Shri Bramhashri Daivaratharu

ಬ್ರಹ್ಮರ್ಷಿ ದೈವರಾತರ ಜೀವನ ಚರಿತ್ರೆ:

                      ಗೋಕರ್ಣವು ದಕ್ಷಿಣಾಭಾರತದ ಪಶ್ಚಿಮ ಸಮುದ್ರ ತೀರದ ಒಂದು ಸುಂದರ ತಾಣ. ಶತಶೃಂಗ ಪರ್ವತಗಳ ಸಾಲಿನಲ್ಲಿ ಹಸಿರುಹೊದ್ದ ನಿಸರ್ಗದ ತೊಟ್ಟಿಲಿನಲ್ಲಿ ಮಲಗಿರುವ ಈ ಪುಣ್ಯಭೂಮಿ ಪುರಾu ಕಾಲದಿಂದಲೂ ಪ್ರಸಿದ್ಧವಾಗಿದೆ. ಕೆರೆ-ತೊರೆ-ಹಳ್ಳಗಳ ಪವಿತ್ರ ತೀರ್ಥಗಳಿಂದ ಮನಮೋಹಕ ಗುಡ್ಡ-ಬೆಟ್ಟ-ಗಿರಿಶೃಂಗಗಳಿಂದ ಸಮೃದ್ಧವಾದ ಈ ಕ್ಷೇತ್ರವು ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯಲ್ಲಿದೆ. ಇಲ್ಲಿರುವ ಗುಡ್ಡ-ಬೆಟ್ಟಗಳಿಗೆ, ಕೆರೆ-ತೊರೆಗಳಿಗೆ, ಕಲ್ಲು-ಕಲ್ಲುಗಳಿಗೆ ಒಂದೊಂದು ಇತಿಹಾಸವಿದೆ. ಒಂದೊಂದು ಕಥೆಯಿದೆ. ಪೂರ್ವದಿಕ್ಕಿನೆಡೆಗೆ ಅಘನಾಶಿನಿ ಮತ್ತು ಉತ್ತರಕ್ಕೆ ಗಂಗಾವಳಿ(ಶಾಲ್ಮಲಿ) ನದಿಗಳು ಮೌನವಾಗಿ ಹರಿಯುತ್ತಿದ್ದರೆ ಪಶ್ಚಿಮದಲ್ಲಿ ಜಲಾವೃತ ನೀಲಕಡಲು ಭೋರ್ಗರೆವ ಅಲೆಗಳಿಂದ ನರ್ತಿಸುತ್ತ ರಮಣೀಯ ಭಾವದಲ್ಲಿ ರುದ್ರ ಸಂಗೀತ ಹಾಡುತ್ತಿದೆ.

                       ಈ ಪುಣ್ಯಕ್ಷೇತ್ರದಲ್ಲಿ ‘ವಿಶ್ವಾಮಿತ್ರ, ದೇವರಾತ, ಔದಲ’ ಎಂಬ ಈ 3 ಪ್ರವರಗಳಿಂದ ಯುಕ್ತವಾದ ವಿಶ್ವಾಮಿತ್ರ ಗೋತ್ರದ ಭಡತಿ ಮನೆತನವು ವಾಸವಾಗಿತ್ತು. ಕೃಷಿ ಇವರ ಉದ್ಯೋಗವಾಗಿತ್ತು. ಈ ಕುಟುಂಬದಲ್ಲಿ ವೇದ-ವಿದ್ಯಾಪಾರಂಗತರೂ ಸಂಸ್ಕøತ ವಿದ್ವಾಂಸರೂ ಆದ ವಿಘವನೇಶ್ವರ ಭಟ್ಟರು ಧರ್ಮಪತ್ನಿ ನಾಗವೇಣಿಯೊಂದಿಗೆ ವಾಸಿಸುತ್ತಿದ್ದು. ಈ ದಂಪತಿಗಳಿಗೆ ಪುಷ್ಯ ಶುಕ್ಲ ಪಂಚಮಿ  ಸೋಮವಾರ (04-01-1892) ದಂದು ಪುತ್ರ ಜನನವಾಯಿತು. ದಂಪತಿಗಳಿಬ್ಬರೂ ಈ ಮಗುವಿನ ಮಾತಾಮಹನ ಹೆಸರಿನಿಂದ ಗಣೇಶ ಎಂದು ನಾಮಕರಣ ಮಾಡಿದರು.

                       ಸಾವಿರಾರು ವರ್ಷಗಳ ಹಿಂದಿನ ಆರ್ಷಿಯುಗದ ಋಷಿತೇಜಸ್ಸನ್ನು ಪುನಃ ಹೊತ್ತು ತಂದ ಸಹಸ್ರಮಾನದ ಯುಗಪುರುಷನಾದ ಈ ಮಗುವು ತಾಯಿ-ತಂದೆಯರ ಮನಮಡಿಲನ್ನು ತುಂಬಿ ಬೆಳೆಯತೊಡಗಿದನು. ಇತರ ಮಕ್ಕಳಿಗಿಂತ ಭಿನ್ನವಾಗಿರುವ ಬಾಲಕ ಗಣೇಶನಲ್ಲಿ ಆಗಲೇ ವಿಲಕ್ಷಣಭಾವವು ಕಂಡುಬರತೊಡಗಿತು. ಶೈಶವದ ಹೊಸಲಿನಿಂದ ಕೌಮಾರ್ಯದತ್ತ ಕಾಲಿಟ್ಟಿದ್ದರೂ ಅವನ ಸ್ವಭಾವ ವಯೋಮಾನಕ್ಕೆ ಅನುಗುಣವಾಗಿರಲಿಲ್ಲ. ಇಳಿಹೊತ್ತಿನ ಸಮಯದಲ್ಲಿ ಒಮ್ಮೊಮ್ಮೆ ಮನೆಯ ಮುಂದಿನ ಕೋಟಿತೀರ್ಥ ಕಟ್ಟೆಯ ಪಾವಟಿಗೆಯ ಮೇಲೆ ಇಹವನ್ನು ಮರೆತು ಅದೆಷ್ಟೋ ಹೊತ್ತಿನವರೆಗೆ ಕುಳಿತಿರುತ್ತಿದ್ದ. ಮರಳಿ ಜಾಗ್ರತಾವಸ್ಥೆಗೆ ಬಂದಾಗ ಯಾರಾದರೂ ಆತನನ್ನು ಸ್ವಲ್ಪ ನಗಿಸಿದರೆ ಸಾಕು, ಬಹಳ ಹೊತ್ತಿನವರೆಗೆ ನಗುತ್ತಲೇ ಇರುತ್ತಿದ್ದ. ರಾತ್ರಿ ಮಲಗುವಾಗ ಅಳುತ್ತಾ ಮಲಗಿದರೆ, ಬೆಳಿಗದಗದ ಅಳುತ್ತಲೇ ಏಳುತ್ತಿದ್ದ. ಎಲ್ಲ ಮಕ್ಕಳ ಹಾಗೆ ಅವನು ತನ್ನ ವಯಸ್ಸಿನ ಜತೆಗಾರರೊಂದಿಗೆ ಆಟ-ಪಾಟಗಳಲ್ಲಿ ಕಲೆಯುತ್ತಿರಲಿಲ್ಲ. ಅವನೊಬ್ಬ ಹಿಂಡನಗಲಿದ ಗಜದಂತೆ ಇದ್ದ. ಮನಸ್ಸು ಬಂದರೆ ಎಲ್ಲ ಹುಡುಗರೊಂದಿಗೆ ನಗುನಗುತ್ತ ಬೆರೆಯುತ್ತಿದ್ದ, ಹಾಗಲ್ಲವಾದರೆ ತನ್ನಷ್ಟಕ್ಕೆ ತಾನು ಬ್ರಹ್ಮವಸ್ತುವಿನಂತೆ ಮೌನ; ಇದು ಗಣೇಶನ ಜಾಯಮಾನ.

                         ಕೇರಿಯ ಜನರು ಈತನ ಈ ವಿಲಕ್ಷಣ ಗುಣದಿಂದಾಗಿ ಪೆದ್ದ, ಬಲಗೊಂಬೆ, ಜಡಭರತ ಅಜ್ಜಿಮೊಮ್ಮ ಇತ್ಯಾದಿ ಹೆಸರಿನಿಂದ ಅಪಹಾಸ್ಯ ಮಾಡುತ್ತಿದ್ದರು. ಗಣೇಶನ ಮನಸ್ಸು ಬಹು ಸೂಕ್ಷ್ಮ, ಮುಗ್ಧ ಹಾಗೂ ಅಷ್ಟೇ ನಿರ್ಮಲವಾಗಿತ್ತು. ಯೋಗಿಗಳ ವ್ಯಕ್ತಿತ್ವದ ಬಗೆಗೆ ಹೇಳುವಾಗ ಜಾಗ್ರತ್, ಸ್ವಪ್ನ, ಸುಷುಪ್ತಿ, ತುರೀಯ, ಉನ್ಮನಿ ಎಂದು ಅವರ ಮಾನಸಿಕ ಸ್ಥಿತಿಯನ್ನು ವರ್ಣಿಸುತ್ತಾರೆ. ಬಾಲಕ ಗಣೇಶನಲ್ಲಿ ಅಂತರ್ಗತವಾಗಿರುವ ಈ ಗುಣಗಳು ಆಯಾ ಸಮಯ ಸಂದರ್ಭಕ್ಕೆ ಅನುಗುಣವಾಗಿ ಆ ಸ್ಥಿತಿಗೆ ಆತನನ್ನು ಸಹಜವಾಗಿ ಒಯ್ಯುತ್ತಿದ್ದವು. ತಾಯಿ-ತಂದೆಯರ ಅತಿಪ್ರೀತಿಯ ಪರಿಣಾಮವೋ ಜನ್ಮಾಂತರದ ಅರ್ಜಿತ ಸಂಸ್ಕಾರದ ಫಲವೋ| ಯಾರ ಅಂಕೆಗೋ ಒಳಪಡದೆ ಅವನ ವ್ಯಕ್ತಿತ್ವವು ರೂಪುಗೊಳ್ಳುತ್ತಿತ್ತು. 

ಅಶೋಕವನದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಗುಡಿ ನಿರ್ಮಾಣ:

ಪ್ರತಿ ತಿಂಗಳು ಶುಕ್ಲ ಮತ್ತು ಕೃಷ್ಣಪಕ್ಷಗಳ ಅನಧ್ಯಾಯದ 3ದಿನ ಜಯರಾಮ ಭಟ್ಟರು ತಮ್ಮ ಶಿಷ್ಯರೊಡನೆ ಗೋಕರ್ಣದ ವಿಶೇಷ ಸ್ಥಳಗಳಿಗೆ ಸಂಚರಿಸಿ ಅವುಗಳ ಪರಿಚಯ ಮಾಡಿಕೊಳ್ಳುತ್ತಿದ್ದರು. ಹೀಗಿರುವಾಗ ಒಂದು ದಿನ ಕೋಟಿತೀರ್ಥದ ಆಗ್ನೇಯ ದಿಕ್ಕಿನಲ್ಲಿರುವ ಭಿಮಕುಂಡದ ಕಾಲುದಾರಿ ಮೂಲಕ ಗೋಕರ್ಣ ಮತ್ತು ತದಡಿ ಸಧ್ಯ ಇರುವ ಅಶೋಕವನಕ್ಕೆ ಬಂದರು. ಎಲ್ಲೆಡೆ ತಂಪಾದ ಪ್ರಶಾಂತ ವಾತಾವರಣ. ನೀರವದಲ್ಲಿ ಅದ್ದಿದಂತ ದಟ್ಟ ಮೌನ. ಹಸಿರು ಕಾನನ ನಡುವೆ ತಗ್ಗು ಪ್ರದೇಶದಲ್ಲಿ ಒಂದು ಕೆರೆ; ಅದೇ ಅಶೋಕತೀರ್ಥ. ಅಲ್ಲಿಂದ ಸ್ವಲ್ಪ ಮುಂದಕ್ಕೆ ಸಡೆದುಹೋದಾಗ ಜುಳುಜುಳು ನೀನಾದ ಗೈಯುತ್ತ ಹರಿಯುತ್ತಿರುವ ಕಿರುತೊರೆ. ಅದರ ದಂಡೆಯ ಮೇಲೆ ಹೊಂಬಣ್ಣದ ಗೊಂಚಲು ಗೊಂಚಲುಗಳಿಂದ ಪುಷ್ಪಭರಿತವಾಗಿ ಸಾಲಂಕೃತಗೊಂಡ ಅಶೋಕವೃಕ್ಷಗಳು, ಸ್ವಚ್ಛಂದವಾಗಿ ಹಾರಾಡಿಕೊಂಡು ಇಂಚರಗೈಯುತ್ತಿರುವ ಹಕ್ಕಿಗಳ ಮಧುರ ಕೂಜನ; ದೂರದ ಹಾದಿಯಲ್ಲಿ ಕ್ರಮಿಸಿಬಂದ ಆಯಾಸವನ್ನು ಮರೆಯಾಗಿಸಿತ್ತು. ಯಾವುದೋ ನೂತನ ಲೋಕದ ದಿವ್ಯ ಪರಿಸರದ ಅನುಭವ ನೀಡಿತ್ತು. ಹಾಗೆಯೇ ಎಲ್ಲವನ್ನು ವೀಕ್ಷಿಸುತ್ತ ಮುಂದಕ್ಕೆ ಬಂದಾಗ ಒಂದು ಸಮತಟ್ಟಾದ ಅಂಗಳದಲ್ಲಿ ಶಿವಲಿಂದ ಕಾಣಿಸಿತು. ಅದು ಮಲ್ಲಿಕಾರ್ಜುನ ಲಿಂಗ. ಕುತೂಹಲದಿಂದ ಸುತ್ತಲೂ ಪರೀಕ್ಷಿಸುತ್ತಿರುವಂತೆ ನಾತಿದೂರದಲ್ಲಿ ಒಂದು ಅಶೋಕವೃಕ್ಷ ಹಾಗೂ ಅದರ ಕೆಳಗಡೆ ಒಂದು ತಿಳಿನೀರಿನ ಕುಂಡ ಕಂಡುಬಂತು. ಆಚೆ-ಈಚೆ ಕೇತಕಿ ಸಸ್ಯಗಳು ಪೊದೆಯಾಗಿ ಬೆಳೆದು ಹತ್ತಿರಕ್ಕೆ ಹೋಗುವಂತಿರಲಿಲ್ಲ. ಶೀಷ್ಯರ ಸಹಾಯದಿಂದ ಕೇತಕಿ ಗರಿಗಳನ್ನು ಬದಿಗೆ ಸರಿಸಿ ನೋಡಿದಾಗ ಕುಂಡದೊಳಗೆ ಒಂದು ಶೀಲಾಲಿಂಗವಿತ್ತು. ಇದನ್ನೆಲ್ಲ ನೋಡುತ್ತ ಜಯರಾಮಭಟ್ಟರು ಭಾವುಕರಾಗಿ ಕ್ಷಣಕಾಲ ಮೈಮರೆತರು. ಇಹದ ಪರಿವೆಗೆ ಬರುತ್ತಿರುವಂತೆ ಅವರ ಮನಸ್ಸು ಹೇಳಿತು. ಮಧ್ಯಪ್ರದೇಶದ ಗ್ವಾಲಿಯರ ಎಲ್ಲಿ? ಈ ಗೋಕರ್ಣವೆಲ್ಲಿ? ಯಾವ ಅರಿಯದ ಅಬೋಧಶಕ್ತಿ ನನ್ನನಿಲ್ಲಿಗೆ ಕರೆತಂದಿತು| ಹೀಗೆ ಯೋಚಿಸುತ್ತ ಅನ್ಯಮನಸ್ಕರಾಗಿ ಗೋಕರ್ಣ ತಲುಪಿ ಅಶೋಕವನದಲ್ಲಿ ತಾನು ಕಂಡ ದೃಶ್ಯಗಳ ಬಗೆಗೆ ಊರಿನ ಹಿರಿಯರಲ್ಲಿ ವಿಚಾರಿಸಿದಾಗ ಸಮತಟ್ಟಾದ ಸ್ಥಳದಲ್ಲಿರುವ ಲಿಂಗ ಮಲ್ಲಿಕಾರ್ಜುನ ಲಿಂಗವೆಂತಲೂ, ಅಶೋಕವೃಕ್ಷದ ಕೆಳಗೆ ನೀರಿನ ಕುಂಡದಲ್ಲಿರುವದು ಸೀತಾಲಿಂಗವೆಂತಲೂ ತಿಳಿಸಿದರು. ಆಗ ಜಯರಾಮಭಟ್ಟರು ಊರಿನ ಪ್ರಮುಖರೊಂದಿಗೆ ಚರ್ಚಿಸಿ ಕೆಲವೇ ದಿನಗಳಲ್ಲಿ ಅಶೋಖ ವನದಲ್ಲಿರುವ ಮಲ್ಲಿಕಾರ್ಜುನೇಶ್ವರ ದೇವರಿಗೆ ಗುಡಿ ನಿರ್ಮಾಣ ಮಾಡಿದರು. ಆಗ ಸೀತಾಲಿಂಗವನ್ನು ಎಲ್ಲಿ ಪ್ರತಿಷ್ಠಾಪಿಸಬೇಕು? ಎಂಬ ಜಿಜ್ಞಾಸೆಯುಂಟಾಗಿ ಕೊನೆಗೆ ಸೀತಾಲಿಂಗವು 4 ಗೋಡೆಗಳ ನಡುವೆ ಇರುವುದಕ್ಕಿಂತ ನಿರಾವರಣ ಮುಕ್ತಪರಿಸರದಲ್ಲಿರುವದೇ ಸೂಕ್ತವೆಂದು ತಿಳಿದು ದೇವಾಲಯದ ಹೊರಗೆ ಬಲಭಾಗದಲ್ಲಿ ಪ್ರತಿಷ್ಠಾಪಿಸಿದರು. ಸೀತಾಲಿಂಗವು ನೀರಿನ ಕುಂಡದಲ್ಲಿ ಇದ್ದ ಕಾರಣ ಹಾಗೂ ರಾಮಾಯಣದಲ್ಲಿ ಸೀತೆಯು ಭೂಮಿಯಲ್ಲಿ ದೊರಕಿರುವುದಾಗೆ ಹೇಳಲ್ಪಟ್ಟಿರುವುದರಿಂದಲೂ ಅವುಗಳ ಸಂಕೇತವಾಗಿ ಒಂದು ಶಿಲೆಯ ಕಲ್ಲನ್ನು ಕುಂಡದ ಆಕೃತಿಯಲ್ಲಿ ಕೊರೆದು ಅದರಲ್ಲಿ ಸೀತಾಲಿಂಗವನ್ನು ಪ್ರತಿಷ್ಠಾಪಿಸಲಾಯಿತು.

ಸಾಮಾನ್ಯವಾಗಿ ದೇವರ ಮೂರ್ತಿಗಳನ್ನು ಲಿಂಗಗಳನ್ನು ಶಿಲಾಪೀಠದ ಮೇಲೆ ಪ್ರತಿಷ್ಠಾಪಿಸುವುದು ಸಾಂಪ್ರದಾಯಿಕ ಪದ್ಧತಿ. ಆದರೆ ಇಲ್ಲಿ ಸೀತಾಲಿಂಗಕ್ಕೆ ಪೀಠವಿಲ್ಲ. ಮಗುವು ತಾಯವiಡಿಲನ್ನು ತಬ್ಬಿನಿಂತ ಹಾಗೆ ಮಣ್ಣಿನ ಮಗಳಾದ ಸೀತೆಗೆ ಅಂದರೆ ಸೀತಾಲಿಂಗಕ್ಕೆ ಭೂಮಿಯೇ ಪೀಠ ! ಮಿಥ್ಯ ಆಡಂಬರ ವಿಲಾಸ ವೈಭವಗಳ ನಿರಾಕರಣ ಸಂಕೇತವಾಗಿ ಸರಳತೆಯ ಸಂದೇಶ ಸಾರುತ್ತಿದ್ದಾಳೆ ಇಲ್ಲಿ ಈ ಮಾತೆ.

ಅಶೋಕವನ ಎಂಬ ಹೆಸರು ಈ ಸ್ಥಳಕ್ಕೆ ಅಶೋಕವೃಕ್ಷಗಳ ಇರುವಿಕೆಯಿಂದಾಗಲಿ ಅಥವಾ ಯಾವುದೇ ವ್ಯಕ್ತಿಯಿಂದಾಗಲಿ ಬಂದಿದ್ದಲ್ಲ. ಅಶೋಕವನ ಶಬ್ದ ಶೋಕರಹಿತವಾದ ತಾಣ ಎನ್ನುವ ಅರ್ಥದಲ್ಲಿದೆ. ರಾಮಾಯಣ ಮಹಾಕಾವ್ಯದಲ್ಲಿ ಪುರಾಣಗಳಲ್ಲಿ ನಮೂದಿಸಿರುವ ಅಶೋಕವನ ಇದಲ್ಲ. “ಪ್ರಶಾಂತ ಪರಿಸರದ ದಿವ್ಯಾನುಭೂತಿಯಿಂದ ಮನಸ್ಸಿನ ದುಗುಡ ದುಮ್ಮಾನಗಳನ್ನು ಪರಿಹರಿಸಿ ಶಾಂತಿಯನ್ನು ನೀಡುವ ಯೋಗಭೂಮಿ” ಇದು ಅಶೋಕವನ ಹೆಸರಿನ ತಾತ್ಪರ್ಯ.

‘ಅಶೋಕ’ ಶಬ್ಧದ ಉತ್ಪತ್ತಿ ಮತ್ತು ಅರ್ಥ:

ಲೌಕಿಕ ಅರ್ಥ : ಈ ಜಗತ್ತಿನಲ್ಲಿ ಅತ್ಯಂತ ಕಠಿಣವಾಗಿರುವುದು ಶೋಕ; ಶೋಕದಿಂದ ರಹಿತವಾಗಿರುವದು ಅಶೋಕ. 

ಅಂತರಾರ್ಥ ; “ಶೋಕ” ಶಬ್ದವು “ಶುಚ್ ದೀಪ್ತಾ” ಎಂಬ ಧಾತುವಿನಿಂದ ಬಂದಿದೆ. ದೀಪ್ತಿ ಎಂದರೆ ತಾಪ. ತಾಪರಹಿತವಾದ ಶಾಂತಸ್ತಿತಿಯನ್ನು ವೇದಿಸುವ ಶಬ್ದ ಅಶೋಕ .

ಅಶ್-ಓಕ=ಅಶೋಕ. ಇಲ್ಲಿ ‘ಅಶ್’ ಧಾತುವು ವ್ಯಾಪ್ತಿ ಎಂಬ ಅರ್ಥದಲ್ಲಿದೆ. ಓಕ ಎಂದರೆ ಮನೆ, ಮೂಲಸ್ಥಾನ ಎಂಬ ಅರ್ಥವು ವೇದದಲ್ಲಿ ಪ್ರಸಿದ್ಧವಾಗಿದೆ.

ಓಕೋದದೇ ಬ್ರಹ್ಮಣ್ಯಂತಶ್ಚ ನರಃ | ದೇವಾ ಓಕಾಂಸಿ ಚಕ್ರಿರೇ | ಇದ್ಯಾದಿ. ‘ಅಶೋಕ’ ಶಬ್ದಕ್ಕೆ ಇಲ್ಲಿ ವನ ಎಂಬ ವಿಶೇಷಣವಿದೆ. ವನವು ಏಕಾಂತವಾಗಿರುವದರಿಂದ ತಪಸ್ಸಿಗೆ ಯೋಗ್ಯಸ್ಥಾನ ‘ತಪೋವನ’ ಎಂದು ಪರಿಗಣಿಸಲ್ಪಟ್ಟಿದೆ.