Sri Ranganatha Temple

ರಂಗನಾಥ ದೇವಾಲಯ

                            ದ್ರಾವಿಡ ಶೈಲಿಯ ಈ ದೇವಾಲಯ ಪೂರ್ವಕ್ಕೆ ಮುಖಮಾಡಿ ನಿಂತಿದೆ. ದೇವಾಲಯದ ತಲವಿನ್ಯಾಸದಲ್ಲಿ ಗರ್ಭಗೃಹ, ಸುಖನಾಸಿ, ಪ್ರದಕ್ಷಿಣ ಪಥ, ನವರಂಗ, ಮಹಾಮಂಟಪ, ಪ್ರಾಕಾರ, ಕಲ್ಯಾಣಿ, ಬೃಂದಾವನ ಇತ್ಯಾದಿಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಉತ್ತರ-ದಕ್ಷಿಣವಾಗಿ ವ್ಯಾಪಿಸಿರುವ ಶೇಷಶಾಯಿ ಶ್ರೀರಂಗನಾಥ (ವಿಷ್ಣು)ನ ಅಖಂಡ ಶಿಲ್ಪವು ಮನಮೋಹಕವಾಗಿದೆ. ಆದಿಶೇಷನು ನೆರಳು ನೀಡುವಂತೆ ಅಗಲವಾಗಿ ಬಿಚ್ಚಿದ ಏಳು ಹೆಡೆಗಳು ಅದ್ಭುತ ಎನಿಸುತ್ತದೆ. ಬಲಮಗ್ಗುಲಾಗಿ, ಬಲಗೈ ಮಡಚಿ ಅದರ ಮೇಲೆ ತಲೆಯೂರಿ ಪವಡಿಸಿರುವ ಕಿರೀಟಧಾರಿಣಿ ಶ್ರೀರಂಗನಾಥ ಸರ್ವಾಭರಣಭೂಷಿತನಾಗಿದ್ದಾನೆ. ಆದಿಶೇಷನ ಪೆÇರೆಯ ವಿವರವಾದ ಸೂಕ್ಷ್ಮ ಕೆತ್ತನೆ ಗಮನ ಸೆಳೆಯುತ್ತದೆ. ಶ್ರೀರಂಗಪಟ್ಟಣದ ಶಾಸನವೊಂದು ‘ಪನ್ನಗಶಾಯಿ ಪಶ್ಚಿಮರಂಗ’ನೆಂದೇ ವರ್ಣಿಸಿದೆ. ಸ್ವಾಮಿಯ ಪದತಲದಲ್ಲಿ ಕಾವೇರಿ ಮತ್ತು ಗೌತಮ ಮಹರ್ಷಿಯ ಬಿಡಿಶಿಲ್ಪಗಳಿವೆ. (ಕ್ಷೀರ ಸಾಗರದಲ್ಲಿ ಶೇಷಶಾಯಿಯಾದ ನಾರಾಯಣನು ವಿಷ್ಣುವೇ ಆಗಿದ್ದು; ಆತನ ಪಾದದ ಬಳಿ ಲಕ್ಷ್ಮಿಯು ಕುಳಿತಿರಲು, ನಾರಾಯಣನ ನಾಭಿಯಿಂದ ಉದ್ಭವಿಸಿದ ಕಮಲದಲ್ಲಿ ಬ್ರಹ್ಮನು ಹುಟ್ಟುತ್ತಾನೆ. ವಿಷ್ಣುವಿನ ಈ ರೂಪವನ್ನು ಶ್ರೀರಂಗನಾಥನೆಂದು ಆರಾಧಿಸಲಾಗುತ್ತದೆ.)

                            ದೇವಾಲಯದ ಗರ್ಭಗೃಹದ ಮುಂದಿರುವ ಸುಖನಾಸಿ ವಿಸ್ತಾರವಾಗಿದೆ. ಮೇಲ್ಛಾವಣಿಯಲ್ಲಿ ಪದ್ಮದ ಉಬ್ಬು ಕೆತ್ತನೆಯಿದೆ. ನವರಂಗವಂತೂ ಅನೇಕ ಬೃಹತ್ ಕಂಬಗಳ ವಿಶಾಲ ಹಜಾರದಂತಿದೆ. ಹೊಯ್ಸಳಶೈಲಿಯ ನಕ್ಷತ್ರ, ಉರುಳೆ, ಘಂಟೆಯಾಕಾರದ ದಿಂಡುಗಳುಳ್ಳ ಕಂಬಗಳು ಇಲ್ಲಿ ಶೋಭಿಸುತ್ತಿವೆ. ನವರಂಗದಿಂದ ‘ಕತ್ತಲೆ ಪ್ರದಕ್ಷಿಣ ಪಥ’ಕ್ಕೆ ದಾರಿಯಿದೆ. ಗರ್ಭಗುಡಿಯ ಹೊರಭಿತ್ತಿ ಕಪ್ಪುಶಿಲೆಯಲ್ಲಿ ಚಿತ್ತಾಕರ್ಷಕವಾಗಿದೆ. ನವರಂಗದ ಮುಖ್ಯದ್ವಾರದಲ್ಲಿ ಆಕರ್ಷಕ ನಿಲುವುಳ್ಳ ಎತ್ತರವಾದ ದ್ವಾರಪಾಲಕರ ಶಿಲ್ಪಗಳಿವೆ. ದೇವಾಲಯದ ಒಳಪ್ರಾಕಾರದ ನಾಲ್ಕೂ ಕಡೆ ಪರಿವಾರ ದೇವತಾ ಗೃಹಗಳಿವೆ. ಇವುಗಳಲ್ಲಿ ಶ್ರೀರಾಜಮನ್ನಾರ್ ಕೃಷ್ಣಸ್ವಾಮಿಯ ವಿಗ್ರಹಗಳು, ಪಟ್ಟಾಭಿರಾಮರ ಪದತಲದಲ್ಲಿ ಆಂಜನೇಯ ತನ್ನ ಬಲಗೈಯಲ್ಲಿ ರಾಮನ ಪಾದವನ್ನು ಒತ್ತುತ್ತಲೂ, ಎಡಗೈಯಲ್ಲಿ ರಾಮಾಯಣವನ್ನು ಹಿಡಿದು ಪಠಿಸುತ್ತಲೂ, ಜತೆಗೆ ಸೀತಾ ಲಕ್ಷ್ಮಣ ಇರುವ ಮೂರ್ತಿಗಳು ಅಪೂರ್ವ ಎನಿಸಿವೆ. ಲಕ್ಷ್ಮೀನರಸಿಂಹ, ಸೂರ್ಯನಾರಾಯಣ, ಗಜೇಂದ್ರಮೋಕ್ಷ ಮುಂತಾದವುಗಳಲ್ಲಿ ಕೊಳಲುಗೋಪಾಲ ಕೃಷ್ಣನ ಕೆತ್ತನೆಯಂತೂ ಅಸದಳವಾಗಿದೆ. ಈ ಮೂರ್ತಿಯ ಪ್ರಭಾವಳಿಯ ಮೇಲುಭಾಗದಲ್ಲಿ ಛತ್ರಿಯಂತೆ ಹೊಂಗೆಮರದಲ್ಲಿ ಪಕ್ಷಿಗಳೂ, ಸರ್ಪಗಳೂ, ಸುತ್ತಲೂ ಗೋಪಾಲಕರು, ಗೋಪಿಕಾಸ್ತ್ರೀಯರು, ಗೋವುಗಳು ಕೃಷ್ಣನಿಂತ ತ್ರಿಭಂಗಿಯ ರೀತಿಗೆ ಮತ್ತು ವೇಣುನಾದಕ್ಕೆ ಮನಸೋತಿರುವುದು ಶಿಲ್ಪಿಯ ಚಾತುರ್ಯದಲ್ಲಿ ಕೃಷ್ಣ ನಿಜಜೀವನದ ದರ್ಶನವಾಗುತ್ತದೆ. ರಾಮಾನುಜರು, ಭವ್ಯಆಂಜನೇಯ, ಸುಗ್ರೀವರಲ್ಲದೆ, ವೆಂಕಟರಮಣ ಮನವಾಳಮಾಮುನಿ ಮತ್ತಿತರ ಆಳ್ವಾರರಲ್ಲದೆ ವಿಷ್ಣು ಅಂಶದ ಮೂರ್ತಿಗಳ ಕಿರುಗುಡಿಗಳಿವೆ. ಇಲ್ಲಿಯೇ ಇರುವ ನಾಲ್ಕು ಕಂಬಗಳ ಮೇಲೆ ವಿಷ್ಣುವಿನ ಇಪ್ಪತ್ನಾಲ್ಕು (ಚತುರ್ವಿಂಶತಿ) ರೂಪಗಳನ್ನು ಕೆತ್ತಲಾಗಿದೆ. ವಿಷ್ಣುವಿನ ಈ ರೂಪಗಳ ಹೆಸರುಗಳನ್ನು ಅಲ್ಲಲ್ಲೇ ಕೊರೆದು ಬರೆದಿರುವುದು ವಿಶೇಷವಾಗಿದೆ.

                             ಮೂಲಗರ್ಭಗುಡಿಯ ಒಳಪ್ರಾಕಾರದ ವಾಯವ್ಯದಲ್ಲಿ ಲಕ್ಷ್ಮಿ (ರಂಗನಾಯಕಿ) ಗುಡಿ ಇದೆ. ಶ್ರೀರಂಗಪಟ್ಟಣದಲ್ಲಿಯೇ ನೆಲೆಸಿದ್ದ ವಿಜಯನಗರದ ರಾಜಪ್ರತಿನಿಧಿಯಾದ ತಿರುಮಲರಾಯನ ಮಡದಿ ಅಲಮೇಲಮ್ಮನು, ಪ್ರತೀ ಮಂಗಳವಾರ-ಶುಕ್ರವಾರಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದು ದೇವಿಯ ಮೂಗನ್ನು ಅಪ್ಪಿದ ಮುತ್ತಿನ ಮೂಗುತಿ ಅಲಮೇಲಮ್ಮನದೇ ಎಂಬ ಪ್ರತೀತಿ ಈಗಲೂ ಇದೆ.

                             ದೇವಾಲಯದ ಮುಂಭಾಗದಲ್ಲಿ ವಿಶಾಲವಾದ ಮಂಟಪವಿದೆ. ಮಂಟಪದ ಮಧ್ಯಭಾಗದಲ್ಲಿ ಎತ್ತರವಾದ ಗರುಡಗಂಭವಿದೆ. ಮಂಟಪದಲ್ಲಿ ಕಾಣುವ ಎತ್ತರವಾದ ಕಂಬಗಳು ವಿಜಯನಗರ ಶೈಲಿಯಲ್ಲಿವೆ. ಗಣಪ, ಆಂಜನೇಯ, ಗರುಡ, ಸರಸ್ವತಿ ಮುಂತಾದ ಉಬ್ಬುಶಿಲ್ಪಗಳಿವೆ. ವರಾಹ, ಕೂರ್ಮ, ನರಸಿಂಹಾವತಾರಗಳು, ಗರುಡ ಲಕ್ಷ್ಮೀನಾರಾಯಣರನ್ನು ಹೊತ್ತಿರುವುದು ಆಕರ್ಷಕವಾಗಿದೆ. ಗುಡಿಯ ಪಾತಾಳಂಕಣ ಹೈದರ್ ನಿರ್ಮಾಣ ಎಂದು ‘ಹೈದರ್‍ನಾಮ’ ಹೇಳುತ್ತದೆ. ಮಂಟಪದ ಮುಂಭಾಗದ ಕೈಪಿಡಿಗೋಡೆಯಲ್ಲಿ ವಿವಿಧ ಮಾದರಿಯ ಚಿಕಣಿ ಮಂಟಪಗಳ ಸಾಲಿದೆ. ಇವುಗಳಲ್ಲಿ ವಿಷ್ಣುವಿನ ವಿವಿಧ ಅವತಾರಗಳ ಗಾರೆ-ಗಚ್ಚು ಶಿಲ್ಪಗಳಿವೆ. ದೇವಾಲಯದ ವಾಯವ್ಯಕ್ಕೆ ಪ್ರಸನ್ನ ವೆಂಕಟರಮಣ ಗುಡಿ ಇದೆ. ಕ್ರಿ.ಶ. 1829ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಈ ಗುಡಿ, ಮುಂದಿನ ಬಾವಿ ಹಾಗೂ ಶಿಲಾಮಂಟಪಗಳು ನಿರ್ಮಾಣಗೊಂಡ ಅಂಶಗಳಿವೆ. ದೇವಾಲಯದ ಸುತ್ತಲೂ ಎತ್ತರವಾದ ಪ್ರಾಕಾರವಿದೆ. ಮಹಾದ್ವಾರದ ಮೇಲೆ ಭವ್ಯವಾದ ಐದು ಅಂತಸ್ತಿನ ರಾಯಗೋಪುರವಿದೆ. (ಒಳಗೆ ಇಂಡೋ-ಸಾರ್ಸೆನಿಕ್ ಶೈಲಿಯಿದೆ. ಇದು ವಿಜಯನಗರ ಶೈಲಿಯಾದರೂ ಈ ಕಮಾನು ಮಾದರಿ ಹೈದರಾಲಿ ಕಾಲದಲ್ಲಿ ಜೀರ್ಣೋದ್ಧಾರವಾಗಿರುವುದನ್ನು ತಳ್ಳಿಹಾಕಲಾಗದು). ಮಹಾದ್ವಾರದ ಒಳಭಾಗದಲ್ಲಿ ನಾಲ್ಕು ಕಲ್ಲಿನ ಆನೆಯ ಶಿಲ್ಪಗಳಿವೆ. ಕೃಷ್ಣ, ರಂಗನಾಥ, ವೇಣುಗೋಪಾಲ, ಜನಾರ್ಧನ ಮೂರ್ತಿಗಳಿರುವ ಬೃಂದಾವನವಿದೆ. ಪ್ರಾಕಾರದ ಒಳಗಿನ ಕಲ್ಯಾಣಿ ಸುಂದರವಾಗಿದೆ. ಸಂಕ್ರಾಂತಿಯಲ್ಲಿ ತೆರೆಯುವ ಸ್ವರ್ಗದ ಬಾಗಿಲೂ ಇದೆ. ಮೇಲುಕೋಟೆಯಂತೆ ಈ ದೇವಾಲಯದಲ್ಲಿಯೂ ವರ್ಷವಿಡೀ ಉತ್ಸವಗಳು ಜರುಗುತ್ತವೆ. ರಂಗಮುಡಿ, ವೈರಮುಡಿ, ರಾಜಮುಡಿ, ರಥಸಪ್ತಮಿ, ವಯಲ್‍ಮಾಳಿಗೆ ಉತ್ಸವ ಇತ್ಯಾದಿ.

                             ಹೊಯ್ಸಳರ ಕಾಲದಲ್ಲಿ ರಾಜ ವಿಷ್ಣುವರ್ಧನನು ಶ್ರೀರಾಮಾನುಜಾಚಾರ್ಯರಿಗೆ ನೀಡಿದ ಅಷ್ಟಗ್ರಾಮಗಳ ದತ್ತಿಯಲ್ಲಿ ಶ್ರೀರಂಗಪಟ್ಟಣವೂ ಒಂದೆಂದು ತಿಳಿದಿದೆ. ಇಮ್ಮಡಿ ವೀರಬಲ್ಲಾಳನೂ ಕ್ರಿ.ಶ. 1220ರಲ್ಲಿ ಈ ದೇವಾಲಯಕ್ಕೆ ಅನೇಕ ದಾನದತ್ತಿಗಳನ್ನು ನೀಡಿರುವುದು ಉಲ್ಲೇಖಗೊಂಡಿದೆ.