Murudeshwara

ಶಿವನಮೂರ್ತಿ:

                     123 ಅಡಿಯ ವಿಶ್ವದಲ್ಲೇ 2ನೇಯ ಅತೀ ಎತ್ತರದ ಶಿವನ ವಿಗ್ರಹವನ್ನು ಮ್ಹಾತೋಬಾರ ಮುರ್ಡೇಶ್ವರ ದೇವಾಲಯದ ಹಿಂಭಾಗದಲ್ಲಿ ಭವ್ಯವಾಗಿ ನಿರ್ಮಿಸಲಾಗಿದೆ. ಶಿವಮೊಗ್ಗದ ಶಿಲ್ಪಿ ಕಾಶಿನಾಥ ಎಂಬುವವರು ತಮ್ಮ ಶಿಲ್ಪಿಗಳ ಬಳಗದಿಂದ ಈ ಮೂರ್ತಿಯ ನಿರ್ಮಾಣ ಮಾಡುವಲ್ಲಿ ಪರಿಶ್ರಮಪಟ್ಟಿದ್ದಾರೆ. ಪೂರ್ವಾಭಿಮುಖವಾಗಿ ನಿಂತಿರುವ ಒಮ್ಮೊಮ್ಮೆ ಮಂದಸ್ಮಿತನಾದಂತೆ, ಗಂಭೀರವದನನಾಗಿರುವಂತೆ ಕಾಣುವ ಶಿವನ ಮೂರ್ತಿಯು, ಸೂರ್ಯನ ಕಿರಣಗಳಿಂದ ಕಂಗೊಳಿಸಿದರೆ; ರಾತ್ರಿಯ ಸಮಯದಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತವಾಗಿ ಪ್ರವಾಸಿಗರ ಕಣ್ಮನಗಳನ್ನು ತಣಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ 66ರ ಗುಂಟ ಪ್ರಯಾಣಿಸುವ ಪ್ರವಾಸಿಗರು ಶಿವನ ಮೂರ್ತಿಯನ್ನು ಬಹುದೂರದಿಂದಲೇ ಗುರುತಿಸುತ್ತಾರೆ. ಅಲ್ಲದೇ ಸಮುದ್ರದಲ್ಲಿ ಸಂಚರಿಸುವ ಮೀನುಗಾರರಿಗೂ ಹಾಗೂ ಪ್ರಯಾಣಿಸಲು ಅನುಕೂಲವಾಗುತ್ತಿದೆ. ಭೂಕೈಲಾಸದ ಸನ್ನಿವೇಶವನ್ನು ಮೂರ್ತಿಯ ಕೆಳಗಡೆ ನಿರ್ಮಿಸಿರುವುದು ಪ್ರವಾಸಿಗರಿಗೆ ಕ್ಷೇತ್ರದ ಪೌರಾಣಿಕ ಹಿನ್ನೆಲೆಯ ಸಂಪೂರ್ಣ ಚಿತ್ರಣವನ್ನು ಸ್ಮøತಿಪಟಲದಲ್ಲಿ ಬಿತ್ತರಿಸಲು ಕಾರಣವಾಗಿದೆ.

ರಾಜ ಗೋಪುರ :

ಮುರ್ಡೇಶ್ವರ ದೇವಸ್ಥಾನವನ್ನು ಪ್ರವೇಶಿಸುತ್ತಿದ್ದಂತೆಯೇ ಮೊದಲು ಸಿಗುವ ರಾಜಗೋಪುರವು ಕಂದುಕಗಿರಿಯ ಮುಂದೆ ನಿಂತಿರುವ 2 ಬ್ರಹದ್ಧಾಕಾರದ ಆನೆಗಳ ಹಿಂದೆ ನಿರ್ಮಿಸಲ್ಪಟ್ಟಿದೆ. ಏಷ್ಯಾದಲ್ಲೇ ಅತೀ ಎತ್ತರವಾದ ಗೋಪುರವಾಗಿದೆ. ಕ್ರಿ.ಶ. 2008ರ ಮೇ ತಿಂಗಳಲ್ಲಿ ಉದ್ಘಾಟನೆಯಾದ ಈ ಗೋಪುರವು 249 ಅಡಿ, 22 ಅಂತಸ್ತುಗಳನ್ನು  ಹೊಂದಿರುವ ರಾಜಗೋಪುರದ ವಿಶಿಷ್ಟತೆ ವಿಶ್ವದ ಜನತೆಯ ಮನಸೊರೆಗೊಂಡಿದೆ.
ವಿಶಿಷ್ಟ ಶೈಲಿಯಲ್ಲಿ ನಿರ್ಮಿಸಿದ ಈ ಗೋಪುರವನ್ನು ತಮಿಳುನಾಡಿನ ಶಿಲ್ಪಿ ಶ್ರೀ ಸೋಮನಾಥನ್ ನಿರ್ಮಿಸಿದ್ದಾರೆ