Gangadhreshwara Temple

ಗಂಗಾಧರೇಶ್ವರ ದೇವಾಲಯ

                    ಶ್ರೀರಂಗಪಟ್ಟಣ ಹೊಯ್ಸಳರ ಕಾಲದಲ್ಲಿ ಮಹಾ ಅಗ್ರಹಾರ ಎಂದು ಕರೆಯಲ್ಪಟ್ಟಿತ್ತು. ಅಗ್ರಹಾರದ ರಚನೆಯಂತೆ ಪೂರ್ವಕ್ಕೆ ವಿಷ್ಣು(ರಂಗನಾಥ) ದೇವಾಲಯವಿದ್ದು; ಈಶಾನ್ಯಕ್ಕೆ ಗಂಗಾಧರೇಶ್ವರ (ಗಂಗೆಯನ್ನು ಧರಿಸಿದ ಈಶ್ವರ) ದೇವಾಲಯ ಮತ್ತು ಅದರ ಬದಿಗೆ ಕಾವೇರಿ ನದಿ ಹರಿಯುತ್ತಿದೆ. ಮೂಲತಃ ಗಂಗರ ಕಾಲದ ಮೂರ್ತಿ ಎಂಬ ಅಭಿಪ್ರಾಯವಿದ್ದರೂ ಅವರ ಕಾಲದ ರಚನೆಗಳು ಉಳಿದಿಲ್ಲ. ಮುಂದೆ ಆಡಳಿತ ನಡೆಸಿದ ಹೊಯ್ಸಳರು, ವಿಜಯ ನಗರದ ಅರಸರು, ಮೈಸೂರು ಅರಸರು ಮತ್ತು ದಳವಾಯಿಗಳು ದೇವಾಲಯವನ್ನು ವ್ಯವಸ್ಥಿತವಾದ ಜೋಡಣೆಗಳೊಂದಿಗೆ ವಿಸ್ತಾರಗೊಳಿಸಿದ್ದಾರೆ. ಗರ್ಭಗುಡಿ, ಸುಖನಾಸಿ, ವಿಶಾಲವಾದ ನವರಂಗ, ಪಾತಾಳಂಕಣ, ಮುಖಮಂಟಪ, ಬಲಿಪೀಠ, ಧ್ವಜಸ್ತಂಭಗಳಿಂದ ರಚನೆಗೊಂಡಿದೆ. ನವರಂಗ ಮತ್ತಿತರ ಭಾಗಗಳು ವಿಜಯನಗರ ಶೈಲಿಯಲ್ಲಿದ್ದರೆ; ಇಲ್ಲಿ ಕಾಣಬರುವ ಹಲವಾರು ಶಿಲ್ಪಗಳು ಹೊಯ್ಸಳ ಶೈಲಿಯಲ್ಲಿವೆ. ಹಲವು ನಂತರದ ಕಾಲದಲ್ಲಾಗಿವೆ. ನವರಂಗದಲ್ಲಿ ಒಳಪ್ರವೇಶದ ಅಕ್ಕಪಕ್ಕದಲ್ಲಿ ಸೂರ್ಯ-ಚಂದ್ರ, ಷಣ್ಮುಖ, ವರದರಾಜಸ್ವಾಮಿ, ಮಹಿಷಾಸುರಮರ್ದಿನಿ, ಸುಬ್ರಹ್ಮಣ್ಯ, ಕಾಲಭೈರವ, ಮಹಾಬಲೇಶ್ವರ, ಹಲವಾರು ಗಣಪತಿಗಳಲ್ಲಿ ಮಹಾಗಣಪತಿ, ಸಪ್ತಮಾತೃಕೆಯರ ಶಿಲ್ಪಗಳು ಆಕರ್ಷಕವಾಗಿವೆ. ನವರಂಗದ ಬಲಭಾಗದಲ್ಲಿರುವ ಉತ್ಸವಮೂರ್ತಿ ಗಂಗಾಧರೇಶ್ವರ, ಗಂಗೆ ಮತ್ತು ಪಾರ್ವತಿ ಪರಿವಾರದ ಮೂರ್ತಿಗಳು ಮತ್ತು ಪಕ್ಕದ ಕೋಣೆಯಲ್ಲಿರುವ ನಟರಾಜ ವಿಗ್ರಹ ಮನಮೋಹಕವಾಗಿವೆ. ಪಾರ್ವತಿ ಮತ್ತು ಗಂಗೆಯರ ಉತ್ಸವ ಮೂರ್ತಿಗಳನ್ನು ನಾಟ್ಯರಾಣಿ ರತ್ನ ಎಂಬುವವಳು ದಾನ ನೀಡಿದ್ದಾಳೆ. ಹೀಗೆಯೇ ಹಲವಾರು ದಾನಿಗಳ ಹೆಸರುಗಳನ್ನು ಕಾಣಬಹುದಾಗಿದೆ.

                     ಮೂರು ಪಾಶ್ರ್ವಗಳಲ್ಲಿ ಸುತ್ತಾಲಯ ಮಂಟಪ ನಿರ್ಮಿತವಾಗಿದ್ದು, ದೇವಾಲಯದ ಹಿಂಭಾಗಕ್ಕಾದಂತೆ ಎಡಭಾಗದಲ್ಲಿ ಪ್ರಸನ್ನಪಾರ್ವತಿ ಗುಡಿಯಿದೆ. ಇಲ್ಲಿ ಗೋಡೆಗೆ ಆನಿಸಿರುವ ಮೈಸೂರು ಶೈಲಿಯಲ್ಲಿ ರಚಿತಗೊಂಡಿರುವ ಪಾರ್ವತಿ ಚಿತ್ರದಲ್ಲಿ ಶೈವ-ವೈಷ್ಣವದ ಸಮನ್ವಯತೆ ಕಾಣುತ್ತದೆ. ಬಿಲ್ಲು, ಬಾಣ, ಪದ್ಮಗಳನ್ನು ಹಿಡಿದಿರುವ ಪ್ರಧಾನ ಚಿತ್ರ ಪಾರ್ವತಿ ಚತುರ್ಭುಜೆಯಾಗಿದ್ದಾಳೆ. ಅಕ್ಕಪಕ್ಕದಲ್ಲಿ ಸಖಿಯರಿದ್ದಾರೆ. ಬ್ರಹ್ಮ, ವಿಷ್ಣು, ಮಹೇಶ್ವರ, ಸರಸ್ವತಿ, ಲಕ್ಷ್ಮಿ, ಸಪ್ತಮಹರ್ಷಿಗಳು, ದೇವಲೋಕದ ಬಿಳಿ ಆನೆ, ಹಾರುವ ಕುದುರೆ ಇತ್ಯಾದಿ ವರ್ಣಚಿತ್ರಣಗಳಿವೆ. ಗುಡಿಯ ಎಡಭಾಗದಲ್ಲಿ ಶಂಕರಾಚಾರ್ಯ, ಗಾಯತ್ರೀದೇವಿ, ನವಗ್ರಹ, ಬಲಭಾಗದಲ್ಲಿ ವೀರಭದ್ರ ಗುಡಿಗಳಿವೆ. ಪೂರ್ವದ ಕೈಸಾಲೆಯಲ್ಲಿ ಕಾಳಿಂಗಮರ್ದನ, ವೇಣುಕೃಷ್ಣ, ನಾಗರಶಿಲ್ಪ ಮುಂತಾದ ಆಕರ್ಷಕ ಶಿಲ್ಪಗಳಿವೆ.

                       ಗುಡಿಯ ಬಲಭಾಗದ ಕೊಠಾರೋತ್ಸವ ಮಂಟಪದಲ್ಲಿ ಓಂಕಾರೇಶ್ವರ, ಸದ್ಯೋಜಾತೇಶ್ವರ, ವಾಮದೇವೇಶ್ವರ, ಅಘೋರೇಶ್ವರ, ತತ್ಪುರೇಶ್ವರ, ಈಶಾನ್ಯೇಶ್ವರ ಎಂಬ ಶಿವನ ಪಂಚಮುಖದ ಲಿಂಗಗಳಿವೆ. ಇದೇ ಮಂಟಪದ ಮೇಲ್ಭಾಗದಲ್ಲಿ ದಳವಾಯಿ ನಂಜರಾಜಯ್ಯನ ಸೇವೆ ಎಂದು ಲಿಖಿತಗೊಂಡಿರುವ ರುದ್ರವೀಣೆಯೊಂದಿಗೆ ಧ್ಯಾನಾಸಕ್ತ ಮುದ್ರೆಯಲ್ಲಿರುವ ಪಂಚಲೋಹದ ದಕ್ಷಿಣಾಮೂರ್ತಿ ಅತ್ಯಾಕರ್ಷಕವಾಗಿದೆ. ಇದರ ಬಲಕ್ಕಾದಂತೆ ಬೃಹತ್ ಲಿಂಗವಿದ್ದು, ಅದನ್ನು ಗೌತಮೇಶ್ವರ ಎಂದು ಹೆಸರಿಸಲಾಗಿದೆ. ಇದನ್ನು ಚೋಳರ ಆಕೃತಿ ಎಂದು ಪರಿಗಣಿಸಬಹುದಾಗಿದೆ. ಇದರ ಪಕ್ಕದಲ್ಲಿ ವೀರಭದ್ರಮೂರ್ತಿ ಇದೆ. ದಕ್ಷಿಣಾಮೂರ್ತಿಯ ಎಡಕ್ಕಾದಂತೆ ಅರುಣಾಚಲೇಶ್ವರ, ಅವಿಮುಕ್ತೇಶ್ವರ, ಅರ್ಕೇಶ್ವರ, ಅಗಸ್ತ್ಯೇಶ್ವರ, ಆನಂದೇಶ್ವರ, ಕಪಿಲೇಶ್ವರ, ಕೌಂಡಿನ್ಯೇಶ್ವರ ಹೀಗೆ ವಿವಿಧ ಹೆಸರಿನ ಲಿಂಗಗಳು ಪ್ರತ್ಯೇಕ ಕೋಣೆಯಲ್ಲಿವೆ. ಈ ದೇವಾಲಯದ ಆವರಣದಲ್ಲಿ ಅರವತ್ಮೂರು ಪುರಾತನ ಶೈವಭಕ್ತರಲ್ಲಿ ಹದಿನಾಲ್ಕು ಭಕ್ತರ ವಿಗ್ರಹಗಳಿವೆ. ಇವರುಗಳೇ ಈಶ್ವರನ ಮಹಿಮೆಯನ್ನು ಧರೆಗೆ ಸಾರಿದವರು ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಪ್ರತಾಪಸೂರ್ಯರು, ಕಲಾನೀತರು, ನಿರುಪಮ ಶಾರ್ದೂಲರು, ಧರ್ಮಕೇತನರು, ಮಾನಕುಂಜರು, ಮಾತೃವತಿಯರು, ಕಳಾನಾಥರು, ಅಪ್ಪರು, ಮೂರ್ತಿನಾಥರು, ಮಾರಶ್ಯಾಮರು, ನಿಟಿಲವಗ್ರ್ಯರು, ತಿರುಜ್ಞಾನ ಸಂಬಂಧರು, ನೀಲಕಂಠರು, ಪರಾಂತಕರು (ಸಾಮಾನ್ಯ ಅರಸರು) ಹೀಗೆ ಇವರ ಹೆಸರುಗಳು ಬೆಳೆಯುತ್ತವೆ. ಈ ಭಕ್ತರ ಮೂರ್ತಿಗಳನ್ನು ಅವರ ಸಿದ್ಧಿಗೆ ಅಥವಾ ಅವರ ವಯಸ್ಸಿಗೆ ಅನುಸಾರವಾಗಿ ರಚಿಸಬೇಕೆಂಬ ನಿಯಮಗಳನ್ನು ಶಾಸ್ತ್ರಗಳು ಹೇಳಿವೆ. ಅದರಂತೆ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಎಂಬ ನಾಲ್ಕು ವಿಧಗಳಿವೆ. ಭಕ್ತಿ, ಜ್ಞಾನ, ವೈರಾಗ್ಯ, ಸಮಚಿತ್ತ, ಬುದ್ಧಿವಂತ, ನಿಷ್ಕಾಮಕರ್ಮಿ, ಪರಮಾತ್ಮನಿಗೆ ಸಮೀಪ, ತಪಸ್ಸು, ಧ್ಯಾನಾವಸ್ಥೆ, ದೈವತ್ವ, ಶುದ್ಧಜ್ಞಾನ ಮುಂತಾದ ಅಂಶಗಳು ಒಳಗೊಂಡಿರುತ್ತವೆ. ಇಲ್ಲಿ ಕಾಣಬರುವ ಶಿವಭಕ್ತರು ತಮಿಳುನಾಡಿನವರಾಗಿದ್ದು, ತಮಿಳು ಮತ್ತು ಶೈವ ಎರಡು ಕಣ್ಣುಗಳಿದ್ದಂತೆ ಎಂಬ ನಾಣ್ಣುಡಿ ನೆನಪಿಗೆ ಬರುತ್ತದೆ. ಈ ದೇವಾಲಯದಲ್ಲಿರುವ ಶಿಲ್ಪಗಳನ್ನು ಶೈವಾಗಮಕ್ಕನುಸಾರವಾಗಿ ರಚಿಸಲಾಗಿದೆ. ಭಕ್ತರ ಶಿಲ್ಪಗಳಲ್ಲಿ ಸ್ತ್ರೀಭಾವವನ್ನು ಗಮನಿಸಬಹುದು.

                           ದೇವಾಲಯದ ಕೊಠಾರೋತ್ಸವ ಮತ್ತಿತರ ಕಂಬಗಳಲ್ಲಿ ಉಬ್ಬುಶಿಲ್ಪಗಳ ಕೆತ್ತನೆಯಿದ್ದು ಅವುಗಳಲ್ಲಿ ಹಲವಾರು ಕಡೆ ಕಾಣಬರುವಂತೆ ಶಿಲ್ಪಿಯ ಕಲ್ಪನೆಯ ಪ್ರಾಣಿಯೊಂದಿದೆ. ಹಸುವಿನಂತೆ ಕಿವಿ, ಮೀನಿನಂತೆ ಕಣ್ಣು, ಮೊಸಳೆಯಂತೆ ಬಾಯಿ, ಹಂದಿಯಂತೆ ಶರೀರ, ಸಿಂಹದಂತೆ ಕಾಲು, ನವಿಲಿನ ರೆಕ್ಕೆ, ಆನೆಯ ಸೊಂಡಿಲು ಆಕಾರವನ್ನು ಈ ಪ್ರಾಣಿಶಿಲ್ಪದಲ್ಲಿ ಕಾಣಬಹುದು. ನವರಂಗದಲ್ಲಿರುವ ಆರು ಮುಖಗಳೂ, ಹನ್ನೆರಡು ಕೈಗಳೂ ಇರುವ ಸುಬ್ರಹ್ಮಣ್ಯ ಗಮನಾರ್ಹವಾಗಿದೆ. ಅನೇಕ ಉಬ್ಬುಶಿಲ್ಪಗಳು ಪುರಾಣ ಕಥೆಗಳನ್ನು ಹೇಳುತ್ತವೆ.

                           ದಕ್ಷಿಣಕ್ಕೆ ವಿಜಯನಗರ ಶೈಲಿಯ ಭವ್ಯ ಮಹಾದ್ವಾರವಿದ್ದು ಪೂರ್ವಾಭಿಮುಖವಾಗಿರುವ ಈ ದೇವಾಲಯದ ಶಿಖರದಲ್ಲಿ ಶಿವನ ಐದು ಮುಖದ, ಐದು ತತ್ತ್ವದ ಮತ್ತು ಪಂಚಾಕ್ಷರಿ ನಾಮದ ಸಂಕೇತವಾಗಿ ಐದು ಕಳಸಗಳಿವೆ. ಮಹಾದ್ವಾರಕ್ಕೆ ಗೋಪುರವಿಲ್ಲ. ಗೋಪುರ ಕೆಡವಿಸಿದ ಬಗ್ಗೆ ಒಂದು ದಂತಕತೆ ಪ್ರಚಲಿತದಲ್ಲಿದೆ. ಮಹಾದ್ವಾರದ ಎಡಕ್ಕಾದಂತೆ ಆಕರ್ಷಕವಾದ ದೇವಾನುದೇವತೆಗಳ ಉಬ್ಬುಶಿಲ್ಪಗಳಿರುವ ಮಾರ್ಕಂಡೇಯ ಮಂಟಪವಿದೆ. ಇದರ ಕೈಂಕರ್ಯಕ್ಕೂ ಭೂದಾನ ನೀಡಿದ ವಿಷಯ ಉಲ್ಲೇಖವಾಗಿದೆ. ಮಹಾದ್ವಾರದ ಬಲಕ್ಕೆ ಗಣಪತಿಯ ಗುಡಿ ಇದೆ. ಹಲವು ದತ್ತಿದಾನದ ಶಾಸನಗಳಲ್ಲಿ ಕ್ರಿ.ಶ. 1545ರ ಶಾಸನವೊಂದರಲ್ಲಿ ಈ ದೇವರ ಸನ್ನಿಧಿಯಲ್ಲಿ ಉಮ್ಮತ್ತೂರು ಮಠಕ್ಕೆ ದತ್ತಿಬಿಟ್ಟ ವಿಷಯವನ್ನು ಉಲ್ಲೇಖಿಸಿದೆ.