿಶಾಲವಾದ ಸುಖನಾಸಿ, ನವರಂಗ ಮತ್ತು ಅನೇಕ ಕಂಬಗಳುಳ್ಳ ಮುಖಮಂಟಪಗಳಿಂದ ಶೋಭಿಸಿದೆ.