Keladi

ಕೆಳದಿ ಸಂಕ್ಷಿಪ್ತ ಇತಿಹಾಸ:

ಕ್ರಿ.ಶ.1499ರಲ್ಲಿ ಜನ್ಮ ತಾಳಿದ ಕೆಳದಿ ಸಂಸ್ಥಾನಕ್ಕೆ ದಕ್ಷಿಣ ಭಾರತದ ಇತಿಹಾದಲ್ಲಿ ವಿಶಿಷ್ಟ ಸ್ಥಾನವಿದೆ. ಮಧ್ಯಕಾಲೀನ ಇತಿಹಾಸ ಕೊನೆಯ ಹಾಗೂ ಆಧುನಿಕ ಯುಗದ ಮೊದಲ ಕಾಲದ ಅರಸು ಮನೆತನಗಳಲ್ಲಿ ಈ ಮನೆತನವು ಪ್ರಮುಖವಾದುದು. ಕ್ರಿ.ಶ.1565ರಲ್ಲಿ ವಿಜಯನಗರದ ಪತನದ ನಂತರ ಇವರು ಸ್ವತಂತ್ರರಾದರೂ ವಿಜಯನಗರದವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆದವರಿವರು. ತಮ್ಮ 263 ವರ್ಷ ಆಡಳಿತದ ಅವಧಿಯಲ್ಲಿ ರಾಜಕೀಯ, ಆಡಳಿತ,  ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷ ನೈಪುಣ್ಯತೆಯನ್ನು ತೋರುತ್ತಾ ವಿಜಯನಗರದ ಸಂಸ್ಕೃತಿಗೆ ಕುಂದು ಬಾರದಂತೆ ನಡೆದು ಬಂದರು.

ಕೆಳದಿ ಇತಿಹಾಸ ಆಕರಗಳು:

         ದೇಶದ ಯಾವುದೇ ಪ್ರದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಸಾಧ್ಯವಾದ ಮಟ್ಟಿಗೆ ತಿಳಿಯಲು ಮುಖ್ಯ ಆಕರಗಳೆಂದರೆ ಆಯಾ ಪ್ರದೇಶದಲ್ಲಿ ದೊರೆಯುವ ಸಾಹಿತ್ಯಕ ಆಧಾರಗಳು, ಪ್ರವಾಸಿಗರ ವರದಿಗಳು, ಐತಿಹ್ಯಗಳು, ಯಾವುದೇ ಪ್ರಕಾರದ ವಸ್ತುಗಳ ಅವಶೇಷಗಳು, ಪುರಾತತ್ವ ಅವಶೇಷಗಳು. ಅಂದರೆ ಜನ ವಾಸ್ತವ್ಯದ ಹಳ್ಳಿ, ಪಟ್ಟಣ ಮೊದಲಾದ ನೆಲೆಗಳು ಮೊದಲಾದವುಗಳು. ಇದು ಮಧ್ಯ ಯುಗದ ಕೆಳದಿ ಕಾಲದ ಇತಿಹಾಸ ಮತ್ತು ಸಂಸ್ಕೃತಿಯನ್ನು ತಿಳಿಯಲು ಅನ್ವಯಿಸುತ್ತದೆ. ಕೆಳದಿ ಇತಿಹಾಸಕ್ಕೆ ಕೆಳದಿ ಆಡಳಿತದ ಕೊನೆಯ ಕಾಲದಲ್ಲಿದ್ದ ಲಿಂಗಣ್ಣ ಕವಿ ರಚಿಸಿದ ಕೆಳದಿ ನೃಪವಿಜಯ ಮತ್ತು ಕೆಳದಿ ರಾಜನಾದ ಬಸಪ್ಪನಾಯಕನು ರಚಿಸಿದ ಶಿವತತ್ವರತ್ನಾಕರ ಪ್ರಮುಖವಾಗಿದೆ. ಕೆಳದಿ ನೃಪವಿಜಯ ಕ್ರಿ.ಶ 17-18ನೇ ಶತಮಾನದಲ್ಲಿ ಕೆಳದಿ ಕವಿ ಲಿಂಗಣ್ಣನಿಂದ ರಚಿತವಾದ ಚಂಪು ಕೃತಿ. ಇದರಲ್ಲಿ ಕಾವ್ಯಾಂಶಕ್ಕಿಂತ ಚರಿತ್ರಾಂಶವೇ ಹೆಚ್ಚು. ಇದರಲ್ಲಿ ಪ್ರಾಸಂಗಿಕವಾಗಿ ವಿಜಯನಗರ, ಬಹುಮನಿ ಸುಲ್ತಾನ, ದಿಲ್ಲಿ ಸಾಮ್ರಾಟ, ಮರಾಠಾ ದೊರೆಗಳು, ಚಿತ್ರದುರ್ಗ ನಾಯಕರು ಮೊದಲಾದ ವಿಷಯ ಬರುತ್ತದೆ. ಕೆಳದಿ ಉದಯದಿಂದ ಅಂತ್ಯದವರೆಗೆ ಹೆಚ್ಚಿನ ಘಟನೆ ಇದರಲ್ಲಿದೆ. ಕೆಳದಿ ಬಸವಪ್ಪನಾಯಕನು ರಚಿಸಿದ ಶಿವತತ್ವರತ್ನಾಕರ ಕೆಳದಿ ಇತಿಹಾಸಕ್ಕೆ ಮತ್ತೊಂದು ಪ್ರಮುಖ ಗ್ರಂಥ. ಸಂಸ್ಕೃತದಲ್ಲಿರುವ ಇದು ಹೆಚ್ಚಿನ ವಿಷಯವನ್ನು ಒಳಗೊಂಡ ಮೊದಲ ವಿಶ್ವಕೋಶ.  ಅಲ್ಲದೆ ಪುರಾತತ್ವಕ್ಕೆ ಪ್ರಮುಖ ಕುರುಹುಗಳಾಗಿ ಶಾಸನಗಳು ಉಳಿದುಬಂದಿವೆ. ಈವರೆಗೆ ಕೆಳದಿ ಇತಿಹಾಸಕ್ಕೆ ಸಂಬಂಧಿಸಿದಂತೆ ಸುಮಾರು 750ಕ್ಕೂ ಹೆಚ್ಚು ಶಾಸನ, ನಿರೂಪಗಳು ದೊರೆತಿವೆ. ತಾಮ್ರಪಟಗಳು ನಾಣ್ಯಗಳು, ಐತಿಹಾಸಿಕ ದಾಖಲೆಗಳು, ತಾಡಪತ್ರಗಳು, ಕಡತಗಳು, ಪ್ರಾಚ್ಯ ಅವಶೇಷಗಳು, ವಿದೇಶಿ ಪ್ರವಾಸಿಗರ ಉಲ್ಲೇಖಗಳು ಮೊದಲಾದವು ಈ ದಿಶೆಯಲ್ಲಿ ಸಂಶೋಧನೆಗೆ ಗಮನಾರ್ಹ ಸಾಧನವಾಗಿದೆ. ವಿದೇಶಿ ಮಾಹಿತಿಗಳಾದ ಮೆಕಂಜಿ ಸಂಗ್ರಹ,ಪೋರ್ಚುಗೀಸರು,ಡಚ್,ಬಟಾವಿಯಾ ಡಾಗ್ ರಿಜಿಸ್ಟರುಗಳು,ಈಸ್ಟ್ ಇಂಡಿಯಾ ಕಂಪೆನಿಯ ಉಲ್ಲೇಖಗಳು ಮೊದಲಾದವುಗಳಲ್ಲಿ ಈ ಅರಸು ಮನೆತನದ ಚರಿತ್ರೆಯನ್ನರಿಯಲು ಪ್ರಮುಖ ಆಕರವಾಗಿವೆ. 

ಕೆಳದಿ ರಾಜ್ಯದ ಉದಯ:

     ಕೆಳದಿ ಸಂಸ್ಥಾನದ ಉದಯದ ಕುರಿತು ಹಲವು ಅಭಿಪ್ರಾಯಗಳಿವೆ. ಇದಕ್ಕೆ ಸಂಬಂಧಿಸಿದಂತೆ ಹಲವು ಐತಿಹ್ಯಗಳಿವೆ. ಇದು ಚಂದ್ರಗುತ್ತಿ ಪರಗಣದಲ್ಲಿ ಮೊದಲು ಸೇರಿತ್ತು. ಇಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿದೆ. ಹತ್ತಿರದ ಹಳ್ಳಿಬೈಲು ಎಂಬ ಗ್ರಾಮದಲ್ಲಿದ್ದ ಬಸವಪ್ಪ ಮತ್ತು ಬಸವಾಂಬೆಯರು ತಮಗೆ ಬಹಳ ಕಾಲ ಮಕ್ಕಳಾಗದಿದ್ದರಿಂದ ತಮಗೆ ಮಕ್ಕಳಾಗುವಂತೆ ಅನುಗ್ರಹಿಸಲು ತಮ್ಮ ಮನೆಯ ಚೌಡೇಶ್ವರಿಯಲ್ಲಿ ಪ್ರಾರ್ಥಿಸಿ, ತಮಗೆ ಮಕ್ಕಳಾದರೆ ಶ್ರೀ ದೇವಿಯ ಹೆಸರಿಡುವುದಾಗಿ ಹೇಳಿಕೊಂಡದ್ದರಿಂದ ಅವರಿಗೆ ಹರಕೆಯಿಂದ ಹುಟ್ಟಿದ ಮಕ್ಕಳಿಗೆ ಚೌಡಪ್ಪ-ಭದ್ರಪ್ಪರೆಂದು ಹೆಸರಿಟ್ಟಿದ್ದರು. ಈ ಸಹೋದರರಿಗೆ ಆಕಸ್ಮಿಕವಾಗಿ ಭೂಮಿಯಲ್ಲಿ ಹೇರಳ ದ್ರವ್ಯ ದೊರೆಯಿತು. ಆ ದ್ರವ್ಯವು ತಮ್ಮ ಒಡೆಯನಿಗೆ ದೊರೆಯ ಬೇಕೆಂದು ಎಡವ ಮುರಾರಿ, ಬಲ ಮುರಾರಿ ಎಂಬ ನಿಷ್ಠಾವಂತ ಸೇವಕರು ತಮ್ಮನ್ನೇ ಆತ್ಮಾಹುತಿ ಮಾಡಿ ಕೊಂಡಿದ್ದರು. ಇವರುಗಳ ಸದ್ಗುಣ ಸಂಪನ್ನತೆಯ ಫಲವಾಗಿ ಕೆಳದಿ ಸಾಮ್ರಾಜ್ಯ ಉದಯವಾಗಲು ಸಾಧ್ಯವಾಯಿತು. ಇವರ ಪ್ರತಿ ರೂಪದ ಗೊಂಬೆಗಳನ್ನು ಕೆಳದಿ ದೇವಸ್ಥಾನದಲ್ಲಿ ಈಗಲೂ ನೋಡ ಬಹುದಾಗಿದೆ. ಈ ಘಟನೆಗೆ ಪೂರಕವಾಗಿ ಈ ನಾಯಕ ಪರಂಪರೆಯ ಪರಾಕ್ರಮಕ್ಕೆ ಪಂಜು ನಾಗರಮುರಿ’ಸಹ ಈ ಸಂತತಿಯ ಪೌರುಷದ ಪತಾಕೆಯಾಗಿ ಭೂಮಿಯಲ್ಲಿ ದೊರೆತಿತ್ತು. ಅಲ್ಲದೆ ಆನೇಗುಂದಿಯಿಂದ ಬಂದ ಶ್ರೀ ವೆಂಕಟಾದ್ರಿ ಜೋಯಿಸರ ಆಶೀರ್ವಾದ ಇವರಿಗೆ ದೊರಕಿದ್ದು ಈ ಸಂಸ್ಥಾನವು ಹೆಮ್ಮರವಾಗಿ ಬೆಳೆಯಲು ಕಾರಣವಾಯಿತು. ವಿಜಯನಗರದ ಚಕ್ರವರ್ತಿ ಕೃಷ್ಣದೇವರಾಯನು ಇವರ ಪ್ರಾಬಲ್ಯವನ್ನು ಗಮನಿಸಿ ತುರುಷ್ಕರ ಮತ್ತು ಕೆಲವು ಸಣ್ಣಪುಟ್ಟ ಪಾಳೆಯಗಾರರಿಂದ ತಮಗಾಗುತ್ತಿದ್ದ ಕಿರುಕುಳವನ್ನು ತಪ್ಪಿಸಿಕೊಳ್ಳಲು ಈ ಸಹೋದರರನ್ನು ತನ್ನ ಬಳಿಗೆ ಕರೆಸಿಕೊಂಡು `ನಿವೆಮ್ಮ ಕಜ್ಜಂಗಳಿಗನುಕೂಲಿಗಳಾಗಿ ಸಮೀಪದೊಳಿರಲ್ವೇಳ್ಕೆಂದು` ಅವರಿಗೆ ಕೇಳಿ ಕೊಂಡನೆಂದು ಕೆಳದಿ ನೃಪವಿಜಯ ತಿಳಿಸುತ್ತದೆ. ಇದನ್ನು ಮನ್ನಿಸಿದ ಈ ಸಹೋದರರು ವಿಜಯನಗರ ಸಾಮ್ರಾಜ್ಯಕ್ಕೆ ತೊಂದರೆ ಕೊಡುತ್ತಿದ್ದ ಪಾಳೆಯಗಾರರನ್ನು ಸೋಲಿಸಿ ಅವರಲ್ಲಿ ಕೆಲವರನ್ನು ಸೆರೆ ಹಿಡಿದು, ಆ ಮೂಲಕ ವಿಜಯನಗರದ ಅರಸರ ಕೃಪೆಗೆ ಪಾತ್ರರಾದರಲ್ಲದೆ ಅವರಿಂದ ಅನೇಕ ಬಹುಮಾನಗಳನ್ನು ಪಡೆದುಕೊಂಡರು.ಇದರಿಂದಾಗಿ ಕ್ರಮೇಣ ಮುಸಲ್ಮಾನರನ್ನು ಎದುರಿಸಲು ಇವರನ್ನು ಉತ್ತರದ ಗಡಿಯ ರಕ್ಷಣೆಗೆ ವಿಜಯನಗರದ ಅರಸರು ನೇಮಿಸಿದರು. ಜೊತೆಗೆ ಇವರಿಗೆ ಚಂದ್ರಗುತ್ತಿ, ಕೆಳದಿ, ಇಕ್ಕೇರಿ, ಪೆರ್ಬಯಲು, ಯಳಗಳಲೆ, ಮೇದೂರು, ಕಲಸೆ, ಆತವಾಡಿ ಎಂಬ 8 ಮಾಗಣಿಗಳನ್ನು ಕೊಟ್ಟು ತಮಗೆ ಸಹಾಯಕರಾಗಿ ಇರುವಂತೆ ಅವರನ್ನು ನೇಮಿಸಲಾಯಿತು. ಅಲ್ಲದೆ ಕೆಳದಿ ಅರಸರಿಗೆ ರಾಯಸವನ್ನು ಬರೆಸುವ, ನಾಣ್ಯವನ್ನು ಅಚ್ಚು ಹಾಕಿಸುವ, ಅಧಿಕಾರವು ಕೊಡಲಾಯಿತು. ಕೆಳದಿಪುರದ ಅರಮನೆಯಲ್ಲಿ ಕೆಳದಿಯ ಮೊದಲ ಅರಸನಾಗಿ ಚೌಡಪ್ಪನಿಗೆ ಶಾ.ಶ.1422ರಲ್ಲಿ ಅಂದರೆ ಕ್ರಿ.ಶ.1500 ಜನವರಿ 8 ರಂದು ಪಟ್ಟಾಭಿಷೇಕವಾಯಿತು. ಚೌಡಪ್ಪ-ಚೌಡಪ್ಪನಾಯಕನಾಗಿ ಕೆಳದಿ ರಾಜ್ಯದ ಆಡಳಿತವನ್ನು ಪ್ರಾರಂಭಿಸಿದನು. ಹೀಗೆ ವಿಜಯನಗರಸಾಮ್ರಾಜ್ಯದ ವೈರಿಗಳನ್ನು ನಿಗ್ರಹಿಸುವ ಸಲುವಾಗಿ ಹೊಸದಾಗಿ ಏರ್ಪಾಟಾದ ಸಣ್ಣ ಸಂಸ್ಥಾನಗಳಲ್ಲಿ ಲಿಂಗವಂತ ಜಂಗಮ ವಂಶಕ್ಕೆ ಸೇರಿದ ಕೆಳದಿ ಒಂದಾಯಿತು. ಕೆಳದಿ ಅರಸರನ್ನು ಹಾಲಗೌಡರು ಎಂದೂ, ದೀವರು ಎಂದೂ ಹೇಳುವವರಿದ್ದಾರೆ. ಆದರೆ ಕ್ರಿ.ಶ.1506ರಿಂದ ಇಲ್ಲಿಯವರೆಗೆ ದೊರೆತಿರುವ ಶಾಸನದಲ್ಲಾಗಲಿ ನಿರೂಪಗಳಲ್ಲಾಗಲಿ, ಸಾಹಿತ್ಯ ಆಕರಗಳಲ್ಲಾಗಲಿ ಈ ಬಗ್ಗೆ ಸೂಕ್ತ ಆಧಾರ ದೊರೆಯುವುದಿಲ್ಲ. ಇದುವರೆಗಿನ ಆಧಾರದ ಮೇಲೆ ವಿದ್ವಾಂಸರು ಇವರನ್ನು ವೀರಶೈವರೆಂದೇ ಗುರುತಿಸಿದ್ದಾರೆ. ಹೀಗೆ ಚೌಡಪ್ಪ `ನಾಯಕ`ನಾಗಿ ಕೆಳದಿ ಸಂಸ್ಥಾನದ ಉದಯಕ್ಕೆ ಕಾರಣೀಭೂತನಾಗಿ ಉತ್ತಮ ಆಡಳಿತಗಾರನಾಗಿ ಪರಮ ಶಿವಭಕ್ತನಾಗಿ ಕೆಳದಿಯಿಂದ ಆಡಳಿತ ಪ್ರಾರಂಭಿಸಿ, ಕೆಳದಿ ರಾಮೇಶ್ವರ ದೇವಾಲಯದ ಗರ್ಭಗೃಹವನ್ನು ಮರದಲ್ಲಿ ಕಟ್ಟಿಸಿ ಶ್ರೀ ರಾಮೇಶ್ವರನನ್ನು ಪ್ರತಿಷ್ಠೆ ಮಾಡಿದನು. ಕೆಳದಿ ವಂಶದಲ್ಲಿ ಚೌಡಪ್ಪನೂ ಸೇರಿ ಆ ವಂಶದ  ಕ್ರಿ.ಶ 1499 ರಿಂದ ಕ್ರಿ.ಶ 1763ರವರೆಗೆ ಅಂದರೆ ಹೈದರಾಲಿಯ ದಾಳಿಗೆ ಕೆಳದಿ ತುತ್ತಾಗುವವರೆಗೆ ಒಟ್ಟು 18 ಅರಸರು 263 ವರ್ಷಗಳ ಕಾಲ ರಾಜ್ಯಭಾರ ಮಾಡಿದರು. ಇವರಲ್ಲಿ ಇಬ್ಬರು ರಾಣಿಯರು ಪ್ರಮುಖರಾಗಿದ್ದಾರೆ. ಕೆಳದಿ ಆಡಳಿತ ನಡೆಸಿದ ಮೊದಲ ದೊರೆಗಳ ಕಾಲಾವಧಿಯ ಬಗ್ಗೆ ಶಾಸನ ಮತ್ತು ಸಾಹಿತ್ಯ ಕೃತಿಗಳು ಬೇರೆ ಬೇರೆ ಉಲ್ಲೇಖಿಸುತ್ತವೆ. ಹೀಗಾಗಿ ಸಂಶೋಧಕರು ಈ ದೊರೆಗಳ ಕುರಿತು ಬೇರೆ ಬೇರೆ ಕಾಲಾವಧಿಯನ್ನು ಕೊಟ್ಟಿದ್ದಾರೆ.

         ಇಲ್ಲಿ ಬರುವ ಎಡವ ಮುರಾರಿ ಕೋಟೆ ಕೋಲಾಹಲ ಎಂಬ ಬಗ್ಗೆ ವಿದ್ವಾಂಸರು ಕೆಳದಿಯ ನಾಡಕಲಸಿ ಶಾಸನ ಬಿಟ್ಟರೆ ಉಳಿದ ಎಲ್ಲಾ ಶಾಸನಗಳಲ್ಲಿ ಎಡ ಮುರಾರಿ ಕೋಟೆ ಕೋಲಾಹಲ ಎಂಬ ವಿಸ್ತೃತ ಬಿರುದು ಕಂಡು ಬರುವುದರಿಂದ ಈ ಬಿರುದಿನ ಬಗ್ಗೆ, ಕೆಳದಿಯ ಮೊದಲ ರಾಜನಾದ ಜೌಡಪ್ಪನಾಯಕನಿಗೆ ನಿಧಿ ಸಿಗುವ ಸಲುವಾಗಿ ಇವರು ಆತ್ಮಾಹುತಿ ಮಾಡಿಕೊಂಡಿರುವುದಕ್ಕಿಂತ ಎಡವ ಮುರಾರಿ ಎಂಬವರ ಕೋಟೆಯನ್ನು ನಾಶ ಮಾಡಿದ್ದರಿಂದ ಆ ಬಿರುದು ಬಂದಿರುವುದಾಗಿ ತಿಳಿಸುತ್ತಾರೆ. ಕೃಷ್ಣದೇವರಾಯನ ಕಾಲದಲ್ಲಿ ಜಾಲಿಹಾಳ ಗ್ರಾಮವನ್ನು ಮುತ್ತಿ ಅಲ್ಲಿ ಆಳುತ್ತಿದ್ದ ಎಡವ ಮುರಾರಿ ಎಂಬವರನ್ನು ಸೋಲಿಸಿ ಅವರ ಕೋಟೆಯನ್ನು ವಶಪಡಿಸಿಕೊಂಡ ಕಾರಣ ಎಡವ ಮುರಾರಿ ಎಂಬ ಬಿರುದನ್ನು ನೀಡಿರುವುದಾಗಿ ತಿಳಿಸಲಾಗುತ್ತದೆ. ಆದರೆ ಈ ವ್ಯಕ್ತಿಗಳನ್ನು ಗೆದ್ದು ಈ ಬಿರುದನ್ನು ಪಡೆದದ್ದೇ ಅದರೆ ಈ ಇಬ್ಬರ ಹೆಸರಲ್ಲಿ ಕೆಳದಿಯಲ್ಲಿ ಪ್ರತಿ ವರ್ಷ ಕಾರ್ತಿಕ ಅಮಾವಾಸೆ ಮತ್ತು ಫಾಲ್ಗುಣ ಶುದ್ಧ ತೃತಿಯಾ ದಿನಗಳಲ್ಲಿ ದೂತರ ತೇರು ಎಂದು ಕರೆಯುತ್ತ ಆ ವ್ಯಕ್ತಿಗಳಿಗೆ ಗೌರವ ಕೊಡುವ ಸಂಪ್ರದಾಯ ಕೆಳದಿ ಕಾಲದಿಂದ ಏಕೆ ಆಚರಣೆಗೆ ಬಂದಿತು ಎಂಬ ಬಗ್ಗೆ ಸಂಶೋಧನೆ ಆಗಬೇಕಿದೆ.

ಕೆಳದಿಯನ್ನು ಆಳಿದ ಪ್ರಮುಖ ಅರಸರು:

        ಚೌಡಪ್ಪನಾಯಕನ ನಂತರ ಅವನ ಮಗ ಸದಾಶಿವ ನಾಯಕನು ದೊರೆಯಾದನು. ಇವನು ಕೆಳದಿಯಿಂದ ಇಕ್ಕೇರಿಗೆ ರಾಜಧಾನಿ ಬದಲಾಯಿಸಿದನು. ಈತನೇ ಕೆಳದಿ ಸಂಸ್ಥಾನಕ್ಕೆ ಭದ್ರಬುನಾದಿಯನ್ನು ಕಲ್ಪಿಸಿ ಕೊಟ್ಟನು. ಇವನ ನಂತರ ಬಂದ ದೊಡ್ಡಸಂಕಣ್ಣನಾಯಕ, ಚಿಕ್ಕಸಂಕಣ್ಣನಾಯಕ, ರಾಮರಾಜನಾಯಕರು ಆಡಳಿತ ನಡೆಸಿದರು. ಕ್ರಿ.ಶ. 1565ರಲ್ಲಿ ವಿಜಯನಗರದ ಅವನತಿಯ ನಂತರ ಭಾರತೀಯ ಸಂಸ್ಕೃತಿಯ ಸಂರಕ್ಷಣೆಯತ್ತ ತಮ್ಮನ್ನು ತೊಡಗಿಸಿ ಕೊಂಡವರಲ್ಲಿ ಕೆಳದಿ ಅರಸರು ಪ್ರಮುಖರಾಗುತ್ತಾರೆ. ಇದನ್ನು ದೊಡ್ಡಸಂಕಣ್ಣನಾಯಕನ ಕಾಲದಲ್ಲಿ ಗಮನಿಸಬಹುದು. ದೊಡ್ಡ ಸಂಕಣ್ಣನಾಯಕನು ರಾಜ ವೈಭೋಗವನ್ನು ತ್ಯಜಿಸಿ ಅತೀ ಸರಳ ಉಡುಪು, ವಿಭೂತಿ, ರುದ್ರಾಕ್ಷಿ ಮಾಲೆಗಳನ್ನು ಧರಿಸಿಕೊಂಡು ಧಾರ್ಮಿಕ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಒಬ್ಬ ಜಂಗಮನಂತೆ ಜೀವನ ನಡೆಸಿದನು. ಅಧಿಕಾರವನ್ನು ತಮ್ಮ ಚಿಕ್ಕಸಂಕಣ್ಣನಾಯಕನಿಗೆ ಕೊಟ್ಟು ತಾನು ತೀರ್ಥಯಾತ್ರೆ ಮಾಡಿದನು. ಇದನ್ನು ಕೆಳದಿ ನೃಪವಿಜಯ ಮತ್ತು ಶಿವತತ್ವ ರತ್ನಾಕರಗಳು ಉಲ್ಲೇಖಿಸುತ್ತವೆ. ಅವನ ತೀರ್ಥಯಾತ್ರೆಯ ಘಟನೆಯು ಮಹತ್ವದ್ದಾಗಿದೆ. ಇಂದಿಗೂ ಉತ್ತರ ಭಾರತದಲ್ಲಿ ಇರುವ ಅವಶೇಷಗಳು ಇದನ್ನು ತಿಳಿಸುತ್ತದೆ. 

                  ಇವನು ಕೆಳದಿಯಿಂದ ದಕ್ಷಿಣಕ್ಕೆ ಹೊರಟು ಶಿವಗಂಗೆ, ಕಂಚಿ, ಚಿದಂಬರಂ, ಕುಂಭಕೋಣ, ರಾಮೇಶ್ವರಗಳನ್ನು ಸಂದರ್ಶಿಸಿ ಅಲ್ಲಿಂದ ಉತ್ತರದ ಕಡೆಗೆ ಯಾತ್ರೆ ಮುಂದುವರೆಸಿದನು. ಹಾಗೆ ಬಿಜಾಪುರ ಹೈದರಾಬಾದ್ (ಭಾಗ್ಯನಗರ) ಹಾದು ದೆಹಲಿಗೆ ಪ್ರವೇಶಿಸಿದ್ದನು. ಅವನು ದೆಹಲಿಗೆ ಹೋದ ಸಂದರ್ಭದಲ್ಲಿ ಅಂದರೆ ಕ್ರಿ.ಶ. 1556-1605ರಲ್ಲಿ ಉದಾರ ಮನೋಭಾವದ ಅಕ್ಬರನು ಆಡಳಿತ ನಡೆಸುತ್ತಿದ್ದನು. ಅವನ ಆಸ್ಥಾನದಲ್ಲಿದ್ದ ಅಂಕುಶಖಾನ ಎಂಬುವವನನ್ನು ತನ್ನ ಖಡ್ಗ ಯುದ್ಧ ಕೌಶಲ್ಯದಿಂದ ಇವನು ಸೋಲಿಸುವುದರ ಮೂಲಕ ಅಕ್ಬರನ ಮೆಚ್ಚಿಗೆಯನ್ನು ಪಡೆದುದಲ್ಲದೆ ಎಲ್ಲಾ ಧರ್ಮವನ್ನು ಸಮಾನತೆಯಿಂದ ಕಾಣುತ್ತಿದ್ದ ಅಕ್ಬರನಿಂದ (ಕ್ರಿ.ಶ.1567-1570) ಅವರ ವಶದಲ್ಲಿದ್ದ ಕಾಶಿ ವಿಶ್ವನಾಥ ದೇವರ ಪೂಜೆಗೆ ಮತ್ತು ಉತ್ತರದಲ್ಲಿ ಜಂಗಮ ಮಠಗಳ ಸ್ಥಾಪನೆಗೆ ಅನುಮತಿಯನ್ನು ಪಡೆದು ಕೊಂಡನು. ಅಕ್ಬರನು ತನ್ನ ಅಧೀನ ಅಧಿಕಾರಿಗಳಿಗೆ ದೊಡ್ಡ ಸಂಕಣ್ಣನಾಯಕನ ಬರುವಿಕೆಯನ್ನು ತಿಳಿಸಿ ಇವನಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ನಿರೂಪ ಕಳಿಸಿದನು. ಅಲ್ಲದೆ ಇವನಿಗೆ ಬಿರುದು ಬಾವಲಿಗಳನಿತ್ತು ಹನ್ನೆರಡು ಸಾವಿರ ಹೊನ್ನನ್ನು ಕೊಟ್ಟು ಗೌರವಿಸಿದನು. ಈ ಘಟನೆ ಉತ್ತರ ಭಾರತದ ಇತಿಹಾಸ ಪುಟಗಳಲ್ಲಿ ಹೆಚ್ಚಿನ ಮಹತ್ವ ಪಡೆದಿಲ್ಲ. ಆ ಕಾಲದ ದಾಖಲೆಗಳ ಸಂಶೋಧನೆ ಈ ನಿಟ್ಟಿನಲ್ಲಿ ಆಗಬೇಕಿದೆ.

                   ಹೀಗೆ ಈ ದೊಡ್ಡ ಸಂಕಣ್ಣನಾಯಕನು ಅಧಿಕಾರಿಗಳ ಅನುಮತಿ ಪಡೆದು ಕಾಶಿಯಲ್ಲಿ ಭಗ್ನವಿಶ್ವನಾಥನಿಗೆ ಪೂಜೆ ಸಲ್ಲಿಸಿ, ಅಲ್ಲಿದ್ದ ಮೂಲ ವಿಶ್ವನಾಥನ ಲಿಂಗ ಮತ್ತು ಅದರ ಮೇಲುಭಾಗದ ಗೋಳಕವನ್ನು ಆಗ ಆ ದೇವಾಲಯದ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದ ಮುಸಲ್ಮಾನ ಅಧಿಕಾರಿಗಳಿಗೆ ತಿಳಿಸುವುದರ ಮೂಲಕ ತಾನು ಪಡೆದುಕೊಂಡನೆಂದು ಕೆಳದಿ ನೃಪ ವಿಜಯ ತಿಳಿಸುತ್ತದೆ. ಇದು ಇವನು ಕೆಳದಿಯಿಂದ ತೀರ್ಥಯಾತ್ರೆ ಹೊರಡುವ ಸಂದರ್ಭದಲ್ಲಿ ಹಂಪಿಹತ್ತಿ ಉರಿಯುತ್ತಿದ್ದುದನ್ನು ಗಮನಿಸಿದ್ದ ಅವನ ಆಗಿನ ಮನಸ್ಥಿತಿಯನ್ನು ಅರಿಯಲು ಸಹಕಾರಿಯಾಗಿದೆ. ಅಲ್ಲಿ ಪೂಜಾ ಮಂದಿರಗಳು ನಾಶವಾಗುತ್ತಿದ್ದುದನ್ನು ನೋಡಿದ್ದನು. ಇವನ ನಂತರ ಸುಮಾರು ಹದಿನೈದು ವರ್ಷಗಳ ಮೇಲೆ ಅಕ್ಬರನ ಹತ್ತಿರ ಅಧಿಕಾರಿಯಾಗಿದ್ದ ಹಿಂದೂ ತೋದರಮಲ್ಲನು ಕ್ರಿ.ಶ. 1585ರಲ್ಲಿ ಈ ದೊಡ್ಡ ಸಂಕಣ್ಣನಾಯಕನ ಭಕ್ತಿ ಮತ್ತು ನಿಷ್ಠೆಯಿಂದ ಪ್ರಚೋದಿತನಾಗಿ ಈಗಿನ ವಿಶ್ವನಾಥ ದೇವಾಲಯವನ್ನು ಪುನ: ನಿರ್ಮಾಣಮಾಡಿಸಿದನು. ಅಲ್ಲದೆ ಕಾಶಿಯಲ್ಲಿ ಹಿಂದೆ ಶಿಲವಂತ ಎಂಬ ನಾಯಕನು ಕಾಶಿ ದೊರೆಯನ್ನು ಮೆಚ್ಚಿಸುವುದರ ಮೂಲಕ ಆಗಿನ ಹರಿ ಕೇಶವಾನಂದ ಕಾನನ ಎಂಬಲ್ಲಿ ಮಠವೊಂದನ್ನು ಕಟ್ಟಿಸಿದ್ದನೆಂದು ಒಂದು ಐತಿಹ್ಯವಿದೆ. ಈ ಮಠವು ಮುಂದೆ ಮುಸಲ್ಮಾನ ದೊರೆಗಳ ವಶಕ್ಕೆ ಹೋಗಿತ್ತು. ದೊಡ್ಡಸಂಕಣ್ಣನಾಯಕನು ತನ್ನ ಕಾಶಿ ಪ್ರವಾಸದ ಸಂದರ್ಭದಲ್ಲಿ ಈ ಮಠವನ್ನು ಮುಸಲ್ಮಾನರಿಂದ ಬಿಡಿಸಿಕೊಂಡು ಅಲ್ಲಿ ಜಂಗಮವಾಡಿ ಎಂಬದಾಗಿ ಹೆಸರಿಸಿ ಅಲ್ಲಿ ಪಂಚ ಮಠಗಳನ್ನು ಕಟ್ಟಿ ಅದನ್ನು ಶಿವ ಜಂಗಮರಿಗೆ ಅರ್ಪಿಸಿದನು. ಅದೇ ವೇಳೆಯಲ್ಲಿ ಕಾಶಿಯಲ್ಲಿದ್ದ ಕಪಿಲಧಾರಾ, ಮಾನಸ ಸರೋವರ, ಗಂಧರ್ವಸಾಗರ ಎಂಬ ಗಂಗೆಯ ತೀರ್ಥಗಳನ್ನು ನಿರ್ಮಿಸಿದ್ದಲ್ಲದೆ ಕರ್ದಮೇಶ್ವರ, ನರ್ಮದೇಶ್ವರ, ಭೀಮಚಂಡಿಕೆ, ವೃಷಭ ಧ್ವಜೇಶ್ವರ ದೇವಾಲಯಗಳನ್ನು ತನ್ನ ಮಗ ವೆಂಕಟಪ್ಪನಾಯಕನ ಹೆಸರಿನಲ್ಲಿ ಜೀರ್ಣೋದ್ದಾರ ಮಾಡಿಸಿದನು. ಇಂದೂ ಸಹ ಕಪಿಲಧಾರ ತೀರ್ಥದ ಮೆಟ್ಟಿಲ ಮೇಲೆ ಈ ಕುರಿತ ಶಾಸನಗಳಿವೆ. ಅಲ್ಲಿಂದ ಹೊರಟು ಮುಂದೆ ದೆಹಲಿಯ ಚಾವಲಿಕೆ ಮುಂದೈ (ಅಕ್ಕಿ ಪೇಟೆ) ಎಂಬಲ್ಲಿ ಜಂಗಮ ಮಠವನ್ನು ನಿರ್ಮಿಸಿದನು. ಇದು ದೆಹಲಿಯ ರೈಲು ನಿಲ್ದಾಣದ ಬಲಭಾಗಕ್ಕೆ ಇದೆ ಎಂದೂ, ಅಲ್ಲಿ ಈಗಲೂ ಜಂಗಮ ಮಠದ ಜಾಗ ಎಂದು ಅದನ್ನು ಗುರುತಿಸಲಾಗುತ್ತದ ಇದರ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಇಲ್ಲಿಂದ ಹೊರಟ ಈ ಸಂಕಣ್ಣನಾಯಕನು ಮುಂದೆ ಪ್ರಯಾಗಕೆ ಹೋಗಿ ಅಲ್ಲಿ ಒಂದು ಜಂಗಮ ಮಠವನ್ನು ನಿರ್ಮಿಸಿದನು. ಮುಂದೆ ಇವನು ಕಾಶಿಯ ವಿಶ್ವನಾಥನ ಲಿಂಗದೊಡನೆ0iÉುೀ ಗ0iÉುಗೆ ಹೋಗಿದ್ದಲ್ಲದೆ ಅಲ್ಲಿ ಒಂದು ಮಠವನ್ನು ಕಟ್ಟಿಸಿದನು. ಅನಂತರ ಅವನು ನೇಪಾಳಕ್ಕೆ ಹೋಗಿ ಅಲ್ಲೊಂದು ಮಠವನ್ನು ನಿರ್ಮಿಸಿದನು. ಇದು ಇಂದು ನೇಪಾಳದ ರಾಜಧಾನಿ ಕಠಮಂಡು ಹತ್ತಿರವಿರುವ ಭಕ್ತಪುರ ಎಂಬಲ್ಲಿದೆ. ಈ ಮಠ ಮರದಲ್ಲಿ ಸುಂದರವಾಗಿ ನಿರ್ಮಾಣವಾಗಿದೆ. ಈ ಮಠದ ಆವರಣದಲ್ಲಿ ಒಂದು ಸುಂದರವಾದ ದೇವಾಲಯವಿದ್ದು ಅಲ್ಲಿ ಕಾಶಿಯಿಂದ ತಂದ  ವಿಶ್ವನಾಥನ ಶಿವಲಿಂಗವನ್ನು ಸ್ಥಾಪಿಸಿದನು. ಈ ಪ್ರಾಂತ್ಯದಲ್ಲಿ ಇರುವ ಐತಿಹ್ಯದ ಪ್ರಕಾರ ಮುಸ್ಲಿಮರಿಂದ ನಾಶವಾದ ವಿಶ್ವನಾಥನ ಲಿಂಗವನ್ನು ಜಂಗಮನೊಬ್ಬನು ತಂದು ಇಲ್ಲಿ ಸ್ಥಾಪಿಸಿದನೆಂದು ಹೇಳುತ್ತದೆ. ಇದು ಉತ್ತರ ಕಾಶಿ ಎಂದೂ, ಕಾಶಿಯ ಮೂಲ ವಿಶ್ವನಾಥ ನಮ್ಮಲ್ಲಿದ್ದಾನೆಂದೂ ಇಲ್ಲಿಯವರು ಹೆಮ್ಮೆ ಪಡುತ್ತಾರೆ. ಈ ಜಂಗಮ ಬೇರಾರೂ ಅಗಿರದೆ ಜಂಗಮನಂತಿದ್ದ ದೊಡ್ಡಸಂಕಣ್ಣನಾಯಕನೇ ಎಂದು ಹೇಳಬಹುದು. ಈ ಭಕ್ತಪುರದಲ್ಲಿ ಜಂಗಮ ಮಠವು ಈಗಲೂ ಇದ್ದು ವೀರಶೈವ ಜಂಗಮರ ಅಧೀನದಲ್ಲಿರುವುದಾಗಿಯೂ, ಅಲ್ಲಿಯ ಯಾವುದೆ ಧಾರ್ಮಿಕ ಉತ್ಸವಗಳ ಮೂಲ ಕೇಂದ್ರ ಇದಾಗಿರುವುದಾಗಿಯೂ ತಿಳಿದುಬರುತ್ತದೆ. ಅಲ್ಲಿಯ ಮಠದ ಜಂಗಮರು ತಮ್ಮ ಹೆಸರಿನ ಮುಂದೆ ಜಂಗಂ ಎಂದು ಸೇರಿಸಿಕೊಳ್ಳುವುದು ಇಂದೂ ರೂಢಿಯಲ್ಲಿದೆ. ಈ ಮಠದ ಹಲವು ಶಾಖಾ ಮಠಗಳೂ ಇವೆ. ಕನ್ನಡದ ಎರಡು ಶಾಸನ ಇಲ್ಲಿದೆ.

                    ಮುಂದೆ ಈ ದೊಡ್ಡ ಸಂಕಣ್ಣನಾಯಕನು ನೇಪಾಳದಿಂದ ಹಿಮ ಪ್ರದೇಶವಾದ ಕೇದಾರಕ್ಕೆ ಹೋಗಿ ಅಲ್ಲಿಯೂ ಒಂದು ಜಂಗಮ ಮಠವನ್ನು ಕಟ್ಟಿಸಿದನು. ಇಂದೂ ಆ ಪ್ರದೇಶದಲ್ಲಿ ಜಂಗಮ ಮಠ ಇದೆ. ಅಲ್ಲಿಂದ ಮುಂದೆ ಹರಿದ್ವಾರ, ಕಾಶ್ಮೀರ, ಕುರುಕ್ಷೇತ್ರ, ಹಂಪಿಗಳ ಮೂಲಕ ಇವನು ಕೆಳದಿಗೆ ಹಿಂದಿರುಗಿದನು. ದಕ್ಷಿಣ ಭಾರತದ ಇತಿಹಾಸದಲ್ಲಿ ದೊಡ್ಡ ಸಂಕಣ್ಣನಾಯಕನ ಈ ತೀರ್ಥಯಾತ್ರೆ ಉಲ್ಲೇಖಾರ್ಹವಾಗಿದೆ.

                   ಇವನ ನಂತರ ಬಂದ ರಾಮರಾಜನಾಯಕನು ಬೆಂಗಳೂರಿನ ಅಣ್ಣಮ್ಮ ದೇವಸ್ಥಾನದ ಮುಂದುಗಡೆ ಧ್ವಜಸ್ಥಂಭವನ್ನು ನೆನಪಿಗಾಗಿ ನಿರ್ಮಿಸಿದನೆಂದು ಐತಿಹ್ಯವೊಂದು ಹೇಳುತ್ತದೆ. ಅಲ್ಲದೆ ಆ ಪ್ರದೇಶವನ್ನು ಮತ್ತು ಯಶವಂತ ಪುರದ ಹತ್ತಿರ ಕೆಲ ಪ್ರದೇಶವನ್ನು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯಲ್ಲಿದ್ದ ರಾಮಲಿಂಗೇಶ್ವರ ಮಠಕ್ಕೆ ಬಿಟ್ಟಿದ್ದನೆಂದು ಐತಿಹ್ಯ ತಿಳಿಸುತ್ತದೆ. ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ. 7ನೇ ದೊರೆ ವೀರಭದ್ರನಾಯಕನ (ಕ್ರ್ರಿ.ಶ.1629- 1640) ಕಾಲದಲ್ಲಿ ವಿಜಾಪುರದ ಅದಿಲ್‍ಷಾಹಿ ಸುಲ್ತಾನನ ದಂಡನಾಯಕ ರಣದುಲ್ಲಾಖಾನನ ದಾಳಿಗೆ ಈಡಾಗಿ 1638ರಲ್ಲಿ ರಾಜಧಾನಿ ಇಕ್ಕೇರಿಯು ಹಾಳಾಯಿತು. ಇದರಿಂದಾಗಿ ರಾಜಧಾನಿಯು ಆ ಮರು ವರ್ಷವೇ ಬಿದನೂರಿಗೆ ವರ್ಗಾಯಿಸಲ್ಪಟ್ಟಿತು. ವೇಣುಪುರ ಎಂದು ಕರೆಯಲ್ಪಡುತ್ತಿದ್ದ ಇಂದಿನ ಈ ನಗರವನ್ನು ದಕ್ಷಿಣ ಭಾರತದ ಕಣಜವೆಂದು ಜಾಕೋಬಸ್ ಕ್ಯಾಂಟರ್ ವಿಚರನು ವರ್ಣಿಸಿದ್ದಾನೆ. ವೇಣುಪುರವಾಗಿದ್ದ ನಗರ ಕೆಳದಿ ಅರಸರಿಂದ ಕನ್ನಡೀಕರಿಸಲ್ಪಟ್ಟು ಬಿದನೂರು-ಬಿದರೂರಾಯಿತು.

                   ಕೆಳದಿ ರಾಜವಂಶದಲ್ಲಿ ದಕ್ಷ ಮತ್ತು ಚಾಣಾಕ್ಷ ದೊರೆ ಎಂದು ಹೆಸರಾದವನು ಕೆಳದಿ ಶಿವಪ್ಪನಾಯಕ. ಶಿವಪ್ಪನಾಯಕನ ಸಿಸ್ತು’ ನಾಡಿನಾದ್ಯಂತ ಮನೆ ಮಾತಾಗಿ ಉಳಿದಿದೆ. ಕೆಳದಿ ರಾಜ್ಯದಲ್ಲಿ ಸಾಗುವಳಿ ಭೂಮಿಯನ್ನು ಗುಣ ಮಟ್ಟದ ಮೇಲೆ ಉತ್ತಮ, ಮಧ್ಯಮ, ಕನಿಷ್ಟ, ಅಧಮ ಹಾಗೂ ಅಧಮಾಧಮ ಎಂದು ಐದು ತರಹದ ಭೂಮಿ ವಿಂಗಡಣೆಯನ್ನು ಈ ರಾಜನು ಮಾಡಿಸಿದನು. ಇಂತಹ ಭೂಮಿಯನ್ನು ಹಳ್ಳಿಗಳಲ್ಲಿ ಗುರುತಿಸಿ ಪ್ರತಿ ತರಗತಿಯ ಭೂಮಿಯನ್ನು ಆರಿಸಿ ಸರ್ಕಾರದಿಂದ ಐದು ವರ್ಷ ಸಾಗುವಳಿ ಮಾಡಿಸಿದ್ದಲ್ಲದೆ ಈ ಐದು ವರ್ಷಗಳ ಸರಾಸರಿ ಉತ್ಪನ್ನದ ಆಧಾರದ ಮೇಲೆ ಆಯಾಯ ತರಗತಿಯ ಭೂಮಿಗೆ ಅನುಗುಣವಾಗಿ ಮೂರನೆಯ ಒಂದಂಶದ ಕಂದಾಯವು ನಿಗಿಧಿ ಗೊಳಿಸಿದನು. ಅಡಿಕೆ ಭಾಗಾಯಿತು ಜಮೀನುಗಳಲ್ಲಿ ಒಂದು ಸಾವಿರ ಅಡಿಕೆ ಮರಗಳ ಮಾಪನವಿಟ್ಟುಕೊಂಡು ಪ್ರತಿಯೊಂದು ಮರವೂ ಸುಮಾರು ಐದೂವರೆ ಮೀ.ಅಂತರದಲ್ಲಿ ಇರಬೇಕೆಂದು ಕಟ್ಟು ಮಾಡಿ ಕಂದಾಯವನ್ನು ನಿಗದಿ ಮಾಡಿದನು. ಉದ್ಯಾನಗಳಲ್ಲಿ ಬೆಳೆಯುವ ಬೆಳೆಗಳ ಬಗ್ಗೆಯೂ ಗಮನ ಹರಿಸಿ ಅದಕ್ಕೆ ಕಂದಾಯ ನಿಗದಿ ಮಾಡಿದನು. ಇದನ್ನು ’ಸಿಸ್ತು, ‘ಶಿವಪ್ಪನ ಸಿಸ್ತು‘ಎಂದು ಕರೆಯಲಾಯಿತು. ಕ್ರಿ.ಶ.1700ರವರೆಗೆ ಇದೇ ವ್ಯವಸ್ಥೆಯು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಜಾರಿಯಲ್ಲಿದ್ದಿತು. ಬ್ರಿಟಿಷ್ ಅಧಿಕಾರಿಗಳೂ ಸಹ ಕೆಳದಿ ಕಾಲದ ಕಂದಾಯ ವ್ಯವಸ್ಥೆಯನ್ನು ಬಹುವಾಗಿ ಕೊಂಡಾಡಿದ್ದಾರೆ. (ಮೆಮೋರಂಡಮ್ ಆನ್ ದಿ ಸೇಯರ್ ಸಿಸ್ಟಂ ಇನ್ ಮೈಸೂರು-ಪುಟ 9 ನೋಡಿರಿ) ಶಿವಪ್ಪನಾಯಕನು ಶಿಸ್ತು ಪಾಲಿಸುವುದಲ್ಲಿಯೂ ಹೆಸರಾಗಿದ್ದನು. ಕೊಲ್ಲೂರು ಮೂಕಾಂಬಿಕಾದೇವಿ ಕುರಿತು ಶಿವಪ್ಪನಾಯಕನ ಕಾಲದಲ್ಲಿ ಇದ್ದ ಕಥೆಯು ಆ ಶಿಸ್ತಿಗೆ ಉದಾಹರಣೆಯಾಗಿದೆ. ಅವನು ತುಂಗಾ ತೀರದಲ್ಲಿ ಶಿವರಾಜಪುರ ಅಗ್ರಹಾರವನ್ನು ಸ್ಥಾಪಿಸಿ ಶ್ರೋತ್ರಿಯ ವೃತ್ತಿ ದಯಪಾಲಿಸಿದನು. ಕಾಶಿಯಿಂದ ರಾಮೇಶ್ವರದವರೆಗೆ ಕೆಲವೆಡೆ ಶೈವ, ವೈಷ್ಣವ ದೇವಾಲಯಗಳಲ್ಲಿ ದಾನ, ಧರ್ಮ, ಪೂಜಾದಿಗಳನ್ನು ಸರಿಯಾಗಿ ನಡೆಯುವಂತೆ ಅನುಕೂಲ ಕಲ್ಪಿಸಿದನು. ಕಾಶಿಯ ಕಪಿಲಧಾರಾ ತೀರ್ಥವನ್ನು ಜೀರ್ಣೋದ್ಧಾರ ಮಾಡಿದನು. ಶೃಂಗೇರಿ ಮತ್ತು ಇತರ ಮಠಗಳಲ್ಲಿ ಈ ಹಿಂದಿನಿಂದ ಬಂದಂತಹ ರಾಜಾಶ್ರಯವನ್ನು ಮುಂದುವರಿಸಿದನು. ಕ್ರೈಸ್ತರಿಗೆ ಉಪದೇಶ ಮಾಡುವ, ಭಾರತೀಯರೇ ಚರ್ಚಿನ ಅಧಿಕಾರಿಗಳಾಗಿರಬೇಕೆಂಬ ಕಟ್ಟಪ್ಪಣೆ ಇವನ ಕಾಲದಲ್ಲಿತ್ತು. ಗೃಹಗಳಲ್ಲಿ ನಡೆಸುವ ಗುಡಿಗಾರಿಕೆಯಲ್ಲಿ ಪ್ರಾವೀಣ್ಯತೆ ಪಡೆಯಲು ಜನಗಳಿಗೆ ಪ್ರೋತ್ಸಾಹ ನೀಡಿದನು. ಕೆಳದಿ ರಾಜ್ಯವನ್ನು ವಾಣಿಜ್ಯ ಕೇಂದ್ರವನ್ನಾಗಿ ಮಾಡುವುದು ಇವನ ಗುರಿಯಾಗಿದ್ದಿತು. ಕಾವೇರಿ ನದಿಗೆ ಸೇತುವೆ ನಿರ್ಮಾಣವೇ ಮೊದಲಾದ ಹತ್ತು ಹಲವು ಸಾಮಾಜಿಕ ಕೆಲಸಗಳು ಇವನ ಕಾಲದಲ್ಲಿ ನಡೆಯಿತು.

                    ಭಾರತೀಯ ಇತಿಹಾಸದಲ್ಲಿ ಕೆಚ್ಚೆದೆಗೆ, ಶೌರ್ಯಕ್ಕೆ ಹೆಸರಾಗಿರುವ ಕೆಲವೇ ರಾಣಿಯರಲ್ಲಿ ಕೆಳದಿಯ ರಾಣಿ ಚನ್ನಮ್ಮಾಜಿಯೂ ಒಬ್ಬಳು. ಕೋಟಿಪುರದ ಸಿದ್ದಪ್ಪ ಶೆಟ್ಟರ ಮಗಳಾದ ಇವಳು ಸೋಮಶೇಖರನಾಯಕನ ಹೆಂಡತಿ. ಶಿವಪ್ಪನಾಯಕನ ಸೊಸೆ. ತನ್ನ ಪತಿಯಿಂದ ರಾಜ್ಯಾಡಳಿತದ ಅನುಭವವನ್ನು ಪಡೆದಿದ್ದಳು. ರಾಜ್ಯದ ಆಸೆಗಾಗಿ ಶತ್ರುಗಳಿಂದ ಸೋಮಶೇಖರನಾಯಕನ ಕೊಲೆಯಾದ ನಂತರ ರಾಜ್ಯವು ದುಃಸ್ಥಿತಿಗೆ ಒಳಗಾಗುವ ಸಂದರ್ಭ ಒದಗಿ ಬಂದಾಗ ಅಕಸ್ಮಿಕ ಪರಿಸ್ಥಿತಿಗೆ ಒಳಗಾಗಿ ತನ್ನ ಪತಿಯ ನಿಧನದ ದುಃಖದ ಸಂದರ್ಭದಲ್ಲಿಯೂ ಧೈರ್ಯಗೆಡದೆ ತನ್ನ ಐದು ಜನ ಅತ್ತೆಯರು ಸಹಗಮನ ಮಾಡಿದ್ದರೂ ತಾನೂ ಅದೇ ಕೆಲಸ ಮಾಡದೆ ದೈರ್ಯದಿಂದ ಕೆಳದಿ ರಾಜ್ಯದ ಅಧಿಕಾರವನ್ನು ವಹಿಸಿಕೊಂಡು ಅಪ್ರತಿಮ ಧೈರ್ಯವನ್ನು ತೋರಿಸಿದ ವೀರ ಮಹಿಳೆ. ಆ ಸಂದರ್ಭದಲ್ಲಿಯೂ ಶತ್ರುಗಳು ರಾಜ್ಯದ ಆಸೆಗಾಗಿ ಕೊಲೆ ಮಾಡಿದವರನ್ನು ಸಮಯ ಪ್ರಜ್ಞೆಯಿಂದ ಶತ್ರುಗಳ ದುರಾಸೆಯನ್ನು ಮಣ್ಣಗೂಡಿಸಿ ಅವರನ್ನು ಕೊನೆಗಾಣಿಸಿದಳು. ಅನಂತರ ತನ್ನ ಬುದ್ಧಿವಂತಿಕೆಯಿಂದ ತನ್ನ ಸಂಬಂಧಿಕರ, ಹಿರಿಯ ಅಧಿಕಾರಿ ವರ್ಗದವರ ಆತ್ಮವಿಶ್ವಾಸವನ್ನು ಗಳಿಸಿದಳು. ಚನ್ನಮ್ಮಾಜಿಯ ಪಟ್ಟಾಭಿಷೇಕವು ಕವಲೇದುರ್ಗ (ಭುವನಗಿರಿದುರ್ಗ)ದ ಅರಮನೆಯಲ್ಲಿ ಜರುಗಿತು. ತನ್ನ ಮೇಲೆ ದಂಡೆತ್ತಿ ಬಂದಿದ್ದ ಸೋದೆ, ಬನವಾಸಿ, ಶಿರಸಿ, ಮೊದಲಾದ ಅರಸರನ್ನು, ಮೈಸೂರಿನ ದಳವಾಯಿ ಕುಮಾರಯ್ಯನನ್ನು ಸೋಲಿಸಿ ಕಡೂರು, ಬಾಣಾವರ, ಹಾಸನ, ಬೇಲೂರು ಮೊದಲಾದವುಗಳನ್ನು ವಶ ಪಡಿಸಿಕೊಂಡು ಕೆಳದಿ ರಾಜ್ಯದ ದಕ್ಷಿಣ ಗಡಿಯನ್ನು ಭದ್ರಪಡಿಸಿದಳು. ಬಸವಾಪಟ್ಟಣವನ್ನು ಗೆದ್ದುಕೊಂಡಳಲ್ಲದೆ ’ಹುಲಿಗೆರೆ’ ಕೋಟೆಯನ್ನು ತನ್ನದಾಗಿಸಿಕೊಂಡು ಅದಕ್ಕೆ ’ಚನ್ನಗಿರಿ ಕೋಟೆ’ ಎಂದು ಹೆಸರಿಸಿದಳು. ರಾಣಿ ಚನ್ನಮ್ಮಾಜಿಯ ಪ್ರಮುಖ ಸಾಧನೆಗಳಲ್ಲಿ ಮರಾಠ ದೊರೆ ಶಿವಾಜಿಯ ಮಗ ರಾಜಾರಾಮನನ್ನು ಮೊಗಲ್ ಚಕ್ರವರ್ತಿ ಔರಂಗಜೇಬನ ಉಪಟಳದಿಂದ ರಕ್ಷಿಸಿದುದು. ರಾಜಾರಾಮನು ಕೆಳದಿ ರಾಣಿ ಚೆನ್ನಮ್ಮಾಜಿಯಲ್ಲಿ ತನ್ನ ರಕ್ಷಣೆಗಾಗಿ ಮೊರೆಹೊಕ್ಕಾಗ ಅವನನ್ನು ರಕ್ಷಿಸುವುದಕ್ಕೋಸ್ಕರ (ಔರಂಗಜೇಬ)  ಮೊಗಲರ ದೊಡ್ಡ ಸೈನ್ಯವನ್ನು ಧೈರ್ಯದಿಂದ ಎದುರಿಸಿ ಸೋಲಿಸಿದುದು. ಮರಾಠ ಇತಿಹಾಸಕಾರರು ಈ ವಿಚಾರವನ್ನು ಮನಸಾರೆ ಶ್ಲಾಘಿಸಿದ್ದಾರೆ. ರಾಜಾರಾಮನು ತನಗೆ ದೊರೆತ ರಕ್ಷಣೆಯಿಂದಾಗಿ ಕೆಳದಿಯ ಮೂರನೇ ರಾಜಧಾನಿ ಬಿದನೂರಿನಲ್ಲಿ ಪಾರ್ವತಿ ದೇವಸ್ಥಾನವನ್ನು ನಿರ್ಮಿಸಿದನು. ಇದು ಈಗಲೂ ಅಲ್ಲಿದೆ. ಶೃಂಗೇರಿ ಮಠಕ್ಕೆ ರಾಜಾಶ್ರಯ ನೀಡಿದುದು, ಸೋಮಶೇಖರಪುರ ಎಂಬ ಅಗ್ರಹಾರ ನಿರ್ಮಾಣ, ರಾಜ್ಯದಲ್ಲಿ ಜಂಗಮ ಮಠಗಳ ನಿರ್ಮಾಣ, ಇದು ಮಾತ್ರವಲ್ಲದೆ ಇವಳು 1,96,000 ಜಂಗಮರಿಗೆ ದಾಸೋಹ ಮಾಡಿಸಿದಳು. ಕೊಲ್ಲೂರು ಮೂಕಾಂಬಿಕಾ ದೇವಿಗೆ ಪಚ್ಚೆಯ ಪದಕವನ್ನು ಕೊಟ್ಟಿದ್ದಳು. ಚೆನ್ನಮ್ಮಾಜಿಗೆ ಮಕ್ಕಳಿಲ್ಲದ್ದರಿಂದ ಬಸಪ್ಪನೆಂಬ ಹುಡುಗನನ್ನು ದತ್ತು ತೆಗೆದುಕೊಂಡು ಅವನಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಿದಳು. ಅವನೇ ಮುಂದೆ ಬಸವಭೂಪಾಲನೆಂದು ಪ್ರಖ್ಯಾತನಾಗಿ ’ಶಿವತತ್ವ ರತ್ನಾಕರವೆಂಬ ಬೃಹತ್ ಸಂಸ್ಕøತ ವಿಶ್ವಕೋಶ ರಚನೆ ಮಾಡಿದನು.

                     ಮಹಿಳೆಯೊಬ್ಬಳು 25 ವರ್ಷಕ್ಕೂ ಹೆಚ್ಚುಕಾಲ ಆಡಳಿತ ನಡೆಸಿದವರಲ್ಲಿ ಕೆಳದಿ ರಾಣಿ ಚನ್ನಮ್ಮಾಜಿ ಪ್ರಮುಖ ಸ್ಥಾನ ಪಡೆಯುತ್ತಾಳೆ. ಚೆನ್ನಮ್ಮಾಜಿಯು ತನ್ನ ಮಗನಿಗೆ ಮಾರ್ಗದರ್ಶನ ಮಾಡುತ್ತಾ ’ನುಡಿದದ್ದನ್ನು ಬದಲಿಸದಿರು, ಎಂದಿಗೂ ಕರ್ತವ್ಯಚ್ಯುತನಾಗದಿರು, ಸರ್ವದಾ ಮಧುರವಾಗಿ ಮಾತನಾಡುವಂತೆ ಎಚ್ಚರ ವಹಿಸು. ದುಷ್ಟರಿಗೆ ನಿನ್ನ ಹೃದ್ಗತವನ್ನು ತೋರದಿರು, ದುರ್ಮಾರ್ಗ ಹಿಡಿಯದಿರು, ಸ್ವಜನರಲ್ಲಿ ಭೇದವೆಣಿಸದಿರು. ಪಾಪಕಾರ್ಯ ಮಾಡದಿರು, ಸತ್ಕಾರ್ಯಗಳನ್ನು ಮಾಡು, ಸದಾ ಶಂಭುವಿನ ಪಾದಗಳನ್ನು ಧ್ಯಾನಿಸು, ಸಕಲ ಜೀವಿಗಳಲ್ಲಿ ದಯೆ ತೋರು, ಆಶ್ರಯಿಸಿ ಬಂದವರಿಗೆ ರಕ್ಷಣೆ ನೀಡು, ಪರರನ್ನು ನಿಂದಿಸದಿರು, ಪ್ರಪಂಚದಲ್ಲಿ ಆಶ್ರಯ ಬಯಸಿ ಬಂದವರಿಗೆ ರಕ್ಷಣೆ ನೀಡು, ಪ್ರಪಂಚದಲ್ಲಿ ಆತ್ಮ ಸಂಯಮವಿಲ್ಲದೆ ನಡೆಯದಿರು, ಕಾಮಾದಿ ದೋಷಗಳನ್ನು ಜಯಿಸು, ಹುಟ್ಟು ಸಾವುಗಳಿಂದ ಮುಕ್ತಿಪಡೆ, ವಿಪತ್ಕಾಲದಲ್ಲೂ ಸಹ ಧೃತಿಗೆಡದಿರು, ಸಿರಿತನ ಬಂದಾಗ ಸೊಕ್ಕದಿರು, ತತ್ವವನ್ನು ಕುರಿತು ಚಿಂತಿಸು, ಅದ್ವೈತ ತತ್ವದ ತಿರುಳನ್ನು ತಿಳಿದುಕೋ. ಸುಸಂಧಿಯನ್ನು ಕಳೆದುಕೊಳ್ಳದಿರು, ವೇದಜರನ್ನು ಸನ್ಮಾನಿಸು, ಜೀವನವೊಂದು ಕನಸೆಂದು ತಿಳಿ, ನಾನು ಯಾರು ಎಂಬ ಪ್ರಶ್ನೆಯನ್ನು ವಿವೇಚಿಸು. ನೀನು ನಗೆಗೀಡಾಗದಂತೆ ನಗು. ಉತ್ತಮವಾಗಿ ಮಾತನಾಡು, ಜನಸ್ತುತಿ ಮಾಡುವ ಹಾಗೆ ನಡೆ, ಪುನರ್ಜನ್ಮ ತಾರದ ಮಾರ್ಗವನ್ನು ಅನುಸರಿಸು. ಶಿವನನ್ನು ವಿವಿಧ ರೀತಿಯಲ್ಲಿ ಪೂಜಿಸು. ಹಾಗೂ ಅನಂತ ಆನಂದವನ್ನು ಅನುಭವಿಸು’ ಎಂಬುದಾಗಿ ನೀಡಿದ ಉಪದೇಶಗಳು ಇಂದಿಗೂ ಸಹ ಅನ್ವಯಿಸುವ ಹಾಗಿದೆ.

ಕೆಳದಿ ಅರಸು ಮನೆತನದ ಕಾಲಾನುಕ್ರಮಣಿಕೆ:

1. ಚೌಡಪ್ಪನಾಯಕ - ಕ್ರಿ.ಶ.1498-1506

2. ಸದಾಶಿವನಾಯಕ - ಕ್ರಿ.ಶ.1509-1565

3. ದೊಡ್ಡಸಂಕಣ್ಣನಾಯಕ _ ಕ್ರಿ.ಶ.1567-1570

4. ಚಿಕ್ಕಸಂಕಣ್ಣನಾಯಕ - ಕ್ರಿ.ಶ.1572-1586

5. ರಾಮರಾಜನಾಯಕ - ಕ್ರಿ.ಶ.1571-1586

6. ಹಿರಿಯ ವೆಂಕಟಪ್ಪನಾಯಕ - ಕ್ರಿ.ಶ.1592-1629

7. ವೀರಭದ್ರನಾಯಕ - ಕ್ರಿ.ಶ.1628-1646

8. ಶಿವಪ್ಪನಾಯಕ - ಕ್ರಿ.ಶ.1646-1660

9. ಇಮ್ಮಡಿ ವೆಂಕಟಪ್ಪನಾಯಕ - ಕ್ರಿ.ಶ.1661-1661

10. ಭದ್ರಪ್ಪ ನಾಯಕ - ಕ್ರಿ.ಶ.1661-1663

11. ಹಿರಿಯ ಸೋಮಶೇಖರನಾಯಕ - ಕ್ರಿ.ಶ.1663-1672

12. ಕುತ್ಸಿತ ಶಿವಪ್ಪನಾಯಕ - ಕ್ರಿ.ಶ. -1697

13. ಚನ್ನಮ್ಮಾಜಿ - ಕ್ರಿ.ಶ.1672-1697

14. ಹಿರಿಯ ಬಸವಪ್ಪನಾಯಕ - ಕ್ರಿ.ಶ.1697-1714

15. ಇಮ್ಮಡಿ ಸೋಮಶೇಖರನಾಯಕ - ಕ್ರಿ.ಶ.1714-1739

16. ಇಮ್ಮಡಿ ಬಸವಪ್ಪನಾಯಕ - ಕ್ರಿ.ಶ.1739-1754

17. ಚನ್ನಬಸವಪ್ಪನಾಯಕ         - ಕ್ರಿ.ಶ.1754-1757

18. ಮುಮ್ಮಡಿ ಸೋಮಶೇಖರನಾಯಕ

ಮತ್ತು ವೀರಮ್ಮಾಜಿ - ಕ್ರಿ.ಶ.1758-1763

ಕೆಳದಿ - ಮೊದಲ ರಾಜಧಾನಿ:

ಕೆಳದಿ ಶಿವಮೋಗ್ಗದಿಂದ 78 ಕಿ.ಮೀ ಸಾಗರದಿಂದ 5.5. ಕಿ.ಮೀ ದೂರದಲ್ಲಿದೆ. ಕೆಳದಿ ಎಂಬ ವೇಶ್ಯೆ ಕೆಳದಿ ಕೆರೆಗೆ ಬಲಿಯಾದ್ದರಿಂದ ಅವಳ ನೆನಪಿಗಾಗಿ ಕೆಳದಿ ಎಂಬ ಹೆಸರು ಬಂದಿರುವುದಾಗಿ ಐತಿಹ್ಯವಿದೆ. ಕೆಳದಿ ಸುಮಾರು 14 ವರ್ಷ ಕಾಲ ರಾಜಧಾನಿಯಾಗಿತ್ತು. ಕೆಳದಿ ರಣದುಲ್ಲಾಖಾನ್ ಮತ್ತು ಹೈದರಾಲಿ ಕಾಲದಲ್ಲಿ ಹಾಳಾಗುವಂತಾಯಿತು.

ಕೆಳದಿ ರಾಮೇಶ್ವರ ದೇವಾಲಯ:

       ಕೆಳದಿಯಲ್ಲಿ ಶ್ರೀ ರಾಮೇಶ್ವರ, ವೀರಭದ್ರ, ಪಾರ್ವತಿ ದೇವಾಲಯವಿವೆ. ಅಲ್ಲದೆ ಶ್ರೀ ಆಂಜನೆಯ, ತಿರುಮಲ(ಬೇಟೇರಾಯ), ಗೋಪಾಲಕೃಷ್ಣ(ಸಂತಾನ ಗೋಪಾಲಕೃಷ್ಣ), ವೀರಭದ್ರ, ಬಸವೇಶ್ವರ ಭೂತನಗುಡಿ, ಮಾರಿಗುಡಿ ಊರ ಹೊರಗೆ ಹಳೆ ಮಾರಿಕಟ್ಟೆ, s ಸುಮಾರು 1200 ವರ್ಷ ಹಿಂದಿನದೆನ್ನಲಾಗುವ  ಪಾರ್ಥನಾಥ ಜೈನ ಬಸದಿ, ಅಲ್ಲಿ0iÉುೀ ಎಡ ಭಾಗದಲ್ಲಿ ಕ್ಷೇತ್ರಪಾಲ, ಮುಸಲ್ಮಾನರ ಹಬ್ಬದಾಚರಣೆಗೆ  ನಿರ್ಮಿಸಿರುವ ಕಟ್ಟಡ ಮೊದಲಾದವಿದೆ.  ಇಲ್ಲಿರುವ ದೇವಾಲಯಗಳು ಕೆಳದಿ ಕಾಲದ್ದಾಗಿವೆ. ಗೋಪಾಲ ಕೃಷ್ಣ ದೇವಾಲಯದ ಪಕ್ಕದಲ್ಲಿ ಒಂದು ಕಲ್ಯಾಣಿ ಇದ್ದು ಸುಂದರವಾಗಿದೆ.

              ಶ್ರೀ ರಾಮೇಶ್ವರ ಮೊದಲು ಊರ ಹೊರವಲಯದ ಸೀಗೆಹಟ್ಟಿಯ ಮದ್ಯೆ ಇತ್ತಂತೆ. ಚೌಡಪ್ಪನಾಯಕನ ಮನೆಯ ಹಸು ಪ್ರತಿದಿನ ಈ ಹುತ್ತದಲ್ಲಿ ಲಿಂಗಕ್ಕೆ ಹಾಲು ಕರೆಯುತ್ತಿತ್ತಂತೆ. ಇದು ಚೌಡಪ್ಪನಾಯಕನಿಗೆ ಒಮ್ಮೆ ತಿಳಿದು ಆನಂತರ ಆ ಪೆÇದೆಗಳನ್ನು ತೆಗೆಸಿ ನೋಡಿದಾಗ ಅಲ್ಲಿ ಲಿಂಗವಿದ್ದುದನ್ನು ನೋಡಿ ತೃಣಕುಟಿ ನಿರ್ಮಿಸಿದನಂತೆ. ಅನಂತರದಲ್ಲಿ ಈ ಪ್ರದೇಶದ ಒಡೆಯನಾದ ಮೇಲೆ ದೇವಾಲಯ, ಗರ್ಭಗೃಹವನ್ನು ಶಿಲಾಮಯವನ್ನಾಗಿ ಮಾಡಿದ್ದುದಾಗಿ ಕೆಳದಿನೃಪವಿಜಯ ತಿಳಿಸುತ್ತದೆ. ಇಲ್ಲಿ ಈ ಮೊದಲು ಶಿವದೇವಾಲಯ ಇದ್ದಿರ ಬೇಕೆನಿಸುತ್ತದೆ. ಅದು ಈ ಪ್ರಾಂತ್ಯವನ್ನು ಈ ಮೊದಲು ಅಡಳಿತ ನಡೆಸಿದ ಹೊಯ್ಸಳ, ಸಾಂತ ಅಥವಾ ವಿಜಯನಗರದ ಕಾಲದಲ್ಲಿ ನಿರ್ಮಾಣ ಆಗಿದ್ದಿರಬಹುದಾಗಿದೆ. ದೇವಾಲಯದ ಆವರಣದಲ್ಲಿರುವ ಭಾವಿಯ ಪಕ್ಕದಲ್ಲಿರುವ ವೀರಗಲ್ಲು ಮತ್ತು ಮಹಾಸತಿ ಕಲ್ಲುಗಳು ಹಾಗೂ ವಠಾರದಲ್ಲಿರುವ ನಾಗರಗಳ ಮಧ್ಯದಲ್ಲಿ ಇಟ್ಟಿರುವ ಶ್ರೀಲಕ್ಷ್ಮೀನಾರಾಯಣ ಶಿಲ್ಪದ ಲಕ್ಷಣವನ್ನು ಗಮನಿಸಿದಾಗ ಈ ಪ್ರದೇಶವು ಹೊಯ್ಸಳರ ಆಡಳಿತಕ್ಕೆ ಒಳಪಟ್ಟಿದ್ದಿತೆಂದು ಊಹಿಸಲು ಅವಕಾಶ ಕಲ್ಪಿಸುತ್ತದೆ. ಬಹುಶ: ಚೌಡಪ್ಪನಾಯಕನಿಗೆ ಶಾಸನವೂ ದೊರೆತಿರಬಹುದು ಅಥವಾ ಅಂದು ವಾಡಿಕೆಯಲ್ಲಿ ಈ ಪಾಳು ಸ್ಥಳವನ್ನು ರಾಮೇಶ್ವರ ಎಂದು ಗುರುತಿಸುತ್ತಿದ್ದ ಐತಿಹ್ಯವೂ ಇದ್ದಿರಬೇಕು. ಆ ಆಧಾರದ ಮೇಲೆ ಈ ಲಿಂಗಕ್ಕೆ ಮೊದಲು ಹುಲ್ಲಿನಲ್ಲಿ ಮನೆ ಮಾಡಿಸಿ ಪೂಜಾದಿಗಳಿಗೆ ವ್ಯವಸ್ಥೆ ಮಾಡಿಸಿದನು. ಈ ಪ್ರದೇಶದ ಹಿಂದಿನ ತಲೆಮಾರಿನ ಸ್ಥಳಿಕರು ಕಾಡಿನಲ್ಲಿಯೂ ಒಂದು ಈಶ್ವರ ದೇವಾಲಯ ಅವಶೇಷಗಳನ್ನು ಕೆಲವು ವರ್ಷಗಳ ಹಿಂದೆ ನೋಡಿರುವುದಾಗಿ ಹೇಳುತ್ತಾರೆ. ಆಡಳಿತದಲ್ಲಿ ತಾನು ಎದ್ದು ನಿಲ್ಲುವಂತಾದ ಮೇಲೆ ಲಿಂಗಕ್ಕೆ ಮರದಲ್ಲಿ ಗುಡಿ ಕಟ್ಟಿಸಿದನೆಂದೂ ಅನಂತರ ಈ ದೇವಾಲಯವನ್ನು ಮತ್ತು ನಂದಿ ಮಂಟಪವನ್ನು ಶಿಲ್ಪ ಶಾಸ್ತ್ರಾದನ್ವಯ ಶಿಲಾಮಯವಾಗಿಸಿ ಗರ್ಭಗೃಹವನ್ನು ಕಲ್ಲಿನಿಂದ ಕಟ್ಟಿಸಿದನೆಂದು ತಿಳಿದು ಬರುತ್ತದೆ. ಹಾಗೆ0iÉುೀ ಈಶ್ವರ ದೇವಾಲಯದ ಎಡ ಭಾಗದಲ್ಲಿ ಪಾರ್ವತಿ ದೇವಾಲಯವನ್ನು ಕಟ್ಟಿಸಿದನು. ಇದಕ್ಕೆ ಪೂಜಾದಿಗಳಿಗಾಗಿ ದಾನದತ್ತಿಗಳು ಬಿಡಲ್ಪಟ್ಟಿತ್ತು. ಕ್ರಿ.ಶ.1509ರ ಶಾಸನವೊಂದು ವಿಜಯನಗರದ ವೆಂಕಟಾದ್ರಿ ಯಜಮಾನರ ಪೌತ್ರರಾದ ನಾರಸಿಂಹ ಯಜಮಾನರ ಪುತ್ರರಾದ ನರಸಪ್ಪ ದೈವಜ್ಞ ಯಜಮಾನರಿಗೆ ಶ್ರೀ ಸದಾಶಿವನಾಯಕರು ಇಲ್ಲಿಯ ಸ್ಥಳದ ದೇವತಾ ಪೂಜೆ, ಶಂಭುಲಿಂಗಪೂಜೆ ಭೂಮಿತತ್ವ, ದೈವಜ್ಞ ಯಜಮಾನಿಕೆ ಕೊಟ್ಟುದನ್ನು ತಿಳಿಸುತ್ತದೆ. ಕ್ರಿ.ಶ. 1556ರವರೆಗೆ ಈ ಮನೆತನದವರು ಪೂಜೆ ಪುನಸ್ಕಾರ ಮಾಡಿಕೊಂಡು ಬಂದಿರಬೇಕು. ಕ್ರಿ.ಶ. 1556ರಲ್ಲಿ ಬನವಾಸಿ ಅಚಾರ್ಯ ಭೀಮಭಟ್ಟರ ಮಗ ಆಚಾರ್ಯ ಮಧುಲಿಂಗ ಭಟ್ಟರಿಗೆ ಈ ಸ್ಥಳದ ಪೂಜೆ ಕೊಟ್ಟಿರುವುದನ್ನು ಶಾಸನವೊಂದು ತಿಳಿಸುತ್ತದೆ. ಇಂದೂ ಈ ಕುಟುಂಬದವರೇ ಪೂಜಾದಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈಗ ದೇವಾಲಯ ಮುಜರಾಯಿ ಆಡಳಿತಕ್ಕೆ ಒಳಪಟ್ಟಿದೆ. ಕೇಂದ್ರ ಪುರಾತತ್ವ ಇಲಾಖೆಯ ರಕ್ಷಣಾ ಸ್ಮಾರಕವಾಗಿದೆ. ಪಾರ್ವತಿ ದೇವಾಲಯಕ್ಕೆ ತಡಗಣಿ ಮನೆತನದವರಿಗೆ ಆರ್ಚಕತನ ಕೊಟ್ಟಿರುವಂತೆ ಕಂಡು ಬರುತ್ತದೆ. ಇಲ್ಲಿ ತ್ರಿಕಾಲ ವಾತುಳಾಗಮೋಕ್ತ ರೀತಿಯಲ್ಲಿ ಪೂಜೆ ನಡೆಯುವಂತೆ ವ್ಯವಸ್ಥೆ ಮಾಡಿದ್ದುದನ್ನು ಶಾಸನ ತಿಳಿಸುತ್ತದೆ. ಕ್ರಿ.ಶ 1590-1629ರ ಮದ್ಯದಲ್ಲಿ ಆಡಳಿತ ನಡೆಸಿದ ಹಿರಿಯ ವೆಂಕಟನಾಯಕನ ಕಾಲದಲ್ಲಿ ಈ ದೇವಾಲಯದ ಮುಂಭಾಗದ ರಂಗ ಮಂಟಪ ಮತ್ತು ವರಗುದಿಣ್ಣೆಗಳನ್ನು ನಿರ್ಮಿಸಲಾಯಿತು. ಕೆಳದಿಯಿಂದ ಈ ಅರಸರು ಸುಮಾರು 14 ವರ್ಷ ಅಂದರೆ 1500ರಿಂದ 1514ರವರೆಗೆ ಆಡಳಿತ ನಡೆಸಿದರು. ದೇವಾಲಯದ ಮುಂಭಾಗದ ಪೌಳಿಯನ್ನು ಚಂದ್ರಸಾಲೆ ಎಂದು ಕರೆದಿದ್ದು ಮುಂಭಾಗದ ಬÁಗಿಲ ಮೇಲುಭಾಗದಲ್ಲಿ ರಾಮೇಶ್ವರ ದೇವಸ್ಥಾನದ ಚಂದ್ರಸಾಲೆ 1896ನೇ ಇಸವಿ ಹೊನ್ನಾವರದ ನಾರಾಯಣಾಚಾರಿ ಮಗ ವಾಮನಾಚಾರಿ ಕಟ್ಟಿದ್ದು ಎಂದಿದೆ. ಲಾರ್ಡ್ ವೇವೆಲ್ ಇಲ್ಲಿಗೆ ಬಂದಿದ್ದು ಆ ಸಂದರ್ಭದಲ್ಲಿ ಇದನ್ನು ಕಟ್ಟಲಾಯಿತೆಂದೂ ಹೇಳಲಾಗುತ್ತದೆ.

                  ಕೆಳದಿ ದೇವಾಲಯವು ದ್ರಾವಿಡ, ಹೊಯ್ಸಳ ಶೈಲಿಯಲ್ಲಿ ಹಸಿರು ಬಣ್ಣದ ಕಲ್ಲಿನಿಂದ ನಿರ್ಮಾಣವಾಗಿದೆ. ಚಿಕ್ಕ ಗರ್ಭಗೃಹ, ಪ್ರದಕ್ಷಿಣಾ ಪಥ, ನವರಂಗ, ಮುಖಮಂಟಪಗಳಿಂದ ಕೂಡಿದೆ. ಜಗಲಿಯ ಹೊರ ಭಾಗದ ಒಂದು ದಿಂಡಿನಲ್ಲಿ ವಾದ್ಯಗಾರರು, ನರ್ತಕರ ಶಿಲ್ಪವಿದೆ. ಎರಡು ಅಡಿ ಎತ್ತರದ ಮೆರುಗಿರುವ ಶಿಲಾಲಿಂಗವಿರುವ ಗರ್ಭಗೃಹದ ಬಿತ್ತಿಯಲ್ಲಿ ಚಚೌಕದ ಅರ್ಧ ಕಂಬಗಳ ಅಲಂಕಾರವಿದೆ. ನಡುವೆ ಕಣ್ಣಪ್ಪ, ಗರುಢ, ಹನುಮ, ಒಂಟೆ, ಆನೆ, ಮಿಥುನ ಶಿಲ್ಪಗಳು, ಆನೆಯ ಜೊತೆ ಹೋರಾಟ ಮಾಡಿದ ಯೋಧ, ಸೋಮಗ್ರಹಣ, ಮದ್ದಳೆಗಾರ, ಯೋಗನಿರತ ರಾಮೇಶ್ವರ ಮೊದಲಾದ ಶಿಲ್ಪಗಳಿವೆ. ಮುಂದೆ ಚಾಚಿಕೊಂಡಿರುವ ಚಾವಣಿಯ ಏಣುಗಳಲ್ಲಿ ವೀರಭದ್ರ, ತಾಂಡವೇಶ್ವರ, ಪಾರ್ವತಿ, ಮೋಹಿನಿ, ವೇಣುಗೋಪಾಲ, ಕಾಳಿಂಗಮರ್ದನ, ಭೈರವ ಶಿಲ್ಪಗಳಿವೆ. ಗರ್ಭಗೃಹದ ಮೇಲಿನ ಗೋಪುರ ಚೌಕಾಕಾರದ್ದಾಗಿದೆ. ಮುಖ ಮಂಟಪವು ನಾಲ್ಕು ಅಂಕಣ ಉದ್ದ ಮತ್ತು ಮೂರು ಅಂಕಣ ಅಗಲವಿದೆ. ಹದಿನೆಂಟು ಕಂಬಗಳಿವೆ. ಇಲ್ಲಿ ಎಡ ಬಲಗಳಲ್ಲಿ ಗಣಪತಿ, ಮಹಿಷ ಮರ್ದಿನಿ ಮೂರ್ತಿಗಳಿವೆ. ದ್ವಾರಬಂಧದ ಇಕ್ಕೆಲಗಳಲ್ಲಿ ಶೈವ ದ್ವಾರಪಾಲಕಾರಿದ್ದಾರೆ. ನವರಂಗ ಚಿಕ್ಕದಾಗಿದೆ. ಇಲ್ಲಿ ಬಸವ ಮತ್ತು ಶಿವ ಪಾರ್ವತಿ ಉತ್ಸವ ಮೂರ್ತಿಗಳಿವೆ. 21.09.1997ರಲ್ಲಿ ಈ ಹಿಂದಿನ ಉತ್ಸವಮೂರ್ತಿಯು ಕಳುವಾಗಿದ್ದು ಅನಂತರದಲ್ಲಿ ಈಗ ಹೊಸ ಉತ್ಸವಮೂರ್ತಿಯನ್ನು ಮಾಡಿಸಲಾಗಿದೆ. ಪ್ರದಕ್ಷಿಣಾ ಪಥದ ಕಲ್ಲು ಒಂದು ಗುಂಟೆಯಷ್ಟು ದೊಡ್ಡದಾಗಿದೆ ಇದರ ಮೇಲೆ ಆರು ಕಂಭಗಳು ನಿಂತಿವೆ. ಇಲ್ಲಿ ಕಾಣಿಕೆ ಡಬ್ಬದ ಪಕ್ಕದಲ್ಲಿ `ಬೈಯಿಕದ ಹೊಬರಸನು ರಾಮೈಯಲಿಂಗ` ಎಂದಿದೆ. ಅದೇ ಭಾಗದಲ್ಲಿ ಬಾಗಿಲಿನ ಎದುರಲ್ಲಿ `ಸೆನಬೊವ ಗಿರಿಯಂನಮ: ಎಂದಿದೆ`.ಈ ದೇವಾಲಯ ಮೂರು ಪ್ರವೇಶ ದ್ವಾರವನ್ನು ಹೊಂದಿದೆ. ಒಳಗೆ ಸುತ್ತಲೂ ಕುಳಿತು ಕೊಳ್ಳುವಂತೆ ಜಗಲಿ ಇದೆ. ಅಲ್ಲಿರುವ ತಾಳ ಪ್ರಸ್ತಾರ ಗಂಗಪ್ಪನ ನಮನ ಎಂಬ ಲಿಪಿ ಮತ್ತು ಪಕ್ಕದ ಅಂಕಿಗಳು ಸಂಗೀತದ ಮಟ್ಟನ್ನು, ಸಂಗೀತಗಾರನನ್ನೂ ಉಲ್ಲೇಖಿಸುತ್ತದೆ. ನಮಸ್ಕಾರ ಹಾಕಿರುವಂತೆ ಚಿತ್ರಿಸಿರುವ ಉಬ್ಬು ಚಿತ್ರಗಳು ಯಾವ ರಾಜರದ್ದೆಂದು ಸ್ಪಷ್ಟ ವಿಲ್ಲದಿದ್ದರೂ ಇಮ್ಮಡಿ ಸೋಮಶೇಖರ ನಾಯಕನದೆಂದು ಹೇಳುತ್ತಾರೆ. ದೇವರಿಗೆ ಇಂದು ದ್ವಿಕಾಲ ಪೂಜೆ ನಡೆಯುತ್ತದೆ. ಈ ದೇವಾಲಯ ನಿರ್ಮಾಣಕ್ಕೆ ಕಲ್ಲನ್ನು ಹತ್ತಿರದ ನಾಡ ಕಲಸಿಯಿಂದ ತಂದಿರಬಹುದೆಂದು ಸಂಶೋಧಕರು ಊಹಿಸಿದ್ದಾರೆ. ಕಾರ್ತಿಕ ಅಮವಾಸ್ಸೆ ಮತ್ತು ಪಾಲ್ಗುಣ ಶುದ್ದ ತೃತೀಯ ದೂತ ರಥವೂ, ಪಾಲ್ಗುಣ ಶುದ್ದ ಪ್ರಥಮ ಶ್ರೀ ದೇವರಿಗೆ ರಥವೂ ನಡೆಯುತ್ತದೆ.

ಪಾರ್ವತಿ ದೇವಾಲಯ:

ಗರ್ಭಗೃಹವು ಶಿಲಾಮಯದಿಂದ ಕೂಡಿದೆ. ಮುಂಭಾಗ ಕೆಂಪು ಜಂಬಿಟ್ಟಿಗೆ ಕಲ್ಲಿನಲ್ಲಿ ಕಟ್ಟಿರುವುದಾಗಿದೆ. ಶಿಲಾಭಾಗದಲ್ಲಿ ಭೈರವ, ಷಣ್ಮೂಖ, ಗಣೇಶ, ಅಂಧಕಾಸುರನ ವಧೆಯಲ್ಲಿ ನಟರಾಜ, ಪುರುಷಾಮೃಗ, ಕಣ್ಣಪ್ಪ, ಗಜಲಕ್ಷ್ಮಿಯ ಶಿಲ್ಪವಿದೆ. ಈ ದೇವಾಲಯದ ಹೊರ ಭಾಗದ ಗೋಡೆಯಲ್ಲಿ ಉಮಾ ಮಹೇಶ್ವರ ಶಿಲ್ಪ ಇದೆ. ಇದು ಕೆಳದಿಯ ಮೊದಲ ಚಿನ್ನದ ನಾಣ್ಯಗಳಲ್ಲಿ ಇರುವ ಚಿಹ್ನೆಯಾಗಿದೆ. ಪಕ್ಕದಲ್ಲಿ ಸಾಕ್ಷಿ ಆಂಜನೇಯ ಎಂದು ಕರೆಯುವ ಶಿಲ್ಪವಿದೆ. ಅದರ ಮುಂದೆ ಚಂಡಿಕೇಶ್ವರನಿದ್ದಾನೆ. ಮುಂಭಾಗವೂ ಸಹ ಕಲ್ಲಿನಲ್ಲೇ ನಿರ್ಮಾಣವಾಗಿದ್ದ ಬಗ್ಗೆ ಅಲ್ಲಿ ಸಿಕ್ಕಿರುವ ಅವಶೇಷಗಳು ತಿಳಿಸುತ್ತವೆ. ಇದು ಅದಿಲ್‍ಷಾಹಿ ಯ ಆಕ್ರಮಣದ ಕಾಲದಲ್ಲಿ ಇದು ಹಾಳಾಗಿದೆ. ಈ ದೇವಾಲಯದ ಚಂದನ ಮರದಿಂದ ಮಾಡಿದ್ದೆನ್ನುವ ಶಿಲ್ಪವು ಸುಂದರವಾಗಿದೆ. ಕಂಭಗಳು, ಮೇಲ್ಛಾವಣಿಯ ರಂಗೋಲಿ, ನಾಲ್ಕೂ ಪಕ್ಕಗಳಲ್ಲಿರುವ ಮೂರ್ತಿ ಶಿಲ್ಪಗಳು ಕಲಾ ಪ್ರೌಢಿಮೆ ತೋರುತ್ತವೆ. ಇಲ್ಲಿಯ ಮೊದಲ ಅಂಕಣದ ಒಂದನೇ ಸಾಲಿನಲ್ಲಿ ನಂದಿ, ವೀರಭದ್ರ, ತುಂಬುರ, ನಾರದ, ಅಘೋರೇಶ್ವರ, ರಾಮೇಶ್ವರ, ಚಂದ್ರಮೌಳೇಶ್ವರ, ಕೊರವಂಜಿ ಇದೆ. ಎರಡನೇ ಸಾಲಿನಲ್ಲಿ ದತ್ತಾತ್ರೆಯ, ಅಗ್ನಿ, ನಟರಾಜ, ದಕ್ಷಾಧಿಪತಿ, ವೀರಭದ್ರ,ವೆಂಕಟರಮಣ, ಕಾಳಿಂಗಮರ್ದನ, ವೇಣುಗೋಪಾಲ, ನರ್ತಕಿ ಇದೆ. ಮೂರನೆ ಸಾಲಿನಲ್ಲಿ ಮಹಿಷಾಸುರ ಮರ್ದಿನಿ, ನಗಾರಿ, ಪುಂಗಿ, ಮೃದಂಗ, ವೀಣಾ, ನರ್ತನ, ತಾಳ, ಪಿಟೀಲು, ಗಜಾಸುರ ಸಂಹಾರ, ತಂಬೂರಿ ಇದೆ. ನಾಲ್ಕನೇ ಸಾಲಿನಲ್ಲಿ ಶಿವಪಾರ್ವತಿ, ಕಾಲಭೈರವ, ಲಕ್ಷ್ಮಣ, ರಾಮ ಮಾರುತಿ ಗಣೇಶ, ವೆಂಕಟರಮಣ, ಬೃಂಗಿ ಇದೆ. ಎರಡನೆ ಅಂಕಣದಲ್ಲಿ ಇಂದ್ರ, ಅಗ್ನಿ, ಯಮ, ನೈರುತ್ಯ, ವರುಣ, ವಾಯುವ್ಯ, ಕುಬೇರ, ಈಶಾನ್ಯ ಇತ್ಯಾದಿ ಕಲಾಕೌಸ್ತುಭಗಳಿವೆ. ಕೆಳದಿಯ ಬ್ರಹ್ಮರಥ ಅಗ್ನಿಗಾಹುತಿಯಾಗಿದೆ. 1973ರಲ್ಲಿ ಹೊಸ ರಥ ನಿರ್ಮಾಣವಾಗಿದೆ. ದೇವಾಲಯದ ವಠಾರದಲ್ಲಿ ಚಂಡಿಕೇಶ್ವರ, ಆಂಜನೇಯ, ಗಣಪತಿ ವೆಂಕಟರಮಣ ಮೊದಲಾದ ವಿಗ್ರಹವಿವೆ. ದೇವಾಲಯದಲ್ಲಿ ನವರಾತ್ರಿ ಕಾಲದಲ್ಲಿ ಅಲಂಕಾರಕ್ಕಾಗಿ ಬಳಸುವ ಮರದ ಶಿಲ್ಪಗಳು ಹಲವಿವೆ.

ವೀರಭದ್ರ ದೇವಾಲಯ:

          ರಾಮೆಶ್ವರ ದೇವಾಲಯಕ್ಕೆ ಹೊಂದಿಕೊಂಡೇ ಈ ದೇವಾಲಯವಿದೆ. ಇದನ್ನು ಕ್ರಿ. ಶ 1546-1559ರ ಅವಧಿಯ ಮಧ್ಯಬಾಗದಲ್ಲಿ ದೊಡ್ಡ ಸಂಕಣ್ಣನಾಯಕನು ತೀರ್ಥ ಯಾತ್ರೆಗೆ ಹೋಗಿದ್ದಾಗ ಶಿಕಾರಿಪುರದ ಮಾಸೂರಿನಲ್ಲಿ ಕನಸಿನಲಿ ವೀರಭದ್ರನನ್ನು ಕಂಡು ಅದರಂತೆ ಇಲ್ಲಿ ಪ್ರತಿಷ್ಟಾಪಿಸಿದ್ದಾಗಿ ಕೆಳದಿ ನೃಪವಿಜಯ ತಿಳಿಸುತ್ತದೆ. ಕೆಳದಿಯ ರಾಣಿ ಚೆನ್ನಮ್ಮಾಜಿಯು ಈ ದೇವಾಲಯಕ್ಕೆ ಗೋಪುರವನ್ನು ಮತ್ತು ರಂಗ ಮಂಟಪವನ್ನು ನಿರ್ಮಿಸಿದಳು. ಹಿರಿಯ ಬಸವಪ್ಪನಾಯಕನು (1697-1714) ವೀರಭದ್ರ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಲ್ಲಿ ನಿರ್ಮಿಸಿದನು.

          ಈ ದೇವಾಲಯದಲ್ಲಿ ಮೇಲ್ಭಾಗದಲ್ಲಿರುವ ಗಂಢಬೇರುಂಢ ಕೆಳದಿ ಲಾಂಛನ. ವಿಜಯನಗರದ ನಂತರ ಇದನ್ನು ಕೆಳದಿ ಅರಸರು ತಮ್ಮ ಲಾಂಛನವಾಗಿ ಬಳಸಿಕೊಂಡಿದ್ದಾರೆ. ವಿದ್ವಾಂಸರುಗಳು ಗಂಢಬೆರುಂಢ ಶಿಲ್ಪ ಕೆಳದಿ ಅರಸರ ರಾಜ ಲಾಂಛನ ಆಗುವುದು ತೀರ ಅಸ್ವಾಭಾವಿಕ ಎಂದು ಅಭಿಪ್ರಯಿಸುತ್ತಾರೆ. ಅವರ ಪ್ರಕಾರ ನಾಣ್ಯಗಳಲ್ಲಿ ಶಿವ ಪಾರ್ವತಿಯರ ಚಿತ್ರವಿರುವುದು, ಶಾಸನಗಳ ಕೊನೆಯಲ್ಲಿ ಶ್ರೀ ಸದಾಶಿವ ಎಂಬ ಮುದ್ರಾಂಕಿತ ಬರುವುದು ಗಮನಿಸಿದಾಗ ಇವರು ಗಂಢಬೇರುಂಢ ಬದಲಿಗೆ ಸದಾಶಿವನೆ ಇವರ ಮುದ್ರೆಯಾಗಿದ್ದು ನಾಣ್ಯದಲ್ಲಿರುವಂತೆ ಇವರ ಲಾಂಛನ ಶಿವ ಪಾರ್ವತಿ ಜೋಡಿ ಚಿತ್ರವಾಗಿದೆ ಎಂಬುದು. ಕೆಳದಿ ಕಾಲದ ಚಿನ್ನದ ನಾಣ್ಯಗಳಲ್ಲಿ ಗಂಢಬೇರುಂಢ ಶಿಲ್ಪ ಇರುವುದನ್ನು ಗಮನಿಸಲಾಗಿದೆ. ಅಲ್ಲದೆ ಇದನ್ನು ನಾಣ್ಯಶಾಸ್ತ್ರ ವಿದ್ವಾಂಸರೂ ಒಪ್ಪುತ್ತಾರೆ. ಹಾಗಾಗಿ ಇವರ ಲಾಂಛನ ಗಂಢಬೇರುಂಢವೇ ಆಗಿತ್ತೆನ್ನಬಹುದಾಗಿದೆ. ಇಂದು ಕರ್ನಾಟಕದ ಲಾಂಛನವಾಗಿ ಇದು ಬಳಕೆಯಾಗಿದೆ. ಕೆಳದಿ ಲಾಂಛನದಲ್ಲಿ ನಾಲ್ಕು ಆನೆ, ನಾಲ್ಕು ಸಿಂಹ ಹೊತ್ತು ಹಾರುತ್ತಿರುವ ಗರುಢನನ್ನು ನೋಡಬಹುದು. ಕೆಳ ಭಾಗದ ಕಾಲುಗಳಲ್ಲಿ ಎರಡು ಆನೆಗಳ ಒಳಗೆ0iÉುೀ ಎರಡು ಸಿಂಹವನ್ನು ಅಳವಡಿಸಿರುವುದನ್ನು ಸೂಕ್ಷ್ಮವಾಗಿ ನೋಡಿದಾಗ ಮಾತ್ರ ತಿಳಿದು ಬರುತ್ತದೆ. ಕೊಕ್ಕಿನಲ್ಲಿ ಎರಡು ಸಿಂಹ ಅದರ ಕಾಲಿಗೆ ಸೇರಿದಂತೆ ಎರಡು ಆನೆ ಹೊತ್ತಿದೆ. ಈ ಶಿಲ್ಪ ಸುಂದರವಾಗಿದೆ. ಈ ದೇವಾಲಯದ ಗರ್ಭಗೃಹ, ಮುಖಮಂಟಪಗಳು ರಾಮೇಶ್ವರ ದೇವಾಲಯವನ್ನೇ ಹೋಲುತ್ತದೆ. ಇಲ್ಲಿಯ ನವಗ್ರಹಗಳು ನಾಗಬಂಧಗಳು, ಗರ್ಭಗೃಹದ ಎದುರಲ್ಲಿನ ಎಡಬಲಗಳಲ್ಲಿರುವ ದಕ್ಷಬ್ರಹ್ಮ, ನಾರಸಿಂಹ ಶಿಲ್ಪಗಳು, ಕಮಲಶಿಲ್ಪ, ಗರ್ಭಗೃಹದ ದ್ವಾರ ಮೋಹಕವಾಗಿದೆ. ದೇವಾಲಯದ ಕಂಬಗಳಲ್ಲಿ ವಿಜಯನಗರದ ವಿಜಯ ವಿಠಲ ದೇವಾಲಯದಂತೆ ಯಾಳಿಯನ್ನು ಅಳವಡಿಸಲಾಗಿದೆ. ಒಂದೆಡೆ ಮರಾಠ ಪ್ರಭಾವದ ಕುದುರೆ ಸವಾರ, ಆನೆ ಮುಖದ ಹಂಸ, ಯೋಗಿಯ ಶಿರದ ಅಗ್ರಭಾಗದಲ್ಲಿ ವೃಕ್ಷ ಬೆಳೆದ ಶಿಲ್ಪ, ರಾಜ ಚಿಹ್ನೆಯಿಂದ ಕೂಡಿದ ನಾಯಕ, ಮೆಲ್ಭಾಗದಲ್ಲಿ ಕಂಗೊಳಿಸುವ ಮನೋಹರ ಕಮಲಗಳು, ನಾಗಬಂಧ, ಗೃಹಗಳ ಮಧ್ಯ ಇರುವ ಸೂರ್ಯ, ಜಿಂಕೆಯೊಂದಿಗೆ ಚಂದ್ರ, ಆನೆ, ಸಿಂಹ, ಹೂವು, ಪರ್ವತ, ಮಾವುತ, ಎತ್ತು ಮೊದಲಾದ ಸೌಂದರ್ಯ ಪ್ರಜ್ಞೆಗೆ ಪ್ರತೀಕವಾಗಿದೆ. ಕಮಲವೊಂದು ಸಿಡಿಲಿನಿಂದ ಭಗ್ನವಾಗಿದೆ. ದ್ವಾರಬಂಧದ ಕಂಬಗಳಲ್ಲಿ ದ್ವಾರಪಾಲಕರ ಶಿಲ್ಪವಿದೆ. ಗರ್ಭಗೃಹದಲ್ಲಿ ವೀರಭದ್ರ ಮೂರ್ತಿ ಇದೆ. ವೀರಭದ್ರ ದೇವಾಲಯದಲ್ಲಿ ಕೃಷ್ಣ, ನಾರಸಿಂಹ,ಆಳ್ವಾರರುಗಳ ಮೊದಲಾದ ಶಿಲ್ಪವನ್ನೂ ಅಳವಡಿಸಿ ಆ ಮೂಲಕ ತಮ್ಮ ಸರ್ವಧರ್ಮವನ್ನು ಪ್ರತಿಪಾದಿಸಿದಂತಿದೆ. ಇಲ್ಲಿ ಇರುವ ತಮ್ಮಡಿ ವೀರಪ್ಪ ಎಂ¨ ರೇಖಾ ಚಿತ್ರ ಮತ್ತು ಬರಹ ಯಾರೆಂದು ಸ್ಪಷ್ಟವಾಗುವುದಿಲ್ಲ.ಈ ದೇವಾಲಯದ ಗೋಪುರದಲ್ಲಿರುವ ಕಳಸದಲ್ಲಿ ಮಹಿಸೂರ ಬಸವೇಶ್ವರ ದೆವರ ಪಾದಕೆ ನೆರಸಭೀಸಲಕೊಪ್ಪದ ಬಂಮೈಯ ಗೌಡರ ಮಗ ಬಸವೈಯ ಗೌಡರ ಭಕ್ತಿ ಎಂದಿದೆ.

ಕೆಳದಿ ವಸ್ತುಸಂಗ್ರಹಾಲಯ:

               ವಸ್ತು ಸಂಗ್ರಹಾಲಯವೂಂದು ಗ್ರಾಮಾಂತರ ಕ್ಷೇತ್ರದಲ್ಲಿ ಅಫುರ್ವವೆನಿಸಿದುದು ಕೆಳದಿಯಲ್ಲಿದೆ. ಹಿಂದುಳಿದ ಜನತೆಗೆ ಅಧ್ಯಯನ ಆಸಕ್ತರಿಗೆ ಇದು ವರದಾನವಾಗಿದೆ. ಇದು 1962ರಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿ ಈಗ ಬೃಹದಾಕಾರವಾಗಿ ಬೆಳೆದಿದೆ. ಇಲ್ಲಿ ಆ ಕಾಲದ ಕತ್ತಿ, ಪಂಚವಾಳ, ಬಾಚಣಿಗೆ, ಕಂಚಿನ ವಿಗ್ರಹಗಳು ಲೇಖನಿಗಳು, ಬೀಗಗಳು, ಫಿರಂಗಿ ಗುಂಡುಗಳು, ವ್ಯಾಯಾಮ ಸಾಧನಗಳು, ಅವಶೇಷಗಳು,ಮಿರ್ಜಾ ಇಸ್ಮಾಯಿಲ್, ಜಯಚಾಮರಾಜ ಒಡೆಯರ್,ವಿಶ್ವೇಶ್ವರಾಯ ಮೊದಲಾದವರ ಸ್ವ ಹಸ್ತಾಕ್ಷರದ ಕಾಗದ ಪತ್ರಗಳು, ನಾಣ್ಯಗಳು ತಾಡೆಯೋಲೆ ಹಸ್ತಪ್ರತಿಗಳು, ತಾಮ್ರಶಾಸನ, ಮಹಾಸತಿಕಲ್ಲು, ವೀರಗಲ್ಲು, ಮೊದಲಾದವುಗಳಿವೆ. ಇಲ್ಲಿಯ ತಾಡಯೋಲೆ ಸಂಗ್ರಹ ಮತ್ತು ವೈಜ್ಞಾನಿಕ ರೀತಿಯ ರಕ್ಷಣೆಗಾಗಿ ಕೇಂದ್ರ ಸರಕಾರ ಇದನ್ನು ಹಸ್ತಪ್ರತಿ ಸಂಪನ್ಮೂಲ ಕೇಂದ್ರವಾಗಿ ಗುರುತಿಸಿದೆ. ಈಗ ಸರಕಾರ ಇದನ್ನು ಕುವೆಂಪು ವಿಶ್ವವಿದ್ಯಾನಿಲಯದ ಜೊತೆ ವಿಲೀನ ಗೊಳಿಸಿದೆ. 

                 ಕೆಳದಿ ಲಿಂಗಣ್ಣ ಕವಿಯ ವಂಶಜರಾದ ಎಸ್. ಕೆ. ಲಿಂಗಣ್ಣಯ್ಯನವರ ತೈಲ ವರ್ಣಚಿತ್ರಗಳು, ರಾಮಾಯಣ, ಭಾಗವತ ಪುಸ್ತಕಗಳು, ಶ್ರೀರಾಮ ಪಾಟ್ಟಾಭಿಷೇಕ, ಅರ್ಚರಾಧಿಮಾರ್ಗ, ಭಗವದ್ಗೀತೆ, ವೀರಭದ್ರ ಅವತಾರ, ಲಲಿತಾ ತ್ರಿಪುರ ಸುಂದರಿ, ವಾಯುಸ್ತುತಿ ಮೊದಲಾದವು ಗಮನಿಸುವಂತಹವು. ಭಗವದ್ಗೀತ 18 ಅಧ್ಯಯವನ್ನು ಪಟದಲ್ಲಿ ಬರೆಯಲಾಗಿದೆ. ಲಲಿತಾ ತ್ರಿಪುರ ಸುಂದರಿಯಲ್ಲಿ ಶ್ರೀ ಲಲಿತಾ ಸಹಸ್ರನಾಮವಿದೆ. ವಾಯುಸ್ತುತಿ ಪಟದಲ್ಲಿ ವಯುಸ್ತುತಿ ಇದೆ. ಇದು ಕನ್ನಡ ಮತ್ತು ಸಂಸ್ಕೃತದಲ್ಲಿದೆ. ವಿಕ್ಟೋರಿಯಾ ರಾಣಿ, ಇಂಗ್ಲಿಷರು ಭಾರತ ಆಳುತ್ತಿದ್ದಾಗ ಎಷ್ಟು ವಾಸಾಹತು ಒಳಗೊಂಡಿತ್ತು ಎಂಬುದಕ್ಕೆ ಅನುಗುಣವಾಗಿ ಎಡಗೈ ಅಷ್ಟ್ರೇಲಿಯಾ, ಬಲಗೈ ಕೆನಡಾ, ತಲೆ ಸ್ಕಾಟ್ಲಾಂಡ್, ಐರ್ಲಾಂಡ್, ಎದೆ ಭಾಗ ಇಂಡಿಯಾ, ತೊಡೆಯ ಭಾಗ ಅಮೇರಿಕಾದ ಹದಿನಾಲ್ಕು ವಸಾಹತುಗಳು ಅಟ್ಲಾಂಟಿಕ್ ಸಾಗರದಲ್ಲಿ ಆಕೆ ನಿಂತಿರುವುದು ಮುಂತಾದವು ನೈಜತೆಯ ಕಾಲ್ಪನಿಕ ಸುಂದರ ಕಲಾಕೃತಿಯಾಗಿದೆ. ಇಲ್ಲಿಯ ಸಂಗ್ರಹಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇತ್ತೀಚೆಗೆ ಇಕ್ಕೇರಿಯ ಹಳೆ ರಥವನ್ನು ವಸ್ತುಸಂಗ್ರಹಾಲಯದ ಸಂಗ್ರಹಕ್ಕೆ ಸೇರಿಸಿಕೊಂಡು ರಕ್ಷಣೆ ಮಾಡಲಾಗುತ್ತಿದೆ.

               ಈ ತರಹ ಐತಿಹಾಸಿಕ ಸಾಮಗ್ರಿಗಳನ್ನು ಸಂಗ್ರಹಿಸಿ ಸಂರಕ್ಷಿಸಿ, ಪ್ರದರ್ಶಿಸಿ, ಆ ಮೂಲಕ ಗ್ರಾಮೀಣ ಪ್ರದೇಶದ ಜನತೆಯಲ್ಲಿ ಐತಿಹಾಸಿಕ ವಸ್ತುಗಳನ್ನು ಉಳಿಸುವತ್ತ ಗಮನ ಸೆಳೆಯುವ ಪ್ರಯತ್ನವನ್ನು ಕೆಳದಿ ವಸ್ತು ಸಂಗ್ರಹಾಲಯ ಕಳೆದ ಹಲವು ವರುಷದಿಂದ ಮಾಡುತ್ತ ಬಂದಿದೆ. ಇದರ ಚಟುವತಿಗೆಯನ್ನು ರಾಜ್ಯ, ಕೇಂದ್ರ ಸರಕಾರ, ರಾಷ್ಟ್ರೀಯ ಕಲೆ ಮತ್ತು ಸಂಸ್ಕೃತಿ ಕೇಂದ್ರ, ನವದೆಹಲಿ ಮೊದಲಾದವುಗಳು ಗುರುತಿಸಿವೆ. ಶಿವತತ್ವ ರತ್ನಾಕರ ಎ ಕಲ್ಚರಲ್ ಸ್ಟಡಿ ಮೊದಲಾಗಿ ಹಲವು ಉತ್ತಮ ಪ್ರಕಟಣೆಗಳನ್ನು ವಸ್ತುಸಂಗ್ರಹಾಲಯ ಹೊರತಂದಿದೆ. ಕೆಳದಿ ಮತ್ತು ಆ ಕಾಲದ ಪಾಳೆಯಪಟ್ಟು, ಸಂಸ್ಥಾನಗಳ ಚರಿತ್ರೆಯ ಬಗ್ಗೆ ಸಂಶೋಧನೆ ನಡೆಸಿದೆ.

(ಮರೆಯಲಾಗದ ಕೆಳದಿ ಸಾಮ್ರಾಜ್ಯಡಾ: ಕೆಳದಿ ವೆಂಕಟೇಶ್ ಜೋಯಿಸ್)